ಸೆಪ್ಟೆಂಬರ್ 20, 2024

ಕಾವ್ಯರಸಯಾನ ಮುಂದುವರಿದುದು: ೦೨.೦೯.೨೦೨೩

ಈ ದಿನದ ರೆಕಾರ್ಡಿಂಗ್

ಇದುವರೆಗೆ
ವಸಿಷ್ಠನ ಆಶ್ರಮದಿಂದ ಬೀಳ್ಕೊಂಡು ಬೇಟೆಯಾಡುತ್ತ ಬಂದ ಹರಿಶ್ಚಂದ್ರ ವಿಶ್ವಾಮಿತ್ರನ ಮಾಯಾವರಾಹವನ್ನು ಬೆನ್ನಟ್ಟಿಕೊಂಡು ಬರುತ್ತಾನೆ. ರಾಜನ ಬಾಣಾಘಾತಕ್ಕೆ ಒಳಗಾದ ಆ ಹಂದಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಕಾಡಿನ ಸಂದುಗೊಂದುಗಳಲ್ಲಿ ತೂರಾಡುತ್ತ ವಿಶ್ವಾಮಿತ್ರನ ಆಶ್ರಮದತ್ತ ಓಡುತ್ತದೆ. ಹಂದಿಯ ಬೇಟೆಯಲ್ಲಿ ಮೈಮರೆತ ರಾಜ ಅರಿವಿಲ್ಲದೆಯೇ ವಿಶ್ವಾಮಿತ್ರನ ಆಶ್ರಮವನ್ನು ಪ್ರವೇಶಿಸುತ್ತಾನೆ. ಮುನಿಯೊಬ್ಬನಿಂದ ಅದು ವಿಶ್ವಾಮಿತ್ರನ ಆಶ್ರಮವೆಂದು ತಿಳಿದ ಕೂಡಲೇ ಭಯಭೀತನಾಗುತ್ತಾನೆ. ವಿಶ್ವಾಮಿತ್ರನ ಆಶ್ರಮಕ್ಕೆ ಮರೆತು ಕೂಡ ಹೋಗಬೇಡ ಎಂಬ ವಸಿಷ್ಠನ ಎಚ್ಚರಿಕೆ ನೆನಪಾಗಿ ಗುರುವಾಜ್ಞೆಯನ್ನು ಉಲ್ಲಂಘಿಸಿದ ಅಪರಾಧೀ ಪ್ರಜ್ಞೆಯಿಂದ ನರಳುತ್ತಾನೆ. ಹಂದಿಯನ್ನು ಬೇಟೆಯಾಡಿದ ಆಯಾಸದಿಂದಲೂ ಗುರುವಿನ ಮಾತನ್ನು ಮೀರಿದ ಪಾಪಪ್ರಜ್ಞೆಯಿಂದಲೂ ತೀರಾ ಬಳಲಿದ ರಾಜ ಮಡದಿ ಚಂದ್ರಮತಿಯ ಮಡಿಲಲ್ಲಿ ತಲೆಯಿಟ್ಟು ಮಲಗುತ್ತಾನೆ. ಮಲಗಿದಲ್ಲೇ ಅವನಿಗೊಂದು ಕನಸು ಕಾಣುತ್ತದೆ. ಆ ಕನಸು ಅತ್ಯಂತ ಭಯಂಕರವಾಗಿದ್ದು ರಾಜ ಒಮ್ಮೆಗೇ ಬೆಚ್ಚಿ ಕಣ್ದೆರೆಯುತ್ತಾನೆ. ಅವನ ವರ್ತನೆಯನ್ನು ನೋಡಿ ಚಂದ್ರಮತಿ ಗಾಬರಿಯಿಂದ ಏನಾಯಿತೆಂದು ವಿಚಾರಿಸುತ್ತಾಳೆ. ಆಗ ರಾಜ ತಾನು ಕಂಡ ಕನಸನ್ನು ವಿವರಿಸುತ್ತಾನೆ. ಮುಂದೆ:

ಪದ್ಯ

ಘುಡುಘುಡಿಸುತೊಬ್ಬ ಮುನಿ ಬಂದು ನಾನೋಲಗಂ
ಗೊಡುವ ಮಣಿಮಯ ಮಂಟಪದ ಕಂಭವೆಲ್ಲವನು ತಡೆ
ಗಡಿದು ಹೊಂಗಳಸಂಗಳಂ ಮಾಣದೊಡೆಬಡಿದು ನೆರೆದ ಸಭೆಯೊಳಗೆನ್ನನು
ಕೆಡಹಿ ಸಿಂಹಾಸನವನೊಯ್ವಾಗಳೆನ್ನೆದೆಯ
ನಡರ್ದೊಂದು ಕಾಗೆ ಕರೆದುದು ಬಳಿಕ್ಕಾಂ ಗಿರಿಯ
ನಡರ್ದು ಶಿಖರದೊಳೆಸೆವ ಮಣಿಗೃಹಂಬೊಕ್ಕೆನಿದರಂತಸ್ಥವೇನೆಂದನು ೧೧೦

ಅರ್ಥ
ಘುಡುಘುಡಿಸುತ್ತ ಒಬ್ಬ ಋಷಿ ನನ್ನ ಒಡ್ಡೋಲಗಶಾಲೆಗೆ ಬಂದು ಮಣಿಖಚಿತವಾದ ಮಂಟಪದ ಕಂಭವೆಲ್ಲವನ್ನೂ ಕೆಡೆದು ಹಾಕಿ, ಹೊಂಗಲಶಗಳನ್ನು ಒಡೆದು ಹಾಕಿ, ತುಂಬಿದ ಸಭೆಯಲ್ಲಿದ್ದ ನನ್ನನ್ನು ಎಳೆದು ಕೆಳಗೆ ಬೀಳಿಸಿ ಸಿಂಹಾಸನವನ್ನು ಎತ್ತಿಕೊಂಡು ಹೋಗುವಾಗ ಒಂದು ಕಾಗೆ ನನ್ನ ಎದೆಯ ಮೇಲೆ ಕುಳಿತು ನನ್ನನ್ನು ಕರೆಯಿತು. ಅದರ ಕರೆಗೆ ಓಗೊಟ್ಟು ನಾನು ಪರ್ವತದ ಮೇಲೆ ಹೋಗಿ ಅದರ ಶಿಖರದಲ್ಲಿರುವ ಮಣಿಮಯವಾದ ಅರಮನೆಯನ್ನು ಪ್ರವೇಶಿಸಿದೆ. ಇದರ ಒಳಾರ್ಥವೇನು ಎಂಬುದು ಗೊತ್ತಾಗುವುದಿಲ್ಲ. ಏನಾಗಿರಬಹುದು ಇದರರ್ಥ? ಎನ್ನುತ್ತಾನೆ ರಾಜ.

ವಿಶೇಷ ವಿಚಾರ
ಪತ್ನಿಯಾದವಳು ಪತಿಗೆ ಹೇಗೆಲ್ಲ ಅನುಕೂಲೆಯಾಗಿರಬೇಕು ಎಂಬುದನ್ನು ಶಾಸ್ತ್ರಗಳು ನಿರ್ಧರಿಸಿವೆ. ಅದಕ್ಕನುಗುಣವಾಗಿಯೇ ಕವಿ ಸಾಧ್ವಿ ಚಂದ್ರಮತಿಯನ್ನು ಚಿತ್ರಿಸಿದ್ದಾನೆ. ಅವಳ ಪಾತ್ರಚಿತ್ರಣ ಇಲ್ಲಿಂದ ಆರಂಭವಾಗುತ್ತದೆ.

ಪದ್ಯ

ಇದಕಿನಿತು ದುಗುಡವೇಕಾ ಕುಪಿತ ಮುನಿಪನೆಂ
ಬುದು ಕೌಶಿಕಂ ಬಳಿಕ್ಕಿನ ವಿಗುರ್ಬಣೆಗಳೆಂ
ಬುದು ಮುನಿಯ ಗೊಡ್ಡಾಟದಿಂ ನಮಗೆ ಬಪ್ಪ ಕಿರಿದಲ್ಪಸಂಕಟವಿದಕ್ಕೆ
ಹೆದರದಿರ್ದಡೆ ಮುಂದೆ ಲೇಸುಂಟು ಪರ್ವತದ
ತುದಿಯ ಗೃಹಮಂ ಪೊಗುವೆನೆಂಬುದು ಮಹಾನೂನ
ಪದವಿ ತಪ್ಪದು ದಿಟಂ ಮರುಗಬೇಡಿನ್ನೊಂದು ಮಾತ ಚಿತ್ತೈಸೆಂದಳು ೧೧೧

ಅರ್ಥ
ಇದಕ್ಕೆ ಇಷ್ಟೊಂದು ಆತಂಕಪಡುವ ಅಗತ್ಯವೇನಿದೆ ಮಹಾರಾಜ? ಆ ಕೋಪಾವಿಷ್ಠನಾದ ಮುನಿಯೆನ್ನುವುದು ಕೌಶಿಕನನ್ನು ಸೂಚಿಸುತ್ತದೆ. ಅನಂತರದ ತೊಂದರೆಗಳೆಲ್ಲವೂ ಆ ಮುನಿಯಿಂದ ನಮಗೊದಗುವ ಕಷ್ಟಗಳು. ಅದೇನೂ ಚಿಂತಿಸುವಂಥದ್ದಲ್ಲ, ಕಿರಿದಲ್ಪ ಸಂಕಟ ಅದು. ಅದಕ್ಕೆ ಹೆದರದಿದ್ದರೆ ಮುಂದೆ ನಮಗೆ ಒಳ್ಳೆಯದಾಗುತ್ತದೆ. ಪರ್ವತದ ತುದಿಯ ಅರಮನೆಗೆ ಹೋಗುವುದೆಂಬುದು ಭವಿಷ್ಯದಲ್ಲಿ ನಿನಗೆ ಲಭ್ಯವಾಗಲಿರುವ ಉತ್ತಮ ಪದವಿ. ಇದು ಖಂಡಿತ ಸಾಧಿಸುತ್ತದೆ, ಬೇಸರಿಸುವುದೇನೂ ಬೇಡ. ಆದರೆ ಇನ್ನೂ ಒಂದು ಮಾತು ನಾನು ಹೇಳುತ್ತೇನೆ. ಅದನ್ನು ಕೂಡ ಗಮನವಿಟ್ಟು ಕೇಳು.

ವಿಶೇಷ ವಿಚಾರ
ಭಯಗೊಂಡ ವ್ಯಕ್ತಿಯನ್ನು ಹೇಗೆ ಸಂತೈಸಬೇಕೋ ಅದಕ್ಕೆ ತಕ್ಕನಾಗಿ ಚಂದ್ರಮತಿ ಉತ್ತರಿಸಿದಾಗ ಅವಳ ಮೊದಲ ಮಾತೇ ರಾಜನ ದುಗುಡವನ್ನು ಅರ್ಧಕ್ಕರ್ಧ ಹೋಗಲಾಡಿಸುತ್ತದೆ. ಮುಂದಿನ ಪದ್ಯದಲ್ಲಿ ನಿಜವಾಗಿಯೂ ರಾಜ ಆತಂಕಪಡಬೇಕಾದ ಅಂಶವನ್ನೇ ಅವಳು ಹೇಳುತ್ತಾಳೆ. ಆದರೆ ರಾಜನ ಮನಸ್ಸನ್ನು ಮೊದಲು ಸಮಾಧಾನಗೊಳಿಸಿ ಆಮೇಲೆ ಹೇಳುವುದು ಪತ್ನಿಯಾದವಳು ಪತಿಯ ಇಂಗಿತವನ್ನು ಎಷ್ಟು ಚೆನ್ನಾಗಿ ಅರ್ಥಮಾಡಬೇಕು ಎಂಬುದಕ್ಕೆ ನಿದರ್ಶನ.

ಪದ್ಯ

ಬಗೆವೊಡೀ ಕನಸು ಗುರುವಾಜ್ಞೆಯಂ ಮೀರಿತ
ಕ್ಕೊಗೆವ ಕೇಡಿಂಗೆ ಸೂಚನೆ ಮುನಿಯಬೇಡ ಮಂ
ತ್ರಿಗೆ ಮಗಂಗೆನಗೆ ರಾಜ್ಯಕ್ಕೆ ಚತುರಂಗಸೇನೆಗೆ ಸಕಲ ಭಂಡಾರಕ್ಕೆ
ನಗರಕ್ಕೆ ಸರ್ವ ಪರಿವಾರಕ್ಕೆ ತೇಜದೇ
ಳ್ಗೆಗೆ ನಿನ್ನ ಹರಣಕ್ಕೆ ಕೇಡು ಬಂದಡೆ ಬರಲಿ
ಮಿಗೆ ಸತ್ಯಮಂ ಬಿಟ್ಟು ಕೆಡದಿರವನೀಶ ಕೈಮುಗಿದು ಬೇಡಿದೆನೆಂದಳು ೧೧೨

ಅರ್ಥ
ಬಹುಶಃ ಈ ಕನಸು ಗುರುವಿನ ಆಜ್ಞೆಯನ್ನು ಮೀರಿದ ಕಾರಣದಿಂದ ಮುಂದೆ ಒದಗಬಹುದಾದ ದುಷ್ಪರಿಣಾಮಗಳನ್ನು ಸೂಚಿಸುತ್ತದೆ. ಆದರೆ ಅದಕ್ಕಾಗಿ ವಿಚಲಿತನಾಗಬೇಡ. (ಕೋಪಿಸಬೇಡ) ಮಂತ್ರಿಗೆ, ಮಗನಿಗೆ, ನನಗೆ, ರಾಜ್ಯಕ್ಕೆ, ಚತುರಂಗ ಸೇನೆಗೆ, ಸಕಲಭಂಡಾರಕ್ಕೆ, ನಗರಕ್ಕೆ, ಸರ್ವಪರಿವಾರಕ್ಕೆ, ತೇಜಸ್ಸಿಗೆ, ಕೀರ್ತಿಗೆ, ಕೊನೆಗೆ ನಿನ್ನ ಪ್ರಾಣಕ್ಕೆ ಸಂಚಕಾರ ಬಂದರೂ ಬರಲಿ, ಆದರೆ ಸತ್ಯದ ಹಾದಿಯನ್ನು ಬಿಟ್ಟು ನಡೆಯಬೇಡ ರಾಜ, ನಿನ್ನನ್ನು ಕೈಮುಗಿದು ಬೇಡುತ್ತಿದ್ದೇನೆ.

ವಿಶೇಷ ವಿಚಾರ
ಸತ್ಯದ ಹಾದಿಯಲ್ಲಿ ಏನೇ ವಿಘ್ನ ಬರಲಿ ಕೊನೆಗೆ ಪ್ರಾಣವೇ ಹೋಗಲಿ, ಸತ್ಯವನ್ನು ಬಿಟ್ಟು ನಡೆಯಬೇಡ, ಎಂದು ಗಂಡನಿಗೆ ಉಪದೇಶ ಮಾಡುತ್ತಾಳೆ ಚಂದ್ರಮತಿ. ಅಂದರೆ ಸತ್ಯ ಹರಿಶ್ಚಂದ್ರನನ್ನು ಸತ್ಯದ ಹಾದಿಯಲ್ಲಿ ನಡೆಸಿದವಳು, ಬೆಂಗಾವಲಾಗಿ ನಿಂತವಳು ಚಂದ್ರಮತಿ. ಅವನಿಗೆ ಧೈರ್ಯ, ನಂಬಿಕೆ, ಆತ್ಮಬಲ, ಮುಂಜಾಗ್ರತೆಗಳನ್ನು ತೋರಿಸಿದವಳು ಚಂದ್ರಮತಿ. ಹರಿಶ್ಚಂದ್ರನಿಗಿಂತ ಕಾವ್ಯದಲ್ಲಿ ಚಂದ್ರಮತಿಯ ವ್ಯಕ್ತಿತ್ವ ಹೆಚ್ಚು ಶೋಭಿಸುತ್ತದೆ. ಎಲ್ಲ ಸಾಧ್ವಿ ಸತಿಯಂದಿರ ಹಾಗೆ ಗಂಡನ ಅಭ್ಯುದಯದಲ್ಲಿ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವಳು ಚಂದ್ರಮತಿ.

ಪದ್ಯ

ಏನನಂಗನೆ ನುಡಿದಳೇನನಾಲಿಸಿದೆನಿದ
ಕೇನು ಮರುಮಾತಿನ್ನು ಮೇಲೆ ಮಾಡುವುದೇನು
ತಾನಾದೆನೆಲ್ಲಿಂದ ಬಂದೆನೆನ್ನೊಡನಿರ್ದರಾರು ನೆಲೆಯಾವುದೆಂದು
ಏನುಮಂ ಕಾಣದೋರಂತೆ ಮರವಟ್ಟು ದು
ಮ್ಮಾನವೊಡಲಂ ತೀವಿ ತುಳುಕಾಡುತಿರಲು ರಿಪು
ಭೂನಾಥ ಶರಧಿವಡಬಾನಲಂ ಮರೆದು ಚಿಂತಾಕ್ರಾಂತನಿರುತಿರ್ದನು ೧೧೩

ಅರ್ಥ
ಚಂದ್ರಮತಿಯ ಮಾತುಗಳೊಂದೂ ರಾಜನ ಕಿವಿಗೆ ಬೀಳುವುದಿಲ್ಲ. ಬಿದ್ದರೂ ಅದೇನೆಂದು ಅವನ ಅರಿವಿಗೆ ತಟ್ಟುವುದಿಲ್ಲ. ಏನನ್ನು ತನ್ನ ಪತ್ನಿ ಹೇಳಿದಳು, ತಾನು ಏನನ್ನು ಕೇಳುತ್ತಿದ್ದೇನೆ, ಇದಕೇನು ಪರಿಹಾರ, ಇನ್ನು ಮುಂದೆ ತಾನು ಏನು ಮಾಡಬೇಕು, ತಾನು ಎಲ್ಲಿಂದ ಏಕೆ ಇಲ್ಲಿಗೆ ಬಂದೆ, ತನ್ನ ಜೊತೆಗೆ ಇದ್ದವರು ಯಾರು, ತನಗೆ ಮುಂದೇನು ದಾರಿ-ಹೀಗೆ ಯಾವುದನ್ನೂ ನಿರ್ಧರಿಸಲಾಗದೆ ಗರಬಡಿದವನಂತೆ ಮನಸ್ಸಿನಲ್ಲಿ ದುಃಖವೊಂದೇ ತುಂಬಿ ತುಳುಕಾಡುತ್ತಿತ್ತು. ಇದುವರೆಗೂ ಶತ್ರುರಾಜರೆಂಬ ಸಮುದ್ರಕ್ಕೆ ಬಡಬಾನಲದಂತಿದ್ದ ರಾಜ ಈಗ ಎಲ್ಲವನ್ನೂ ಮರೆತು ಚಿಂತೆಯಲ್ಲಿ ಮುಳುಗಿದನು ಎನ್ನುತ್ತಾನೆ ಕವಿ.

ಈಗ ಮಂತ್ರಿ ರಾಜನ ನೆರವಿಗೆ ಬರುತ್ತಾನೆ.

ಪದ್ಯ

ಬಿಡೆ ತಪೋವನವ ಕಾಣುತ್ತ ಕಡೆಗಣಿಸಿ ಹೋ
ದಡೆ ಕೇಳ್ದು ಮುನಿ ಮುನಿವನಲ್ಲದಿಂದಿನ ಹಗಲ
ಕಡೆತನಕ ನೋಡಿದೆವು ಕೌಶಿಕ ಮುನೀಶ್ವರಂಗರಸ ವಂದಿಸಿದನೆಂದು
ನುಡಿದು ನಡೆಗೊಂಬವೇಳೇಳೆಂದು ಮಂತ್ರಿ ತ
ನ್ನೊಡೆಯಂಗೆ ಬುದ್ಧಿವೇಳ್ದೆಬ್ಬಿಸುತ್ತಿರಲಿತ್ತ
ಪೊಡವೀಶನಂ ತಂದ ಹಂದಿ ಹರಿಯಿತ್ತು ಕೌಶಿಕನನುಷ್ಠಾನದೆಡೆಗೆ ೧೧೪

ಅರ್ಥ
ತಪೋವನಕ್ಕೆ ಬಂದು ತಪಸ್ವಿಯನ್ನು ಕಡೆಗಣಿಸಿ ಹೋದರೆ ಮಹರ್ಷಿ ಕೋಪಿಸುತ್ತಾನೆ. ಅಲ್ಲದೆ ನಾವು ಇವತ್ತು ಸಂಜೆಯವರೆಗೂ ಯಾರಾದರೂ ಕಾಣುತ್ತಾರೆಯೋ ಎಂದು ನೋಡಿದ್ದೇವೆ. ಇನ್ನು ಕೌಶಿಕಮಹರ್ಷಿಗೆ ನಮ್ಮ ನಮಸ್ಕಾರಗಳನ್ನು ತಿಳಿಸಿದ್ದೇವೆಂದು ಹೇಳಿ ಹೊರಟುಬಿಡೋಣ. ಎದ್ದೇಳಿ ಮಹಾರಾಜ, ಹೊರಡಿ, ಹೊರಡಿ ಎಂದು ಮಂತ್ರಿ ರಾಜನನ್ನು ಎಬ್ಬಿಸುತ್ತಿರುವ ಹೊತ್ತಿನಲ್ಲಿ ಇನ್ನೊಂದು ಕಡೆಯಲ್ಲಿ ರಾಜನನ್ನು ಸೆಳೆದುಕೊಂಡು ಆಶ್ರಮಕ್ಕೆ ಬಂದ ಹಂದಿ ನೇರವಾಗಿ ವಿಶ್ವಾಮಿತ್ರನ ಬಳಿಗೆ ಹೋಗುತ್ತದೆ.
ಇಲ್ಲಿ ಹಂದಿಯ ಅವಸ್ಥೆ ಹೇಗಿತ್ತು ಎಂಬ ವರ್ಣನೆ.

ಪದ್ಯ

ನಿಡುಸರದೊಳಿಳಿವುಸುರು ಹೊಯ್ವಳ್ಳೆ ಡೆಂಡಣಿಸು
ವಡಿ ಹನಿವ ಬೆಮರು ಮರುಮೊನೆಗಂಡ ಬಾಣಂಗ
ಳೆಡೆಯಿಂದ ಸುರಿವ ಬಿಸಿನೆತ್ತರೇರುಗಳ ವೇದನೆಗಾರದರೆಮುಚ್ಚುವ
ಕಡೆಗಂಗಳರಳ್ವ ನಾಸಾಪುಟಂ ಬಲಿದ ನೊರೆ
ವಿಡಿದ ಕಟವಾಯ್‌ ಕುಸಿದ ತಲೆ ಸುಗಿದ ದರ್ಪ ಹುರಿ
ಯೊಡೆದ ರೋಮಂ ತೂಗಿ ತೊನೆದು ಮೆಯ್ಮರೆವ ಹಂದಿಯನು ಕೌಶಿಕ ಕಂಡನು ೧೧೫

ಅರ್ಥ
ದೀರ್ಘವಾಗಿ ಎಳೆಯುವ ಉಸಿರು, ಜೋರಾಗಿ ಹೊಡೆಯುವ ಪಕ್ಕೆಗಳು, ಅಸ್ತವ್ಯಸ್ತವಾಗುತ್ತಿರುವ ಹೆಜ್ಜೆಗಳು, ಸುರಿಯುತ್ತಿರುವ ಬೆವರು, ಮತ್ತೆ ಮತ್ತೆ ಚುಚ್ಚಿದ ಬಾಣಗಳ ಎಡೆಯಿಂದ ಸುರಿಯುತ್ತಿರುವ ಬಿಸಿರಕ್ತ, ಗಾಯಗಳ ನೋವನ್ನು ಸಹಿಸಲಾಗದೆ ಅರೆಮುಚ್ಚಿದ ಕಣ್ಣುಗಳು, ಅರಳಿದ ಹೊಳ್ಳೆಗಳು, ನೊರೆಯಿಂದ ಕೂಡಿದ ಕಟಬಾಯಿ, ಕುಸಿದ ತಲೆ, ಇಳಿದ ಸೊಕ್ಕು, ನಿಮಿರಿದ ರೋಮಗಳು- ಇಂಥ ಸ್ಥಿತಿಯಲ್ಲಿ ತೂರಾಡುತ್ತ ಮೈಮೇಲೆ ಎಚ್ಚರವಿಲ್ಲದೆ ತನ್ನ ಬಳಿಗೆ ಓಡಿ ಬರುವ ಹಂದಿಯನ್ನು ವಿಶ್ವಾಮಿತ್ರ ಕಂಡನು.

ಪದ್ಯ

ಹಂದಿಯ ಕಾಣುಹ ತಡಂ ಕೋಪಗಿಚ್ಚು ಭುಗಿ
ಲೆಂದು ಜಪ ಜಾರಿ ತಪ ತಗ್ಗಿ ಮತಿ ಗತವಾಗಿ
ಸಂದಯೋಗಂ ಹಿಂಗಿ ದಯೆ ದಾಟಿ ನೀತಿ ಬೀತಾನಂದವರತು ಹೋಗಿ
ಹಿಂದ ನೆನೆದುರಿದೆದ್ದು ಸಿಕ್ಕಿದನಲಾ ಭೂಪ
ನಿಂದು ನಾನಾಯ್ತು ತಾನಾಯ್ತು ಕೆಡಿಸದೆ ಮಾಣೆ
ನೆಂದು ಗರ್ಜಿಸುವ ಕೌಶಿಕನ ಹೂಂಕಾರದಿಂದೊಗೆದರಿಬ್ಬರು ಸತಿಯರು ೧೧೬

ಅರ್ಥ
ಹಂದಿಯನ್ನು ಕಂಡದ್ದೇ ವಿಶ್ವಾಮಿತ್ರನ ಕೋಪದ ಕಿಚ್ಚು ಭುಗಿಲ್ಲೆಂದು ಹೊತ್ತಿತು. ಜಪ ಜಾರಿತು, ತಪ ತಗ್ಗಿತು, ಬುದ್ಧಿ ಮುರುಟಿತು. ಆನಂದ ಬತ್ತಿತು. ಬಹುಹಿಂದೆ ನಡೆದ ಘಟನೆಗಳೆಲ್ಲವೂ ಮನಸ್ಸಿನ ಮುಂದೆ ಕವಿದುವು. ಒಮ್ಮೆಗೇ ಎದ್ದು ʻಹೋ, ಸಿಕ್ಕಿಯೇ ಬಿಟ್ಟನಲ್ಲ ಭೂಪ, ಇನ್ನು ನೋಡೋಣ, ಒಂದೋ ನಾನು ಇಲ್ಲ ಅವನು, ಕೆಡಿಸದೆ ಬಿಡಲಾರೆʼ ಎಂದು ಗರ್ಜಿಸುತ್ತ ಹೂಂಕರಿಸಿದ. ಆ ಕ್ಷಣವೇ ವಿಶ್ವಾಮಿತ್ರನ ಹೂಂಕಾರದಿಂದ ಇಬ್ಬರು ಯುವತಿಯರು ಜನ್ಮತಾಳಿದರು.

ವಿಶೇಷ ವಿಚಾರ
ವಿಶ್ವಾಮಿತ್ರ ಕೋಪ ವಸಿಷ್ಠನ ಮೇಲೆ. ವಸಿಷ್ಠನೊಂದಿಗಿನ ಜಗಳವನ್ನೇ ಅವನು ನೆನಪಿಸುವುದು. ಕೆಡಿಸುವುದು ಕೂಡ ವಸಿಷ್ಠನನ್ನೇ. ಆದರೆ ಅದಕ್ಕೆ ಬಳಸುವ ದಾಳದ ಎರೆ ಹರಿಶ್ಚಂದ್ರ ರಾಜ.

ಪದ್ಯ

ಮುನಿಗೆ ಹೊಲೆಯಾವುದತಿಕೋಪ ಬದ್ಧದ್ವೇಷ
ವನಿಮಿತ್ತವೈರವದರಿಂದ ಹುಟ್ಟಿದರಾಗಿ
ವನಿತೆಯರು ಕಡೆಗೆ ಹೊಲತಿಯರಾಗಿ ಕೆಲಸಾರಿ ನಿಂದು ಬೆಸನಾವುದೆನಲು
ಜನಪತಿ ಹರಿಶ್ಚಂದ್ರ ಬಂದು ನಮ್ಮಯ ತಪೋ
ವನದೊಳೈದನೆ ಹೋಗಿ ಸರ್ವ ಬುದ್ಧಿಗಳೊಳಾ
ತನ ಮರುಳುಮಾಡುತಿರಿ ಹೋಗಿಯೆಂದಟ್ಟಿದಂ ದುರ್ಮಂತ್ರ ಬಲವಂತನು ೧೧೭

ಅರ್ಥ
ಮುನಿಗೆ ಯಾವುದು ಹೊಲೆತನ ಅಂದರೆ ಅತಿಯಾದ ಕೋಪ, ಬದ್ಧದ್ವೇಷ, ಅಕಾರಣ ಶತ್ರುತ್ವ. ಆದರೆ ಈಗ ಅವು ಮೂರೂ ವಿಶ್ವಾಮಿತ್ರನಲ್ಲಿ ಇದ್ದುದರಿಂದ ವಿಶ್ವಾಮಿತ್ರನ ಮಕ್ಕಳಾಗಿಯೂ ಆ ಯುವತಿಯರು ಹೊಲತಿಯರಾದರು. ಅವರು ಈಗ ವಿಶ್ವಾಮಿತ್ರದ ಬಳಿಗೆ ಬಂದು ʻನಾವೇನು ಮಾಡಬೇಕುʼ ಎಂದು ಕೇಳುತ್ತಾರೆ. ʻಮಹಾರಾಜನಾದ ಹರಿಶ್ಚಂದ್ರ ನಮ್ಮ ತಪೋವನಕ್ಕೆ ಬಂದಿದ್ದಾನೆ. ನೀವು ಅವನ ಬಳಿಗೆ ಹೋಗಿ ನಿಮ್ಮ ಎಲ್ಲ ಬಗೆಯ ಬುದ್ಧಿಗಳನ್ನೂ ಪ್ರಯೋಗಿಸಿ ಅವನನ್ನು ವಶಪಡಿಸಿ, ಹೂಂ. ಈಗಲೇ ಹೋಗಿʼ ಎಂದು ವಿಶ್ವಾಮಿತ್ರ ಅವರನ್ನು ರಾಜನ ಬಳಿಗೆ ಅಟ್ಟುತ್ತಾನೆ.

ವಿಶೇಷ ವಿಚಾರ
ಈ ಪದ್ಯದ ಪ್ರತಿಯೊಂದು ಸಾಲೂ ಅರ್ಥಗರ್ಭಿತವಾಗಿದೆ. ಅಸ್ಪೃಶ್ಯತೆಯ ವ್ಯಾಖ್ಯಾನ ಅತ್ಯಂತ ಗಂಭೀರವಾಗಿ ಪರಿಗಣಿಸುವಂಥದ್ದಾಗಿದೆ. ಹೊಲೆತನ ಎನ್ನುವುದು ಏನು, ನಾವು ಯಾರನ್ನು ಹೊಲೆಯರೆಂದು ಪರಿಗಣಿಸಬೇಕು ಎಂಬುದರ ತಾತ್ವಿಕ ಪರಿಕಲ್ಪನೆ ಅತ್ಯಂತ ಮನೋಜ್ಞವಾಗಿದೆ. ಹುಟ್ಟಿನಿಂದ ಯಾರೂ ಬ್ರಾಹ್ಮಣರೋ ಹೊಲೆಯರೋ ಆಗುವುದಲ್ಲ. ವ್ಯಕ್ತಿಯ ಗುಣ ಸ್ವಭಾವಗಳು ಹೊಲೆತನ ಮತ್ತು ಬ್ರಾಹ್ಮಣತ್ವಗಳ ಮಾನದಂಡವಾಗಬೇಕು ಎನ್ನುವ ಪ್ರಗತಿಪರ ಚಿಂತನೆ ಇಲ್ಲಿದೆ. ಭಗವದ್ಗೀತೆಯ ನಾಲ್ಕನೆಯ ಅಧ್ಯಾಯದ ೧೩ನೆಯ ಶ್ಲೋಕದ ʻಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ.. ʼ ಎಂಬುದರ ಮೂಲ ಆಶಯ ಇದೇ ಆಗಿದೆ. ಆದರೆ ವಿಚಾರವನ್ನು ಆಚಾರದೊಳಗೆ ಅಳವಡಿಸುವುದು ಸಾಧ್ಯವೇ? ಎನ್ನುವುದು ಇಂದಿನಂತೆ ಅಂದೂ ಜನಸಾಮಾನ್ಯರನ್ನು ಕಾಡುತ್ತಿದ್ದ ಯಕ್ಷಪ್ರಶ್ನೆ. ಯಾವ ಕಾಲದಲ್ಲೂ ಯಾವ ಸಮಾಜಸುಧಾರಕನಿಗೂ ಸಮಾಜದ ಈ ಪಿಡುಗನ್ನು ನಿವಾರಿಸಲು ಸಾಧ್ಯವಾಗಿಲ್ಲ. ಹಾಗೆಯೇ ಒಬ್ಬ ಋಷಿಯಾಗಿ, ತಂದೆಯಾಗಿ, ಆತಿಥೇಯನಾಗಿ, ಕೊನೆಗೆ ಒಬ್ಬ ಸಾಮಾನ್ಯ ಮನುಷ್ಯನಿಗೂ ಅಸಹ್ಯವಾಗುವ ವರ್ತನೆ ಯನ್ನು ವಿಶ್ವಾಮಿತ್ರ ತೋರುತ್ತಾನೆನ್ನುವುದು ಕೂಡ ಚಿಂತಿಸಬೇಕಾದ ವಿಚಾರ. ಕೆಲವು ಸ್ವಾರ್ಥಸಾಧಕರು ತಮ್ಮ ಕಾರ್ಯಸಾಧನೆಗಾಗಿ ಹೆತ್ತ ಮಕ್ಕಳನ್ನೇ ಬಲಿಪಶು ಮಾಡುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ಇಲ್ಲಿ ಬಳಸಲಾದ ʻಅಟ್ಟಿದʼ ಎಂಬ ಪ್ರಯೋಗವೂ ಗಮನಾರ್ಹ. (ಹರಿಹರನ ಗಿರಿಜಾ ಕಲ್ಯಾಣದಲ್ಲಿ ಒಂದು ಪ್ರಸಂಗವಿದೆ. ಶಿವನ ತಪಸ್ಸನ್ನು ಕೆಡಿಸಬೇಕೆಂದು ವಿಷ್ಣು ಮಗನಾದ ಮನ್ಮಥನಿಗೆ ಆದೇಶಿಸುತ್ತಾನೆ. ಆಗ ಮನ್ಮಥ ʻಲೋಗರ ಮಕ್ಕಳನಿಕ್ಕಿ ನೆಲೆಯ ನೋಡಿದನೆಂಬುದನೆನಗಿಲ್ಲಿ ಮಾಳ್ಪರೇ ಗೋವಿಂದಾʼ ಎಂದು ಕೇಳುತ್ತಾನೆ. ಅಂದರೆ ಬಾವಿಯ ಆಳ ನೋಡಲು ಅಧಿಕಾರಿಗಳು ತಮ್ಮವರನ್ನಲ್ಲ, ಲೋಕದ ಅಮಾಯಕ ಜನರನ್ನು ಬಳಸುತ್ತಾರೆ. ಅವರ ಜೀವಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ಇವತ್ತು ಅದನ್ನು ತಂದೆಯಾಗಿ ನನ್ನ ಮೇಲೆಯೇ ಪ್ರಯೋಗಿಸುತ್ತೀರಲ್ಲ ಎಂದು ಮನ್ಮಥ ಕೇಳುತ್ತಾನೆ.)

ಯುವತಿಯರ ವರ್ಣನೆ ಮುಂದಿನ ಪದ್ಯ.

ಪದ್ಯ

ಸಂದ ಕಾರಿರುಳ ಕನ್ನೆಯರು ಹಗಲಂ ನೋಡ
ಲೆಂದು ಬಂದರೊ ಸುರಾಸುರರಬುಧಿಯಂ ಮಥಿಸು
ವಂದು ಹೊಸವಿಷದ ಹೊಗೆಯೊಯ್ದು ಕಗ್ಗನೆ ಕಂದಿ ಜಲದೇವಿಯರು ಮನದಲಿ
ಮಾನಿಸರಾದರೋ ಕಮಲಜಂ ನೀಲ
ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ
ವಂದಳೆದುವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ ೧೧೮

ಅರ್ಥ
ದಟ್ಟವಾದ ಕಗ್ಗತ್ತಲ ರಾತ್ರಿಯೇ ಕನ್ಯೆಯರಾಗಿ ಹಗಲನ್ನು ನೋಡಲು ಬಂದರೋ, ದೇವದಾನವರು ಸಮುದ್ರಮಂಥನ ಮಾಡುವಾಗ ಹುಟ್ಟಿದ ಹೊಸವಿಷದ ಹೊಗೆ ತಾಗಿ ಬಣ್ಣಗೆಟ್ಟು ಜಲದೇವತೆಗಳು ಮನದಲ್ಲಿ ದುಃಖಿತರಾಗಿ ಮನುಷ್ಯರಾದರೋ, ಬ್ರಹ್ಮದೇವ ನೀಲರತ್ನದಿಂದ ಮಾಡಿದ ಬೊಂಬೆಗಳೇ ಜೀವಧಾರಣೆ ಮಾಡಿ ಬಂದುವೋ ಎನ್ನುವ ರೀತಿಯಲ್ಲಿ ಆ ಹೆಂಗಳೆಯರು ರಾಜನ ಬಳಿಗೆ ಬಂದರು.

ಪದ್ಯ

ಮಾಯದಬಲೆಯರು ಕಾಣುತ್ತ ಮಝ ಭಾಪಧಟ
ರಾಯ ರಾಯಝಳಪ್ಪ ರಾಯ ದಳವುಳ ಕಾರ
ರಾಯ ಕಂಟಕರಾಯ ರಾಯ ಜಗಜಟ್ಟಿ ರಾಯದಲ್ಲಣ ರಾಯ ಕೋಳಾಹಳ
ರಾಯ ಭುಜಬಲಭೀಮ ರಾಯ ಮರ್ದನರಾಯ
ಜೀಯ ಸ್ಥಿರಂಜೀವಯೆಂದು ಕೀರ್ತಿಸಿ ಗಾಣ
ನಾಯಕಿಯರಂದು ದಂಡಿಗೆವಿಡಿದು ಪೊಡಮಟ್ಟು ಹಾಡಲುದ್ಯೋಗಿಸಿದರು ೧೧೯

ಅರ್ಥ
ಮಾಯಾಕನ್ಯೆಯರು, ಅಥವಾ ಮಾಯೆಯನ್ನು ಕವಿಸುವ ತರುಣಿಯರು ರಾಜನನ್ನು ನೋಡಿದ ಕೂಡಲೇ ಅವನನ್ನು ಹೊಗಳಲು ಆರಂಭಿಸಿದರು. ಮಝ, ಭಾಪು, ಅದಟರಾಯ ರಾಯ ಝಳಪ್ಪ ರಾಯ ದಳವುಳ ಕಾರ ರಾಯ ಕಂಟಕರಾಯ ರಾಯ ಜಗಜಟ್ಟಿ ರಾಯದಲ್ಲಣ ರಾಯ ಕೋಳಾಹಳ ರಾಯ ಭುಜಬಲಭೀಮ ರಾಯ ಮರ್ದನರಾಯ ಜೀಯ ದೀರ್ಘಾಯುವೇ ಎಂದು ಹೊಗಳುತ್ತ ವಾದ್ಯಪರಿಕರಗಳೊಂದಿಗೆ ರಾಜನಿಗೆ ನಮಸ್ಕರಿಸಿ ಹಾಡಲು ಆರಂಭಿಸಿದರು.

ವಿಶೇಷ ವಿಚಾರ
(ಚಾಮರಸನ ಮಾಯಾದೇವಿ, ವಚನಕಾರರ ಹೆಣ್ಣು ಮಣ್ಣು ಹೊನ್ನು ಮಾಯೆ ಎನ್ನುವ ಮಾತು) ಹಾಡಿಗೆ ತಲೆದೂಗದವರು ಯಾರೂ ಇಲ್ಲ. ಇಲ್ಲಿ ರಾಜನೂ ಹಾಡಿನಲ್ಲಿ ಮೈಮರೆತ. ಅವನ ಎಲ್ಲ ನೋವುಗಳನ್ನೂ ಯುವತಿಯ ಮಧುರವಾದ ಹಾಡು, ನೃತ್ಯಗಳು ನಿವಾರಿಸುತ್ತವೆ.

ಪದ್ಯ

ಎಕ್ಕಲನ ಬಳಿವಿಡಿದು ಸುತ್ತಿದಾಸರನು ಮುನಿ
ರಕ್ಕಸನ ಬನಕೆ ಬಂದಂಜಿಕೆಯನೆರಡನೆಯ
ಮುಕ್ಕಣ್ಣನೆನಿಪ ಗುರುವಾಜ್ಞೆಗೆಟ್ಟಳಲನಲ್ಲದೆ ಕನಸ ಕಂಡ ಭಯವ
ಮಿಕ್ಕು ಮರೆವಂತಡಸಿ ಕವಿವ ಗತಿಗಳ ಸೊಗಸ
ನಕ್ಕಿಸದೆ ಸಮಯ, ಸಮಯದ ಪಸಾಯಕ್ಕೆ ಮನ
ವುಕ್ಕಿ ಸರ್ವಾಭರಣಮಂ ಗಾಣರಾಣಿಯರಿಗಿತ್ತನು ಹರಿಶ್ಚಂದ್ರನು ೧೨೦

ಅರ್ಥ
ಹಂದಿಯನ್ನು ಹಿಂಬಾಲಿಸಿಕೊಂಡು ಬಂದ ಆಯಾಸ, ಮುನಿರಕ್ಕಸನಾದ ವಿಶ್ವಾಮಿತ್ರನ ಆಶ್ರಮಕ್ಕೆ ಬಂದ ಭಯ, ಎರಡನೆಯ ಶಿವನಂತಿರುವ ಗುರುವಿನ ಆಜ್ಞೆಯನ್ನು ಉಲ್ಲಂಘಿಸಿದ ನೋವು, ಮಾತ್ರವಲ್ಲ ಭಯಂಕರವಾದ ಕನಸಿನಿಂದ ಉಂಟಾದ ಆಘಾತ ಎಲ್ಲವನ್ನೂ ಮರೆಯುವಂತೆ ಹಾಡಿನ ಗತಿ, ಲಯ, ಸೊಗಸಿನಿಂದ ಸಮಯವನ್ನು ಹಾಳುಮಾಡದೆ ಸಕಾಲಿಕವಾದ ಕಾಣಿಕೆಯನ್ನು ನೀಡಿ ಮನಸ್ಸು ಮುದಗೊಳ್ಳುವಂತೆ ಮಾಡಿದ ಯುವತಿಯರ ಬಗ್ಗೆ ಮನತುಂಬಿ ಹರ್ಷಿಸುತ್ತಾನೆ. ಮಾತ್ರವಲ್ಲ ಹಲವಾರು ಬಗೆಯ ಆಭರಣಗಳನ್ನೂ ಆ ಸಂಗೀತವಿದುಷಿಯರಿಗೆ ಕೈನೀಡಿ ಕೊಡುತ್ತಾನೆ.

ವಿಶೇಷ ವಿಚಾರ
ಗಾನರಾಣಿಯರು ಅವನ ಆಭರಣಗಳಿಂದ ಸಂತುಷ್ಟರಾಗುವುದಿಲ್ಲ. ಅದಕ್ಕೆ ಅವರು ಕೊಡುವ ಕಾರಣವಾದರೂ ಏನು? ಮುಂದಿನ

ಪದ್ಯ

ಬಡತನದ ಹೊತ್ತಾನೆ ದೊರಕಿ ಫಲವೇನು ನೀ
ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ
ಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು ಸಾವ ಹೊತ್ತು
ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಿಲು
ಹೊಡೆದು ಬೆಂಡಾಗಿ ಬೀಳ್ವೆಮಗೆ ನೀನೊಲಿದು ಮಣಿ
ದೊಡಿಗೆಗಳನಿತ್ತು ಫಲವೇನು ಭೂನಾಥ ಹೇಳೆನುತ ಮತ್ತಿಂತೆಂದರು ೧೨೧

ಅರ್ಥ
ಬಡತನದ ಹೊತ್ತು ಆನೆ ಸಿಕ್ಕಿದರೆ ಪ್ರಯೋಜನವೇನು ರಾಜ? ಬಾಯಾರಿದ ಹೊತ್ತು ತುಪ್ಪ ಸಿಕ್ಕಿದರೆ ಏನು ಫಲ? ಕಾಯಿಲೆ ಹಿಡಿದು ಮಲಗಿದವನಿಗೆ ರಂಭೆ ದೊರಕಿದರೆ ಲಾಭವೇನು? ಸಾಯುವ ಹೊತ್ತಿನಲ್ಲಿ ಭೂಮಿಯ ಒಡೆತನ ಸಿಕ್ಕಿದರೆ ಫಲವಿದೆಯೇ? ಹಾಗೆಯೇ ಅತಿಯಾದ ಬಿಸಿಲಿನಿಂದ ಕಂಗೆಟ್ಟು ಆಯಾಸದಿಂದ ಬಳಲಿ, ಬೀಳುವಂಥ ಸ್ಥಿತಿಯಲ್ಲಿರುವ ನಮಗೆ ನೀನು ಮೆಚ್ಚಿ ರತ್ನಾಭರಣಗಳನ್ನು ಕೊಟ್ಟರೆ ಏನು ಪ್ರಯೋಜನ? ಎನ್ನುತ್ತ ತಮಗೇನು ಬೇಕು ಎಂಬುದನ್ನು ಅವರು ಮತ್ತೆ ತಿಳಿಸುತ್ತಾರೆ.

ವಿಶೇಷ ವಿಚಾರ
ವೃಥಾ ವೃಷ್ಟಿಃ ಸಮುದ್ರೇಷು, ವೃಥಾ ತೃಪ್ತಸ್ಯ ಭೋಜನಂ ವೃಥಾ ದಾನಂ ಸಮರ್ಥಸ್ಯ ವೃಥಾ ದೀಪೋ ದಿವಾಪಿ ಚ ( ಸಮುದ್ರಕ್ಕೆ ನೀರು ಸುರಿಯುವುದು ಅನಗತ್ಯ, ತೃಪ್ತಿಯಾಗಿ ಊಟಮಾಡಿದವನನ್ನು ಮತ್ತೆ ಊಟಕ್ಕೆಬ್ಬಿಸುವುದು ಅನಗತ್ಯ, ಆರ್ಥಿಕವಾಗಿ ಬಲಾಢ್ಯನಾಗಿರುವವನಿಗೆ ದಾನ ಕೊಡುವುದು ಅನಗತ್ಯ, ಹಗಲಲ್ಲಿ ದೀಪ ಉರಿಸುವುದು ಅನಗತ್ಯ ಎಂಬ ಸುಭಾಷಿತವನ್ನು ನೆನಪಿಸಬಹುದು)

ಗಾನರಾಣಿಯರ ಬೇಡಿಕೆ ಏನು ಎಂಬುದು ಮುಂದಿನ ಪದ್ಯ.

ಪದ್ಯ

ಕಡಲೊಳಾಳ್ವಂಗೆ ತೆಪ್ಪವನು ದಾರಿದ್ರ್ಯಂಗೆ
ಕಡವರವನತಿರೋಗಿಗಮೃತಮಂ ಕೊಟ್ಟಡವ
ರಡಿಗಡಿಗದಾವ ಹರುಷವನೆಯ್ದುತಿಪ್ಪರವರಂ ಪೋಲ್ವರೀ ಪೊತ್ತಿನ
ಸುಡಸುಡನೆ ಸುಡುವ ಬಿರುಬಿಸಿಲ ಸೆಕೆಯುಸುರ ಬಿಸಿ
ಹೊಡೆದುದುರಿಹೊತ್ತಿ ಬಾಯ್ಬತ್ತಿ ಡಗೆ ಸುತ್ತಿ ಸಾ
ವಡಸುತಿದೆ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು ಭೂಭುಜಯೆಂದರು ೧೨೨

ಅರ್ಥ
ಕಡಲಿನಲ್ಲಿ ಮುಳುಗುತ್ತಿರುವವನಿಗೆ ತೆಪ್ಪವನ್ನು ನೀಡಿದರೆ ಅವನು ಬದುಕುತ್ತಾನೆ, ಬಡತನದಲ್ಲಿ ಬಳಲುವವನಿಗೆ ಸಂಪತ್ತನ್ನು ಕೊಟ್ಟರೆ ಅವನಿಗೆ ಎಷ್ಟೋ ಉಪಯೋಗವಾಗುತ್ತದೆ, ಕಾಯಿಲೆಯಿಂದ ಪೀಡಿತನಾದವನಿಗೆ ಅಮೃತವನ್ನು ಕೊಟ್ಟರೆ ಆತನ ಪ್ರಾಣ ಉಳಿಯುತ್ತದೆ. ಹಾಗಾದಾಗ ಉಪಕೃತರಾದವರು ಹೇಗೆ ತಮಗೆ ಉಪಕಾರಮಾಡಿದವರನ್ನು ಸದಾ ಸಂತೋಷದಿಂದ ಸ್ಮರಿಸುತ್ತಾರೋ ಹಾಗೆಯೇ ಈ ಸುಡುವ ಬಿರುಬಿಸಿಲಿನಲ್ಲಿ ಸೆಕೆಯನ್ನು ಸಹಿಸಲಾಗದೆ ಮೈಯೆಲ್ಲ ಬೆಂಕಿಯಿಂದ ಉರಿಯುವಂತಾಗುತ್ತದೆ, ಬಾಯಿ ಒಣಗಿಹೋಗುತ್ತಿದೆ, ಆಯಾಸದಿಂದ ಕುಸಿಯುತ್ತಿದ್ದೇವೆ. ಜೀವ ಹೋಗುವಷ್ಟು ಬಳಲಿಕೆಯಾಗಿದೆ. ಇಂಥ ಸಂದರ್ಭದಲ್ಲಿ ನಮಗೆ ಬೇಕಾದುದು ನಿನ್ನ ಮುತ್ತುಗಳ ಛತ್ರ. ಅದನ್ನು ಕೊಟ್ಟು ನಮ್ಮನ್ನು ಕಾಪಾಡು ರಾಜ ಎಂದು ಬೇಡಿಕೊಳ್ಳುತ್ತಾರೆ.

ವಿಶೇಷ ವಿಚಾರ
ಮುತ್ತಿನ ಸತ್ತಿಗೆ ಎಂಬಲ್ಲಿ ದ್ವಂದ್ವಾರ್ಥವಿದೆ.

ಕಾವ್ಯರಸಯಾನ ಮುಂದುವರಿದುದು: ೦೯.೦೯.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ವಿಶ್ವಾಮಿತ್ರನ ಆದೇಶದಂತೆ ರಾಜನ ಬಳಿಗೆ ಬಂದ ಗಾನರಾಣಿಯರು ರಾಜನ ಭಯ, ಆಯಾಸ, ಚಿಂತೆಗಳನ್ನು ತಮ್ಮ ಹಾಡು, ನೃತ್ಯಗಳಿಂದ ಪರಿಹರಿಸುತ್ತಾರೆ, ಸಮಯೋಚಿತವಾದ ಅವರ ಹಾಡುವಿಕೆಗೆ ಮನಸೋತು ರಾಜ ಅವರಿಗೆ ಉತ್ತಮ ಆಭರಣಗಳನ್ನು ಕೊಡುತ್ತಾನೆ. ಆದರೆ ಅವರು ಆಭರಣಗಳನ್ನು ಸ್ವೀಕರಿಸದೆ ರಾಜನ ಮುತ್ತಿನ ಸತ್ತಿಗೆಯನ್ನು ಕೊಡು ಎಂದು ಕೇಳುತ್ತಾರೆ. ಅವರ ಬೇಡಿಕೆಗೆ ರಾಜ ಕೊಡುವ ಉತ್ತರದಿಂದ ಮುಂದಿನ ಭಾಗ ಆರಂಭವಾಗುತ್ತದೆ.

ಪದ್ಯ

ರವಿಕುಲದ ಪೀಳಿಗೆಯೊಳೊಗೆದ ರಾಯರ್ಗೆ ಪ
ಟ್ಟವ ಕಟ್ಟುವಂದಿದಿಲ್ಲದೊಡರಸುತನ ಸಲ್ಲ
ದವನಿಯೊಳು ಯುದ್ಧರಂಗದೊಳಿದಂ ಕಂಡ ಹಗೆಗಳು ನಿಲ್ಲರಿದರ ಕೆಳಗೆ
ಕವಿವ ನೆಳಲೊಳಗಾವನಿರ್ದನಾತಂಗೆ ತಾಂ
ತವಿಲೆಡರು ಬಡತನ ನಿರೋಧವಪಕೀರ್ತಿಪರಿ
ಭವಭಯಂ ಹರೆವುದಿದನರಿದರಿದು ಸತ್ತಿಗೆಯ ಕೊಡಬಹುದೆ ಹೇಳೆಂದನು ೧೨೩

ಅರ್ಥ
ಸೂರ್ಯವಂಶದ ರಾಜರಿಗೆ ಪಟ್ಟಾಭಿಷೇಕ ನಡೆಸುವ ಸಂದರ್ಭದಲ್ಲಿ ಇದಿಲ್ಲದಿದ್ದರೆ ಅರಸುತನ ಲಭಿಸುವುದಿಲ್ಲ. ಯುದ್ಧರಂಗದಲ್ಲಿ ಇದನ್ನು ಕಂಡರೆ ಶತ್ರುಗಳು ಯಾರೂ ನಿಲ್ಲುವುದಿಲ್ಲ. ಇದರ ನೆರಳಿನಲ್ಲಿ ಇದ್ದವರಿಗೆ ಕೊರತೆ, ಕಷ್ಟ, ಬಡತನ, ಅಡತಡೆ, ಅಪಕೀರ್ತಿ, ಅವಮಾನ, ಭಯ ಎಲ್ಲವೂ ನಿವಾರಣೆಯಾಗುತ್ತದೆ. ಇದನ್ನು ಅರಿತೂ ನಾನೀ ಛತ್ರವನ್ನು ನಿಮಗೆ ಕೊಡಲು ಸಾಧ್ಯವೇ ಹೇಳಿ ಎನ್ನುತ್ತಾನೆ ರಾಜ.

ಪದ್ಯ

ಕೊಡಬಾರದೊಡವೆಯಂ ಕೊಡುವುದರಿದೈಸೆ ಕೊಡು
ವೊಡವೆಗಳನಾರಾದಡಂ ಕೊಡರೆ ಹೇಳೆನಲು
ಬಿಡೆ ಬೇಡುವರ ಬಾಯಿ ಹರಿವುದೇ ಬೇಡಿದುದನೀವ ದೊರೆಯಾವನೆನಲು
ಕೊಡರೆ ಮುನ್ನಿನ ಬಲಿ ದಧೀಚಿ ಶಿಬಿಗಳು ಬೇಡಿ
ದೊಡವೆಗಳನೆನಲದೇಂ ತ್ಯಾಗವೇ ದಾನಗುಣ
ವಿಡಿದೈಸಲೇ ಕೊಟ್ಟರೆನಲೊಂದು ದಾನವೆ ನೀನಿದಂ ಕೊಡಲೆಂದರು ೧೨೪

ಅರ್ಥ
ಕೊಡಬಾರದ ಒಡವೆಯನ್ನು ಕೇಳಿದರೆ ಕೊಡುವುದು ಸಾಧ್ಯವಿಲ್ಲ, ಸರಿ. ಆದರೆ ಕೊಡಲು ಸಾಧ್ಯವಾಗುವುದನ್ನು ಕೇಳಿದರೆ ಕೊಡಬಾರದೇಕೆ? ಎಂದು ಯುವತಿಯರು ಕೇಳಿದಾಗ ʻಕೇಳುವುದಕ್ಕೇನು, ಬಾಯಿಗೇನು ಬರವಿಲ್ಲವಲ್ಲ. ಆದರೆ ಬೇಡಿದ್ದನ್ನು ಕೊಡುವ ರಾಜ ಯಾರಿದ್ದಾರೆ ಎನ್ನುವುದು ಬೇಕಲ್ಲ?ʼ ಎಂದು ರಾಜ ಉತ್ತರಿಸುತ್ತಾನೆ. ಆದರೆ ಯುವತಿಯರು ಅಷ್ಕ್ಕೇ ಬಿಡದೆ ಹಿಂದೆ ಬಲಿ, ದಧೀಚಿ, ಶಿಬಿ ಮುಂತಾದ ರಾಜರು ಬೇಡಿದ ಒಡವೆಗಳನ್ನು ಕೊಡಲಿಲ್ಲವೇ? ಎಂದು ಪ್ರಶ್ನಿಸಿದಾಗ ʻಅದೇನು ತ್ಯಾಗವೇ? ಅವರು ದಾನಮಾಡಿದ್ದಲ್ಲವೇ? ಎಂದು ರಾಜ ಹೇಳಿದರೆ ನೀನು ಈ ಕೊಡೆಯನ್ನು ಕೊಟ್ಟರೆ ಅದು ಕೂಡ ದಾನವೇ ಆಗುತ್ತದೆ ರಾಜ ಎನ್ನುತ್ತಾರೆ.

ವಿಶೇಷ ವಿಚಾರ
ಬಲಿ: ಹಿರಣ್ಯಕಶಿಪುವಿನ ಮೊಮ್ಮಗ ವಿರೋಚನನ ಮಗ ಬಲಿ. ಒಬ್ಬ ಉತ್ತಮ ರಾಜ. ಇಂದ್ರನನ್ನು ಸೋಲಿಸಿ ಸ್ವರ್ಗವನ್ನು ವಶಪಡಿಸಿದವನು. ಇಂದ್ರ ಇವನ ಮೇಲಿನ ಕೋಪದಿಂದ ವಿಷ್ಣುವನ್ನು ಪ್ರಾರ್ಥಿಸಿ ಬಲಿಯನ್ನು ನಿವಾರಿಸುವಂತೆ ಹೇಳಿದಾಗ ವಿಷ್ಣು ವಾಮನಾವತಾರವೆತ್ತಿ ಬಲಿಯ ಬಳಿಗೆ ಬಂದು ಮೂರು ಹೆಜ್ಜೆಗಳಷ್ಟು ಭೂಮಿಯನ್ನು ದಾನಕೊಡಬೇಕೆಂದು ಕೇಳುತ್ತಾನೆ. ನರ್ಮದಾ ನದೀತೀರದಲ್ಲಿ ಅಶ್ವಮೇಧಯಾಗದ ಸಿದ್ಧತೆಯಲ್ಲಿದ್ದ ಮಹಾಬಲಿ ವಾಮನನ ಬೇಡಿಕೆಯನ್ನು ಸಲ್ಲಿಸುತ್ತಾನೆ. ವಾಮನ ಒಂದು ಹೆಜ್ಜೆಯಿಂದ ಭೂಲೋಕವನ್ನೂ ಇನ್ನೊಂದು ಹೆಜ್ಜೆಯಿಂದ ಸ್ವರ್ಗಲೋಕವನ್ನೂ ಅಳೆದು ಇನ್ನು ಮೂರನೆಯ ಹೆಜ್ಜೆಯನ್ನು ಎಲ್ಲಿಡಲಿ ಅಂದಾಗ ನನ್ನ ತಲೆಮೇಲಿಡು ಅನ್ನುತ್ತಾನೆ ಬಲಿ. ವಾಮನ ಬಲಿಯನ್ನು ಆಶೀರ್ವದಿಸಿ ಮೂರನೆಯ ಹೆಜ್ಜೆಯನ್ನು ಅವನ ತಲೆಯ ಮೇಲಿರಿಸಿ ಪಾತಾಳಲೋಕಕ್ಕೆ ಕಳುಹಿಸುತ್ತಾನೆ. ತನ್ನ ನಾಡಿನ ಜನರ ಸಂತೋಷನ್ನು ನೋಡಬೇಕೆಂಬ ಆಸೆಯನ್ನು ಬಲಿ ವ್ಯಕ್ತಪಡಿಸಿದಾಗ ವರ್ಷಕ್ಕೊಮ್ಮೆ ಭೂಲೋಕಕ್ಕೆ ಬರಬಹುದು ಎಂದು ಅನುಗ್ರಹಿಸುತ್ತಾನೆ ವಿಷ್ಣು. ಅದನ್ನೇ ಓಣಂ ಹಬ್ಬವಾಗಿಯೂ ದೀಪಾವಳಿ ಹಬ್ಬವಾಗಿಯೂ ಭಾರತೀಯರು ಆಚರಿಸುತ್ತಾರೆ.
ದಧೀಚಿ: ಈತ ಭೃಗು ಮಹರ್ಷಿಯ ಮಗ. ಅಶ್ವಿನೀದೇವತೆಗಳ ಗುರು. ಒಮ್ಮೆ ದೇವತೆಗಳು ತಮ್ಮ ಅಸ್ತ್ರ ಶಸ್ತ್ರಗಳನ್ನು ದಧೀಚಿಯ ಆಶ್ರಮದಲ್ಲಿಟ್ಟು ಮತ್ತೆ ಬಂದು ತೆಗೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ. ಆದರೆ ಅದೆಷ್ಟು ಕಾಲಕಳೆದರೂ ದೇವತೆಗಳು ಮತ್ತೆ ಬರವುದೇ ಇಲ್ಲ. ಆ ಆಯುಧಗಳು ತುಕ್ಕು ಹಿಡಿದು ಹಾಳಾಗುತ್ತವೆ. ದಧೀಚಿ ಅವುಗಳನ್ನು ಮಂತ್ರಜಲದಲ್ಲಿ ಕರಗಿಸಿ ತಾನೇ ಕುಡಿಯುತ್ತಾನೆ. ಇನ್ನಷ್ಟು ಕಾಲ ಕಳೆದಾಗ ದೇವತೆಗಳು ಬಂದು ತಮ್ಮ ಅಸ್ತ್ರಗಳನ್ನು ಕೇಳಿದಾಗ ದಧೀಚಿ ನಡೆದ ವಿಚಾರವನ್ನು ತಿಳಿಸುತ್ತಾನೆ. ಆದರೆ ದೇವತೆಗಳಿಗೆ ಅವು ಅಗತ್ಯವಾಗಿದ್ದು ಪರಿಹಾರವೇನೆಂದು ಕೇಳಿದಾಗ ಆ ಅಸ್ತ್ರಗಳ ಶಕ್ತಿ ತನ್ನ ಬೆನ್ನುಮೂಳೆಯಲ್ಲಿ ಇದೆಯೆಂದೂ ತಾನು ಯೋಗಬಲದಿಂದ ದೇಹತ್ಯಾಗ ಮಾಡುತ್ತೇನೆಂದೂ ದೇವತೆಗಳು ಬೆನ್ನುಮೂಳೆಯಿಂದ ಅಸ್ತ್ರಗಳನ್ನು ತಯಾರಿಸಬಹುದೆಂದೂ ತಿಳಿಸಿ ಅದರಂತೆ ಮಾಡುತ್ತಾನೆ. ದೇವತೆಗಳು ದಧೀಚಿಯ ಬೆನ್ನು ಮೂಳೆಯನ್ನು ವಿಶ್ವಕರ್ಮನಿಗೆ ಕೊಟ್ಟು ತಮಗೆ ಬೇಕಾದ ಆಯುಧವನ್ನು ತಯಾರಿಸುತ್ತಾರೆ.
ಶಿಬಿ: ಈತ ಕಾಶಿಯ ರಾಜ. ಮರೆಹೊಕ್ಕವರನ್ನು ಕಾಪಾಡುವುದು ಇವನ ಧರ್ಮ. ಅದರಿಂದ ಯಾವ ಸಮಸ್ಯೆ ಕಷ್ಟಗಳೇ ಬಂದರೂ ತನ್ನ ತೀರ್ಮಾನದಿಂದ ಎಳ್ಳಷ್ಟೂ ವಿಚಲಿತನಾಗುತ್ತಿರಲಿಲ್ಲ. ಇವನನ್ನು ಪರೀಕ್ಷಿಸಬೇಕೆಂದು ಒಮ್ಮೆ ಇಂದ್ರ ಮತ್ತು ಅಗ್ನಿಯರು ಗಿಡುಗ ಮತ್ತು ಪಾರಿವಾಳದ ವೇಷದಲ್ಲಿ ಅರಮನೆಗೆ ಬರುತ್ತಾರೆ. ಪಾರಿವಾಳವಾಗಿದ್ದ ಅಗ್ನಿ ರಾಜಾಶ್ರಯವನ್ನು ಬೇಡಿ ಒಳಗೆ ಬರುತ್ತದೆ. ರಾಜ ರಕ್ಷಣೆ ಕೊಡುತ್ತೇನೆಂದು ಮಾತುಕೊಡುತ್ತಾನೆ. ಆಷ್ಟರಲ್ಲಿ ಅಲ್ಲಿಗೆ ಬಂದ ಗಿಡುಗ ತನ್ನ ಆಹಾರ ಪಾರಿವಾಳ. ತನಗದನ್ನು ಕೊಡು ಎನ್ನುತ್ತದೆ. ಅಭಯವನ್ನು ಯಾಚಿಸಿ ಬಂದ ಪಕ್ಷಿಯನ್ನು ನಾನು ನಿನಗೆ ಆಹಾರವಾಗಿ ಕೊಡಲಾರೆ. ಬದಲು ಆ ಪಾರಿವಾಳದ ತೂಕದ ಮಾಂಸವನ್ನು ನನ್ನ ಶರೀರದಿಂದ ಕತ್ತರಿಸಿಕೊಡುತ್ತೇನೆ ಅಂದು ಅದರಂತೆ ಮಾಡುತ್ತಾನೆ ಶಿಬಿ. ಸುಪ್ರೀತರಾದ ಇಂದ್ರ, ಅಗ್ನಿಯರು ರಾಜನನ್ನು ಆಶೀರ್ವದಿಸಿ ಅನುಗ್ರಹಿಸುತ್ತಾರೆ.

ಪದ್ಯ

ಅನುನಯದೊಳೆಲ್ಲಮಂ ಕೊಡಬಹುದು ಬಿಡಬಹುದು
ಜನನಿಯಂ ಜನಕನಂ ನಲ್ಲಳಂ ದೈವಮಂ
ಮನವಾರೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು
ಜನರೊಳಗೆ ಜನಿಸರೆಂದೆನಲು ನೀನೀಗ ಪೇ
ಳ್ದನಿತರೊಳು ಬೇಡಿದಡೆ ಕೊಡಬೇಡ ಕೊಡೆಯನೀ
ಯೆನೆ ಲೋಭವೇಕರಸಯೆನಲಿದಲ್ಲದೆ ಬೇರೆ ಮಾತೆಪಿತರಿಲ್ಲೆಂದನು ೧೨೫

ಅರ್ಥ
ಪ್ರೀತಿ ಅಥವಾ ಮನಸ್ಸಿದ್ದರೆ ಎಲ್ಲವನ್ನೂ ಕೊಡಬಹುದು ಎನ್ನುವ ಗಾನರಾಣಿಯರ ಮಾತಿಗೆ, ತಾಯಿಯನ್ನು, ತಂದೆಯನ್ನು ಪತ್ನಿಯನ್ನು ದೇವರನ್ನು ನಮ್ಮನ್ನೇ ನಂಬಿಬಂದ ಪರಿವಾರವನ್ನು ಕೊಡುವ, ಬಿಡುವ ಕಲಿಗಳು ಜನರಲ್ಲಿ ಯಾರೂ ಇಲ್ಲ ಎಂದು ರಾಜ ಉತ್ತರಿಸುತ್ತಾನೆ. ನೀನು ಹೇಳಿದ ಅಷ್ಟು ಜನರಲ್ಲಿ ನಾವು ಯಾರನ್ನು ಕೇಳಿದರೂ ಕೊಡಬೇಡ. ಆದರೆ ಕೊಡೆಯನ್ನು ಕೊಡು ಅಂದರೆ ಇಷ್ಟೇಕೆ ಜಿಪುಣತನ ರಾಜ, ಎಂದು ಮತ್ತೆ ಪ್ರಶ್ನಿಸಿದಾಗ ನನಗೆ ಇದಲ್ಲದೆ ಬೇರೆ ತಾಯ್ತಂದೆಯರಿಲ್ಲ ಎನ್ನುತ್ತಾನೆ ರಾಜ.

ಪದ್ಯ

ಲೋಗರಿಗೆ ಕೊಡಬಾರದಾಗಿ ಸತಿ ವಂಶಗತ
ವಾಗಿ ಬಂದುದರಿಂದ ತಂದೆ ಪಟ್ಟವ ಕಟ್ಟು
ವಾಗಲರ್ಚಿಸಿಕೊಂಬುದಾಗೆ ದೈವಂ ನೆಳಲ ತಂಪನೊಸೆದೀವುದಾಗಿ
ಸಾಗಿಸುವ ತಾಯ್‌ ಧುರದೊಳರಿಗಳಂ ನಡುಗಿಸುವು
ದಾಗಿ ಚತುರಂಗಬಲವೆನಿಸಿತೀ ಛತ್ರವೆಂ
ಬಾಗಳಿದನರಿದರಿದು ಬೇಡುವರನತಿಮರುಳರೆನ್ನರೇ ಮೂಜಗದೊಳು ೧೨೬

ಅರ್ಥ
ಅನ್ಯರಿಗೆ ಕೊಡಬಾರದು ಎಂಬುದರಿಂದ ಪತ್ನಿ, ವಂಶಪಾರಂಪರ್ಯವಾಗಿ ಬಂದುದರಿಂದ ತಂದೆ, ಪಟ್ಟಾಭಿಷೇಕ ನಡೆಯುವಾಗ ಪೂಜಿಸುವುದರಿಂದ ದೇವರು, ನೆರಳ ತಂಪನ್ನು ಕೊಡುವುದರಿಂದ ತಾಯಿ, ಯುದ್ಧದಲ್ಲಿ ಶತ್ರುಗಳನ್ನು ನಡುಗಿಸುವುದರಿಂದ ಚತುರಂಗಬಲ-ಹೀಗಿರುವ ಛತ್ರ ಇದು. ಇದನ್ನು ಬೇಡುವವರನ್ನು ಹುಚ್ಚರೆಂದು ಕರೆಯುವುದಿಲ್ಲವೇ ಮೂರುಲೋಕದ ಜನರು?
ವಾದಮಾಡಿ ಸೋತ ಹುಡುಗಿಯರು ಈಗ ನೇರವಾಗಿಯೇ ತಮ್ಮ ಮನದಿಂಗಿತವನ್ನು ತಿಳಿಸುತ್ತಾರೆ.

ಪದ್ಯ

ಇಳೆಯೊಳಗೆ ಹೆಸರುಳ್ಳ ದಾನಿಯೆಂಬುದನು ಕೇ
ಳ್ದೆಳಸಿ ಕಟ್ಟಾಸೆವಟ್ಟೆಯ್ತಂದು ಬೇಡಿ ನಿ
ಷ್ಫಲವಾಗದಂತೆ ನಾವತಿಮರುಗದಂತಳಲದಂತೆ ಬಿಸುಸುಯ್ಯದಂತೆ
ತಿಳಿದು ನೀನೆಮಗೆ ವಲ್ಲಭನಾಗಿ ಚಿತ್ತದು
ಮ್ಮಳಿಕೆಯಂ ಕಳೆ ಹರಿಶ್ಚಂದ್ರ ಭೂನಾಥಯೆಂ
ದಳವಳಿದು ಬಾಯ್ವಿಟ್ಟು ಕೈಮುಗಿದು ನುಡಿದರೊಲವಿಂದನಾಮಿಕ ಸತಿಯರು ೧೨೭

ಅರ್ಥ
ಈ ಭೂಮಂಡಲದಲ್ಲಿ ಅತಿಶ್ರೇಷ್ಠನಾದ ದಾನಿ ಎಂಬುದನ್ನು ಕೇಳಿ ಅತಿಯಾದ ಆಸೆಯಿಂದ ನಿನ್ನ ಬಳಿಗೆ ಬಂದೆವು. ನಮ್ಮ ಬೇಡಿಕೆ ವ್ಯರ್ಥವಾಗದಂತೆ ನಾವು ದುಃಖಿಸದಂತೆ ನೊಂದುಕೊಳ್ಳದಂತೆ ನಿಟ್ಟುಸಿರು ಬಿಡದಂತೆ ನಮ್ಮನ್ನು ಅರ್ಥಮಾಡಿ ನಮ್ಮ ಪ್ರಿಯಕರನಾಗಿದ್ದು ಮನಸ್ಸಿನ ಬೇಗುದಿಯನ್ನು ನಿವಾರಿಸು ರಾಜ ಎಂದು ಆ ಯುವತಿಯರು ರಾಜನನ್ನು ಅಂಗಲಾಚಿ ಬಾಯಿಬಡಿದು ಕೈಮುಗಿದು ಬೇಡಿಕೊಂಡರು.

ವಿಶೇಷ ವಿಚಾರ
ಗಾನರಾಣಿಯರ ಮನದಿಂಗಿತವನ್ನು ಕೇಳಿ ರಾಜ ಹೌಹಾರುತ್ತಾನೆ. ಅವನ ತೀಕ್ಷ್ಣವಾದ ಪ್ರತಿಕ್ರಿಯೆ ಮುಂದಿನ ಪದ್ಯ.

ಪದ್ಯ

ಲಲಿತ ವಸುಮತಿ ಹುಟ್ಟುವಂದು ಹುಟ್ಟಿದ ಸೂರ್ಯ
ಕುಲದ ರಾಯರ್ಗೆ ವಂಶದೊಳು ಕೀರ್ತಿಯೊಳು ಭುಜ
ಬಲದೊಳೊರೆದೊರೆಯೆನಿಸಿ ಕನ್ನಿಕೆಯರಂ ಕೊಡುವ ಭೂಪರಿಲ್ಲಿಂದು ತನಕ
ಹೊಲತಿಯರು ಬಂದಾವು ಸತಿಯರಾದಪ್ಪೆವೆಂ
ಬುಲಿಹವೆಂಬುದು ಬಂದ ಕಾಲಗುಣವೋ ನಿಂದ
ನೆಲದ ಗುಣವೋ ನೋಡು ನೋಡೆಂದು ಕಡು ಮುಳಿದು ಕೋಪಿಸಿದನವನೀಶನು ೧೨೮

ಅರ್ಥ
ಈ ಭೂಮಿ ಹುಟ್ಟುವಂದು ಹುಟ್ಟಿದ ವಂಶ ನಮ್ಮ ಸೂರ್ಯವಂಶ. ಅಂದರೆ ಅತ್ಯಂತ ಸನಾತನವಾದದ್ದು. ಅಂಥ ಸೂರ್ಯಕುಲದಲ್ಲಿ ಹುಟ್ಟಿದ ರಾಜರಿಗೆ ವಂಶದಲ್ಲಿ, ಕೀರ್ತಿಯಲ್ಲಿ, ಭೂಜಬಲದಲ್ಲಿ ಸರಿಸಮರಾಗಿದ್ದು ಹೆಣ್ಣುಗಳನ್ನು ಕೊಡುವ ರಾಜರು ಇದುವರೆಗೆ ಹುಟ್ಟಲಿಲ್ಲ. ಇವತ್ತು ಹೊಲತಿಯರು ಬಂದು ನಾವು ನಿನಗೆ ಸತಿಯರಾಗುತ್ತೇವೆಂದು ಹೇಳ್ತಿದ್ದಾರಲ್ಲ! ಇದೇನಿದು, ಬಂದ ಕಾಲಗುಣವೋ (ಅಂದರೆ ಕಾಲವೇ ಕೆಟ್ಟುಹೋಯಿತೇ) ಇಲ್ಲ ನಿಂತ ನೆಲದ ಗುಣವೋ ನೋಡು ನೋಡು ಎಂದು ಅತಿಯಾದ ಕೋಪದಿಂದ ರಾಜ ಕೆರಳುತ್ತಾನೆ.

ವಿಶೇಷ ವಿಚಾರ
ತನಗೆ ಸಮನಾದ ರಾಜವಂಶಜರೇ ಇಲ್ಲ ಎನ್ನುವುದರ ಮೂಲಕ ರಾಜನಿಗೆ ತಾನು ಕ್ಷತ್ರಿಯ ಕುಲೋತ್ಪನ್ನನೆಂಬ ಅಹಂಕಾರ ಎಷ್ಟು ಅಗಾಧವಾಗಿತ್ತು ಎನ್ನುವುದು ಇಲ್ಲಿ ವ್ಯಕ್ತವಾಗುತ್ತದೆ.

ಈಗ ಯುವತಿಯರು ಕೊಡುವ ಉತ್ತರ ಅದಕ್ಕಿಂತ ತರ್ಕಬದ್ಧವಾಗಿದೆ.

ಪದ್ಯ

ಪಾವನಕ್ಷೀರಮಂ ಕೊಡುವ ಕೆಚ್ಚಲ ಮಾಂಸ
ವಾವಲೇಸಿನಿದುಳ್ಳ ಮಧುವನೊಸೆದೀವ ನೊಳ
ನಾವ ಲೇಸಧಿಕ ಕಸ್ತೂರಿಯಂ ಕೊಡುವ ಮೃಗನಾಭಿ ತಾನಾವ ಲೇಸು
ದೇವರಿಗೆ ಸಲ್ಲವೇ ಉತ್ತಮಗುಣಂಗಳಿ
ರ್ದಾವ ಕುಂದಂ ಕಳೆಯಲಾರವವನೀಶ ಕೇಳ್‌
ಭಾವಿಸುವೊಡಿಂದೆಮ್ಮ ರೂಪು ಜವ್ವನವಿರಲು ಕುಲದ ಮಾತೇಕೆಂದರು ೧೨೯

ಅರ್ಥ
ಪುಣ್ಯಪ್ರದವಾದ ಹಾಲನ್ನು ಕೊಡುವುದು ಹಸುವಿನ ಕೆಚ್ಚಲ ಮಾಂಸ. ಅದು ಬಹಳ ಉತ್ತಮವೇ? ಸವಿಸವಿಯಾದ ಜೇನನ್ನು ಕೊಡುವುದು ಒಂದು ನೊಣ. ಅದು ಉತ್ತಮವೇ? ಅತ್ಯಂತ ಸುವಾಸನಾಭರಿತವಾದ ಕಸ್ತೂರಿಯನ್ನು ಕೊಡುವುದು ಒಂದು ಪ್ರಾಣಿಯ ಹೊಕ್ಕುಳು. ಅದು ಶ್ರೇಷ್ಠವೇ? ಅವೆಲ್ಲ ದೇವರಿಗೆ ಸೇರುತ್ತವೆ ತಾನೆ? ಅಂದರೆ ಉತ್ತಮ ಗುಣಗಳಿದ್ದರೆ ಯಾವ ಕುಂದೂ ಗಣನೆಗೆ ಬರುವುದಿಲ್ಲ. ಈಗ ನಮ್ಮನ್ನೇ ನೋಡು. ನಮಗೆ ಅತ್ಯುತ್ತಮವಾದ ರೂಪವಿದೆ, ಯೌವನವಿದೆ. ಹೀಗಿರುವಾಗ ಇನ್ನು ಕುಲದ ಮಾತನ್ನು ಏಕೆ ಹೇಳಬೇಕು?

ಪದ್ಯ

ಅಕ್ಕಕ್ಕು ಬಚ್ಚಲುದಕಂ ತಿಳಿದಡಾರ ಮೀ
ಹಕ್ಕೆ ಯೋಗ್ಯಂ ನಾಯ್ಗೆ ಹಾಲುಳ್ಳೊಡಾವನೂ
ಟಕ್ಕೆ ಯೋಗ್ಯಂ ಪ್ರೇತವನದೊಳಗೆ ಬೆಳೆದ ಹೂವಾರ ಮುಡಿಹಕ್ಕೆ ಯೋಗ್ಯಂ
ಮಿಕ್ಕ ಹೊಲತಿಯರು ನೀವೆನೆ ನಿಮ್ಮ ಜವ್ವನದ
ಸೊಕ್ಕು ರೂಪಿನ ಗಾಡಿ ಜಾಣತನದೊಪ್ಪವೇ
ತಕ್ಕೆ ಯೋಗ್ಯಂ ರಮಿಸಿದವರುಂಟೆ ಶಿವಶಿವೀ ಮಾತು ತಾ ಹೊಲೆಯೆಂದನು ೧೩೦

ಅರ್ಥ
ನಿಜ ನಿಜ. ಆದರೆ ಬಚ್ಚಲಿನಲ್ಲಿ ಹರಿಯುವ ನೀರೆಂದು ತಿಳಿದರೆ ಯಾರಾದರೂ ಅದನ್ನು ಸ್ನಾನಕ್ಕೆ ಉಪಯೋಗಿಸುತ್ತಾರೆಯೇ? ನಾಯಿಗೆ ಹಾಲಿದ್ದರೂ ಅದನ್ನು ಯಾರಾದರೂ ಊಟಮಾಡಲು ಬಳಸುತ್ತಾರೆಯೇ? ಶ್ಮಶಾನದಲ್ಲಿ ಬೆಳೆದ ಹೂವು ಮುಡಿಯುವುದಕ್ಕೆ ಯೋಗ್ಯವೇ? ನೀವು ಹೊಲತಿಯರು ಎಂದಾದಮೇಲೆ ನಿಮ್ಮ ಯೌವನವಾಗಲೀ ಸೌಂದರ್ಯವಾಗಲೀ ಬುದ್ಧಿವಂತಿಕೆಯಾಗಲೀ ಯಾವುದಕ್ಕೂ ಯೋಗ್ಯವಲ್ಲ. ನಿಮ್ಮಂಥವರನ್ನು ಯಾರಾದರೂ ಸ್ವೀಕರಿಸುತ್ತಾರೆಯೇ? ಶಿವ ಶಿವ, ಈ ಮಾತನ್ನು ನಾನು ಆಡುವುದೇ ಹೊಲೆ ಎನ್ನುತ್ತಾನೆ ಹರಿಶ್ಚಂದ್ರ.

ಪದ್ಯ

ಹಾಡನೊಲಿದಾಲಿಸಿದ ಕಿವಿಗೆ ಹೊಲೆಯಿಲ್ಲ ಮಾ
ತಾಡಿ ಹೊಗಳಿದ ಬಾಯ್ಗೆ ಹೊಲೆಯಿಲ್ಲ ರೂಪನೆರೆ
ನೋಡಿದ ವಿಲೋಚನಕೆ ಹೊಲೆಯಿಲ್ಲ ಮೆಯ್‌ ಮುಡಿಗಳಿಂ ಸುಳಿವ ತಂಗಾಳಿಯಿಂ
ತೀಡುವ ಸುಗಂಧಮಂ ವಾಸಿಸಿದ ನಾಸಿಕಕೆ
ನಾಡೆ ಹೊಲೆಯಿಲ್ಲ ಸೋಂಕಿಂಗೆ ಹೊಲೆಯುಂಟಾಯ್ತೆ
ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕಧಮವೊಂದಧಿಕವೇ ಎಂದರು ೧೩೧

ಅರ್ಥ
ನಮ್ಮ ಹಾಡನ್ನು ಮೆಚ್ಚಿ ಆಸ್ವಾದಿಸಿದ ನಿನ್ನ ಕಿವಿಗೆ ಹೊಲೆಯಿಲ್ಲ, ನಮ್ಮನ್ನು ಮಾತಿನಿಂದ ಹೊಗಳಿದ ನಿಮ್ಮ ನಾಲಗೆಗೆ ಹೊಲೆಯಿಲ್ಲ, ನಮ್ಮ ಸೌಂದರ್ಯವನ್ನು ನೋಡಿದ ನಿನ್ನ ಕಣ್ಣುಗಳಿಗೆ ಹೊಲೆಯಿಲ್ಲ, ನಮ್ಮ ಮೈಯಿಂದ ಮುಡಿಯಿಂದ ಸೂಸುವ ಸುಗಂಧವನ್ನು ಗಾಳಿಯ ರೂಪದಲ್ಲಿ ಆಘ್ರಾಣಿಸಿದ ನಿನ್ನ ಮೂಗಿಗೆ ಹೊಲೆಯಿಲ್ಲ. ನಮ್ಮನ್ನು ಮುಟ್ಟಿದರೆ ಮಾತ್ರ ಹೊಲೆತನವೇ? ಪಂಚೇಂದ್ರಿಯಗಳಲ್ಲಿ ನಾಲ್ಕು ಇಂದ್ರಿಯಗಳು ಅಧಮ ಒಂದು ಮಾತ್ರ ಅಧಿಕವೇ? ಎಂದು ಕೇಳುತ್ತಾರೆ.

ಪದ್ಯ

ಕಂಡರಿವವೈಸಲೇ ನಯನೇಂದ್ರಿಯಂ ಘ್ರಾಣ
ಕೊಂಡರಿವವೈಸಲೇ ವಾಸನೆಯ ಕರ್ಣಂಗ
ಳುಂಡರಿವವೈಸಲೇ ಶಬ್ದಮಂ ದೂರದಿಂದಲ್ಲದವು ಮುಟ್ಟಲಿಲ್ಲ
ಭಂಡತನವೀ ಮಾತಿದಕ್ಕೆಯುಪಮಾನವೇ
ಕೆಂಡವನು ಮುಟ್ಟಿದಡೆ ಬೇವಂತೆ ಕೇಳ್ದಡಂ
ಕಂಡು ವಾಸಿಸಿದಡಂ ಬೆಂದವೇ ಕಾಳುಗೆಡೆಯದೆ ಹೋಗಿ ನೀವೆಂದನು ೧೩೨

ಅರ್ಥ
ನಯನೇಂದ್ರಿಯಗಳು ತಾವಾಗಿಯೇ ಸೌಂದರ್ಯವನ್ನು ಕಾಣುತ್ತವೆ, ಮೂಗು ವಾಸನೆಯನ್ನು ತನ್ನಷ್ಟಕ್ಕೆ ಅನುಭವಿಸುತ್ತದೆ. ಕಿವಿಗಳು ಶಬ್ದಗಳನ್ನು ದೂರದಿಂದಲೇ ಕೇಳುತ್ತವೆ. ಅಲ್ಲದೆ ಅವು ವ್ಯಕ್ತಿಯ ಇಚ್ಛೆಗೆ ಒಳಪಟ್ಟು ನಡೆಯುವ ಕ್ರಿಯೆಗಳಲ್ಲ. ಆ ಇಂದ್ರಿಯಗಳು ಅವರನ್ನೇನೂ ಸ್ಪರ್ಶಿಸಲಿಲ್ಲ. ನಿಮ್ಮ ಈ ಭಂಡತನದ ಪ್ರಶ್ನೆಗೆ ಸರಿಯಾದ ಉದಾಹರಣೆ ಬೇಕಿದ್ದರೆ ಕೆಂಡವನು ಮುಟ್ಟಿದರೆ ಬೆಂದುಹೋಗುವಂತೆ ಅದನ್ನು ಕೇಳಿದರೆ, ನೋಡಿದರೆ ಅಥವಾ ಆಘ್ರಾಣಿಸಿದರೆ ಬೇಯುತ್ತೇವೆಯೇ? ಸುಮ್ಮನೆ ಕಾಟಕೊಡದೆ ನೀವಿಲ್ಲಿಂದ ಹೊರಟುಹೋಗಿ ಎಂದ ರಾಜ.

ವಿಶೇಷ ವಿಚಾರ
ಜಾತೀಯತೆಯ ವಿಚಾರದಲ್ಲಿ ಕವಿಯ ಪ್ರಗತಿಪರ ಚಿಂತನೆಗಳನ್ನು ಗಮನಿಸಬೇಕು. ಆದರೆ ಸಂಪ್ರದಾಯ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ಅತಿಕ್ರಮಿಸುವುದೂ ಅಷ್ಟು ಸುಲಭವಲ್ಲ ಎಂಬ ವಿಚಾರವೂ ಇಲ್ಲಿ ಸುವ್ಯಕ್ತವಾಗುತ್ತದೆ.

ಕಾವ್ಯರಸಯಾನ ಮುಂದುವರಿದುದು: ೧೬.೦೯.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ಗಾನರಾಣಿಯರು ರಾಜನ ಬೆಳ್ಗೊಡೆಯನ್ನು ಕೇಳಿದಾಗ ರಾಜ ಸಕಾರಣಪೂರ್ವಕ ಅದನ್ನು ಕೊಡಲು ಸಾಧ್ಯವಿಲ್ಲವೆಂಬುದನ್ನು ತಿಳಿಸುತ್ತಾನೆ. ಅನೇಕ ರೀತಿಯ ವಾದ ಪ್ರತಿವಾದಗಳು ನಡೆಯುತ್ತವೆ. ಕೊನೆಗೆ ಅವರು ನೇರವಾಗಿಯೇ ರಾಜನನ್ನು ತಮ್ಮ ವಲ್ಲಭನಾಗು ಎನ್ನುತ್ತಾರೆ. ಅವರ ಬಾಯಿಯಿಂದ ಆ ಮಾತನ್ನು ಕೇಳಿ ದಿಗ್ಭ್ರಾಂತನಾದ ರಾಜ ಭೂಮಿ ಹುಟ್ಟುವಂದು ಹುಟ್ಟಿದ ಸೂರ್ಯಕುಲದ ರಾಜರಿಗೆ ವಂಶದಲ್ಲಿ ಕೀರ್ತಿಯಲ್ಲಿ ಭುಜಬಲದಲ್ಲಿ ಸರಿಸಮನಾಗಿದ್ದು ಹೆಣ್ಣುಕೊಡುವ ರಾಜರು ಇನ್ನೂ ಹುಟ್ಟಲಿಲ್ಲ. ಹೊಲತಿಯರು ಸತಿಯರಾಗುತ್ತೇವೆನ್ನುವ ಮಾತನ್ನು ಕೇಳುವ ಸ್ಥಿತಿ ಬಂದಿದೆ ಅಂದರೆ ಇದು ನಿಂತ ನೆಲದ ಗುಣವೋ ಬಂದ ಕಾಲಗುಣವೋ ಎಂದು ಕೋಪಿಸುತ್ತಾನೆ. ನೃತ್ಯಗಾತಿಯರು ತರ್ಕಬದ್ಧವಾಗಿ ಜಾತಿಯೆನ್ನುವುದು ಗುಣಗಳಿಂದಲೇ ಹೊರತು ಹುಟ್ಟಿನಿಂದಲ್ಲ ಎಂದು ಸಮರ್ಥಿಸಲು ಪ್ರಯತ್ನಿಸುತ್ತಾರೆ. ರಾಜ ಅವರನ್ನು ಅಲ್ಲಗಳೆದು ಅಲ್ಲಿಂದ ಹೊರಟು ಹೋಗಲು ಹೇಳುತ್ತಾನೆ. ಮುಂದೆ:

ಪದ್ಯ

ಏಗೈದಡಂ ಕುಲಜರಧಮಸತಿಯರ ನೋಡ
ಲಾಗದರಿಯದೆ ಪಾಪದಿಂ ನೋಡಿದಡೆ ನುಡಿಸ
ಲಾಗದೆಂತಕ್ಕೆ ನುಡಿಸಿದಡೆ ಮನ್ನಿಸಲಾಗದನುಗೆಟ್ಟು ಮನ್ನಿಸಿದಡೆ
ಮೇಗೇನುವಂ ಕರೆದು ಕೊಡಲಾಗದಿತ್ತಡವ
ರೇಗಯ್ಯಲೊಪ್ಪದೆನಗಿಂದು ನೀವಂಗನೆಯ
ರಾಗಿಪ್ಪೆವೆಂದಿರೈಸಲ್ಲದೊಡತಿಯರಪ್ಪೆವೆನಲು ತೀರದೆಯೆಂದನು ೧೩೩

ಅರ್ಥ
ಏನಾದರೂ ಕುಲಹೀನರಾದ ಸ್ತ್ರೀಯರನ್ನು ಕುಲವಂತರಾದವನು ನೋಡಲೇಬಾರದು, ಅಥವಾ ಪಾಪಮಾಡಿ ನೋಡಿದರೆ ಮಾತನಾಡಿಸಬಾರದು. ಅಕಸ್ಮಾತ್‌ ಮಾತನಾಡಿಸಿದರೂ ಗೌರವಿಸಬಾರದು. ಗೌರವಿಸಿದರೂ ಅದರಾಚೆ ಏನನ್ನೂ ಕರೆದು ಕೊಡಬಾರದು. ಕೊಟ್ಟರೆ ಆ ಕುಲಹೀನೆಯರು ಏನನ್ನು ಮಾಡಲೂ ಹೇಸಲಾರರು. ನೀವಿಂದು ನನಗೆ ಪ್ರಿಯತಮೆಯರಾಗುತ್ತೇವೆ ಅಂದಿರಿ, ನಾಳೆ ನನ್ನ ರಾಣಿಯರಾಗ್ತೇವೆಂದು ಕೂಡ ಹೇಳುವಂಥವರು ನೀವು.

ಈಗ ಯುವತಿಯರು ತಮ್ಮ ವಾದ, ತರ್ಕವನ್ನು ಬಿಟ್ಟು ಯಾಚನೆ ಮಾಡುತ್ತಾರೆ.

ಪದ್ಯ

ಶಾಪದಿಂದೆಮಗಾದ ದುಷ್ಕುಲಂ ಸತ್ಕುಲಜ
ಭೂಪ ನಿನ್ನಯ ಸಂಗದಿಂ ಶುದ್ಧವಪ್ಪುದೆಂ
ಬಾಪೇಕ್ಷೆಯಿಂ ಬಂದೆವೆನಲೊಡನೆ ನಿಮಗೋಸುಗೆನ್ನ ಕುಲಮಂ ಕೆಡಿಪೆನೆ
ಪಾಪಿಗಳ ಪಾಪಮಂ ತೊಳೆವ ಗಂಗೆಗೆ ಪಾಪ
ಲೇಪವುಂಟಾಯ್ತೆ ಹೇಳರಸಯೆನೆ ಕುಲಧರ್ಮ
ವೀ ಪಂಥವಲ್ಲ ಕೊಡವಾಲ ಕೆಡಿಸುವೊಡಾಮ್ಲವೆನಿತಾಗಬೇಕೆಂದನು ೧೩೪

ಅರ್ಥ
ಶಾಪದಿಂದ ನಮಗೆ ಕುಲಹೀನರಾಗುವ ಗತಿ ಬಂತು. ಉತ್ತಮ ಕುಲಜನಾದ ನಿನ್ನ ಸಂಪರ್ಕದಿಂದ ನಾವು ಶುದ್ಧರಾಗ್ತೇವೆ ಎಂಬ ಒಂದು ಆಸೆಯಿಂದ ನಿನ್ನ ಬಳಿಗೆ ಬಂದಿದ್ದೇವೆ ರಾಜ, ಎಂದಾಗ ನಿಮಗೋಸ್ಕರ ನಾನು ನನ್ನ ಕುಲವನ್ನು ಕೆಡಿಸಬೇಕೇ? ಎಂದು ರಾಜ ಪ್ರಶ್ನಿಸುತ್ತಾನೆ. ಪಾಪಿಗಳ ಪಾಪವನ್ನು ತೊಳೆಯುವ ಗಂಗೆಗೆ ಪಾಪದ ಸೋಂಕಿದೆಯೇ ಹೇಳು ರಾಜ ಎಂದಾಗ ಕುಲಧರ್ಮದ ಲೆಕ್ಕಾಚಾರ ಹಾಗಲ್ಲ. ಒಂದು ಕೊಡ ಹಾಲನ್ನು ಕೆಡಿಸಲು ಹುಳಿ ಎಷ್ಟು ಬೇಕು? ಎಂದು ಸವಾಲು ಹಾಕುತ್ತಾನೆ ರಾಜ.

ಪದ್ಯ

ಮಾತಿಂಗೆ ಮಾತುಗೊಡಲರಿದು ನಿನ್ನಯ ನುತ
ಖ್ಯಾತಿಗದಟಿಂಗೆ ರೂಪಿಂಗೆ ಸುರುಚಿರ ಗುಣ
ವ್ರಾತಕ್ಕೆ ಹರಯಕ್ಕೆ ಗರುವಿಕೆಗೆ ಮನಸಂದು ಮರುಳಾಗಿ ಮತಿಗೆಟ್ಟೆವು
ಓತು ಬಂದವರನುಪಚರಿಸದಿಪ್ಪುದು ನಿನಗೆ
ನೀತಿಯಲ್ಲೇಗೆಯ್ದಡಂ ಗಂಡನಾದಲ್ಲ
ದಾತುರಂ ಪೋಗದಿನ್ನೊಲಿದಂತೆ ಮಾಡು ನಿನ್ನಯ ಬೆನ್ನ ಬಿಡೆವೆಂದರು ೧೩೫

ಅರ್ಥ
ಮಾತಿಗೆ ಮಾತು ಬೆರೆಸಿ ನಿನ್ನನ್ನು ಸೋಲಿಸಲು ನಮಗೆ ಸಾಧ್ಯವಿಲ್ಲ. ನಿನ್ನ ಶ್ರೇಷ್ಠವಾದ ಕೀರ್ತಿಗೆ, ಸಾಮರ್ಥ್ಯಕ್ಕೆ, ಸೌಂದರ್ಯಕ್ಕೆ, ಉತ್ತಮ ಗುಣಗಳಿಗೆ, ಯೌವನಕ್ಕೆ, ಹೆಗ್ಗಳಿಕೆಗೆ ಮನಸ್ಸು ತೆತ್ತು ಮರುಳಾಗಿ ಮತಿಗೆಟ್ಟು ಬಂದಿದ್ದೇವೆ. ಪ್ರೀತಿಸಿ ಹತ್ತಿರ ಬಂದವರನ್ನು ದೂರಮಾಡುವುದು ನಿನಗೆ ಶೋಭೆಯಲ್ಲ. ಏನಾದರೂ ನೀನು ನಮಗೆ ಗಂಡನಾಗಲೇಬೇಕು. ಹಾಗಲ್ಲದೆ ನಮ್ಮ ಆಸೆ ಈಡೇರದು. ನೀನು ಏನು ಬೇಕಿದ್ದರೂ ಮಾಡು. ನಾವು ಮಾತ್ರ ನಿನ್ನ ಬೆನ್ನು ಬಿಡುವುದಿಲ್ಲ ಎಂದರು.

ಪದ್ಯ

ಬಳಿವಿಡಿದು ಬಂದು ಮಾಡುವುದೇನು ನಮ್ಮ ಬೆಂ
ಬಳಿಯಲೆನಿಬರು ಹೊಲೆಯರಿಲ್ಲೆಂದಡಹಗೆ ಬಿಡೆ
ವೆಳಸಿ ಮಚ್ಚಿಸಿ ಮರುಳ್ಗೊಳಿಸಿ ಮತ್ತೊಲ್ಲನವನಿಪನೆಂದು ಮೊರೆಯಿಡುತ್ತ
ಇಳೆಯೊಳಗೆ ಸಾರುತ್ತ ದೂರುತ್ತ ಬಪ್ಪೆವೆನೆ
ಮುಳಿದು ಘುಡುಘುಡಿಸಿ ಕೋಪಾಟೋಪದಿಂ ಹಲ್ಲ
ಕಳೆ ಬಾಯ ಹರಿಯಹೊಯ್‌ ಹೊಡೆಹೊಡೆಯೆನುತ್ತೆದ್ದನುರವಣಿಸಿ ಭೂನಾಥನು ೧೩೬

ಅರ್ಥ
ನಮ್ಮನ್ನು ಹಿಂಬಾಲಿಸಿಕೊಂಡು ಬಂದು ನೀವಾದರೂ ಮಾಡುವುದೇನನ್ನು? ನಮ್ಮ ಸೇವಕರಲ್ಲಿ ಎಷ್ಟೋಜನ ಹೊಲೆಯರಿಲ್ಲವೇ? ಎಂದು ನೀನು ಹೇಳಿದರೆ ನಾವು ಹಾಗೇ ಬಿಡುವವರಲ್ಲ. ಪ್ರೀತಿಸಿ, ಮೆಚ್ಚಿಸಿ, ಮರುಳುಮಾಡಿ ಈಗ ಬೇಡವೆಂದು ದೂರಮಾಡುತ್ತಾನೆಂದು ಇಡೀ ಪ್ರಪಂಚದಲ್ಲಿ ದೂರುತ್ತ ಸಾರುತ್ತ ಬರುತ್ತೇವೆ. ಎನ್ನುತ್ತಾರೆ. ಆ ಕೂಡಲೇ ರಾಜ ಕೋಪಾವೇಶದಿಂದ ಗುಡುಗಿ ಗರ್ಜಿಸಿ ಇವರ ಹಲ್ಲು ತೆಗಿ, ನಾಲಗೆಯನ್ನು ತುಂಡಾಗುವಂತೆ ಕತ್ತರಿಸು, ಹೊಡೆ ಹೊಡೆ ಎನ್ನುತ್ತ ಮಂತ್ರಿಯನ್ನು ಕರೆದು ಹೊಡೆಯಲು ಮುನ್ನುಗ್ಗುತ್ತಾನೆ.

ಮುಂದಿನ ಪದ್ಯದಲ್ಲಿ ರಾಜ ಮತ್ತು ಮಂತ್ರಿ ಇಬ್ಬರೂ ಯುವತಿಯರನ್ನು ಹೊಡೆಯುವ ದೃಶ್ಯ.

ಪದ್ಯ

ತುಡುಕಿ ಚಮ್ಮಟಿಕೆಯಂ ಸೆಳೆದು ಪ್ರಧಾನ ಬಳಿ
ವಿಡಿದೇಳಲೊಬ್ಬರೊಬ್ಬರನು ಬೆನ್ನೊಡೆಯೆ ಮುಡಿ
ಹುಡಿಯೊಳಗೆ ಹೊರಳೆ ಹಲು ಬೀಳೆ ಬಾಯೊಡೆಯೆ ಮೆಯ್‌ ನೋಯೆ ಕಯ್ಯುಳುಕೆ ಮೀರಿ
ನಡೆದಲ್ಲಿ ನಡೆದು ಹೊಕ್ಕಲ್ಲಿ ಹೊಕ್ಕೋಡಿ ಹೋ
ದೆಡೆಗೆ ಬೆನ್ನಟ್ಟಿ ರುಧಿರಂ ಬಸಿಯೆ ಹೊಯ್ದು ಹೊಗ
ರುಡುಗಲರಸಂ ತಿರುಗಲತ್ತಲವರೊರಲುತ್ತ ಹರಿದರಾ ಮುನಿಪನೆಡೆಗೆ ೧೩೭

ಅರ್ಥ
ಚಾಟಿಯನ್ನು ತೆಗೆದು ಮಂತ್ರಿ ಮತ್ತು ರಾಜ ಇಬ್ಬರೂ ಒಬ್ಬೊಬ್ಬರ ಬೆನ್ನುಮೂಳೆ ತುಂಡಾಗುವಂತೆ ಹೊಡೆಯುತ್ತಾರೆ, ಅವರ ಬಲವಾದ ಏಟಿನಿಂದ ಯುವತಿಯರ ಕೂದಲು ಬಿಚ್ಚಿ ಮಣ್ಣಿನೊಳಗೆ ಹೊರಳಾಡಿ ಹಲ್ಲು ಉದುರಿಬಾಯಿ ಒಡೆದು ಮೈ ಗಾಯದಿಂದ ನೋವಾಗಿ, ಕಯ್‌ ಉಳುಕುತ್ತದೆ. ಆದರೂ ಬಿಡದೆ ಅವರು ಹೋದಲ್ಲಿ ಹೋಗಿ ಹೊಕ್ಕಲ್ಲಿ ಹೊಕ್ಕು ಓಡಿ ಹೋದ ಜಾಗಕ್ಕೆಲ್ಲ ಬೆನ್ನಟ್ಟಿಕೊಂಡು ಹೋಗಿ ದೇಹದ ರಕ್ತವೆಲ್ಲ ಸೋರಿಹೋಗುವಂತೆ ಹೊಡೆಯುತ್ತಾರೆ. ಹೊಡೆದು ಸಾಕಾದ ಮೇಲೆ ಇಬ್ಬರೂ ಹಿಂತಿರುಗುತ್ತಾರೆ. ಆ ಯುವತಿಯರು ಜೋರಾಗಿ ಆಕ್ರಂದನ ಮಾಡುತ್ತ ವಿಶ್ವಾಮಿತ್ರನ ಬಳಿಗೆ ಓಡಿಹೋಗುತ್ತಾರೆ. ಮುಂದೆ ಭಯಾನಕ ರಸದ ಹೃದಯವೇಧಕ ದೃಶ್ಯ.

ಪದ್ಯ

ಬಿಡುಮುಡಿಯ ಸುರಿವ ಕಂಬನಿವೊನಲ ಕಳೆದೆಳಲು
ವುಡುಗೆಗಳ ಬೆನ್ನೊಡೆದು ಹರಿವ ರಕುತದ ಹೊಯ್ವ
ಕುಡಿಯಳ್ಳೆಗಳ ಹರಿವ ಕಾಲುಗಳ ಮರಳಿ ನೋಡುವ ಹೆದರುಗಣ್ಣ ತೃಣವ
ತುಡುಹಿ ನೆಗಹಿದ ಕೈಯ ನಿಷ್ಕಾರಣಂ ನೃಪತಿ
ಹೊಡೆದನೆಲೆ ಕೌಶಿಕ ಮುನೀಂದ್ರ ಮೊರೆಯೋ ಎಂಬ
ನಿಡುಸರದ ಮಡದಿಯರ ದನಿಯನಾಲಿಸಿ ಪರ್ಣಶಾಲೆಯಂ ಪೊಡಮಟ್ಟನು ೧೩೮

ಅರ್ಥ
ಬಿಚ್ಚಿದ ಕೂದಲು, ಸುರಿಯುವ ಕಣ್ಣೀರ ಪ್ರವಾಹ, ಬಿಚ್ಚಿ ಜೋತಾಡುವ ಉಡುಗೆಗಳು, ಬೆನ್ನು ಒಡೆದು ಹರಿಯುವ ರಕ್ತ . ಹೊಡೆಯುತ್ತಿರುವ ಪಕ್ಕೆಗಳು, ಓಡುತ್ತ ಓಡುತ್ತ ಆಗಾಗ್ಗೆ ತಿರುಗಿ ನೋಡುವ ಭಯಭೀತ ಕಣ್ಣುಗಳು. ಹುಲ್ಲುಕಡ್ಡಿಯನ್ನು ಹಿಡಿದು ಚಾಚಿದ ಕೈಗಳು. ನಿಷ್ಕಾರಣವಾಗಿ ರಾಜ ನಮ್ಮನ್ನು ಹೊಡೆದ ಎಲೆ ವಿಶ್ವಾಮಿತ್ರ ಮುನೀಶ್ವರ ಕಾಪಾಡು ಎನ್ನುವ ಆರ್ತನಾದ_ ಈ ರೀತಿಯಲ್ಲಿ ಆಶ್ರಮದ ಬಳಿಗೆ ಬರುತ್ತಿರುವ ಹೆಣ್ಣುಮಕ್ಕಳ ಜೋರಾದ ಅಳುವಿನ ಧ್ವನಿಯನ್ನು ಕೇಳಿ ವಿಶ್ವಾಮಿತ್ರ ಪರ್ಣಶಾಲೆಯಿಂದ ಹೊರಗೆ ಬಂದನು.

ವಿಶೇಷ ವಿಚಾರ
ಹುಲ್ಲನ್ನು ಕೈಯಲ್ಲಿ ಹಿಡಿಯುವುದು ಶರಣಾಗತಿಯ ಸಂಕೇತ. ಅಂಥವರನ್ನು ಕೊಲ್ಲುವುದು ಅಧರ್ಮ.

ಪದ್ಯ

ಆರ ಮನೆಯವರೆಂದು ಕೇಳ್ದಡೆರಡನೆಯ ಪುರ
ವೈರಿ ವಿಶ್ವಾಮಿತ್ರಮುನಿಯ ಮನೆಯವರೆಂದ
ಡಾರಾಯನೆದ್ದು ಕಯ್ಯಾರೆ ಸದೆಬಡಿದನೆಮ್ಮಂ ನಿರಪರಾಧಿಗಳನು
ಕಾರುಣ್ಯ ಚಿತ್ತದಿಂ ಕಳುಹಿ ಕೊಲಿಸಿದೆ ತಂದೆ
ವೋರಂತೆ ಕೇಳೆಂದು ಪೇಳೆ ಕೇಳ್ದೆನ್ನಯ ಮ
ನೋರಥಂ ಕೈ ಸಾರ್ದುದಳಲಬೇಡೆಂದು ಕೋಪಾಟೋಪದಿಂ ಹರಿದನು ೧೩೯

ಅರ್ಥ
ಯಾರ ಮನೆಯವರೆಂದು ಕೇಳಿದಾಗ ಎರಡನೆಯ ಪುರವೈರಿ ವಿಶ್ವಾಮಿತ್ರ ಮುನಿಯ ಮನೆಯವರು ಎಂದರೂ ಆ ರಾಜ ಎದ್ದು ತಾನೇ ಕೈಯಾರೆ ನಮ್ಮನ್ನು ಚಚ್ಚಿದ. ನಿರಪರಾಧಿಗಳಾದ ನಮ್ಮನ್ನು ಅವನ ಬಳಿಗೆ ಕಳುಹಿಸಿ ಕೊಲ್ಲಿಸಿದೆ ತಂದೆ, ಯಾಕೆ ಹೀಗೆ ಮಾಡಿದಿರಿ? ಎಂದು ಯುವತಿಯರು ಕೇಳಿದಾಗ ʻನೀವಿನ್ನು ಅಳುವ ಅಗತ್ಯವಿಲ್ಲ, ನನ್ನ ಉದ್ದೇಶ ಈಡೇರಿತು ʼಎನ್ನುತ್ತ ಕೋಪಾವೇಶದಿಂದ ವಿಶ್ವಾಮಿತ್ರ ಹೊರಟುಹೋದ.

ವಿಶೇಷ ವಿಚಾರ
ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಎಂಥವರೂ ಕೋಪಾವೇಶಕ್ಕೆ ಒಳಗಾಗುತ್ತಾರೆ ಎಂಬುದಕ್ಕೆ ಹರಿಶ್ಚಂದ್ರನೇ ಸಾಕ್ಷಿ. ರಾಜ್ಯಕ್ಕೆ ಅನ್ಯರ ಆಕ್ರಮಣವಾದಾಗ, ಗೋವುಗಳು ಅಪಹರಣಕ್ಕೊಳಗಾದಾಗ, ಕಳ್ಳರು ದೇಶಕ್ಕೆ ನುಗ್ಗಿದಾಗ, ಹೆಣ್ಣುಮಕ್ಕಳಿಗೆ ಆಪತ್ತು ಬಂದಾಗ ಅವರನ್ನು ರಕ್ಷಿಸಬೇಕಾದುದು ರಾಜಧರ್ಮ. ಆದರೆ ಇಲ್ಲಿ ರಾಜನೇ ಹುಡುಗಿಯರನ್ನು ಸಾಯುವಂತೆ ಹೊಡೆಯುತ್ತಾನೆಂದರೆ ಅವನ ಸ್ವಾಭಿಮಾನ ಮತ್ತು ಕುಲಾಭಿಮಾನ ಎಷ್ಟು ತೀವ್ರವಾದುದು ಎಂಬುದು ಮನವರಿಕೆಯಾಗುತ್ತದೆ. ರಾಮಾಯಣದಲ್ಲಿ ಶೂರ್ಪನಖಿ ತನ್ನನ್ನು ಮದುವೆಯಾಗು ಅಂದಾಗ ಲಕ್ಷ್ಮಣ ಅವಳಿಗೆ ವಿಧಿಸಿದ ಶಿಕ್ಷೆಯನ್ನು ನೆನಪಿಸಬಹುದು.

ತನ್ನ ಗುರಿಸಾಧನೆಯನ್ನು ಮಾಡಿದ ವಿಶ್ವಾಮಿತ್ರ ಈಗ ಹರಿಶ್ಚಂದ್ರನನ್ನು ತಾನೊಡ್ಡಿದ ಖೆಡ್ಡಾದಲ್ಲಿ ಬೀಳಿಸಲು ಬೇಕಾದ ಉಪಾಯಗಳನ್ನು ಯೋಚಿಸುತ್ತ ಅತ್ಯಂತ ರೋಷಾವೇಶದಿಂದ ಹರಿಶ್ಚಂದ್ರನ ಬಳಿಗೆ ಬರುತ್ತಾನೆ. ಅವನ ಕೋಪದ ವರ್ಣನೆ ಅದ್ಭುತವಾಗಿದೆ.
ಅಷ್ಟಮ ಸ್ಥಲದಿಂದ ವಿಶ್ವಾಮಿತ್ರ ಹರಿಶ್ಚಂದ್ರನನ್ನು ಪೀಡಿಸಲು ಕಾವ್ಯವೇದಿಕೆಗೆ ನೇರವಾಗಿಯೇ ಪ್ರವೇಶಿಸುತ್ತಾನೆ.

ಪದ್ಯ

ವಡಬಾಗ್ನಿ ಜಡೆವೊತ್ತುದೋ ಸಿಡಿಲು ಹೊಸಭಸಿತ
ವಿಡಕಲಿತುದೋ ಕಾಡುಗಿಚ್ಚು ಹರಿಣಾಜಿನವ
ನುಡ ಕಲಿತುದೋ ಪ್ರಳಯವಹ್ನಿ ತಪವೊತ್ತುದೋ ಭಾಳಲೋಚನನ ಕೋಪ
ಕಡುಗಿ ಮುನಿಯಾಯ್ತೋ ಪೇಳೆನೆ ಕಣ್ಣ ಕಡೆ ತೋರ
ಗಿಡಿಗೆದರೆ ಮೀಸೆಗೂದಲು ಹೊತ್ತಿ ಹೊಗೆಯೆ ಬಿರು
ನುಡಿಗಳುರಿಯುಗುಳೆ ವಿಶ್ವಾಮಿತ್ರನುರವಣಿಸಿ ಬಂದನವನೀಶನೆಡೆಗೆ ೧೪೦

ಅರ್ಥ
ಬಡಬಾಗ್ನಿಯೇ ಜಟೆಯನ್ನು ಧರಿಸಿತೋ, ಸಿಡಿಲು ಆಗತಾನೆ ಭಸ್ಮವನ್ನು ಹಚ್ಚಿತೋ ಕಾಡ್ಗಿಚ್ಚು ಜಿಂಕೆಯ ಚರ್ಮವನ್ನು ಉಟ್ಟಿತೋ ಪ್ರಳಯಾಗ್ನಿ ತಪಸ್ಸನ್ನು ಮಾಡಿತೋ ಹರನ ಕೋಪವೇ ಮುನಿಯ ರೂಪವನ್ನು ತಾಳಿತೋ ಎಂಬಂತೆ ವಿಶ್ವಾಮಿತ್ರ ಕಾಣಿಸುತ್ತಿದ್ದನು. ಆತನ ಕಣ್ಣಿನ ಕಡೆಯಿಂದ ಕಿಡಿಗಳು ಚಿಮ್ಮುತ್ತಿದ್ದುವು. ಮೀಸೆಯ ಕೂದಲುಗಳು ಬೆಂಕಿ ಹತ್ತಿ ಹೊಗೆಯುತ್ತಿದ್ದುವು. ಬೈಗಳ ಮಾತುಗಳಿಂದ ಬೆಂಕಿಯ ಜ್ವಾಲೆಗಳು ಹೊರಬೀಳುತ್ತಿದ್ದುವು. ಇಂಥ ಸ್ಥಿತಿಯಲ್ಲಿ ವಿಶ್ವಾಮಿತ್ರ ರಭಸವಾಗಿ ಹರಿಶ್ಚಂದ್ರನ ಬಳಿಗೆ ಬಂದನು.

ಪದ್ಯ

ಸುದತಿ ನೋಡಧಿಕ ಗುರ್ವಾಜ್ಞೆಯಂ ಮರೆದು ಮೀ
ರಿದ ಫಲಂ ಕಂಡ ದುಸ್ವಪ್ನದರ್ಥಂ ಬರು
ತ್ತಿದೆ ಮೂರ್ತಿಗೊಂಡು ನಮ್ಮೆಡೆಗಿಂದು ಮದನ ಮದ ಮರ್ದನಂ ಬಲ್ಲನೆನುತ
ಇದಿರೆದ್ದನರ್ಘ್ಯನವರತ್ನಂಗಳಂ ನೀಡಿ
ಪದಪಯೋಜದ ಮೇಲೆ ಹೊಡೆಗೆಡೆದ ಭೂಭುಜನ
ನೊದೆದು ಸಿಡಿಲೇಳ್ಗೆಯಿಂದಣಕಿಸಿದನಂದು ವಿಶ್ವಾಮಿತ್ರ ಮುನಿನಾಥನು ೧೪೧

ಅರ್ಥ
ದೂರದಿಂದಲೇ ಮುನಿಯ ಬರವನ್ನು ನೋಡಿದ ರಾಜ ಚಂದ್ರಮತಿಯನ್ನು ಕರೆದು ಹೇಳುತ್ತಾನೆ: ಪ್ರಿಯೆ, ಅಲ್ಲಿ ನೋಡು. ಶ್ರೇಷ್ಠರಾದ ಗುರುಗಳ ಆಜ್ಞೆಯನ್ನು ಮೀರಿದ ಫಲವೂ ನಾನು ಕಂಡ ದುಸ್ವಪ್ನದ ಫಲವೂ ಮುನಿಯಾಗಿ ನಮ್ಮ ಬಳಿಗೆ ಬರುತ್ತಾ ಇದೆ. ಮುಂದೇನಾದೀತೋ ಪರಮೇಶ್ವರನೇ ಬಲ್ಲ.ʼ ಹೀಗನ್ನುತ್ತ ವಿಶ್ವಾಮಿತ್ರನನ್ನು ಎದುರ್ಗೊಂಡು ಅನರ್ಘ್ಯರತ್ನಗಳನ್ನು ಕಾಣಿಕೆಯಿತ್ತು ಆತನ ಪಾದಕಮಲಗಳಿಗೆ ರಾಜ ಸಾಷ್ಟಾಂಗ ನಮಸ್ಕಾರವನ್ನು ಮಾಡಿದ. ಆದರೆ ವಿಶ್ವಾಮಿತ್ರ ರಾಜನನ್ನು ಒದ್ದು ಸಿಡಿಲಿನಂತೆ ಆರ್ಭಟಿಸಿ ಅಣಕಿಸಿ ಮಾತನಾಡಿದನು. ಆಗ ರಾಜನ ಪ್ರತಿಕ್ರಿಯೆ ಇದು:

ಪದ್ಯ

ಹಿಂದೆ ಮಾಡಿದ ಸುಕೃತಸೂಚನೆ ದೇವತಾ
ವಂದನೆಯ ಸನ್ಮುನಿಪದಾಬ್ಜ ಭಜನೆಗಳ ಫಲ
ದಿಂದಿಂದು ನಿಮ್ಮಂಘ್ರಿಕಮಳ ದರ್ಶನವಾಯ್ತು ಕೃತಕೃತ್ಯನಾದೆನೆನುತ
ಸಂದೇಹವಳಿದ ಸಂತಸದಲಿಪ್ಪೆನ್ನ ನೀ
ವಿಂದೊದೆದು ಮೃದುಪಾದಪಲ್ಲವಂ ನೊಂದವೆಲೆ
ತಂದೆ ಪರುಷದ ಪ್ರತಿಮೆ ಮುನಿದೊದೆದೊಡಂ ಲೋಹ ಹೊನ್ನಾಗದಿರದೆಂದನು ೧೪೨

ಅರ್ಥ
ನಾನು ಪೂರ್ವದಲ್ಲಿ ಮಾಡಿದ ಪುಣ್ಯದ, ದೇವತಾರಾಧನೆಯ, ಮುನಿಗಳ ಪಾದಪೂಜೆಗಳ ಫಲವಾಗಿ ಇಂದು ನಿಮ್ಮ ಪಾದಗಳ ದರ್ಶನವಾಯಿತು. ನನ್ನ ಜನ್ಮ ಸಾರ್ಥಕವಾಯಿತು. ನನ್ನ ಅನುಮಾನಗಳು ನಿವಾರಣೆಯಾದ ಸಂತೋಷದಲ್ಲಿ ನಾನಿದ್ದಾಗ ನನ್ನನ್ನು ಒದ್ದು ನಿಮ್ಮ ಮೃದುವಾದ ಪಾದಗಳು ನೋವಾದುವು. ಮಹರ್ಷಿಗಳೇ. ಆದರೇನು! ಸ್ಪರ್ಶಮಣಿ ಕೋಪಗೊಂಡು ಒದ್ದರೂ ಕಬ್ಬಿಣ ಚಿನ್ನವಾಗದೆ ಇರದು.

ಪದ್ಯ

ಚರಣವೊಂದೇ ನಿನ್ನ ದೆಸೆಯಿಂದ ನೊಂದವೆಲೆ
ಧರಣೀಶ ಕೇಳೆನ್ನ ಮನ ಬುದ್ಧಿ ಚಿತ್ತಾದಿ
ಕರಣವೆಲ್ಲಂ ನೊಂದು ಬೆಂದು ಕೂಳ್ಗುದಿಗೊಂಡವಿನ್ನಾಡಿ ತೋರಲೇಕೆ
ದುರುಳತನವೇನೇನ ಮಾಡಬೇಕದನೆಯ್ದೆ
ಭರವಸದಿ ಮಾಡಿ ಮತ್ತೀ ದುಷ್ಟತನದ ಬೋ
ಸರಿಗತನವೇಕೆಂದೊಡಯ್ಯ ಪೇಳಾಂ ನೆಗಳ್ದ ದುಷ್ಟತನವೇನೆಂದನು ೧೪೩

ಅರ್ಥ
ಎಲೋ ರಾಜ, ನಿನ್ನಿಂದ ನನ್ನ ಕಾಲುಗಳು ಮಾತ್ರವೇ ನೊಂದವೆಂದು ತಿಳಿದೆಯೇನು? ನನ್ನ ಮನಸ್ಸು, ಬುದ್ಧಿ, ಮೆದುಳು ಮುಂತಾದ ಸರ್ವೇಂದ್ರಿಯಗಳೂ ನೊಂದು ಬೆಂದಿವೆ. ಅದನ್ನೆಲ್ಲ ಹೇಳಿ ಪ್ರಯೋಜನವೇನು? ದುಷ್ಟತನದಿಂದ ಏನೇನನ್ನು ಮಾಡಬೇಕೆಂದು ಯೋಚಿಸಿದ್ದೀಯೋ ಅವೆಲ್ಲವನ್ನೂ ಚೆನ್ನಾಗಿಯೇ ಮಾಡಿ ಮುಗಿಸಿದ್ದೀಯ. ಇನ್ನು ಈ ಕಪಟನಾಟಕದ ದುಷ್ಟತನವೇಕೆ ಹೇಳು. ಎಂದಾಗ ನಾನು ಮಾಡಿದ ದುಷ್ಟತನವೇನು ಎಂದು ರಾಜ ಕೇಳುತ್ತಾನೆ.

ಪದ್ಯ

ಬಿರುಗಾಳಿಯಂ ಬೀಸಲಮ್ಮನನಿಲಂ ಸುರಪ
ನರೆವಳೆಗಳಂ ಕರೆಯಲಮ್ಮನತಿ ಕಡುವಿಸಿಲ
ಕರೆಯಲಮ್ಮಂ ತರಣಿ ದಾವಾಗ್ನಿ ಮೇರೆಯಂ ಮೀರಲಮ್ಮಂ ಲೋಕವ
ಮುರಿವ ಜವಗಿವನ ದೂತರು ಗೀತರೆಂಬರೆ
ದ್ದೆರಗಲಮ್ಮರು ತಪೋವನದೊಳಿಂದೆಮ್ಮ ನೀಂ
ಕೊರಚಾಡಲೆಂದು ಬೀಡಂ ಬಿಟ್ಟೆಯರಿದರಿದು ನಿನ್ನ ಧೀವಶವೆಂದನು ೧೪೪

ಅರ್ಥ
ನಮ್ಮ ಈ ಆಶ್ರಮದಲ್ಲಿ ಗಾಳಿ ಕೂಡ ಬಿರುಗಾಳಿಯಾಗಿ ಬೀಸಲು ಭಯಪಡುವನು. ದೇವೇಂದ್ರ ಆಲಿಕಲ್ಲು ಮಳೆಯನ್ನು ಕರೆಯಲು ಹೆದರುವನು. ಸೂರ್ಯದೇವನು ಉರಿಬಿಸಿಲನ್ನು ಹರಡಲು ಅಂಜುವನು. ದಾವಾಗ್ನಿ ಆಶ್ರಮದ ಗಡಿದಾಟಿ ಬರಲು ಹಿಂಜರಿಯುವನು. ಇನ್ನು ಲೋಕವನ್ನು ನುಂಗುವ ಯಮನ ದೂತರು ಗೀತರುಗಳೆಲ್ಲ ಆಶ್ರಮದೊಳಗೆ ಹೆಜ್ಜೆಯಿಡಲೂ ಭಯಪಡುತ್ತಾರೆ. ಹೀಗಿರುವಾಗ ಈ ದಿನ ನೀನು ನಮ್ಮ ಆಶ್ರಮದೊಳಗೆ ಬಂದು ಬೀಡುಬಿಟ್ಟುದೂ ಅಲ್ಲದೆ ನನಗೇ ತೊಂದರೆ ಕೊಡಲು ನೋಡುತ್ತೀಯಾ? ನಿನ್ನ ಮಹಾಧೈರ್ಯಕ್ಕೆ ಏನು ಹೇಳಲಿ?

ಪದ್ಯ

ಎಳಸಿ ಪುಣ್ಯಾರ್ಥದಿಂ ವಂದನೆ ನಿಮಿತ್ತ ಗುರು
ನಿಳಯಕ್ಕೆ ಶಿಷ್ಯನೆಯ್ತಪ್ಪುದಕೆ ಸಾಹಸದ
ಬಲವೇಕೆ ತಂದೆಯೆನೆ ನುಡಿಯೊಳು ನಯಂಬಡೆದು ಕಾರ್ಯದೊಳು ಗುರುವಿನಸುಗೆ
ಮುಳಿದು ಸರ್ವಸ್ವಾಪಹರಣಮಂ ಮಾಳ್ಪ ಕಡು
ಗಲಿತನವಿದಾವ ಪುಣ್ಯವ ಪಡೆವ ಶಿಷ್ಯತನ
ದೊಳಗು ಪೇಳೆನಲೆನ್ನ ದೆಸೆಯಿಂದ ಕೆಟ್ಟುದೇನೆಂದನು ಹರಿಶ್ಚಂದ್ರನು ೧೪೫

ಅರ್ಥ
ಪುಣ್ಯಸಂಪಾದನೆಗಾಗಿ ನಿಮಗೆ ವಂದಿಸಿ ಹೋಗುವ ಉದ್ದೇಶದಿಂದ ನಾವು ಬಂದಿದ್ದೇವೆ. ಗುರುವಿನ ಮನೆಗೆ ಶಿಷ್ಯ ಬರುವುದಕ್ಕೆ ಸಾಹಸವೇಕೆ ಬೇಕು ಗುರುವರ್ಯ? ಎಂದು ರಾಜ ಕೇಳಿದಾಗ ನುಡಿಯಲ್ಲಿ ನಯ, ನಡೆಯಲ್ಲಿ ಗುರುದ್ರೋಹ, ಗುರುವಿನ ಪ್ರಾಣಕ್ಕೇ ಸಂಚಕಾರ ಮಾಡಿ ಸರ್ವಸ್ವವನ್ನೂ ಅಪಹರಿಸುವ ಹುನ್ನಾರ. ಈ ನಿನ್ನ ಭಂಡಧೈರ್ಯ ಪುಣ್ಯವನ್ನು ಪಡೆಯುವ ಯಾವ ಶಿಷ್ಯನಲ್ಲಿರಲು ಸಾಧ್ಯ ಹೇಳು. ಎಂದು ವಿಶ್ವಾಮಿತ್ರ ಗರ್ಜಿಸಿದಾಗ ನನ್ನಿಂದ ಅಂಥ ಯಾವ ಅಪರಾಧ ಆಗಿದೆ ಎಂದು ಹರಿಶ್ಚಂದ್ರ ಕೇಳುತ್ತಾನೆ.

ಕಾವ್ಯರಸಯಾನ ಮುಂದುವರಿದುದು: ೨೩.೦೯.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ತಮ್ಮನ್ನು ಮದುವೆಯಾಗು ಎಂದು ಪೀಡಿಸಿದ ಗಾಣರಾಣಿಯರನ್ನು ರಾಜ ಮತ್ತು ಮಂತ್ರಿ ಸಾಯುವಂತೆ ಹೊಡೆದು ಓಡಿಸುತ್ತಾರೆ. ಗಾಣರಾಣಿಯರು ವಿಶ್ವಾಮಿತ್ರನ ಬಳಿಗೆ ಹೋಗಿ ವಿನಾಕಾರಣ ರಾಜ ತಮ್ಮನ್ನು ಹೊಡೆದನೆಂದು ಸುಳ್ಳು ಹೇಳುತ್ತಾರೆ. ವಿಶ್ವಾಮಿತ್ರ ಅವರ ಮಾತನ್ನು ಲೆಕ್ಕಿಸದೆ ತನ್ನ ಉದ್ದೇಶ ಈಡೇರಿದ ಸಂತೋಷದಲ್ಲಿ ರಾಜನನ್ನು ಕಾಡುವುದಕ್ಕೆ ಸರಿಯಾದ ಕಾರಣ ಲಭಿಸಿತೆಂದು ಕೋಪಾಟೋಪದಿಂದ ರಾಜನ ಬಳಿಗೆ ಬಂದು ಅವನನ್ನು ಹಲವು ಬಗೆಯಲ್ಲಿ ನಿಂದಿಸುತ್ತಾನೆ. ರಾಜ ಎಷ್ಟೇ ಪ್ರಾರ್ಥಿಸಿದರೂ ಋಷಿಯ ಕೋಪ ಶಮನವಾಗುವುದಿಲ್ಲ. ತನ್ನ ಸರ್ವಸ್ವವನ್ನೂ ಅಪಹರಿಸಿ ಅನ್ಯಾಯ ಮಾಡಿದ್ದೀ ಎಂದು ದೂರಿದಾಗ ತನ್ನಿಂದಾದ ಅನ್ಯಾಯವೇನೆಂದು ರಾಜ ವಿನಯದಿಂದ ಕೇಳುತ್ತಾನೆ. ಮುಂದೆ:

ಪದ್ಯ

ಅರಸುಗಳಿಗುಪದೇಶಮಂ ಮಾಡಿ ವಸ್ತುವಂ
ನೆರಹಬಲ್ಲವನಲ್ಲ ನಿಜವೈರಮಂ ಬಿಟ್ಟು
ಹರುಷದಿಂದಿರ್ಪ ಮೃಗಸಂಕುಳಂ ಸರ್ವ ಋತುಗಳೊಳು ಫಲವಿಡಿದೊರಗುವ
ತರುಕುಲಂ ಬತ್ತದೊಂದೇ ಪರಿಯಲಿಹ ಸರೋ
ವರವೆಮ್ಮ ಧನವಿದೆಲ್ಲವನಿರಿದು ಮುರಿದು ಕುಡಿ
ದರೆಮಾಳ್ಪ ಬಲುಹು ಸರ್ವಸ್ವಾಪಹರಣವಲ್ಲದೆ ಬಳಿಕ್ಕೇನೆಂದನು ೧೪೬

ಅರ್ಥ
ರಾಜರಿಗೆ ಉಪದೇಶಗಳನ್ನು ಮಾಡಿ ಹಣ ಸಂಪಾದನೆ ಮಾಡುವವನು ನಾನಲ್ಲ. ನನ್ನ ಸಂಪತ್ತು ಬೇರೆಯವರು ಕೊಟ್ಟುದೂ ಅಲ್ಲ.(ಆದ್ದರಿಂದ ನಿನ್ನನ್ನು ಮೆಚ್ಚಿಸುವ ಅಗತ್ಯ ತನಗಿಲ್ಲ.) ಜಾತಿವೈರವನ್ನು ಬಿಟ್ಟು ಅನ್ಯೋನ್ಯವಾಗಿ ಸಂತೋಷವಾಗಿರುವ ಮೃಗಗಳು, ಸರ್ವ ಋತುಗಳಲ್ಲೂ ಫಲಬಿಡುವ ಮರಗಳು, ಎಂದೂ ಬತ್ತದಿರುವ ಸರೋವರಗಳು- ಇವೇ ನಮ್ಮ ಸಂಪತ್ತು. ಅವೆಲ್ಲವನ್ನೂ ನಾಶಮಾಡಿದ ನಿನ್ನ ಉದ್ಧಟತನ ಸರ್ವಸ್ವಾಪಹರಣವಲ್ಲದೆ ಮತ್ತೇನು?

ಪದ್ಯ

ಬರಿಮುನಿಸನಿಟ್ಟು ಕೊಂಡರುಹುವಂತಾಗಿ ನಾ
ನಿರಿದ ಮೃಗ ಮುರಿದ ಮರ ಕುಡಿದ ಕೊಳನಾವುದೆಲೆ
ಕಿರುಜಡೆಯ ನೀತಿವಿದ ತೋರಿಸೆನೆ ಘಡುಘುಡಿಸುತೆದ್ದು ಹಳಗಾಲದಂದು
ಅರತ ಕೊಳನಂ ಕೊಳೆತು ಮುರಿದ ಮರನಂ ನೃಪನ
ನುರೆತಂದ ಹಲವು ಗಾಯದ ಹಂದಿಯ ತೋರಿ
ಜರೆದು ನೀನಿನ್ನಾವ ನೆವವನೊಡ್ಡುವೆ ಪಾಪಿ ಎನುತ ಮತ್ತಿಂತೆಂದನು ೧೪೭

ಅರ್ಥ
ಕೋಪವನ್ನೇ ಮನಸ್ಸಿನಲ್ಲಿಟ್ಟು ನೀವು ಮಾತನಾಡುತ್ತೀರಿ ಗುರುವರ್ಯ. ಹಾಗಿದ್ದರೆ ನಿಮಗೆ ನಾನು ಕೊಂದ ಮೃಗ, ಕಡಿದ ಮರ, ಕುಡಿದ ಕೊಳಗಳನ್ನು ತೋರಿಸಲು ಸಾಧ್ಯವೇ? ನೀವು ಋಷಿಗಳು, ನೀತಿವಿದರು, ಎಂದು ರಾಜ ಹೇಳಿದಾಗ ಕೋಪಾಟೋಪದಿಂದ ಘುಡುಘುಡಿಸುತ್ತ ಎದ್ದು ಯಾವುದೋ ಕಾಲದಲ್ಲಿ ಬತ್ತಿಹೋದ ಕೊಳವನ್ನೂ ಕೊಳೆತುಬಿದ್ದ ಮರವನ್ನೂ ರಾಜನನ್ನು ಆಶ್ರಮಕ್ಕೆ ಎಳೆದುಕೊಂಡು ಬಂದ ಹಂದಿಯನ್ನೂ ತೋರಿಸಿ, ʻಸಾಕೇ? ಇನ್ನು ನೀನು ಯಾವ ನೆಪವನ್ನು ಒಡ್ಡುವೆ ಪಾಪಿ?ʼ ಎನ್ನುತ್ತ ವಿಶ್ವಾಮಿತ್ರ ತನ್ನ ನಿಂದಾ ಪ್ರಹಾರವನ್ನು ಮತ್ತೆ ಮುಂದುವರಿಸುತ್ತಾನೆ.

ವಿಶೇಷ ವಿಚಾರ
ಇಲ್ಲಿ ʻಕಿರುಜಡೆಯ ನೀತಿವಿದʼ ಎಂಬ ವಿಶೇಷಣದ ಒಳಾರ್ಥವನ್ನು ಗಮನಿಸಬೇಕು.

ಪದ್ಯ

ಹಿಂದೆ ಸಂಪದದೊಳುರೆ ಗರ್ವದಿಂ ಮೆರೆದ ಸಂ
ಕ್ರಂದನನ ಸಿರಿಯ ನೀರೊಳಗೆ ನೆಗಹಿದ ಮುನಿಪ
ನಂದವಂ ಮಾಡುವೆನು ಹರನ ಹಣೆಗಣ್ಣ ಹಗ್ಗಿಯನು ಹಗೆಗೊಂಬಂದದಿಂ
ಇಂದೆನ್ನ ಹಗೆಗೊಂಡೆ ಬಿಟ್ಟ ಬೀಡೆಲ್ಲಮಂ
ಕೊಂದು ಕೂಗಿಡಿಸಿ ನೆರೆ ಸುಟ್ಟು ಬೊಟ್ಟಿಡುವೆನಾ
ರೆಂದಿರ್ದೆ ನಿನ್ನ ಗುರು ಪೇಳನೇ ತನ್ನ ಸುತರ ಅಳಲ ತಿಣ್ಣವನೆಂದನು ೧೪೮

ಅರ್ಥ
ಹಿಂದೆ ದೂರ್ವಾಸ ಮುನಿ ಐಶ್ವರ್ಯದ ಅಹಂಕಾರದಲ್ಲಿ ಸೊಕ್ಕಿದ ದೇವೇಂದ್ರನ ಸಂಪತ್ತೆಲ್ಲವನ್ನೂ ಸಮುದ್ರದ ಪಾಲು ಮಾಡಿದಂತೆ ಮಾಡುತ್ತೇನೆ. ಶಿವನ ಹಣೆಗಣ್ಣ ಬೆಂಕಿಯನ್ನು ಕೆದಕಿದಂತೆ ಇವತ್ತು ನನ್ನ ದ್ವೇಷವನ್ನು ಕಟ್ಟಿಕೊಂಡೆ. ನನ್ನ ಆಶ್ರಮದಲ್ಲಿ ಬೀಡುಬಿಟ್ಟ ನಿನ್ನ ಈ ವಸತಿಯನ್ನೆಲ್ಲ ಸರ್ವನಾಶ ಮಾಡಿ ಸುಟ್ಟು ಬೊಟ್ಟಿಡುತ್ತೇನೆ. ನಾನು ಯಾರೆಂದು ತಿಳಿದುಕೊಂಡಿದ್ದೀಯಾ? ಆ ನಿನ್ನ ಗುರು ತನ್ನ ಮಕ್ಕಳಿಗಾದ ಸಂಕಷ್ಟವನ್ನು ನಿನಗೆ ತಿಳಿಸಲಿಲ್ಲವೇ?

ವಿಶೇಷ ವಿಚಾರ
ಆ ನಿನ್ನ ಗುರು ಎನ್ನುವುದು ವಸಿಷ್ಠನನ್ನು ಉದ್ದೇಶಿಸಿದ ಮಾತು

ಪದ್ಯ

ಒಸೆದು ಹುಟ್ಟಿಸುವ ಪಾಲಿಸುವ ಮರ್ದಿಸುವ ಸ
ತ್ವಸಮರ್ಥನೆನಿಪ ನೀನೇ ತಪ್ಪ ಹೊರಿಸಿ ದ
ಟ್ಟಿಸುವಡಿನ್ನುತ್ತರಿಸಿ ಶುದ್ಧನಹುದರಿದಯ್ಯ ನಿಮ್ಮ ಕರುಣದ ತೊಟ್ಟಿಲ
ಹಸುಳೆಯಾಂ ಸರ್ವಾಪರಾಧಿಯಾಂ ತಂದೆ ಕರು
ಣಿಸು ದಯಂಗೆಡದಿರುದ್ರೇಕಿಸದಿರೆಂದು ಪದ
ಬಿಸರುಹದ ಮೇಲೆ ಕೆಡಹಿದನು ನಿಜ ಮಣಿಮಕುಟ ಮಂಡಿತ ಶಿರೋಂಭುಜವನು ೧೪೯

ಅರ್ಥ
ಹುಟ್ಟಿಸುವ, ಪಾಲಿಸುವ, ನಾಶಮಾಡುವ( ಸೃಷ್ಟಿ, ಸ್ಥಿತಿ ಮತ್ತು ಲಯ) ಸಾಮರ್ಥ್ಯವುಳ್ಳ ನೀವೇ ನನ್ನ ಮೇಲೆ ತಪ್ಪು ಹೊರಿಸಿ ಹೀಗೆ ನಿಂದಿಸುವಿರಾದರೆ, ನಿಮಗೆ ಮಾತಿನಿಂದ ನನ್ನ ಶುದ್ಧಚಾರಿತ್ರ್ಯವನ್ನು ಸಮರ್ಥಿಸಲು ನನಗೆ ಸಾಧ್ಯವಿಲ್ಲ. ನಿಮ್ಮ ಕರುಣೆಯ ತೊಟ್ಟಿಲಲ್ಲಿರುವ ಒಂದು ಮಗುವೆಂದು ನನ್ನನ್ನು ಭಾವಿಸಿ ಕ್ಷಮಿಸಿ ಗುರುದೇವ. ಸರ್ವ ಅಪರಾಧವೂ ನನ್ನದೇ. ದಯವಿಟ್ಟು ಕರುಣಿಸಿ, ಕೋಪಿಸಬೇಡಿ, ಉದ್ರೇಕಗೊಳ್ಳಬೇಡಿʼ ಎನ್ನುತ್ತ ಹರಿಶ್ಚಂದ್ರ ವಿಶ್ವಾಮಿತ್ರನ ಪಾದಕಮಲಗಳ ಮೇಲೆ ತನ್ನ ಮಣಿಮಕುಟದಿಂದ ಶೋಭಿಸುವ ತಲೆಯನ್ನು ಇಟ್ಟನು.

ವಿಶೇಷ ವಿಚಾರ
ವಿಶ್ವಾಮಿತ್ರನ ಕೋಪವನ್ನು ತಣಿಸುವ ಮಾರ್ಗ ಶರಣಾಗತಿಯಲ್ಲದೆ ಬೇರೆ ಇಲ್ಲ ಎಂಬುದನ್ನು ರಾಜ ಅರಿತುಕೊಳ್ಳುತ್ತಾನೆ.

ಪದ್ಯ

ನೋಡಿ ವಂದಿಸಿ ಹೋಹ ಶಿಷ್ಯಂಗೆ ನೀಂ ಕೃಪೆಯ
ಮಾಡುವುದು ಹದುಳದಿಂ ಬಲವನೆಲ್ಲವ ಹೊಳ್ಳು
ಮಾಡಬಗೆವರೆ ಹೇಳೆನಲು ಪ್ರಳಯಫಣಿಯಣಲ ಹೊಳಲೊಳಗೆ ಕೈಯನೀಡಿ
ದಾಡೆಯಂ ಮುರಿಯಬಡಿವಂತೆನ್ನ ಬಸುರಿಂದ
ಮೂಡಿರ್ದ ಕನ್ನೆಯರ ಚೆನ್ನೆಯರನಬಲೆಯರ
ಗಾಡಿಕಾತಿಯರನರಿದರಿದಿಂತು ಸಾಯಬಡಿವರೇ ಹೇಳೆಂದನು ೧೫೦

ಅರ್ಥ
ಗುರುವಿಗೆ ವಂದನೆಯನ್ನು ತಿಳಿಸಿ ಹೋಗಲು ಬಂದ ಶಿಷ್ಯನನ್ನು ಕೃಪಾಶೀರ್ವಾದದಿಂದ ಅನುಗ್ರಹಿಸದೆ ಪರಿವಾರವನ್ನು ನಾಶಮಾಡುತ್ತೇನೆನ್ನುವುದು ಸರಿಯೇ? ಎಂದು ಕೇಳಿದ ಹರಿಶ್ಚಂದ್ರನನ್ನು ವಿಶ್ವಾಮಿತ್ರ ಮತ್ತೆ ಕೆಣಕುತ್ತಾನೆ. ಕಾಳಸರ್ಪದ ದವಡೆಗೆ ಕೈಹಾಕಿ ಅದರ ಹಲ್ಲನ್ನು ಮುರಿಯಲು ಹೊರಟಂತೆ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಸುಂದರಿಯರಾದ ಅಬಲೆಯರಾದ ಅವಿವಾಹಿತ ತರುಣಿಯರನ್ನು ಗೊತ್ತಿದ್ದೂ ಗೊತ್ತಿದ್ದು ಸಾಯುವಂತೆ ಹೊಡೆದೆಯಲ್ಲ. ಯಾರಾದರೂ ಹಾಗೆ ಮಾಡುತ್ತಾರೆಯೇ ಹೇಳು?

ಪದ್ಯ

ಬಡಿದೆಂ ಬಡಿದೆಂ ಬಡಿದೆನಿಲ್ಲೆಂಬುದಿಲ್ಲೆಂದು
ನುಡಿಯೆ ಹಸನಾಯ್ತನ್ಯರವರೆಂದು ಬಗೆದು ನಾಂ
ಬಡಿದೆನೆಂಬುಪಚಾರವಿಲ್ಲ ಮೂಗಂ ಕೊಯ್ದು ಕನ್ನಡಿಯ ತೋರುವಂತೆ
ಬಡಿದುದಲ್ಲದೆ ಮತ್ತೆ ಬಡಿದೆನೆಂದೆನಗೆ ನೀಂ
ಕಡುಗಲಿಸುವಂತಾಗೆ ನಿನ್ನ ಹಂಗಿನಲಿಪ್ಪ
ಬಡ ವಸಿಷ್ಠನೆ ಹಸಿದ ಹುಲಿಯ ಮೀಸೆಯನು ಹಿಡಿದಲುಗಿ ನೋಡಿದೆಯೆಂದನು ೧೫೧

ಅರ್ಥ
ಹೌದು ಹೊಡೆದೆ. ಹೊಡೆದುದನ್ನು ಇಲ್ಲವೆನ್ನಲಾರೆʼ ಎಂದು ಹರಿಶ್ಚಂದ್ರ ಉತ್ತರಿಸಿದಾಗ, ʻಓಹೋ, ಹೊಡೆದೆಯಾ, ಒಳ್ಳೆಯದೇ ಆಯ್ತು. ಅವರು ಯಾರೋ ಬೇರೆಯವರೆಂದು ಭಾವಿಸಿ ತಿಳಿಯದೆ ಹೊಡೆದುಬಿಟ್ಟೆʼ ಎನ್ನುವ ಸೌಜನ್ಯದ ಮಾತೂ ನಿನ್ನಲ್ಲಿಲ್ಲ. ಮೂಗನ್ನು ಕತ್ತರಿಸಿದ್ದೂ ಅಲ್ಲದೆ ಕನ್ನಡಿ ಹಿಡಿದು ತೋರಿಸುವಂತೆ, ನನ್ನ ಮಕ್ಕಳನ್ನೂ ಬಡಿದದ್ದೂ ಅಲ್ಲದೆ ಬಡಿದೆ, ಬಡಿದೆ ಅಂತ ಬೇರೆ ಹೇಳುತ್ತಿದ್ದೀಯಾ? ನಾನೇನು ನಿನ್ನ ಹಂಗಿನಲ್ಲಿರುವ ಬಡ ವಸಿಷ್ಠನೆಂದು ಭಾವಿಸಿದ್ದೀಯಾ? ನೀನೀಗ ಹಸಿದ ಹುಲಿಯ ಮೀಸೆಯನ್ನು ಹಿಡಿದು ಅಲುಗಿಸಿ ನೋಡಿದ್ದೀಯಾ. ಅರ್ಥವಾಯಿತೇ?

ಪದ್ಯ

ಬೇಗದಲಿ ನಿಮ್ಮ ಮನೆಯವರೆಂದು ಮೊರೆಯಿಟ್ಟ
ರಾಗಿ ಕರುಣಿಸಿ ಬಿಟ್ಟೆನಲ್ಲದಿರ್ದಡೆ ಕೆಡಹಿ
ಮೂಗನರಿದೆಳೆಹೂಟೆಯಂ ಕಟ್ಟಿ ಹೆಟ್ಟವೆಳಸುವೆ ಬಟ್ಟಬಯಲಿನೊಳೆನಲು
ಏಗೆಯ್ದರವರೊಳನ್ಯಾಯವೇನೆನಲೆನ್ನ
ಮೇಗಿರ್ದ ಸತ್ತಿಗೆಯನೀಯಲ್ಲದೊಡೆ ಗಂಡ
ನಾಗು ನೀನಾಗದೊಡೆ ಮೊರೆಯಿಡುವೆವೆಂದರು ಮುನೀಶ ಚಿತ್ತೈಸೆಂದನು ೧೫೨

ಅರ್ಥ
ಮುನಿಶ್ರೇಷ್ಠರೇ ಕೇಳಿ. ನಿಮ್ಮ ಮನೆಯವರೆಂದು ಅವರು ಹೇಳಿದ್ದರಿಂದ ಅಷ್ಟಕ್ಕೇ ಬಿಟ್ಟೆವು. ಇಲ್ಲದಿದ್ದರೆ ಅವರನ್ನು ಹೆಡೆಮುರಿ ಕಟ್ಟಿ ಮೂಗನ್ನು ಕತ್ತರಿಸಿ ಹಾಕಿ ನೇಗಿಲಿಗೆ ಕಟ್ಟಿ ಬಟ್ಟ ಬಯಲಿನಲ್ಲಿ ಉಳುವುದಕ್ಕೆ ಎಳೆದುಕೊಂಡು ಹೋಗ್ತಿದ್ದೆವುʼ ಎಂದು ಹರಿಶ್ಚಂದ್ರ ಹೇಳಿದಾಗ ʻಅಂಥ ತಪ್ಪು ಅವರೇನು ಮಾಡಿದರು?ʼ ಎಂದು ವಿಶ್ವಾಮಿತ್ರ ಪ್ರಶ್ನಿಸುತ್ತಾನೆ. ʻನಿನ್ನ ರಥದ ಮೇಲಿರುವ ಛತ್ರವನ್ನು ಕೊಡು, ಇಲ್ಲವಾದರೆ ಗಂಡನಾಗು, ಆಗದಿದ್ದರೆ ವಂಚಿಸಿದನೆಂದು ಊರೆಲ್ಲ ದೂರುತ್ತ ಸಾರುತ್ತ ಹೋಗುತ್ತೇವೆʼ ಅಂದರು.

ವಿಶೇಷ ವಿಚಾರ
ಆ ಕಾಲದಲ್ಲಿ ತಪ್ಪಿತಸ್ಥರಿಗೆ ಕೊಡುವ ಶಿಕ್ಷೆಯ ಒಂದು ವಿಧಾನವನ್ನು ಕವಿ ಇಲ್ಲಿ ನಿರೂಪಿಸಿದ್ದಾನೆ.

ಪದ್ಯ

ಹೊಡೆಯದಕ್ಕೇನವದಿರಂ ಹೊಡೆದ ಕೈಗಳಂ
ಕಡಿವೆ ನಿನ್ನಂ ನೆಚ್ಚಿ ಮಲೆತ ದೇಶವನುರುಹಿ
ಸುಡುವೆನಾ ದೇಶಕ್ಕೆ ಹಿತವಾಗಿ ಬಂದ ಮುನಿಯಂ ಮುರಿವೆನಾ ಮುನಿಯನು
ಹಿಡಿದು ಕದನಕ್ಕೆಂದು ಬಂದಮರರಂ ಕೆಡಹಿ
ಹುಡುಕುನೀರದ್ದುವೆನ್ನಳವನರಿಯಾ ಮುನ್ನ
ತೊಡಕಿ ತನಗಾದ ಭಂಗಂಗಳಂ ಹೇಳನೇ ನಿನಗೆ ಕಮಲಜಕಂದನು ೧೫೩

ಅರ್ಥ
ಆಯ್ತು ಹೊಡೆ. ಅದಕ್ಕೇನು! ಆದರೆ ಅವರನ್ನು ಹೊಡೆದ ಈ ನಿನ್ನ ಕೈಗಳನ್ನು ನಾನು ಕತ್ತರಿಸದೆ ಬಿಡುವುದಿಲ್ಲ. ನಿನ್ನನ್ನು ನಂಬಿದ ದೇಶದ ಪ್ರಜೆಗಳನ್ನೂ ಸುಟ್ಟು ಹಾಕುತ್ತೇನೆ. ನಿನಗೆ ನೆರವಾಗಲು ಬಂದ ಆ ಮುನಿಯನ್ನೂ ನಾಶಮಾಡುತ್ತೇನೆ. ಆ ಮಹರ್ಷಿಯ ರಕ್ಷಣೆಗಾಗಿ ದೇವತೆಗಳು ಬಂದರೆ ಅವರನ್ನೂ ಬಿಡುವುದಿಲ್ಲ. ಎಲ್ಲರನ್ನೂ ಹೊಡೆದು ಕುದಿಯುವ ನೀರಿನಲ್ಲಿ ಮುಳುಗಿಸುತ್ತೇನೆ. ನನ್ನ ಸಾಮರ್ಥ್ಯವೇನೆಂದು ನಿನಗೆ ಗೊತ್ತಿಲ್ಲವೇ? ನನ್ನನ್ನು ಕೆಣಕಿ ತನಗಾದ ಪರಾಭವಗಳನ್ನು ಆ ನಿನ್ನ ಗುರು ನಿನಗೆ ಹೇಳಲಿಲ್ಲವೇ

ವಿಶೇಷ ವಿಚಾರ
ಕುದಿಯುವ ನೀರಿನಲ್ಲಿ ಮುಳುಗಿಸುವುದೂ ಶಿಕ್ಷೆಯ ಒಂದು ವಿಧಾನ. ಜೈಮಿನಿ ಭಾರತದಲ್ಲೂ ಇಂಥ ಶಿಕ್ಷೆಯ ವಿವರವಿದೆ.

ಪದ್ಯ

ಹರುಷದಿಂ ಶಾಂತಿ ಸತ್ಯಂ ಭೂತದಯೆಗಳಂ
ದೊರಕಿಸಿಯೆ ಕ್ರೋಧಾರ್ಥರೌದ್ರಮಿಥ್ಯಂಗಳಂ
ಪರಿಹರಿಸಿ ಬ್ರಾಹ್ಮಣೋತ್ತಮ ಮುನೀಶ್ವರನೆನಿಸಿ ನೀವೇ ಕೋಪಾಗ್ನಿಯಿಂದ
ಉರಿದೆದ್ದು ಮುನಿಗಳಂ ಕೊಂದು ಮೂಜಗವನಿ
ಟ್ಟೊರಸಿ ದೇವರ ಹಿಂಡಿ ಹಿಳಿಯಲಾನೀ ಲೋಕ
ದರಸು ದುರುಳ ಕ್ಷತ್ರಿಯಂ ಮಾಡಬಹುದೇ ಹೇಳೆಂದು ಕಟಕಿಯ ನುಡಿದನು ೧೫೪

ಅರ್ಥ
ಗುರುದೇವ, ಶಾಂತಿ, ಸತ್ಯ, ಜೀವದಯೆಗಳನ್ನು ರೂಢಿಸಿಕೊಂಡವರು ನೀವು. ಕ್ರೋಧ, ಸ್ವಾರ್ಥ, ಆವೇಶ, ಅಸತ್ಯಗಳನ್ನು ನಿವಾರಿಸಿ ಬ್ರಾಹ್ಮಣೋತ್ತಮರೆನಿಸಿದ ಮುನೀಶ್ವರರು ನೀವು. ನೀವೇ ಹೀಗೆ ಕೋಪಾಗ್ನಿಯಿಂದ ಉರಿದು ಮುನಿಗಳನ್ನು ಕೊಂದು ಮೂರು ಲೋಕವನ್ನೂ ಸರ್ವನಾಶಮಾಡಿ ದೇವತೆಗಳನ್ನೂ ಹಿಂಡಿ ಹಾಕುತ್ತೇನೆ ಎಂದರೆ ನಾನು ಒಬ್ಬ ಸಾಮಾನ್ಯ ರಾಜ, ದುಷ್ಟ ಕ್ಷತ್ರಿಯ, ನನಗೆ ನಿಮ್ಮಂತೆ ಮಾಡಿದಂತೆ ಮಾಡಲು ಹೇಗೆ ಸಾಧ್ಯ? ಎಂದು ಹರಿಶ್ಚಂದ್ರ ವ್ಯಂಗ್ಯವಾಡುತ್ತಾನೆ.

ಪದ್ಯ

ಬಿನ್ನಣದ ಕಟಕಿಯಂ ಕೇಳುತ್ತ ಕೆಟ್ಟುನುಡಿ
ದಿನ್ನು ನೀನೀ ಧರೆಯೊಳರಸುತನದಿಂದಿರ್ದ
ಡೆನ್ನೆದೆಯ ಮೇಲಿರ್ದು ದೇಶದಿಂ ತೆವರುವೆ ತೆವರಿ ಹೊಕ್ಕಲ್ಲಿ ಹೊಕ್ಕು
ಬೆನ್ನ ಕಯ್ಯಂ ಬಿಡದೆ ಬಂದು ಬಳಲಿಸುವೆ
ನುನ್ನತಿಕೆವೆರಸಿ ಬದುಕಿದಡರಿಯಬಹುದೆನುತ
ನನ್ನಿಯುಳ್ಳರದೇವನೊಡನೆ ಕೋಪವನು ಧರಿಸಿದನದೇವಣ್ಣಿಸುವೆನು ೧೫೫

ಅರ್ಥ
ಹರಿಶ್ಚಂದ್ರನ ಕಟಕಿಯ ಮಾತನ್ನು ಕೇಳಿ ಇನ್ನಷ್ಟು ಕೋಪಾವೇಶದಿಂದ ವಿಶ್ವಾಮಿತ್ರ ಗರ್ಜಿಸುತ್ತಾನೆ. ʻಏನು, ನನ್ನನ್ನು ಅಣಕಿಸುವೆಯಾ? ನನ್ನನ್ನು ಹೀಗೆ ಅವಮಾನಿಸಿದ ನೀನು ಇನ್ನು ಹೇಗೆ ಈ ರಾಜ್ಯದಲ್ಲಿ ರಾಜನಾಗಿ ಇರುತ್ತೀಯಾ ಎಂದು ನಾನೂ ನೋಡುತ್ತೇನೆ. ನಿನ್ನನ್ನು ಈ ದೇಶದಿಂದಲೇ ಓಡಿಸುತ್ತೇನೆ. ಓಡಿಸುವುದು ಮಾತ್ರವಲ್ಲ ನೀನು ಹೋದ ಹೋದಲ್ಲಿಗೂ ಹಿಂಬಾಲಿಸಿಕೊಂಡು ಬರುತ್ತೇನೆ. ಹಿಂಬಾಲಿಸಿ ಬಂದು ಬೆನ್ನು ಕೈ ಯಾವುದನ್ನೂ ಬಿಡದೆ ಕಾಡುತ್ತೇನೆ. ಸಾಮರ್ಥ್ಯವಿದ್ದರೆ ನಿನಗೆ ಅರ್ಥವಾದೀತು. ಹೀಗೆನ್ನುತ್ತ ಸತ್ಯವಂತರ ದೇವನಾದ ಹರಿಶ್ಚಂದ್ರನ ಮೇಲೆ ವಿಶ್ವಾಮಿತ್ರ ತೋರಿಸಿದ ಕೋಪವನ್ನು ಏನೆಂದು ವರ್ಣಿಸಲಿ?

ವಿಶೇಷ ವಿಚಾರ
ಇದು ಭವಿಷ್ಯದಲ್ಲಿ ವಿಶ್ವಾಮಿತ್ರ ಹರಿಶ್ಚಂದ್ರನಿಗೆ ಏನೇನು ಕಾಟಗಳನ್ನು ಕೊಡಲಿದ್ದಾನೆ ಎಂಬುದರ ಮುನ್ಸೂಚನೆ.

ಪದ್ಯ

ಪೊಡವಿಯೊಳು ಖಳವಹ್ನಿಯುಗ್ರ ಖಳವಹ್ನಿಯಿಂ
ದಡವಿಗಿಚ್ಚತ್ಯುಗ್ರವಡವಿಗಿಚ್ಚಿಂದ ನೆರೆ
ಸಿಡಿಲುಗ್ರ ಸಿಡಿಲಿಂದೆ ವಡಬಾನಳನುಗ್ರವಾ ವಡಬಾನಳಂಗೆ ಮತ್ತೆ
ಕಡೆಯ ಶಿಖಿಯುಗ್ರ ವಂತಾ ಕಡೆಯ ಶಿಖಿಯಿಂದ
ಮೃಡನ ಹಣೆಗಣ್ಣುಗ್ರವಾ ಮೃಡನ ಹಣೆಗಣ್ಣ
ಕಿಡಿಯಿಂ ಹರಿಶ್ಚಂದ್ರನೊಡನೆ ಕೌಶಿಕ ಮುನಿದ ಕೋಪಾಗ್ನಿಯುಗ್ರವಾಯ್ತು ೧೫೬

ಅರ್ಥ
ಭೂಮಂಡಲದಲ್ಲಿ ಕ್ರೂರವಾಗಿರುವುದೆಂದರೆ ದುಷ್ಟರ ಕೋಪಾಗ್ನಿ. ಅದಕ್ಕಿಂತಲೂ ಉಗ್ರವಾಗಿರುವುದೆಂದರೆ ಕಾಡ್ಗಿಚ್ಚು. ಕಾಡ್ಗಿಚ್ಚಿಗಿಂತಲೂ ಉಗ್ರ ಸಿಡಿಲು. ಅದಕ್ಕಿಂತಲೂ ಉಗ್ರ ದಾವಾಗ್ನಿ. ದಾವಾಗ್ನಿಗೂ ಉಗ್ರ ಪ್ರಳಯಕಾಲದ ಬೆಂಕಿ. ಅದಕ್ಕಿಂತಲೂ ಭಯಂಕರ ರುದ್ರನ ಹಣೆಗಣ್ಣು. ಹರಿಶ್ಚಂದ್ರನ ಮೇಲೆ ರೋಷಾವೇಶಗೊಂಡ ವಿಶ್ವಾಮಿತ್ರನ ಕೋಪಾಗ್ನಿ ರುದ್ರನ ಹಣೆಗಣ್ಣಿಗಿಂತಲೂ ಭೀಕರವಾಗಿತ್ತು.

ವಿಶೇಷ ವಿಚಾರ
ಈಶ್ವರನ ಹಣೆಯ ಬೆಂಕಿಗಿಂತಲೂ ತೀವ್ರ ಎನ್ನುವ ಮಾತಿನಲ್ಲಿ ವಿಶ್ವಾಮಿತ್ರನ ಕೋಪದ ಪರಾಕಾಷ್ಠೆಯನ್ನು ಅರ್ಥಮಾಡಿಕೊಳ್ಳಬಹುದು.

ಪದ್ಯ
ತರಿಸಂದ ಮುನಿಯ ಕೋಪದ ಕಿಚ್ಚಿನುಬ್ಬರದ
ಬಿರುಬನರಿದತಿತೀವ್ರತರವಾದುದಿನ್ನು ಕಿರಿ
ದರಲಿ ತಗ್ಗುವುದಲ್ಲ ಗರ್ವಿಸುವುದುಚಿತವಲ್ಲೆಂದು ವಸುಧಾಧೀಶನು
ಅರಿಯದನ್ಯಾಯಮಂ ಮಾಡಿದೆನಿದೊಮ್ಮಿಂಗೆ
ನೆರೆದ ಕೋಪಾಗ್ನಿಯಂ ಬಿಡು ತಂದೆಯೆಂದು ಧರೆ
ಗುರುವ ಸತಿಸುತವೆರಸಿ ಪೊಡೆವಟ್ಟಡಣಕಿಸಿದನಾಸುರದ ಕೋರಡಿಗನು ೧೫೭

ಅರ್ಥ
ವಿಶ್ವಾಮಿತ್ರನ ಕೋಪದ ಆಧಿಕ್ಯವನ್ನು ಅರ್ಥಮಾಡಿದ ರಾಜ ಇದು ಅತ್ಯಂತ ಘೋರಸ್ವರೂಪವನ್ನು ತಾಳಿದೆ. ಇನ್ನು ಇದನ್ನು ತಣಿಸುವುದು ಸುಲಭದ ಮಾತಲ್ಲ. ತಾನಿನ್ನು ಗರ್ವದ ಮಾತಾಡುವುದು ಸಮುಚಿತವಾಗದು. ಎಂದು ತೀರ್ಮಾನಿಸಿ ವಿನಮ್ರವಾಗಿ ಉತ್ತರಿಸುತ್ತಾನೆ. ʻತಿಳಿಯದೆ ನಾನು ತಪ್ಪು ಮಾಡಿದೆ, ಇದೊಂದು ಸಲ ನಿಮ್ಮ ಕೋಪವನ್ನು ಉಪಶಮನ ಮಾಡಿಕೊಳ್ಳಿ ತಂದೆʼ ಎನ್ನುತ್ತ ಮಡದಿ ಮತ್ತು ಪುತ್ರರೂ ಸೇರಿ ಮುನಿಗೆ ಸಾಷ್ಟಾಂಗವೆರಗುತ್ತಾನೆ. ಆದರೆ ವಿಶ್ವಾಮಿತ್ರ ತನ್ನ ಕೋಪಾವೇಶವನ್ನು ಒಂದಿಷ್ಟೂ ತಗ್ಗಿಸದೆ ಆವೇಶದಿಂದಲೇ ಅವರನ್ನು ಅಣಕಿಸುತ್ತಾನೆ.

ಪದ್ಯ

ಕೋಡದಂಜದೆ ಲೆಕ್ಕಿಸದೆ ಬಂದು ಬನದೊಳಗೆ
ಬೀಡಬಿಟ್ಟನಿಮಿತ್ತವನ್ಯಾಯಕೋಟಿಯಂ
ಮಾಡಿ ಮಕ್ಕಳುಗಳಂ ಸಾಯೆ ಸದೆಬಡಿದುದಲ್ಲದೆ ಬನ್ನವೆತ್ತಿ ಹಲವು
ಕೇಡುಮಾತುಗಳಿಂದ ಕೆಡೆನುಡಿದು ಮತ್ತೀಗ
ಬೇಡ ಕೋಪವನುಡುಗು ತಂದೆಯೆಂದಡೆ ನಿನ್ನ
ಕೋಡ ಕೊರೆಯದೆ ಬರಿದೆ ಬಿಟ್ಟಪೆನೆ ಮಗನೆ ಕೇಳೆಂದನಾ ಮುನಿನಾಥನು ೧೫೮

ಅರ್ಥ
ಒಂದಿಷ್ಟೂ ಅಳುಕದೆ, ಭಯಪಡದೆ ನನ್ನ ಆಶ್ರಮಕ್ಕೆ ಬಂದು ಬೀಡು ಬಿಟ್ಟು ಕೋಟ್ಯಂತರ ಅನ್ಯಾಯಗಳನ್ನು ಮಾಡಿ ನನ್ನ ಮಕ್ಕಳನ್ನೇ ಸಾಯುವಂತೆ ಹೊಡೆದುದಲ್ಲದೆ ನನಗೇ ಹಲವು ಬಗೆಯ ಅವಮಾನದ ಮಾತುಗಳನ್ನು ಆಡಿದ್ದೀಯ. ಈಗ ಕೋಪವನ್ನು ಬಿಟ್ಟುಬಿಡು ತಂದೆ ಎಂದರೆ ನಿನ್ನ ಅಹಂಕಾರದ ಕೊಂಬನ್ನು ಕಡಿಯದೆ ಸುಮ್ಮನೆ ಬಿಟ್ಟುಬಿಡುತ್ತೇನೆ ಅಂದುಕೊಂಡೆಯಾ ಮಗನೇ? ಎಂದು ವಿಶ್ವಾಮಿತ್ರ ಕೆಣಕಿದನು.

ಕಾವ್ಯರಸಯಾನ ಮುಂದುವರಿದುದು: ೩೦.೦೯.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ರಾಜನ ಮೇಲೆ ಅನೇಕ ಆಪಾದನೆಗಳನ್ನು ಹೊರಿಸಿದ ವಿಶ್ವಾಮಿತ್ರ ಅವನನ್ನು ಸುಮ್ಮನೆ ಬಿಡಲಾರೆನೆಂದು ಕೋಪಾಟೋಪದಿಂದ ಸವಾಲು ಹಾಕಿದಾಗ ಇನ್ನು ಮಹರ್ಷಿಯೊಂದಿಗೆ ವಾದ ಮಾಡಿ ಪ್ರಯೋಜನವಿಲ್ಲವೆಂದು ಅರ್ಥಮಾಡಿಕೊಂಡ ರಾಜ ತನ್ನ ಎಲ್ಲ ತಪ್ಪನ್ನು ಮನ್ನಿಸಿ ಕರುಣಿಸು ಎಂದು ಮತ್ತೆ ಮತ್ತೆ ಬೇಡಿಕೊಳ್ಳುತ್ತಾನೆ. ತನ್ನ ಆಶ್ರಮಕ್ಕೆ ಬಂದು ಅನೇಕ ತೊಂದರೆಗಳನ್ನು ಮಾಡಿದ್ದಲ್ಲದೆ ತನಗೆ ಅವಮಾನ ಮಾಡಿ ತನ್ನ ಮಕ್ಕಳನ್ನು ಸಾಯುವಂತೆ ಹೊಡೆದ ಕಾರಣ ರಾಜನ ಅಹಂಕಾರದ ಕೊಭನ್ನು ಕತ್ತರಿಸದೆ ಬಿಡೆನೆಂದು ವಿಶ್ವಾಮಿತ್ರ ಗರ್ಜಿಸುತ್ತಾನೆ. ಮುಂದೆ:

ಪದ್ಯ

ಕ್ರೂರರತ್ಯಧಮರುದ್ರೇಕಿಗಳು ದುರ್ಜನಾ
ಕಾರಿಗಳು ಧೂರ್ತರೊಳಗಾಗಿ ಶರಣೆನಲು ನಿಜ
ವೈರಮಂ ಬಿಡುವರೆಂಬಾಗಳೀ ಸರ್ವಸಂಗನಿವೃತ್ತರೆನಿಪ ನಿಮಗೆ
ಓರಂತೆ ಬೇಡಿಕೊಳುತಿಪ್ಪೆನ್ನ ಮೇಲಿನಿತು
ಕಾರುಣ್ಯವೇಕಿಲ್ಲ ತಂದೆಯೆನಲೆನ್ನಯ ಕು
ಮಾರಿಯರ ಮದುವೆಯಾಗೆಲ್ಲಾ ನಿರೋಧಮಂ ಬಿಡುವೆನಿಂತೀಗೆಂದನು ೧೫೯

ಅರ್ಥ
ಲೋಕದಲ್ಲಿ ಕ್ರೂರರಾದವರು, ಅಧಮರಾದವರು, ಶೀಘ್ರಕೋಪಿಗಳು, ದುರ್ಜನರು, ಧೂರ್ತರು ಯಾರೇ ಆದರೂ ಶರಣಾಗತರಾಗಿ ಕ್ಷಮೆಯಾಚಿಸಿದರೆ ಕೋಪವನ್ನು ಬಿಟ್ಟು ಕ್ಷಮೆ ನೀಡುತ್ತಾರೆ. ಹಾಗಿರುವಾಗ ಸರ್ವಸಂಗ ಪರಿತ್ಯಾಗಿಗಳಾಗಿರುವ ನಿಮ್ಮನ್ನು ನಾನು ಇಷ್ಟು ಬೇಡಿಕೊಳ್ಳುವಾಗಲೂ ನೀವೇಕೆ ಕರುಣೆ ತೋರಿಸುವುದಿಲ್ಲ ತಂದೆ? ಎಂದು ರಾಜ ಕೇಳಿದಾಗ ನನ್ನ ಮಕ್ಕಳನ್ನು ಮದುವೆಯಾಗು, ನನ್ನ ಎಲ್ಲ ಕೋಪವನ್ನೂ ಈಗಿಂದೀಗಲೆ ಬಿಟ್ಟುಬಿಡುತ್ತೇನೆ ಎನ್ನುತ್ತಾನೆ ವಿಶ್ವಾಮಿತ್ರ.

ಪದ್ಯ

ಅರಸುತನದತಿಮದದ ಮಸಕದಿಂ ಮುಂಗಾಣ
ದುರವಣಿಸಿ ಮೀರಿ ಮರೆದಾನಕೃತ್ಯಂಗಳಂ
ಚರಿಸುತಿರೆ ಕಂಡು ಶಿಕ್ಷಿಸುವರಲ್ಲದೆ ದಿಟಂ ಪ್ರತ್ಯಕ್ಷ ನೀವೆನ್ನನು
ಕರೆದು ಚಾಂಡಾಲ ಸತಿಯರ ಕೂಡಿರೆಂದಿಂತು
ಕರುಣಿಸುವರೇ ಮುನಿವರೇಣ್ಯ ಪೇಳೆಂದು ಭೂ
ವರನು ಶಿವಶಿವ ಎಂದನಾ ಮಾತುಗೇಳ್ದ ದೋಷವನು ಪರಿಹರಿಸಲೆಂದು ೧೬೦

ಅರ್ಥ
ಅಧಿಕಾರದ ಮದದಿಂದ ವಿಜೃಂಭಿಸಿ ಮುಂದಾಲೋಚನೆಯಿಲ್ಲದೆ ದುಡುಕಿ ನ್ಯಾಯದ ಹಾದಿಯನ್ನು ಬಿಟ್ಟು ಅಪರಾಧಗಳನ್ನು ಮಾಡಿದರೆ ಅದನ್ನು ಕಂಡು ಬುದ್ಧಿ ಹೇಳಿ ತಿದ್ದಬೇಕಾದವರು ನೀವು. ಅದು ಬಿಟ್ಟು ನೀವೇ ನನ್ನನ್ನು ಕರೆದು ಚಂಡಾಲ ಕನ್ಯೆಯರನ್ನು ಮದುವೆಯಾಗು ಎನ್ನುವುದು ಸರಿಯೇ ಮುನಿವರೇಣ್ಯ, ಎನ್ನುತ್ತ ಈ ಮಾತನ್ನು ಕೇಳಿದ ಪಾಪ ಪರಿಹಾರವಾಗಲೆಂದು ಶಿವಶಿವ ಎಂದ ಹರಿಶ್ಚಂದ್ರರಾಜ.

ಪದ್ಯ

ಗುರುವೆಂದು ಶಿವನೆಂದು ನಿಮ್ಮಡಿಗಳೆಂದು ನೀ
ವಿರಿಸಿದಂತಿಹೆನು ನೀವೆಂದಂತೆ ನಡೆವೆನೆಂ
ದರಸ ಕಟ್ಟುತ್ತಮಿಕೆಯಂ ನುಡಿವೆ ನುಡಿದು ಕೈಯೊಡನೆ ಮತ್ತೆಮ್ಮಾಜ್ಞೆಯ
ಪರಿಕಿಸದೆ ಮೀರುವುದಿದಾವ ಸುಜನತ್ವವೆನೆ
ದೊರೆಗೆಟ್ಟು ಹೊಲತಿಯರನಿರಿಸಿಕೋ ಎಂದು ನೀಂ
ಕರುಣಿಸಲುಬಹುದೆ ನಾನದನೋತು ಮಾಡಬಹುದೇ ಮುನಿಪ ಹೇಳೆಂದನು ೧೬೧

ಅರ್ಥ
ಗುರುವೆಂದು, ಶಿವನೆಂದು, ನೀವು ಅಪ್ಪಣೆ ಮಾಡಿದಂತೆ ಇರುತ್ತೇನೆ ನೀವು ಹೇಳಿದಂತೆ ನಡೆಯುತ್ತೇನೆಂದು ದೊಡ್ಡ ಸುಭಗನಂತೆ ಹೇಳಿದೆ. ಮತು ಮುಗಿದ ಮರು ಕ್ಷಣವೇ ನನ್ನ ಆಜ್ಞೆಯನ್ನು ಹಿಂದು ಮುಂದು ಯೋಚಿಸದೆ ತಿರಸ್ಕರಿಸಿದೆ. ಇದ್ಯಾವ ಸೌಜನ್ಯದ ನಡತೆ? ಎಂದು ಕೇಳಿದ ವಿಶ್ವಾಮಿತ್ರನಿಗೆ ನೀವೇ ಹೊಲತಿಯರನ್ನು ಇಟ್ಟುಕೋ ಎಂದು ತಪ್ಪು ಹಾದಿ ತೋರಿಸುವುದು ಸರಿಯೇ? ಅಂತ ಕೆಲಸವನ್ನು ನಾನು ಮಾಡುವುದು ಸರಿಯೇ? ನೀವೇ ಹೇಳಿ ಮುನೀಶ್ವರ? ಎಂದು ರಾಜ ಕೇಳುತ್ತಾನೆ.

ಪದ್ಯ

ವಿವಿಧ ಗುರುವಾಜ್ಞೆಯೊಳು ಮಾಡುವವು ಕೆಲವು ಮೀ
ರುವವು ಕೆಲಕಾರ್ಯಂಗಳುಳ್ಳವಂ ಮಾಳ್ಪುದುಳಿ
ದವ ಬಿಡುವುವುದೈಸಲೇ ಗುರುಭಕ್ತಿಯೆಂದೆನಲು ದೇವ ನೀವೆನ್ನ ಮನದ
ಹವಣನಾರಯ್ಯಲೆಂದನುಗೆಯ್ದಿರಲ್ಲದೀ
ನವನರಕಮಂ ಮಾಡಹೇಳಿದವರುಂಟೆ ನಿ
ಮ್ಮವನು ನಾ ನಿಮ್ಮ ಮನದನುವನರಿಯೆನೆ ಮುನಿಪ ಕೇಳೆಂದನವನೀಶನು ೧೬೨

ಅರ್ಥ
ಗುರು ವಿವಿಧ ಬಗೆಯ ಆಜ್ಞೆಗಳನ್ನು ವಿಧಿಸುತ್ತಾನೆ. ಅವುಗಳಲ್ಲಿ ಕೆಲವನ್ನು ಮಾಡುತ್ತೇನೆ, ಕೆಲವನ್ನು ಬಿಡುತ್ತೇನೆ ಎನ್ನುತ್ತ ತನಗೆ ಇಷ್ಟವಾದವುಗಳನ್ನು ಮಾತ್ರ ಮಾಡುತ್ತೇನೆಂದರೆ ಅದು ಗುರುಭಕ್ತಿಯೇ? ಎಂದು ವಿಶ್ವಾಮಿತ್ರ ಪ್ರಶ್ನಿಸಿದಾಗ ನೀವು ನನ್ನ ಮನಸ್ಸನ್ನು ಪರೀಕ್ಷಿಸಲು ಈ ರೀತಿ ಹೇಳುತ್ತಿದ್ದೀರೆಂದು ನನಗೆ ಗೊತ್ತು. ಅಲ್ಲದೆ ಗುರುಗಳಾದವರು ಯಾರಾದರೂ ಈ ಬಗೆಯ ನರಕದ ದಾರಿಯಲ್ಲಿ ಹೋಗಲು ಹೇಳುತ್ತಾರೆಯೇ? ನಾನು ನಿಮ್ಮ ಶಿಷ್ಯ. ನನಗೆ ನಿಮ್ಮ ಮನಸ್ಸು ಗೊತ್ತಿಲ್ಲವೇ ಮುನೀಶ್ವರ ? ಎಂದು ರಾಜ ಉತ್ತರಿಸುತ್ತಾನೆ.

ವಿಶೇಷ ವಿಚಾರ
ವಿಶ್ವಾಮಿತ್ರನ ಮನಸ್ಸನ್ನು ಪರಿವರ್ತಿಸಲು ರಾಜ ಬಹಳ ಜಾಣತನದಿಂದ ಮಾತಿನ ರೀತಿಯನ್ನು ಬದಲಾಯಿಸುವುದನ್ನು ಗಮನಿಸಬೇಕು. ಕೆಟ್ಟವನನ್ನೂ ಹಲವು ಬಾರಿ ಒಳ್ಳೆಯವನೆಂದರೆ ಆತನ ಕೆಡುಕು ದೂರವಾಗ್ತದೆ ಎಂಬ ಮಾತಿದೆ. ಹಾಗೆಯೇ ನಿರಪರಾಧಿಯಾದರೂ ಅವನನ್ನು ಪದೇ ಪದೇ ಅಪರಾಧಿ ಎಂದು ಕರೆದು ನಿರಪರಾಧಿಯನ್ನು ಅಪರಾಧಿಯನ್ನಾಗಿಯೂ ಮಾಡಬಹುದು.

ಪದ್ಯ

ಒತ್ತಿ ನಿನ್ನಯ ಮನದ ಹವಣನರಿಯಲೆಂದು ನುಡಿ
ಯಿತ್ತಿಲ್ಲ ತಾತ್ಪರ್ಯವಾಗಿ ನುಡಿದೆವು ನಿನ್ನ
ಚಿತ್ತದಲಿ ಶಂಕಿಸದೆ ಮದುವೆಯಾಗೆಂದು ಕೌಶಿಕಮುನೀಂದ್ರಂ ನುಡಿಯಲು
ಉತ್ತಮದ ರವಿಕುಲದೊಳುದಿಸಿ ಚಾಂಡಾಲತ್ವ
ವೆತ್ತ ಸತಿಯರ್ಗೆಳಸಿ ಘೋರನರಕಾಳಿಗನಿ
ಮಿತ್ತ ಹೋಹನಲ್ಲ ಬೆಸೆಸಬೇಡಿದನೆಂದು ಭೂಭುಜಂ ಕೈಮುಗಿದನು ೧೬೩

ಅರ್ಥ
ಇಲ್ಲ ಇಲ್ಲ, ನಾನೇನೂ ನಿನ್ನ ಮನಸ್ಸನ್ನು ತಿಳಿದುಕೊಳ್ಳುವ ಸಲುವಾಗಿ ಹೇಳಿದ್ದಲ್ಲ. ನಿಜವಾಗಿಯೂ ನನ್ನ ಮನಸ್ಸಿನಲ್ಲಿರುವ ಅಭಿಪ್ರಾಯವನ್ನೇ ಹೇಳಿದೆ. ನೀನು ಯಾವ ಅನುಮಾನವನ್ನೂ ಇಟ್ಟುಕೊಳ್ಳಲ್ಲದೆ ನನ್ನ ಮಕ್ಕಳನ್ನು ಮದುವೆಯಾಗು. ಎಂದು ವಿಶ್ವಾಮಿತ್ರ ಹೇಳಿದಾಗ ಉತ್ತಮವಾದ ಸೂರ್ಯವಂಶದಲ್ಲಿ ಹುಟ್ಟಿ ಚಂಡಾಲಕನ್ಯೆಯರನ್ನು ಬಯಸಿ ಘೋರನರಕಕ್ಕೆ ಹೋಗುವವನಲ್ಲ ನಾನು. ದಯವಿಟ್ಟು ಈ ರೀತಿಯಲ್ಲಿ ಅಪ್ಪಣೆ ಮಾಡಬೇಡಿ. ಎಂದು ರಾಜ ಕೈಮುಗಿದು ಬೇಡಿಕೊಳ್ಳುತ್ತಾನೆ.

ಪದ್ಯ

ವಿದಿತ ವೇದಾರ್ಥದೊಳು ನಡೆದು ಹುಸಿಯಂ ಬಿಟ್ಟು
ಮದದ ಮಸಕವನೊಕ್ಕು ಲೋಭಮಂ ತೊರೆದೊಡಂ
ತುದಿಗೆ ರಾಜ್ಯಾಂತರಂನರಕವೆಂಬುದು ತಪ್ಪದರಸುಗಳಿಗಿದು ನಿಶ್ಚಯಂ
ಅದರ ಕೂಟಕ್ಕಿದೊಂದೈಸಲೇಯೆಂದಿಂದು
ವದನೆಯರ ಸಂಗದಿಂದೀಗಳೊದಗುವ ಸೌಖ್ಯ
ದೊದವನನುಭವಿಸು ತುಂಬಿರ್ದ ಬಂಡಿಗೆ ಮೊರಂ ದಿಮ್ಮಿತೇ ಹೇಳೆಂದನು ೧೬೪

ಅರ್ಥ
ವೇದಶಾಸ್ತ್ರಗಳು ಹೇಳಿದ ರೀತಿಯಲ್ಲಿಯೇ ನಡೆದರೂ ಸುಳ್ಳು, ಅಹಂಕಾರ, ಲೋಭಗಳನ್ನು ತೊರೆದರೂ ಕೊನೆಗೆ ರಾಜವೈಭವಗಳೆಲ್ಲ ಕಳೆದಬಳಿಕ ರಾಜರಾದವರಿಗೆ ನರಕಪ್ರಾಪ್ತವಾಗುತ್ತದೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಿರುವಾಗ ಅದರ ಜೊತೆಯಲ್ಲಿ ಇದೂ ಒಂದು ಸೇರಿದರೇನು? ಈ ಸುಂದರಿಯರ ಸಾಂಗತ್ಯದಿಂದ ಸಿಗುವ ಸುಖವನ್ನು ಅನುಭವಿಸು. ತುಂಬಿದ ಬಂಡಿಗೆ ಮೊರವೊಂದು ಭಾರವೇ?

ವಿಶೇಷ ವಿಚಾರ
ಒಬ್ಬ ವ್ಯಕ್ತಿಯನ್ನು ಆಮಿಷದ ಮೂಲಕ ಹೇಗೆ ನಾಶದ ಹಾದಿಯತ್ತ ಕೊಂಡೊಯ್ಯಬಹುದು ಎಂಬುದಕ್ಕೆ ಒಂದು ನಿದರ್ಶನ. ಪ್ರಲೋಭನೆಗಳಿಗೆ ಸುಲಭದಲ್ಲಿ ವಶರಾಗುವವರಿಗೆ ಕವಿ ನೀಡುವ ಎಚ್ಚರಿಕೆಯ ಗಂಟೆ ಇದು. ಈ ಭಾಗದಲ್ಲಿ ನಾವು ಜಾತಿಯನ್ನು ಮರೆಯೋಣ. ಇದು ನೀತಿಯ ಪಾಠ.

ಪದ್ಯ

ಧರೆಯನವರಿವರೆನ್ನದಾದಿ ತೊಡಗಾಳ್ವ ಭೂ
ವರಜಾತಿಗೆಲ್ಲಂ ಸಮಂತು ರಾಜ್ಯಾಂತರಂ
ನರಕವಾ ದೇಶವೆನಿಸಿರ್ಪಡದನೊಲ್ಲೆನೆಂದೆನ್ನೆ ನಾನೆನ್ನಿಚ್ಚೆಯಿಂ
ದುರುಳತನದಿಂ ನಡೆದಸತ್ಯಮಂ ನುಡಿದು ಹೊಲೆ
ಯರ ಸಂಗಮಂ ಮಾಡಿ ನಿಷ್ಕಾರಣಂ ಘೋರ
ನರಕಾಳಿಯೊಳು ಬಿದ್ದು ಹೊರಳುವವನಲ್ಲ ಮುನಿನಾಥ ಚಿತ್ತೈಸೆಂದನು ೧೬೫

ಅರ್ಥ
ಈ ಭೂಮಂಡಲವನ್ನು ಆಳಿದ ಪ್ರತಿಯೊಬ್ಬ ರಾಜನಿಗೂ ಅಂತಿಮವಾಗಿ ನರಕವೇ ಗತಿಯೆಂದಾದರೆ ಅದನ್ನು ಬೇಡವೆಂದು ಹೇಳಲಾರೆ. ಆದರೆ ನಾನು ನನ್ನ ಸುಖಕ್ಕಾಗಿ ದುಷ್ಟತನದಿಂದ ನಡೆದು ಅಸತ್ಯವನ್ನು ಹೇಳಿ ಹೊಲೆಯರ ಸಂಗವನ್ನು ಮಾಡಿ ವಿನಾಕಾರಣ ಘೋರನರಕಕ್ಕೆ ಬಿದ್ದು ಹೊರಳಾಡುವವನಲ್ಲ ಮುನಿಪ ಎಂದನು ರಾಜ.

ಪದ್ಯ

ಹರನನರ್ಚಿಸು ದಾನ ಧರ್ಮಮಂ ಮಾಡು ಭೂ
ಸುರರ ಮನ್ನಿಸು ದೇಶಮಂ ನೋಡಿ ಪಾಲಿಸ
ಧ್ವರರಕ್ಷೆಗೆಯ್ಯಾಹಾರಂಗಳಂ ಬಿಡು ಮುನೀಶ್ವರರನಾರಾಧಿಸು
ಧರೆಯೊಳನಾಥರಂ ಸಲಹು ದುಷ್ಟರನು ಪರಿ
ಹರಿಸು ಸತ್ಯಂಗೆಡದಿರುತ್ತಮಕುಲಾಚಾರ
ವೆರಸಿ ನಡೆಯೆಂದೆನ್ನದೀ ಹೊಲತಿಯರ ಕೂಡಿ ನಡೆಯೆಂಬರೇ ಮುನಿಗಳು ೧೬೬

ಅರ್ಥ
ಶಿವನನ್ನು ಪೂಜಿಸು, ದಾನಧರ್ಮವನ್ನು ಮಾಡು, ಬ್ರಾಹ್ಮಣರನ್ನು ಗೌರವಿಸು, ದೇಶವನ್ನು ಚೆನ್ನಾಗಿ ಪಾಲಿಸು, ಯಜ್ಞಯಾಗಾದಿಗಳನ್ನು ರಕ್ಷಿಸು, ತಾಮಸಾಹಾರಗಳನ್ನು ತ್ಯಜಿಸು, ಮುನಿಶ್ರೇಷ್ಠರನ್ನು ಆರಾಧಿಸು, ಅನಾಥರನ್ನು ಸಲಹು, ದುಷ್ಟರನ್ನು ನಾಶಮಾಡು, ಸತ್ಯವನ್ನು ಕಾಪಾಡು, ಉತ್ತಮಕುಲಾಚಾರದಲ್ಲಿ ನಡೆ -ಈರೀತಿಯಲ್ಲಿ ಬೋಧಿಸುವುದನ್ನು ಬಿಟ್ಟು ಈ ಹೊಲತಿಯರ ಸಂಸರ್ಗವನ್ನು ಮಾಡು ಎನ್ನುತ್ತೀರಲ್ಲ ಮುನಿಗಳೇ? ಇದೇನಿದು?

ವಿಶೇಷ ವಿಚಾರ
ಸತ್ಪುರುಷನಾದವನು ಅಥವಾ ರಾಜನಾದವನು ತನ್ನ ಪ್ರಜೆಗಳ ಬಗ್ಗೆ ಯಾವ ಬಗೆಯ ಕಾಳಜಿಯನ್ನು ಇಟ್ಟುಕೊಳ್ಳಬೇಕು, ಅವನ ಸದಾಚಾರಗಳೇನು ಎಂಬುದನ್ನು ಕವಿ ಬಹಳ ಸುಂದರವಾಗಿ ಇಲ್ಲಿ ವರ್ಣಿಸುತ್ತಾನೆ. ಇದು ಆಕಾಲದ ಜೀವನ ಮೌಲ್ಯಗಳು ಮಾತ್ರವಲ್ಲ ಕಾಲಕ್ಕೆ ತಕ್ಕಂತೆ ಕೆಲವು ತಿದ್ದುಪಡಿಗಳನ್ನು ಮಾಡಿಯೂ ಸಾರ್ವಕಾಲಿಕವಾಗಿ ಉಳಿಸಬೇಕಾದ ಜೀವನ ಮೌಲ್ಯಗಳೇ ಆಗಿವೆ. ಒಂದು ಉತ್ತಮ ಸಾಹಿತ್ಯ ಸಂತೋಷವನ್ನೂ ಕೊಡಬೇಕು, ಸಂಸ್ಕಾರವನ್ನೂ ಕೊಡಬೇಕು ಎನ್ನುವುದು ಪ್ರಾಚೀನ ಸಾಹಿತ್ಯದ ಗುರಿಯಾಗಿತ್ತು. ಜನಬದುಕಬೇಕೆಂದು ಅವರು ಕಾವ್ಯಗಳನ್ನು ರಚಿಸುತ್ತಿದ್ದರು. ರಾಘವಾಂಕ ಕಾವ್ಯದ ಕೊನೆಯಲ್ಲಿ ಅದನ್ನೇ ಹೇಳುತ್ತಾನೆ.

ಪದ್ಯ

ಬಿಡದೆ ಸತಿಯರ ಹೊಲೆಯರೆಂಬ ನೆವವೇಕವರ
ಹಡೆದೆನ್ನನೇ ಹೊಲೆಯನೆಂದಾಡಿದಾತನೆಂ
ದಡೆ ಭಸಿತಧರನೆನಲು ರುದ್ರನಂ ಬೈದವನೆ ಮುನಿಪ ಹೊಲೆಗೆರೆಯ ಜಲದ
ನಡುವೆ ಬಿಂಬಿಸುವ ರವಿ ಹೊಲೆಯನೇ ಕಮಲಭವ
ನೊಡನೆ ಹುರುಡಿಸಿ ಬೇರೆ ಸರ್ವಜೀವರ ಮಾಡು
ವೆಡೆಯೊಳಾ ಜೀವರೊಳಗಾದವನೆ ನಿಮ್ಮ ಹವಣರಿಯದಾಡಿದಿರೆಂದನು ೧೬೭

ಅರ್ಥ
ಮತ್ತೆ ಮತ್ತೆ ನನ್ನ ಮಕ್ಕಳನ್ನು ಹೊಲೆಯರೆಂದು ಕರೆಯುತ್ತೀಯಲ್ಲ. ಆ ಮಾತು ಅವರನ್ನು ಹಡೆದ ನನ್ನನ್ನೇ ಹೊಲೆಯನೆಂದು ಹೇಳಿದಂತಾಯಿತು. ಎಂದಾಗ ಭಸಿತಧರ ಎಂದು ಯಾರನ್ನಾದರೂ ಕರೆದರೆ ಅದು ಶಿವನನ್ನು ನಿಂದಿಸಿದಂತಾಗುತ್ತದೆಯೇ? ಹೊಲಗೇರಿಯ ಜಲಾಶಯದಲ್ಲಿಯೂ ಸೂರ್ಯಬಿಂಬ ಪ್ರತಿಫಲಿಸುತ್ತದೆ. ಹಾಗೆಂದು ಸೂರ್ಯ ಹೊಲೆಯನಾಗುತ್ತಾನೆಯೇ? ಬ್ರಹ್ಮನೊಂದಿಗೆ ಪೈಪೋಟಿಗಿಳಿದು ಇನ್ನೊಂದು ಜೀವಲೋಕವನ್ನು ಸೃಷ್ಟಿಸಬಲ್ಲ ನಿಮ್ಮನ್ನು ಆ ಹುಡುಗಿಯರ ಕಾರಣದಿಂದ ಅಗೌರವಿಸಲು ಸಾಧ್ಯವೇ? ನಿಮ್ಮ ಹಿರಿತನ, ಸ್ಥಾನಮಾನಗಳನ್ನು ಮರೆತು ಇಂಥ ಮಾತನಾಡುತ್ತಿದ್ದೀರಿ ಮುನಿವರ್ಯ ಎನ್ನುತ್ತಾನೆ.

ಪದ್ಯ

ಅಂಬುಧಿವ್ರಜಪರಿಮಿತಾವನೀತಳದೊಳಾ
ಡಂಬರದ ಕೀರ್ತಿಯಂ ತಳೆದ ನಾನಾ ಮುನಿಕ
ದಂಬಾಧಿನಾಥ ವಿಶ್ವಾಮಿತ್ರ ಮುನಿಸುತೆಯರಂ ಜಗಚ್ಛಕ್ಷುವೆನಿಪ
ಅಂಬುಜಪತಿಯಕುಲಲಲಾಮನವನೀಶನಿಕು
ರುಂಬಾಧಿಪತಿ ಹರಿಶ್ಚಂದ್ರರಾಯಂ ತಂದ
ನೆಂಬೊಂದು ತೇಜಮಂ ಕೊಡಬೇಹುದೆನಗೆ ಕೈಮುಗಿದು ಬೇಡಿದೆನೆಂದನು ೧೬೮

ಅರ್ಥ
ಈಗ ವಿಶ್ವಾಮಿತ್ರ ನಯದ ಮಾತುಗಳನ್ನಾಡುತ್ತಾನೆ. ಸಮುದ್ರವೇ ಮೇರೆಯಾಗುಳ್ಳ ಭೂಮಂಡಲದೊಳಗೆ ಬಹಳ ಶ್ರೇಷ್ಠವಾದ ಕೀರ್ತಿಯನ್ನು ಪಡೆದ ನಾನಾ ಮುನಿಗಳಿಗೆ ಒಡೆಯನಾದ ವಿಶ್ವಾಮಿತ್ರ ಮುನಿಯ ಮಕ್ಕಳನ್ನು ಜಗತ್ತಿಗೇ ಕಣ್ಣಾಗಿರುವ ಸೂರ್ಯಕುಲದ ರಾಜರ ಸಮೂಹದಲ್ಲಿ ಶ್ರೇಷ್ಠನಾಗಿರುವ ಹರಿಶ್ಚಂದ್ರರಾಜ ಮದುವೆಯಾದ ಎಂಬ ಒಂದು ತೇಜಸ್ಸನ್ನು ನನಗೆ ದಯಪಾಲಿಸು ಮಹಾರಾಜ ನಿನಗೆ ಕೈಮುಗಿದು ಕೇಳಿಕೊಳ್ಳುತ್ತೇನೆ ಎನ್ನುತ್ತಾನೆ ವಿಶ್ವಾಮಿತ್ರ.

ವಿಶೇಷ ವಿಚಾರ
ವಿವಾಹ ನಿಶ್ಚಿತಾರ್ಥದಂದು ವಧೂವರರ ಕಡೆಯವರು ಸೇರಿ ವಿವಾಹದ ಆಮಂತ್ರಣ ಪತ್ರವನ್ನು ಸಿದ್ಧಮಾಡುವಂಥ ಮಾತು.

ಪದ್ಯ

ಎಡೆವಿಡದೆ ಬೇಡಿ ಕಾಡುವಿರಾದಡಿನ್ನುಕೇಳ್‌
ಕಡೆಗೆನ್ನ ಸರ್ವರಾಜ್ಯವನಾದಡಂ ನಿಮಗೆ
ಕೊಡಹಡೆವೆನೈ ಸಲ್ಲದೀಯೊಂದು ತೇಜಮಂ ಕೊಡೆನೆಂದು ಭೂಪಾಲನು
ನುಡಿಯಲು ತಥಾಸ್ತು ಹಡೆದೆಂ ಹಡೆದೆನವನೀಶ
ರೊಡೆಯ ದಾನಿಗಳರಸ ಸತ್ಯಾವತಂಸ ಎಂ
ದೆಡೆವಿಡದೆ ಹೊಗಳಿ ಬಿಡದಾಘೋಷಿಸಿದನು ಸಂಗಡದ ಮುನಿನಿಕರ ಸಹಿತ ೧೬೯

ಅರ್ಥ
ಹೀಗೆ ಎಡೆಬಿಡದೆ ಬೇಡಿ ಕಾಡುವುದಿದ್ದರೆ ಕೇಳು ಮುನಿಪ, ನಾನು ಕೊನೆಗೆ ನನ್ನ ರಾಜ್ಯವನ್ನಾದರೂ ನಿಮಗೆ ಕೊಡಬಲ್ಲೆನೇ ಹೊರತು ನೀವು ಹೇಳಿದಂಥ ಈ ಅಯೋಗ್ಯವಾದ ಕೆಲಸವನ್ನು ಖಂಡಿತ ಮಾಡಲಾರೆ ಎಂದಾಗ ತಕ್ಷಣವೇ ತಥಾಸ್ತು, ಪಡೆದೆ, ಪಡೆದೆ. ಎಂದು ಉದ್ಗರಿಸುತ್ತ ಮಹಾರಾಜರಿಗೆಲ್ಲ ಶ್ರೇಷ್ಠನಾಗಿರುವ ದೊರೆಯೇ, ದಾನಿಗಳ ಅರಸ, ಸತ್ಯಾವತಂಸ(ಅವತಂಸ-ಆಭರಣ) ಎನ್ನುತ್ತ ಮತ್ತೆ ಮತ್ತೆ ಹೊಗಳಿ ತನ್ನ ಜೊತೆಯಲ್ಲಿದ್ದ ಮುನಿಗಳನ್ನು ಕರೆದು ಹೀಗೆಂದು ಘೋಷಿಸುತ್ತಾನೆ ವಿಶ್ವಾಮಿತ್ರ.

ಪದ್ಯ

ತನಗುಳ್ಳ ಸರ್ವರಾಜ್ಯವನು ವಿಶ್ವಾಮಿತ್ರ
ಮುನಿಗೆ ಧಾರೆಯನೆರೆದನವನೀಶನೆಂದು ಮೇ
ದಿನಿಯೊಳೆಲ್ಲಂ ಸಾರೆ ನಮ್ಮಯ ತಪೋವನದೊಳೈದೆ ಗುಡಿತೋರಣವನು
ವಿನಯದಿಂ ಕಟ್ಟಿ ಕೊಟ್ಟಾತನಂ ಮೆರೆಯದಡೆ
ಜನ ನಗುವುದೆಂದು ಚಾರರನಟ್ಟುತಿಹ ಕೌಶಿ
ಕನ ಬಲಾತ್ಕಾರಕ್ಕೆ ಬೆರಗಾದನವನೀಶನಂದು ಮೂಗಿನ ಬೆರಳೊಳು ೧೭೦

ಅರ್ಥ
ತನಗಿರುವ ಸಮಸ್ತ ರಾಜ್ಯವನ್ನು ವಿಶ್ವಾಮಿತ್ರ ಮುನಿಗೆ ಮಹಾರಾಜನಾದ ಹರಿಶ್ಚಂದ್ರನು ಧಾರೆಯೆರೆದು ಕೊಟ್ಟಿದ್ದಾನೆಂದು ಇಡೀ ಭೂಮಂಡಲದೊಳಗೆಲ್ಲ ಸಾರಬೇಕಾಗಿದೆ. ಅದಕ್ಕಾಗಿ ನಮ್ಮ ಆಶ್ರಮವನ್ನು ಗುಡಿತೋರಣಗಳಿಂದ ಅಲಂಕರಿಸಿ ಮೆರವಣಿಗೆ ಮಾಡಿಸಿ ರಾಜನ ಔದಾರ್ಯವನ್ನು ಮೆರೆಯಬೇಕು. ಇಲ್ಲದಿದ್ದರೆ ಜನ ನಗುತ್ತಾರೆ. ಎಂದು ದೂತರನ್ನು ಅಟ್ಟುತ್ತಿದ್ದ ಮುನಿಯ ಬಲಾತ್ಕಾರದ ಬುದ್ಧಿಗೆ ಬೆರಗಾಗಿ ರಾಜ ತನ್ನ ಮೂಗಿನ ಮೇಲೆ ಬೆರಳಿಟ್ಟುಕೊಂಡ

ಪದ್ಯ

ಸುತ್ತಿ ಜಗದೊಳು ಹರಿದು ಸಾರುವಂತಾಗಿ ನಾ
ನಿತ್ತುದೇನಯ್ಯ ಎನೆ ನಿನಗುಳ್ಳುದೆಲ್ಲವಂ
ವಿತ್ತ ವಂಚನೆಯಿಲ್ಲದಿತ್ತೆಯಿದು ಲಕ್ಷ ನಮಗೊಲಿದಿಷ್ಟು ತಣಿವೆಯ್ದದೆ
ಚಿತ್ತದಲಿ ನೋಯಬೇಡೆನೆ ಮೊದಲು ತೊಡಗಿ ನಾ
ನಿತ್ತುದೇಯಿಲ್ಲೆನೆ ಸಮಸ್ತ ಮುನಿಜನದ ನಡು
ವಿತ್ತಿಳೆಯನಿಲ್ಲೆಂದು ನುಡಿದು ಹುಸಿವಂತಾಗಿ ಕುತ್ಸಿತನೆ ನೀನೆಂದನು ೧೭೧

ಅರ್ಥ
ಇಡೀ ಜಗತ್ತಿಗೆ ಸಾರುವಂತೆ ನಾನು ಏನನ್ನು ಕೊಟ್ಟಿದ್ದೇನೆ ನಿನಗೆ ಮುನಿಪ? ಎಂದು ಕೇಳುತ್ತಾನೆ ರಾಜ. ನಿನ್ನಲ್ಲಿ ಏನೇನಿವೆಯೋ ಅವನ್ನೆಲ್ಲ ಯಾವ ಮೋಸವೂ ಇಲ್ಲದೆ ನೀನು ನನಗೆ ಕೊಟ್ಟಿದ್ದಿ. ಇದು ನನಗೆ ಬೇಕಾದಷ್ಟಾಯಿತು. ಪ್ರೀತಿಯಿಂದ ನಮಗೆ ಕೊಟ್ಟ ದಾನದ ಬಗ್ಗೆ ಸಮಾಧಾನವಾಗಿರು. ಮನಸ್ಸಿನಲ್ಲಿ ನೊಂದುಕೊಳ್ಳಬೇಡ ಎಂದಾಗ ಮೊದಲಿಗೆ ನಾನು ನಿಮಗೆ ಏನನ್ನೂ ಕೊಡಲಿಲ್ಲವೆಂದು ರಾಜ ಹೇಳಿದಾಗ ಈ ಸಮಸ್ತ ಮುನಿಜನರ ನಡುವೆ ಕೊಟ್ಟ ಭೂಮಿಯನ್ನು ಈಗ ಕೊಡಲಿಲ್ಲವೆಂದು ಸುಳ್ಳುಹೇಳುತ್ತೀಯಲ್ಲ. ನೀನು ಹಾಗೆ ಸುಳ್ಳು ಹೇಳುವಷ್ಟು ದುಷ್ಟನೇ?

ಪದ್ಯ

ಕಡೆಗೆನ್ನ ಸರ್ವರಾಜ್ಯವನಾದೊಡಂ ನಿಮಗೆ
ಕೊಡಹಡೆವೆನೈ ಸಲ್ಲದೀ ಕೆಟ್ಟ ತೇಜಮಂ
ಕೊಡೆನೆನುತಾಕ್ಷೇಪದಿಂ ನಗುತ ನುಡಿದೆನಲ್ಲದೆ ಕೊಟ್ಟುದಿಲ್ಲೆನುತ್ತ
ನುಡಿಯೆ ನೀಂ ನಗುತ ಕೊಟ್ಟೊಡೆ ನಗುತ ಕೊಂಡೆನೆಂ
ದೊಡೆ ಕೊಂಬುದರಿದಲ್ಲ ಕೊಡೆನೆನಲು ಕೊಟ್ಟುದಂ
ಕೊಡಬೇಕು ಭೂಪ ನೀನಿತ್ತಳುಪಿ ಹುಸಿದೊಡಂ ಕೊಂಡುದಂ ಕೊಡೆನೆಂದನು ೧೭೨

ಅರ್ಥ
ಕೊನೆಗೆ ನನ್ನ ಸರ್ವರಾಜ್ಯವನ್ನಾದರೂ ಕೊಡುವೆನಲ್ಲದೆ ಈ ಕೆಟ್ಟ ಕೆಲಸವನ್ನು ಮಾಡಲಾರೆ ಎಂದು ಆ ಕೆಲಸದ ಬಗ್ಗೆ ನನಗಿರುವ ಆಕ್ಷೇಪವನ್ನು ನಗುತ್ತ ವ್ಯಕ್ತಪಡಿಸಿದೆನೇ ಹೊರತು ನಾನೇನೂ ನಿಮಗೆ ರಾಜ್ಯವನ್ನು ಕೊಡಲಿಲ್ಲ. ಎಂದಾಗ ನೀನು ನಗುತ್ತ ಕೊಟ್ಟರೆ, ನಾನು ನಗುತ್ತ ಕೊಂಡೆ ಎನ್ನುತ್ತಾನೆ ವಿಶ್ವಾಮಿತ್ರ. ಕೊಳ್ಳುವುದು ಕಷ್ಟವಲ್ಲ, ಆದರೆ ನಾನು ಕೊಡುವುದಿಲ್ಲ. ಎಂದು ರಾಜ ಹೇಳಿದರೆ ನೀನು ಅದಾಗಲೇ ಕೊಟ್ಟಾಗಿದೆ. ಇನ್ನು ನೀನು ನನಗೆ ಕೊಟ್ಟದ್ದನ್ನು ನಾನು ಮರಳಿ ನಿನಗೆ ಕೊಡಲಾರೆ ಎನ್ನುತ್ತಾನೆ ಋಷಿ.

ಪದ್ಯ

ಸಾಮರ್ಥ್ಯಯುತನುಗ್ರನುದ್ದಂಡನಾನೆನಿ
ಪ್ಪೀ ಮದದ ಬಲದಿಂ ಬಲಾತ್ಕಾರದಿಂದೆನ್ನ
ಭೂಮಂಡಲವ ಕೊಂಬುದುಚಿತವೇ ಎನಲು ನಿನಗಿನಿತರಸುತನದ ಮೇಲೆ
ಪ್ರೇಮವುಳ್ಳಡೆ ಮಕ್ಕಳಂ ಮದುವೆಯಾಗತಿ
ವ್ಯಾಮೋಹದಿಂದೆ ಬಳುವಳಿಯಾಗಿ ಸಲೆ ಸರ್ವ
ಸಾಮ್ರಾಜ್ಯಮಂ ಮರಳಿ ಕೊಡುವೆನಮ್ಮುವಡೆಮಾಡೇಳೆಂದನಾ ಮುನಿಪನು ೧೭೩

ಅರ್ಥ
ಸಮರ್ಥರು, ಉಗ್ರರು, ದಂಡಿಸಬಲ್ಲವರು ಎಂಬ ಅಹಂಕಾರದಿಂದ ನನ್ನ ರಾಜ್ಯವನ್ನು ಹೀಗೆ ನೀವು ಬಲಾತ್ಕಾರವಾಗಿ ತೆಗೆದುಕೊಳ್ಳುವುದು ನ್ಯಾಯವೇ? ಎಂದು ಕೇಳಿದಾಗ ನಿನಗೆ ಅರಸುತನದ ಮೇಲೆ ಇಷ್ಟೊಂದು ವ್ಯಾಮೋಹವಿರುವುದಿದ್ದರೆ ನನ್ನ ಮಕ್ಕಳನ್ನು ಮದುವೆಯಾಗು, ಅಳಿಯನಿಗೆ ಬಳುವಳಿಯೆಂದು ಎಲ್ಲ ರಾಜ್ಯವನ್ನೂ ಹಿಂತಿರುಗಿಸುತ್ತೇನೆ. ಆಗುವುದಿದ್ದರೆ ನಾನು ಹೇಳಿದಂತೆ ಮಾಡು, ಏಳು ಎಂದನು ವಿಶ್ವಾಮಿತ್ರ.

ಪದ್ಯ

ಈ ರಾಜ್ಯದೊಡೆನೆನ್ನ ದೇಹವೀ ಸತಿಯೀ ಕು
ಮಾರರೊಳಗಾಗಿ ಹೋದಡೆ ಹೋಹುದಲ್ಲದವಿ
ಚಾರದಿಂ ಚಾಂಡಾಲಸತಿಯರಂ ನೆರೆದು ನಿರ್ಮಳವಪ್ಪ ರವಿಕುಲವನು
ನೀರೊಳಗೆ ನೆರಹಲಾಪವನಲ್ಲ ಮನ್ಮನವ
ನಾರೈದು ನೋಡಲಿಂಬಿಲ್ಲ ನುಡಿನುಡಿದು ನಿ
ಷ್ಕಾರಣಂ ಲಘುಮಾಡಬೇಡ ಮುನಿನಾಥ ಕೈಮುಗಿದು ಬೇಡಿದೆನೆಂದನು ೧೭೪

ಅರ್ಥ
ಈ ರಾಜ್ಯದೊಂದಿಗೆ ನನ್ನ ದೇಹ, ಈ ನನ್ನ ಮಡದಿ, ನನ್ನೀ ಕುಮಾರ- ಇವರೆಲ್ಲ ಹೋದರೂ ಹೋಗುತ್ತದಲ್ಲದೆ ಅವಿವೇಕದಿಂದ ನಡೆದು ಚಂಡಾಲ ಕನ್ಯೆಯರನ್ನು ಕೂಡಿ ಪರಿಶುದ್ಧವಾದ ಸೂರ್ಯವಂಶವನ್ನು ನೀರೊಳಗೆ ಮುಳುಗಿಸುವವನಲ್ಲ ನಾನು. ನನ್ನ ಮನಸ್ಸನ್ನು ಮತ್ತೆ ಮತ್ತೆ ಪರೀಕ್ಷಿಸಿ ಪ್ರಯೋಜನವಿಲ್ಲ. ಇಂಥ ಮಾತನ್ನು ಪದೇ ಪದೇ ಆಡುತ್ತ ನನ್ನನ್ನು ಕೀಳುಮಾಡಬೇಡ ಮುನಿನಾಥ, ನಿನ್ನನ್ನು ಕೈಮುಗಿದು ಬೇಡುತ್ತಿದ್ದೇನೆ.

ಪದ್ಯ

ಪೊಡವಿ ಮುನಿವಡೆ ಬಯಲು ಬಡಿವಡುಸಿರೊಡಲನಿರಿ
ವಡೆ ಕರೆವ ಮೊಲೆಹಾಲನೀಂಟುವಡೆ ಬಿಡದಡುವ
ಮಡಕೆಯುಂಬಡೆ ಹರಸಿ ರಕ್ಷಿಸುವ ನೀವೆನಗೆ ಶಾಪವೀವಡೆ ಧಟ್ಟಿಸಿ
ನುಡಿದು ರಕ್ಷಿಸುವವರಾರಾ ಮಾತದಂತಿರಲಿ
ಪೊಡವೀಶನನ್ಯಾಯಮಂ ಮಾಡಲೊಲ್ಲೆನೆಂ
ದಡೆ ಶಾಪ ಬಂದುದೆಂಬಪಕೀರ್ತಿ ಬಂದಡಂ ಬರಲಿ ಮುನಿ ಕೇಳೆಂದನು ೧೭೫

ಅರ್ಥ
ಈ ಭೂಮಿಯೇ ಕೋಪಿಸಿದರೆ, ಆಕಾಶವೇ ಹೊಡೆದರೆ, ಉಸಿರು ದೇಹವನ್ನು ಕತ್ತರಿಸಿದರೆ, ಹಾಲುಕೊಡುವ ಮೊಲೆಯೇ ಹಾಲನ್ನು ಕುಡಿದರೆ, ಅಡುಗೆ ಮಾಡುವ ಮಡಿಕೆಯೇ ಅನ್ನವನ್ನು ತಿಂದರೆ ಯಾರು ಏನು ಮಾಡಬಲ್ಲರು? ಹಾಗೆಯೇ ಹರಸಿ ರಕ್ಷಿಸಬೇಕಾದ ನೀವೇ ನನಗೆ ಶಾಪಕೊಡುತ್ತೇನೆಂದರೆ ನಿಮ್ಮನ್ನು ನಿಯಂತ್ರಿಸಿ ನನ್ನನ್ನು ಕಾಪಾಡುವವರು ಯಾರು ಮುನೀಶ್ವರಾ? ಆ ಮಾತು ಹಾಗಿರಲಿ, ರಾಜ ಅನ್ಯಾಯವನ್ನು ಮಾಡುವುದಿಲ್ಲ ಎಂದು ಹೇಳಿದುದರಿಂದ ಶಾಪಕ್ಕೊಳಗಾದ ಎಂಬ ಅಪವಾದ ನನಗೆ ಬರುವುದಿದ್ದರೆ ಬರಲಿ ಎಂದನು ರಾಜ.

ಹಂಚಿಕೊಳ್ಳಿ: https://shampa.org/ysl2

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ