ಸೆಪ್ಟೆಂಬರ್ 20, 2024

ಕಾವ್ಯರಸಯಾನ ಮುಂದುವರಿದುದು: ೦೭.೧೦.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ರಾಜರಾದವರು ತಪ್ಪುದಾರಿ ತುಳಿದಾಗ ಸನ್ಮಾರ್ಗವನ್ನು ತೋರಿಸಬೇಕಾದ ಮಹರ್ಷಿ ಹೀಗೆ ದುರ್ಮಾರ್ಗವನ್ನು ತೋರುವುದು ಸರಿಯೇ ಎಂದು ಹರಿಶ್ಚಂದ್ರ ಕೇಳಿದಾಗ ಮತ್ತೆ ಮತ್ತೆ ವಿಶ್ವಾಮಿತ್ರ ನನ್ನ ಮಕ್ಕಳನ್ನು ಮದುವೆಯಾದರೆ ಎಲ್ಲ ಕೋಪವನ್ನೂ ಬಿಟ್ಟುಬಿಡುತ್ತೇನೆ ಎನ್ನುವ ಮಾತನ್ನೇ ಆಡುತ್ತಾನೆ ವಿಶ್ವಾಮಿತ್ರ. ಅವನ ಕಾಟವನ್ನು ತಡೆಯಲಾರದೆ ತನ್ನ ರಾಜ್ಯವನ್ನಾದರೂ ಕೊಡಬಲ್ಲೆ ಆದರೆ ಹೊಲತಿಯರನ್ನು ಮದುವೆಯಾಗಲಾರೆ ಎಂದು ಹರಿಶ್ಚಂದ್ರ ಖಡಾಖಂಡಿತವಾಗಿ ಉತ್ತರಿಸಿದಾಗ ತಥಾಸ್ತು, ಹಡೆದೆಂ ಹಡೆದೆಂ ಎಂದು ಬೊಬ್ಬಿಟ್ಟು ರಾಜ್ಯ ಕೊಟ್ಟ ರಾಜನಿಗೆ ಸಂಭ್ರಮದ ಮೆರವಣಿಗೆ ಯಾಗಲಿ, ಆಶ್ರಮಕ್ಕೆ ತಳಿರುತೋರಣಗಳ ಅಲಂಕಾರ ನಡೆಯಲಿ ಎನ್ನುವುದನ್ನು ಕೇಳಿ ರಾಜ ಅತ್ಯಾಶ್ಚರ್ಯದಿಂದ ತಾನು ರಾಜ್ಯವನ್ನು ಕೊಡಲೇಇಲ್ಲ. ರಾಜ್ಯವನ್ನು ಬಲಾತ್ಕಾರವಾಗಿ ತೆಗೆದುಕೊಳ್ಳುವುದು ನ್ಯಾಯವೇ? ಎಂದು ರಾಜ ಕೇಳಿದಾಗ ನಿನಗೆ ಅರಸುತನದ ಮೇಲೆ ಇಷ್ಟೊಂದು ವ್ಯಾಮೋಹವಿರುವುದಿದ್ದರೆ ನನ್ನ ಮಕ್ಕಳನ್ನು ಮದುವೆಯಾಗು, ಅಳಿಯನಿಗೆ ಬಳುವಳಿಯೆಂದು ಎಲ್ಲ ರಾಜ್ಯವನ್ನೂ ಹಿಂತಿರುಗಿಸುತ್ತೇನೆ. ಎನ್ನುತ್ತಾನೆ ವಿಶ್ವಾಮಿತ್ರ. ಇಂಥ ಮಾತನ್ನು ಪದೇ ಪದೇ ಆಡುತ್ತ ನನ್ನನ್ನು ಕೀಳುಮಾಡಬೇಡ, ನಿನ್ನನ್ನು ಕೈಮುಗಿದು ಬೇಡುತ್ತಿದ್ದೇನೆ. ನಿಮ್ಮ ಮಾತನ್ನು ಮೀರಿದುದಕ್ಕೆ ನನಗೆ ಶಾಪಬಂದರೂ, ಅಪಕೀರ್ತಿ ಬಂದರೂ ಸಹಿಸಬಲ್ಲೆ ಎನ್ನುತ್ತಾನೆ ಹರಿಶ್ಚಂದ್ರ. ರಾಜನ ಮಾತಿನ ಆ ಎಳೆಯನ್ನೇ ಹಿಡಿದು ವಿಶ್ವಾಮಿತ್ರ ಮುಂದುವರಿಸುತ್ತಾನೆ. ಮುಂದೆ:

ಪದ್ಯ

ಸಂದಶಾಪವನು ಜಗದಪಕೀರ್ತಿಯನು ಹೊರುವೆ
ನೆಂದಾಗಳೇ ಹುಸಿಗೆ ಹೆಡ್ಡೈಸುವಾತನ
ಲ್ಲೆಂದರಿಯಲಾಯ್ತನೃತಪುಟ್ಟದಿನಕುಲಕೆ ಕಲೆ ಮೊಳೆವಂತೆ ಮೊಳೆತೆ ನೀನು
ಇಂದೆನಗೆ ಕೊಟ್ಟ ದಾನದ ಭೂಮಿಗಳುಪುವುದು
ಕುಂದಲ್ಲ ನಿನ್ನ ಮಾತಂ ನಂಬುವೆಮ್ಮದೇ
ಕುಂದು ತಿರಿವರಿಗೇಕೆ ರಾಜ್ಯ ನಿನ್ನನುವ ನೋಡಿದೆವೈಸೆ ಕೇಳೆಂದನು ೧೭೬

ಅರ್ಥ
ಶಾಪಕ್ಕಾಗಲೀ ಅಪಕೀರ್ತಿಗಾಗಲೀ ಹೆದರಲಾರೆ ಎಂದಾಗಲೇ ನೀನು ಸುಳ್ಳಿಗೂ ಹೆದರಲಾರೆ ಎಂಬುದು ನನಗೆ ಗೊತ್ತಾಯಿತು. ಸುಳ್ಳನ್ನೇ ಅರಿಯದ ಸೂರ್ಯವಂಶಕ್ಕೆ ಕಳಂಕ ಹುಟ್ಟಿದಂತೆ ನೀನು ಜನಿಸಿದೆ. ಆದ್ದರಿಂದ ನನಗೆ ನೀನಿಂದು ಕೊಟ್ಟ ದಾನದ ಭೂಮಿಗೆ ಆಸೆಪಡುವುದು ಸಹಜವೇ. ನಿನ್ನ ಮಾತನ್ನು ನಂಬಿದ ನನ್ನದೇ ತಪ್ಪು. ನಮ್ಮಂಥ ತಿರಿವವರಿಗೆ ರಾಜ್ಯವೇಕೆ? ನಿನ್ನ ದೃಢಮನಸ್ಸನ್ನು ಪರೀಕ್ಷೆ ಮಾಡಿದೆ ಅಷ್ಟೇ ಎಂದ ವಿಶ್ವಾಮಿತ್ರ.

ಪದ್ಯ

ಎನಗೆ ಜಗದಪಕೀರ್ತಿ ಪುಟ್ಟದನೃತಂ ಹೊದ್ದ
ದಿನಕುಲಕೆ ಕುಂದಿಲ್ಲ ನಿನಗೆ ರಾಜ್ಯದ ಮೇಲೆ
ಮನವಿನಿತು ಘನವಾದಡಿದೆಕೋ ಮನಃಪೂರ್ವಕಂ ಕೊಟ್ಟೆನೆಂದು ನುಡಿವ
ಜನಪತಿಯ ಧೈರ್ಯಕ್ಕೆ ಬೆರಗಾಗಿ ತಲೆದೂಗಿ
ಮುನಿದಡಂ ಮುಟ್ಟಿ ನೋಯಿಸಿದಡಂ ತೆಕ್ಕನೀ
ತನನೆಂತು ಹುಸಿಯ ನುಡಿಸುವೆನೆಂದು ಚಿಂತಿಸುತ ನೆನೆದು ಮತ್ತಿಂತೆಂದನು ೧೭೭

ಅರ್ಥ
ನನಗೆ ಅಪಕೀರ್ತಿಯೂ ಬರುವುದಿಲ್ಲ, ಸುಳ್ಳೂ ಸೇರುವುದಿಲ್ಲ. ಸೂರ್ಯವಂಶಕ್ಕೆ ಕಳಂಕವೂ ತಟ್ಟುವುದಿಲ್ಲ. ನಿನಗೆ ನನ್ನ ರಾಜ್ಯದ ಮೇಲೆ ಅಷ್ಟು ಆಸೆಯಿದ್ದರೆ ಇಕೋ, ಮನಪೂರ್ವಕವಾಗಿ ಕೊಟ್ಟಿದ್ದೇನೆ. ಎಂದು ಹೇಳಿದಾಗ ರಾಜನ ಧೈರ್ಯಕ್ಕೆ ಬೆರಗಾಗಿ ಮನದಲ್ಲೇ ತಲೆದೂಗುತ್ತಾನೆ ವಿಶ್ವಾಮಿತ್ರ. ಕೋಪಿಸಿದರೂ ಮರ್ಮಾಘಾತವಾಗುವಂತೆ ನೋಯಿಸಿದರೂ ಹೆದರಲಿಲ್ಲ ಈತ. ಇವನನ್ನು ಅದು ಹೇಗೆ ನಾನು ಸುಳ್ಳುಗಾರನನ್ನಾಗಿ ಮಾಡಲಿ ಎಂದು ಚಿಂತಿಸುತ್ತ ವಿಶ್ವಾಮಿತ್ರ ಪುನಃ ಈ ಮಾತನ್ನು ಹೇಳುತ್ತಾನೆ.

ಪದ್ಯ

ಇಂತೆನ್ನ ಕಾಟಕ್ಕೆ ಬೇಸತ್ತು ನೀನೊಬ್ಬ
ಕೊಟ್ಟೆನೆಂದಡೆ ಬಿಡೆನು ನೃಪ ನಿನ್ನ
ಕಾಂತೆ ಸುತ ಮಂತ್ರಿಗಳ ಮತ ಬೇಹುದವರುಗಳನೊಡಂಬಡಿಸು ಬೇಗವೆನಲು
ಭ್ರಾಂತ ಮುನಿ ನಾನೊಬ್ಬ ಸಾಲದೇ ಸ್ತ್ರೀ ಬಾಲ
ರೆಂತಾದಡಂ ನುಡಿವರವರಿಚ್ಛೆಯೇ ಎನ್ನ
ಸಂತಸದಿಂ ಕೋಯೆಂದಡದರ ಮಾತಂ ಬಿಟ್ಟು ಧಾರೆಯಂ ತಾ ಎಂದನು ೧೭೮

ಅರ್ಥ
ನಾನು ನಿನಗೆ ಕೊಟ್ಟ ಕಾಟಕ್ಕೆ ಬೇಸರಪಟ್ಟು ನೀನೊಬ್ಬ ರಾಜ್ಯವನ್ನು ಕೊಡುತ್ತೇನೆಂದರೆ ಒಪ್ಪಿಕೊಳ್ಳಲಾರೆ. ನಿನ್ನ ಹೆಂಡತಿ, ಮಗ, ಮಂತ್ರಿ ಎಲ್ಲರ ಅನುಮತಿಯೂ ಬೇಕು. ಅವರನ್ನೂ ಬೇಗ ಒಪ್ಪಿಸು ಎಂದಾಗ ಅಯ್ಯೋ ಹುಚ್ಚು ಮುನಿಗಳೇ, ನಾನೊಬ್ಬ ಸಾಕಾಗುವುದಿಲ್ಲವೇ? ಹೆಂಗಸರು ಮಕ್ಕಳನ್ನೇನು ಕೇಳುವುದು, ಅವರು ಏನಾದರೂ ಹೇಳಬಹುದು. ಇದು ಅವರಿಷ್ಟದಂತೆ ನಿರ್ಧರಿಸುವ ವಿಷಯವಲ್ಲ. ಇದು ನನ್ನ ತೀರ್ಮಾನ. ನಾನೀಗ ಸಂತೋಷದಿಂದಲೇ ನಿನಗೆ ಕೊಡುತ್ತಿದ್ದೇನೆ. ತಗೋ. ಎಂದಾಗ ಹಾಗಿದ್ದರೆ ಧಾರೆ ಎರೆದು ಕೊಡು ಅನ್ನುತ್ತಾನೆ ವಿಶ್ವಾಮಿತ್ರ.

ವಿಶೇಷ ವಿಚಾರ
ಹೆಂಡತಿ ಮಕ್ಕಳ ಅಭಿಪ್ರಾಯ ಬೇಡ. ತೀರ್ಮಾನ ತನ್ನದೇ ಎನ್ನುವ ಮಾತಿನಲ್ಲಿ ರಾಜ್ಯದ ಆಗುಹೋಗುಗಳಲ್ಲಿ ರಾಜನೊಬ್ಬನದೇ ತೀರ್ಮಾನ ಎನ್ನುವುದಕ್ಕಿಂತ ತಾನು ಮಾಡುವ ತಪ್ಪಿಗೆ ಹೆಂಡತಿ, ಮಗ ಮತ್ತು ಮಂತ್ರಿಗಳನ್ನು ಹೊಣೆಗಾಗರನ್ನಾಗಿ ಮಾಡುವುದೇಕೆ ಎಂಬ ಭಾವವೂ ಇರಬಹುದು.

ಪದ್ಯ

ಅಡವಿಯಂ ಮೊಗೆದು ಸುಡುವಗ್ನಿಗಾಪೋಷನದ
ಗೊಡವೆಯೇವುದು ಬಲಾತ್ಕಾರದಿಂ ಕೊಂಬಿರಾ
ದಡೆ ಧಾರೆಯೇಕಯ್ಯ ಧಾರೆಗೊಡದಡೆ ಮರಳಿ ನೀಂ ಬಿಡುವುದುಂಟೆ ಎನಲು
ಬಿಡುವೆನೆನ್ನಯ ಮಕ್ಕಳಂ ಮದುವೆಯಾಗೆಂದ
ಡಡಿಗಡಿಗೆ ಕೆಟ್ಟುನುಡಿಯಂ ನುಡಿಯುತಿರಬೇಡ
ಹಿಡಿಯೆಂದು ಸರ್ವ ಸಾಮ್ರಾಜ್ಯಮಂ ಮುನಿಗೆ ಧಾರೆಯೆರೆದವನೀಶನು ೧೭೯

ಅರ್ಥ
ಅಡವಿಯೆಲ್ಲವನ್ನೂ ಆಕ್ರಮಿಸಿ ಸುಟ್ಟು ಹಾಕುವ ಕಾಡ್ಗಿಚ್ಚಿಗೆ ಆಪೋಷಣದ ಅಗತ್ಯವೇನು? ಬಲವಂತವಾಗಿ ನನ್ನಿಂದ ಭೂಮಿಯನ್ನು ಕಿತ್ತುಕೊಳ್ಳುವ ನಿಮಗೆ ಧಾರೆ ಎರೆದು ಕೊಡುವ ಅಗತ್ಯವೇಕೆ? ಧಾರೆ ಎರೆಯುವುದಿಲ್ಲವೆಂದರೆ ನೀವು ಬಿಟ್ಟುಬಿಡುತ್ತೀರಾ? ಎಂದಾಗ ʻಬಿಡುತ್ತೇನೆ. ನನ್ನ ಮಕ್ಕಳನ್ನು ಮದುವೆಯಾಗು.ʼಎನ್ನುತ್ತಾನೆ ವಿಶ್ವಾಮಿತ್ರ. ಮತ್ತೆ ಮತ್ತೆ ಅದೇ ಕೆಟ್ಟ ಮಾತನ್ನು ಆಡಬೇಡಿ. ತೆಗೆದುಕೊಳ್ಳಿ. ಧಾರೆ ಎರೆದೇ ಕೊಡುತ್ತೇನೆ. ಎನ್ನುತ್ತ ಹರಿಶ್ಚಂದ್ರ ಸಮಸ್ತ ರಾಜ್ಯವನ್ನೂ ಮುನಿಗೆ ಧಾರೆ ಎರದು ಕೊಡುತ್ತಾನೆ.

ವಿಶೇಷ ವಿಚಾರ
ಆಪೋಷಣವೆಂದರೆ ಊಟಕ್ಕೆ ಮೊದಲು ಮತ್ತು ಕೊನೆಯಲ್ಲಿ ಮಂತ್ರಪೂರ್ವಕವಾಗಿ ಸೇವಿಸುವ ಜಲ. ಉಂಡವನಿಗೂ ಉಣಿಸಿದವನಿಗೂ ಸಂತೋಷ ತರುವ ಕ್ರಿಯೆ ಲೌಕಿಕಾರ್ಥ. ಕರುಳನ್ನು ಶುದ್ಧಮಾಡುವುದು ವಿಜ್ಞಾನದ ಅರ್ಥ.

ಪದ್ಯ

ಏನೇನನೆರೆದೆ ಧಾರೆಯನೆನಲು ಚತುರಂಗ
ಸೇನೆಯಂ ಸಕಳ ಭಂಡಾರಮಂ ನಿಜರಾಜ
ಧಾನಿಯಂ ಜಗದಾಣೆಘೋಷಣೆಯಮಂ ಕಟಕವನು ಸಪ್ತದ್ವೀಪಂಗಳ
ಆನಂದದಿಂದಿತ್ತೆನಿನ್ನು ಸರ್ವಾನುಸಂ
ಧಾನಮಂ ಬಿಟ್ಟು ಕರುಣಿಸಿ ಹರಸುತಿಹುದೆಂದು
ಭೂನಾಥನೆರಗಿ ಬೀಳ್ಕೊಂಡಡಣಕಿಸಿ ನಗುತ ಹೋಗಯ್ಯ ಹೋಗೆಂದನು ೧೮೦

ಅರ್ಥ
ಏನೇನೆಲ್ಲವನ್ನೂ ಧಾರೆ ಎರೆದಿದ್ದೀಯಾ? ಚತುರಂಗ ಸೈನ್ಯ, ಸಕಲ ಭಂಡಾರ, ನನ್ನ ರಾಜಧಾನಿ, ಇಡೀ ಭೂಮಂಡಲದ ಆಳ್ವಿಕೆ, ಅಧಿಕಾರ, ಪರಿವಾರ, ಸಪ್ತದ್ವೀಪಗಳು- ಇಷ್ಟನ್ನೂ ಸಂತೋಷವಾಗಿಯೇ ನಿನಗೆ ಧಾರೆ ಎರೆದಿದ್ದೇನೆ. ಇನ್ನಾದರೂ ನನ್ನ ಮೇಲಿನ ಎಲ್ಲ ಸಂಬಂಧವನ್ನೂ ಬಿಟ್ಟು (ಆರೋಪಗಳು ಮತ್ತು ಒತ್ತಡಗಳೇ ಸಂಬಂಧ) ಕರುಣಿಸಿ ಆಶೀರ್ವದಿಸಬೇಕು ಎಂದು ಕಾಲಿಗೆ ನಮಸ್ಕರಿಸಿದಾಗ ʻಏ ಹೋಗಯ್ಯ, ಹೋಗುʼ ಎನ್ನುತ್ತ ವಿಶ್ವಾಮಿತ್ರ ಅಣಕದ ನಗುವಿನಿಂದ ರಾಜನನ್ನು ಕಳುಹಿಸುತ್ತಾನೆ.

ವಿಶೇಷ ವಿಚಾರ
ಏನೇನೆಲ್ಲವನ್ನು ಧಾರೆ ಎರೆದಿದ್ದೀಯಾ? ಎಂಬ ಪ್ರಶ್ನೆ ಹಾಗೂ ಅಣಕದ ನಗುವಿನ ಹಿಂದೆ ಅಡಗಿದ ಕುಟಿಲತನ ನಮಗೆ ಮುಂದಿನ ಪದ್ಯದಲ್ಲೇ ಅರ್ಥವಾಗುತ್ತದೆ.

ಪದ್ಯ

ಹರಣಮಂ ಬೇಡದುಳುಹಿದನು ಲೇಸಾಯ್ತು ಮುನಿ
ಕರುಣಿಸಿದನೆಂದು ತಲೆದಡವಿಕೊಳುತುತ್ಸವದೊ
ಳುರವಣಿಸಿ ರಥವೇರಿ ನಡೆಗೊಳಲು ಬಂದು ಹೋಗೊಂದು ನುಡಿವೇಳ್ವೆನೆಂದು
ಹುರುಡಿಗನು ಮತ್ತೆ ಕರೆಯಲು ಮರಳಿ ಬಂದು ಚ
ಚ್ಚರ ಬೆಸಸು ಬೆಸನಾವುದೆಂದು ಧೀರೋದಾತ್ತ
ನೆರಡು ಕೈಮುಗಿಯಲಾ ಮುನಿ ನುಡಿದ ಕಷ್ಟವನದಾವ ಜೀವರು ಕೇಳ್ವರು ೧೮೧

ಅರ್ಥ
ಸದ್ಯ ಪ್ರಾಣವನ್ನು ಕೇಳದೆ ಉಳಿಸಿದನಲ್ಲ, ಅಷ್ಟಾದರೂ ಒಳ್ಳೆಯ ಕೆಲಸ ಮಾಡಿದ್ದು ಮುನಿ ಅನುಗ್ರಹಿಸಿದಂತೆ ಆಯಿತು ಎನ್ನುತ್ತ ತಲೆದಡವಿಕೊಂಡು ಆತುರಾತುರವಾಗಿ ರಥದ ಬಳಿಗೆ ಧಾವಿಸಿ ಇನ್ನೇನು ರಥವನ್ನು ಹತ್ತಿ ಮುಂದಕ್ಕೆ ಹೋಗಬೇಕು, ಅಷ್ಟರಲ್ಲಿ ಲೋ, ಬಂದು ಹೋಗು, ನಿನ್ನ ಹತ್ತಿರ ಏನೋ ಒಂದು ಮಾತು ಹೇಳಬೇಕಾಗಿದೆ. ಎಂದು ಆ ಹುರುಡಿಗ ಮತ್ತೆ ಕರೆದಾಗ ಹಿಂದಕ್ಕೆ ಬಂದು ಬೇಗ ಬೇಗ ಏನು ಹೇಳಬೇಕೋ ಅದನ್ನು ಹೇಳಿಬಿಡು ಎಂದು ಎದೆಗುಂದದೆ ನಿಂತು ಕೈಮುಗಿದು ರಾಜ ಕೇಳಿದಾಗ ಆ ಮುನಿ ಹೇಳಿದ ಕಷ್ಟವನ್ನು ಯಾವ ಜೀವಕ್ಕೆ ತಡೆಯಲು ಸಾಧ್ಯ?

ಪದ್ಯ

ಎಳಸಿ ನೀನೆನಗೆ ಧಾರೆಯನೆರೆದ ಸರ್ವಸ್ವ
ದೊಳಗಣವು ನಿನ್ನ ತೊಡುಗೆಗಳವಂ ನೀಡೆನಲು
ಕಳೆದು ನೀಡಿದಡಿನ್ನು ಮಂತ್ರಿ ಸತಿ ಸುತರ ತೊಡಿಗೆಗಳ ನೀಡೀಗಳೆನಲು
ಕಳೆದು ಕೊಟ್ಟೊಡೆ ಮೇಲೆ ನೀವೆಲ್ಲರುಟ್ಟುಡಿಗೆ
ಗಳನು ನೀಡೆಂದಡವನೀವ ಪರಿಯಾವುದೆಂ
ದಳುಕಿ ಮನಗುಂದಿ ಚಿಂತಿಸುತ ಕೈಮುಗಿದಿರ್ದ ಭೂಪನಂ ಕಂಡೆಂದನು ೧೮೨

ಅರ್ಥ
ನೀನು ಬಹಳ ಸಂತೋಷದಿಂದ ನಿನ್ನ ಸರ್ವಸ್ವವನ್ನೂ ನನಗೆ ಧಾರೆ ಎರೆದುಕೊಟ್ಟೆಯಲ್ಲ. ಅದರಲ್ಲಿ ನಿನ್ನ ತೊಡಿಗೆಗಳೂ ಇವೆಯಲ್ಲ! ಅವುಗಳನ್ನೂ ಬಿಚ್ಚಿಕೊಟ್ಟುಬಿಡು. ಅಂದಾಗ ರಾಜ ಹಿಂದುಮುಂದು ನೋಡದೆ ಎಲ್ಲವನ್ನೂ ತೆಗೆದು ಕೊಟ್ಟಾಗ ಇನ್ನು ನಿನ್ನ ಮಂತ್ರಿ, ಮಡದಿ, ಪುತ್ರರ ತೊಡಿಗೆಗಳನ್ನೂ ಕೊಡು ಎನ್ನುತ್ತಾನೆ. ಅವುಗಳನ್ನೂ ಬಿಚ್ಚಿಕೊಟ್ಟಾಗ ಇನ್ನು ನೀವು ಉಟ್ಟ ಉಡುಗೆಗಳನ್ನೂ ಕೊಡು ಅನ್ನುತ್ತಾನೆ. ಉಡುಗೆಗಳನ್ನು ಬಿಚ್ಚಿ ಕೊಡುವುದು ಹೇಗೆ ಎಂದು ಮನನೊಂದು ರಾಜ ಯೋಚಿಸುತ್ತ ಕೈಮುಗಿದು ನಿಂತುಕೊಳ್ಳುತ್ತಾನೆ.

ಪದ್ಯ

ಅವನಿಪರು ಮರುಳರೆಂಬುದು ತಪ್ಪದಿದಕುಪಾ
ಯವ ಕಾಣ್ಬುದರಿದೆ ನಾ ತೋರಿದಪೆನೆಂದು ತ
ನ್ನವನೊಬ್ಬನುಟ್ಟ ಹಣ್ಣರುವೆ ಸೀರೆಯನೀಸಿಕೊಂಡು ನಾಲ್ಕಾಗಿ ಸೀಳಿ
ಶಿವ ಶಿವ ಮಹಾದೇವ ಕರುಣೆಯಿಲ್ಲದ ಪಾಪಿ
ಯವಿಚಾರದಿಂ ನೀಡೆನಾಚದೊಗಡಿಸದಳುಕ
ದವರೊಬ್ಬರೊಂದೊಂದನುಟ್ಟು ದಿವ್ಯಾಂಬರವನಿತ್ತಡಲಸದೆ ಕೊಂಡನು ೧೮೩

ಅರ್ಥ
ರಾಜರೆಂದರೆ ಬುದ್ಧಿಹೀನರು ಎನ್ನುವ ಮಾತು ನಿಜ. ಇದಕ್ಕೆ ಪರಿಹಾರವನ್ನು ಹುಡುಕಲು ನಿನಗೆ ಗೊತ್ತಾಗುವುದಿಲ್ಲವೇ? ಬಿಡು, ನಾನೇ ತೋರಿಸಿ ಕೊಡುತ್ತೇನೆ. ಎನ್ನುತ್ತ ತನ್ನ ಕಡೆಯ ಯಾವನೋ ಒಬ್ಬ ಉಟ್ಟಿದ್ದ ಹಳೆಯ ಬಟ್ಟೆಯನ್ನು ತೆಗೆದುಕೊಂಡು ನಾಲ್ಕಾಗಿ ಹರಿದು ಹಿಂದು ಮುಂದು ಯೋಚಿಸಿದೆ ಅವಿವೇಕಿಯಂತೆ ಕೊಡುತ್ತಾನೆ. ಅದನ್ನು ನೋಡಿ ಅಯ್ಯಯ್ಯೋ ಕರುಣೆಯಿಲ್ಲದ ಪಾಪಿ ಎಂದು ಕವಿ ಉದ್ಗರಿಸುತ್ತಾನೆ. ಆ ಬಟ್ಟೆಯ ಚೂರುಗಳನ್ನು ತೆಗೆದುಕೊಂಡು ನಾಚದೆ, ಅಸಹ್ಯಪಡದೆ, ನೋಯದೆ, ಹಿಂಜರಿಯದೆ ನಾಲ್ವರೂ ಒಂದೊಂದು ತುಂಡು ಉಟ್ಟು ತಾವುಟ್ಟುಕೊಂಡಿದ್ದ ದಿವ್ಯಾಂಬರವನ್ನು ತೆಗೆದು ವಿಶ್ವಾಮಿತ್ರನಿಗೆ ಕೊಡುತ್ತಾರೆ. ಯಾವ ಹಿಂಜರಿಕೆಯೂ ಇಲ್ಲದೆ ವಿಶ್ವಾಮಿತ್ರ ಅವರು ಕೊಟ್ಟ ಉಡುಗೆಗಳನ್ನು ತೆಗೆದುಕೊಳ್ಳುತ್ತಾನೆ.

ಪದ್ಯ

ಮಿಸುಪ ಕಳೆಗಳನು ತೃಣಸಸಿ ಮುಖ್ಯಜೀವಿಗಳಿ
ಗೊಸೆದೊಸೆದು ದಾನವಿತ್ತಂಬರವನುಳಿದಮಳ
ಶಶಿಯಂತೆ ಸರ್ವತೊಡುಗೆಗಳನಿತ್ತಂಬರವನುಳಿದರುವೆಯುಟ್ಟರಸನು
ಕುಸಿದು ಪೊಡೆಮಟ್ಟಿನ್ನು ಹೋಹನೈ ತಂದೆ ಸಂ
ತಸವೆ ನಿಮಗೆನಲಡ್ಡ ಮೋರೆಯೊಳುದಾಸೀನ
ಮಸಕದಿಂಹೋಗೆಂದು ಹೋಗಬಿಟ್ಟಳುಪಿ ಮತ್ತಾ ಕೈಯಲೇ ಕರೆದನು ೧೮೪

ಅರ್ಥ
ತನ್ನ ಶ್ರೇಷ್ಠವಾದ ಕಿರಣಗಳನ್ನು ಹುಲ್ಲು ಗಿಡ ಸಸ್ಯ ಮುಂತಾದ ಮುಖ್ಯ ಜೀವಗಳಿಗೆ ಪ್ರೀತಿಯಿಂದ ದಾನಮಾಡಿ ಆಕಾಶವನ್ನು ಬಿಟ್ಟು ಹೊರಟುಹೋಗುವ ಚಂದ್ರನ ಹಾಗೆ ತಮ್ಮ ಸರ್ವ ಉಡುಗೆ ತೊಡುಗೆಗಳನ್ನೂ ಮುನಿಗೆ ದಾನಮಾಡಿ ಹರಕು ಬಟ್ಟೆ ಉಟ್ಟುಕೊಂಡು ಅರಸ ತಲೆಬಾಗಿ ವಂದಿಸಿ ಇನ್ನು ಹೋಗಬಹುದೇ? ಕಳುಹಿಸುತ್ತೀರಾ? ನಿಮಗೆ ಸಂತೋಷವಾಯಿತಲ್ಲವೇ? ಎಂದಾಗ ವಿಶ್ವಾಮಿತ್ರ ಮುಖ ಗಂಟಿಕ್ಕಿ ಒಂದು ರೀತಿಯ ಅಲಕ್ಷ್ಯಭಾವದಿಂದ ಅಹಂಕರಿಸಿ ಹೋಗು ಹೋಗು ಎಂದು ಕಳುಹಿಸಿ ಮತ್ತೆ ಏನೋ ಅಸೆಯಿಂದ ಅದೇ ಕೈಯಲ್ಲಿ ಪುನಃ ಕರೆಯುತ್ತಾನೆ.

ವಿಶೇಷ ವಿಚಾರ
ಅಂಬರ ಪದಕ್ಕೆ ಬಟ್ಟೆ ಮತ್ತು ಆಕಾಶ ಎರಡೂ ಅರ್ಥಗಳಿವೆ.

ಪದ್ಯ

ಮನದೊಳಿರ್ದುದನೊಂದನಾಡಬೇಕಾಡಿದಡೆ
ಮುನಿಯಲೇ ಎನಲು ಮುನ್ನೇನನಾಡಿದಡೆ ನಾ
ಮುನಿದೆನೆಲೆ ತಂದೆ ಪೇಳೆನೆಬಹುಸುವರ್ಣಯಾಗವ ಮಾಡಿದಂದು ನೀನು
ಎನಗೆ ದಕ್ಷಿಣೆಯನಿತ್ತ ಧನವನೀವುದು ದೇಶ
ವನು ಬಿಟ್ಟು ಹೋಹಾತನನ್ಯಸಾಲವನು ನೆ
ಟ್ಟನೆ ಹೊತ್ತು ಹೋಗಲಾಗದು ನಿಲಿಸಲಾಗದಿತ್ತಡಿಯನಿಡು ಬಳಿಕೆಂದನು ೧೮೫

ಅರ್ಥ
ಮನಸ್ಸಿನಲ್ಲಿ ಇರುವ ಒಂದು ವಿಚಾರವನ್ನು ನಿನಗೆ ತಿಳಿಸಬೇಕಾಗಿತ್ತು. ತಿಳಿಸಿದರೆ ಕೋಪಮಾಡುವುದಿಲ್ಲ ತಾನೇ? ಎಂದು ಕೇಳಿದಾಗ ಈ ಮೊದಲು ನೀವು ಹೇಳಿದ ಯಾವುದಕ್ಕೆ ನಾನು ಕೋಪಿಸಿದ್ದೇನೆ ಮುನೀಶ್ವರಾ? ಎಂದು ಹರಿಶ್ಚಂದ್ರ ಉತ್ತರಿಸಿದಾಗ ʻನೋಡು, ಆದಿನ ಬಹುಸುವರ್ಣ ಯಾಗವನ್ನು ಮಾಡಿದಾಗ ನೀನು ನನಗೆ ದಕ್ಷಿಣೆಯೆಂದು ಕೊಟ್ಟ ಧನವಿದೆಯಲ್ಲ? ಅದೀಗ ನನಗೆ ಬೇಕು ಕೊಟ್ಟುಬಿಡು. ಹೇಗೂ ದೇಶಾಂತರ ಹೊರಟುಹೋಗುವವನು ನೀನು. ಅನ್ಯರ ಸಾಲದ ಹೊರೆಯನ್ನು ಹೊತ್ತುಕೊಂಡು ಹೋಗುವುದು ಸರಿಯಲ್ಲ. ಉಳಿಸಿಕೊಂಡು ಹೋಗುವುದೂ ಸರಿಯಾಗುವುದಿಲ್ಲ. ಆದ್ದರಿಂದ ನನ್ನ ಸಾಲವನ್ನು ತೀರಿಸಿ ಆಮೇಲೆ ಹೊರಟುಹೋಗು.

ಪದ್ಯ

ಅನುಗೆಟ್ಟ ಮರುಳೆ ನೀನೆಂದಲ್ಪ ದಕ್ಷಿಣೆಯ
ಧನವೆನಿತು ನಿನ್ನ ಮನದಾರ್ತವೆನಿತರೊಳಳಿವು
ದನಿತರ್ಥವದೆ ಮೊದಲ ಭಂಡಾರದೊಳಗೆ ನೀನಿನ್ನು ಬಳಲಿಸದಿರೆನಲು
ಕೊನೆವೆರಳನಲುಗಿ ತಲೆದೂಗಿ ಲೇಸೈ ನಿನ್ನ
ಮನಕೆ ಸರಿಯಿಲ್ಲ ಮಝ ಭಾಪು ಭಾಪುರರೆ ನೆ
ಟ್ಟನೆ ಕೊಟ್ಟು ಕಾಳ್ಗೆಡೆದು ನುಡಿವ ನುಡಿ ಹಸನಾಯಿತೆಂದು ಘೂರ್ಮಿಸಿ ನಕ್ಕನು ೧೮೬

ಅರ್ಥ
ಅಯ್ಯೋ ಅವಿವೇಕಿ, ಮರುಳು ಮುನಿಯೇ, ನೀನು ಹೇಳಿದ ಅಷ್ಟು ಅಲ್ಪ ಮೊತ್ತದ ದಕ್ಷಿಣೆ ನನಗೆ ಯಾವ ಲೆಕ್ಕ? ನಿನ್ನ ಮನಸ್ಸಿಗೆ ಎಷ್ಟು ಬೇಕೋ, ನಿನ್ನಾಸೆ ಎಷ್ಟರಿಂದ ತೀರೀತೋ ಅಷ್ಟು ಹಣ ನನ್ನ ಮೊದಲ ಒಂದು ಭಂಡಾರದೊಳಗೇ ಇದೆ. ಇನ್ನಾದರೂ ನನ್ನನ್ನು ಬಿಟ್ಟು ಬಿಡು ಕಾಡಬೇಡ, ಎನ್ನಲು ಕೊನೆಬೆರಳನ್ನು ಅಲ್ಲಾಡಿಸಿ ತಲೆಯನ್ನು ತೂಗುತ್ತ (ಅಂದರೆ ನಿಷೇಧಾರ್ಥದಲ್ಲಿ) ʻಶಭಾಷ್! ನಿನ್ನ ಮನಸ್ಸು ಕೆಟ್ಟುಹೋಗಿದೆ ರಾಜ. ಮಝ ಭಾಪು ಅರರೆ ! ಅಷ್ಟು ಚೆನ್ನಾಗಿ ಆದಿನ ಕೊಟ್ಟು ಈಗ ಉಪಾಯದಿಂದ ವಂಚಿಸುವ ಮಾತನಾಡ್ತೀಯಾ? ನಿನ್ನ ಮಾತು ತುಂಬ ಚೆನ್ನಾಗಿದೆ. ಎನ್ನುತ್ತ ಅಟ್ಟಹಾಸ ಮಾಡಿ ನಗುತ್ತಾನೆ ವಿಶ್ವಾಮಿತ್ರ.

ಕಾವ್ಯರಸಯಾನ ಮುಂದುವರಿದುದು: ೧೪.೧೦.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ವಿಶ್ವಾಮಿತ್ರನ ಕಾಟವನ್ನು ತಡೆಯಲಾರದೆ ಹರಿಶ್ಚಂದ್ರ ರಾಜ ನಿನ್ನ ಮಕ್ಕಳನ್ನು ಮದುವೆಯಾಗುವುದಕ್ಕಿಂತ ರಾಜ್ಯವನ್ನೇ ಬಿಟ್ಟುಬಿಡ್ತೇನೆ ಎಂದು ಹೇಳುತ್ತಾನೆ. ವಿಶ್ವಾಮಿತ್ರ ಆ ಮಾತನ್ನು ಹಿಡಿದು ಪಟ್ಟುಬಿಡದೆ ಸಮಸ್ತ ರಾಜ್ಯವನ್ನೂ ಧಾರೆ ಎರೆಸಿ ಕಿತ್ತುಕೊಳ್ಳುತ್ತಾನೆ. ಕೊನೆಗೆ ಅವರು ಉಟ್ಟ ಉಡುಗೆ ತೊಡುಗೆಗಳನ್ನೂ ತೆಗೆದುಕೊಳ್ಳುತ್ತಾನೆ. ರಾಜ ಯಾವುದಕ್ಕೂ ಹೆದರದಿದ್ದಾಗ ತಾನು ಸೋತುಹೋದೆ ಎಂಬ ಅರಿವಾಗಿ ಮತ್ತೊಂದು ಉಪಾಯವನ್ನು ಮಾಡಿ ಪುನಃ ಕರಸಿಕೊಂಡು ನೀನು ಹಿಂದೆ ಬಹುಸುವರ್ಣಯಾಗವನ್ನು ಮಾಡುವಂದು ಕೊಟ್ಟ ಸಂಪತ್ತನ್ನು ಕೊಡು ಅನ್ನುತ್ತಾನೆ. ರಾಜ ಅದಕ್ಕೆ ನೀನು ಕೇಳಿದ್ದಕ್ಕಿಂತ ಅದೆಷ್ಟೋ ಅಧಿಕ ಸಂಪತ್ತು ನನ್ನ ಮೊದಲ ಭಂಡಾರದಲ್ಲಿಯೇ ಇದೆ ಎಂದಾಗ ಮುನಿ ಅಟ್ಟಹಾಸದಿಂದ ನಕ್ಕು ಕೊಟ್ಟಮಾತನ್ನು ತಪ್ಪುವ ಭ್ರಷ್ಟನೆಂದು ರಾಜನನ್ನು ನಿಂದಿಸುತ್ತಾನೆ. ಮುಂದೆ:

ಪದ್ಯ

ಕಡೆಗಣಿಸಿ ನಗಲೇಕೆ ತಂದೆಯೆನೆ ಧಾರೆಯಂ
ಕೊಡುವಾಗ ದಕ್ಷಿಣೆಯ ಧನವದರೊಳದೆಯೆಂದು
ನುಡಿದುದುಂಟೇಯೆನಲು ಹೇರನೊಪ್ಪಿಸಿದವಂಗೆಲ್ಲಿಯದು ಸುಂಕವೆನಲು
ಒಡಲಳಿದಡಂ ಸಾಲವಳಿಯದೆನಲೀ ಧರಣಿ
ಯೊಡೆತನಂ ಹೋದಡೇಂ ಸಾಲ ಹೋಹುದೆ ಮುನ್ನಿ
ನೊಡವೆಯಂ ಕೊಡು ಕೊಡದೊಡೆಲ್ಲಮಂ ಮರಳಿ ಕೈಕೊಳು ಬರಿದೆ ಬಿಡೆನೆಂದನು ೧೮೭

ಅರ್ಥ
ಇದೇಕೆ ಹೀಗೆ ತಿರಸ್ಕರಿಸಿ ನಗುತ್ತಿದ್ದೀರಿ ತಂದೆ? ಎಂದು ರಾಜ ಕೇಳಿದಾಗ ನೀನು ಧಾರೆ ಎರೆದು ಸಮಸ್ತರಾಜ್ಯವನ್ನು ಕೊಟ್ಟೆಯಲ್ಲ? ಆಗ ಅದರೊಳಗೆ ದಕ್ಷಿಣೆಯ ಹಣವೂ ಇದೆಯೆಂದು ಹೇಳಿದ್ದೀಯಾ? ಎಂದು ವಿಶ್ವಾಮಿತ್ರನು ಕೇಳುತ್ತಾನೆ. ಹೇರನ್ನೇ ಕೊಟ್ಟವನಿಗೆ ಸುಂಕಕೊಡುವ ಅಗತ್ಯವೆಲ್ಲಿದೆ? ಎಂದು ರಾಜ ಪ್ರಶ್ನಿಸುತ್ತಾನೆ. ಒಬ್ಬ ಮನುಷ್ಯನ ದೇಹ ನಾಶವಾಗಬಹುದು ಆದರೆ ಅವನು ಮಾಡಿದ ಸಾಲ ನಾಶವಾಗುವುದಿಲ್ಲ. ಹಾಗಿರುವಾಗ ನಿನಗೆ ಈ ಭೂಮಿಯ ಅಧಿಕಾರ ಹೋಗಿದೆ ಎಂದ ಮಾತ್ರಕ್ಕೆ ನೀನು ಮಾಡಿದ ಸಾಲ ಹೋಗುವುದಿಲ್ಲ. ಆದ್ದರಿಂದ ಹಳೆಯ ಸಾಲದ ಒಡವೆಯನ್ನು ಕೊಟ್ಟುಬಿಡು. ಕೊಡದಿದ್ದರೆ ಇದೂ ಬೇಡ. ಎಲ್ಲವನ್ನೂ ವಾಪಸ್ಸು ತಗೋ. ಹಾಗೇ ಸುಮ್ಮನೆ ಬಿಟ್ಟುಬಿಡಲಾರೆ ಎಂದನು ವಿಶ್ವಾಮಿತ್ರ.

ಪದ್ಯ

ಜತ್ತಕನ ನುಡಿಗೆ ತೆಕ್ಕಿದನೆ ತೆರಳಿದನೆ ತಲೆ
ಗುತ್ತಿದನೆ ಸಡಿಫಡಿಲ್ಲಿಲ್ಲವಧಿಯಂ ಕೊಟ್ಟು
ಚಿತ್ತವಿಟ್ಟನುಸರಿಸಿ ಕೊಂಬಿರಾದಡೆ ತಂದು ನಿರ್ಣೈಸಿ ಕೊಡುವೆನೆನಲು
ಹತ್ತು ದಿನವೆನಲು ಮುನಿಯಾರೆನೆನಲರಸನಿ
ಪ್ಪತ್ತು ದಿನವೆನಲು ಯತಿ ದೊರಕದೆನೆ ನೃಪತಿ ಮೂ
ವತ್ತು ದಿನವೆನಲು ಋಷಿಯಾಗದೆನಲರಸ ನಾಲ್ವತ್ತೆಂಟು ದಿನವೆಂದನು ೧೮೮

ಅರ್ಥ
ರಾಜ ವಿಶ್ವಾಮಿತ್ರನಂಥ ಮೋಸಗಾರನ ಮಾತಿಗೆ ಹೆದರಿದನೇ? ಹಿಂಜರಿದನೇ?. ತಲೆ ತಗ್ಗಿಸಿ ಸೋಲು ಒಪ್ಪಿಕೊಂಡನೇ? ಇಲ್ಲವೇ ಇಲ್ಲ. ಸಮಯಾವಕಾಶವನ್ನು ಕೊಟ್ಟು ನನ್ನನ್ನು ನಂಬಿ ಒಪ್ಪುವಿರಾದರೆ ನೀವು ಕೇಳಿದಷ್ಟು ಚಿನ್ನವನ್ನು ಹೊಂದಿಸಿ ತಂದುಕೊಡುತ್ತೇನೆ ಎನ್ನುತ್ತಾನೆ. ಆಗ ವಿಶ್ವಾಮಿತ್ರ ʻಸರಿ. ಹತ್ತುದಿನ ಸಮಯ ಕೊಡುತ್ತೇನೆ. ಎನ್ನುತ್ತಾನೆ. ಅಷ್ಟು ಕಡಿಮೆ ಅವಧಿ ಸಾಕಾಗದು ಎಂದು ರಾಜ. ಇಪ್ಪತ್ತು ದಿನವೆನ್ನುತ್ತಾನೆ ಋಷಿ. ರಾಜ ಅಷ್ಟು ಸಮಯದಲ್ಲಿ ಸಂಪಾದಿಸಲಾಗದು ಅಂದಾಗ ಮೂವತ್ತು ದಿನವೆಂದು ಹೇಳುತ್ತಾನೆ. ಅದೂ ಆಗದೆಂದಾಗ ವಿಶ್ವಾಮಿತ್ರ ಕೊನೆಗೆ ನಲವತ್ತೆಂಟು ದಿನದ ಅವಧಿಯನ್ನು ಕೊಡುತ್ತಾನೆ.

ವಿಶೇಷ ವಿಚಾರ
ಮಾರುಕಟ್ಟೆಯಲ್ಲಿ ಗ್ರಾಹಕ ಮತ್ತು ವರ್ತಕರ ನಡುವೆ ವ್ಯಾಪಾರದಲ್ಲಿ ಚೌಕಾಸಿ ನಡೆಸುವಂತೆ ಇಲ್ಲಿ ಋಷಿ ಮತ್ತು ರಾಜರೊಳಗೆ ಅವಧಿಯ ಬಗ್ಗೆ ಚರ್ಚೆ ಬಹಳ ಸ್ವಾರಸ್ಯಕರವಾಗಿದೆ.

ಪದ್ಯ

ಒಲ್ಲೆನೆಂದೆನ್ನೆ ನೀನಿತ್ತವಧಿ ಕಿರಿದೀವ
ರಿಲ್ಲ ಧನವಂ ಗಳಿಸಿ ತಂದೀವೆನೆನಲು ದಿನ
ವಿಲ್ಲೊಬ್ಬ ತೆರಕಾರನಂ ಕೊಟ್ಟೊಡಾತಂಗೆ ನಿರ್ಣಯಿಸಿ ಕೊಡುವೆನೆನಲು
ಬಲ್ಲಿದನೊಬ್ಬನಂ ಕೊಡುವೆನಾತಂಗೆ ಧನ
ವೆಲ್ಲವಂ ನಿರ್ಣಯಿಸಿ ಕೊಡುವಂತಿರೆನಗಿಲ್ಲಿ
ಹೊಲ್ಲಹಂ ಸೂರುಳು ಸೂರುಳಿಡು ಬೇಗ ಕಾಡದೆ ಕಳುಹಿದಪನೆಂದನು ೧೮೯

ಅರ್ಥ
ಸರಿ. ಇನ್ನು ಆಗುವುದಿಲ್ಲ ಎಂದು ಹೇಳಲಾರೆ. ಆದರೆ ನೀನು ಕೊಟ್ಟ ಅವಧಿ ಬಹಳ ಕಡಿಮೆ. ನನಗೆ ಹಣವನ್ನು ಕೊಡುವವರು ಯಾರೂ ಇಲ್ಲ. ಹಣವನ್ನು ಸಂಪಾದಿಸಿ ತಂದುಕೊಡೋಣವೆಂದರೆ ದಿನಗಳಿಲ್ಲ.. ಆದ್ದರಿಂದ ಯಾರಾದರೂ ಹಣವಸೂಲಿ ಮಾಡುವವನನ್ನು ನನ್ನ ಜೊತೆಗೆ ಕಳುಹಿಸಿದರೆ ಅವನ ಕೈಯಲ್ಲಿ ನಿನಗೆ ಕೊಡಬೇಕಾದುದನ್ನು ಲೆಕ್ಕಮಾಡಿ ಕೊಟ್ಟು ಕಳುಹಿಸುತ್ತೇನೆ. ಎಂದು ರಾಜ ಹೇಳಿದಾಗ ಸರಿ. ಒಬ್ಬ ಸಮರ್ಥನನ್ನೇ ಕಳುಹಿಸಿಕೊಡುತ್ತೇನೆ. ಆದರೆ ನಾನು ಕಳುಹಿಸಿದವನ ಕೈಯಲ್ಲಿ ಸರಿಯಾದ ಲೆಕ್ಕದಲ್ಲೇ ತಪ್ಪದೆ ಹಣ ಕೊಡುತ್ತೇನೆಂದು ಪ್ರಮಾಣ ಮಾಡಿದರೆ ಮಾತ್ರ, ಪ್ರಮಾಣ ಮಾಡಿದರೆ ಇನ್ನು ಹೆಚ್ಚು ಕಾಡದೆ ಕಳುಹಿಸಿ ಕೊಡುತ್ತೇನೆ ಎಂದ ವಿಶ್ವಾಮಿತ್ರ.

ಪದ್ಯ

ಶಿವಪೂಜೆಯಂ ಮಾಡದವನು ಗುರ್ವಾಜ್ಞೆಗೆ
ಟ್ಟವನು ಪರಸತಿಗಳುಪುವವನು ಪರರಸುಗೆ ಮುಳಿ
ವವನು ತಾಯಂ ಬಗೆಯದವನು ತಂದೆಯನೊಲ್ಲದವನು ಪರನಿಂದೆಗೆಯ್
ವವನು ಇಟ್ಟಿಗೆಯ ಸುಟ್ಟವನು ಬೇಗೆಯನಿಕ್ಕು
ವವನಧಮರನು ಬೆರಸುವವನು ಕುಲಧರ್ಮಗೆ
ಟ್ಟವನಿಳಿವ ನರಕದೊಳಗಿಳಿವೆನವಧಿಗೆ ನಿಮ್ಮ ಧನವನೀಯದಡೆಂದನು ೧೯೦

ಅರ್ಥ
ನಿಮಗೆ ಕೊಡಬೇಕಾದ ಸಂಪತ್ತನ್ನು ಕೊಡದಿದ್ದರೆ ಶಿವಪೂಜೆಯನ್ನು ಮಾಡದವನು, ಗುರುವಿನ ಆಜ್ಞೆಯನ್ನು ಧಿಕ್ಕರಿಸಿದವನು, ಅನ್ಯಸ್ತ್ರೀಗೆ ಆಸೆಪಡುವವನು, ಕೊಲೆಪಾತಕನಾದವನು,, ಹೆತ್ತ ತಾಯಿಯನ್ನು ಗೌರವಿಸದವನು, ತಂದೆಯನ್ನು ದೂರಮಾಡುವವನು, ಅನ್ಯರನ್ನು ನಿಂದಿಸುವವನು, ಇಟ್ಟಿಗೆಯನ್ನು ಸುಟ್ಟವನು, ಕಷ್ಟವನ್ನು ಕೊಡುವವನು, ಅಧಮರ ಒಡನಾಟವನ್ನು ಮಾಡುವವನು, ಕುಲಧರ್ಮವನ್ನು ಪಾಲಿಸದವನು -ಇಂಥವರು ಯಾವ ನರಕಕ್ಕೆ ಇಳಿಯುತ್ತಾರೋ ಆ ನರಕಕ್ಕೆ ನಾನೂ ಇಳಿಯಲು ಸಿದ್ಧನಿದ್ದೇನೆ. ಎಂದು ಹರಿಶ್ಚಂದ್ರ ಉತ್ತರಿಸುತ್ತಾನೆ.

ಪದ್ಯ

ಮೇಲಿನ್ನು ನಾನಾಳ್ವ ದೇಶದೊಳು ಬೇಡದಂ
ತೋಲೈಸದಂತೆ ಕೃಷಿವ್ಯವಸಾಯಮಂ ಮಾಡ
ದಾಲಯಂಗಟ್ಟದೆಯವಧಿಯೊಳು ಹೊನ್ನ ನಿರ್ಣಯಿಸುವುದು ಬೇಗವೆನಲು
ಭೂಲೋಲನದಕೊಡಂಬಡಲು ಸಪ್ತದ್ವೀಪ
ಜಾಲವೆಲ್ಲೆನ್ನವವರಿಂದ ಹೊರಗಾವುದೆಂ
ದಾಲಿಸಲು ಹೇಮಕೂಟಂ ವಾರಣಾಸಿಗಳು ಹೊರಗು ಮುನಿ ಕೇಳೆಂದನು ೧೯೧

ಅರ್ಥ
ಹಾಗಿದ್ದರೆ ನೀನಿನ್ನು ನನ್ನ ರಾಜ್ಯದಲ್ಲಿ ಭಿಕ್ಷೆ ಎತ್ತಿಯೋ ಊಳಿಗ ಮಾಡಿಯೋ ಕೃಷಿ ಮುಂತಾದ ವ್ಯವಸಾಯವನ್ನು ಮಾಡಿಯೋ ಹಣಸಂಪಾದನೆ ಮಾಡುವಂತಿಲ್ಲ. ಈ ಊರಿನಲ್ಲಿ ನೀನು ನೆಲಸಲೂ ಸಾಧ್ಯವಿಲ್ಲ. ಆದರೆ ಒಪ್ಪಿದ ಅವಧಿಯಲ್ಲಿ ಬಂಗಾರವನ್ನು ಲೆಕ್ಕಮಾಡಿ ಕೊಡಬೇಕು. ಇನ್ನು ಬೇಗನೆ ಹೋಗಿ ಹೇಳಿದ ಕೆಲಸ ಮಾಡು. ಎಂದಾಗ ರಾಜ ಅದಕ್ಕೆ ಒಪ್ಪಿ ಹೊರಡುವಾಗ ಮತ್ತೆ ವಿಶ್ವಾಮಿತ್ರ ಈ ಸಪ್ತದ್ವೀಪವೆಲ್ಲವೂ ನನಗೆ ಸೇರಿದ್ದು. ಇನ್ನು ಅದರಿಂದ ಯಾವ ದೇಶ ಹೊರಗಿದೆ? ನೀನು ಎಲ್ಲಿಗೆ ಹೋಗುತ್ತೀಯಾ? ಎಂದು ಕೇಳುತ್ತಾನೆ. ಹೇಮಕೂಟ ಮತ್ತು ವಾರಣಾಸಿಗಳು ಇದರಿಂದ ಹೊರಗಿವೆ ಎನ್ನುತ್ತಾನೆ ರಾಜ.

ಪದ್ಯ

ಪ್ರಳಯಕ್ಕೆ ಹೊರಗು ಕಲಿಕಾಲ ಹೊಗದಂತಕನ
ಸುಳಿವದರೊಳಿಲ್ಲ ಕಾಮನ ಡಾವರಂ ಕೊಳ್ಳ
ದುಳಿದಮಾಯೆಯ ಮಾತು ಬೇಡ ಪಾಪಂಗಳಾಟಂ ನಾಟವನ್ಯಾಯದ
ಕಳೆಗೆ ತೆಕ್ಕವು ಮಾರಿಮೃತ್ಯುಗಿತ್ಯುಗಳ ಬರೆ
ಗೊಳಗಾಗದಧಿಕಪುಣ್ಯದ ಬೀಡು ಮಂಗಳದ
ನಿಳಯ ಮುಕ್ತಿಯ ಮೂಲವೆನಿಸುವವು ಕಾಶಿ ಹಂಪೆಗಳು ಮುನಿ ಕೇಳೆಂದನು ೧೯೨

ಅರ್ಥ
ಈ ಎರಡೂ ರಾಜ್ಯಗಳಲ್ಲಿ ಪ್ರಳಯ ಉಂಟಾಗುವುದಿಲ್ಲ, ಕಲಿಕಾಲ ಪ್ರವೇಶಿಸುವುದಿಲ್ಲ. ಯಮನ ಸುಳಿವೂ ಅಲ್ಲಿರುವುದಿಲ್ಲ. ಕಾಮನ ಕಾಟ ಅಲ್ಲಿ ಇರುವುದಿಲ್ಲ. ಇನ್ನು ಉಳಿದ ಮಾಯೆಯ ಮಾತು ಬೇಡ. ಪಾಪಕೃತ್ಯಗಳ ಆಟ ಅಲ್ಲಿ ನಡೆಯುವುದಿಲ್ಲ. ಅನ್ಯಾಯದ ದೋಷಕ್ಕೆ ಅವಕಾಶವಿಲ್ಲ. ಮಾರಿ ಮೃತ್ಯು ಮುಂತಾದ ಯಾವ ಬಲೆಗೂ ಒಳಗಾಗುವುದಲ್ಲ. ಅತ್ಯಂತ ಪುಣ್ಯದ ಬೀಡು, ಮಂಗಳದ ಮನೆ, ಮುಕ್ತಿಯ ಮೂಲ. ಅವುಗಳೇ ಕಾಶಿ ಮತ್ತು ಪಂಪಾಕ್ಷೇತ್ರಗಳು ಎನ್ನುತ್ತಾನೆ ರಾಜ

ಪದ್ಯ

ಅವಕೆ ವಿಶ್ವೇಶ್ವರ ವಿರೂಪಾಕ್ಷರೇ ಒಡೆಯ
ರವನಿಯೊಳಗಲ್ಲಿ ನಿನ್ನಾಜ್ಞೆಗಳು ಸಲ್ಲ ಬರಿ
ಯವಿಚಾರ ಹೊಲ್ಲ ಹಂಪೆಗೆ ಹೋಹಡೆಡೆಯಿಲ್ಲ ಕಾಶೀಪುರವನೆ ಸಾರ್ದು
ನಿವಗೆ ಕೊಡುವರ್ಥಮಂ ಕೊಡುವೆನಿನ್ನಳಲಿಸದೆ
ಶಿವಮೂರ್ತಿ ಮುನಿನಾಥ ಕರುಣಿಸೆನೆ ಹೋಗು ವ
ಸ್ತುವ ಬೇಗಮಾಡೆಂದಡಡಿಗೆರಗಿ ನಡೆದನಾ ಧೈರ್ಯನಿಧಿ ಭೂಪಾಲನು ೧೯೩

ಅರ್ಥ
ಆ ಎರಡು ರಾಜ್ಯಗಳಿಗೆ ವಿಶ್ವೇಶ್ವರ ಮತ್ತು ವಿರೂಪಾಕ್ಷರೇ ಒಡೆಯರು. ಅವರ ರಾಜ್ಯದಲ್ಲಿ ನಿನ್ನ ಆಜ್ಞೆಗಳು ಯಾವುದೂ ನಡೆಯುವುದಿಲ್ಲ. ಇನ್ನು ವ್ಯರ್ಥವಾಗಿ ಮಾತನಾಡುವುದೇಕೆ? ಪಂಪಾಕ್ಷೇತ್ರಕ್ಕೆ ಹೋಗೋಣವೆಂದರೆ ಸಮಯವಿಲ್ಲ. ಕಾಶೀಪುರಕ್ಕೇ ಹೋಗಿ ನಿಮಗೆ ಕೊಡಬೇಕಾದ ಸಂಪತ್ತನ್ನು ಸಂಪಾದಿಸಿ ಕೊಡುತ್ತೇನೆ. ಇನ್ನಾದರೂ ನನ್ನನ್ನು ಕಾಡದೆ, ಕಷ್ಟಪಡಿಸದೆ ಕರುಣಿಸಿ ದೇವರೇ ಎಂದಾಗ ಸರಿ, ಹೋಗು . ಆದಷ್ಟು ಬೇಗ ನನಗೆ ಕೊಡಬೇಕಾದುದನ್ನು ಹೊಂದಿಸಿಕೊಡು ಎಂದು ಹೇಳಿದಾಗ ರಾಜ ಮತ್ತೆ ಮತ್ತೆ ನಮಸ್ಕರಿಸಿ ಧೈರ್ಯವನ್ನು ಕಳೆದುಕೊಳ್ಳದೆ ನಡೆಯತೊಡಗಿದನು.

ವಿಶೇಷ ವಿಚಾರ
ರಾಜ ಬೇಟೆಯಾಡುತ್ತ ವಸಿಷ್ಠನ ಆಶ್ರಮಕ್ಕೆ ಬಂದದ್ದು ಹಂಪೆಗೆ. ಅಲ್ಲಿಂದ ಮತ್ತೆ ಬೇಟೆಯಾಡುತ್ತ ವಿಶ್ವಾಮಿತ್ರನ ಆಶ್ರಮಕ್ಕೆ ಹೋಗುತ್ತಾನೆ. ಅಂದರೆ ವಿಶ್ವಾಮಿತ್ರನ ಆಶ್ರಮ ಹಸ್ತಿನಾವತಿಗೆ ಹತ್ತಿರವಿದೆ ಎಂದ ಹಾಗಾಯಿತು.

ಪದ್ಯ

ಬಿಟ್ಟು ಹೆದರದೆ ಹೋಹ ನೃಪನ ಕಳೆಯಂ ಕಂಡು
ಕೆಟ್ಟೆನವನಿಯನೆಯ್ದೆ ಕೊಂಡಡಂತದನೊಡಂ
ಬಟ್ಟು ಶಪಥಕ್ಕೆ ಮೆಯ್ಗೊಟ್ಟನವನಲ್ಲಿ ಹುಸಿ ಹುಟ್ಟದಿನ್ನಕಟ ನಾನು
ನಟ್ಟು ಕೋಟಲೆಗೊಂಡನಂತಕಾಲಂ ತಪಂ
ಬಟ್ಟ ಪುಣ್ಯವನೀವೆನೆಂದೆನದು ಹೋದಡೊಳ
ಗಿಟ್ಟುಕೊಂಬರೆ ಮುನಿಗಳೆನ್ನನೆಂದೋರಂತೆ ಮರುಗಿದಂ ಮುನಿನಾಥನು ೧೯೪

ಅರ್ಥ
ಇಷ್ಟು ಕಾಡಿದರೂ ಸಮಾಧಾನವಾಗಿಯೇ ಹೊರಟು ಹೋಗುತ್ತಿರುವ ರಾಜನ ಧೈರ್ಯವನ್ನು ನೋಡಿ ನಾನೇ ಕೆಟ್ಟೆನು ಎಂಬ ಭಾವನೆ ಉಂಟಾಗಿ ವಿಶ್ವಾಮಿತ್ರ ಮನದಲ್ಲೇ ಯೋಚಿಸುತ್ತಾನೆ. ತಾನಿಷ್ಟು ಹಿಂಸಿಸಿ ರಾಜ್ಯವನ್ನು ಕಿತ್ತುಕೊಂಡರೂ ಹೆದರದ, ಪ್ರತಿಜ್ಞೆ ಮಾಡುವುದಕ್ಕೂ ಹಿಂಜರಿಯದ ಈ ರಾಜನಲ್ಲಿ ಸುಳ್ಳು ಹೇಳಿಸುವುದು ಬಹಳ ಕಷ್ಟ. ಇವನಿನ್ನು ಖಂಡಿತವಾಗಿಯೂ ಸುಳ್ಳು ಹೇಳಲಾರ. ನಾನು ಇಷ್ಟು ಕಾಲದವರೆಗೂ ಕಷ್ಪಪಟ್ಟು ತಪಸ್ಸು ಮಾಡಿ ಸಂಪಾದಿಸಿದ ಪುಣ್ಯವನ್ನು ಇವನಿಗೆ ಕೊಡಬೇಕಾಗುತ್ತದೆ. ಪುಣ್ಯವನ್ನು ಕಳೆದುಕೊಂಡ ನನ್ನನ್ನು ಮುನಿವರ್ಗ ತಮ್ಮ ಜೊತೆಗೆ ಸೇರಿಸಿಕೊಳ್ಳುತ್ತಾರೆಯೇ ಎಂದು ವಿಶ್ವಾಮಿತ್ರ ಬಹುವಾಗಿ ಚಿಂತಿಸಿದ.

ಪದ್ಯ

ಕಡೆಗೆ ಮೆಯ್ಯೊಡ್ಡುವಡೆ ಪಂಚಾಗ್ನಿಯುಂಟು ತಲೆ
ಯಡಿಯಾಗಿ ನಿಲುವಡುಕ್ಕಿನ ಸೂಜಿಯುಂಟು ಮೆಲು
ವೊಡೆ ಲೋಹಚೂರ್ಣವುಂಟಧಿಕ ಘೋರವ್ರತಂಗಳೊಳು ದಂಡಿಪಡಾನುವ
ಒಡಲುಂಟು ಮಾಣದಂಗವಿಪ ಮನವುಂಟಿನ್ನು
ಕಡೆಗೆ ಫಲವೀವ ಶಿವನುಂಟದಕ್ಕಂಜೆನೆ
ನ್ನೊಡನೆ ವಾಸಿಷ್ಠಮುನಿ ಗೆಲಿದಪುದಿದಕ್ಕೆಂತೆಂದು ಚಿಂತಿಸಿದನು ೧೯೫

ಅರ್ಥ
ನನಗೆ ಸಾಯುವುದಲ್ಲದೆ ಬೇರೆ ಯಾವ ದಾರಿಯೂ ಕಾಣುವುದಿಲ್ಲ. ಸಾಯಬೇಕೆಂದರೆ ಕೊನೆಗೆ ಈ ಶರೀರವನ್ನು ದಹಿಸುವ ಬೆಂಕಿಯಿದೆ. ತಲೆಯಡಿಯಾಗಿ ಸಾಯಬೇಕೆಂದರೆ ಕಬ್ಬಿಣದ ಮೊಳೆಗಳಿವೆ. ವಿಷಪ್ರಾಶನ ಮಾಡಬೇಕೆಂದರೆ ಲೋಹದ ಪುಡಿಗಳಿವೆ. ಘೋರವಾದ ವ್ರತೋಪವಾಸಗಳ ದಂಡನೆಯಿಂದ ಸಾಯಬೇಕೆಂದರೆ ಶರೀರವೂ ಹಿಮ್ಮೆಟ್ಟದ ಮನಸ್ಸೂ ಉಂಟು. ಅಂಥ ಯಾವುದಕ್ಕೂ ನಾನು ಹೆದರಲಾರೆ. ಆದರೆ ನನ್ನೊಂದಿಗೆ ಸ್ಪರ್ಧಿಸಿ ಆ ವಸಿಷ್ಠ ಮಹರ್ಷಿ ಗೆದ್ದುಬಿಡುತ್ತಾನಲ್ಲ, ಅದಕ್ಕೇನು ಮಾಡಲಿ? ಎಂದು ವಿಶ್ವಾಮಿತ್ರ ಬಹುವಾಗಿ ಚಿಂತಿಸುತ್ತಾನೆ.

ಪದ್ಯ

ಕುಂದದೆ ವಸಿಷ್ಠನೊಳು ಮಲೆತು ಬೆಂಗೊಟ್ಟುಳ್ಳ
ಹೆಂದದ ತಪಫಲವ ಹೋಗಾಡಿದಾತನೀ
ಬಂದನೆಂದೆನ್ನನೆಲ್ಲಾ ಮುನೀಶ್ವರರು ನಗದಿರರೆಂದು ತನ್ನ ತಾನು
ಕೊಂದುಕೊಳಬಗೆದು ಮತ್ತೆಚ್ಚತ್ತು ಚಿತ್ತದಲಿ
ನೊಂದಡೇನಹುದಿದಕೆ ತಕ್ಕುದಂ ಕಾಣಬೇ
ಕೆಂದು ಚಿಂತಿಸಿ ನೋಡಿ ಮತ್ತೊಂದುಪಾಯಮಂ ಕಂಡನಾ ನಿಷ್ಕರುಣನು ೧೯೬

ಅರ್ಥ
ನೋಡಿ ನೋಡಿ, ಯಾವ ಹಿಂಜರಿಕೆಯೂ ಇಲ್ಲದೆ ವಸಿಷ್ಠ ಮುನಿಯೊಂದಿಗೆ ಅಹಂಕಾರದಿಂದ ಮೈಮರೆತು ಇದೀಗ ತನ್ನ ತಪಸ್ಸಿನ ಫಲವೆಲ್ಲವನ್ನೂ ಕಳೆದುಕೊಂಡು ಬಂದಿದ್ದಾನೆ ಎಂದು ಎಲ್ಲ ಮುನಿಜನಗಳೂ ತನ್ನನ್ನು ಅಪಹಾಸ್ಯಮಾಡಿ ಖಂಡಿತ ನಗುತ್ತಾರೆ. ಎಂದು ತನ್ನನ್ನು ಸಾಯಿಸುವುದೇ ಸರಿಯೆಂದು ಯೋಚಿಸಿದ ವಿಶ್ವಾಮಿತ್ರ ತಕ್ಷಣ ಮನಸ್ಸು ಬದಲಿಸಿ ಮನಸ್ಸಿನಲ್ಲಿ ಚಿಂತಿಸುತ್ತ ಕುಳಿತರೆ ಯಾವ ಪ್ರಯೋಜನವೂ ಸಿಗದು, ಇದಕ್ಕೆ ಇನ್ನೊಂದು ಉಪಾಯವನ್ನು ಕಂಡು ಹಿಡಿಯಲೇ ಬೇಕೆನ್ನುತ್ತ ಯೋಚಿಸಿದಾಗ ಆ ನಿಷ್ಕರುಣಿ ಮುನಿಗೆ ಮತ್ತೊಂದು ಉಪಾಯ ಹೊಳೆಯುತ್ತದೆ.

ಕಾವ್ಯರಸಯಾನ ಮುಂದುವರಿದುದು: ೨೧.೧೦.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ವಿಶ್ವಾಮಿತ್ರನ ಕಾಟದಿಂದ ಮುಕ್ತನಾಗಲು ತನ್ನ ಸಮಸ್ತ ರಾಜ್ಯವನ್ನೂ ಧಾರೆಯೆರೆದು ಉಟ್ಟ ಉಡುಗೆ ತೊಡುಗೆಗಳನ್ನೂ ಕಳಚಿ ಕೊಟ್ಟು ಸದ್ಯ ಪ್ರಾಣವನ್ನು ಕೇಳಲಿಲ್ಲವಲ್ಲ ಎಂದು ರಾಜ ಅಲ್ಲಿಂದ ಹೊರಟಾಗ ಮತ್ತೆ ಕರೆದು ಬಹುಸುವರ್ಣಯಾಗದಂದು ದಾನಮಾಡಿದ ಸುವರ್ಣಗಳನ್ನು ಕೊಡು ಎಂದ ವಿಶ್ವಾಮಿತ್ರನಿಂದ ೪೮ ದಿನಗಳ ಅವಧಿಯನ್ನು ಪಡೆದು ಅದರೊಳಗೆ ಧನವನ್ನು ಸಂಪಾದಿಸಿ ಕೊಡುತ್ತೇನೆಂದು ಭಾಷೆಕೊಟ್ಟು ಕಾಶಿಗೆ ಹೊರಟ ರಾಜನ ಸತ್ಯಸಂಧತೆಗೆ ಅಚ್ಚರಿಗೊಳ್ಳುತ್ತಾನೆ ವಿಶ್ವಾಮಿತ್ರ. ಆದರೆ ತನ್ನನ್ನು ಸಮಸ್ತ ಮುನಿಗಳು ಅಪಹಾಸ್ಯಮಾಡಿ ದೂರಮಾಡುತ್ತಾರೆಂದು ಚಿಂತಿಸಿ ತನಗೆ ಸಾವೇ ಪರಿಹಾರವೆಂಬ ನಿರ್ಣಯಕ್ಕೆ ಬರುತ್ತಾನೆ. ಆದರೆ ತನ್ನ ಶತ್ರು ಗೆಲ್ಲುತ್ತಾನಲ್ಲ ಎಂಬ ಆತಂಕದಿಂದ ಇನ್ನೊಂದು ಉಪಾಯವನ್ನು ಕಂಡುಹಿಡಿದು ರಾಜನನ್ನು ಪುನಃ ಕರೆಯುತ್ತಾನೆ.

ಪದ್ಯ

ಪುರದ ವಿಭವದ ಜನದ ಸಿರಿಯ ಕೇರಿಗಳ ವಿ
ಸ್ತರದ ಕೈಗೆಯ್ದ ದುರ್ಗದ ತನ್ನ ಹಿರಿ
ಯರಮನೆಯ ಕೇಳೀವನದ ಲತಾಗೃಹದ ದೀಹದ ಖಗಮೃಗಾವಳಿಗಳ
ವರಚಿತ್ರಶಾಲೆಗಳ ಧನಧಾನ್ಯಸಂಚಯದ
ಪರಮವನಿತೆಯರ ನಾನಾ ರತ್ನಕೋಶದು
ಬ್ಬರದ ಸೊಗಸಂ ಕಂಡು ಮನಮರುಗದೇ ಪುರಕ್ಕೊಯ್ದು ನೋಡುವೆನೆಂದನು ೧೯೭

ಅರ್ಥ
ನಗರದ ವೈಭವಗಳನ್ನೂ ಶ್ರೀಮಂತಿಕೆ ತುಂಬಿದ ಜನರ ವಾಸಸ್ಥಾನಗಳನ್ನೂ ವಿಶಾಲವಾದ ಕೋಟೆಗಳನ್ನೂ ತನ್ನ ಅರಮನೆಯನ್ನೂ ಉದ್ಯಾನವನಗಳನ್ನೂ ಬೇಟೆಯ ಮೃಗಪಕ್ಷಿಗಳನ್ನೂ ಚಿತ್ರಶಾಲೆ, ಧನಧಾನ್ಯ ಸಮೃದ್ಧಿಯನ್ನೂ ಅಂತಃಪುರದ ಅಂಗನೆಯರನ್ನೂ ನಾನಾ ಬಗೆಯ ಭಂಡಾರಗಳನ್ನೂ ಕಂಡಾಗಲಾದರೂ ರಾಜನ ಮನಸ್ಸು ಚಂಚಲವಾಗದಿರದೇ? ಆದ್ದರಿಂದ ಇವನನ್ನು ರಾಜಧಾನಿಗೆ ಕರೆದುಕೊಂಡು ಹೋಗಿ ನೋಡುತ್ತೇನೆ ಎಂದು ಯೋಚಿಸುತ್ತಾನೆ ವಿಶ್ವಾಮಿತ್ರ.

ಪದ್ಯ

ಧರಣೀಶ ಬಂದು ಹೋಗೊಂದು ಮಾತುಂಟೆಂದು
ಕರೆದು ನಿನ್ನಂ ನಂಬಿ ನಾನು ರಾಜ್ಯಂಗೆಯ್ವ
ಭರದೊಳರಿಯದೆ ಹೋದಡೆಲೆ ಮರುಳೆ ನಿನಗೆಲ್ಲಿಯರಸುತನವೆಂದು ಮೀರಿ
ಪುರದ ಬಾಗಿಲಂ ಬಲಿದು ಗವನಿಗೊಂಡಬ್ಬರಿಸಿ
ಪರಿಜನಂ ಕಲುಗುಂಡ ಕರೆಯದಿರರೆನ್ನನೊ
ಯ್ದಿರಿಸಿ ಸರ್ವವನೊಪ್ಪುಗೊಟ್ಟು ಹೋಗೆಂದಡವನಿಪನದನೊಡಂಬಟ್ಟನು ೧೯೮

ಅರ್ಥ
ಎಲವೋ ಮಹಾರಾಜ, ಒಮ್ಮೆ ಬಂದು ಹೋಗು. ಇನ್ನೂ ಒಂದು ಮಾತು ನಿನಗೆ ಹೇಳಬೇಕಾಗಿದೆ ಎಂದು ಕರೆದು ನಿನ್ನನ್ನು ನಂಬಿ ನಾನು ರಾಜ್ಯಭಾರ ಮಾಡುವ ಉತ್ಸಾಹದಿಂದ ಅಜ್ಞಾನಿಯಂತೆ ನಗರಕ್ಕೆ ಹೋದರೆ ʻನೀನ್ಯಾವನೋ ಹುಚ್ಚ, ನಿನಗೆಲ್ಲಿಯ ರಾಜ್ಯʼ ಎಂದು ನನ್ನನ್ನು ತಡೆದು ಬಾಗಿಲು ಮುಚ್ಚಿ ನನ್ನ ಮೇಲೆ ಕಲ್ಲು ಗುಂಡುಗಳ ಮಳೆಯನ್ನೇ ಕರೆದಾರು ನಿನ್ನ ಪ್ರಜೆಗಳು. ಆದ್ದರಿಂದ ನೀನೇ ಬಂದು ಪ್ರಜೆಗಳ ಸಮ್ಮುಖದಲ್ಲಿ ಪಟ್ಟದಲ್ಲಿ ಕುಳ್ಳಿರಿಸಿ ನೀನೇ ಕೈಯಾರೆ ನನಗೆ ರಾಜ್ಯವನ್ನು ಒಪ್ಪಿಸಿ ಆಮೇಲೆ ಹೊರಡು ಎನ್ನುತ್ತಾನೆ ವಿಶ್ವಾಮಿತ್ರ. ಹರಿಶ್ಚಂದ್ರ ವಿಶ್ವಾಮಿತ್ರನ ಮಾತಿಗೆ ಒಡಂಬಡುತ್ತಾನೆ.
ಮುಂದಿನ ಪದ್ಯದಲ್ಲಿ ವಿಶ್ವಾಮಿತ್ರ ಮತ್ತು ರಾಜರ ಸಂಭಾಷಣೆ ನಡೆಯುತ್ತದೆ.

ಪದ್ಯ

ನಡೆ ರಥವನೇರಿಕೊಳ್ಳೊಲ್ಲೆನೇಕೊಲ್ಲೆ ಪರ
ರೊಡವೆಯೆನಗಾಗದೇಕಾಗಾನಿತ್ತೆನಿ
ತ್ತಡೆ ಕೊಳಲುಬಾರದೇಂ ಕಾರಣಂ ಬಾರದೆಮಗಂ ಪ್ರತಿಗ್ರಹ ಸಲ್ಲದು
ಕಡೆಗೆ ನಿನ್ನೊಡವೆಯಲ್ಲವೆಯಲ್ಲವೇಕಲ್ಲ
ಕೊಡದ ಮುನ್ನೆನ್ನೊಡವೆ ಕೊಟ್ಟ ಬಳಿಕೆನಗೆಲ್ಲಿ
ಯೊಡವೆಯೆಂದರರೆ ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ನುಡಿಗೊಟ್ಟನು ೧೯೯

ಅರ್ಥ
ನಡೆ ರಾಜ, ರಥವನ್ನು ಹತ್ತು. ಇಲ್ಲ ನಾನು ಹತ್ತುವುದಿಲ್ಲ. ಏಕೆ ಹತ್ತುವುದಿಲ್ಲ? ಇನ್ನೊಬ್ಬರ ವಸ್ತು ನನಗೆ ಬೇಕಾಗಿಲ್ಲ. ಅದೇಕೆ ಬೇಕಾಗಿಲ್ಲ? ನಾನದನ್ನು ಕೊಟ್ಟುಬಿಟ್ಟಿದ್ದೇನೆ. ಕೊಟ್ಟರೆ ಮತ್ತೆ ತೆಗೆದುಕೊಳ್ಳಲು ಆಗುವುದಿಲ್ಲವೇ? ಇಲ್ಲ. ಆಗುವುದಿಲ್ಲ. ಅದೇಕೆ ಆಗುವುದಿಲ್ಲ? ನನಗೆ ಇನ್ನೊಬ್ಬರ ವಸ್ತುವನ್ನು ತೆಗೆದುಕೊಳ್ಳುವುದು ಇಷ್ಟವಲ್ಲ. ಆದರೆ ಅದು ನಿನ್ನದೇ ಆಸ್ತಿಯಲ್ಲವೇ? ಅಲ್ಲ. ಅದೇಕೆ ಅಲ್ಲ? ಕೊಡುವ ಮುನ್ನ ನನ್ನ ಒಡವೆ, ಕೊಟ್ಟಮೇಲೆ ನನಗೆ ಅದರ ಮೇಲೆ ಯಾವ ಅಧಿಕಾರವಿದೆ? ಎನ್ನುತ್ತ ದಾನಿಗಳಿಗೆ ಒಡೆಯನಾದ ರಾಜ ಮುನಿಯ ಮಾತುಗಳಿಗೆ ಪ್ರತ್ಯುತ್ತರ ನೀಡಿದನು.

ವಿಶೇಷ ವಿಚಾರ
ರಾಜ ಮತ್ತು ಮುನಿಗಳೊಳಗೆ ನಡೆದ ಈ ಮಾತಿನ ಚಕಮಕಿ ಬಹಳ ಅದ್ಭುತವಾಗಿ ಮೂಡಿದೆ.

ಪದ್ಯ

ಬೇಡಿಕೊಂಬೆಂ ಭೂಪ ಎನೆ ಬೇಡಬೇಡ ನಾ
ಮಾಡಿದುದನೆನ್ನ ಕಣ್ಣಾರೆ ನೋಡುವೆನು ನೀ
ನಾಡಂಬರದೊಳು ರಥವೇರಿ ಚತುರಂಗಬಲವೆರಸಿ ನಡೆತಂದೆ ಎನ್ನ
ಕಾಡಬೇಡವಧಿ ಕಿರಿದಡೆ ದೂರ ಹೊತ್ತ ಹೋ
ಗಾಡದಿರ್ದೊಡೆ ತನ್ನನೊಯ್ದು ಮೇರುವಿನ ತುದಿ
ಗೋಡನೇರಿಸಿದಾತ ನೀನೆಂದು ಮುನಿಪತಿಗೆ ಭೂಭುಜಂ ಕೈಮುಗಿದನು ೨೦೦

ಅರ್ಥ
ದಯವಿಟ್ಟು ಬೇಡವೆನ್ನಬೇಡ, ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ ರಾಜ. ಎಂದಾಗ ಬೇಡ ಬೇಡ ನಾನು ರಾಜ್ಯದಲ್ಲಿ ಏನೇನೋ ಮಾಡಿದ್ದೇನೋ ಅದೆಲ್ಲವನ್ನೂ ಕಣ್ಣಾರೆ ನೋಡಬೇಕು. ನೀನು ರಾಜವೈಭವದಿಂದ ರಥದ ಮೇಲೆ ಕುಳಿತು ಚತುರಂಗ ಬಲ ಸಪರಿವಾರನಾಗಿ ಹೊರಡು. ನನ್ನನ್ನು ಮತ್ತೆ ಮತ್ತೆ ಕಾಡಬೇಡ ಮುನಿಪ, ಕೊಟ್ಟ ಅವಧಿ ಕಡಿಮೆಯಾದರೆ ತುಂಬ ದೂರ ಹೋಗಬೇಕು. ನನ್ನ ಸಮಯವನ್ನು ಹಾಳುಮಾಡದೆ ಕಳುಹಿಸಿಕೊಟ್ಟರೆ ನನ್ನನ್ನು ಮೇರುವಿನ ತುತ್ತ ತುದಿಯ ಶಿಖರಕ್ಕೆ ಕರೆದುಕೊಂಡು ಹೋದಷ್ಟು ಪುಣ್ಯ ಬರುತ್ತದೆ ನಿನಗೆ. ಬಿಟ್ಟುಬಿಡು. ಎನ್ನುತ್ತ ರಾಜ ವಿಶ್ವಾಮಿತ್ರನಿಗೆ ಕೈಮುಗಿಯುತ್ತಾನೆ.

ಪದ್ಯ

ಅಕ್ಕರಿಂದಲ್ಲ ನೀನೋಡಿ ಹೋದಹೆಯೆಂಬ
ಕಕ್ಕುಲಿತೆಗೇರೆಂದೆನೈಸೆಯೆನೆ ಬಲುಗಾಹ
ನಿಕ್ಕಯ್ಯ ಎನೆ ಕಾಹಿನವರು ನಿನ್ನವರೆಂದಡವರು ಬೇಡಯ್ಯ ನಿನ್ನ
ಮಕ್ಕಳಹ ಮುನಿಗಳಂ ಬೆಸೆಸೆನಲು ಬೆಸಸಿ ಮುನಿ
ರಕ್ಕಸಂ ರಥವೇರಿ ಚತುರಂಗಬಲವೆರಸಿ
ಮಿಕ್ಕು ನಡೆದಂ ಸರ್ವಸಂಭ್ರಮದ ಸಡಗರಂ ಮಿಗಲಯೋಧ್ಯಾಪುರಕೆ ೨೦೧

ಅರ್ಥ
ನಿನ್ನ ಮೇಲೆ ಪ್ರೀತಿಯಿಂದ ರಥವನ್ನು ಹತ್ತಲು ಹೇಳಿದ್ದಲ್ಲ ನಾನು. ನೀನು ಓಡಿಹೋದರೆ ಎಂಬ ಆತಂಕದಿಂದ ಹೇಳಿದೆ. ಎಂದಾಗ ಹಾಗಿದ್ದರೆ ಯಾರಾದರೂ ಕಾವಲಿನವರನ್ನು ನನ್ನ ಜೊತೆ ಕಳುಹಿಸು ಎನ್ನುತ್ತಾನೆ ರಾಜ. ಕಾವಲುಗಾರರು ನಿನ್ನವರೇ ತಾನೆ? ಎಂದು ಕೇಳುತ್ತಾನೆ ವಿಶ್ವಾಮಿತ್ರ. ಹಾಗಿದ್ದರೆ ಅವರು ಬೇಡ, ನಿನ್ನವರನ್ನೇ ಯಾರನ್ನಾದರೂ ನೇಮಿಸು ಎಂದಾಗ ಅದೇ ರೀತಿ ಮಾಡಿ ಮುನಿರಕ್ಕಸನಾದ ವಿಶ್ವಾಮಿತ್ರ ರಾಜರಥವನ್ನು ಏರಿ ಚತುರಂಗಬಲ ಪರಿವಾರದೊಂದಿಗೆ ಅತ್ಯಂತ ಸಂಭ್ರಮದಿಂದ ಅಯೋಧ್ಯಾಪುರದ ಕಡೆಗೆ ಸಾಗತೊಡಗಿದನು

ವಿಶೇಷ ವಿಚಾರ
ರಥ ಹತ್ತದಿರುವ ರಾಜನ ಸ್ವಾಭಿಮಾನವನ್ನು ನೋಡಿ ಅಚ್ಚರಿಗೊಂಡರೂ ತನ್ನ ಹಿರಿತನವನ್ನು ಉಳಿಸುವ ಮಾತಾಡುತ್ತಾನೆ ವಿಶ್ವಾಮಿತ್ರ.

ಪದ್ಯ

ಧರೆ ಬಿರಿಯಲಳ್ಳಿರಿವನಂತನಿಸ್ಸಾಳದ
ಬ್ಬರವನಾಲಿಸಿ ಪುರದ ಕೇರಿಗಳನೊಪ್ಪೆ ಸಿಂ
ಗರಿಸಿ ಮನೆಮನೆಗಳೊಳು ಗುಡಿತೋರಣಂಗಳಂ ಸರದೆಗೆದು ಸಂಭ್ರಮದಲಿ
ಅರರೆ ಕೋಟಾಕೋಟಿ ಕರಿತುರಗರಥ ಪತ್ತಿ
ಪರಿಜನಂವೆರಸಿ ಮತ್ತಾ ಹರಿಶ್ಚಂದ್ರಭೂ
ವರನನಿದಿರ್ಗೊಳಲು ನಡೆದರು ಶಶಿಯನಿದಿರ್ಗೊಂಡು ಹೆಚ್ಚುವಂಬೋಧಿಯಂತೆ ೨೦೨

ಅರ್ಥ
ಭೂಮಿಯೇ ಬಿರುಕುಬಿಡುವಷ್ಟು ಜೋರಾದ ಬಹುಬಗೆಯ ವಾದ್ಯಧ್ವನಿಗಳ ಅಬ್ಬರವನ್ನು ಕೇಳಿ ರಾಜ ಬೇಟೆಯಿಂದ ಮರಳಿ ಬರುತ್ತಿರುವ ವಿಷಯ ಗೊತ್ತಾಗಿ ನಗರದ ಬೀದಿ ಬೀದಿಗಳನ್ನು ಸಿಂಗರಿಸಿ ಮನೆಮನೆಗಳಲ್ಲೂ ತಳಿರು ತೋರಣಗಳ ಮಾಲೆಗಳನ್ನು ಕಟ್ಟಿ ಕೋಟ್ಯನುಕೋಟಿ ಆನೆ, ಕುದುರೆ, ರಥ ,ಕಾಲಾಳುಗಳು ಹಾಗೂ ಪರಿವಾರದೊಂದಿಗೆ ಪ್ರಜಾಜನರು ಆಕಾಶದಲ್ಲಿ ಬೆಳಗುವ ಚಂದ್ರನನ್ನು ನೋಡಿ ಸಂಭ್ರಮದಿಂದ ಉಬ್ಬುವ ಸಾಗರದ ಹಾಗೆ ಸಂಭ್ರಮದಿಂದ ರಾಜನನ್ನು ಸ್ವಾಗತಿಸಲು ಮುಂದೆ ಬಂದರು.

ಪದ್ಯ

ಮುತ್ತಿನಣಕುಗಳ ಮುಸುಕಿದ ಹಲವು ಝಲ್ಲರಿಗ
ಳೊತ್ತಿನೊಳು ತಳಿತ ಬೆಳುಗೊಡೆಗಳಿಡುಕುರ ನೆಳಲ
ಕುತ್ತುರೊಳು ಢಾಳಿಸುತ ಚಮರಿ ಸೀಗುರಿಗಳೊಗ್ಗಿನ ಕುರುಹುವಿಡಿದು ನಡೆದು
ಎತ್ತಿದ ಮೊಗಂ ನಿಲುಕಿ ನೋಳ್ಪ ಕಂಗಳು ಮುಗಿದು
ಹೊತ್ತ ಕೈಯವಧಾರು ಜೀಯ ಎಂದೆಂಬ ನುಡಿ
ವೆತ್ತು ಹತ್ತಿರೆ ಬಂದು ಮುನಿಯ ಮೊಗಮಂ ಕಂಡ ಹೊತ್ತನಿನ್ನೇವೊಗಳ್ವೆನು ೨೦೩

ಅರ್ಥ
ಎಲ್ಲ ಕಡೆಯಲ್ಲೂ ತುಂಬಿರುವ ಆಯುಧಗಳ ಮಧ್ಯದಲ್ಲಿ, ಮುತ್ತುಗಳಿಂದ ಅಲಂಕೃತವಾದ ಬೆಳ್ಗೊಡೆಗಳ ನೆರಳಿನಲ್ಲಿ, ಬೀಸುವ ಚಾಮರಗಳ ಮಧ್ಯದಲ್ಲಿ ರಾಜನನ್ನು ನೋಡಲೆಂದು ನಡೆದುಕೊಂಡು ಬಂದ ಪ್ರಜೆಗಳು ಎತ್ತಿದ ಮುಖ, ಹುಡುಕುತ್ತ ನೋಟ, ಮುಗಿದ ಕೈಗಳು, ಜೀಯ, ಒಡೆಯಾ ಎಂಬ ಮಾತುಗಳೊಂದಿಗೆ ಹತ್ತಿರಬಂದಾಗ ರಥದಲ್ಲಿ ರಾಜನ ಬದಲಿಗೆ ಮುನಿಯೊಬ್ಬನ ಮುಖವನ್ನು ಕಂಡ ಹೊತ್ತಿನಲ್ಲಿ ಅವರಿಗಾದ ಅವಸ್ಥೆಯನ್ನು ಏನೆಂದು ಹೇಳಲಿ?

ಪದ್ಯ

ನಸುನನೆಯನಪ್ಪಿದಳಿಕುಳದಂತೆ ಕಡುಹಸಿದು
ಕಡುಗಾಯನಗಿದ ಗಿಳಿಗಳ ಬಳಗದಂತೆ ನಿ
ಟ್ಟಿಸದೆ ವಿಷಮಂ ಸವಿದ ಶಿಶುವಿಸರದಂತೆ ಕೊರಡಂ ಕರ್ದುಕಿ ಚಂಚುನೊಂದು
ಕುಸಿದ ಪಿಕನಿಕರದಂತಾಸತ್ತು ಬೇಸತ್ತು
ಬಸವಳಿಯುತಂದು ಮುನಿಗಳೊಳರಸಿದರು ಮಾ
ಮಸಕದಿಂ ಪುರಜನಂ ಭೂಪನಂ ಹೊಲಗೆಟ್ಟ ಕರು ತಾಯನರಸುವಂತೆ ೨೦೪

ಅರ್ಥ
ನಸುಗುನ್ನಿಯ ಹೂವಿನ ಮಧುವನ್ನು ಸೇವಿಸಿದ ದುಂಬಿಗಳಂತೆ, ತೀವ್ರವಾದ ಹಸಿವೆಯಿಂದ ಬಂದು ಹಸಿಕಾಯಿಯನ್ನು ಕುಕ್ಕಿದ ಗಿಳಿಗಳ ಸಮೂಹದಂತೆ, ತಿಳಿಯದೆ ವಿಷವನ್ನು ಸೇವಿಸಿದ ಮಕ್ಕಳಂತೆ, ಕೊರಡನ್ನು ಕುಕ್ಕಿ ಕೊಕ್ಕನ್ನು ನೋಯಿಸಿಕೊಂಡ ಕೋಗಿಲೆಗಳಂತೆ ಪ್ರಜೆಗಳೆಲ್ಲರೂ ಕೋಪ ತಾಪ, ಆಯಾಸಗಳಿಂದ ಬಳಲುತ್ತ ಮುನಿಗಳ ಸಮೂಹದಲ್ಲಿ ದಾರಿತಪ್ಪಿದ ಕರು ತನ್ನ ತಾಯಿಯನ್ನು ಹುಡುಕುವಂತೆ ಆತುರಾತುರವಾಗಿ ರಾಜನನ್ನು ಹುಡುಕಿದರು.

ಪದ್ಯ

ಹಗಲೊಗೆದ ಚಂದ್ರಕಳೆಯಂತೆ ಬಿರುವೈಶಾಖ
ವಗಿದ ಬನದಂತೆ ಬಿಸಿಲೊಳು ಬಿಸುಟ ತಳಿರಂತೆ
ಮೊಗ ಕಂದಿ ಕಳೆಗುಂದಿಯರುಗಪ್ಪಡವುಟ್ಟು ರಾಗವಳಿದೊಪ್ಪಗೆಟ್ಟು
ಮಗನರಸಿ ಮಂತ್ರಿಸಹಿತವನಿಪಂ ಹಿಂದೆ ದೇ
ಸಿಗನಂತೆ ಕೌಶಿಕನ ಕಾಹಿನೊಳು ಬರೆ ಕಂಡು
ಬಗೆ ಬೆದರಿ ಹೊದ್ದಿ ಹೊಡೆವಟ್ಟು ಕಾಣಿಕೆಯ ಚಿತ್ತೈಸು ಭೂಭುಜ ಎಂದರು ೨೦೫

ಅರ್ಥ
ಹಗಲಿನಲ್ಲಿ ಉದಿಸಿದ ಚಂದ್ರಕಳೆಯಂತೆ, ಕಡುಬೇಸಗೆಯಲ್ಲಿ ಒಣಗಿದ ಕಾಡಿನಂತೆ, ಬಿಸಿಲಿನಲ್ಲಿ ಎಸೆದ ಚಿಗುರಿನಂತೆ ಮುಖ ಕಂದಿ ಕಳೆಗುಂದಿ ಹರಕು ಬಟ್ಟೆಯುಟ್ಟು ತೇಜೋಹೀನನಾಗಿ ರಥದ ಹಿಂದೆ ಮಗ, ಅರಸಿ ಮತ್ತು ಮಂತ್ರಿಗಳ ಜೊತೆಯಲ್ಲಿ ಬರುತ್ತಿರುವ ರಾಜನನ್ನು ನೋಡಿ ಗಾಬರಿಯಾಗಿ ಸಾಷ್ಟಾಂಗವೆರಗಿ ಕಾಣಿಕೆಗಳನ್ನು ಸ್ವೀಕರಿಸು ರಾಜ ಎಂದು ಹೇಳಿದರು.

ಪದ್ಯ

ಎನಗರಸುತನ ಮಾದುಹೋಗಿ ವಿಶ್ವಾಮಿತ್ರ
ಮುನಿಗಾದುದಾತನಂ ಕಂಡು ಕಾಣಿಕೆಯನಿ
ತ್ತನುದಿನಂ ಬೆಸಕೈವುದೆನಲೊಲ್ಲೆವೆನಲು ಬೋಧಿಸಿ ಬಲತ್ಕಾರದಿಂದ
ಜನವ ಕಾಣಿಸಿ ಕಾಣಿಕೆಯ ಕೊಡಿಸಿ ಹಿಂದುಗೊಂ
ಡಿನಕುಲಲಲಾಮನೆಯ್ತಂದು ಪುರಮಂ ಪೊಕ್ಕು
ಮನದೊಳುತ್ಸವದ ಹೆಚ್ಚುಗೆಯಳಿದು ನಿಂದ ಮಂದಿಯ ನೋಡುತಂ ನಡೆದನು ೨೦೬

ಅರ್ಥ
ನಾನು ಅರಸುತನವನ್ನು ಕಳೆದುಕೊಂಡಿದ್ದೇನೆ. ಈಗ ರಾಜ್ಯಾಧಿಕಾರ ವಿಶ್ವಾಮಿತ್ರನಿಗೆ ಸೇರಿದೆ. ನೀವೆಲ್ಲರೂ ಅವನ ಬಳಿಗೆ ಹೋಗಿ ಅವನನ್ನು ಕಂಡು ಕಾಣಿಕೆಗಳನ್ನು ಸಲ್ಲಿಸಿ ಪ್ರತಿದಿನವೂ ಅವನ ಆದೇಶದಂತೆ ನಡೆಯಬೇಕು ಎಂದಾಗ ಸಾಧ್ಯವೇ ಇಲ್ಲವೆಂದು ಪ್ರಜೆಗಳು ಉತ್ತರಿಸುತ್ತಾರೆ. ರಾಜ ಅವರನ್ನು ಒಪ್ಸಿಸಿ ಬಲವಂತವಾಗಿ ವಿಶ್ವಾಮಿತ್ರನಿಗೆ ಅವರನ್ನು ತೋರಿಸಿ ಕಾಣಿಕೆಯನ್ನು ಕೊಡಿಸಿ ತಾನು ಮಾತ್ರ ಮೆರವಣಿಗೆಯ ಹಿಂದೆ ದುಃಖಿತರಾದ ಪುರಜನರನ್ನು ನೋಡುತ್ತ ನಡೆದನು.

ಪದ್ಯ

ಗೊಂದಣಂ ಮಿಗೆ ಹರಸಲೆಂದಾರತಿಯನೆತ್ತ
ಲೆಂದು ಸೇಸೆಯನಿಕ್ಕಲೆಂದಾರ್ತದಿಂ ನೋಡ
ಲೆಂದು ರೂಪಂ ಮೆರೆಯಲೆಂದು ಸೊಬಗಂ ಸಾರಲೆಂದು ನವರತ್ನವಿಡಿದು
ಹೊಂದೊಡಿಗೆಯಂ ತೋರಲೆಂದು ಜನದಳವರಿಯ
ಲೆಂದು ಬೀದಿಯೊಳು ಬಾಗಿಲೊಳು ಭದ್ರಂಗಳೊಳು
ನಿಂದ ಸತಿಯರು ಭೂಪನಿರವಂ ಕಂಡುರಿಹೊಯ್ದ ಹೂಗಣೆಯಂತಿರ್ದರು ೨೦೭

ಅರ್ಥ
ರಾಜನನ್ನು ಹರಸುವುದಕ್ಕೆ, ಆರತಿ ಬೆಳಗುವುದಕ್ಕೆ, ಅಕ್ಷತೆ ಹಾಕುವುದಕ್ಕೆ ಆತುರದಿಂದ, ಪ್ರೀತಿಯಿಂದ ದರ್ಶನ ಪಡೆಯುವುದಕ್ಕೆ ತಮ್ಮನ್ನು ರಾಜನ ಮುಂದೆ ತೋರಿಸುವುದಕ್ಕೆ, ತಮ್ಮ ಸೌಂದರ್ಯವನ್ನು ಮೆರೆಯುವುದಕ್ಕೆ, ನವರತ್ನಗಳನ್ನು ಕೂಡಿಸಿದ ಚಿನ್ನಾಭರಣಗಳನ್ನು ಪ್ರದರ್ಶಿಸುವುದಕ್ಕೆ, ತಮ್ಮ ಅಗಾಧಸಂಖ್ಯೆಯನ್ನು ತಿಳಿಸುವುದಕ್ಕೆ ಆಸೆಪಟ್ಟು ಬೀದಿಯಲ್ಲಿ, ಬಾಗಿಲಲ್ಲಿ, ಮನೆಗಳಲ್ಲಿ ನಿಂತಿದ್ದ ಹೆಣ್ಣುಮಕ್ಕಳು ಭೂಪನ ಸ್ಥಿತಿಯನ್ನು ನೋಡಿ ಬೆಂಕಿ ಹಿಡಿದ ಹೂವಿನ ಬಾಣದಂತಾದರು.

ಕಾವ್ಯರಸಯಾನ ಮುಂದುವರಿದುದು: ೨೮.೧೦.೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ಬಗೆಬಗೆಯಲ್ಲಿ ಹರಿಶ್ಚಂದ್ರನನ್ನು ಪರೀಕ್ಷೆಮಾಡಿದರೂ ತಾನೇ ಸೋತುಹೋದೆನೆಂದು ಮನದಟ್ಟಾದ ಬಳಿಕ ವಿಶ್ವಾಮಿತ್ರ ಅತ್ಯಂತ ನೊಂದುಕೊಂಡು, ಅವಮಾನಿತನಾಗಿ ಬದುಕುವುದಕ್ಕಿಂತ ತನಗೆ ಸಾವೇ ಉತ್ತಮವೆಂದು ಭಾವಿಸುತ್ತಾನೆ. ಆದರೆ ವಸಿಷ್ಠ ಗೆದ್ದುಬಿಡುತ್ತಾನಲ್ಲ ಎಂಬುದು ಅವನಿಗೆ ಸಾವಿಗಿಂತಲೂ ಭೀಕರವಾಗಿ ಕಾಡುತ್ತದೆ. ಅದಕ್ಕಾಗಿ ಮತ್ತೊಂದು ಪ್ರಯತ್ನ ಮಾಡೋಣವೆಂದು ಯೋಚಿಸುತ್ತಾನೆ.

ಪದ್ಯ

ನೂಕಿ ನಡೆದರಮನೆಯ ಹೊಕ್ಕು ಸಿಂಹಾಸನಾ
ಕ್ಕಾ ಕೌಶಿಕಂ ಬಂದು ಭೂಭುಜನ ಕೈಯ ಪಿಡಿ
ದೀ ಕಟಕವೀ ಕೋಟೆಯೀ ಕರಿಗಳೀ ತುರಗವೀ ರಥಗಳೀ ಪರಿಜನ
ಈ ಕೋಶವೀ ಕಾಂತೆಯೀ ಕುವರನೀ ಮಂತ್ರಿ
ಯೀ ಕಾಮಿನೀಜನಂ ಮರುಗದಂತರಸಾಗ
ಬೇಕಾದಡೆನ್ನ ಮಕ್ಕಳ ಮದುವೆಯಾಗು ಕಾಡದೆ ಬಿಟ್ಟು ಹೋಹೆನೆಂದ ೨೦೮

ಅರ್ಥ
ಜನರನ್ನು ತಳ್ಳಿಕೊಂಡು ಅರಮನೆಯ ಒಳಗೆ ಹೋಗಿ ಸಿಂಹಾಸನದ ಬಳಿಗೆ ಬಂದ ವಿಶ್ವಾಮಿತ್ರ ಮಹಾರಾಜನ ಕೈ ಹಿಡಿದುಕೊಂಡು ಈ ಸೈನ್ಯ, ಈ ಕೋಟೆ, ಈ ಆನೆಗಳು, ಈ ಕುದುರೆಗಳು, ಈ ರಥಗಳು, ಈ ಪರಿಚಾರಿಕೆಯರು, ಈ ಭಂಡಾರ, ಈ ನಿನ್ನ ಮಡದಿ, ಈ ಮಂತ್ರಿ, ಈ ಮಗ, ಈ ಅಂಗನೆಯರು ದುಃಖಿಸದಂತೆ ನಿನಗೆ ಅರಸನಾಗಬೇಕೆಂದಿದ್ದರೆ ಹೇಳು, ನನ್ನ ಮಕ್ಕಳನ್ನು ಮದುವೆಯಾದರೆ ಸಾಕು, ಯಾವ ಕಿರುಕುಳವನ್ನೂ ಕೊಡದೆ ಹೊರಟುಹೋಗುತ್ತೇನೆ.

ಪದ್ಯ

ಹೆತ್ತ ತಾಯಂ ಮಾರಿ ತೊತ್ತ ಕೊಂಬರೆ ಮೂಗ
ನಿತ್ತು ಕನ್ನಡಿಯ ನೋಡುವರೆ ಮಾಣಿಕದೊಡವೆಯ
ನೊತ್ತೆಯಿಟ್ಟೊಡೆದ ಗಾಜಂ ಹಿಡಿವರೇ ಕೋಪದಿಂ ಸತ್ತು ಮದುವೆಯಹರೆ
ಕತ್ತುರಿಯ ಸುಟ್ಟರಳ ಕುರುಕಲನುಗೆಯ್ವರೇ
ಚಿತ್ತೈಸು ಹೊಲತಿಯರ ನೆರೆದು ನಾನೋವದಿ
ಪ್ಪತ್ತೊಂದು ತಲೆವೆರಸಿ ನರಕಕ್ಕೆ ಹೋಹೆನೇ ಮುನಿನಾಥ ಹೇಳೆಂದನು ೨೦೯

ಅರ್ಥ
ಹೆತ್ತ ತಾಯಿಯನ್ನು ಮಾರಾಟಮಾಡಿ ದಾಸಿಯನ್ನು ಕೊಂಡುಕೊಳ್ಳುತ್ತಾರೆಯೇ? ಮೂಗನ್ನು ಕೊಟ್ಟು ಕನ್ನಡಿಯನ್ನು ನೋಡುತ್ತಾರೆಯೇ? ಮಾಣಿಕ್ಯದ ಆಭರಣವನ್ನು ಅಡವಿಟ್ಟು ಒಡೆದ ಗಾಜನ್ನು ಇಟ್ಟುಕೊಳ್ಳುತ್ತಾರೆಯೇ? ಕೋಪದಿಂದ ಸತ್ತು ಮದುವೆಯಾಗಲು ಸಾಧ್ಯವೇ? ಕಸ್ತೂರಿಯನ್ನು ಸುಟ್ಟು ಕುರುಕಲು ತಿಂಡಿ ಮಾಡುತ್ತಾರೆಯೇ? ಆಲಿಸು ಮನೀಶ್ವರ, ಹೊಲತಿಯರನ್ನು ಮದುವೆಯಾಗಿ ನಾನು ೨೧ ತಲೆಮೊರೆಯ ಹಿರಿಯರೊಂದಿಗೆ ನರಕಕ್ಕೆ ಹೋಗುತ್ತೇನೆಯೇ? ಹೇಳು.

ವಿಶೇಷ ವಿಚಾರ
ಹೊಲತಿಯರನ್ನು ಮದುವೆಯಾಗುವುದು ಎಷ್ಟು ಕೀಳು ಎಂಬುದನ್ನು ಈ ಪದ್ಯದ ಹೋಲಿಕೆಗಳ ಮೂಲಕ ಕವಿ ಖಚಿತಪಡಿಸುತ್ತಿದ್ದಾನೆ.

ಪದ್ಯ

ಒಲ್ಲದಿರಬೇಡ ಲೇಸೊಲ್ಲೆಯೇಕೊಲ್ಲೆಯೆ
ಮ್ಮಲ್ಲಿ ತಪ್ಪಿಲ್ಲಾದಡಿನ್ನು ನೀನೀಗ ನಿನ
ಗುಳ್ಳ ಸರ್ವಪರಿವಾರಮಂ ಕರೆಸು ಬೇಗದಲಿಂತು ಚತುರಂಗಬಲ ಸೇನೆಯ
ಸಲ್ಲಲಿತ ದೇಶಕೋಶವನು ಕಟಕವನವ
ಕ್ಕುಳ್ಳ ಕುಲಕರಣ ದುರ್ಗಂ ಮುದ್ರೆ ಮೊದಲಾದು
ವೆಲ್ಲಮಂ ಬಿಡದೊಪ್ಪುಗೊಟ್ಟು ಹೋಗೇಳೆನಲು ಕರೆಸಿದಂ ಭೂನಾಥನು ೨೧೦

ಅರ್ಥ
ಆಗುವುದಿಲ್ಲ ಎಂದು ಮಾತ್ರ ಹೇಳಬೇಡ. ಇದರಿಂದ ನಿನಗೇ ಒಳ್ಳೆಯದು. ಇಲ್ಲ, ಆಗುವುದಿಲ್ಲ. ಅದೇಕೆ ಆಗುವುದಿಲ್ಲ? ನನ್ನಲ್ಲಿ ಒಂದೇ ಮಾತು. ಮಾತು ತಪ್ಪಿ ನಡೆಯಲಾರೆ. ಸರಿ, ಹಾಗಿದ್ದರೆ ನೀನು ಈಗಲೇ ನಿನ್ನಲ್ಲಿರುವ ಸರ್ವ ಪರಿವಾರವನ್ನೂ ಚತುರಂಗ ಸೈನ್ಯವನ್ನೂ ಸಮಸ್ತ ಕೋಶಗಳನ್ನೂ ಸೈನಿಕರನ್ನೂ ಸಂಬಂಧಪಟ್ಟ ದಾಖಲೆಗಳನ್ನೂ ಮುದ್ರೆಯನ್ನೂ ಒಂದೂ ಬಿಡದಂತೆ ನನಗೆ ಒಪ್ಪಿಸಿಹೋಗು ಎಂದು ಆತುರಪಡಿಸಿದಾಗ ರಾಜ ಅವೆಲ್ಲವನ್ನೂ ಕರೆಸಿಕೊಂಡನು.
ನವಮ ಸ್ಥಲ

ಪದ್ಯ

ಬಾಡಿದ ಮೊಗಂ ಬರತ ಬಾಯ್‌ ಸುರಿವ ನಯನಾಂಬು
ಪಾಡಳಿದ ಮತಿ ನೀಡಿ ಬೆಳೆದ ಸುಯ್‌ ದುಗುಡವ
ಕ್ಕಾಡುವಂಗಂ ನಿರೋಧಾಗ್ನಿಯಿಂ ಕುದಿದು ಮರುಗುವ ಮನಂ ಮಾಸಿದ ಮುದಂ
ಕೂಡೆ ಬಂದಖಿಳಪರಿವಾರಮಂ ಸತಿಯರಂ
ನಾಡ ಚತುರಂಗಬಲಮಂ ಪುರಜನಂಗಳಂ
ನೋಡಿ ತೋರಿಸಿ ಬೇರೆವೇರೊಪ್ಪುಗೊಡುತಿರ್ದನಾ ಧೈರ್ಯನಿಧಿ ಭೂಪನು ೨೧೧

ಅರ್ಥ
ಬಾಡಿದ ಮುಖ, ಒಣಗಿದ ಬಾಯಿ, ಸುರಿಯುತ್ತಿರುವ ಕಣ್ಣೀರು, ಬುದ್ಧಿಗೆಟ್ಟಂತಾಗಿ ನಿಟ್ಟುಸಿರು ಬಿಡುತ್ತ ದುಃಖಭಾರದಿಂದ ಬರುತ್ತಿರುವಾಗ ಸರಿಯಾಗಿ ನಡೆಯಲಾಗದೆ ತಡವರಿಸುವ ಹೆಜ್ಜೆಗಳು, ದುಃಖದ ಬೆಂಕಿಯನ್ನು ನಿಗ್ರಹಿಸಿದುದರಿಂದ ಕುದಿಯುತ್ತಿರುವ ಮನಸ್ಸು, ಹೀಗೆ ಸಂತೋಷವನ್ನು ಕಳೆದುಕೊಂಡು ಬಂದ ಪರಿವಾರವನ್ನೂ ಸ್ತ್ರೀಯರನ್ನೂ ಎಲ್ಲ ಚತುರಂಗ ಸೈನ್ಯವನ್ನೂ ಪ್ರಜಾಜನಗಳನ್ನೂ ನೋಡಿ ಹರಿಶ್ಚಂದ್ರ ಅವೆಲ್ಲವನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ತೋರಿಸಿ ಮುನಿಗೆ ಒಪ್ಪಿಸಿಕೊಡುತ್ತಿದ್ದ.

ಪದ್ಯ

ಇದು ರತ್ನ ಭಂಡಾರವಿದು ಹೇಮಭಂಡಾರ
ವಿದು ಸುನಾಣೆಯ ವರ್ಗವಿದು ಪಟ್ಟಕರ್ಮ
ವಿದು ಬೆಳ್ಳಿಯುಗ್ರಾಣವಿದು ಕಂಚಿನುಗ್ರಾಣವಿದು ಸರ್ವಶಸ್ತ್ರಶಾಲೆ
ಇದು ಹಸ್ತಿಸಂದೋಹವಿದು ತುರಗಸಂತಾನ
ವಿದು ವರೂಥಪ್ರಕರವಿದು ಪದಾತಿವ್ರಾತ
ವಿದ ನೋಡಿಕೋಯೆನುತ್ತೊಪ್ಪಿಸಿದನಾ ಮುನಿಗೆ ಭೂನಾಥ ಕಂದರ್ಪನು ೨೧೨

ಅರ್ಥ
ಇದು ರತ್ನಗಳ ಭಂಡಾರ, ಇದು ಬಂಗಾರದ ಭಂಡಾರ, ಇದು ಉತ್ತಮ ನಾಣ್ಯಗಳ ಭಾಗ, ಇದು ರೇಷ್ಮೆಬಟ್ಟೆಗಳು, ಇದು ಬೆಳ್ಳಿಗಳ ಉಗ್ರಾಣ, ಇದು ಕಂಚಿನ ಉಗ್ರಾಣ, ಇದು ಆಯುಧಾಗಾರ, ಇದು ಆನೆಗಳ ಗುಂಪು, ಇದು ಕುದುರೆಗಳು, ಇವು ರಥಗಳು, ಇವು ಪದಾತಿಗಳು ಇವುಗಳನ್ನೆಲ್ಲ ಸರಿಯಾಗಿ ನೋಡಿ, ಸ್ವೀಕರಿಸಿಕೋ ಎನ್ನುತ್ತ ಮಹಾರಾಜ ಮುನಿಗೆ ಎಲ್ಲವನ್ನೂ ಒಪ್ಪಿಸಿದನು.

ಪದ್ಯ

ಹಿರಿಯ ಬಿರುದಿನ ಮುದ್ರೆಯಿದು ನಗರವಿದು ಪೂರ್ವ
ದರಮನೆಯಿದಖಿಳ ಪರಿವಾರವಿದು ಸಿವುಡಿಯಿದು
ಕರಣವಿದು ಮೇಲುಳ್ಳ ಸರ್ವಸ್ವವಿದು ನೋಡಿಕೋ ಮಹಾಪುರುಷ ಎಂದು
ವರ ಕೌಶಿಕಂಗೊಪ್ಪುಗೊಟ್ಟೆಲ್ಲ ಸಂದುದೇ
ಪರಿಣಾಮವೇ ಇನ್ನು ಹೋಹೆನೇ ಮುನಿನಾಥ
ಕರುಣಿಸಿದಿರೇ ಎಂದು ಪೊಡೆಮಟ್ಟು ಹೋಹರಸನೊಡನೆದ್ದನಾ ಮುನಿಪನು ೨೧೩

ಅರ್ಥ
ನೋಡು, ಇದು ನಮ್ಮ ರಾಜರ ಬಿರುದಿನ ಮುದ್ರೆ. ಇದು ನಮ್ಮ ನಗರ, ಇದು ನಮ್ಮ ಹಳೆಯ ಅರಮನೆ,
ಇದು ಸಮಸ್ತ ಪರಿವಾರ, ಇದು ನಮ್ಮ ಲೆಕ್ಕಪುಸ್ತಕ ಮತ್ತು ಲೆಕ್ಕಗಳು, ಇವು ಇನ್ನುಳಿದ ಸಮಸ್ತ ವಸ್ತುಗಳು ಎಲ್ಲವನ್ನೂ ನೋಡಿ ಸ್ವೀಕರಿಸಿಕೋ ಮಹಾಪುರುಷ ಎನ್ನುತ್ತ ಪ್ರತಿಯೊಂದನ್ನೂ ಬೇರೆಬೇರೆಯಾಗಿ ತಿಳಿಸಿಕೊಟ್ಟ ಬಳಿಕ ʻಎಲ್ಲ ಬಂದಿದೆಯಲ್ಲವೇ? ಸಮಾಧಾನವಾಯಿತಲ್ಲವೇ? ಇನ್ನು ನಾನು ಹೋಗಬಹುದಲ್ಲ? ದಯವಿಟ್ಟು ಅನುಗ್ರಹಿಸಿ ಕಳುಹಿಸಿ ಎಂದು ಹೊರಟುನಿಂತ ರಾಜನೊಂದಿಗೆ ವಿಶ್ವಾಮಿತ್ರನೂ ಎದ್ದನು.

ಪದ್ಯ

ಪೊರಮಡುವ ಭೂಪಾಲನಂ ಕಂಡು ಕಂಗೆಟ್ಟು
ಮರುಗಿ ಬಸುರಂ ಹೊಸೆದು ಬಸವಳಿದು ಬಿಸುಸುಯ್ದು
ಮೊರೆಯಿಟ್ಟು ಬಾಯ್ವಿಟ್ಟು ಕೈನೀಡಿ ಕರೆದು ಕಟ್ಟೊರಲಿ ಸೈರಿಸಲಾರದೆ
ನೆರೆ ನಿನ್ನ ನಂಬಿ ನಚ್ಚಿರ್ದ ಪರಿವಾರಮಂ
ಮರೆದೆಯೋ ತೊರೆದೆಯೋ ಪೇಳು ನೇ
ಸರಕುಲಜ ಎಂದೆಂದು ನುಡಿನುಡಿದು ಮಿಡುಮಿಡನೆ ಮಿಡುಕಿತ್ತು ಪೌರಜನವು ೨೧೪

ಅರ್ಥ
ಹೊರಟುಹೋಗುತ್ತಿರುವ ಮಹಾರಾಜನನ್ನು ನೋಡಿ ಪ್ರಜೆಗಳು ಕಂಗಾಲಾಗುತ್ತಾರೆ. ದುಃಖಭಾರದಿಂದ ಹೊಟ್ಟೆಯನ್ನು ಹೊಸೆದುಕೊಂಡು ರೋದಿಸುತ್ತಾರೆ. ಶಕ್ತಿ ಗುಂದಿ, ನಿಟ್ಟುಸಿರು ಬಿಡುತ್ತಾ ಗೋಳಾಡುತ್ತ ಕೈನೀಡಿ ಕರೆಕರೆದು ಬೊಬ್ಬಿಡುತ್ತ ತಡೆಯಲು ಪ್ರಯತ್ನಿಸುತ್ತಾರೆ. ಅತಿಶಯವಾದ ದುಃಖದಿಂದ ನಿನ್ನನ್ನೇ ನಂಬಿದ ಪರಿವಾರವನ್ನು ಮರೆತುಬಿಟ್ಟೆಯಾ, ಬಿಟ್ಟುಬಿಟ್ಟೆಯಾ, ಮಾರಿದೆಯಾ ಹೇಳು ರಾಜ? ಎನ್ನುತ್ತ ಬಿಕ್ಕಿ ಬಿಕ್ಕಿ ಅಳುತ್ತ ಒದ್ದಾಡತೊಡಗುತ್ತಾರೆ.
ರಾಜನ ಬಗೆಗಿನ ಪ್ರಜೆಗಳ ಕಾಳಜಿ ಮುಂದಿನ ಪದ್ಯದಲ್ಲಿ ಸುವ್ಯಕ್ತ.

ಪದ್ಯ

ದಂತಿಯಿಂದಿಳಿದು ನಡೆದರಿಯದವ ಬರಿಗಾಲೊ
ಳೆಂತಡಿಯನಿಡುವೆ ಹಾಸಿನೊಳು ಪವಡಿಸುವಾತ
ನೆಂತು ಕಲುನೆಲದೊಳೊರಗುವೆ ಸಿತಚ್ಛತ್ರ ತಂಪಿನೊಳು ಬಪ್ಪಾತ ನೀನು
ಎಂತು ಬಿರುಬಿಸಿಲನಾನುವೆ ಪುರದೊಳಿಪ್ಪಾತ
ನೆಂತರಣ್ಯದೊಳಿಪ್ಪೆ ಜನವನಗಲ್ದರಿಯದವ
ನೆಂತು ಪೇಳೇಕಾಕಿಯಾಗಿಪ್ಪೆ ಎಂದು ಮೊರೆಯಿಟ್ಟುದು ಸಮಸ್ತಜನವು ೨೧೫

ಅರ್ಥ
ಆನೆಯಿಂದ ಕೆಳಗಿಳಿದು ನಡೆದೇ ಗೊತ್ತಿಲ್ಲದ ನೀನು ಹೇಗೆ ಬರಿಗಾಲಿನಲ್ಲಿ ನಡೆಯುವಿ ರಾಜ? ಹಾಸುಗೆಯಲ್ಲಿ ಮಲಗುವ ನಿನಗೆ ಕಲ್ಲು ನೆಲದಲ್ಲಿ ಮಲಗಲು ಹೇಗೆ ಸಾಧ್ಯ? ಸದಾ ಬೆಳ್ಗೊಡೆಯ ನೆರಳಲ್ಲಿ ಇರುವ ನೀನು ಕಠಿಣವಾದ ಬಿಸಿಲನ್ನು ಹೇಗೆ ತಡೆದುಕೊಳ್ಳುವೆ? ನಗರದಲ್ಲಿ ಜೀವಿಸುವ ನೀನು ಹೇಗೆ ಅರಣ್ಯದಲ್ಲಿ ಬದುಕುವೆ? ಜನಗಳನ್ನು ಎಂದೂ ಬಿಟ್ಟಿರದ ನೀನು ಇನ್ನು ಒಂಟಿಯಾಗಿ ಹೇಗೆ ಜೀವಿಸಬಲ್ಲೆ? ಎನ್ನುತ್ತ ಸಮಸ್ತ ಪ್ರಜೆಗಳೂ ಗೋಳಾಡತೊಡಗಿದರು.

ವಿಶೇಷ ವಿಚಾರ
ರಾಜನ ಬಗೆಗಿನ ಜನರ ಪ್ರೀತಿ, ಕಾಳಜಿ, ಗೌರವಗಳು ರಾಜ ಎಷ್ಟು ಪ್ರಜಾವತ್ಸಲನಾಗಿದ್ದ ಎಂಬುದಕ್ಕೆ ನಿದರ್ಶನ.
ಪ್ರಜೆಗಳ ದುಃಖ ಈಗ ಕೋಪವಾಗಿ ಮುನಿಯ ಕಡೆಗೆ ತಿರುಗುತ್ತದೆ.

ಪದ್ಯ

ಹೊರಗೆ ದಾನವ ಬೇಡಿದವರುಂಟೆ ಕೊಟ್ಟು ಬೇ
ಸರದ ಮುಗುದರಸು ದೊರಕಿದನಲಾ ಎಂದು ಕ
ಟ್ಟರೆಗಂಡ ಪಾಪಿ ನಿಷ್ಕರುಣಿ ನಿರ್ದಯ ಮೂರ್ಖ ನೀಚ ನೀರಸ ನಿರ್ಗುಣ
ನೆರೆ ಕೊಂದೆ ನಂಬಿ ನಚ್ಚಿರ್ದರೆಮ್ಮೊಡಲೊಳ
ಳ್ಳಿರಿಯುತಿಪ್ಪಳಲ ಬೇಗೆಯ ಬೆಂಕಿಯುರಿ ನಿನ್ನ
ನಿರಿಯದೇ ಹೇಳು ವಿಶ್ವಾಮೃತ್ಯುವಾದೆ ವಿಶ್ವಾಮಿತ್ರ ಎನುತಿರ್ದರು ೨೧೬

ಅರ್ಥ
ಯಾರಾದರೂ ಅರಮನೆಯ ಹೊರಗಿದ್ದು ದಾನವನ್ನು ಕೇಳುತ್ತಾರೆಯೇ? ಕೊಟ್ಟು ಬೇಸರದ ಮುಗ್ಧರಾಜನೊಬ್ಬ ಸಿಕ್ಕಿಬಿಟ್ಟನೆಂದು ಕಲ್ಲುಮನಸ್ಸಿನವನೆ, ಎಲೆ ಪಾಪಿ, ನಿಷ್ಕರುಣಿ, ನಿರ್ದಯ, ನೀಚ, ನಿರ್ಗುಣ ನೀನು ನಂಬಿದವರನ್ನು ಕೊಂದುಬಿಟ್ಟೆ. ನಮ್ಮ ಎದೆಯನ್ನು ಇರಿಯುವ ದುಃಖದ ನೋವಿನ ಬೆಂಕಿಯ ಜ್ವಾಲೆಗಳು ನಿನ್ನನ್ನು ಕೂಡ ಇರಿಯಲಾರದೇ ಹೇಳು ಮುನಿಪ, ನೀನು ವಿಶ್ವಾಮಿತ್ರನಲ್ಲ ವಿಶ್ವಾಮೃತ್ಯುವಾದೆ ಎಂದು ನಿಂದಿಸಿದರು.

ಪದ್ಯ

ಜಡೆಗಳೆದು ಮಕುಟಮಂ ನಾರಸೀರೆಯನು ತೊರೆ
ದುಡುಗೆಯಂ ರುದ್ರಾಕ್ಷಮಾಲೆಯಂ ಕಳೆದು ಮಣಿ
ದೊಡಿಗೆಯಂ ಕಂದಮೂಲವನು ಬಿಟ್ಟೂಟಮಂ ದರ್ಭೆಯಂ ಬಿಟ್ಟಸಿಯನು
ಅಡವಿಯಂ ಬಿಟ್ಟು ನಗರಿಯ ಭಸಿತಮಂ ಬಿಟ್ಟು
ಕಡುಸುಗಂಧಂಗಳ ಜಿತೇಂದ್ರಿಯತ್ವಮಂ ಬಿಟ್ಟು
ಮಡದಿಯರ ಜಗವರಿಯೆ ಕೂಡಲು ವ್ರತಕ್ಕೆ ಮುಪ್ಪಾಯ್ತೆ ಮುಪ್ಪಿನೊಳೆಂದರು ೨೧೭

ಅರ್ಥ
ಜಟಾಧಾರಿಯಾಗಿರುವ ನೀನು ಕಿರೀಟವನ್ನು ಧರಿಸಲು, ನಾರು ಬಟ್ಟೆಯನ್ನು ಉಡಬೇಕಾದ ನೀನು ರೇಷ್ಮೆಯ ಬಟ್ಟೆಯನ್ನು ಉಡಲು, ರುದ್ರಾಕ್ಷಿಯ ಮಾಲೆಯನ್ನು ಬಿಟ್ಟು ರಾಜಭೂಷಣಗಳನ್ನು ತೊಡಲು, ಗೆಡ್ಡೆಗೆಣಸುಗಳನ್ನು ಬಿಟ್ಟು ಭಕ್ಷ್ಯಭೋಜ್ಯಗಳನ್ನು ಉಣ್ಣಲು, ದರ್ಭೆಯನ್ನು ಹಿಡಿದ ಕೈಯಲ್ಲಿ ಖಡ್ಗವನ್ನು ಹಿಡಿಯಲು, ಅರಣ್ಯದಲ್ಲಿ ವಾಸಮಾಡುವುದು ಬಿಟ್ಟು ನಗರದಲ್ಲಿ ವಾಸಮಾಡಲು, ಭಸ್ಮಧಾರಣೆ ಮಾಡಬೇಕಾದವನು ಸುಗಂಧ ದ್ರವ್ಯಗಳನ್ನು ಪೂಸಲು, ಇಂದ್ರಿಯ ನಿಗ್ರಹಿಯಾಗಿರಬೇಕಾದವನು ಸ್ತ್ರೀಸಂಗವನ್ನು ಬಯಸಲು ಮನಸ್ಸು ಮಾಡಿದ್ದೀಯಲ್ಲ. ನಿನಗೆ ವೃದ್ಧಾಪ್ಯ ಬಂದ ಹಾಗೆ ನಿನ್ನ ವ್ರತಕ್ಕೂ ವೃದ್ಧಾಪ್ಯ ಬಂದಿತೇ? ಎಂದು ಮೂದಲಿಸಿದರು.

ಪದ್ಯ

ಮಲೆತು ಬೆನ್ನಟ್ಟುವ ಮಹಾರಿಷಡ್ವರ್ಗಮಂ
ಗೆಲಲರಿಯದವನಾವ ಹಗೆಗಳಂ ಗೆಲುವೆ ನಿ
ನ್ನೊಳಗೆ ಕರಣವ ಸಂತವಿಡಲರಿಯದವನಾವ ದೇಶಮಂ ಸಂತವಿಡುವೆ
ಸಲೆ ತಪಸ್ತೇಜದಿಂ ಪುರುಷಾರ್ಥಕೋಶಮಂ
ಬಳಸಲರಿಯದನಾವ ತೇಜದಿಂ ಕೋಶಮಂ
ಬಳಸಿದಪೆ ಕಂಗೆಟ್ಟು ಕಡುಪಾಪಿ ಮೂರ್ಖ ಕೌಶಿಕ ಕೇಳು ಕೇಳೆಂದರು ೨೧೮

ಅರ್ಥ
ಮನುಷ್ಯನನ್ನು ನಾಶಮಾಡುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರುಬಗೆಯ ಒಳಗಿನ ಶತ್ರುಗಳನ್ನು ಗೆಲ್ಲಲು ಸಾಧ್ಯವಾಗದ ನಿನಗೆ ಹೊರಗಿನ ಯಾವ ಹಗೆಗಳನ್ನು ಗೆಲ್ಲಲು ಸಾಧ್ಯವಾದೀತು? ನಿನ್ನ ಒಳಗಿನ ಬಯಕೆಗಳನ್ನು ನಿಗ್ರಹಿಸಲಾಗದ ನಿನಗೆ ಯಾವ ಹೊರಗಿನ ದೇಶವನ್ನು ನಿಯಂತ್ರಿಸಲು ಸಾಧ್ಯ? ತಪಸ್ಸಿನಿಂದ ಪಡೆದ ತೇಜಸ್ಸಿನಿಂದ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಹೇಗೆ ಬಳಸಬೇಕೆಂಬುದೇ ಗೊತ್ತಿಲ್ಲದ ನೀನು ರಾಜ್ಯದ ಬೊಕ್ಕಸಗಳನ್ನು ಹೇಗೆ ಸಮರ್ಥವಾಗಿ ಬಳಸಬಲ್ಲೆ? ಕಣ್ಣುಕಾಣದ(ವಿವೇಕಹೀನನಾದ) ಕಡುಪಾಪಿ, ಮೂರ್ಖ ಕೌಶಿಕ ಕೇಳು ಕೇಳು ಎಂದರು.
ಪ್ರಜೆಗಳ ದೃಷ್ಟಿ ಈಗ ರಾಜನ ಮೇಲೆ ಹರಿಯುತ್ತದೆ.

ಪದ್ಯ

ಪುರದ ಪುಣ್ಯಂ ಪುರುಷರೂಪಿಂದೆ ಪೋಗುತಿದೆ
ಪರಿಜನದ ಭಾಗ್ಯವಡವಿಗೆ ನಡೆಯುತಿದೆ ಸಪ್ತ
ಶರಧಿ ಪರಿವೃತಧರೆಯ ಸಿರಿಯ ಸೊಬಗಜ್ಞಾತವಾಸಕ್ಕೆ ಪೋಗುತಿದೆಕೋ
ಎರೆವ ದೀನಾನಾಥರಾನಂದವಡಗುತಿದೆ
ವರಮುನೀಂದ್ರರ ಯಾಗರಕ್ಷೆ ಬಲವಳಿಯುತಿದೆ
ನಿರುತವೆಂದೊಂದಾಗಿ ಬಂದು ಸಂದಿಸಿ ನಿಂದ ಮಂದಿ ನೆರೆ ಮೊರೆಯಿಟ್ಟುದು ೨೧೯

ಅರ್ಥ
ಪುರದ ಪುಣ್ಯವೇ ಪುರುಷರೂಪವಾಗಿ ಹೋಗುತ್ತಿದೆ. ಸಮಸ್ತ ಪ್ರಜಾಜನಗಳ ಭಾಗ್ಯವೇ ಕಾಡಿಗೆ ನಡೆಯುತ್ತಿದೆ, ಸಪ್ತಸಾಗರದದಿಂದ ಆವರಿಸಿದ ಈ ಭೂಮಂಡಲದ ಸಂಪತ್ತು, ಸೌಭಾಗ್ಯಗಳು ಯಾವುದೋ ಕಾಣದ ಲೋಕಕ್ಕೆ ಹೊರಟುಹೋಗುತ್ತಿದೆ, ನೋಡಿ ನೋಡಿ, ಭಿಕ್ಷುಕರ, ದೀನರ, ಅನಾಥರ ಸಂತೋಷ ಮಾಯವಾಗುತ್ತಿದೆ, ಮುನಿಶ್ರೇಷ್ಠರ ಯಾಗರಕ್ಷೆಯ ಶಕ್ತಿಯೇ ಕುಂದಿಹೋಗುತ್ತಿದೆ, ಇದು ನಿಜ. ಎನ್ನುತ್ತ ಪ್ರತಿಯೊಬ್ಬರೂ ಒಟ್ಟಾಗಿ ಬಂದು ನಿಂತು ವಿಧವಿಧವಾಗಿ ಬೊಬ್ಬಿಟ್ಟು ಗೋಳಾಡುತ್ತಿದ್ದರು.

ವಿಶೇಷ ವಿಚಾರ
ರಾಜನನ್ನು ನಗರದ ಪುಣ್ಯ, ಭಾಗ್ಯ, ಸಂಪತ್ತು, ಸಿರಿ, ಶಕ್ತಿ ಎಂಬಿತ್ಯಾದಿಯಾಗಿ ಕರೆಕರೆದು ರೋದಿಸುವುದರ ಹಿಂದೆ ರಾಜನಾದವನು ಪ್ರಜೆಗಳ ಕ್ಷೇಮಕ್ಕಾಗಿ ಯಾವ್ಯಾವ ಬಗೆಗಳಲ್ಲಿ ದುಡಿಯಬೇಕು, ಅವನ ಕರ್ತವ್ಯಗಳೇನು ಎಂಬುದನ್ನು ತಿಳಿಸುವುದರೊಂದಿಗೆ ಹರಿಶ್ಚಂದ್ರ ಪ್ರಜೆಗಳ ಪಾಲಿಗೆ ಈ ಎಲ್ಲವೂ ಆಗಿದ್ದ ಎನ್ನುವುದು ಧ್ವನಿತವಾಗುತ್ತದೆ.
ಪ್ರಜೆಗಳು ಪರಿಪರಿಯಾಗಿ ಬೇಡಿ ನಿಲ್ಲಿಸಲು ಪ್ರಯತ್ನಿಸಿದರೂ ರಾಜನ ನಿಲುವಿನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.

ಪದ್ಯ

ವಸುಧೆ ಬಾಯ್ಬಿಡೆ ದೆಸೆಗಳಸವಳಿದು ಮರುಗೆ ನಿ
ಟ್ಟಿಸಲಾರದಂಬರಂ ಕಂಬನಿಯನುಗುಳೆ ಶೋ
ಕಿಸುವ ಪರಿಜನದಳಲನಾರಿಸುತ ಪಾಲಿಸುತ ಸರದೋರಿನ ಸಂತವಿಡುತ
ಮಸಗಿ ಪುರಮಂ ಮೀರಿ ಹೋಗುತ್ತ ಹಿಂದೆ ಸಂ
ದಿಸಿ ಬಪ್ಪ ಕೌಶಿಕನ ಕಂಡು ನಿಂದವನೀಶ
ನೊಸೆದು ನಿಲಿಸುವ ಭರದೊಳೊಂದೆರಡು ಮಾತನಾಡಿದನದೇವಣ್ಣಿಸುವೆನು ೨೨೦

ಅರ್ಥ
ರಾಜ ಹೊರಟುಹೋಗುತ್ತಿದ್ದಂತೆ ಇಡೀ ಭೂಮಂಡಲವೇ ಬಾಯಿತೆರೆದು ಅತ್ತಿತು. ದಿಕ್ಕುದಿಕ್ಕುಗಳು ಶಕ್ತಿ ಕಳೆದುಕೊಂಡಂತೆ ದುಃಖಿಸಿದುವು, ರಾಜನ ನಿರ್ಗಮನವನ್ನು ನೋಡಲಾರದೆ ಆಕಾಶವೇ ಕಂಬನಿ ಸೂಸಿತು. ಕಣ್ಣೀರು ಹಾಕಿ ಅಳುತ್ತಿರುವ ಪ್ರಜೆಗಳ ನೋವನ್ನು ಕಂಡು ಅವರಿಗೆ ಸಮಾಧಾನದ ಮಾತುಗಳನ್ನು ಹೇಳಿ ದುಃಖವನ್ನು ನಿವಾರಿಸುತ್ತ ನಗರದ ಗಡಿಯನ್ನು ದಾಟಿ ಹೊರಗೆ ಹೋಗುವ ಸಮಯದಲ್ಲಿ ರಾಜ ತನ್ನ ಜೊತೆಗೇ ಬಂದ ವಿಶ್ವಾಮಿತ್ರನನ್ನು ನೋಡಿ ನಿಂತುಕೊಂಡು ಮುನಿಗೂ ಧೈರ್ಯ ಮತ್ತು ಸಾಂತ್ವನದ ಮಾತುಗಳನ್ನು ಆಡಿದನು ಎಂದರೆ ಅದನ್ನು ಏನೆಂದು ವರ್ಣಿಸಲಿ?

ಪದ್ಯ

ಹಿಂದೆ ರಾಜ್ಯಂ ಗೆಯ್ವ ಗರ್ವದಿಂ ಹೊಲತಿಯರ
ತಂದು ಕುಲಮಂ ಕೆಡಿಸಲಾರದಳಲಿಂ ನಿಮ್ಮ
ನೊಂದೊಂದನೆಂದು ದಟ್ಟಿಸಿ ಜರೆದು ಮಾರುತ್ತರಂಗೊಟ್ಟು ಕೆಟ್ಟು ನುಡಿದು
ನಿಂದೆಗೆಯ್ದನ್ಯಾಯಿ ಪಾಪಿ ಚಂಡಾಲನೆ
ನ್ನಿಂದಧಮರಿಲ್ಲಯ್ಯ ಸರ್ವಾಪರಾಧಿಯಾಂ
ತಂದೆ ಕರುಣಂಗೆಡದಿರೆಂದು ಮುನಿಯಂ ಬೇಡಿಕೊಂಡನು ಹರಿಶ್ಚಂದ್ರನು ೨೨೧

ಅರ್ಥ
ಎಲೈ ತಂದೆ ವಿಶ್ವಾಮಿತ್ರನೇ, ಆದಿನ ರಾಜ್ಯಭಾರಮಾಡುವ ಹುಮ್ಮಸ್ಸಿನಿಂದ ರಾಜನೆಂಬ ಗರ್ವದಿಂದ ಹೊಲತಿಯರನ್ನು ಮದುವೆಯಾಗಿ ನನ್ನ ಕುಲವನ್ನು ಕೆಡಿಸಲಾರದ ಕಾರಣಕ್ಕೆ ನಿಮ್ಮನ್ನು ಏರುಧ್ವನಿಯಲ್ಲಿ ಏನಾದರೂ ಅಪಚಾರದ ಮಾತನಾಡಿದೆ. ನಿಮಗೆ ಅನ್ಯಾಯವನ್ನು ಮಾಡಿದ ಪಾಪಿ, ಚಂಡಾಲ ನಾನು. ನನಗಿಂತ ಕೆಟ್ಟವರು ಯಾರೂ ಇಲ್ಲ, ಸರ್ವ ಅಪರಾಧವೂ ನನ್ನದು. ನನ್ನನ್ನು ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡನು ಹರಿಶ್ಚಂದ್ರನು.

ವಿಶೇಷ ವಿಚಾರ
ಮನುಷ್ಯರಲ್ಲಿ ಮೂರು ವಿಧ. ತಾಮಸ, ರಾಜಸ, ಸಾತ್ವಿಕ ಅಥವಾ ಅಧಮ, ಮಧ್ಯಮ ಉತ್ತಮ. ಇನ್ನೊಬ್ಬರು ಏನು ತೊಂದರೆ ಮಾಡದಿದ್ದರೂ ಅವರಿಗೆ ತೊಂದರೆ ಕೊಡುವವನು ಅಧಮ, ಇನ್ನೊಬ್ಬರು ತೊಂದರೆ ಮಾಡಿದಾಗ ತಿರುಗೇಟು ಕೊಡುವವನು ಮಧ್ಯಮ. ಇನ್ನೊಬ್ಬರು ತೊಂದರೆ ಕೊಟ್ಟರೂ ಅವರನ್ನು ಕ್ಷಮಿಸುವವನು ಉತ್ತಮ. ರಾಜ ಇಲ್ಲಿ ತನ್ನದೇ ತಪ್ಪು ಎಂಬರ್ಥದಲ್ಲಿ ತನ್ನನ್ನು ಅಧಮ, ನೀಚ ಎಂದು ಕರೆದುಕೊಳ್ಳುವುದರ ಮೂಲಕ ತಾನು ಎಷ್ಟು ಉತ್ತಮನೆಂಬುದನ್ನು ರುಜುವಾತು ಪಡಿಸುತ್ತಾನೆ.

ಹಂಚಿಕೊಳ್ಳಿ: https://shampa.org/9hoz

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ