ಸೆಪ್ಟೆಂಬರ್ 20, 2024
Vishveshvarayya

ಭಾರತ ದೇಶ ಜಗತ್ತಿನ ಭೂಪಟದಲ್ಲಿ ಅತ್ಯಂತ ಉನ್ನತವಾದ ಸ್ಥಾನಗೌರವವನ್ನು ಪಡೆದಿದೆ. ಅದೆಷ್ಟೋ ಸಾವಿರ ವರ್ಷಗಳ ಹಿಂದಿನಿಂದಲೇ ಸರ್ವಕ್ಷೇತ್ರಗಳಲ್ಲೂ ಸರ್ವಪ್ರಥಮವೆನ್ನಿಸುವ ಅಸಾಧಾರಣವಾದ ವಿದ್ವತ್ತನ್ನು ಗಳಿಸಿ, ಬೆಳೆಸಿದ ಭಾರತಕ್ಕೆ ಭಾರತೀಯರು ಹೆಮ್ಮೆ ಪಡುವಂಥ ಭವ್ಯ ಪರಂಪರೆ ಇದೆ. ಜ್ಞಾನ, ವಿಜ್ಞಾನ ಶಾಖೆಗಳಲ್ಲಿ ಹೆಸರಾಂತ ಮಹಾನ್‌ ಚೇತಸರು ಭಾರತದಲ್ಲಿ ಆಗಿಹೋಗಿದ್ದಾರೆ. ಅಂಥವರಲ್ಲಿ ಒಬ್ಬರು ಇಂಜಿನಿಯರಿಂಗ್ ಕ್ಷೇತ್ರದ ಪಿತಾಮಹ ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯನವರು. ಇವತ್ತು ದೇಶಾದ್ಯಂತ ಸೆಪ್ಟೆಂಬರ್‌ ೧೫ ನ್ನು ಇಂಜಿನಿಯರ್ಸ್‌ ದಿನಾಚರಣೆ ಎಂದು ಆಚರಿಸುತ್ತಾರೆ. ಏಕೆಂದರೆ ಆದಿನ ಸರ್‌ ಎಂ. ವಿಶ್ವೇಶ್ವರಯ್ಯನವರ ಜನ್ಮದಿನ.

ಬಹುರಾಷ್ಟ್ರೀಯ ಕಂಪೆನಿಗಳು ಭಾರತಕ್ಕೆ ಬಂದ ಇತ್ತೀಚೆಗಿನ ದಶಕಗಳಲ್ಲಿ ಪ್ರತಿ ಮನೆಗೂ ಒಬ್ಬಿಬ್ಬರು ಇಂಜಿನಿಯರ್‌ಗಳಿದ್ದಾರೆ. ನಾಲ್ಕೈದು ದಶಕಗಳ ಹಿಂದೆ ಯಾರಾದರೂ ಇಂಜಿನಿಯರಿಂಗ್‌ ಓದುತ್ತಾನೆಂದರೆ ಅದು ವಿಶೇಷ ಸಾಧನೆ ಮತ್ತು ಊರವರೆಲ್ಲರೂ ಅಭಿಮಾನ ಪಡುವ ವಿಚಾರವಾಗಿತ್ತು. ಹಾಗಿರುವಾಗ ಅದಕ್ಕೂ ನೂರು ವರ್ಷಗಳ ಹಿಂದೆಯೇ ನಮ್ಮ ನಾಡಿನಲ್ಲಿ ಭಾರತದ ಅತಿದೊಡ್ಡ ಮುತ್ಸದ್ಧಿ ಮೇಧಾವಿ, ಇಂಜಿನಿಯರ್ ಮೋಕ್ಷಗುಂಡಂ ಸರ್.ಎಂ.ವಿಶ್ವೇಶ್ವರಯ್ಯನವರು ಜನ್ಮತಾಳಿದ್ದರೆಂದರೆ! ತಮ್ಮ ನಿರಂತರ ಪರಿಶ್ರಮ, ಸಾಧನೆ, ದೂರದರ್ಶಿತ್ವ, ಜನೋಪಯೋಗೀ ಕಾರ್ಯಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲೂ ಸುವಿಖ್ಯಾತರಾಗಿ ಮೆರೆದಿದ್ದ ಅವರ ಹೆಸರಿನ ಉಚ್ಚಾರದಲ್ಲೇ ಭಾರತೀಯರನ್ನು ರೋಮಾಂಚನಗೊಳಿಸುವ ಶಕ್ತಿಯಿದೆ. ವಿಶ್ವೇಶ್ವರಯ್ಯನವರನ್ನು ನಮ್ಮ ನಾಡಿನ ಹೆಮ್ಮೆಯ ಪುತ್ರನೆಂದೂ ಅವರು ಹುಟ್ಟಿದ ನಾಡು ನಮ್ಮದೆಂದೂ ಹೇಳಿಕೊಳ್ಳುವ ಭಾಗ್ಯ ಯಾರಿಗಿದೆಯೋ ಅವರು ನಿಜಕ್ಕೂ ಧನ್ಯರು. ಭಾರತೀಯ ಭಾಗ್ಯವಿಧಾತನೆಂದು ಕರೆಯಲ್ಪಟ್ಟ ಸರ್. ಎಂ.ವಿ. ಅವರು ಭಾರತ ಕಂಡ ಅತ್ಯುತ್ತಮ ವಾಸ್ತುಶಿಲ್ಪಿ, ತಂತ್ರಜ್ಞಾನಿ. ಔದ್ಯಮಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಿಗೂ ಇವರ ಕೊಡುಗೆ ಅಪಾರ.

ಕ್ರಿ.ಶ. ೧೮೬೧, ಸೆಪ್ಟೆಂಬರ್‌ ೧೫ರಂದು ಈಗಿನ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಸಂಸ್ಕೃತ ವಿದ್ವಾಂಸರೂ ಆಯುರ್ವೇದ ಪಂಡಿತರೂ ಆಗಿದ್ದ ಶ್ರೀನಿವಾಸ ಶಾಸ್ತ್ರಿ ಹಾಗೂ ಅವರ ಮಡದಿ ವೆಂಕಟಲಕ್ಷ್ಮಮ್ಮನವರ ಸುಪುತ್ರರಾಗಿ ಜನಿಸಿದವರು ಸರ್ ಎಂ.ವಿಶ್ವೇಶ್ವರಯ್ಯನವರು. ಇವರ ಪೂರ್ವಿಕರು ಆಂಧ್ರಪ್ರದೇಶದ ಮೋಕ್ಷಗುಂಡಂನವರು. ಹಾಗಾಗಿ ಅವರ ಹೆಸರಿನ ಜೊತೆಯಲ್ಲಿ ಮೋಕ್ಷಗುಂಡಂ ಸೇರಿದ್ದರೂ ಎಂ.ವಿ. ಅವರು ಹುಟ್ಟುವ ಸು.೩೦೦ ವರ್ಷಗಳ ಹಿಂದೆಯೇ ಅವರ ಪೂರ್ವಿಕರು ಮೋಕ್ಷಗುಂಡಂನಿಂದ ಕನ್ನಡ ನಾಡಿಗೆ ಬಂದು ವಾಸಮಾಡಲು ಆರಂಭಿಸಿದ್ದರು.

ಸರ್‌ ಎಂ.ವಿ. ಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟಿದೂರಿನ ಶಾಲೆಯಲ್ಲಿ ಪೂರೈಸಿದರು. ಬಡತನವನ್ನು ಬೆನ್ನಲ್ಲಿ ಕಟ್ಟಿಕೊಂಡೇ ಹುಟ್ಟಿದ ಅವರು ತಮ್ಮ ಹನ್ನೆರಡನೆಯ ವಯಸ್ಸಿಗೇ ತಂದೆಯನ್ನು ಕಳೆದುಕೊಂಡರು. ಅವರಿವರ ಮನೆಯಲ್ಲಿ ಕೂಲಿಮಾಡಿ ಮಗನನ್ನು ಸಾಕಿದ ತಾಯಿಗೆ ಮಗನನ್ನು ಓದಿಸಲು ಅನುಕೂಲವಿಲ್ಲ. ಆದರೆ ಮಗನಿಗೆ ಓದಲೇಬೇಕೆಂಬ ಆಕಾಂಕ್ಷೆ. ಮಗನ ಆಸೆಯ ಕುಡಿಯನ್ನು ಚಿವುಟಲು ಮನಸ್ಸು ಬಾರದ ಆಕೆ ತಮ್ಮ ಬಂಧುವೊಬ್ಬರ ನೆರವಿನಿಂದ ಬೆಂಗಳೂರಿನ ಹೈಸ್ಕೂಲಿನಲ್ಲಿ ಮಗನನ್ನು ಓದಿಸುವ ವ್ಯವಸ್ಥೆ ಮಾಡಿದರು. ಹೈಸ್ಕೂಲು ಕೊನೆಯ ವರ್ಷದಲ್ಲಿ ಪರೀಕ್ಷೆಯ ಶುಲ್ಕವನ್ನು ಕಟ್ಟಲು ಹಣವಿಲ್ಲದೆ ಆ ತಾಯಿ ಮನೆಯ ಪಾತ್ರೆಯನ್ನೇ ಅಡವಿಟ್ಟರೆ, ಮಗ ೩೫ ಕಿ. ಮೀ. ಕಾಲ್ನಡಿಗೆಯಲ್ಲೇ ಬಂದು ಪರೀಕ್ಷೆಗೆ ಬರೆದರು. ಅಷ್ಟು ಚಿಕ್ಕ ವಯಸ್ಸಿಗೇ ಜೀವನ ಪ್ರೀತಿ, ಮಹತ್ವಾಕಾಂಕ್ಷೆ, ಅಡೆತಡೆಗಳಿಗೆ ಜಗ್ಗದ ಮನಸ್ಸು, ಆತ್ಮವಿಶ್ವಾಸ, ದೃಢಸಂಕಲ್ಪಗಳು ಅವರಲ್ಲಿ ಮನೆಮಾಡಿದ್ದುವು. ಎಸ್ ಎಸ್‌.ಎಲ್. ಸಿ. ಯಲ್ಲಿ ಅತ್ಯುತ್ತಮ ಅಂಕಗಳಿಂದ ಪಾಸಾದ ಅವರು ವಿದ್ಯಾರ್ಥಿವೇತನದ ಮೂಲಕ ಕಾಲೇಜು ಶಿಕ್ಷಣವನ್ನು ಪೂರೈಸಿದರು. ೧೮೮೧ ರಲ್ಲಿ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಪದವಿಯನ್ನು ಪ್ರಥಮದರ್ಜೆಯಲ್ಲಿ ಪಾಸಾಗಿ ಉನ್ನತ ವಿದ್ಯಾಭ್ಯಾಸಕ್ಕೆ ಪೂನಾದ ಇಂಜಿನಿಯರಿಂಗ್‌ ಕಾಲೇಜು ಸೇರಿದರು. ಪ್ರತಿ ತರಗತಿಯಲ್ಲೂ ಅತ್ಯುತ್ತಮ ಅಂಕಗಳನ್ನು ಗಳಿಸಿ ೧೮೮೩ ರಲ್ಲಿ ಮೂರು ವರ್ಷಗಳ ಇಂಜಿನಿಯರಿಂಗ್ ಕೋರ್ಸನ್ನು ಎರಡೂವರೆ ವರ್ಷಗಳಲ್ಲಿ ಪೂರೈಸಿ ಪ್ರತಿಷ್ಠಿತ ಜೇಮ್ಸ್‌ ಬರ್ಕ್ಲಿ ಬಹುಮಾನವನ್ನೂ ತಮ್ಮದಾಗಿಸಿಕೊಂಡರು.

ಜೀವನಯಾಪನೆಗಾಗಿ ಎಂ.ವಿ. ಅವರಿಗೆ ಉದ್ಯೋಗವೊಂದು ಅತ್ಯಗತ್ಯವಾಗಿತ್ತು. ೧೮೮೪ರಲ್ಲಿ ಮುಂಬೈಯ ಲೋಕೋಪಯೋಗಿ (ಪಿ.ಡಬ್ಲ್ಯೂ.ಡಿ.)ಇಲಾಖೆಯಲ್ಲಿ ಅವರು ಭಾರತದ ಮೊತ್ತಮೊದಲ ಅಸಿಸ್ಟೆಂಟ್‌ ಸಿವಿಲ್‌ ಇಂಜಿನಿಯರ್‌ ಆಗಿ ವೃತ್ತಿಜೀವನ ಆರಂಭಿಸಿದರು. ಅನಂತರ ಪೂನಾದಲ್ಲಿ ನೀರಾವರಿ ಯೋಜನೆಯ ಅಧಿಕಾರಿಯಾಗಿ ನಿಯುಕ್ತರಾಗಿ ದಕ್ಷಿಣ ಭಾರತದ ನೀರಾವರಿ ಯೋಜನೆಯ ಕಾರ್ಯಭಾರದಲ್ಲಿ ಅಗ್ರಗಣ್ಯ ನಾಯಕರಾದರು.

ಯಾವುದೇ ಸಂಪನ್ಮೂಲವಾಗಲೀ ತಂತ್ರಜ್ಞಾನವಾಗಲೀ ಇಲ್ಲದಿದ್ದ ಕಾಲದಲ್ಲಿ ಸರ್.ಎಂ.ವಿ.ಯವರು ತಮ್ಮ ಆಲೋಚನೆ, ಚಿಂತನೆ, ವಿವೇಚನೆ, ದಕ್ಷತೆ, ದೂರದರ್ಶಿತ್ವಗಳಿಂದಲೇ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸುತ್ತ ಮುನ್ನಡೆದರು. ೧೮೯೩-೯೪ ರ ಸುಮಾರಿನಲ್ಲಿ ಸಿಂಧೂನದಿಯಿಂದ ಸುಕ್ಕೂರ್‌ ಎಂಬ ಪಟ್ಟಣಕ್ಕೆ ನೀರು ಸರಬರಾಜುಮಾಡುವ ಯೋಜನೆಯನ್ನು ಫಲಪ್ರದಗೊಳಿಸಿದ ಅವರು ನೀರಾವರಿ ವ್ಯವಸ್ಥೆಯನ್ನು ಸುಧಾರಿಸಲು ಬ್ರಿಟಿಷ್‌ ಸರಕಾರ ರಚಿಸಿದ ಸಮಿತಿಯ ಸದಸ್ಯರಾಗಿ ನೇಮಕಗೊಂಡರು. ೧೯೦೪ರಲ್ಲಿ ಮುಂಬೈಯಿಂದ ಸ್ಯಾನಿಟರಿ ಇಂಜಿನಿಯರ್‌ ಆಗಿ ಪದೋನ್ನತಿ ಪಡೆದ ಮೊದಲ ಭಾರತೀಯರು ಅವರಾಗಿದ್ದರು. ೧೯೦೬ರಲ್ಲಿ ಬ್ರಿಟಿಷ್‌ ಸರಕಾರ ಅರಬದೇಶದ ಯಮೆನ್‌ನ ಆಡೆನ್‌ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಎಂ.ವಿ. ಅವರನ್ನು ಅಲ್ಲಿಗೆ ಕಳುಹಿಸಿತು. ಎಂ.ವಿ. ಅವರು ಆ ಪ್ರದೇಶದ ಸಂಪೂರ್ಣ ಅಧ್ಯಯನವನ್ನು ಮಾಡಿ ನಗರದಿಂದ ೧೮ ಕಿ. ಮೀ. ದೂರದಲ್ಲಿ ಮಳೆನೀರು ಇಂಗುವ ಜಾಗದಲ್ಲಿ ಜಲಾಶಯವಿರುವುದನ್ನು ಪತ್ತೆಹಚ್ಚಿದರು. ತಕ್ಷಣ ಕಾರ್ಯಪ್ರವೃತ್ತರಾಗಿ ಆಡೆನ್‌ ನಗರದ ಜನರ ಕುಡಿಯುವ ನೀರಿನ ಸಂಕಷ್ಟವನ್ನು ಶಾಶ್ವತವಾಗಿ ಬಗೆಹರಿಸಿದರು. ಈ ಅನುಪಮ ಸೇವೆಗಾಗಿ ಬ್ರಿಟಿಷ್‌ ಸರಕಾರ ಅವರಿಗೆ ಕೈಸರ್-ಎ-ಹಿಂದ್‌ ಎಂಬ ಬಿರುದನ್ನು ನೀಡಿ ಗೌರವಿಸಿತು.

ನೀರಾವರಿ ಯೋಜನೆಯ ಅಧಿಕಾರಿಯಾಗಿ ಸರ್‌ ಎಂ.ವಿ.ಯವರು ದೇಶ, ವಿದೇಶಗಳಲ್ಲಿ ಸಂಚಾರ ಮಾಡುತ್ತಿದ್ದರು. ಆ ಸಂಚಾರದಲ್ಲಿ ಅವರ ಬಹುಳ ಮುಖ್ಯವಾದ ಗುರಿ ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಅಧ್ಯಯನವನ್ನು ಪಡೆಯುವುದೇ ಆಗಿತ್ತು. ಚೀನಾ, ಜಪಾನ್‌ ಮುಂತಾದ ದೇಶಗಳಿಗೆ ಹೋಗಿ ತಂತ್ರಜ್ಞಾನದ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದರು. ಅತಿವೃಷ್ಟಿಯ ಕಾರಣ ನೆರೆಹಾವಳಿಯುಂಟಾಗಿ ಊರೆಲ್ಲ ಕೊಚ್ಚಿಹೋಗುವ ಸಂದರ್ಭಗಳನ್ನು ಗಮನಿಸಿದ ಅವರು ನದಿಯಿಂದ ಹರಿಯುವ ನೀರಿನ ರಭಸವನ್ನು ನಿಯಂತ್ರಿಸಿ, ಆ ನೀರನ್ನು ಅಣೆಕಟ್ಟಿಗೆ ಸಮಸ್ಯೆಯಾಗದಂತೆ ಶೇಖರಿಸಿ, ಅತಿಯಾದ ನೀರನ್ನು ಸ್ವಯಂ ಚಾಲಿತ ದ್ವಾರಗಳ ಮೂಲಕ ಹರಿಯಿಸುವ ವ್ಯವಸ್ಥೆಯನ್ನು ಕಂಡುಹಿಡಿದು ನೆರೆಹಾವಳಿಗೊಳಗಾಗುವ ನಗರಗಳ ಸಮಸ್ಯೆಯನ್ನು ಪರಿಹಾರ ಮಾಡುವ ಕಾರ್ಯಭಾರದಲ್ಲಿ ಮುಂಚೂಣಿಯ ಪಥಿಕರಾಗಿ ತೊಡಗಿಸಿಕೊಂಡರು. ಮಾತ್ರವಲ್ಲ ಶೇಖರಿಸಿದ ನೀರನ್ನು ನೀರಾವರಿಗೆ ಅನುಕೂಲ ಮಾಡಿಕೊಡುವುದೂ ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಅಣೆಕಟ್ಟುಗಳಲ್ಲಿ ಉಕ್ಕಿನ ಸ್ವಯಂಚಾಲಿತ ಫ್ಲಡ್‌ಗೇಟ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೊಂಡು ಯಶಸ್ವಿಯಾಗಿ ಪೂರೈಸಿದರು. ಇದು ಅಪಾರ ಜನಮೆಚ್ಚುಗೆಯನ್ನು ಗಳಿಸಿತು. ೧೯೦೩ರಲ್ಲಿ ಪೂನಾದ ಖಡಕ್ವಾಸ್ಲಾದಲ್ಲಿ ಮೊದಲನೆಯ ಫ್ಲಡ್ ಗೇಟುಗಳು ಸ್ಥಾಪಿತವಾದುವು. ಸರಕಾರ ಇದಕ್ಕಾಗಿ ಅವರಿಗೆ ಬಹುದೊಡ್ಡ ಸಂಭಾವನೆಯನ್ನು ಕೊಡಲಿಚ್ಛಿಸಿದರೂ ಈ ಯೋಜನೆ ತಮ್ಮ ಕರ್ತವ್ಯದ ಭಾಗವೆಂದು ಪರಿಗಣಿಸಿದ ಎಂ.ವಿಯವರು ಸರಕಾರ ಕೊಡುವ ಸಂಭಾವನೆಯನ್ನು ಪಡೆಯಲಿಲ್ಲ. ಸಾಧನೆಯಿಂದ ಮಾತ್ರವಲ್ಲ ಸ್ವಭಾವದಿಂದಲೂ ಮಹಾನ್‌ ಚೈತನ್ಯರೆನಿಸಿದವರು ಎಂ.ವಿ.ಯವರು.

ಪೂನಾದಲ್ಲಿ ವಿಶ್ವೇಶ್ವರಯ್ಯನವರು ಮಾಡಿದ ಅತ್ಯಪೂರ್ವ ಸಾಧನೆ ಅವರನ್ನು ಪುನಃ ಅಂಥ ಕಾರ್ಯಭಾರಗಳಿಗೆ ಕೈಬೀಸಿ ಕರೆಯತೊಡಗಿತು. ಹೈದರಾಬಾದ್‌ನ ಮೂಸ ಮತ್ತು ಇಸಾ ನದಿಗಳ ನೀರು ಪ್ರವಾಹವಾಗಿ ಉಕ್ಕಿಹರಿದು ಸುತ್ತುಮುತ್ತಲಿನ ವಿಶಾಲವಾದ ಪ್ರದೇಶ ಜಲಾವೃತ್ತವಾಗಿ ಬೆಳೆ, ಆಸ್ತಿಗಳು ಹಾನಿಗೀಡಾಗುತ್ತಿದ್ದುವು. ಇದು ಪ್ರತಿವರ್ಷದ ಸಮಸ್ಯೆಯಾಗಿತ್ತು. ೧೯೦೮-೦೯ರಲ್ಲಿ ವಿಶ್ವೇಶ್ವರಯ್ಯನವರು ವಿದೇಶಪ್ರವಾಸವನ್ನು ಮಾಡುತ್ತಿದ್ದರು. ಒಂದುದಿನ ಅವರಿಗೆ ಹೈದ್ರಾಬಾದಿನಿಂದ ನಿಜಾಮರ ಕರೆ ಬಂತು. ಕೂಡಲೇ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ನಿಜಾಮರ ಕೋರಿಕೆಯಂತೆ ವಿಶೇಷ ಅಧಿಕಾರವನ್ನು ಪಡೆದು ಕರ್ತವ್ಯಕ್ಕೆ ಹಾಜರಾದ ಎಂ.ವಿ. ಅವರು ನಗರಕ್ಕೆ ಹದಿನಾರು ಮೈಲಿ ದೂರದಲ್ಲಿ ಓಸ್ಮಾನ್‌ ಮತ್ತು ಹಿದಾಯತ್‌ ಅಣೆಕಟ್ಟುಗಳನ್ನು ನಿರ್ಮಿಸಿ ಒಳಚರಂಡಿ ಮತ್ತು ನೀರ್ಗಾಲುವೆ ವ್ಯವಸ್ಥೆಯನ್ನು ಮಾಡಿ ಮೂಸ ನದಿಯ ಅಬ್ಬರವನ್ನು ಅಂಕೆಗೆ ತಂದರು. ಅಲ್ಲಿಯೂ ಸ್ವಯಂಚಾಲಿತ ಫ್ಲಡ್‌ ಗೇಟ್‌ಗಳ ಮೂಲಕ ನೀರನ್ನು ತಡೆಗಟ್ಟುವ ಯೋಜನೆಯಲ್ಲಿ ಸಂಪೂರ್ಣ ಗೆಲುವನ್ನು ಪಡೆದ ಅವರು ಇನ್ನಿತರ ರಾಜ್ಯಗಳಿಗೂ ಇದರ ಸೌಲಭ್ಯವನ್ನು ವಿಸ್ತರಿಸಿದರು. ಪೂನಾದ ಗ್ವಾಲಿಯರ್‌ ಟಿಗ್ರಾ ಡ್ಯಾಂ ಮತ್ತು ೧೯೧೨ರಲ್ಲಿ ಕರ್ನಾಟಕದ ಕನ್ನಂಬಾಡಿ ಕಟ್ಟೆಯೆಂದೇ ಪ್ರಸಿದ್ಧವಾದ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಇದೇ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿದರು.

ದೇಶವಿದೇಶಗಳ ಸಂಚಾರವನ್ನು ಕೈಗೊಂಡು ತಮ್ಮ ವೃತ್ತಿಯಲ್ಲಿ ಅಪಾರ ಅನುಭವ, ವಿದ್ವತ್ತುಗಳನ್ನು ರೂಢಿಸಿಕೊಂಡ ಸರ್. ಎಂ.ವಿ. ಅವರನ್ನು ೧೯೦೯ ರಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಾಧವ ರಾವ್‌ ಅವರು ಮೈಸೂರು ರಾಜ್ಯದ ಪ್ರಧಾನ ಇಂಜಿನಿಯರ್‌ ಹುದ್ದೆಯನ್ನು ವಹಿಸುವಂತೆ ಕೋರಿದರು. ಪರಿಶ್ರಮ ಮತ್ತು ಸಾಧನೆಯ ವಿಚಾರದಲ್ಲಿ ಮಹತ್ವಾಕಾಂಕ್ಷೆಯುಳ್ಳ ಸರ್‌ ಎಂ.ವಿ.ಯವರು ತಾಂತ್ರಿಕ ವಿದ್ಯಾಭ್ಯಾಸ ಮತ್ತು ಭಾರೀ ಕಾರ್ಖಾನೆಗಳ ಅಭಿವೃದ್ಧಿಗೆ ಅವಕಾಶವಿದ್ದರೆ ಮಾತ್ರ ಬರುವುದಾಗಿ ಹೇಳಿದರು. ಅವರ ನಿಬಂಧನೆಯನ್ನು ದಿವಾನರು ಒಪ್ಪಿದರು. ಆ ಸಮಯದಲ್ಲಿ ಅವರು ಮೂಸ ನದಿಯ ಸಮಸ್ಯೆಯ ಪರಿಹಾರೋಪಾಯ ಕಾರ್ಯಭಾರದಲ್ಲಿದ್ದರು. ಕೈಗೊಂಡ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸಿದ ಬಳಿಕವೇ ಬ್ರಿಟಿಷ್‌ ಸರಕಾರದ ಹುದ್ದೆಗೆ ಶಾಶ್ವತ ವಿದಾಯಕೋರಿ ಮೈಸೂರು ರಾಜ್ಯದ ಮುಖ್ಯ ಇಂಜಿನಿಯರ್‌ ಆಗಿ ನೇಮಕಗೊಂಡರು.

ಸರ್. ಎಂ.ವಿ. ಅವರು ಉದ್ಯಮದಲ್ಲಿ ಪ್ರಗತಿಗಾಮೀ ಚಿಂತಕರೂ ಅಸಾಧಾರಣ ಬುದ್ಧಿವಂತರೂ ಆಗಿದ್ದರು. ೧೯೧೧ರಲ್ಲಿ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಮೈಸೂರು ಇಕನಾಮಿಕ್ಸ್‌ ಕಾನ್ಫರೆನ್ಸ್‌ (ಮೈಸೂರು ಸಂಪದಭಿವೃದ್ಧಿ ಸಮಾಜ) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸೂಚನೆ ನೀಡಿದರು. ಎಂ.ವಿ. ಅವರ ಅಹವಾಲು ಕೂಡಲೇ ಅಂಗೀಕೃತವಾಗಿ ೩ ಸಮಿತಿಗಳು ರಚನೆಗೊಂಡವು.

೧)ಕಾರ್ಖಾನೆಗಳ ಕೈಗಾರಿಕಾ ಸಮಿತಿ,
೨)ವಿದ್ಯಾಸಮಿತಿ,
೩) ಭೂವ್ಯವಸಾಯ ಸಮಿತಿ.

ತಮ್ಮ ಬದ್ಧತೆ, ದಕ್ಷತೆ, ದೂರಾಲೋಚನೆ ಮತ್ತು ಕಾರ್ಯಕ್ಷಮತೆಯ ಮೂಲಕ ಸರ್. ಎಂ.ವಿ. ಔದ್ಯೋಗಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ ಮತ್ತು ವ್ಯವಸಾಯ ಕ್ಷೇತ್ರಗಳ ಸರ್ವತೋಮುಖ ವಿಕಾಸಕ್ಕೆ ಭದ್ರವಾದ ಬುನಾದಿಯನ್ನು ಹಾಕಿದರು. ಈ ಮೂರೂ ಯೋಜನೆಗಳು ಸ್ವಾಸ್ಥ್ಯಸಮಾಜದ ದೃಷ್ಟಿಯಿಂದ ಅತ್ಯಗತ್ಯವಾದ ಯೋಜನೆಗಳೇ ಆಗಿದ್ದುವು. ಇವುಗಳಲ್ಲಿ ಎರಡನೆಯ ವಿದ್ಯಾಯೋಜನೆಯ ಅಡಿಯಲ್ಲಿ ವಿಶ್ವ ವಿದ್ಯಾಲಯ ಮತ್ತು ಕನ್ನಡ ಅಕಾಡೆಮಿಯ ಸ್ಥಾಪನೆ ಅವರ ಉದ್ದೇಶವಾಗಿತ್ತು. ಇವತ್ತು ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡ ಆಲದ ಮರದಂತೆ ವಿಶಾಲವಾಗಿ ಬೆಳೆದು ಕರ್ನಾಟಕದ ಜಿಲ್ಲೆ ಜಿಲ್ಲೆಗಳಲ್ಲಿ ಶಾಖೋಪಶಾಖೆಗಳನ್ನು ತೆರೆದು ಕನ್ನಡ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುವುದರ ಮೂಲದಲ್ಲಿ ವಿಶ್ವೇಶ್ವರಯ್ಯನವರ ದೂರದರ್ಶಿತ್ವವಿದೆ. ಕನ್ನಡ ನಾಡು, ನುಡಿ, ಜನಗಳನ್ನು ಒಗ್ಗೂಡಿಸುವ ದಿಸೆಯಲ್ಲಿ ಪರಿಷತ್ತಿನ ಪರಿಕಲ್ಪನೆಯನ್ನು ಹುಟ್ಟುಹಾಕಿದವರೇ ಸರ್‌ ಎಂ.ವಿ. ಯವರು. ಕನ್ನಡಕ್ಕೂ ಎಂ.ವಿ.ಗೂ ಎಲ್ಲಿಂದೆಲ್ಲಿಯ ಸಂಬಂಧವೆಂದು ಇವತ್ತಿನ ಇಂಜಿನಿಯರುಗಳು ಯೋಚನೆಮಾಡಬಹುದು. ಆದರೆ ಭಾಷೆ ಮತ್ತು ಸಾಹಿತ್ಯವೆನ್ನುವುದು ಎಲ್ಲ ಸಂಬಂಧಗಳನ್ನೂ ಜೋಡಿಸುವ ಬೆಸುಗೆ. ಅದಕ್ಕೆ ಕಲೆ, ವಿಜ್ಞಾನ, ವಾಣಿಜ್ಯ ಎಂಬ ಭೇದವಿಲ್ಲ. ಭಾಷೆ ಮತ್ತು ಸಾಹಿತ್ಯವೇ ಎಲ್ಲ ಜ್ಞಾನಗಳಿಗೂ ಮೂಲಾಧಾರ. ಯಾವುದೇ ಕ್ಷೇತ್ರವನ್ನು ಸರಿಯಾಗಿ ಮುನ್ನಡೆಸಬೇಕಿದ್ದರೆ ಸಾಹಿತ್ಯದ ಮನಸ್ಸು, ವಿಜ್ಞಾನದ ಬುದ್ಧಿ, ಭಾಷೆಯಕಣ್ಣುಗಳು ಇರಲೇಬೇಕು. ಅವಿಲ್ಲದಿದ್ದರೆ ಇವು ಯಾವುವೂ ಇರುವುದಿಲ್ಲ. ಸುಧಾರಣೆಯ ವಿಚಾರದಲ್ಲಿ ಉಳಿದವರು ಮೈಲಿ ದೂರ ಯೋಚಿಸುವವರಾದರೆ ಎಂ.ವಿ. ಅವರು ಯೋಜನ ಯೋಜನಗಳ ಆಚೆಗೂ ಯೋಚಿಸುತ್ತಿದ್ದರು. ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು, ವಿಚಾರವಂತರಾಗಬೇಕು. ಆಗಲೇ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬ ನಿಲುವು ಅವರದಾಗಿತ್ತು. ವಿದ್ಯಾಯೋಜನೆಯ ಅಡಿಯಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ ಅವರು, ಹಿಂದುಳಿದವರ ವಿದ್ಯಾಭ್ಯಾಸಕ್ಕೆ ಸರಕಾರದ ಸಹಾಯಧನ ಸಿಗುವಂತೆ ಕೂಡ ಮಾಡಿದರು. ಮೈಸೂರು, ಬೆಂಗಳೂರುಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಬಯಸುವ ಹೆಣ್ಣುಮಕ್ಕಳಿಗೆ ಕಾಲೇಜು, ವಸತಿ ಸೌಲಭ್ಯಗಳ ವ್ಯವಸ್ಥೆಯನ್ನು ಮಾಡಿದರು. ೧೯೧೬ರಲ್ಲಿ ಮೈಸೂರು ವಿ.ವಿ, ಸಾರ್ವಜನಿಕ ಗ್ರಂಥಾಲಯ, ಬೆಂಗಳೂರು ಪ್ರೆಸ್ ಇವೆಲ್ಲವೂ ಸ್ಥಾಪನೆಯಾದುವು. ಕೈಗಾರಿಕೋದ್ಯಮದ ಬೆಳವಣಿಗೆಗೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ, ಜಯಚಾಮರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯ, ಐ.ಐ.ಟಿ, ಪಾಲಿಟೆಕ್ನಿಕ್‌ ಕಾಲೇಜುಗಳು, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಸ್ಥಾಪಿತವಾದುವು. ಭೂ ವ್ಯವಸಾಯ ಸಮಿತಿಯ ಅಡಿಯಲ್ಲಿ ಮೈಸೂರು ಶ್ರೀಗಂಧದ ಎಣ್ಣೆ ಮತ್ತು ಸೋಪ್‌ ಫ್ಯಾಕ್ಟರಿ, ಕೃಷಿ ವಿದ್ಯಾಲಯ, ಮೈಸೂರು ಬ್ಯಾಂಕ್‌, ದಿ ಸೆಂಚುರಿ ಕ್ಲಬ್‌ – ಹೀಗೆ ಅಸಂಖ್ಯಾತ ಅಭಿವೃದ್ಧಿಶೀಲ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದರು. ಈ ಎಲ್ಲಕ್ಕೂ ಕಿರೀಟವಿಟ್ಟಂತೆ ಸರ್. ಎಂ.ವಿಯವರು ಕನ್ನಂಬಾಡಿ ಅಣೆಕಟ್ಟಿನ ಯೋಜನೆಯನ್ನು ಕೈಗೆತ್ತಿಕೊಂಡರು. ಈ ಪರಿಕಲ್ಪನೆ ಭಾರತದ ಚರಿತ್ರೆಯಲ್ಲೇ ಮೊತ್ತಮೊದಲ ಹೆಗ್ಗಳಿಕೆ. ಭಾರತದಲ್ಲೇ ಅತಿ ದೊಡ್ಡ ನೀರಾವರಿ ಅಣೆಕಟ್ಟು ಇದಾಗಿತ್ತು. ಈ ಅಣೆಕಟ್ಟಿನಿಂದಾಗಿ ೧೨೦,೦೦೦ ಎಕ್ರೆ ಬಂಜರು ಭೂಮಿಗೆ ನೀರಿನ ಸರಬರಾಜು, ಮೈಸೂರು ಮತ್ತು ಬೆಂಗಳೂರು ನಗರವಾಸಿಗಳಿಗೆ ಕುಡಿಯುವ ನೀರಿನ ಅನುಕೂಲ ಬಂತು. ಇವತ್ತು ಮೈಸೂರಿನ ಕೆ. ಆರ್. ಎಸ್. ಭಾರತದ ಅತಿ ಸುಂದರ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದ್ದು‌ ಮೈಸೂರಿಗೆ ಹೋಗುವ ಪ್ರವಾಸಿಗಳು ಬೆಳಗ್ಗೆ ಚಾಮುಂಡಿ ಬೆಟ್ಟವಾದರೆ ಸಂಜೆ ಕನ್ನಂಬಾಡಿ ಕಟ್ಟೆಗೆ ಧಾವಿಸುತ್ತಾರೆ. ಈ ಯೋಜನೆಯ ಕಾರ್ಯಭಾರವನ್ನು ನಿರ್ವಹಿಸುವಲ್ಲಿ ಎಂ.ವಿ. ಅವರು ತೋರಿದ ಮುತ್ಸದ್ಧಿತನ, ದೂರದೃಷ್ಟಿ, ಸಮಾಜಮುಖೀ ಚಿಂತನೆಗಳು ಮೈಸೂರು ಸಂಸ್ಥಾನದ ಭಾಗ್ಯವಿಧಾತ, ಮೈಸೂರಿನ ಸೃಷ್ಟಿಕರ್ತನೆಂಬ ಹೆಗ್ಗಳಿಕೆಗೆ ಅವರನ್ನು ಭಾಜನರನ್ನಾಗಿಸಿದುವು. ಈ ಸಂಸ್ಥೆಗಳನ್ನು ಕಟ್ಟುವ ಸಂದರ್ಭದಲ್ಲಿ ಎಂ. ವಿ. ಎಷ್ಟು ನಿಸ್ಪೃಹರಾಗಿದ್ದರೆಂದರೆ ತಾವು ಯೋಜನೆಯಿಂದ ಸಂಭಾವನೆಯನ್ನು ಪಡೆಯದೆ ತಮಗೆ ಭದ್ರಾವತಿಯ ಉಕ್ಕಿನ ಕಾರ್ಖಾನೆಯ ಸೇವೆಗಾಗಿ ಬಂದ ಸಂಭಾವನೆಯ ಎರಡು ಲಕ್ಷ ಹಣವನ್ನು ಸ್ವಯಂಸ್ಫೂರ್ತಿಯಿಂದ ಅನುದಾನ ಮಾಡಿದರು. ಇವತ್ತು ಯಾವುದಾದರೂ ಪ್ರೊಜೆಕ್ಟ್‌ ಕೆಲಸಕ್ಕೆ ಸರಕಾರದ ಹಣವನ್ನು ಮಂಜೂರು ಮಾಡಿಸಿ ಅದರಿಂದ ತಮಗೆಷ್ಟು ನುಂಗಲು ಸಾಧ್ಯ ಎಂದು ಯೋಚಿಸುವವರು ಸ್ವಲ್ಪ ಹೊತ್ತು ಸರ್‌, ಎಂ.ವಿ. ಅವರ ಯೋಜನೆಗಳ ಹಿಂದಿನ ದೃಷ್ಟಿಕೋನವನ್ನು ಚಿಂತಿಸಬೇಕು.

೧೯೧೨ರಿಂದ ೧೯೧೮ರ ವರೆಗೆ ಅವರು ಮೈಸೂರು ರಾಜ್ಯದ ದಿವಾನರಾಗಿದ್ದರು. ಆ ಕಾಲದಲ್ಲೇ ಬ್ರಿಟಿಷ್‌ ಸರಕಾರ ಅವರ ಸಮಾಜ ಸೇವೆಯನ್ನು ಗುರುತಿಸಿ ʻಸರ್‌ʼ ಎಂಬ ಅಪೂರ್ವವೂ ವಿಶಿಷ್ಟವೂ ಆದ ಬಿರುದನ್ನಿತ್ತು ಗೌರವಿಸಿತು. ಸ್ವಾತಂತ್ರ್ಯೋತ್ತರ ಭಾರತ ಸರಕಾರದಿಂದ ೧೯೫೫ರಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭ್ಯವಾಯಿತು. ಈ ಪ್ರಶಸ್ತಿಯನ್ನು ಪಡೆದ ಮೊತ್ತಮೊದಲ ಕನ್ನಡಿಗರು ಅವರಾಗಿದ್ದರು. ೯೦ ವರ್ಷ ವಯಸ್ಸಿನಲ್ಲೂ ಕುಂದದ ಉತ್ಸಾಹದಿಂದ ಬಹುಬಗೆಯ ಜನೋಪಯೋಗೀ ಯೋಜನೆಗಳನ್ನು ರೂಪಿಸುತ್ತಲೂ ಅವುಗಳನ್ನು ಸುಗಮವಾಗಿ ಕಾರ್ಯಗತಗೊಳಿಸುತ್ತಲೂ ಎಂ.ವಿ. ವೃತ್ತಿಜೀವನದಲ್ಲಿ ನಾಗಾಲೋಟದಿಂದ ಸಾಗಿದರು.
ಬೆಂಗಳೂರಿನಲ್ಲಿ ಜಯನಗರ ಬಡಾವಣೆಯ ಆರಂಭದ ರೂಪುರೇಷೆಗಳನ್ನು ವಿನ್ಯಾಸಗೊಳಿಸಿ ಇಡೀ ಏಷ್ಯಾಖಂಡದಲ್ಲಿಯೇ ಮೊದಲ ಅತ್ಯುತ್ತಮ ವಾಸಯೋಗ್ಯವಾದ ಬಡಾವಣೆಯನ್ನಾಗಿ ರೂಪಿಸಿದವರು ಸರ್. ಎಂ.ವಿ. ೧೯೦೯ರಲ್ಲಿ ರೈಲ್ವೇ ಇಲಾಖೆಯ ಮೇಲ್ವಿಚಾರಣೆ ವಹಿಸಿ ಎರಡೂವರೆ ಅಡಿ ವ್ಯಾಸವುಳ್ಳ ಬೆಂಗಳೂರು ಚಿಕ್ಕಬಳ್ಳಾಪುರ ರೈಲ್ವೇಹಳಿಗಳನ್ನೂ೧೯೧೫ರಲ್ಲಿ ದೇವನಹಳ್ಳಿ ಚಿಕ್ಕಬಳ್ಳಾಪುರ ರೈಲ್ವೇ ಮಾರ್ಗಗಳನ್ನೂ ರೂಪಿಸಿದ ರೂವಾರಿಯೂ ಅವರೇ.

ಖಾಸಗಿ ಜೀವನದಲ್ಲಿ ಸರಳ ಪ್ರಕೃತಿ, ಸಂಪ್ರದಾಯ ನಿಷ್ಠೆ, ದೈವಭಕ್ತಿಯುಳ್ಳ ಅವರು ಎಲ್ಲರಿಗೂ ಮಾದರಿಯಾಗಿದ್ದರು. ಉಡುಗೆ ತೊಡುಗೆಗಳಲ್ಲಿ ಅಭಿರುಚಿ, ಸ್ವಚ್ಛತೆ, ಸುಂದರತೆ. ಅತಿ ಶಿಸ್ತಿನ ಸಿಪಾಯಿಯಾಗಿದ್ದ ಅವರು ಅಂತರಂಗದಲ್ಲೂ ಅಷ್ಟೇ ಸ್ವಚ್ಛಸುಂದರ ವ್ಯಕ್ತಿಯಾಗಿದ್ದರು. ಕರ್ತವ್ಯನಿಷ್ಠೆ, ಸಮಯಪಾಲನೆ ಮತ್ತು ಶಿಸ್ತಿಗೆ ಮಣೆ ಹಾಕುವ ಅವರಿಗೆ ಭ್ರಷ್ಟಾಚಾರ, ಸೋಮಾರಿತನಗಳೆಂದರೆ ಎಣ್ಣೆಸೀಗೆ. ಭ್ರಷ್ಟಾಚಾರ ನಿರ್ಮೂಲನೆಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯವೆಂದೂ ವಿದ್ಯಾಭ್ಯಾಸ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲ ಕೀಲಿಕೈಯೆಂದೂ ಅವರು ನಂಬಿದ್ದರು. ಕರ್ತವ್ಯಪಾಲನೆಯಲ್ಲಿ ಎಷ್ಟು ದಕ್ಷರೋ ಅವರ ನಿಯತ್ತು, ಪ್ರಾಮಾಣಿಕತೆಗಳೂ ಅಷ್ಟೇ ಕರಾರುವಾಕ್ಕಾಗಿದ್ದುವು. ಎಂದೂ ಅವರು ಸರಕಾರದ ಹಣವನ್ನು ಸ್ವಂತಕ್ಕೆ ಬಳಸುವುದಾಗಲೀ ಪೋಲುಮಾಡುವುದಾಗಲೀ ಮಾಡುತ್ತಿರಲಿಲ್ಲ. ವಿದ್ಯುದ್ದೀಪಗಳ ಅನುಕೂಲವಿರದ ಆ ಕಾಲದಲ್ಲಿ ರಾತ್ರಿಹೊತ್ತು ಸರಕಾರದ ಕೆಲಸಗಳನ್ನು ಮಾಡುವಾಗ ಸರಕಾರ ಕೊಟ್ಟ ಕ್ಯಾಂಡಲ್‌ಗಳನ್ನು ಬಳಸುತ್ತಿದ್ದ ಅವರು ಆ ಕೆಲಸ ಮುಗಿಸಿ ತಮ್ಮ ವೈಯಕ್ತಿಕ ಕೆಲಸ ಮಾಡುವುದಿದ್ದರೆ ತಾವೇ ದುಡ್ಡು ಕೊಟ್ಟು ಕೊಂಡುಕೊಂಡ ಕ್ಯಾಂಡಲ್‌ಗಳನ್ನು ಬಳಸುತ್ತಿದ್ದರು. ಇವತ್ತಿನ ರಾಜಕೀಯ ಪುಡಾರಿಗಳು, ಸರಕಾರದ ಹಣವನ್ನು ದರೋಡೆಮಾಡುವ ಭ್ರಷ್ಟರು ಇದನ್ನು ನೋಡಿದರೆ ಖಂಡಿತ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ, ಇಲ್ಲ ಆತ್ಮಹತ್ಯೆಮಾಡಿಕೊಳ್ಳುತ್ತಾರೆ.

ಸರ್. ಎಂ.ವಿ. ಅವರು ಯಾವ ಒತ್ತಡಕ್ಕೂ, ಶಿಫಾರಸ್ಸಿಗೂ ಬಗ್ಗದ ಅಕಳಂಕ ಚರಿತ್ರರಾಗಿದ್ದರು. ಉತ್ಸಾಹಶೀಲ, ಜವಾಬ್ದಾರಿಯುತ ಅಭ್ಯರ್ಥಿಗಳನ್ನೇ ತಮ್ಮ ಜೊತೆಯ ಕೆಲಸ ಕಾರ್ಯಗಳಿಗೆ ಆಯ್ಕೆ ಮಾಡುತ್ತಿದ್ದರು. ಒಮ್ಮೆ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್‌ ಆಗಿ ಜವಾಬ್ದಾರಿ ವಹಿಸಿದಾಗ ಅವರ ಕೈಕೆಳಗೆ ಪಿಡಬ್ಲ್ಯೂಡಿ ಅಧಿಕಾರಿಗಳಾಗಿ ನಿಯುಕ್ತರಾದ ಇಂಜಿನಿಯರುಗಳ ಹೊಸಪಟ್ಟಿ ಬಂತು. ಅದರಲ್ಲಿ ನಮೂದಿತವಾದ ಹೆಸರುಗಳನ್ನು ಕೂಲಂಕಷವಾಗಿ ಅವಲೋಕಿಸಿದ ಅವರು ಅದರಲ್ಲಿ ಯೋಗ್ಯತೆಗಿಂತ ಶಿಫಾರಸ್ಸು ಕೆಲಸಮಾಡಿದೆಯೆಂಬುದನ್ನು ಗಮನಿಸಿದರು. ತಕ್ಷಣವೇ ಅವರು ಆ ಹೆಸರುಗಳನ್ನು ತೊಡೆದು ಹಾಕಿ ಯೋಗ್ಯತೆಗೆ ಅನುಗುಣವಾಗಿಯೇ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿದರು. ಸರ್. ಎಂ. ವಿ. ಯವರು ಎಷ್ಟರ ಮಟ್ಟಿಗೆ ನ್ಯಾಯೈಕ ಪಕ್ಷಪಾತಿಯಾಗಿದ್ದರೆಂದರೆ ತಾಯಿ ಮತ್ತು ಬಂಧುಗಳಿಗೆ ಯಾವುದೇ ಬಗೆಯ ಶಿಫಾರಸ್ಸು ತರಬಾರದೆಂದು ತಾಕೀತು ಮಾಡಿದ ಬಳಿಕವೇ ಅಧಿಕಾರವನ್ನು ವಹಿಸಿದ್ದರಂತೆ. ಯಾವುದೇ ಕೆಲಸ ಸಮರ್ಪಕವಾಗಿ ನಡೆಯಬೇಕಿದ್ದರೆ ವ್ಯಕ್ತಿಯ ಯೋಗ್ಯತೆಗೆ ಮಣೆ ಹಾಕಬೇಕೇ ಹೊರತು ವಶೀಲಿಗಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು. ಕೆಲಸದಲ್ಲಿ ಮೇಲುಕೀಳು ಎಂಬುದಿಲ್ಲ. ಮಾಡುವ ಕೆಲಸದಲ್ಲಿ ಪ್ರೀತಿ, ಅಭಿಮಾನ ಬೆಳಸಿದರೆ ಅಭ್ಯುದಯದ ರಹದಾರಿ ತೆರೆಯುತ್ತದೆಯೆನ್ನುವುದನ್ನು ಅವರು ಹೇಳುತ್ತಿದ್ದರು. ಅದೃಷ್ಟವೆನ್ನುವುದು ನಮ್ಮ ಕೈಯಲ್ಲೇ ಇದೆ, ಪರಿಶ್ರಮವಿದ್ದರೆ ಸಾಧ್ಯವಾಗದ್ದು ಯಾವುದೂ ಇಲ್ಲ ಎನ್ನುವುದು ಅವರ ಸಿದ್ಧಾಂತವಾಗಿತ್ತು. ಅವರ ಸಮಾಜಸೇವೆ ಮತ್ತು ಯೋಗ್ಯತೆಯನ್ನು ಗುರುತಿಸಿಯೇ ಕಿಂಗ್‌ ಜಾರ್ಜ್‌ ೫, ಭಾರತದ ಸಾಮ್ರಾಜ್ಯದ ನೈಟ್‌ ಕಮಾಂಡರ್‌ ಆಗಿ ನೈಟ್‌ ಪದವಿಯನ್ನು ನೀಡಿ ಗೌರವಿಸಿದ್ದು. ರಾಜ್ಯದ ಬಡತನ, ಅನಕ್ಷರತೆ, ನಿರುದ್ಯೋಗ, ಅನಾರೋಗ್ಯಗಳ ನಿವಾರಣೆಗೂ ಎಂ.ವಿ.ಯವರ ಕೊಡುಗೆ ಅಪಾರವಾಗಿತ್ತು.

ಸರ್. ಎಂ.ವಿ. ಅವರು ಅತ್ಯುತ್ತಮ ಬರಹಗಾರರೂ ಆಗಿದ್ದರು. ಉದ್ಯಮಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನೂ ಅವರು ರಚಿಸಿದ್ದಾರೆ. ಅವುಗಳಲ್ಲಿ ಕೆಲವು

೧) ಮೆಮರೀಸ್‌ ಆಫ್‌ ಮೈ ವರ್ಕಿಂಗ್‌ ಲೈಫ್(೧೯೫೪)
೨)ಅನ್‌ಎಂಪ್ಲಾಯ್ಮೆಂಟ್‌ ಇನ್‌ ಇಂಡಿಯಾ(೧೯೩೨)
೩)ಪ್ರೋಸ್ಫೆರಿಟಿ ಥ್ರೂ ಇನ್ಡಸ್ಟ್ರೀ ಮೂವ್‌
೪) ಟುವರ್ಡ್ಸ್‌ ರೇಪಿಡ್ ಇನ್ಡಸ್ಟ್ರಿಯಲೈಸೇಷನ್(೧೯೪೩)
೫) ಪೋಸ್ಟ್‌ವಾರ್‌ ರೀ ಕನ್ಸ್ಟ್ರಕ್ಷನ್‌ ಇನ್‌ ಇಂಡಿಯಾ(೧೯೪೩)
೬) ನೇಷನ್‌ ಬಿಲ್ಡಿಂಗ್: ಎ ಫೈವ್‌ ಈಯರ್‌ ಪ್ಲಾನ್‌ ಫೋರ್‌ ದಿ ಪ್ರೋವಿನ್ಸಸ್(೧೯೩೭)
೭) ಡಿಸ್ಟ್ರಿಕ್ಟ್‌ ಡೆವಲಪ್ಮೆಂಟ್‌ ಸ್ಕೀಮ್: ಇಕನಾಮಿಕ್ ಪ್ರೋಗ್ರೆಸ್‌ ಬೈ ಫೋರ್ಸ್ಡ್‌ ಮಾರ್ಚಸ್(೧‌೯೪೦)
೮) ಎ ಬ್ರೀಫ್‌ ಮೆಮರೀಸ್‌ ಆಫ್‌ ಮೈ ಕಂಪ್ಲೀಟ್‌ ವರ್ಕಿಂಗ್‌ ಲೈಫ್(೧೯೬೦)
೯) ರೀ ಕನ್ಸ್ಟ್ರಕ್ಟಿಂಗ್‌ ಇನ್ಡಿಯಾ(೧೯೨೦)
೧೦) ಪ್ಲಾನ್ಡ್‌ ಇಕಾನೆಮಿ ಫೋರ್‌ ಇನ್ಡಿಯಾ(೧೯೩೪)

ಸರ್‌ ಎಂ.ವಿ. ಅವರ ಅಮೋಘ ಸಾಧನೆ ಮತ್ತು ಪರಿಶ್ರಮಕ್ಕೆ ತಕ್ಕಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳೂ ಅವರನ್ನು ಹುಡುಕಿಕೊಂಡು ಬಂದು ತಮ್ಮ ಗೌರವವನ್ನು ಹೆಚ್ಚಿಸಿವೆ. ರತ್ನ ಹುಡುಕುವುದಿಲ್ಲ, ಅದನೆ ಹುಡುಕುವರು ಎನ್ನುವಂತೆ ಯಾವ ಪ್ರಚಾರ, ಪದವಿ, ಪುರಸ್ಕಾರಗಳ ಬೆನ್ನ ಹತ್ತದಿದ್ದರೂ ಅವುಗಳೇ ಅವರ ಬೆನ್ನು ಹಿಡಿದು ಬಂದು ಹೆಗಲೇರಿ ತಮ್ಮ ಹಿರಿಮೆಯನ್ನು ಜಗತ್ತಿಗೆ ಸಾರಿವೆ.
ಸರ್‌ ಎಂ.ವಿ.ಅವರಿಗೆ ಲಭಿಸಿದ ಕೆಲವು ಗೌರವ:

೧)೧೯೦೪- ೫೦ ವರ್ಷಗಳ ಲಂಡನ್‌ ಇನ್ಸಿಟ್ಯೂಟ್‌ ಆಫ್‌ ಸಿವಿಲ್‌ ಇಂಜಿನಿಯರಿಂಗ್ಸ್‌ ಸದಸ್ಯತ್ವ
೨)೧೯೦೬ ರಲ್ಲಿ ಕೇಸರ್‌ ಎ ಹಿಂದ್‌ ಬಿರುದು
೩) ೧೯೧೧ರಲ್ಲಿ ಕಂಪ್ಯಾನಿಯನ್‌ ಆಫ್‌ ದಿ ಇಂಡಿಯನ್‌ ಎಂಪೈರ್‌(ಸಿಐಇ)
೪) ೧೯೧೫ ರಲ್ಲಿ ನೈಟ್‌ ಕಮಾಂಡರ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಇಂಡಿಯನ್‌ ಎಂಪೈರ್(ಕೆಸಿಐಇ)
೫) ೧೯೨೧ ಕಲ್ಕತ್ತಾ ವಿ.ವಿ. ಡಾಕ್ಟರ್‌ ಆಫ್‌ ಸಯನ್ಸ್‌
೬) ೧೯೩೧ ಬಾಂಬೆ ವಿ.ವಿ. ಎಲ್ಎಲ್‌ ಡಿ.
೭)೧೯೩೭ ಬನಾರಸ್‌ ಹಿಂದೂ ವಿ.ವಿ. ಡಿ.ಲಿಟ್‌
೮) ೧೯೪೩ ಇನ್ಸಿಟ್ಯೂಟ್‌ ಆಫ್‌ ಇಂಜಿನಿಯರ್ಸ್(ಭಾರತ) ಗೌರವ ಆಜೀವ ಸದಸ್ಯತ್ವ
೯) ೧೯೪೪ ಅಲಹಾಬಾದ್ ವಿ.ವಿ. ಡಿ.ಎಸ್ಸಿ.
೧೦) ೧೯೪೮ ಮೈಸೂರು ವಿ.ವಿ. ಗೌರವ ಡಾಕ್ಟರೇಟ್‌
೧೧) ೧೯೫೩ ಆಂಧ್ರ ವಿ.ವಿ. ಡಿಲಿಟ್‌
೧೨)೧೯೫೫ ಭಾರತ ರತ್ನ
೧೩) ೧೯೫೮ ರಾಯಲ್‌ ಏಷ್ಯಾಟಿಕ್‌ ಸೊಸೈಟಿ ಕೌನ್ಸಿಲ್‌ ಆಫ್‌ ಬೆಂಗಾಲ್‌ ʻದುರ್ಗಾಪ್ರಸಾದ್‌ ಖೈತಾನ್‌ ಸ್ಮಾರಕ ಚಿನ್ನದ ಪದಕ. ಇತ್ಯಾದಿ

ಸರ್. ಎಂ.ವಿ ಅವರ ಗೌರವಾರ್ಥ ಅವರ ಹೆಸರಿನಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಅನೇಕ ತಾಂತ್ರಿಕ ಮಹಾವಿದ್ಯಾಲಯಗಳು ಸ್ಥಾಪನೆಯಾಗಿವೆ. ಅವರಿಗೆ ನೂರು ವರ್ಷ ತುಂಬಿದಾಗ ಅವರ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆಯಾಗಿದೆ. ಅವರ ಶತಮಾನೋತ್ಸವ ಸಮಾರಂಭಕ್ಕೆ ಭಾರತದ ಆಗಿನ ಪ್ರಧಾನ ಮಂತ್ರಿ ನೆಹರೂರವರು ಬಂದಿದ್ದರು. ಜಯಚಾಮರಾಜೇಂದ್ರ ಅರಸರು ಆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಹೀಗೆ ಸರ್. ಎಂ.ವಿಶ್ವೇಶ್ವರಯ್ಯನವರು ಪ್ರತಿಯೊಬ್ಬ ಮಹತ್ವಾಕಾಂಕ್ಷಿಗೂ ಮಾದರಿಯಾಗುವಂತೆ ಅಸಿಸ್ಟೆಂಟ್‌ ಇಂಜಿನಿಯರ್‌ ಹುದ್ದೆಯಿಂದ ದಿವಾನರ ವರೆಗೂ ಹಂತಹಂತವಾಗಿ ಮೇಲೇರಿದರು. ಕಾಯಕಯೋಗಿಯಾಗಿ ತಮ್ಮ ಬದುಕನ್ನು ಸಾರ್ಥಕಪಡಿಸಿದರು. ತಮ್ಮ ಪೀಳಿಗೆ ಬದುಕುವುದಕ್ಕೆ ಬೇಕಾದ ಹೆದ್ದಾರಿಯನ್ನೂ ಮಾರ್ಗದರ್ಶನವನ್ನೂ ನೀಡಿ ತಮ್ಮ ೧೦೧ನೆಯ ವಯಸ್ಸಿನಲ್ಲಿ ಅಂದರೆ ೧೯೬೨, ಎಪ್ರಿಲ್‌ ೧೨ ರಂದು ಇಹಲೋಕವನ್ನು ತ್ಯಜಿಸಿದರು. ಪ್ರತಿವರ್ಷ ಸೆ. ೧೫ರಂದು ಭಾರತ ಮಾತ್ರವಲ್ಲದೆ ಶ್ರೀಲಂಕಾ, ತನ್ಸಾನಿಯಾ ಮುಂತಾದ ದೇಶಗಳೂ ಅವರ ನೆನಪಿನಲ್ಲಿ ಇಂಜಿನಿಯರ್ಸ್‌ ಡೇಯನ್ನು ಆಚರಿಸುತ್ತಿವೆ. ಇದಲ್ಲವೇ ಬದುಕಿನ ಸಾರ್ಥಕತೆ! ಇದಲ್ಲವೇ ಧನ್ಯತೆ!

ಹಂಚಿಕೊಳ್ಳಿ: https://shampa.org/ncew

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ