ಸೆಪ್ಟೆಂಬರ್ 20, 2024

ಕಾವ್ಯರಸಯಾನ ಮುಂದುವರಿದುದು: ೦೫.೦೮.೨೦೨೩

ಈ ದಿನದ ರೆಕಾರ್ಡಿಂಗ್

ಬೇಟೆಗೆ ಹೊರಟ ಸೈನ್ಯದ ಸಂಭ್ರಮ, ಸಡಗರಗಳ ವರ್ಣನೆ:
ಪದ್ಯ

ಒರಲಿದುವು ಬಿರುದ ಸಾರುವ ಕಹಳೆ, ಮೊರೆದು ಬೊ
ಬ್ಬಿರಿದವೇಳೆಂಟು ಸಾಸಿರ ಶಂಖ, ಪಂಚಮದ
ಹರೆಗಳರಚಿದುವು ತಂಬಟದ ಕುಡುಹಾಡಲು ಕದಂಬ ಶಬ್ದದ ರವದಲಿ
ಮರುಗಿದನು ಸುರನಾಥನಗ್ನಿ ಬಸವಳಿದ ಯಮ
ಬೆರಗಾದ ನಿರುತಿ ಹಲುಗಚ್ಚಿದನು ವರುಣ ನಿ
ಬ್ಬೆರಗಿನೊಳಗಿರ್ದ ಮಾರುತ ನಿಂದ ಧನದನಂಜಿದ ಶೂಲಿ ಭೀತಿವಡೆದ

ಅರ್ಥ
ರಾಜನ ಬಿರುದುಗಳನ್ನು ಸಾರುವಂತೆ ಕಹಳೆಗಳನ್ನು ಮೊಳಗಿಸಿದರು. ಏಳೆಂಟು ಸಾವಿರ ಶಂಖಗಳನ್ನು ಓದಿದರು. ಚರ್ಮವಾದ್ಯಗಳು ಜೋರಾಗಿ ಅರಚಿದುವು, ತಮ್ಮಟೆ(ಚರ್ಮವಾದ್ಯ)ಯ ಹಾಡು ಕದಂಬ ಶಬ್ದದ ಧ್ವನಿಯೇರಿಸಿದಾಗ ದೇವೇಂದ್ರ ನಡುಗಿದ, ಅಗ್ನಿ ಶಕ್ತಿಗುಂದಿದ, ಯಮ ಬೆರಗಾದ, ನಿರುತಿ ಹಲ್ಲುಕಚ್ಚಿದ, ವರುಣ ಬೆಕ್ಕಸಬೆರಗಾದ, ಗಾಳಿ ಬೀಸುವುದು ನಿಂತಿತು, ಕುಬೇರ ಹಿಮ್ಮೆಟ್ಟಿದ, ಶಿವನಿಗೂ ಭಯವಾಯಿತು.
ವಿಶೇಷ ವಿಚಾರ
ಹರಿಶ್ಚಂದ್ರ ರಾಜನ ಬೇಟೆಯ ಸಂಭ್ರಮ, ಆಟಾಟೋಪಗಳು ಎಷ್ಟು ಭಯಂಕರವಾಗಿದ್ದುವೆಂದರೆ ದೇವಾಧಿದೇವತೆಗಳೂ ಭಯಚಕಿತರಾದರು. ಸಾಕ್ಷಾತ್‌ ಪರಶಿವನಿಗೂ ಭೀತಿಯುಂಟಾಯಿತು.

ಪದ್ಯ

ಪೊಡವಿ ಜಡಿಯಲು ದೆಸೆಗಳುಬ್ಬಸಂಬಡೆ ಫಣಿಯ
ಹೆಡೆ ಕೊರಳೊಳಾಡೆ ಕೂರ್ಮನ ಬೆನ್ನು ತಗ್ಗಿ ಬಸು
ರೆಡೆಯ ಹೊಗೆ ಬೊಬ್ಬೆಗೊಟ್ಟಬ್ಬರಿಸಿ ನಗರಿಯಂ ಹೊರಗೆ ಹೊರಬೀಡ ಬಿಟ್ಟು
ಘುಡುಘುಡಿಸಿ ರಥವನೊಲವಿಂ ನೂಂಕಿ ಬಲುಬೇಡ
ವಡೆ ಕಡಗಿ ಹರಕರಿಸಿ ನಡೆಯೆ ಕೈಮಿಕ್ಕು ಹೇ
ರಡವಿ ಗೋಳಿಡಲು ದಾಳಿಕ್ಕಿದಂ ನಿಜದೇಶಜನವನಧಿಕುಮುದಸಖನು ೬೩

ಅರ್ಥ
ಸೈನ್ಯ ಹೊರಟ ರಭಸಕ್ಕೆ ಇಡೀ ಭೂಮಿಯೇ ನಡುಗಿತು. ದಿಕ್ಕುಗಳಿಗೆಲ್ಲ ಉಸಿರುಕಟ್ಟತೊಡಗಿತು. ವಾಸುಕಿಯ ಹೆಡೆ ಕೊರಳಿನೊಳಗೆ ಹೂತುಹೋಯಿತು. ಆಮೆಯ ಬೆನ್ನು ಕುಸಿದು ಹೊಟ್ಟೆಯ ಒಳಗೆ ಸೇರಿತು, ನಗರದ ಹೊರವಲಯದಲ್ಲಿ ನಗಾರಿ, ಡೋಲು, ಕಹಳೆ ಹೀಗೆ ಬಹುವಿಧವಾದ ವಾದ್ಯಘೋಷಗಳು ಮೊಳಗುತ್ತಿರಲು ಬೇಡರು ರಾಜನ ರಥವನ್ನು ಒಲವಿನಿಂದ ನೂಕುತ್ತ ಮುಂದುವರಿದರು. ಎತ್ತೆತ್ತಲೂ ಹರಡಿ ಹಬ್ಬಿ ಚೆಲ್ಲಾಪಿಲ್ಲಿಯಾಗಿ ಬೊಬ್ಬೆ ಹಾಕುತ್ತ ಸಾಗುವ ಬೇಡರಪಡೆಯೊಂದಿಗೆ ರಾಜ್ಯದ ಪ್ರಜೆಗಳೆಂಬ ಸರೋವರದ ಕುಮುದಗಳಿಗೆ ಚಂದ್ರನಂತಿರುವ ರಾಜನು ಇಡೀ ಅರಣ್ಯಭಾಗವೇ ಗೋಳಿಡುವಂತೆ ಆಕ್ರಮಣವನ್ನು ಆರಂಭಿಸಿದನು.
ವಿಶೇಷ ವಿಚಾರ
ಇಲ್ಲಿ ರಾಜನ ಬಗ್ಗೆ ಪ್ರಜೆಗಳ ಅಭಿಮಾನ ಪ್ರೀತಿ, ಪ್ರಜೆಗಳ ಬಗ್ಗೆ ರಾಜನ ಕಾಳಜಿ ಗಮನಾರ್ಹ.
ಮುಂದೆ ಬೇಡರ ಬೇಟೆಯ ಸೊಗಸು, ಬೊಬ್ಬೆಗಳು, ದಟ್ಟವಾದ ಕಾಡುಗಳ ವರ್ಣನೆ, ಆ ಕಾಡುಗಳಲ್ಲಿ ಬೆಳೆದ ವಿವಿಧ ಬಗೆಯ ಗಿಡ ಮರಗಳ ವರ್ಣನೆ ಅತ್ಯದ್ಭುತವಾಗಿದೆ. ಈ ಪದ್ಯದಲ್ಲಿ ಬೇಟೆಯಾಡುವ ಸೊಗಸು, ಅಬ್ಬರ, ಸಂಭ್ರಮಗಳು ಎಷ್ಟು ಸೊಗಸಾಗಿವೆಯೆಂದರೆ ಆ ಪದ್ಯವನ್ನು ವಿವರಿಸುವ ಅಗತ್ಯವೇ ಇಲ್ಲ. ಓದುವಾಗಲೇ ಅದರ ಸೌಂದರ್ಯ, ಸೊಗಸು ಮನಸ್ಸಿಗೆ ಇಳಿಯುತ್ತವೆ.

ಪದ್ಯ

ನಡೆವ ದನಿ ಹರಿವ ದನಿ ಕರೆವ ದನಿ ಬಿಲ್ಲ ಜೇ
ವೊಡೆವ ದನಿಯೆಸುವ ದನಿ ಬೈವ ದನಿ ಕೂಗಿ ಬೊ
ಬ್ಬಿಡುವ ದನಿಯಿರಿವ ದನಿ ಮುರಿವ ದನಿ ತರಿವ ದನಿ ಬೇಗೆಯುರಿವ
ತುಡುಕುದನಿ ತಿತ್ತಿರಿಯ ದನಿ ಹರೆಯ ದನಿ ಸನ್ನೆ
ಗೊಡುವ ದನಿ ಖಗಮೃಗದ ಗರ್ಜನೆಯದನಿಯೊರಲಿ
ಕೆಡೆವ ದನಿಗಳು ಬೆರೆಸಿ ಬೆಳೆಯೆ ಘೋರಾರಣ್ಯವತಿ ಭಯಂಕರವಾದುದು

ಅರ್ಥ
ಬೇಡರು ನಡೆಯುವ, ಹರಿಯುವ, ಕರೆಯುವ, ಬಿಲ್ಲನ್ನು ಹೆದೆಯೇರಿಸುವ, ಬಾಣ ಪ್ರಯೋಗಿಸುವ, ಬಯ್ಯುವ, ಕರೆದು ಬೊಬ್ಬಿಡುವ, ಮುರಿಯುವ, ಕತ್ತರಿಸುವ, ಸುಡುವ, ಆಕ್ರಮಿಸುವ ಧ್ವನಿಗಳೊಂದಿಗೆ ತಿತ್ತಿರಿ, ಹರೆಯ ಮುಂತಾದ ವಾದ್ಯಗಳ ಧ್ವನಿಯೂ ಮೃಗಪಕ್ಷಿಗಳು ಆಕ್ರಂದನ, ಗರ್ಜನೆಯ ಧ್ವನಿಯೂ ಸೇರಿ ಇಡೀ ಅರಣ್ಯಪ್ರಾಂತ್ಯ ಅತ್ಯಂತ ಭಯಂಕರವಾಯಿತು.

ಮುಂದಿನ ಪದ್ಯದಲ್ಲಿ ಬೇಟೆಯ ಕೋಲಾಹಲ, ವಿವಿಧ ಬಗೆಯ ಕಾಡುಮೃಗಗಳನ್ನು ಬೇಟೆಯಾಡುವಾಗಿನ ಸಂಭ್ರಮ, ಓಡಾಟಗಳು, ಬೇಡರು ಒಬ್ಬರನ್ನು ಮತ್ತೊಬ್ಬರು ಉದ್ದೇಶಿಸಿ ಆಡುವ ಮಾತುಗಳು ಬಹಳ ಸಹಜವಾಗಿ ಕಣ್ಣಮುಂದೆ ಪ್ರತ್ಯಕ್ಷವಾಗುವಂತೆ ವರ್ಣಿತವಾಗಿವೆ:.

ಪದ್ಯ

ಹಿಡಿ ನವಿಲನಿರಿ ಹುಲಿಯನಟ್ಟು ಮರೆವಿಂಡ ದರಿ
ಗೆಡಹು ಕರಿಯಂ ರೊಪ್ಪವಿಡಿದ ಹಂದಿಗೆ ತಡವಿ
ಬಿಡು ನಾಯನೆಚ್ಚೆರಳೆಯಂ ಕಲ್ಲಲಿಕ್ಕು ಕೋಣನನು ಹೊರಹೋಗಲೀಯದೆ
ಹೊಡೆಯುಡುವ ಮರೆವಿಡಿದು ಕುತ್ತು ಕರಡಿಯನೋವ
ದಿಡು ಮೊಲನ ಮರಚು ಸಿಂಹವ ಹಲವು ಬಲೆಗೆದರಿ
ನಡೆಗೆಡಿಸು ಹಕ್ಕಿಗಳನೆಂಬ ಬೇಡರ ಬೊಬ್ಬೆಯಿಂದಡವಿ ಘೀಳಿಟ್ಟುದು ೬೪

ಅರ್ಥ
ನವಿಲನ್ನು ಹಿಡಿ, ಹುಲಿಯನ್ನು ಇರಿ, ಜಿಂಕೆಗಳ ಮಂದೆಯನ್ನು ಅಟ್ಟು, ಆನೆಯನ್ನು ಖೆಡ್ಡಾದೊಳಗೆ ಬೀಳಿಸು, ಪೊದೆಯೊಳಗೆ ಅವಿತ ಹಂದಿಗೆ ನಾಯಿಯನ್ನು ಬಿಡು, ಗಾಯಗೊಂಡ ಜಿಂಕೆಯನ್ನು ಕಲ್ಲಿನಲ್ಲಿ ಕುತ್ತು, ಕೋಣವನ್ನು ಹೊರಗೆ ಹೋಗದಂತೆ ಹೊಡೆದುಹಾಕು, ಉಡವನ್ನು ಮರೆಯಾಗಿ ಹಿಡಿ, ಕರಡಿಗೆ ದಯೆತೋರಿಸದೆ ಚುಚ್ಚು, ಮೊಲಕ್ಕೆ ಬಾಣವನ್ನು ಬಿಡು, ಸಿಂಹವನ್ನು ಉರುಳಿಸು (ಅಥವಮರಳಿಸು), ಹಲವು ಬಗೆಯ ಬಲೆಗಳನ್ನು ಹರಡಿ ಹಕ್ಕಿಗಳನ್ನು ಸಿಲುಕಿಸು ಎಂಬ ಬೇಡರ ಬೊಬ್ಬೆಯಿಂದ ಇಡೀ ಅರಣ್ಯವೇ ಘೀಳಿಡುವಂತೆ ಭಾಸವಾಯಿತು.
ಮುಂದಿನ ಪದ್ಯ ಪ್ರಾಣಿಗಳ ಚಲನವಲನಗಳ ಬಗ್ಗೆ ಬೇಡರ ಪರಿಣತಿಯನ್ನು ಸೂಚಿಸುತ್ತದೆ.

ಪದ್ಯ

ಎರಳೆ ಸರಳಿಸಿ ಹೋದುದಿಲ್ಲಿ ಹಿಂಗಾಲೊದೆದು
ತೆರಳ್ದ ಮಣ್ಣಿದೆ ಸೊಕ್ಕಿದೆಕ್ಕಲಂಗಳು ಹೋದ
ವೆರಡು ಕಟವಾಯಿ ಕಡೆಸುರಿದ ನೊರೆಯಿದೆ ಕರಡಿ ತಣಿದಾಡಿ ಹೋದುದಿಲ್ಲಿ
ನೆರೆದಿರುಹೆಗಳ ಹೊರೆಯೊಳೊಡೆದ ಹುತ್ತಿದೆ ಹುಲಿಯು
ಮರೆಯನೆಳೆಯಿತ್ತಿಲ್ಲಿ ಬಿಸುನೆತ್ತರಿದ್ದುದುದೆಂ
ದಿರದೆರಗಿ ಹಜ್ಜೆಯಂ ನೋಡಿ ಬೆಂಬಳಿವಿಡಿದು ಹರಿವ ಲುಬ್ಧಕರೆಸೆದರು ೬೫

ಅರ್ಥ
ಜಿಂಕೆ ನೆಗೆದು ಓಡಿಹೋದ ಜಾಗ ಇದು. ಏಕೆಂದರೆ ಅವುಗಳು ಹಿಂಗಾಲಿನಿಂದ ಒದ್ದು ಪುಡಿಯಾಗಿರುವ ಮಣ್ಣು ಇನ್ನೂ ಹಾಗೆಯೇ ಇದೆ. ಸೊಕ್ಕಿದ ಹಂದಿಗಳು ಹೋದ ಜಾಗ ಇದೇ. ಏಕೆಂದರೆ ಅವುಗಳ ಎರಡು ಕಟಬಾಯಿಯಿಂದ ಸುರಿದ ನೊರೆ ಇಲ್ಲಿ ಕಾಣಿಸುತ್ತದೆ. ಕರಡಿ ಆರಾಮವಾಗಿ ತಿಂದು ತಣಿದ ಜಾಗ ಇದೇ. ಏಕೆಂದರೆ ಇರುವೆಗಳು ಕಟ್ಟಿದ ಹುತ್ತ ಒಡೆದ ಬಿದ್ದುದು ಇಲ್ಲಿದೆ. ಹುಲಿಯು ಜಿಂಕೆಯನ್ನು ಕೊಂದು ತಿಂದ ಜಾಗ ಇದೇ. ಏಕೆಂದರೆ ಇಲ್ಲಿ ಇನ್ನೂ ಬಿಸಿರಕ್ತ ಕಾಣಿಸುತ್ತಿದೆ. ಹೀಗೆ ಹೇಳುತ್ತ ಪ್ರಾಣಿಗಳನ್ನು ಆಕ್ರಮಿಸುತ್ತ, ಬೆನ್ನಟ್ಟುತ್ತ, ಬೇಡರ ಪಡೆ ಸಂಭ್ರಮ ಪಟ್ಟಿತು.
ವಿಶೇಷ ವಿಚಾರ
ಬೇಡರು ಬೇಟೆಯಲ್ಲಿ ಎಷ್ಟು ಪಳಗಿದ್ದಾರೆಂಬುದು ಅವರು ಪ್ರಾಣಿಗಳ ಗುರುತುಗಳನ್ನು ನಿಖರವಾಗಿ ಕಂಡುಹಿಡಿಯುವುದರ ಮೂಲಕ ವ್ಯಕ್ತವಾಗುತ್ತದೆ. ದಿಕ್ಕು, ದೆಸೆ, ಚಲನ ವಲನ, ಸ್ವಭಾವಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದರೆಂಬ ಈ ವರ್ಣನೆ ರಾಘವಾಂಕನಿಗೆ ಬೇಟೆಯ ಅನುಭವ ಎಷ್ಟು ಪ್ರಕರವಾಗಿದೆ ಎಂಬುದಕ್ಕೆ ಸಾಕ್ಷಿ.

ಮುಂದಿನ ಪದ್ಯದಲ್ಲಿ ಬಲೆಯೊಳಗೆ ಸಿಲುಕಿ ತಪ್ಪಿಸಲಾಗದೆ ಪ್ರಾಣಭಯದಿಂದ ತತ್ತರಿಸುವ ಜಿಂಕೆಗಳ ವರ್ಣನೆ:
ಪದ್ಯ

ನೆಗೆದ ಮೊಗವಿಡಿದುಸುರು ಹುರಿಯೊಡೆದ ರೋಮ ನಸು
ಮುಗಿದ ಕಣ್ಣರೆಗಚ್ಚಿದೆಳಗರುಕೆ ಮರೆದ ಮೆಯ್‌
ಬಿಗುಹುಗೆಟ್ಟಳ್ಳೆ ಡೆಂಢಣಿಸುವಡಿಯಾಲಿಸುತೆಳಲ್ವ ಕಿವಿ ರಾಗರಸದ
ಸೊಗಸನಪ್ಪಿದ ಚಿತ್ತವಳ್ಳಿರಿವ ಜನದ ಬೊ
ಬ್ಬೆಗೆ ಬೆದರುತಿಪ್ಪ ಮನವೆರಸಿ ಮರುಳಾಗಿ ಗೋ
ರಿಗೆ ಸಿಕ್ಕಿದೆರಳೆಗಳನಕಟಕಟ ನಿಷ್ಕರುಣ ಲುಬ್ಧಕರು ಕೆಡೆಯೆಚ್ಚರು

ಅರ್ಥ
ಎತ್ತಿದ ಮುಖ, ಕಟ್ಟಿದ ಉಸಿರು, ನಿಮಿರಿದ ರೋಮ, ಅರೆಮುಚ್ಚಿದ ಕಣ್ಣು, ಅರ್ಧ ಜಗಿದ ಗರಿಕೆ, ಮರೆತ ಮೈ ಸಡಿಲವಾದ ಅಳ್ಳೆ, ನಡುಗುವ ಕಾಲು, ಅಪಾಯದ ಶಬ್ದವನ್ನು ಕೇಳಲೆಂದು ಎಳೆದ ಕಿವಿಗಳು ಹಾಡಿನ ಧ್ವನಿಗೆ ಮರುಳಾದ ಮನಸ್ಸು, ಆಕ್ರಮಿಸುವ ಜನರ ಬೊಬ್ಬೆಗೆ ಬೆದರಿ, ಗೋರಿಬೇಟೆಗೆ ಸಿಲುಕಿದ ಜಿಂಕೆಗಳನ್ನು ಬೇಡರು ನಿಷ್ಕರುಣೆಯಿಂದ ಬಾಣವೆಸೆದು ಕೊಂದರು.
ವಿಶೇಷ ವಿಚಾರ
ಕವಿಯ ಉದ್ಗಾರ ಆ ಪ್ರಾಣಿಗಳ ಸಂಕಟಕ್ಕೆ ಪ್ರತಿಕ್ರಿಯಿಸಿದ ವಿಧಾನವನ್ನು ಕಣ್ಣಮುಂದೆ ನಿಲ್ಲಿಸುತ್ತದೆ. ಕಾಳಿದಾಸನ ಶಾಕುಂತಲ ನಾಟಕದಲ್ಲಿ ದುಷ್ಯಂತನ ಬಾಣಾಘಾತಕ್ಕೆ ಹೆದರಿ ಓಡುತ್ತಿರುವ ಜಿಂಕೆಯ ವರ್ಣನೆಯನ್ನು ನೆನಪಿಸಬಹುದು.

ಮುಂದೆ ಬೇಟೆಯ ಒಂದು ವಿಶಿಷ್ಟ ವಿಧಾನವನ್ನು ಕವಿ ವರ್ಣಿಸುತ್ತಾನೆ

ಪದ್ಯ

ಗೋರಿವೇಂಟೆಯನಾಡೆ ಭೂವರಂ ತಿರುಗಿ ಕಾಂ
ತಾರದೊಳು ಮೃಗವ ನೆಲೆಗೊಳಿಸಿ ಮೇಘಾಳಿಯಿಂ
ದೂರದಿಂ ತೋರೆತ್ತನೊಡ್ಡಿ ಕಿಗ್ಗಾಳಿಯಿಂ ಬಂಡಿಯಿಂದಿಳುಹಿ ಹುಲಿಯ
ಹಾರಯಿಸಿ ತಲೆದಡವಿ ತೋರಿ ಹಾಸವ ತಿವಿಯೆ
ದೂರದಿಂ ಕಂಡು ಹಸರಿಸಿ ಹತ್ತಿ ಹಣುಗಿ ನೆಲ
ಕೋರಂತೆಯಡಗಿ ತನ್ನನುವಿನಳವಿಗೆ ಜುಣುಗಿ ನಡೆದು ಬಳಿಕೇಗೈದುದು ೬೬

ಅರ್ಥ
ಗೋರಿಬೇಂಟೆಗಾಗಿ ರಾಜ ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಶೀಲಿಸಿ ಕಾಡಿನಲ್ಲಿ ಒಂದು ಕಡೆ ಜಿಂಕೆಗಳನ್ನು ಕೂಡಿಹಾಕಿ ಮೇಲ್ಗಡೆಯಿಂದ ಬೀಸಿ ಬರುವ ಗಾಳಿಯ ಚಲನೆಗನುಗುಣವಾಗಿ ದೂರದಲ್ಲಿ ಒಂದು ಎತ್ತನ್ನು ಕಟ್ಟಿಹಾಕಿ ಕೆಳಗಿನ ಜಾಗದಲ್ಲಿ ಗಾಳಿಯ ದಿಕ್ಕಿಗೆ ಮುಖಮಾಡುವಂತೆ ಹುಲಿಯನ್ನು ರಥದಿಂದ ಇಳಿಸಿ ಅದನ್ನು ತಲೆದಡವಿ ಉತ್ತೇಜಿಸಿ ದೂರದ ಎತ್ತನ್ನು ತೋರಿಸಿ ಕೊರಳದಾರವನ್ನು ಎಳೆದು ಬಿಟ್ಟಾಗ ದೂರದಿಂದಲೇ ನೆಲಕ್ಕೆ ಹರಡಿದಂತೆ ಮಲಗಿ ಹೊಂಚುಹಾಕುತ್ತ ನೆಲಕ್ಕೆ ಅಂಟಿಕೊಂಡಂತೆಯೇ ತನ್ನ ಶಕ್ತಿಗನುಗುಣವಾಗಿ ಶರೀರವನ್ನು ಕುಗ್ಗಿಸಿ ಅಡಗಿಕೊಂಡು ಎತ್ತಿನ ದಿಕ್ಕಿಗೆ ನಡೆಯುತ್ತ ಆಮೇಲೆ ಏನು ಮಾಡಿತು?
(ಎತ್ತಿಗೆ ಹುಲಿಯಿರುವ ವಿಚಾರ ಗೊತ್ತಾಗುವುದಿಲ್ಲ. ಆದರೆ ಹುಲಿಗೆ ಬೀಸುವ ಗಾಳಿಯಿಂದ ಎತ್ತಿನ ವಾಸನೆ ಮತ್ತು ಎತ್ತು ಇರುವ ಜಾಗ ಕಾಣುತ್ತದೆ. ಅದು ಎತ್ತನ್ನು ಬೇಟೆಯಾಡುವ ಉತ್ಸಾಹದಲ್ಲಿ ಮುನ್ನುಗ್ಗುತ್ತದೆ. ಮಧ್ಯದಲ್ಲಿ ಜಿಂಕೆಗಳಿಗೂ ಹುಲಿಯ ವಾಸನೆ ತಟ್ಟುವುದಿಲ್ಲ. ಅವು ಹಾಯಾಗಿ ಮೇಯುತ್ತಿದ್ದಾಗಲೇ ಹುಲಿಗಳಿಗೆ ಬಲಿಯಾಗುತ್ತವೆ. ಇದು ಈ ಬೇಟೆಯ ವಿಧಾನ)
ಹೊಂಚುಹಾಕಿದ ಹುಲಿಗಳು ಮುಂದೆ ಏನು ಮಾಡಿದುವು ಎಂಬುದನ್ನು ಮುಂದಿನ ಪದ್ಯದಲ್ಲಿ ಕವಿ ವಿವರಿಸುತ್ತಾನೆ.

ಪದ್ಯ

ಕುಸಿದ ತಲೆ ಹಣುಗಿದೊಡಲರಳ್ವ ಬಾಯ್‌ ಸುಗಿದ ಕಿವಿ
ಯುಸುರಿಡಿದ ಮೂಗು ಮರೆದೆವೆಯಿಕ್ಕದುರಿಗಣ್ಣು
ಬಸುರೊಳಡಗಿದ ಬೆನ್ನು ನಿಮಿರ್ದ ಕೊರಳಡಿಗಡಿಗೆ ಗಜಬಜಿಸುತಿಹ ಮುಂದಡಿ
ಎಸೆಯೆ ಲಂಘಿಸಿ ನೆಲನನೊದೆದು ಪುಟನೆಗೆದು ಗ
ರ್ಜಿಸುತ ಬರೆ ಹೆದರಿ ಕಂಗೆಟ್ಟು ಡೆಂಢಣಿಸಿ ಸರ
ಳಿಸುವ ಹರಿಣಂಗಳಂ ಮೋದಿ ಮುರಿದಟ್ಟಿ ಕೆಡಹಿದವು ದೀಹದ ಹುಲಿಗಳು ೬೭

ಅರ್ಥ
ಬಗ್ಗಿಸಿದ ತಲೆ, ಹೊಂಚುಹಾಕಿದ ಶರೀರ, ಅರಳುವ ಬಾಯಿ, ನಿಮಿರಿದ ಕಿವಿಗಳು, ಉಸಿರನ್ನು ಎಳೆದುಕೊಳ್ಳುವ ಮೂಗು, ರೆಪ್ಪೆ ಮುಚ್ಚದೆ ನೋಡುವ ಕೆಂಪುಕಣ್ಣುಗಳು, ಹೊಟ್ಟೆಯೊಳಗೆ ಸೇರಿಕೊಂಡಂತಿರುವ ಬೆನ್ನು, ಎತ್ತಿದ ಕೊರಳು, ಅಲ್ಲಲ್ಲಿ ಅಸ್ತವ್ಯಸ್ತವಾಗುವ ಹೆಜ್ಜೆಗಳು ಹೀಗೆ ಬೇಟೆಯಾಡುವ ಹುಲಿಗಳು ಮುಂದಕ್ಕೆ ಬರುತ್ತ ನೆಲವನ್ನು ಒದ್ದು ಮೇಲಕ್ಕೆ ನೆಗೆದು ಗರ್ಜಿಸುತ್ತ ಬಂದು ಹೆದರಿ ಕಂಗೆಟ್ಟು ಭಯಚಕಿತಗೊಂಡು ಪ್ರಾಣರಕ್ಷಣೆಗಾಗಿ ನಾಗಾಲೋಟಗೈಯುವ ಜಿಂಕೆಗಳನ್ನು ಅಪ್ಪಳಿಸಿ ಮುರಿದು ಬೆನ್ನಟ್ಟಿ ನೆಲಕ್ಕೆ ಬೀಳಿಸಿದುವು.

ಮುಂದಿನ ಪದ್ಯದಲ್ಲಿ ವಿವಿಧ ಬಗೆಯ ಬೇಟೆಗಳ ಹೆಸರುಗಳನ್ನು ಹೇಳುತ್ತಾನೆ ಕವಿ.
ಪದ್ಯ

ಕಂಟಣಿಸಿದಾ ಖಗವನೀ ಮೃಗವನೆಂತಕ್ಕೆ
ಬೇಂಟೆಯಾಡಿದನೆಂದು ಪೊಗಳಲೇವುದು ಗೋರಿ
ವೇಂಟೆ ಪಳಹರವೇಂಟೆ ಪಟವೇಂಟೆವಿದ್ಯಾಧರರವೇಂಟೆ ಚಿತ್ರವೇಂಟೆ
ಅಂಟುಜಲವೇಂಟೆ ತೋಹಿನ ವೇಂಟೆ ಘನಸೋಹು
ವೇಂಟೆಗಳೆನಿಪ್ಪ ಹೆಸರಂ ಹೊತ್ತು ಮೆರೆವುತ್ತಿ
ಪ್ಪೆಂಟು ತೆರದುಚಿತವೇಂಟೆಯನಾಡಿದಂ ಹರಿಶ್ಚಂದ್ರ ವಸುಧಾಧೀಶನು ೬೮

ಅರ್ಥ
ಹೆದರಿ ಹಿಮ್ಮೆಟ್ಟಿದ ಪಕ್ಷಿಗಳನ್ನೂ ಪ್ರಾಣಿಗಳನ್ನೂ ರಾಜ ಯಾವ ಯಾವ ಬಗೆಗಳಲ್ಲಿ ಬೇಟೆಯಾಡಿದನೆಂದು ಹೇಗೆ ಹೊಗಳಲಿ? ಗೋರಿಬೇಟೆ, ಪಳಹರ ಬೇಟೆ, ಪಟಬೇಟೆ, ವಿದ್ಯಾಧರ ಬೇಟೆ, ಚಿತ್ರಬೇಟೆ, ಅಂಟುಜಲಬೇಟೆ, ತೋಹಿನ ಬೇಟೆ, ಘನಸೋಹುಬೇಟೆ, ಇಂಥ ಪ್ರಸಿದ್ಧ ಹೆಸರುಗಳಿರುವ ಎಂಟು ಬಗೆಯ ಸೂಕ್ತವಾದ ಬೇಟೆಗಳನ್ನು ಹರಿಶ್ಚಂದ್ರ ರಾಜ ನಡೆಸಿದನು.

ಮುಂದಿನ ಪದ್ಯದಲ್ಲಿ ಯಾವ ಯಾವ ಜಾಗಗಳಲ್ಲಿ ಬೇಟೆಯಾಡಿದ ಎಂಬುದನ್ನು ಕವಿ ವರ್ಣಿಸುತ್ತಾನೆ
ಪದ್ಯ

ಗಣ್ಯತರ ಗೌತಮಾರಣ್ಯದಲಿ ದಂಡಕಾ
ರಣ್ಯದಲಿ ಕ್ರೌಂಚಕಾರಣ್ಯದಲಿ ಭಯಗುಹಾ
ರಣ್ಯದಲಿ ನುತದಶಾರಣ್ಯದಲಿ ಘೋರಕಂಠೀರವಾರಣ್ಯದಲಿ
ಪುಣ್ಯವಿಡಿದನಿಮಿಷಾರಣ್ಯದಲಿ ಮಾನುಷಾ
ರಣ್ಯದಲಿ ಬೇಂಟೆಯಾಡುತ್ತ ನಡೆತಂದಖಿಳ
ಪುಣ್ಯವೆಂದೆನಿಪ ಕಿಷ್ಕಿಂದಾಚಳಕ್ಕೆ ಬಂದನು ಹರಿಶ್ಚಂದ್ರನೃಪನು ೬೯

ಅರ್ಥ
ಶ್ರೇಷ್ಠವಾದ ಗೌತಮಾರಣ್ಯಗಳಲ್ಲಿ, ದಟ್ಟವಾದ ಕಾಡುಗಳು ಬೆಳೆದಿರುವ ದಂಡಕಾರಣ್ಯಗಳಲ್ಲಿ, ಕ್ರೌಂಚಕ ಅರಣ್ಯಗಳಲ್ಲಿ, ಭಯಂಕರವಾದ ಗುಹೆಗಳಿರುವ ಅರಣ್ಯಗಳಲ್ಲಿ, ಶ್ರೇಷ್ಠವಾದ ದಶಾರಣ್ಯಗಳಲ್ಲಿ, ಘೋರಸಿಂಹಗಳಿರುವ ಅರಣ್ಯಗಳಲ್ಲಿ, ಪುಣ್ಯಪ್ರದವಾದ ದೇವತೆಗಳಿರುವ ಅನಿಮಿಷಾರಣ್ಯಗಳಲ್ಲಿ , ಮನುಷ್ಯರ ಅರಣ್ಯಗಳಲ್ಲಿ ಬೇಟೆಯಾಡುತ್ತ ಬೇಟೆಯಾಡುತ್ತ ಅತ್ಯಂತ ಪುಣ್ಯಸ್ಥಳವೆಂದು ಖ್ಯಾತಿವೆತ್ತ ಕಿಷ್ಕಿಂದಾಚಲಕ್ಕೆ ರಾಜ ಬಂದನು.
ವಿಶೇಷ ವಿಚಾರ
ಈ ಬಗೆಬಗೆಯ ಹೆಸರುಗಳನ್ನು ಅನ್ವರ್ಥನಾಮಗಳೆಂದು ನಾವು ಭಾವಿಸಬಹುದು.
ಹರಿಶ್ಚಂದ್ರ ರಾಜ ಉತ್ತರದ ಅಯೋಧ್ಯೆಯಿಂದ ಬೇಟೆಗೆ ಹೊರಟವನು ಬಂದು ತಲಪಿದ್ದು ಕಿಷ್ಕಿಂದಾ ಪರ್ವತಕ್ಕೆ. ಅಲ್ಲಿ ಅವನಿಗಾದ ಅನುಭವವೇನು?
ಪದ್ಯ

ಉರಿಶೈತ್ಯವಾದಂತೆ ವಿಷವಮೃತವಾದಂತೆ
ತರಣಿ ತಂಪಾದಂತೆ ನೃಪನ ಬೇಂಟೆಯ ಬಿನದ
ದುರವಣೆಯನೊದವಿಸುವ ಹರಿವೈರಿ ಕರಿವೈರಿ ಹರಿಣವೈರಿಗಳು ಮೃಗವ
ಹರಿದಟ್ಟಿ ಪಿಡಿದಡಸಿ ಮೋದಿ ಮುರಿಯದೆ ನಿಂದು
ಮರವಟ್ಟ ಕಾರಣವನರುಪಬೇಕೆಂದೆಯ್ದಿ
ಸರಸಿರುಹಸಖಕುಲ ಹರಿಶ್ಚಂದ್ರ ಭೂಪಂಗೆ ಪೇಳ್ದರಂತಾ ಬೇಡರು ೭೦

ಅರ್ಥ
ಬಿಸಿ ಶೀತವಾದಂತೆ, ವಿಷ ಅಮೃತವಾದಂತೆ ಸೂರ್ಯ ತಂಪಾದಂತೆ ರಾಜನ ಬೇಟೆಯ ಮಹತ್ಕಾರ್ಯಕ್ಕೆ ಉತ್ಸಾಹವನ್ನೂ ಸಹಕಾರವನ್ನೂ ಕೊಡುತ್ತಿದ್ದ ಹರಿವೈರಿ, ಕರಿವೈರಿ, ಹರಿಣವೈರಿಗಳು ಯಾವುದೇ ಮೃಗಗಳನ್ನು ಬೆನ್ನಟ್ಟದೆ, ಹಿಡಿದು ಕೊಲ್ಲದೆ ಮರವಟ್ಟಂತೆ ನಿಂತುಕೊಂಡಿದೆ. ಇದಕ್ಕೇನು ಕಾರಣ? ನೀವು ಇದನ್ನು ವಿಚಾರಿಸಿ ತಿಳಿಸಿ ಎಂದು ಬೇಡರೆಲ್ಲ ಸೂರ್ಯಕುಲಜನಾದ ಹರಿಶ್ಚಂದ್ರ ರಾಜನ ಬಳಿಗೆ ಬಂದು ಹೇಳಿದರು.
ವಿಶೇಷ ವಿಚಾರ
ಇದು ರಾಜನಿಗೂ ಅಚ್ಚರಿಯ ವಿಚಾರವಾಗಿರುತ್ತದೆ. ಅವನು ಅದಕ್ಕೆ ಕಾರಣವನ್ನು ಊಹಿಸುತ್ತಾನೆ. ಅದು ಯಾವುದು?

ಪದ್ಯ

ಚಿತ್ರತರವಾದುದಿಂದೀ ಕಾನನಂ ಮಹಾ
ಕ್ಷೇತ್ರದೊಳಗಣದಾಗದಿರದೆನುತ ಬರೆ ಮುಂದೆ
ಚಿತ್ರಕಾಯಾಜಿನದ ಸುಲಿಪಲ್ಲ ಭಸ್ಮದ ಜಟಾಭರದ ಮುನಿನಾಥನು
ಮಿತ್ರರೊಡಗೂಡಿ ಮಿತ್ರಪ್ರಕಾಶಂ ಲೋಕ
ಮಿತ್ರನಾತ್ಮಪವಿತ್ರಚರಿತವಾಕ್ಯಂ ಮರುತ
ಮಿತ್ರಕಾರ್ಯದ ಪರಿಕರಂಗಳಂ ಸವಕಟ್ಟುತಿರಲು ಭೂಪತಿ ಕಂಡನು ೭೧

ಅರ್ಥ
ಇವತ್ತು ಈ ಕಾಡು ತುಂಬ ವಿಚಿತ್ರವಾಗಿದೆಯಲ್ಲ! ಇದು ಯಾವುದೋ ಪುಣ್ಯಕ್ಷೇತ್ರದ ಭಾಗವಾಗಿರಬೇಕು ಎಂದು ಅಚ್ಚರಿ, ಅನುಮಾನಗಳಿಂದ ರಾಜ ಮುಂದೆ ಬರುತ್ತಿರಲು ಹುಲಿ ಚರ್ಮವನ್ನು ಧರಿಸಿದ, ಸುಂದರವಾದ ಹಲ್ಲುಗಳುಳ್ಳ( ನಗುತ್ತ), ಭಸ್ಮಧಾರಿಯಾದ, ಜಟಾಧಾರಿಯಾದ ಸೂರ್ಯನಂತೆ ಬೆಳಗುವ, ಪವಿತ್ರಾತ್ಮನೂ ಸಚ್ಚಾರಿತ್ರ್ಯವಂತನೂ ಆದ ಮುನಿಶ್ರೇಷ್ಠನೊಬ್ಬನು ತನ್ನ ಪರಿವಾರ ಸಮೇತ ಅಗ್ನಿಕಾರ್ಯಕ್ಕಾಗಿ ಸಮಿತ್ತುಗಳನ್ನು ಸಿದ್ಧಪಡಿಸುವುದನ್ನು ಕಂಡ.

ಪದ್ಯ

ಹೆಂದದಾನಂದದಿಂ ಬಂದು ವಂದಿಸಿ ಮುಂದೆ
ನಿಂದೆಂದಿನಂದದಿಂದಿಂದು ಮುದದಿಂದ ಮೃಗ
ವೃಂದದೊಳಗೊಂದುಮಂ ಕೊಂದಿಕ್ಕದೆಮ್ಮ ಮೃಗವಿರ್ದುದಕೆ ಕಾರಣವನು
ತಂದೆ ಕುಂದದೆ ಕರುಣಿಸೆಂದು ವಂದಿಸಿ ಭೂಪ
ಕಂದರ್ಪನಿನಕುಲ ಹರಿಶ್ಚಂದ್ರ ಭೂನಾಥ
ನೆಂದಡಾ ಮುನಿನಾಥನಂದು ಮಾರುತ್ತರಂ ಗುಡಲೆಂದು ತರಿಸಂದನು ೭೨

ಅರ್ಥ
ಅತ್ಯಂತ ಸಂತೋಷದಿಂದ ಮುಂದಕ್ಕೆ ಧಾವಿಸಿ ಬಂದು ಮುನಿಗೆ ನಮಸ್ಕರಿಸಿ ಆತನ ಮುಂಭಾಗದಲ್ಲಿ ನಿಂತು, ʻಎಂದಿನಂತೆ ನಮ್ಮ ಮೃಗಗಳು ಯಾವುದೇ ಮೃಗಪಕ್ಷಿಗಳನ್ನು ಬೇಟೆಯಾಡದೆ ಸುಮ್ಮನಿದ್ದುದಕ್ಕೆ ಕಾರಣವೇನು ತಂದೆ? ತಾವಿದನ್ನು ತಿಳಿಸಬೇಕುʼ ಎಂದು ಸೂರ್ಯಕುಲದ ಅತಿಶ್ರೇಷ್ಠನಾದ ಹರಿಶ್ಚಂದ್ರ ಭೂನಾಥ ಆ ಮುನಿವರನನ್ನು ಕೇಳಿದಾಗ ಆತನು ರಾಜನಿಗೆ ಕಾರಣವನ್ನು ತಿಳಿಸಲು ಮುಂದಾದನು.

ಪದ್ಯ

ನೆರೆದ ವೇದಂಗಳುಗ್ಗಡವುಪನಿಷತ್ತುಗಳ
ಗರವಟಿಗೆಯಣಿಮಾದಿಗಳ ಬೊಬ್ಬೆ ಧರ್ಮದ
ಬ್ಬರ ಘನಜ್ಞಾನಪ್ರಭಾದೀಪ್ತಿಗಳು ಹರಿಬ್ರಹ್ಮಾದಿ ಸುರರ ಕಾಹು
ಪುರುಷಾರ್ಥ ನಾಲ್ಕರೊಳು ಸಲುಗೆ ಪುಣ್ಯದ ಮಂದೆ
ಸಿರಿಸರಸ್ವತಿಯರೆಡೆಯಾಟವೆಸೆದಿರೆ ಜಗ
ದ್ಗುರು ವಿರೂಪಾಕ್ಷನಿಲ್ಲಿಯೆ ಸುಖದೊಳಿಪ್ಪ ಪಂಪಾಕ್ಷೇತ್ರವಿದೆಂದನು ೭೩

ಅರ್ಥ
ಶ್ರೇಷ್ಠವಾದ ವೇದೋಪನಿಷತ್ತುಗಳು ಕಾವಲು ತಿರುಗುವ, ಅಣಿಮಾದಿ ಯೋಗಸಿದ್ಧಿಗಳ ಧ್ವನಿಗಳ, ಧರ್ಮದ ಅಬ್ಬರವಿರುವ, ಜ್ಞಾನದ ಪ್ರಭಾದೀಪಗಳು ಬೆಳಗುವ, ಹರಿಬ್ರಹ್ಮಾದಿ ದೇವತೆಗಳ ರಕ್ಷಣೆಯಿರುವ ಚತುರ್ವಿಧ ಪುರುಷಾರ್ಥಗಳನ್ನು ಸಾಧಿಸಬಹುದಾದ, ಪುಣ್ಯದ ರಾಶಿಯೇ ತುಂಬಿರುವ, ಲಕ್ಷ್ಮೀ ಸರಸ್ವತಿಯರ ವಿಹಾರಭೂಮಿಯೆನಿಸಿದ ವಿರೂಪಾಕ್ಷನು ಸುಖವಾಗಿ ನೆಲಸಿರುವ ಪಂಪಾಕ್ಷೇತ್ರ ಇದು ಎಂದನು.

ಪದ್ಯ

ಬಿಡದೊಮ್ಮೆ ಕಂಡ ಜೀವರ ಭವವ್ರಜದ ಬೆಂ
ಬಡಿಗೆಪಾತಕಕೋಟಿಯಾ ಕತ್ತಿ ದುಷ್ಕರ್ಮ
ದೆಡೆಗೊರಳ ಕತ್ತರಿ ಸಮಸ್ತರೋಗಂಗಳೆಡೆಗೊಡ್ಡಿದಲಗಜ್ಞಾನದ
ನಡುದಲೆಯ ಗರಗಸಂ ಮಲೆವ ಮಾಯೆಯ ಬಸುರ
ನೊಡೆಹೊಯ್ವ ಶೂಲವಿನ್ನುಳಿದ ದುರಿತವನುರುಹಿ
ಸುಡುವ ಕಿಚ್ಚೆಂದೆನಿಪ ತುಂಗಭದ್ರಾನದಿಯನವನೀಶ ನೋಡೆಂದನು ೭೪

ಅರ್ಥ
ಒಮ್ಮೆ ನೋಡಿದ ಜನರ ಜೀವಕೋಟಲೆಗಳಿಗೆ ಬಡಿಗೆ, ಪಾತಕಕೋಟಿಗಳಿಗೆ ಕತ್ತಿ, ದುಷ್ಕರ್ಮಗಳ ಕೊರಳಿಗೆ ಕತ್ತರಿ, ಸಮಸ್ತ ರೋಗಗಳನ್ನು ಕತ್ತರಿಸಿ ಹಾಕುವ ಖಡ್ಗ, ಅಜ್ಞಾನದ ನಡುದಲೆಯನ್ನು ಸೀಳುವ ಗರಗಸ, ಮೀರಿ ಬರುವ ಮಾಯೆಯ ಹೊಟ್ಟೆಯನ್ನು ಬಗಿಯುವ ಶೂಲ, ಇನ್ನಿತರ ಪಾಪಗಳನ್ನು ಸುಟ್ಟು ಹಾಕುವ ಬೆಂಕಿ- ಹೀಗಿರುವ ತುಂಗಭದ್ರಾನದಿಯನ್ನು ನೋಡು ರಾಜಾ ಎಂದು ಹೇಳಿದರು.

ಪದ್ಯ

ನುಡಿದೆನ್ನ ಸಂಶಯದ ಸಾಲ ಸವರಿದೆ ನಿನ್ನ
ಪಡೆದ ಪುಣ್ಯಾಧಿಕನ ಹೆಸರಾವುದಯ್ಯ ನೀ
ನುಡಿಯೆಂದಡೆರಡನೆಯ ಪುರವೈರಿಯೆನಿಪ ವಾಸಿಷ್ಠಮುನಿಪನ ಮೊಮ್ಮನು
ಬಿಡೆ ಪರಾಶರನು ನಾನೆನೆ ಹೆಚ್ಚಿ ಹಿಗ್ಗಿ ನಡೆ
ನಡೆತಂದೆ ಮದ್ಗುರುಗಳಡಿಗಳೆಡೆಗೆಂದು ಬಳಿ
ವಿಡಿದು ನಡೆತಂದು ಕಂಡನು ಮುಂದೆ ಮುನಿವರೇಣ್ಯನನವನಿಪವರೇಣ್ಯನು ೭೫

ಅರ್ಥ
ಈ ಪರಿಸರದ ಮಹಿಮೆಯನ್ನು ತಿಳಿಸಿ ನನ್ನ ಸಂಶಯದ ಸಾಲವನ್ನು ತೀರಿಸಿದೆ. ನಿನ್ನಂಥ ಉತ್ತಮ ಶಿಷ್ಯನನ್ನು ಪಡೆದ ಪುಣ್ಯವಂತನ ಹೆಸರೇನು ಹೇಳು ಎಂದಾಗ ಎರಡನೆಯ ಶಿವನೆನಿಸಿದ ವಸಿಷ್ಠಮುನಿಯ ಮೊಮ್ಮಗನು ನಾನು, ಪರಾಶರನೆಂಬುದು ನನ್ನ ಹೆಸರು ಎಂದಾಗ ಅತಿಶಯವಾದ ಸಂತೋಷದಿಂದ ಉಬ್ಬಿ ʻಅಪ್ಪಾ, ನಡೆ ನಡೆ, ನನ್ನ ಗುರುದೇವರ ಪಾದಗಳ ಬಳಿಗೆ ಕರೆದುಕೊಂಡು ಹೋಗುʼ ಎನ್ನುತ್ತ ಆತನನ್ನು ಹಿಂಬಾಲಿಸಿ ಬಂದು ರಾಜಶ್ರೇಷ್ಠನಾದ ಹರಿಶ್ಚಂದ್ರನು ತನ್ನ ಕಣ್ಣಮುಂದೆಯೇ ಇದ್ದ ಮುನಿಶ್ರೇಷ್ಠನನ್ನು ಕಂಡನು.

ಕಾವ್ಯರಸಯಾನ ಮುಂದುವರಿದುದು: ೧೨.೦೮.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ಹರಿಶ್ಚಂದ್ರ ಮಹಾರಾಜ ಕಾಡುಮೃಗಪಕ್ಷಿಗಳ ಹಾವಳಿಯಿಂದ ಪ್ರಜೆಗಳಿಗುಂಟಾದ ಕಷ್ಟವನ್ನು ನಿವಾರಿಸಲು ಬೇಟೆಯಾಡಲು ಬಳಸುವ ಮೃಗಪಕ್ಷಿಗಳನ್ನೂ ಆಯುಧಗಳನ್ನೂ ಬೇಟೆಗಾರರನ್ನೂ ಕೂಡಿಸಿಕೊಂಡು ಬೇಟೆಗೆ ಹೋಗುತ್ತಾನೆ. ಅತಿ ಭಯಂಕರವಾದ ಕಾನನದಲ್ಲಿ ಸುತ್ತಾಡುತ್ತ ಕಾಡುಮೃಗ, ಪಕ್ಷಿಗಳನ್ನು ಬೇಟೆಯಾಡುತ್ತ ಮುಂದೆ ಮುಂದೆ ಬಂದು ಕಿಷ್ಕಿಂದಾಚಲಕ್ಕೆ ಬರುತ್ತಾನೆ. ಅಲ್ಲಿಗೆ ಬಂದ ತಕ್ಷಣ ಮೃಗಪಕ್ಷಿಗಳು ಬೇಟೆಯಾಡದೆ ತಟಸ್ಥವಾಗಿ ನಿಂತಿರುವುದು ನೋಡಿ ಅತ್ಯಾಶ್ಚರ್ಯದಿಂದ ವಿಚಾರಿಸಿದಾಗ ಅದು ವಸಿಷ್ಠನ ಆಶ್ರಮವೆಂಬುದು ಗೊತ್ತಾಗುತ್ತದೆ. ಹರಿಶ್ಚಂದ್ರ ಗುರುವಾದ ವಸಿಷ್ಠನನ್ನು ಭೇಟಿಯಾಗಲು ಹೋಗುತ್ತಾನೆ. ಮುಂದೆ ವಸಿಷ್ಠ ಮತ್ತು ಹರಿಶ್ಚಂದ್ರರ ಭೇಟಿ -ಸಂಭಾಷಣೆ

ಪದ್ಯ

ತಿಳಿಗೊಳನ ಬಳಸಿ ನಳನಳಿಸಿ ಬೆಳೆದೆಳಮಾವು
ಗಳ ತಳದ ಮಲ್ಲಿಕಾಮಂಟಪದ ತಣ್ಣೆಳಲ
ತೆಳುಗಾಳಿಯೊಳು ಪುಣ್ಯವಪ್ಪ ಪುಳಿನಸ್ಥಳದ ಮೇಲಶೋಕೆಯ ತರುವಿನ
ತಳಿರ ತೊಂಗಲ ಗದ್ದುಗೆಯೊಳೋಲಗಂಗೊಟ್ಟು
ಬಳಸಿ ಹಿಂದೆಡಬಲದೊಳಿಪ್ಪ ಮುನಿಗಳ ಕೂಡೆ
ನಲವಿನಿಂ ನುಡಿವ ಪಶುಪತಿಯಂತಿರ್ದ ಮುನಿನಾಥ ಕಣ್ಗೆಸೆದಿರ್ದನು ೭೬

ಅರ್ಥ
ತಿಳಿನೀರಿನ ಕೊಳ, ಅದನ್ನು ಬಳಸಿದ ಎಳೆಯ ಮಾವಿನ ಮರಗಳು, ಮರಗಳ ಬುಡದಲ್ಲಿ ಹಬ್ಬಿದ ಮಲ್ಲಿಗೆಯ ಬಳ್ಳಿಮಂಟಪ, ಅದರ ತಣ್ಣಗಿನ ನೆರಳಿನಲ್ಲಿ ಬೀಸುವ ಮಂದವಾದ ಗಾಳಿಯನ್ನು ಆಸ್ವಾದಿಸುತ್ತ ಪುಣ್ಯಪ್ರದವಾದ ಮರಳ ರಾಶಿಯ ಮೇಲೆ ಅಶೋಕ ವೃಕ್ಷದ ಚಿಗುರಿನ ಆಸನದಲ್ಲಿ ಕುಳಿತು ತನ್ನ ಹಿಂದೆ ಮುಂದೆ ಎಡಬಲಗಳಲ್ಲಿ ಕುಳಿತಿರುವ ಮುನಿಗಳ ಜೊತೆಯಲ್ಲಿ ನಗುನಗುತ್ತ ಮಾತನಾಡುತ್ತಿದ್ದ ಮುನಿನಾಯಕ ವಸಿಷ್ಠ ಸಾಕ್ಷಾತ್‌ ಪರಶಿವನೋ ಎಂಬಂತೆ ಶೋಭಿಸುತ್ತಿದ್ದನು.
ಮುಂದಿನ ಪದ್ಯದಲ್ಲಿ ವಸಿಷ್ಠ ಮಹರ್ಷಿಯ ವರ್ಣನೆ.

ಪದ್ಯ

ನೀತಿ ಬಲಿದುದೋ ಶಾಂತಿ ರೂಪಾಯ್ತೋ ಸದ್ಗುಣ
ವ್ರಾತವೇ ಮುನಿಯಾಯ್ತೋ ಮುಕ್ತಿ ಜಡೆವೊತ್ತುದೋ
ಭೂತದಯೆ ವಲ್ಕಲಾಂಚಲವಾಂತುದೋ ಪುಣ್ಯವೆಳಸಿ ಭಸಿತವನಿಟ್ಟುದೋ
ನೂತನಶ್ರುತ್ಯರ್ಥ ನುಡಿಗಲಿತುದೋ ಘನ
ಸ್ವಾತಂತ್ರ್ಯವೃತ್ತಿ ಗೋಚರಿಸಲೆಳೆಸಿತೋ ಎಂಬ
ಚಾತುರ್ಯದಿಂದಿರ್ದ ಮುನಿನಾಥನಂ ಕಂಡು ಹರುಷದಿಂ ಭೂನಾಥನು ೭೭

ಅರ್ಥ
ನೀತಿಯೇ ಬಲವನ್ನು ಪಡೆಯಿತೋ ಶಾಂತಿಯೇ ಆಕಾರವನ್ನು ತಳೆಯಿತೋ ಸರ್ವಸದ್ಗುಣಗಳೇ ಮುನಿಯಾದುವೋ ಮುಕ್ತಿಯೇ ಜಟಾರೂಪವಾಯಿತೋ ಜೀವದಯೆಯೇ ನಾರುಬಟ್ಟೆಯಾಯಿತೋ ಪುಣ್ಯವೇ ಹಣೆಯ ತಿಲಕವಾಗಿ ಶೋಭಿಸಿತೋ ಶ್ರುತಿಗಳ ನವನವೀನ ಅರ್ಥಗಳು ಮಾತುಗಳಾದುವೋ ಅಡೆತಡೆಗಳಿಲ್ಲದ ಮುಕ್ತವಾದ ವಾತಾವರಣವೇ ಇಲ್ಲಿರಲು ಬಯಸಿತೋ ಎಂಬಂತಿರುವ ಮುನಿನಾಥನನ್ನು ನೋಡಿ ಹರಿಶ್ಚಂದ್ರ ಸಂತೋಷಗೊಂಡನು.

ವಿಶೇಷ ವಿಚಾರ
ನೂತನ ಶ್ರುತ್ಯರ್ಥ ನುಡಿಗಲಿತುದೋ ಎಂಬ ಸಾಲಿನಲ್ಲಿ ಕಾಲದಿಂದ ಕಾಲಕ್ಕೆ ಶ್ರುತಿಗಳ ಅರ್ಥ, ಭಾವ, ಅನುಸರಣೆಯಲ್ಲಿ ಬದಲಾವಣೆಗಳು ಆಗುತ್ತಿದ್ದುವು, ಆಗಬೇಕು ಎಂಬ ಸೂಕ್ಷ್ಮ ಹುದುಗಿದೆ. ಹಾಗೆಯೇ ʻಘನಸ್ವಾತಂತ್ರ್ಯ ವೃತ್ತಿ ಗೋಚರಿಸಲೆಳಸಿತೋʼ ಎನ್ನುವ ಮಾತುಗಳೂ ರಾಘವಾಂಕನ ಪ್ರಗತಿಪರ ಧೋರಣೆಗೆ ಪೂರಕ ಅಂಶ.
ಮುಂದಿನ ಪದ್ಯದಲ್ಲಿ ಹರಿಶ್ಚಂದ್ರ ತನ್ನ ಆರಾಧ್ಯಗುರುವನ್ನು ಬಗೆಬಗೆಯಾಗಿ ಕರೆದು ಸ್ತುತಿಸುತ್ತಾನೆ.

ಪದ್ಯ

ಸುರನರೋರಗನಮಿತ ಚರಣ ಜಯಜಯ ದಯಾ
ಭರಣ ಜಯಜಯ ಕೃಪಾವರಣ ಜಯಜಯ ಶಾಂತಿ
ಕರಣ ಜಯಜಯ ವಿಗತಮರಣ ಜಯಜಯ ದುರಿತ ಹರಣ ಜಯಜಯತು ಜಯತು
ಗುರುವೆ ಕುಲಗುರುವೆ ಘನಗುರುವೆ ಪರಗುರುವೆಮ
ದ್ಗುರುವೆ ಸದ್ಗುರುವೆ ಶರಣಾಗು ಶರಣಾಗೆಂದು
ಧರಣಿಪತಿ ಹರಹಿದನು ನಿಜತನುವನಾ ಮುನಿಯ ಚರಣಸರಸಿಜದೆಡೆಯೊಳು ೭೮

ಅರ್ಥ
ದೇವ, ಮಾನವ, ಉರಗ- ಮೂರು ಲೋಕದವರೂ ನಮಿಸುವ ಪಾದಗಳುಳ್ಳ ನಿನಗೆ ಜಯವಾಗಲಿ, ದಯಾಮಯನಿಗೆ ಜಯವಾಗಲಿ, ಕರುಣಾಶಾಲಿಗೆ ಜಯವಾಗಲಿ, ಶಾಂತಿಪ್ರದನಿಗೆ ಜಯವಾಗಲಿ, ಮೃತ್ಯುಂಜಯನಿಗೆ ಜಯವಾಗಲಿ, ಪಾಪನಾಶಕನಿಗೆ ಜಯವಾಗಲಿ, ಗುರುವೇ, ಕುಲಗುರುವೇ, ಘನಗುರುವೇ, ಪರಗುರುವೇ, ನನ್ನ ಗುರುವೇ, ಸದ್ಗುರುವೇ ಶರಣು ಶರಣು ಎನ್ನುತ್ತ ಮುನಿಯ ಪಾದಕಮಲಗಳಿಗೆ ದೀರ್ಘದಂಡ ಪ್ರಣಾಮಗಳನ್ನು ಸಲ್ಲಿಸಿದ.
ಗುರುವಿನ ಬಗೆಗಿನ ಭಕ್ತಿಯ ಆವೇಶದಲ್ಲಿ ಹರಿಶ್ಚಂದ್ರ ಹೇಗೆ ಮೈಮರೆತ ಎಂಬುದನ್ನು ಕವಿ ಬಹು ಸುಂದರವಾಗಿ ವರ್ಣಿಸುತ್ತಾನೆ ಮುಂದಿನ ಪದ್ಯದಲ್ಲಿ.

ಪದ್ಯ

ಬಗೆಮೀರಿ ಲೋಚನದೊಳೊಗೆವ ಸುಖಜಲ ಮೆಯ್ಯೊ
ಳೊಗೆವ ಪುಳಕಂ ಕಯ್ಯೊಳೊಗೆವ ಕಂಪನ ನುಡಿಯೊ
ಳೊಗೆವ ತೊದಳಮಳಕದಪಿನೊಳೊಗೆವ ಬೆಮರು ಕಂಠದೊಳೊಗೆವ ಹೊಸಗದ್ಗದ
ಮಿಗೆ ಮೊಗದೊಳೊಗೆವ ನಸುನಗೆ ಘನಮಯೋಮತಿಯೊ
ಳೊಗೆವ ಪರವಶವೆರಸಿ ಮೆರೆವ ಭೂರಮಣನಂ
ಮೊಗವೆತ್ತಿ ಕುಳ್ಳಿರಿಸಿ ಮೆಯ್ದಡವಿ ಬೋಳೈಸಿ ಮುನಿನಾಥನಿಂತೆಂದನು ೭೯

ಅರ್ಥ
ಕಣ್ಣಿನಿಂದ ಆನಂದ ಜಲ ಅಂಕೆಗೆ ಸಿಗದೆ ಹರಿಯುತ್ತಿದೆ, ಶರೀರ ನಿರಂತರವಾಗಿ ಪುಳಕಗೊಳ್ಳುತ್ತಿದೆ, ಕೈಗಳು ಕಂಪಿಸುತ್ತಿವೆ, ಮಾತು ಗದ್ಗದಿಸುತ್ತಿದೆ, ಕೆನ್ನೆಗಳು ಬೆವರುತ್ತಿವೆ, ಕಂಠ ತೊದಲುತ್ತಿದೆ, ಮುಖದಲ್ಲಿ ನಗು ಹೊಮ್ಮುತ್ತಿದೆ, ಮನಸ್ಸು ಪರವಶಗೊಳ್ಳುತ್ತಿದೆ- ಹೀಗೆ ಸರ್ವಾಂಗ ಭಾವುಕನಾದ ಹರಿಶ್ಚಂದ್ರನನ್ನು ಮೇಲೆತ್ತಿ ಕುಳ್ಳಿರಿಸಿ ಮೈದಡವಿ, ಸಂತೈಸಿದ ವಸಿಷ್ಠ ಮುನಿನಾಥ ಹರಿಶ್ಚಂದ್ರ ಆಶ್ರಮಕ್ಕೆ ಬಂದ ಕಾರಣವೇನೆಂದು ಪ್ರಶ್ನಿಸುತ್ತಾನೆ.

ಪದ್ಯ

ನೀನೆತ್ತಲೀ ವಿಪಿನವೆತ್ತಲೀ ಬನಕೆ ನೀ
ನೇನು ಕಾರಣ ಬಂದೆಯೆಲೆ ಮಗನೆ ಹೇಳೆನಲು
ಭೂನಾಥನೆಂದ ಖಗಮೃಗದ ಕಾಟಕ್ಕೆ ಸೈರಿಸಲಾರದವನೀಜನಂ
ಹಾನಿವೆತ್ತೊರಲಿ ಮೊರೆಯಿಡೆ ಕೇಳ್ದು ಬೇಂಟೆಯ ಸು
ಮಾನಕ್ಕೆ ಬಂದೆನೆಂದೆನೆ ತ್ರಿಕಾಲೋಚಿತ
ಜ್ಞಾನಿ ಮುನಿಯರಿದನರಸನ ಮೇಲೆ ಕೌಶಿಕನ ಕಾಟವಡಿಯಿಟ್ಟನುವನು ೮೦

ಅರ್ಥ
ನೀನೆತ್ತ, ಈ ಕಾಡೆತ್ತ! ಈ ಕಾಡಿಗೆ ನೀನು ಬಂದ ಕಾರಣವೇನು, ಹೇಳು ಮಗನೆ ಎಂದು ಮುನಿ ವಸಿಷ್ಠ ಕೇಳಿದಾಗ ಖಗಮೃಗಗಳ ಕಾಟದಿಂದ ಸಹಿಸಲಾರದೆ ನೊಂದು ಬೆಂದು ಪ್ರಜಾಜನರೆಲ್ಲ ಹಾಹಾಕಾರಗೊಂಡು ಮೊರೆಯಿಟ್ಟಾಗ ಅವರ ಕಷ್ಟವನ್ನು ನಿವಾರಿಸಲು ಬೇಟೆಯಾಡಲು ಬಂದೆ ಎಂದು ಮಹಾರಾಜ ಉತ್ತರಿಸುತ್ತಾನೆ. ರಾಜನ ಉತ್ತರದಿಂದ ತ್ರಿಕಾಲಜ್ಞಾನಿಯಾದ ವಸಿಷ್ಠ ಮಹರ್ಷಿ ರಾಜನ ಮೇಲೆ ವಿಶ್ವಾಮಿತ್ರನ ಕಾಟ ಶುರುವಾಯಿತು ಎಂಬುದನ್ನು ತಿಳಿದುಕೊಂಡನು.
ಮುಂದಿನ ಪದ್ಯದಲ್ಲಿ ವಸಿಷ್ಠನ ಉಭಯಸಂಕಟ, ಶಿಷ್ಯನ ಮೇಲಿನ ಪ್ರೀತಿಯನ್ನು ಗಮನಿಸಬಹುದು.

ಪದ್ಯ

ವಿಷಮ ವಿಶ್ವಾಮಿತ್ರ ಮುನಿ ಮುನಿದು ತಪ್ಪ ಸಾ
ಧಿಸಿದಪ್ಪನರಿದಿರೆಂದರುಪಬೇಕರುಪಿದಡೆ
ಪಿಸುಣತ್ವವರಿಪದಿರ್ದಡೆ ನೃಪನ ಕೇಡನಾನೋತುಪೇಕ್ಷಿಸಿದಾತನು
ಗಸಣಿಯಾಯ್ತೇಗೆಯ್ವೆನೆಂದು ಮನದೊಳಗೆ ಚಿಂ
ತಿಸಿ ಮನೆಗೆ ಬಂದ ಶಿಷ್ಯನನು ಬೋಧಿಸಲು ಕುಂ
ದೆಸೆಯದಿರದಿದ ಪೇಳದಂತೆ ಪೇಳ್ದೆನೆಂದು ನೆನೆದನಾ ಮುನಿನಾಥನು ೮೧

ಅರ್ಥ
ದುಷ್ಟನಾದ ವಿಶ್ವಾಮಿತ್ರ ಮುನಿ ಕೋಪಗೊಂಡು ನಿನ್ನ ಮೇಲೆ ತಪ್ಪನ್ನು ಸಾಧಿಸಬೇಕೆಂದು ಹೊರಟಿದ್ದಾನೆ. ಇದು ನಿನಗೆ ತಿಳಿದಿರಲಿ, ಎಂದು ಎಚ್ಚರಿಸಬೇಕು. ಆದರೆ ಹಾಗೆ ತಾನು ತಿಳಿಸಿದರೆ ಚಾಡಿ ಹೇಳಿದಂತಾಗುತ್ತದೆ. ಹೇಳದಿದ್ದರೆ ರಾಜನಿಗೆ ಒದಗಬಹುದಾದ ಅಪಾಯವನ್ನು ತಿಳಿದೂ ಉಪೇಕ್ಷಿಸಿದಂತಾಗುತ್ತದೆ. ಕಷ್ಟವಾಯ್ತಲ್ಲ, ಏನು ಮಾಡಲಿ ಎಂದು ಮನಸ್ಸಿನಲ್ಲೇ ಅತಿಶಯವಾಗಿ ಚಿಂತಿಸಿ ಕೊನೆಗೆ ಮನೆಗೆ ಬಂದ ಶಿಷ್ಯನನ್ನು ಎಚ್ಚರಿಸುವುದು ತಪ್ಪಾಗುವುದಿಲ್ಲ. ಆದರೂ ನೇರವಾಗಿ ಹೇಳದೆ ಪರೋಕ್ಷವಾಗಿ ಸೂಚಿಸುತ್ತೇನೆ ಎಂದು ವಸಿಷ್ಠ ಯೋಚಿಸುತ್ತಾನೆ.

ವಿಶೇಷ ವಿಚಾರ
ನೀನು ಹೋಗಿ ರಾಜನನ್ನು ಎಚ್ಚರಿಸು ಎಂದು ವಿಶ್ವಾಮಿತ್ರ ಹೇಳಿದಾಗ ತಾನು ಹರಿಶ್ಚಂದ್ರನಿಗೆ ಯಾವ ರೀತಿಯಿಂದಲೂ ಎಚ್ಚರಿಸುವ ಅಗತ್ಯವಿಲ್ಲ ಎಂದು ಸಮರ್ಥಿಸಿದ ವಸಿಷ್ಠನಿಗೆ ಈಗ ರಾಜನೇ ತನ್ನ ಕಣ್ಣಮುಂದೆ ನಿಂತಾಗ ಹೇಳದಿರಲು ಸಾಧ್ಯವಾಗಲಿಲ್ಲ ಎನ್ನುವುದು ಅವನ ಶಿಷ್ಯಪ್ರೀತಿಯ ಪರಾಕಾಷ್ಠೆಯನ್ನು ದರ್ಶಿಸುತ್ತದೆ. ಈಗ ವಸಿಷ್ಠ ವಿಶ್ವಾಮಿತ್ರನಿಗೂ ತನಗೂ ನಡೆದ ವಾಗ್ವಾದವನ್ನು ನೇರವಾಗಿ ಹೇಳದೆ ಎಚ್ಚರಿಕೆಯನ್ನು ನೀಡುತ್ತಾನೆ.

ಪದ್ಯ

ಎನ್ನನೊಲುವಡೆ ಕುಲಾಚಾರಮಂ ಬಿಡದಿರ್ಪ
ಡುನ್ನತಿಕೆ ಬೇಹಡುತ್ತಮಕೀರ್ತಿ ಕೆಡದಿಹಡೆ
ನನ್ನಿಯುಳಿವೊಡೆ ಮಗನೆ ಹೋಗದಿರು ಮರೆದು ವಿಶ್ವಾಮಿತ್ರನಾಶ್ರಮಕೆ
ಗನ್ನದಿಂ ಮರಹಿಕ್ಕಿ ಕೊಂಡೊಯ್ದು ಬಳಿಕ ಮುನಿ
ಬನ್ನಬಡಿಸಿಯೆ ಕಾಡಿದಪನರಿದಿರೆಂದು ಪೇ
ಳ್ದಿನ್ನೊಂದು ಚೋದ್ಯಮಂ ನೋಡು ಬಾಯೆಂದು ತಂದನು ವಿರೂಪಾಕ್ಷನೆಡೆಗೆ ೮೨

ಅರ್ಥ
ನನ್ನನ್ನು ಪ್ರೀತಿಸುವುದಿದ್ದರೆ, ಕುಲಾಚಾರವನ್ನು ಬಿಡಬಾರದೆಂದರೆ, ಉನ್ನತಿಯನ್ನು ಬಯಸುವುದಿದ್ದರೆ, ಕೀರ್ತಿ ಅಳಿಯಬಾರದೆಂದರೆ, ಸತ್ಯ ಉಳಿಯಬೇಕೆಂದರೆ, ಮರೆತಾದರೂ ನೀನು ವಿಶ್ವಾಮಿತ್ರನ ಆಶ್ರಮಕ್ಕೆ ಹೋಗದಿರು ಮಗನೇ, ಹೋದೆಯೆಂದಾದರೆ ಆತ ನೀನು ಮೈಮರೆಯುವಂತೆ ಏನಾದರೂ ಮಾಡಿ, ಮೋಸದಿಂದ ಕರೆದುಕೊಂಡು ಹೋಗಿ ನಾನಾ ಬಗೆಯ ಪೀಡನೆಗಳನ್ನು ಕೊಟ್ಟು ಕಾಡುತ್ತಾನೆ. ಇದು ನಿನಗೆ ತಿಳಿದಿರಲಿ. ಬಾ ನಿನಗೆ ಇನ್ನೊಂದು ಅಚ್ಚರಿಯನ್ನು ತೋರಿಸುತ್ತೇನೆʼ ಎನ್ನುತ್ತ ವಸಿಷ್ಠ ಹರಿಶ್ಚಂದ್ರನನ್ನು ವಿರೂಪಾಕ್ಷನ ಸನ್ನಿಧಾನಕ್ಕೆ ಕರೆದುಕೊಂಡು ಹೋಗುತ್ತಾನೆ.

ವಿಶೇಷ ವಿಚಾರ
ಇಲ್ಲಿ ದೇವೇಂದ್ರನ ಓಲಗದಲ್ಲಿ ನಡೆದ ವಿಚಾರವನ್ನಾಗಲೀ ವಿಶ್ವಾಮಿತ್ರನೊಂದಿಗಿನ ತನ್ನ ಶಪಥವನ್ನಾಗಲೀ ವಸಿಷ್ಠ ಹೇಳುವುದಿಲ್ಲ. ಆದರೂ ವಿಶ್ವಾಮಿತ್ರನ ಆಶ್ರಮಕ್ಕೆ ಹೋದರೆ ಅವನಿಂದ ಕಷ್ಟಗಳು ಬರುವುದು ಖಂಡಿತ, ಎಚ್ಚರವಾಗಿರು ಎಂದು ತಿಳಿಸುವುದು ಅವನ ಶಿಷ್ಯಪ್ರೀತಿಯೆಂದೇ ತಿಳಿದುಕೊಳ್ಳಬೇಕು. ಮುಂದಿನ ಮಾತಿಗೆ ಅವಕಾಶವೀಯದೆ ತಕ್ಷಣ ದೇವರ ದರ್ಶನಕ್ಕೆ ಕರೆದೊಯ್ಯುವುದು ಕೂಡ ಗಮನಾರ್ಹ.

ಹರಿಶ್ಚಂದ್ರನಿಗೆ ವಿರೂಪಾಕ್ಷದರ್ಶನದಿಂದ ಆದ ಸಂತೋಷದ ಆಧಿಕ್ಯವನ್ನು ಕವಿ ಇಲ್ಲಿ ವರ್ಣಿಸುತ್ತಾನೆ.

ಪದ್ಯ

ನೋಡಿ ಪರಮಾನಂದ ಮೂಡಿ ಸಂತಸದೊಳೋ
ಲಾಡಿ ಪುಳಕಸ್ವೇದ ತೊದಳು ಕಂಪನ ಮರವೆ
ಗೂಡಿ ಮನದೊಳು ತನುವಿನೆಚ್ಚರಿಂದುಬ್ಬಿ ಹಾರೈಸಿ ಹರುಷದ ಸುಖದಲಿ
ಹಾಡಿ ನಾನಾ ಸ್ನಪನ ಯಕ್ಷಕರ್ದಮ ಪುಷ್ಪ
ಗಾಡಿವಡೆಯಲು ಮಹಾರುದ್ರಾಭಿಷೇಚನದ
ಜೋಡಿಯಿಂ ಪಂಪಾಂಬಿಕಾಪತಿಯ ಪೂಜೆ ಮಾಡಿದ ಹರಿಶ್ಚಂದ್ರ ನೃಪನು ೮೩

ಅರ್ಥ
ವಿರೂಪಾಕ್ಷದೇವರ ದರ್ಶನದಿಂದ ರಾಜನಿಗೆ ಅತ್ಯಾನಂದವುಂಟಾಯಿತು. ಆತ ಸಂತೋಷದಲ್ಲಿ ತೇಲಾಡಿದ, ಪುಲಕಿತನಾದ, ಬೆವರಿದ, ತೊದಲಿದ, ಕಂಪಿಸಿದ, ಮೈಮೆರೆತ, ತನುಮನಗಳಲ್ಲಿ ಸಂತೋಷವೇರಿ ಹರ್ಷದ ಸುಖದಲ್ಲಿ ಹಾಡಿ, ಉಬ್ಬಿದ. ವಿರೂಪಾಕ್ಷ ದೇವರಿಗೆ ಅಭಿಷೇಕಮಾಡಿ ನಾನಾ ಬಗೆಯ ಸುಗಂಧದ್ರವ್ಯಗಳಿಂದ ಮನೋಹರವಾಗಿ ಅಲಂಕರಿಸಿ ಪತ್ನೀಸಮೇತನಾಗಿ ರುದ್ರಾಭಿಷೇಚನದಿಂದ ಪೂಜೆಮಾಡಿದ.

ವಿಶೇಷ ವಿಚಾರ
ಭಕ್ತಿಯ ವಿಚಾರದಲ್ಲಿ ರಾಘವಾಂಕ ಇನ್ನಿಲ್ಲದಷ್ಟು ಪರವಶನಾಗುತ್ತಾನೆ. ಈತನ ಗುರು ಹರಿಹರ ಇವನಿಗಿಂತಲೂ ಅಧಿಕ. ಗುರುವಿನಂತೆ ಶಿಷ್ಯ.

ಪದ್ಯ

ಇಂದಾನು ಕೃತಕೃತ್ಯನಾದೆನೆನ್ನಯ ಜನ್ಮ
ವಿಂದು ಸಾಫಲ್ಯವಾಯ್ತಖಿಳ ಜಗದಳಲುರಿಯ
ನಂದಿಸುವ ಪಾರದಿಯೆ ಸಂಸಾರವಾರುಧಿಯನುತ್ತರಿಪ ಗುರುಪಾದವ
ತಂದು ತೋರಿತ್ತಲಾ ಶ್ರೀ ಗುರು ವಿರೂಪಾಕ್ಷ
ತಂದೆಯಂ ಕಾಣಿಸಿತು ನಾಡಗಾದೆಯ ಬಿಟ್ಟಿ
ಯಿಂದ ಕಟಕವ ಕಂಡೆನೆಂಬುದೆನಗಾಯ್ತೆನುತ್ತೆರಗಿದಂ ಭೂನಾಥನು ೮೪

ಅರ್ಥ
ಇವತ್ತು ನಾನು ಧನ್ಯನಾದೆ. ನನ್ನ ಜನ್ಮ ಸಾರ್ಥಕವಾಯಿತು. ಜಗತ್ತಿನ ಸಮಸ್ತ ನೋವುಗಳನ್ನು ನಿವಾರಿಸುವ ಉದ್ದೇಶದಿಂದ ಬಂದ ನನಗೆ ಸಂಸಾರಸಾಗರವನ್ನು ದಾಟುವ ಶ್ರೀಗುರುಪಾದವನ್ನು ನೋಡುವ ಭಾಗ್ಯ ಒದಗಿತು. ಶ್ರೀ ಗುರು ವಿರೂಪಾಕ್ಷದೇವರನ್ನು ಕಾಣುವ ಸೌಭಾಗ್ಯ ಪ್ರಾಪ್ತವಾಯಿತು. ಬಿಟ್ಟಿಯಿಂದ ಕಟಕವ ಕಂಡೆ ಎಂಬ ನಾಡಗಾದೆ ನನಗೆ ಸರಿಯಾಗಿ ಅನ್ವಯವಾಯಿತು ಎನ್ನುತ್ತ ಮುನಿಶ್ರೇಷ್ಠನಿಗೆ ಹರಿಶ್ಚಂದ್ರ ನಮಸ್ಕರಿಸಿದ.

ವಿಶೇಷ ವಿಚಾರ
ಸಾಮಾನ್ಯವಾಗಿ ರಾಜನ ಬಳಿಗೆ ಹೋಗುವುದಾಗಲೀ, ಸೈನ್ಯ ಮುಂತಾದುವನ್ನು ನೋಡುವುದಾಗಲೀ ಜನ ಸಾಮಾನ್ಯರಿಗೆ ಅಷ್ಟು ಸುಲಭವಲ್ಲ. ಆದರೆ ಅದೇ ಜಾಗದಲ್ಲಿ ಜೀತ ಮಾಡುವುದಕ್ಕೆ ನೇಮಕವಾಗುವವರು ಹೆಚ್ಚಾಗಿ ಅವರೇ. ಹಾಗಾಗಿ ಕೆಲಸಕ್ಕೆ ಸೇರಿದ ಹುಡುಗರು ಯಾವುದೇ ಕಷ್ಟವಿಲ್ಲದೆ ಸೈನ್ಯದ ದರ್ಶನ ಮಾಡಬಹುದು. ಹಾಗೆಯೇ ಬೇಟೆಯ ಕೆಲಸಕ್ಕೆ ಬಂದ ತನಗೆ ಅನಾಯಾಸವಾಗಿ ಭಗವಂತನ ದರ್ಶನಭಾಗ್ಯ ಸಿಕ್ಕಿತೆನ್ನುವುದು ರಾಜನ ಮಾತಿನ ಅರ್ಥ. ಗಾದೆಮಾತುಗಳನ್ನು ಸಂದರ್ಭೋಚಿತವಾಗಿ ಬಳಸಿದ್ದಾನೆ ಕವಿ.
ಮರೆತಾದರೂ ವಿಶ್ವಾಮಿತ್ರನ ಆಶ್ರಮಕ್ಕೆ ಹೋಗಬೇಡ ಎಂದು ವಸಿಷ್ಠ ಎಚ್ಚರಿಸಿ ಕಳುಹಿಸಿದರೂ ಹರಿಶ್ಚಂದ್ರನ ವಿಧಿ ವಿಶ್ವಾಮಿತ್ರನ ಆಶ್ರಮಕ್ಕೇ ಅವನನ್ನು ಎಳೆದುಕೊಂಡು ಬರುತ್ತದೆ.

ಕಾವ್ಯರಸಯಾನ ಮುಂದುವರಿದುದು: ೧೯.೦೮.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ವಸಿಷ್ಠನ ಆಶ್ರಮಕ್ಕೆ ಹೋದ ಹರಿಶ್ಚಂದ್ರರಾಜನನ್ನು ಕಂಡು ಕಾರಣವರಿತ ಬಳಿಕ ವಸಿಷ್ಠನಿಗೆ ವಿಶ್ವಾಮಿತ್ರನ ಕಾಟ ಆರಂಭವಾಗಿದೆ ಎನ್ನುವುದು ತಿಳಿಯುತ್ತದೆ. ತನ್ನ ಶಿಷ್ಯನ ಮೇಲೆ ಉಂಟಾಗಬಹುದಾದ ಅಪಾಯವನ್ನು ಊಹಿಸಿ ವಸಿಷ್ಠ ಆತಂಕಿತನಾಗುತ್ತಾನೆ. ಒಂದು ಕಡೆ ಶಿಷ್ಯಪ್ರೀತಿ ಇನ್ನೊಂದು ಕಡೆ ಕೊಟ್ಟ ಭಾಷೆ. ಹರಿಶ್ಚಂದ್ರನಿಗೆ ವಿಶ್ವಾಮಿತ್ರನ ವಿಚಾರವನ್ನು ಹೇಳಬೇಕು, ಹೇಳಿದರೆ ಅದು ಚಾಡಿ ಹೇಳಿದಂತಾಗಬಹುದು. ಹೀಗೆ ಉಭಯಸಂಕಟದಲ್ಲಿ ಇದ್ದ ಮಹರ್ಷಿ ಕೊನೆಗೂ ಶಿಷ್ಯನಿಗೆ ಹಾನಿಯಾಗುವುದನ್ನು ಸಹಿಸದೆ, ಹೇಳದಂತೆ ಹೇಳುತ್ತೇನೆ ಎಂದು ಯೋಚಿಸಿ ವಿಶ್ವಾಮಿತ್ರನ ಆಶ್ರಮಕ್ಕೆ ಹೋಗಬೇಡ. ಹೋದರೆ ಆತ ತೊಂದರೆ ಕೊಟ್ಟಾನು ಎಂದು ತಿಳಿಸಿ ಮತ್ತೊಂದು ಮಾತಿಗೆ ಅವಕಾಶವೀಯದೆ ವಿರೂಪಾಕ್ಷ ದರ್ಶನವನ್ನು ಮಾಡಿಸಿ ಆಶೀರ್ವದಿಸಿ ಬೀಳ್ಕೊಡುತ್ತಾನೆ. ಹರಿಶ್ಚಂದ್ರನ ಬೇಟೆ ಮುಂದುವರಿಯುತ್ತದೆ.

ಪದ್ಯ

ಗುರುವಸಿಷ್ಠಂಗೆರಗಿ ನೇಮವ ಪಡೆದಖಿಳ
ಗುರುವಿರೂಪಾಕ್ಷಲಿಂಗವನು ಬೀಳ್ಕೊಂಡು ಭಾ
ಸುರವರೂಥಮನೇರಿ ಭೂಪಾಲಮಕರಧ್ವಜಂ ನಡೆಯೆ ತಡೆವೇಂಟೆಗೆ
ಪರಿಕರದ ಪರಿವಾರವನುವಾಗಿ ವಿಪಿನದೊಳು
ಹರೆದು ನಡೆಯಲ್ಕತ್ತಲಿತ್ತ ಕೌಶಿಕ ಮುನೀ
ಶ್ವರನೊಂದು ಮಾಯಾವರಾಹನಂ ಮಾಡಿ ಕಳುಹಿದನು ಭೂರಮಣನೆಡೆಗೆ ೮೫

ಅರ್ಥ
ಗುರು ವಸಿಷ್ಠನಿಗೆ ವಂದಿಸಿ, ಆತನ ಅಪ್ಪಣೆಯನ್ನು ಪಡೆದು ಆರಾಧ್ಯದೈವವಾದ ವಿರೂಪಾಕ್ಷಲಿಂಗವನ್ನು ಬೀಳ್ಕೊಂಡು ಹೊಳೆಹೊಳೆಯುವ ಮಣಿಮಯ ರಥವನ್ನು ಏರಿ ಪರಿವಾರ ಸಮೇತನಾಗಿ ಭೂಪಾಲಮನ್ಮಥನು ಮತ್ತೆ ಬೇಟೆಗೆ ಹೊರಟು ಕಾಡಿನ ಎಲ್ಲಕಡೆಗಳಲ್ಲೂ ಕ್ರೂರಮೃಗಗಳನ್ನು ಹುಡುಕುತ್ತ ನಡೆಯುವಾಗ ಇಲ್ಲಿ ವಿಶ್ವಾಮಿತ್ರ ಮಹರ್ಷಿ ಮತ್ತೊಂದು ಉಪಾಯವನ್ನು ಮಾಡಿ ಒಂದು ಮಾಯಾರೂಪದ ಹಂದಿಯನ್ನು ಸೃಷ್ಟಿಸಿ ಹರಿಶ್ಚಂದ್ರನ ಬಳಿಗೆ ಕಳುಹಿಸುತ್ತಾನೆ.
ಆ ಮಾಯಾವರಾಹ ಎಷ್ಟು ಭಯಂಕರವಾಗಿತ್ತು ಎಂಬುದನ್ನು ಕವಿ ಮುಂದಿನ ಪದ್ಯದಲ್ಲಿ ವರ್ಣಿಸುತ್ತಾನೆ.

ಪದ್ಯ

ಸಿಡಿಲಕಿಡಿಯಂತೆಸೆವ ಕಣ್ಣು,ಬ್ರಹ್ಮಾಸ್ತ್ರದೆರ
ಡುಡಿಯನಿರುಕಿದ ತೆರದದಾಡೆ, ವಜ್ರದ ಚಿಪ್ಪ
ನಿಡಿಕಿದರೆನಿಪ್ಪ ಕಿವಿ, ಬಲನ ನೇಗಿಲ ಪೋಲ್ವ ತುಂಡ, ಮೃತ್ಯುವಿನ ಕಯ್ಯ
ನಿಡಿಯ ನಾರಾಚದಗೆಯೆನಿಪ ಮೆಯ್‌ ರೋಮತತಿ,
ಕಡಗಿ ಕಾಲನ ಕೋಣನರರೆ ವಾರಾಹಮುಖ
ವಡೆದಿರದೆನಿಪ್ಪೊಲು ಮೆರೆವ ಸೂಕರನಿರಲು ಕಂಡರಂತಾ ಬೇಡರು ೮೬

ಅರ್ಥ
ಸಿಡಿಲಿನ ಕಿಡಿಯಂತೆ ಇರುವ ಕಣ್ಣುಗಳು, ಬ್ರಹ್ಮಾಸ್ತ್ರದ ಎರಡು ತುಂಡುಗಳನ್ನು ಸಿಕ್ಕಿಸಿದಂತೆ ಕಾಣುವ ಎರಡು ದಾಡೆಗಳು, ಅಂಟಿಸಿದ ವಜ್ರದ ಚಿಪ್ಪಿನಂತೆ ಹೊಳೆಯುವ ಕಿವಿಗಳು, ಬಲರಾಮನ ನೇಗಿಲನ್ನು ಹೋಲುವ ಮುಖ(ಸೊಂಡಿಲು), ಮೃತ್ಯುವಿನ ಕೈಯ ಬಾಣದ ಮೊನೆಯಂತಿರುವ ಮೈಯ ರೋಮಗಳು, ಸಾಕ್ಷಾತ್‌ ಯಮನ ಕೋಣವೇ ವರಾಹರೂಪವನ್ನು ತಾಳಿದೆ ಎನಿಸುವಂಥ ಹಂದಿಯನ್ನು ಬೇಡರು ನೋಡಿದರು.

ಬೇಟೆಗಾರರ ಅತ್ಯುತ್ಸಾಹ, ಹುಮ್ಮಸ್ಸು, ಉದ್ಗಾರಗಳು ಅತ್ಯಂತ ಸಹಜಸುಂದರವಾಗಿ ಹೊಮ್ಮಿದೆ ಮುಂದಿನ ಪದ್ಯದಲ್ಲಿ.

ಪದ್ಯ

ಎಲೆಲೆಲೆಲೆಲೇ ಹಂದಿಯನುವಾದುದು,ಬುಬುಬೆಂ
ದುಲಿದು ನಾಯ್ಗಳುವೆರಸಿ ಮುಕ್ಕುರಿಕ್ಕಲು ಮೆಲ್ಲ
ನೊಲೆದುಬ್ಬಿ ಪುಟನೆಗೆದು ಗಜರಿ ಗರ್ಜಿಸಿ ಪುಳಿಂದರ ಮೇಲೆ ಬವರಿದಿರುಗಿ
ಬಲವಂದು ಹೊಯ್ದು ಬೇಗಕ್ಕೆ ಬಿರುಮಂದಿ ನಾ
ಳಲ ಹೊರೆಗಳಂ ಕೊಚ್ಚಿದಂತೆಲ್ಲರೊಡಲ ಕಳ
ವಳಿಗೆಯ್ದು ಬೀದಿವರಿದೊಕ್ಕಲಿಕ್ಕಿತ್ತು ರಕ್ಕಸಮಿಗಂ ಕಾಡೊದರಲು ೮೭

ಅರ್ಥ
ಎಲೆಲೆಲೆಲೆಲೇ ಹಂದಿ ಆಕ್ರಮಿಸಲು ಸಿದ್ಧವಾಗಿದೆ, ಉಬುಬುಬು.. ಎನ್ನುತ್ತ ಬೇಟೆನಾಯಿಗಳನ್ನು ಸೇರಿಸಿ ಬೇಡರು ಬೊಬ್ಬಿಟ್ಟು ಅಬ್ಬರಿಸಿದಾಗ ನಿಧಾನವಾಗಿ ತಿರುಗಿನಿಂತು ಮೈಯನ್ನು ಉಬ್ಬಿಸಿ ಒಮ್ಮೆಗೇ ನೆಗೆದು ಜೋರಾಗಿ ಗರ್ಜಿಸುತ್ತ ಬೇಟೆಗಾರರ ಮೇಲೆ ಆಕ್ರಮಣ ಮಾಡುವಂತೆ ಹಾರಲು ಸಿದ್ಧವಾಗಿ ಸುತ್ತುಹಾಕುತ್ತ ಹಾಕುತ್ತ ಒಮ್ಮೆಗೇ ನೆಗೆದು ಲಾಳದ ಕಡ್ಡಿಯ ಹೊರೆಗಳನ್ನು ಕತ್ತರಿಸಿ ಕೊಚ್ಚಿಹಾಕಿದಂತೆ ಅವರ ದೇಹವನ್ನು ಛಿದ್ರಛಿದ್ರ ಮಾಡಿ ಕಾಡಿನ ದಾರಿಯಾಗಿ ತಿರುಗಿ ಆ ರಾಕ್ಷಸಹಂದಿ ಕಾಡೇ ಬೊಬ್ಬಿಡುವಂತೆ ಓಡಿಹೋಯಿತು.

ಪದ್ಯ

ಅಡವಿ ನಡುಗಲು ದೆಸೆಗಳೊಡೆಯೆ ಘುಡುಘುಡಿಸುತ್ತ
ಲೊಡಸಾರ್ದು ಪಡೆಯ ಕೆಡಹುತ್ತ ಬರೆ ಕೋಪದಿಂ
ಹೊಡಕರಿಸಿ ತಡವಿಡದೆ ಕುಡುದಾಡೆಯಿಂ ಬೇಡವಡೆಯೊಡಲನೀಡಿರಿವುತ
ಕಡಿವಡೆದ ಕಡಿಗಳೊಳು ಬಿಡದೆ ನಡೆಯಲು ಕಂಡು
ಕೆಡೆಕೆಡೆಯೆನುತ್ತ ಮೂದಲಿಸಿ ಮರಳಿದೊಡಡಗ
ಕಡಿ ಮಾರಿಗೆರೆ ನೆತ್ತರಂ ಹೊದೆಸು ಚರ್ಮಮಂ ತೊಡು ಬೇಗ ಬಿಡು ಸರಳನು ೮೮

ಅರ್ಥ
ಕಾಡನ್ನು ನಡುಗಿಸುತ್ತ, ದಿಕ್ಕುಗಳನ್ನು ಒಡೆಯುತ್ತ ತನ್ನನ್ನು ಆಕ್ರಮಿಸಲು ಬಂದ ಬೇಡರ ಸೈನ್ಯವನ್ನು ನೋಡಿದ ಹಂದಿ ಕೋಪಾವೇಶದಿಂದ ಇಡೀ ಸೈನ್ಯವನ್ನು ತುಳಿದು ಹಾಕಿ ತುಳಿದ ಬೇಡರ ಶರೀರವನ್ನು ತನ್ನ ದಾಡೆಯಿಂದ ಇರಿದು ಕತ್ತರಿಸಿ ಆ ಮಾಂಸಖಂಡಗಳ ಮೇಲೆ ನಡೆಯುವುದನ್ನು ನೋಡಿದ ಇತರ ಬೇಡರು ಆ ಪ್ರಾಣಿಯೇನಾದರೂ ಮತ್ತೆ ಈ ಕಡೆ ಬಂದರೆ ಅದರ ಮಾಂಸವನ್ನೂ ಹಾಗೆಯೇ ಕತ್ತರಿಸು, ರಕ್ತವನ್ನು ಮಾರಿಗೆ ಎರೆ, ಚರ್ಮವನ್ನು ಹೊದೆಸು, ಬೇಗ ಬಾಣಬಿಡಲು ಸಿದ್ಧನಾಗು, ಹೂಡು ಬಾಣ, ಬಿಡು ಹೀಗೆ .. ಎಂದು ಬೊಬ್ಬೆ ಹಾಕುತ್ತ ಹಂದಿ ಬರುವುದನ್ನು ಕಾಯುತ್ತ ಕಾದು ನಿಂತರು.

ಮುಂದಿನ ಪದ್ಯದಲ್ಲಿ ಆ ಭಯಂಕರವಾದ ಹಂದಿಯನ್ನು ನೋಡಿ ಪ್ರಾಣಭೀತಿಯಿಂದ ತತ್ತರಿಸಿದ ಬೇಟೆಗಾರನೊಬ್ಬನ ಚಿತ್ರವಿದೆ. ಇದು ಒಂದು ಅತ್ಯುತ್ತಮ ಶಬ್ದಚಿತ್ರವಾಗಿದೆ.

ಪದ್ಯ

ಬಿಟ್ಟತಲೆ ಗಿಡುಹಿಡಿದು ಕಳೆದುಡುಗೆ ಕಾಡ ಮುಳು
ನಟ್ಟು ಕುಂಟುವ ಪದಂ ಬೆನ್ನ ಬಿಗುಹಳಿದೆಳಲ್ವ
ಮೊಟ್ಟೆಗೂಳೆಡಹಿ ಕೆಡೆದೊಡೆದ ಮೊಳಕಾಲ್‌ ತೇಕುವಳ್ಳೆಗಳುವೆರಸೊರಲುತ
ಕೆಟ್ಟೋಡುತಿರಲೊರ್ವನವನ ಕಂಡಿದಿರಡ್ಡ
ಗಟ್ಟಿ ಕೇಳಲು ಹುಹುಹು ಹುಲಿಯಲ್ಲ ಹಂದಿಯರೆ
ಯಟ್ಟಿ ಬರುತಿರ್ದುದೆನೆಯೆಲ್ಲಿ ತೋರೆನಲು ನೀವೇ ಅರಸಿಕೊಂಬುದೆಂದ ೮೯

ಅರ್ಥ
ಬೇಡನ ತಲೆಕೂದಲು ಹರಡಿದೆ, ಗಿಡಗಳಿಗೆ ಸಿಕ್ಕಿಕೊಂಡು ಉಟ್ಟ ಉಡುಗೆ ಬಿಚ್ಚಿದೆ, ಕಾಡಮುಳ್ಳು ತಾಗಿ ಕಾಲು ಕುಂಟುತ್ತಿದೆ, ಕಟ್ಟಿದ ದಾರ ಬಿಚ್ಚಿ ಬೆನ್ನ ಮೇಲಿನ ಬತ್ತಳಿಕೆ ಸಡಿಲವಾಗಿ ನೇತಾಡುತ್ತಿದೆ, ಎಡವಿಬಿದ್ದು ಮೊಣಕಾಲು ತರಚಿದೆ, ಪಕ್ಕೆಗಳು ತೇಕುತ್ತಿವೆ, ಭಯದಿಂದ ಬೊಬ್ಬೆಹಾಕುತ್ತ ಓಡೋಡಿ ಬರುತ್ತಿರಲು ಒಬ್ಬ ದಾರಿಹೋಕ ಅವನನ್ನು ನೋಡಿ ಅಡ್ಡಗಟ್ಟಿ ನಿಲ್ಲಿಸಿ ಏನಾಯ್ತೆಂದು ಕೇಳಿದಾಗ ನಾಲಗೆ ತೊದಲಿ ಹುಹುಹು. ಎನ್ನುವಾಗ ಹುಲಿಯೇ ಎಂದು ಕೇಳಿದರೆ, ಹುಲಿಯಲ್ಲ, ಹಂದಿ ಅಟ್ಟಿಸಿಕೊಂಡು ಬರುತ್ತಾ ಇದೆ ಅಂದು ಎಲ್ಲಿ ತೋರಿಸೆಂದರೆ ನೀವೇ ಹುಡುಕಿಕೊಳ್ಳಿ ಎಂದನು.

ವಿಶೇಷ ವಿಚಾರ
ಇಲ್ಲಿ ಬೇಡನ ಜೀವಭಯ, ಓಡುವ ಓಟಕ್ಕೆ ಅವನ ಅಂಗಾಂಗಗಳಿಗೆ ಆದ ಆಘಾತ, ಮಾತುಗಳು ತಡವರಿಸಿ ಹುಹುಹು ಅನ್ನುವಾಗ ದಾರಿಹೋಕ ಹುಲಿಯೇ ಅಂತ ಕೇಳುವ ಪ್ರಶ್ನೆ, ಬೇಡನ ಉತ್ತರ, ತೋರಿಸು ಅನ್ನುವಾಗ ನೀವೇ ಹುಡುಕಿಕೊಳ್ಳಿ ಎನ್ನುವ ಅವನ ಭಯಭೀತ ಸ್ಥಿತಿ ಎಲ್ಲವೂ ಕಣ್ಣಿಗೆ ಕಟ್ಟುವಂತೆ ನಿರೂಪಿತವಾಗಿವೆ. ಭಯಾನಕ ರಸದ ಅದ್ಭುತ ಚಿತ್ರ. ಇಲ್ಲಿ ʻಬಿಟ್ಟ ತಲೆʼ ಎನ್ನುವ ಪದ ಆ ಕಾಲದಲ್ಲಿ ಗಂಡಸರೂ ತಲೆಕೂದಲು ಬೆಳೆಸುತ್ತಿದ್ದರು ಎಂಬುದಕ್ಕೆ ಸಾಕ್ಷಿ.

ಪದ್ಯ

ಹೆದರೆದೆಯ ಬೇಡನಂ ಬೋಳೈಸಿ ನೃಪರೂಪ
ಮದನನಲ್ಲಿಗೆ ತಂದು ನುಡಿಸಿ ಕೇಳಲು ಪೇಳ್ವೆ
ಕುದಿಹವೇಕದಿದೆನ್ನದೆಲ್ಲಾ ಕಿರಾತ ಸಂಕುಲದ ಗುರಿ ನೆರೆದು ದಿಂದು
ಹದುಳದಿಂದರಸ ಮನ್ನೆಯ ಗಂಡನಾಗು ಬೇ
ಗದೊಳೆಂದಡೇಂಕಾರಣಂ ಪೇಳೆನಲ್ಕೆ ಪೇ
ಳ್ವುದಕೆ ತೆರಹಿಲ್ಲ ಹೋಗೆಂದಡವನೀಶನವನಂ ಜರೆದು ಬೆಸಗೊಂಡನು ೯೦

ಅರ್ಥ
ಎದೆಯೊಡೆದು ಹೆದರಿ ನಡುಗುವ ಬೇಟೆಗಾರನನ್ನು ಸಮಾಧಾನಪಡಿಸಿದ ದಾರಿಹೋಕ ಆತನನ್ನು ರಾಜನ ಬಳಿಗೆ ಕರೆದುಕೊಂಡು ಬರುತ್ತಾನೆ. ರಾಜನ ಮುಂದೆ ನಿಲ್ಲಿಸಿ ವಿಚಾರವೇನು ಹೇಳು ಅಂದಾಗ, ʻಇನ್ನು ಭಯವೇಕೆ?ʼ ಎನ್ನುತ್ತ ಆತ ರಾಜನ ಮುಂದೆ ಧೈರ್ಯವಾಗಿ ಉತ್ತರಿಸುತ್ತಾನೆ. ಇವತ್ತು ಎಲ್ಲ ಬೇಡರೂ ಒಂದೇ ಒಂದು ಗುರಿಯನ್ನು ಸಾಧಿಸಬೇಕಾಗಿದೆ. ಆದ್ದರಿಂದ ಮಹಾರಾಜ, ನೀನೀಗ ಬಹಳ ಎಚ್ಚರಿಕೆಯಿಂದಲೇ ನಮಗೆಲ್ಲರಿಗೂ ಗೌರವಾನ್ವಿತ ನಾಯಕನಾಗಬೇಕು. ಬೇಗ ಹೊರಡುʼ ಎಂದಾಗ ʻಏಕೆ? ಅದಕ್ಕೇನು ಕಾರಣ? ಹೇಳುʼ ಎಂದು ರಾಜ ಪ್ರಶ್ನಿಸಿದಾಗ ಅದನ್ನು ಕೇಳುವುದಕ್ಕೂ ಹೇಳುವುದಕ್ಕೂ ಸಮಯವಿಲ್ಲ. ಈಗಲೇ ಯುದ್ಧಕ್ಕೆ ಹೋಗಬೇಕು ಎಂದು ಆತ ಉತ್ತರಿಸಿದಾಗ ರಾಜ ಕೋಪದಿಂದ ಅವನನ್ನು ಬೈದು ಮತ್ತೆ ಪ್ರಶ್ನಿಸುತ್ತಾನೆ.

ವಿಶೇಷ ವಿಚಾರ
ಒಬ್ಬ ಸಾಮಾನ್ಯ ಬೇಟೆಗಾರ ಕೂಡ ರಾಜನೊಂದಿಗೆ ಎಷ್ಟು ಸಲಿಗೆಯಿಂದ ವ್ಯವಹರಿಸುತ್ತಾನೆ ಎಂಬುದನ್ನು ಗಮನಿಸಬೇಕು. ಇಲ್ಲಿ ಕವಿ ರಾಜನನ್ನು ಮನ್ಮಥನಿಗೆ ಹೋಲಿಸುವುದರ ಔಚಿತ್ಯ ಗೊತ್ತಾಗಲಿಲ್ಲ.

ಪದ್ಯ

ಕಡುಗಲಿ ಹಿರಣ್ಯಾಕ್ಷನೆಂಬ ರಕ್ಕಸನ ಬೆ
ನ್ನಡಗನುಗಿದಂದಿನ ವರಾಹನೋ ಪುರಹರಂ
ಪೊಡೆಯೆ ತೋಳ್‌ ಪರಿದ ಭೀಕರ ಗಜಾಸುರನೋ ಜಗದಳಲನಾರಿಸುವೆನೆಂದು
ಕಡುಕೈದು ದುರ್ಗಿ ನಿರ್ಘಾತನಂಗೆಯ್ಯೆ ಕೋ
ಡುಡಿದ ಮಹಿಷಾಸುರನೋ ಎಂದೆಂಬ ಸಂದೇಹ
ಕೆಡೆಯಾದ ಸೊಕ್ಕಿದೆಕ್ಕಲನನೊಂದು ಕಂಡೆನರಸ ಚಿತ್ತೈಸೆಂದನು ೯೧

ಅರ್ಥ
ʻಅತ್ಯಂತ ಪರಾಕ್ರಮಿಯಾದ ಹಿರಣ್ಯಾಕ್ಷನೆಂಬ ರಾಕ್ಷಸನ ಬೆನ್ನ ಮಾಂಸವನ್ನು ಬಗಿದ ವರಾಹನೋ ತ್ರಿಪುರಾಸುರ ಸಂಹಾರಕನಾದ ರುದ್ರನು ಹೊಡೆದಾಗ ತೋಳು ಕತ್ತರಿಸಿದ ಭೀಕರ ಗಜಾಸುರನೋ ಜಗತ್ತಿನ ಸಂಕಷ್ಟವನ್ನು ಪರಿಹರಿಸಲೋಸುಗ ಮಹಾದುರ್ಗಿ ಹೊಡೆದಾಗ ದಾಡೆಕಳಚಿದ ಮಹಿಷಾಸುರನೋ ಎಂಬಂತೆ ತೋರುವ ಸೊಕ್ಕಿದ ಒಂದು ಹಂದಿಯನ್ನು ನೋಡಿದೆವು ರಾಜ, ಬಾ ಯುದ್ಧಕ್ಕೆ ಹೊರಡುʼ ಎನ್ನುತ್ತಾನೆ.

ಪದ್ಯ

ಕೊಬ್ಬಿ ಬೆಳೆದ ವರಾಹನಿರಲಾಗದೇ ಕಾಡೊ
ಳಬ್ಬರಿಸಿ ನುಡಿವೆಯದರಿಂ ಬೇಡವಡೆಗೆ ಬ
ಪ್ಪುಬ್ಬಸವದೇನೊ ನೀನೋಡಿಹೋಹುದಕೆ ಕಾರಣವಾವುದೆಲವೊ ಎನಲು
ಉಬ್ಬಿ ಮುಂಗುಡಿವರಿದು ಕಡುಕೈದ ಶಬರರೊಳ
ಗೊಬ್ಬರುಳಿಯದ ತೆರದಿ ಕೊಂದಿಕ್ಕಿ ನಾಯ್ಗಳಂ
ಗಬ್ಬವಿಕ್ಕಿಸಿದ ರಕ್ಕಸವಂದಿ ತಾನೆ ಹೇಳಿತ್ತು ನಾನೇಕೆಂದನು ೯೨

ಅರ್ಥ
ಕಾಡಿನಲ್ಲಿ ಭಯಂಕರವಾದ ಒಂದು ಹಂದಿ ಕೊಬ್ಬಿ ಬೆಳೆದು ಇರುವುದರಲ್ಲಿ ಏನಿದೆ ಅಂಥ ಮಹಾವಿಚಾರ? ಅದಕ್ಕೇಕೆ ಇಷ್ಟೊಂದು ಅಬ್ಬರದ, ಬೊಬ್ಬೆಯ ಮಾತುಗಳು? ಹಂದಿ ಬಲಿತರೆ ಬೇಡರಿಗೆ ಆಗುವ ಕಷ್ಟವಾದರೂ ಏನು? ನೀನು ಓಡಿ ಹೋಗುವುದಕ್ಕೆ ಅಂಥ ಕಾರಣ ಏನಿದೆ? ಎಂದಾಗ ಆ ಹಂದಿ ಪ್ರತಿಭಟಿಸಿದ ಒಬ್ಬನೇ ಒಬ್ಬ ಬೇಡನೂ ಉಳಿಯದಂತೆ ಎಲ್ಲರನ್ನೂ ಕೊಂದಿದೆ; ಬೇಟೆನಾಯಿಗಳ ಗರ್ಭಪಾತವಾಗುವಂತೆ ಮಾಡಿದೆ. ನಮ್ಮ ಸೈನ್ಯಕ್ಕೆ ಏನೇನು ಸಂಭವಿಸಿವೆ ಎನ್ನುವುದನ್ನು ಆ ರಾಕ್ಷಸ ಹಂದಿ ಮಾಡಿದ ಅನಾಹುತಗಳೇ ಹೇಳುತ್ತವೆ, ಅದನ್ನು ನಾನು ಹೇಳುವ ಅಗತ್ಯವಿಲ್ಲ ಎನ್ನುತ್ತಾನೆ.

ಮುಂದಿನ ಪದ್ಯದಲ್ಲಿ ಬೇಟೆಗಾರನ ಮಾತಿಗೆ ರಾಜನ ಪ್ರತಿಕ್ರಿಯೆ, ಅವರೊಳಗೆ ನಡೆಯುವ ಸಂಭಾಷಣೆಗಳು ಎಷ್ಟೊಂದು ಸ್ವಾರಸ್ಯಕರವಾಗಿವೆ ಎಂಬುದನ್ನು ನೋಡೋಣ.

ಪದ್ಯ

ಪಡೆಯೆಯ್ದೆ ಮಡಿಯಿತ್ತೆ ಮಡಿಯಿತ್ತು ನಾಯ್‌ ಕೂಡೆ
ಕೆಡೆದವೇ ಕೆಡೆದವಾ ಹಂದಿಯಿರ್ದಪುದೆಯದೆ
ಎಡೆಯೆನಿತು ಸಾರೆ ತೋರಿಸಿದಪಾ ತೋರಿದಪೆನೇಳ್ವೆವೇ ನಡೆಯಿಮೆನಲು
ಕಡುಮುಳಿದು ರಥವನುರವಣಿಸಿ ನೂಂಕುವ ಭೂಮಿ
ಯೊಡೆಯಂಗೆ ಭಾಷೆಯಂ ಕೊಟ್ಟು ನಾನಾ ಬೇಡ
ವಡೆಯರೊಡೆಯರೆಯ್ದೆ ಕಂಡರು ರೊಪ್ಪಮಂ ಮಲಗಿ ದಾಡೆಗಡಿವೆಕ್ಕಲನನು ೯೩

ಅರ್ಥ
ಸೈನ್ಯ ಸಂಪೂರ್ಣ ನಾಶವಾಯಿತೇ( ಸೈನಿಕರು ಎಲ್ಲರೂ ಸತ್ತುಹೋದರೇ?), ಹೌದು ನಾಶವಾಯಿತು.
ನಾಯಿಗಳು ಕೂಡ ಸತ್ತುವೇ? ಹೌದು ಸತ್ತುವು. ಆ ಹಂದಿ ಇನ್ನೂ ಜೀವಂತವಾಗಿದೆಯಾ? ಹೌದು ಇದೆ. ಎಷ್ಟು ದೂರ ಇದೆ, ತೋರಿಸ್ತೀಯಾ? ಹೂಂ. ತೋರಿಸ್ತೇನೆ. ಹೋಗೋಣವೇ? ಹೋಗೋಣ, ನಡೆಯಿರಿ.ʼ ಹೀಗೆ ಮಾತಾಡಿದ ಬಳಿಕ ಕೋಪಾವೇಶದಿಂದ ರಥವನ್ನು ಮುನ್ನಡೆಸುವ ಬೇಡರಿಗೆ ಧೈರ್ಯ ಹೇಳಿ ಮಾತುಕೊಟ್ಟು, ಹಲವು ಬೇಡರ ನಾಯಕರನ್ನು ಕೂಡಿಕೊಂಡು ರಾಜನೇ ಬರುತ್ತಿರಲು ಒಂದು ಪೊದರಿನಲ್ಲಿ ಮಲಗಿ ದಾಡೆಯನ್ನು ಹರಿತಗೊಳಿಸುವ ಹಂದಿಯನ್ನು ಬೇಡನಾಯಕರು ಕಂಡರು.

ವಿಶೇಷ ವಿಚಾರ
ದಾರಿಹೋಕರು ಕೇಳಿದಾಗ ಉತ್ತರಿಸುವುದಕ್ಕೂ ಅಂಜಿದ ಬೇಟೆಗಾರ ನಿರಾತಂಕವಾಗಿ ರಾಜನ ಪ್ರಶ್ನೆಗೆ ಉತ್ತರಿಸುವುದನ್ನು ನೋಡಿದರೆ ರಾಜನ ಬಗ್ಗೆ ಪ್ರಜೆಗಳಿಗಿರುವ ನಂಬಿಕೆಯನ್ನು ಮನಗಾಣಬಹುದು.

ರಾಜನನ್ನು ತನ್ನ ಬಳಿಗೆ ಕರೆಸಲು ತಾನು ಏನು ಮಾಡಬೇಕಾಗಿತ್ತೋ ಆ ಕೆಲಸವನ್ನೆಲ್ಲ ಮಾಡಿ ಮುಗಿಸಿ ಆರಾಮವಾಗಿ ಇದ್ದ ಹಂದಿಯ ಚಿತ್ರ ಎಷ್ಟು ಸಹಜವಾಗಿದೆ ನೋಡಿ:

ಪದ್ಯ

ಮೃತ್ಯುರೂಪಿನ ಹಂದಿ ಕಾನನದೊಳೊಕ್ಕಲಿ
ಕ್ಕಿತ್ತು ನೆರೆಸುತ್ತಿ ಬೆಂಬತ್ತಿ ತಲೆಯೆತ್ತಿ ಮನ
ವೆತ್ತಿಯುಲಿಯುತ್ತ ತಿರುಹುತ್ತ ಹರಿಯುತ್ತ ಬೆದರುತ್ತೆಯ್ದೆ ಬಲವೆಲ್ಲವ
ಒತ್ತಿ ಸೀಳಿತ್ತು ಕೆರಳಿತ್ತು ಮುರಿಯಿತ್ತು ಹರಿ
ಯಿತ್ತು ಕೊರೆಯಿತ್ತು ಕುರುಕಿತ್ತು ದಣಿಯಿತ್ತು ನೋ
ಡಿತ್ತು ಕತ್ತಲೆಯಿನನ ನೋಡುವಂತಾ ಗುಣೋತ್ತಮನಂ ಬಳೋತ್ತಮನನು ೯೪

ಅರ್ಥ
ಮೃತ್ಯುವೇ ಹಂದಿಯ ರೂಪ ಧರಿಸಿದಂತೆ ಕಾನನದ ತುಂಬ ಓಡಾಡಿ ಸುತ್ತಾಡಿ ಬೆಂಬತ್ತಿ ತಲೆಯೆತ್ತಿ ಮನಪೂರ್ತಿ ಗರ್ಜಿಸುತ್ತ ತಿರುಗುತ್ತ ಹರಿಯುತ್ತ ಬೆದರುತ್ತಿದ್ದ ಎಲ್ಲ ಸೈನ್ಯವನ್ನೂ ಆಕ್ರಮಣ ಮಾಡಿ ಸೀಳಿಹಾಕಿ ಕೋಪದಿಂದ ಕೊಂದುಹಾಕಿ ಆಮೇಲೆ ತಾನು ಇರಬೇಕಾದ ಜಾಗಕ್ಕೆ ಹೋಗಿ ವಿಶ್ರಾಂತಿ ಪಡೆಯುತ್ತ ಇದ್ದ ಹಂದಿ ಕತ್ತಲೆ ಸೂರ್ಯನನ್ನು ನೋಡುವಂತೆ ಗುಣೋತ್ತಮನನೂ ಬಲೋತ್ತಮನನೂ ಆದ ರಾಜನನ್ನು ನೋಡುತ್ತದೆ.

ವಿಶೇಷ ವಿಚಾರ
ಈ ಉಪಮಾನ ಯಥೋಚಿತವಾಗಿದೆ. ಕತ್ತಲೆಗೆ ಸೂರ್ಯನ ಮುಂದೆ ನಿಲ್ಲುವುದು ಅಸಾಧ್ಯ.
ಹಾಗೆಯೇ ಹಂದಿಗೆ ರಾಜನ ಮುಂದೆ ಉಳಿಗಾಲವಿಲ್ಲ.
ಮುಂದಿನ ಪದ್ಯದಲ್ಲಿ ಹಂದಿ ಎಷ್ಟು ಭಯಂಕರವಾಗಿತ್ತು ಎಂಬುದನ್ನು ಕವಿ ಬಳಸಿದ ಪದಗಳು ಬಹಳ ಸಮರ್ಪಕವಾಗಿ ತಿಳಿಸುತ್ತವೆ.

ಪದ್ಯ

ಮಸೆವ ದಾಡೆಯ ಕುಡಿಗಳಿಂದ ಕಿಡಿ ಸುರಿಯೆ ಘೂ
ರ್ಮಿಸುವ ಮೂಗಿಂದ ಕರ್ಬೊಗೆ ನೆಗೆಯೆ ಮುನಿದು ನಿ
ಟ್ಟಿಸುವ ಕೆಂಗಣ್ಣ ಕಡೆಯಿಂದ ದಳ್ಳುರಿ ಸೂಸೆ ಬಲಿದ ಕೊರಳೊಲೆದ ಮುಸುಡು
ಕುಸಿದ ತಲೆ ನೆಗೆದ ಬೆನ್‌ ನಟ್ಟ ರೋಮಾಳಿ ಮೆ
ಳ್ಳಿಸಿದ ಬಾಲಂ ರೌದ್ರಕೋಪಮಂ ಬೀರೆ ಗ
ರ್ಜಿಸಿ ಬೀದಿವರಿದು ತೊತ್ತಳದುಳಿದು ಕೊಂದು ಕೂಗಿಡಿಸಿತ್ತು ಲುಬ್ಧಕರನು ೯೫

ಅರ್ಥ
ಹಂದಿಯ ಮಸೆಯುತ್ತಿರುವ ದಾಡೆಯ ಕೊನೆಯಿಂದ ಕಿಡಿಗಳು ಕೆದರುತ್ತಿದ್ದುವು, ಜೋರಾಗಿ ಹೂಂಕರಿಸುವಾಗ ಮೂಗಿನಿಂದ ಕಪ್ಪಾದ ಹೊಗೆ ಹೊರಗೆ ಚಿಮ್ಮುತ್ತಿತ್ತು, ಕೋಪದಿಂದ ದುರುಗುಟ್ಟಿನೋಡುವ ಕಣ್ಣುಗಳಿಂದ ಬೆಂಕಿ ಪ್ರಜ್ವಲಿಸಿ ಹೊಮ್ಮುತ್ತಿತ್ತು. ಬಲಿಷ್ಠವಾದ ಕೊರಳು, ತಿರುಗಿದ ಮುಖ, ತಗ್ಗಿಸಿದ ತಲೆ, ಏರಿಸಿದ ಬೆನ್ನು, ನಿಮಿರಿದ ರೋಮರಾಶಿಗಳು, ಅಲ್ಲಾಡುವ ಬಾಲ-ಹೀಗೆ ರೌದ್ರಕೋಪವನ್ನು ತೋರಿಸುತ್ತ ಅರಣ್ಯದುದ್ದಕ್ಕೂ ಓಡಾಡುತ್ತ ಗರ್ಜಿಸುತ್ತ ಬೇಟೆಗಾರರನ್ನು ಮತ್ತೆ ಮತ್ತೆ ತುಳಿದು ಕೊಲ್ಲತೊಡಗಿತು.

ಪದ್ಯ

ಇದ್ದ ಬೇಡರನೆಯ್ದೆ ಕೆಡಹಿದಡೆ ರಥದ ಮೇ
ಲಿದ್ದು ಕೋಪಾಟೋಪದಿಂದ ಕರತಳವ ಮಾ
ರುದ್ದಿ ಕೋದಂಡಮಂ ಸೆಳೆದು ಶರಮೂಡಿಗೆಯ ಮಡಲಿರಿದು ಕೈಹೊಡೆಯನು
ತಿದ್ದಿ ನಾರಿಯ ನೀವಿ ಮಿಡಿದು ಬಾಗಿದ ಕೊಪ್ಪಿ
ನಿದ್ದೆಸೆಯನಾರೈದು ನೆರೆಮೃತ್ಯುದೇವತೆಗೆ
ಬಿದ್ದನಿಕ್ಕುವೆನೆಂದು ಭೂವಲ್ಲಭಂ ನುಡಿಯೆ ದಿಗುಪಾಲರಳವಳಿದರು ೯೬

ಅರ್ಥ
ಇದ್ದ ಬೇಟೆಗಾರರನ್ನೆಲ್ಲ ಕೊಂದು ಹಾಕಿದಾಗ ರಾಜ ರಥದಲ್ಲೇ ನಿಂತುಕೊಂಡು ಕೋಪಾವೇಶದಿಂದ ಅಂಗೈಯನ್ನು ಉಜ್ಜಿ (ಯುದ್ಧವೀರರು ಯುದ್ಧಸನ್ನದ್ಧರಾಗುವಾಗ ಮಾಡುವ ವರಸೆ), ಬಿಲ್ಲನ್ನು ತೆಗೆದು ಬತ್ತಳಿಕೆಯನ್ನು ತೆರೆದು ಬಾಣಹೂಡುವ ಜಾಗವನ್ನು ಸರಿಮಾಡಿ ಹಗ್ಗವನ್ನು ಎಳೆದು ಬಾಗಿದ ಬಿಲ್ಲಿನ ಎರಡೂ ತುದಿಗಳನ್ನು ಚೆನ್ನಾಗಿ ಪರಿಶೀಲಿಸಿ ಎಲ್ಲ ಸರಿಯಾಗಿದೆ ಎಂದು ಗೊತ್ತಾಗಿ ಇನ್ನೇನು ಮೃತ್ಯುದೇವತೆಗೆ ಹಬ್ಬ ಮಾಡುವೆ(ಬಿದ್ದು= ಬಿರ್ದು= ಹಬ್ಬ, ಔತಣ)ನೆಂದು ರಾಜ ಘೋಷಿಸಿದಾಗ ದಿಗ್ಪಾಲಕರೆಲ್ಲ ಬೆದರಿದರು.

ವಿಶೇಷ ವಿಚಾರ
ಯುದ್ಧಮಾಡುವ ಹೊತ್ತಿನಲ್ಲಿ ವೀರರು ನಿಲ್ಲುವ ಭಂಗಿ, ಅವರ ಕ್ರಿಯೆಗಳನ್ನು ಕಣ್ಣಿಗೆ ಕಟ್ಟುವಂತೆ ಕವಿ ನಿರೂಪಿಸಿದ್ದಾನೆ.

ಕಾವ್ಯರಸಯಾನ ಮುಂದುವರಿದುದು: ೨೬.೦೮.೨೦೨೩

ಈ ದಿನದ ರೆಕಾರ್ಡಿಂಗ್

ಈವರೆಗೆ
ವಸಿಷ್ಠನ ಆಶ್ರಮದಿಂದ ಹೊರಟು ಬಂದ ಹರಿಶ್ಚಂದ್ರ ಮಹಾರಾಜ ಮತ್ತೆ ಬೇಟೆಯನ್ನು ಮುಂದುವರಿಸುತ್ತ ಅಳಿದುಳಿದ ಕಾಡಿನ ಕ್ರೂರಮೃಗಗಳನ್ನು ನಾಶಮಾಡುತ್ತಾನೆ. ಇದು ತಿಳಿದ ವಿಶ್ವಾಮಿತ್ರ ಇನ್ನೊಂದು ಉಪಾಯವನ್ನು ಮಾಡುತ್ತಾನೆ. ಒಂದು ಮಾಯಾವರಾಹವನ್ನು ಸೃಷ್ಟಿಸಿ ಅದರ ಮೂಲಕ ರಾಜನನ್ನು ತನ್ನ ಆಶ್ರಮಕ್ಕೆ ಕರೆತಂದು ಆಮೇಲೆ ಅವನ ಸತ್ಯದ ಶಕ್ತಿಯನ್ನು ಪರೀಕ್ಷೆಮಾಡುತ್ತೇನೆ ಎಂದು ನಿರ್ಧರಿಸುತ್ತಾನೆ. ಅತ್ಯಂತ ಭಯಂಕರವಾದ ಆ ಹಂದಿ ಕಾಡಿನಲ್ಲಿ ಸುತ್ತುವರಿಯುತ್ತ ಬೇಟೆಗಾರರನ್ನು ಕೊಂದು ಹಾಕುತ್ತದೆ. ಅದರ ಭೀಕರವಾದ ಆಕೃತಿಯನ್ನು ನೋಡಿ ಬೇಟೆಗಾರರೇ ಭಯದಿಂದ ನಡುಗುತ್ತಾರೆ. ಅವರಲ್ಲಿ ಒಬ್ಬ ರಾಜನ ಬಳಿಗೆ ಬಂದು ಹಂದಿಯ ಹಾವಳಿಯನ್ನು ವರ್ಣಿಸುತ್ತಾನೆ. ರಾಜ ಹಂದಿಯ ಬೇಟೆಗೆ ಮುಂದುವರಿಯುತ್ತಾನೆ. ಹರಿಶ್ಚಂದ್ರನನ್ನು ತನ್ನ ಬಳಿಗೆ ತರಿಸುವ ಕೆಲಸದಲ್ಲಿ ಯಶಸ್ವಿಯಾದ ಹಂದಿ ಕಾಡಿನ ಪೊದರಿನಲ್ಲಿ ಮಲಗಿರುವುದನ್ನು ನೋಡಿ ಹರಿಶ್ಚಂದ್ರ ಅದರ ಮೇಲೆ ಬಾಣಪ್ರಯೋಗ ಮಾಡುತ್ತಾನೆ. ಹರಿಶ್ಚಂದ್ರ ಹಂದಿಯ ಮೇಲೆ ಬಾಣಪ್ರಯೋಗವನ್ನು ಮಾಡುವುದರಿಂದ ಕಾವ್ಯರಸಯಾನ ಮುಂದುವರಿಯುತ್ತದೆ.

ಕವಿ ಈ ಪದ್ಯದಲ್ಲಿ ಹರಿಶ್ಚಂದ್ರ ಹಂದಿಯ ಮೇಲೆ ಬಾಣ ಪ್ರಯೋಗ ಮಾಡಿದುದನ್ನು ವರ್ಣಿಸುತ್ತಾನೆ.

ಪದ್ಯ

ಗರಳಗೊರಳವನರಳ ಸರಳಂಗೆ ಮುನಿವಂತೆ
ಯಿರುಳ ತಿರುಳಿನ ಹೊರಳಿಗಾ ತರಣಿ ಕೆರಳ್ವಂತೆ
ಸರಳ ತೆರಳಿಕೆಗೆ ಮರಳಿತು ಕರುಳ ಸುರುಳಿಯೊಳು ಹೊರಳುತ್ತ ಬೀಳುತ್ತಲು
ಹುರುಳಳಿದುದುರವೊಡೆದು ಸರಳುರ್ಚೆ ನರಳುತ್ತ
ತೊರಳೆಯಡಸಲು ಮೂಗನರಳಿಸೆ,ಚ್ಚೆಂ,ಬ ಹೊ
ತ್ತು,ರುಳ್ವ ಕಂಬನಿಯಿಂದ ತರಳಚಿತ್ತದ ಹಂದಿ ಮರಳಿ ಕಾನನಕೈದಿತು ೯೭

ಅರ್ಥ
ವಿಷಕಂಠನು ಮನ್ಮಥನಿಗೆ ಕೋಪಿಸುವಂತೆ, ಕತ್ತಲೆಯನ್ನು ನೋಡಿ ಸೂರ್ಯದೇವನು ಕೆರಳುವಂತೆ ಹಂದಿನ ಮೇಲೆ ಕೆರಳಿ ರಾಜನು ಬಿಟ್ಟ ಬಾಣ ವೇಗವಾಗಿ ಹೋಗಿ ಹಂದಿಯನ್ನು ಚುಚ್ಚಿದಾಗ ಅದು ಪ್ರಾಣಭಯದಿಂದ ತಿರುಗಿ ಓಡುತ್ತದೆ. ಚುಚ್ಚಿದ ಬಾಣ ಅದರ ಮೈಯನ್ನು ಸೀಳಿ ಕರುಳುಗಳು ಹೊರಗೆ ಬಂದು ಆ ಕರುಳಸುರುಳಿಯಲ್ಲಿ ಹೊರಳುತ್ತ ಬೀಳುತ್ತ ಶಕ್ತಿಗುಂದಿ ಓಡುವಾಗ ಹೊಟ್ಟೆ ಭಾಗವಾಗಿ ಪಿತ್ತಕೋಶ ಒಡೆದು ನರಳುತ್ತ ಮೂಗನ್ನು ಅರಳಿಸಿ ನೋವಿನ ತೀವ್ರತೆಯಿಂದ ಕಣ್ಣಿನಿಂದ ನೀರು ಸುರಿಯುತ್ತಿರಲು ಆ ಬಾಣದ ಸಮೇತ ಅಸ್ತವ್ಯಸ್ತಗೊಂಡ ಓಟದಿಂದ ಹಂದಿ ಕಾಡಿನ ಕಡೆಗೆ ಓಡಿಹೋಗುತ್ತದೆ.

ಪದ್ಯ

ಪುದಿಯ ಗಿಡುವಿನೊಳು ಮಡುವಿನೊಳು ಬೆಟ್ಟದೊಳು ಘ
ಟ್ಟದೊಳು ಸರುವಿನೊಳು ದರುವಿನೊಳು ಹಳ್ಳದೊಳು ಕೊ
ಳ್ಳದೊಳು ಬೆಳೆದಿರುಬಿನೊಳು ತುರುಬಿನೊಳು ಸಂದಿಯೊಳು ಗೊಂದಿಯೊಳು ಹೊಕ್ಕುಮಿಕ್ಕು
ಇದಿರೊಳೊಡ್ಡಿದ ಮರಂ ಮುರಿಯೆ ಮೆಳೆಯೊಡೆಯೆ ಮೃಗ
ಬೆದರೆ ಕೆದರೆ ಧರೆ ಕಳಿದೋಡುವೆಕ್ಕಲನನ
ಟ್ಟಿದನಬುಜಸಖಕುಲಲಲಾಮನರಿಭೂಪಾಲದರ್ಪಸರ್ಪ ಮಯೂರನು ೯೮

ಅರ್ಥ
ದಟ್ಟವಾದ ಗಿಡಗಳೊಳಗೆ, ಮಡುವಿನೊಳಗೆ, ಬೆಟ್ಟದೊಳಗೆ ಗುಡ್ಡದೊಳಗೆ ಕೊರಕಲೊಳಗೆ, ಹಳ್ಳದೊಳಗೆ, ಕೊಳ್ಳದೊಳಗೆ, ಪೊದೆಗಳೊಳಗೆ, ಸಂದಿಯೊಳಗೆ ನುಗ್ಗಿ ಬಗ್ಗಿ ಓಡುವ ರಭಸಕ್ಕೆ ಎದುರಿಗಿದ್ದ ಮರಗಳು ಮುರಿದು, ಮೆಳೆಗಳು ಒಡೆದು, ಮೃಗಗಳು ಬೆದರಿ ಚೆಲ್ಲಾಪಿಲ್ಲಿಯಾಗಿ ಓಡಿಹೋಗುತ್ತವೆ. ಭೂಮಿಯನ್ನೇ ಬಿಟ್ಟು ಓಡುತ್ತಿದೆಯೋ ಎಂಬಂತಿರುವ ಹಂದಿಯನ್ನು ಸೂರ್ಯಕುಲಶ್ರೇಷ್ಠನಾದ ಶತ್ರುರಾಜರ ಅಹಂಕಾರವೆಂಬ ಸರ್ಪಕ್ಕೆ ಮಯೂರನಂತಿರುವ ಹರಿಶ್ಚಂದ್ರ ಬೆನ್ನಟ್ಟಿಕೊಂಡು ಹೋಗುತ್ತಾನೆ.
ರಾಜ ಎಷ್ಟು ವೇಗವಾಗಿ ಹಂದಿಯನ್ನು ಬೆನ್ನಟ್ಟಿದ ಎಂಬುದನ್ನು ಮುಂದಿನ ಪದ್ಯದಲ್ಲಿ ನೋಡಬಹುದು.

ಪದ್ಯ

ಧರೆಯೊಳಗೆ ಬೇಗದಿಂ ಹರಿಣವತ್ಯಧಿಕವಾ
ಹರಿಣನಿಂ ಮರುತನುದ್ದಂಡವಾ ಹರಿಣನಿಂ
ಮರುತನಿಂ ಸರಳಧಿಕತೀವ್ರತಾ ಹರಿಣನಿಂ ಮರುತನಿಂ ಸರಳಿನಿಂದ
ವರದೃಷ್ಟಿಯಧಿಕವಾ ಹರಿಣನಿಂ ಮರುತನಿಂ
ಸರಳಿನಿಂ ದೃಷ್ಟಿಯಿಂ ಮನವುಗ್ರಸತ್ವವಾ
ಹರಿಣನಿಂ ಮರುತನಿಂ ಸರಳಿನಿಂ ದೃಷ್ಟಿಯಿಂ ಮನದಿಂ ರಥಾಶ್ವ ಮಿಗಿಲು ೯೯

ಅರ್ಥ
ಲೋಕದಲ್ಲಿ ಅತ್ಯಂತ ವೇಗವಾಗಿ ಸಾಗುವ ಪ್ರಾಣಿ ಜಿಂಕೆ. ಆದರೆ ಜಿಂಕೆಗಿಂತಲೂ ವೇಗ ವಾಯು. ಜಿಂಕೆ, ವಾಯುವಿಗಿಂತಲೂ ವೇಗ ಬಾಣ. ಜಿಂಕೆ, ವಾಯು, ಬಾಣಕ್ಕಿಂತಲೂ ವೇಗ ರಾಜನ ನೋಟ. ಜಿಂಕೆ, ವಾಯು, ಬಾಣ, ರಾಜನ ನೋಟಕ್ಕಿಂತಲೂ ವೇಗ ಮನಸ್ಸು. ಜಿಂಕೆ, ವಾಯು, ಬಾಣ, ದೃಷ್ಟಿ, ಮನಸ್ಸುಗಳಿಗಿಂತಲೂ ವೇಗ ರಥಾಶ್ವಗಳು. (ಅಂಥ ರಥಾಶ್ವಗಳು ಹರಿಶ್ಚಂದ್ರನದ್ದಾಗಿದ್ದುವು)

ಪದ್ಯ

ಬಳಿವಿಡಿದು ಬಳಿಚಿದಂಬಿಂ ಮುಂದೆ ಹರಿದು ವನ
ದೊಳಗಡಗಿ ಮಾಯವಾದೆಕ್ಕಲನನಲ್ಲಲ್ಲಿ
ಸುಳಿದರಸಿ ಕಾಣದೆ ಮನಂ ನೊಂದು ಧೃತಿಯಡಗಿ ಡಗೆದೋರಿ ಕಟ್ಟಾಸರು
ಮೊಳೆತು ಬಾಯಾರಿ ತನುಬೆವರಿ ಮುಖಬಾಡಿ ರವಿ
ಕುಲಶಿರೋಮಣಿ ಹರಿಶ್ಚಂದ್ರರಾಯಂ ಕಂಡ
ನಳವಿಯೊಳು ನಾನಾ ವಿಶೇಷ ವಿಭವಂಬಡೆದ ಮಂಗಳತಪೋವನವನು ೧೦೦

ಅರ್ಥ
ತನ್ನನ್ನು ಬೆನ್ನಟ್ಟಿಕೊಂಡು ಬರುವ ಬಾಣಕ್ಕಿಂತಲೂ ವೇಗವಾಗಿ ಓಡಿ ಕಾಡಿನಲ್ಲಿ ಎಲ್ಲೋ ಅಡಗಿ ಮಾಯವಾದ ಹಂದಿಯನ್ನು ಹುಡುಕುತ್ತ ರಾಜನೂ ಹಿಂಬಾಲಿಸಿದ. ಆದರೆ ಎಷ್ಟು ಹುಡುಕಿದರೂ ಎಲ್ಲಿಯೂ ಹಂದಿ ಕಾಣಿಸದಾಗ ರಾಜನ ಮನಸ್ಸಿಗೆ ತುಂಬ ನೋವಾಗುತ್ತದೆ. ಹುಡುಕಿ ಹುಡುಕಿ ಶಕ್ತಿಯೂ ಇಲ್ಲವಾಗುತ್ತದೆ. ಆಯಾಸ, ಭಾಯಾರಿಕೆ, ಸಂಕಟಗಳಿಂದ ದೇಹ ಬೆವರುತ್ತದೆ, ಮುಖ ಬಾಡುತ್ತದೆ. ಇನ್ನು ಮುಂದುವರಿಯಲು ಸಾಧ್ಯವೇ ಇಲ್ಲವೆಂದು ರವಿಕುಲ ಶಿರೋಮಣಿ ಹರಿಶ್ಚಂದ್ರ ಯೋಚಿಸುವ ಹೊತ್ತಿಗೆ ವಿಶೇಷ ವೈಭವಗಳಿಂದ ಕೂಡಿದ ಒಂದು ಪುಣ್ಯಕರವಾದ ತಪೋವನವನ್ನು ಕಾಣುತ್ತಾನೆ.

ಪದ್ಯ

ಕಂದಮೂಲಂಗೀಳ್ವ ಪೂಗೊಯ್ವ ಕೃಷ್ಣಾಜಿ
ನಂದಳೆವ ರುದ್ರಾಕ್ಷೆಗೋವ ವಲ್ಕಲವಸನ
ವೃಂದವಂ ತೊಳೆವ ಮಿಸುಪಾ ದಾರಮಂ ಬಿಗಿವ ಮೌಂಜಿಮೇಖಲೆಗಟ್ಟುವ
ಒಂದಿ ಭಸಿತವನಿಡುವ ಯಜ್ಞೋಪವೀತಮಂ
ಬಂಧಿಸುವ ಜಡೆಯ ಸುಂಕಿಸುವ ಸಮಿತಂ ತಪ್ಪ
ಹೆಂದದ ಮುನೀಶ್ವರ ಕುಮಾರರಂ ಕಂಡು ಕೈಮುಗಿದಂ ಹರಿಶ್ಚಂದ್ರನು ೧೦೧

ಅರ್ಥ
ಕಂದಮೂಲಗಳನ್ನು ಕೀಳುವ, ಹೂಗಳನ್ನು ಕೊಯ್ಯುವ, ಜಿಂಕೆಯ ಚರ್ಮವನ್ನು ಹದಮಾಡುವ, ರುದ್ರಾಕ್ಷಿಗಳನ್ನು ಪೋಣಿಸುವ, ವಲ್ಕಲ ಬಟ್ಟೆಗಳನ್ನು ಒಗೆಯುವ, ಬಟ್ಟೆಯ ದಾರಗಳನ್ನು ಸಿದ್ಧಮಾಡುವ, ಉಡಿದಾರಗಳನ್ನು ಹೆಣೆಯುವ, ಭಸ್ಮವನ್ನು ಧರಿಸುವ, ಯಜ್ಞೋಪವೀತವನ್ನು ಕಟ್ಟುವ, ಜಡೆಯನ್ನು ಹೆಣೆಯುವ ಸಮಿತ್ತುಗಳನ್ನು ತರುವ ಹೀಗೆ ಬಹುಬಗೆಯ ಕಾರ್ಯಭಾರದಿಂದ ಓಡಾಡುತ್ತಿರುವ ಮುನಿಕುಮಾರರನ್ನು ಕಂಡು ಅವರಿಗೆ ರಾಜ ಕೈಮುಗಿಯುತ್ತಾನೆ.

ಪದ್ಯ

ವಿದಿತವೆನೆ ವೇದಘೋಷದ ಪುರಾಣಪ್ರಸಂ
ಗದ ತರ್ಕತಂತ್ರ ಸಂವಾದದಾಗಮವಿಚಾ
ರದ ಸದೌಪನಿಷದರ್ಥಶ್ರವಣದಾಸ್ತವಸ್ತೋತ್ರಪಠನಪ್ರಕರದ
ಮೃದುಕಾವ್ಯ ಲಕ್ಷಣಾಲಾಪದ ಶಿವಾರ್ಚನಾಂ
ಗದ ಘಂಟಿಕಾರವದ ನಿತ್ಯಹೋಮಸ್ವಧಾಂ
ತ್ಯದ ಶ್ರವಣ ಸಂಭ್ರಮಕೆ ಬೆರಗಾಗುತಿರ್ದನು ಹರಿಶ್ಚಂದ್ರಭೂನಾಥನು ೧೦೨

ಅರ್ಥ
ಇಡೀ ಆಶ್ರಮದಲ್ಲಿ ಎಲ್ಲಿ ನೋಡಿದರೂ ಪ್ರಶಾಂತವಾದ ವಾತಾವರಣ, ಆಧ್ಯಾತ್ಮಿಕ ಚಟುವಟಿಕೆಗಳು. ವಿಶೇಷವಾದ ವೇದಘೋಷಗಳು, ಪುರಾಣಪ್ರಸಂಗಗಳು, ತರ್ಕ, ತಂತ್ರಗಳ ಮಾತುಗಳು, ಆಗಮಗಳ ವಿಚಾರ ವಿಶ್ಲೇಷಣೆಗಳು, ಉಪನಿಷತ್ತುಗಳ ಅರ್ಥ, ಶ್ರವಣಗಳು, ಭಕ್ತಿಸ್ತೋತ್ರಗಳ ಪಠಣಗಳ ತಂಡಗಳು, ರಸಕಾವ್ಯಗಳ ಲಕ್ಷಣ, ವಾಚನಗಳು, ಶಿವಪೂಜೆಯ ಭಾಗವಾಗಿ ಕೇಳಿಬರುವ ಘಂಟಾನಾದ, ಪ್ರತಿನಿತ್ಯ ನಡೆಯುವ ಹೋಮಾದಿ ಕ್ರಿಯೆಗಳ ಧ್ವನಿಗಳು – ಈ ಎಲ್ಲ ಸಂಭ್ರಮಗಳನ್ನು ನೋಡುತ್ತ ರಾಜ ಅಚ್ಚರಿಗೊಳ್ಳುತ್ತಾನೆ.

ಪದ್ಯ

ಫಳಭಾರದಿಂದೊಲೆದು ತೂಗಿ ಬಾಗುವ ಮರಂ
ಗಳ ಕೆಳಗೆ ತುರುಗಿ ನಳನಳಿಸಿ ಬೆಳೆದೆಳಲತೆಯ
ತಳಿರ ತಿಳಿಗೊಳನ ಪುಳಿನಸ್ಥಳದ ಕಮಲಕೈರವದ ತನಿಗಂಪುವೆರಸಿ
ಸುಳಿವ ತಣ್ಣೆಲರ ತಂಪಂ ಕಂಡು ಮಂತ್ರಿ ಭೂ
ತಳನಾಥ ಬಿಡುವಡಿದು ಠಾವೆಂದು ಬಿನ್ನೈಸೆ
ಜಲಜಸಖಕುಲನಿಳಿದನಂದು ರಥಮಂ ಪಟ್ಟದಂಗನೆ ಕುಮಾರಸಹಿತ ೧೦೩

ಅರ್ಥ
ಬರುವ ದಾರಿಯಲ್ಲಿ ಫಲಭಾರದಿಂದ ತುಂಬಿ ಬಾಗಿದ ಮರಗಳ ಕೆಳಗೆ ನಳನಳಿಸುತ್ತಿರುವ ಎಳೆಯ ಬಳ್ಳಿಗಳ ಚಿಗುರುಗಳು ಒತ್ತೊತ್ತಾಗಿ ಹಬ್ಬಿ ಹರಡಿದ, ತಿಳಿಯಾದ ನೀರಿನ ಕೊಳದ ಮರಳಿನ ರಾಶಿಯಲ್ಲಿ ತಾವರೆ ಮತ್ತು ನೈದಿಲೆ ಹೂಗಳ ಕಮನೀಯವಾದ ಪರಿಮಳದೊಡನೆ ತಂಪಾಗಿ ಬೀಸುವ ಗಾಳಿಯನ್ನು ಆಸ್ವಾದಿಸಿದ ಮಂತ್ರಿ ವಿಶ್ರಮಿಸಲು ಇದು ಸರಿಯಾದ ಜಾಗವೆಂದು ತಿಳಿಸಿದಾಗ ರಾಜ ಪತ್ನಿ ಮತ್ತು ಮಗನೊಡಗೂಡಿ ರಥದಿಂದ ಕೆಳಗಿಳಿಯುತ್ತಾನೆ.

ಪದ್ಯ

ಬಳವಳಿದ ರಥತುರಗವೃಂದಮಂ ಬಿಟ್ಟು ಶೀ
ತಳವಾರಿಯಂ ತೋರಿ ಮೆಯ್ದೊಳೆದು ಲಲಿತಶಾ
ಡ್ವಳವನೊಲವಿಂ ಕೊಯ್ದು ಮುಂದಿಟ್ಟು ಕಟ್ಟಿ ಪ್ರಧಾನ ನಟ್ಟಡವಿಯೊಳಗೆ
ಬಳಿವಿಡಿದು ಬಂದ ಕಟಕವನೆಯ್ದೆ ಬಿಡಿಸಿ ಭೂ
ತಳಪತಿಗೆ ಕೈಗೊಟ್ಟು ನಿರ್ಮಳ ಸರೋವರದೊ
ಳಿಳುಪಿ ಶಿಶಿರೋಪಚಾರಂಗಳಂ ಮಾಡಿದಂ ಡಗೆ ತೊಲಗಿ ವಿಶ್ರಮಿಸಲು ೧೦೪

ಅರ್ಥ
ಮಾರ್ಗಾಯಾಸದಿಂದ ಬಳಲಿದ ರಥದ ಕುದುರೆಗಳನ್ನು ಬಿಚ್ಚಿ ತಂಪಾದ ನೀರಿನ ಬಳಿಗೆ ಕರೆದುಕೊಂಡು ಹೋಗಿ ಅವುಗಳ ಮೈಯನ್ನು ತೊಳೆದು ಹಸುರಾದ ಎಳೆಯ ಹುಲ್ಲನ್ನು ಕತ್ತರಿಸಿ ಅವುಗಳ ಮುಂದಿರಿಸಿ ಜೊತೆಯಲ್ಲಿ ಬಂದ ಸೈನ್ಯವನ್ನೆಲ್ಲ ವಿಶ್ರಮಿಸಲು ಕಳುಹಿಸಿ ರಾಜನಿಗೆ ಕೈನೀಡಿ ಸರೋವರದ ಬಳಿಗೆ ಕರೆದುಕೊಂಡು ತಂಪಾದ ನೀರಿಗೆ ಇಳಿಸಿ ಆಯಾಸ ಪರಿಹಾರವಾಗುವಂತೆ ಉಪಚರಿಸಿ ವಿಶ್ರಮಿಸಲು ಅನುಕೂಲ ಮಾಡಿದ ಮಂತ್ರಿ.

ವಿಶೇಷ ವಿಚಾರ
ಮಂತ್ರಿಯಾದವನು ರಾಜನ ಬಗ್ಗೆ, ರಾಜ್ಯದ ಬಗ್ಗೆ ಎಷ್ಟು ಕಾಳಜಿ ಮತ್ತು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು ಎಂಬುದು ಇಲ್ಲಿ ವಿದಿತವಾಗುತ್ತದೆ.

ಪದ್ಯ

ಘನಪುಣ್ಯಮಯವೆನಿಪ್ಪೀ ತಪೋವನದೊಳಿಹ
ಮುನಿಯಾವನೋ ಮಹಾದೇವನೇ ಬಲ್ಲನಾ
ತನ ಶಾಂತಿಯಿಂದ ಶಶಿ ಚಾರಿತ್ರದಿಂ ಗಂಗೆ ವರತಪಸ್ತೇಜದಿಂದ
ದಿನಕರಂ ಸುಳಿವಿಂದ ತಂಗಾಳಿ ನುಡಿಯ ಮೋ
ಹನದಿಂದ ಸುಧೆಯುದಾರತ್ವದಿಂ ಸುರಕುಜಂ
ಜನಿಸದಿರವೆಂದು ಕೊಂಡಾಡುತಿರ್ದಂ ಹರಿಶ್ಚಂದ್ರನಾ ಮಂತ್ರಿಯೊಡನೆ ೧೦೫

ಅರ್ಥ
ಅತ್ಯಂತ ಪುಣ್ಯಪ್ರದವಾದ ಈ ತಪೋವನದಲ್ಲಿರುವ ಆ ಮಹಾನ್‌ ಮಹರ್ಷಿ ಯಾರೆಂಬುದು ಆ ಮಹಾ ದೇವನಿಗೇ ಗೊತ್ತು. ಏನಾದರೂ ಆ ಮಹಾನುಭಾವನ ಶಾಂತ ಮನಸ್ಸಿನಿಂದಲೇ ಚಂದ್ರ, ಶುದ್ಧ ಚಾರಿತ್ರ್ಯದಿಂದಲೇ ಗಂಗೆ, ತಪಸ್ಸಿನ ತೇಜಸ್ಸಿನಿಂದಲೇ ಸೂರ್ಯ, ಅವನ ಓಡಾಟದಂದಲೇ ಗಾಳಿ, ಅವನ ಮಾತಿನ ಆಕರ್ಷಣೆಯಿಂದಲೇ ಅಮೃತ, ಔದಾರ್ಯದಿಂದಲೇ ಕಲ್ಪವೃಕ್ಷ ಹುಟ್ಟರಬೇಕು ಎಂದು ಮಂತ್ರಿಯೊಂದಿಗೆ ಹೇಳುತ್ತ ರಾಜ ಆ ತಪೋವನದ ಮುನಿಯನ್ನು ಹೊಗಳಿದ.

ಪದ್ಯ

ಹೊಗಳುತ್ತ ಹಾರಯಿಸುತುಬ್ಬುತ್ತ ಕೊಬ್ಬುತ್ತ
ನಗುತ ನಲಿವುತ್ತ ಹಾಡುತ್ತಾಡುತಾನಂದ
ವೊಗೆವುತಿರಲೊಬ್ಬ ಮುನಿಯಂ ಕಂಡಿದಾವನಾಶ್ರಮವೆಂದು ಬೆಸಗೊಂಡಡೆ
ವಿಗಡ ವಿಶ್ವಾಮಿತ್ರ ಮುನಿಯ ಬನವೆನೆ ಸುಖಂ
ಸುಗಿದು ಪೊಯ್ವಡೆದಂತೆ ಹಾವಗಿದು ಬಿಟ್ಟಂತೆ
ಬಗೆ ಬೆದರಿ ಗುರುವಾಜ್ಞೆಯಳಿದುದಿನ್ನೇವೆನೆಂದನು ಹರಿಶ್ಚಂದ್ರನೃಪನು ೧೦೬

ಅರ್ಥ
ತಪೋವನವನ್ನು ಕೊಂಡಾಡುತ್ತ, ಪ್ರಶಂಸಿಸುತ್ತ, ಖುಷಿಪಡುತ್ತ, ನಗುತ್ತ, ನಲಿಯುತ್ತ, ಹಾಡುತ್ತ, ಹೇಳುತ್ತ ಆನಂದದಲ್ಲಿ ಮುಳುಗಿರುವಾಗ ಒಬ್ಬ ಮುನಿಯನ್ನು ಕಂಡು ಇದು ಯಾರ ಆಶ್ರಮ ಎಂದು ಕೇಳಿದರೆ ಆತ ಶ್ರೇಷ್ಠನಾದ ವಿಶ್ವಾಮಿತ್ರ ಮುನಿಯ ತಪೋವನವೆಂದಾಗ ಒಮ್ಮೆಗೇ ಸುಖವೆಲ್ಲವೂ ಸೋರಿಹೋಗಿ ಆಘಾತಕ್ಕೆ ಒಳಗಾದಂತೆ ವಿಷದ ಹಾವು ಕಚ್ಚಿದಂತೆ ಮನಸ್ಸು ಬೆದರಿ ಗುರುವಿನ ಆದೇಶ ಹಾಳಾಯಿತು, ಇನ್ನೇನು ಮಾಡಲಿ ಎಂದು ಹರಿಶ್ಚಂದ್ರನು ಕಳವಳಿಸಿದನು.

ವಿಶೇಷ ವಿಚಾರ
ಹರಿಶ್ಚಂದ್ರನಿಗೆ ಗುರುವಿನ ಮೇಲಿರುವ ಭಕ್ತಿ, ಶ್ರದ್ಧೆ, ವಿಶ್ವಾಸ ಎಷ್ಟು ಅನುಪಮವಾದುದು ಎಂಬುದು ಇಲ್ಲಿ ಸುವ್ಯಕ್ತ.

ಪದ್ಯ

ಹೊಳೆವ ಮೇರುವ ಸುತ್ತಿ ಬೆಂಡಾದ ರವಿ ಚಂದ್ರ
ಕಳೆಯ ತೊಡೆಯೆಡೆಯೊಳೊಯ್ಯನೆ ಮಲಗುವಂತೆ ರವಿ
ಕುಲಲಲಾಮಂ ವರಾಹನ ಹಿಂದೆ ಸುತ್ತಿದಾಸರ ಮೇಲೆ ಗುರುವಾಜ್ಞೆಯ
ಕಳೆದು ಕೌಶಿಕನಾಶ್ರಮಂಬೊಕ್ಕ ಚಿಂತೆಯಿಂ
ಮುಳುಗುತ್ತ ನಿಜಸತಿಯ ತೋರದೊಡೆಗಳ ಮೇಲೆ
ಲಲಿತಮಣಿಮಯಮಕುಟಮಂಡಿತಮಸ್ತಕವನಿಕ್ಕಿ ಮಗ್ಗುಲಿಕ್ಕಿದನಾಗಳು ೧೦೭

ಅರ್ಥ
ಮೇರುಪರ್ವತವನ್ನು ಸುತ್ತಿ ಆಯಾಸಗೊಂಡ ಸೂರ್ಯ ಚಂದ್ರಕಳೆಯ ತೊಡೆಯಲ್ಲಿ ನಿಧಾನವಾಗಿ ಮಲಗಿ ಆಯಾಸ ಪರಿಹರಿಸುವಂತೆ ಸೂರ್ಯಕುಲ ಶ್ರೇಷ್ಠನಾದ ಹರಿಶ್ಚಂದ್ರನು ಹಂದಿಯ ಹಿಂದೆ ಸುತ್ತಿ ಬಂದ ಆಯಾಸದೊಂದಿಗೆ ಗುರುವಿನ ಮಾತನ್ನು ಉಲ್ಲಂಘಿಸಿ ವಿಶ್ವಾಮಿತ್ರನ ಆಶ್ರಮವನ್ನು ಪ್ರವೇಶಿಸಿದೆನೆಂಬ ಅಪರಾಧೀಭಾವವೂ ಸೇರಿ ಅಧಿಕವಾದ ಚಿಂತೆಯಲ್ಲಿ ಮುಳುಗಿ ತನ್ನ ಮಡದಿಯಾದ ಚಂದ್ರಮತಿಯ ತೊಡೆಗಳ ಮೇಲೆ ತನ್ನ ಸುಂದರವಾದ ರತ್ನಖಚಿತ ಮುಕುಟವನ್ನು ಧರಿಸಿದಂತೆಯೇ ತಲೆಯಿಟ್ಟು ಮಲಗಿದನು.

ವಿಶೇಷ ವಿಚಾರ
ಮನಸ್ಸಿಗೆ ಆಯಾಸ, ದೇಹಕ್ಕೂ ಆಯಾಸ. ಎಲ್ಲಕ್ಕೂ ಪರಿಹಾರ ನೀಡುವವಳು ಬಾಳಸಂಗಾತಿ ಚಂದ್ರಮತಿ.

ಪದ್ಯ

ಸತಿ ಮಡಿಸಿ ನೀಡುವೆಲೆವಿಡಿದ ಕೈ ಬಸವಳಿವು
ತತಿ ಚಿಂತೆಯೊಳು ಮರೆದ ತನು ಜೊಮ್ಮುವಿಡಿದ ಪು
ರ್ಬತಿಭಾರಮಾಗಿ ಕಣ್‌ ಮುಚ್ಚಿ ತೋಳ್‌ ತೊಡೆ ಮಿಡುಕೆ ಸುಯ್‌ ಸೂಸೆ ನಿದ್ರೆ ಕವಿದು
ವಿತತ ಸುಖದಿಂದಿರುತಿರಲ್ಕೆ ನಾನಾದುಃಖ
ಯುತವಪ್ಪುದೊಂದು ಕನಸಂ ಕಂಡು ನೊಂದು ಭೂ
ಪತಿ ಬೆದರಿದಂತೆ ಭೋಂಕೆನಲೆದ್ದು ಬೆಬ್ಬಳಿಸಿ ನಾಲ್ದೆಸೆಯನಾರೈದನು ೧೦೮

ಅರ್ಥ
ಸತಿ ಚಂದ್ರಮತಿ ಗಂಡನಿಗೆ ಮಡಚಿ ಕೊಟ್ಟ ತಾಂಬೂಲ ಕೈಯಲ್ಲಿ ಇದ್ದಂತೆಯೇ ಆಯಾಸಗೊಂಡು ಅತಿಯಾದ ಚಿಂತೆಯಿಂದ ಮೈಮರೆತ ಶರೀರ, ಜೊಂಪು ಆವರಿಸಿದ ಹುಬ್ಬುಗಳು, ಅತಿಭಾರವಾಗಿ ಮುಚ್ಚಿದ ಕಣ್ಣುಗಳು, ನಡುಗುತ್ತಿರುವ ಕೈಕಾಲುಗಳು ಇದ್ದಂತೆಯೇ ಉಸಿರು ನಿಧಾನವಾಗಿ ಹೊರಬರಲು, ಸುಖನಿದ್ರೆ ಆವರಿಸಿದ ರಾಜ ತುಸು ಹೊತ್ತಿನಲ್ಲೇ ಅತ್ಯಂತ ದುಃಖಭರಿತವಾದ ಕನಸನ್ನು ಕಂಡು ಭಯಭೀತನಾಗಿ ಭೋಂಕನೆ ಎಚ್ಚೆತ್ತು ದಿಗ್ಭ್ರಾಂತನಾಗಿ ನಾಲ್ಕು ದಿಕ್ಕುಗಳನ್ನು ನೋಡಿ ಏನನ್ನೋ ಹುಡುಕತೊಡಗಿದನು.

ವಿಶೇಷ ವಿಚಾರ
ಪತ್ನಿ ಕೊಟ್ಟ ತಾಂಬೂಲವನ್ನು ತಿನ್ನುವಷ್ಟು ಶಕ್ತಿ ಅಥವಾ ಆಸಕ್ತಿ ರಾಜನಿಗಿರಲಿಲ್ಲವೆನ್ನುವುದು ಅವನ ಮನಸ್ಸಿಗಾದ ಆಘಾತವನ್ನು ಸ್ಪಷ್ಟೀಕರಿಸುತ್ತದೆ.

ಪದ್ಯ

ಧುರದೊಳರಿಭೂಪರನಂಜಿಸುವ ನಡುಗಿಸುವ
ಕೊರಗಿಸುವ ಕೋಡಿಸುವ ಬಳುಕಿಸುವ ಜಳಕಿಸುವ
ಬಿರುದಂಕಮಲ್ಲ ನೀ ನಡುಗಲೇತಕ್ಕೆ ಹೇಳೆಂದು ಮೆಲ್ಲನೆ ನುಡಿಸಲು
ತರುಣಿ ಕೇಳೊಂದು ಕನಸಂ ಕಂಡೆನಾ ಕನಸು
ನಿರುತವೆಂದೇ ಕಣ್ಣ ತೆರೆದೆ ನೀನಿಂತಿದರ
ಪರಿಯಂ ವಿಚಾರಿಸೆಂದವನೀಶ ನುಡಿಯಲಾ ನುಡಿಗೆ ಸತಿ ಹೂಂಕೊಂಡಳು ೧೦೯

ಅರ್ಥ
ರಣರಂಗದಲ್ಲಿ ಶತ್ರುರಾಜರನ್ನು ಹೆದರಿಸುವ, ನಡುಗಿಸುವ, ಕೊರಗಿಸುವ, ಸೋಲಿಸುವ, ಬಾಗಿಸುವ, ಹೆದರಿಸುವ, ಬಿರುದಾಂಕಿತನಾದ ವೀರಯೋಧ ನೀನು, ಇದೇನು ಈಗ ನೀನೇ ಭಯದಿಂದ ನಡುಗುತ್ತಿದ್ದೀಯಲ್ಲ, ಏನಾಯಿತು ಹೇಳು ಎಂದು ರಾಣಿ ನಿಧಾನವಾಗಿ ಕೇಳಿದಾಗ ನಾನೊಂದು ಭಯಂಕರವಾದ ಕನಸನ್ನು ಕಂಡೆ, ಆ ಕನಸು ನಿಜವೆಂದೇ ತೋರಿ ಕಣ್ಣುತೆರೆದೆ, ಅದೇಕೆ ಹಾಗಾಯಿತು ಎಂದು ನೀನೇ ವಿಚಾರಿಸಿ ತಿಳಿಯಬೇಕು ಎಂದು ರಾಜ ಹೇಳಿದಾಗ ಚಂದ್ರಮತಿ ಒಪ್ಪಿಕೊಂಡಳು.

ಹಂಚಿಕೊಳ್ಳಿ: https://shampa.org/g1ds

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ