ಸೆಪ್ಟೆಂಬರ್ 20, 2024

ಕಾವ್ಯರಸಯಾನ ಮುಂದುವರಿದುದು: ೦೪..೨೦೨೩

ಈ ದಿನದ ರೆಕಾರ್ಡಿಂಗ್

ಇಲ್ಲಿಯವರೆಗೆ
ರಾಜ ವಿಶ್ವಾಮಿತ್ರನ ಕಡೆಯವರ ಕಾವಲುಗಾರಿಕೆಯಲ್ಲಿ ನಗರಕ್ಕೆ ಬಂದಾಗ ರಾಜನನ್ನು ಸ್ವಾಗತಿಸಲು ಕಾದುನಿಂತಿದ್ದ ಪ್ರಜೆಗಳು ರಾಜನಿರಬೇಕಾದ ಜಾಗದಲ್ಲಿ ವಿಶ್ವಾಮಿತ್ರನನ್ನು ನೋಡಿ ಆಘಾತಕ್ಕೆ ಒಳಗಾಗುತ್ತಾರೆ. ಅದನ್ನು ನೋಡಿ ವಿಶ್ವಾಮಿತ್ರ ಈಗ ಮತ್ತೆ ರಾಜನ ಮನವೊಲಿಸಲು ಪ್ರಯತ್ನಿಸುತ್ತಾನೆ. ಹೆತ್ತ ತಾಯಿಯನ್ನು ಮಾರಿ ತೊತ್ತನ್ನು, ಮಾಣಿಕ್ಯದ ಒಡವೆಯನ್ನು ಅಡವಿಟ್ಟು ಗಾಜನ್ನು ಧರಿಸುವಂತೆ ಹೊಲತಿಯರನ್ನು ಸೇರಲಾರೆನೆಂದು ಖಡಾಖಂಡಿತವಾಗಿ ನಿರಾಕರಿಸಿದಾಗ ವಿಶ್ವಾಮಿತ್ರ ಸಮಸ್ತವನ್ನೂ ಒಂದೊಂದಾಗಿ ಒಪ್ಪಿಸಿ ಕೊಟ್ಟು ಹೋಗು ಅಂದಾಗ ರಾಜ ಹಾಗೆಯೇ ಮಾಡುತ್ತಾನೆ. ಆದರೆ ಪ್ರಜಾಜನರು ರಾಜನನ್ನು ಅಗಲಿರಲಾರದೆ ಗೋಳಾಡುತ್ತಾರೆ. ರಾಜ ಮುಂದೆ ಅನುಭವಿಸಬಹುದಾದ ಕಷ್ಟಗಳನ್ನು ಊಹಿಸಿ ಕಣ್ಣೀರು ಹಾಕುತ್ತಾರೆ. ವಿಶ್ವಾಮಿತ್ರನನ್ನು ಮನಸ್ಸಿಗೆ ತೋಚಿದಂತೆ ನಿಂದಿಸುತ್ತಾರೆ. ರಾಜ ಕೊನೆಯ ಬಾರಿ ವಿಶ್ವಾಮಿತ್ರನ ಕ್ಷಮೆ ಕೇಳಿ ಕಾಶಿಯತ್ತ ಹೊರಡುತ್ತಾನೆ. ಪುರದ ಪುಣ್ಯವೇ ಪುರುಷಾಕಾರವಾಗಿ ಹೋಗುತ್ತಿರುವುದನ್ನು ನೋಡಿ ರಾಜನನ್ನು ಬಿಟ್ಟಿರಲಾರದೆ ಪ್ರಜೆಗಳೂ ಹಿಂಬಾಲಿಸುತ್ತಾರೆ. ರಾಜ ಅವರನ್ನು ತಡೆದು ಸಮಾಧಾನದ ಮಾತುಗಳಿಂದ ಒಲಿಸಲು ಪ್ರಯತ್ನಿಸುತ್ತಾನೆ.

ಪದ್ಯ

ಮನದೊಳಗೆ ಮರುಗದಿರಿಚಿಂತಿಸದಿರಳಲದಿರಿ
ಮುನಿಯದಿರಿ ನೋಯದಿರಿ ಧೃತಿಗೆಡದಿರೀಗಳೆರ
ಡನೆಯ ಶಿವನೆನಿಪ ಕೌಶಿಕನೊಡೆಯನಾದನಾತನ ಪಾದಪಂಕಜಕ್ಕೆ
ಎನಗೆ ಬೆಸಕೈವಂತೆ ಬೆಸಕೈವುದಂಜುವುದು
ವಿನಯಮಂ ನುಡಿವುದೋಲೈಸುತಿಹುದೆಂದು ಪರಿ
ಜನಕೆ ಕೈಮುಗಿದೆಯ್ದೆ ಬೇಡಿಕೊಂಡು ಧೈರ್ಯನಿಧಿ ಹರಿಶ್ಚಂದ್ರ ನೃಪನು ೨೨೨

ಅರ್ಥ
ʻಮನಸ್ಸಿನಲ್ಲಿ ಮರುಗಬೇಡಿ, ಕೊರಗಬೇಡಿ, ಚಿಂತಿಸಬೇಡಿ, ಅಳಬೇಡಿ, ಕೋಪಮಾಡಬೇಡಿ, ನೊಂದುಕೊಳ್ಳಬೇಡಿ, ಧೈರ್ಯ ಕಳೆದುಕೊಳ್ಳಬೇಡಿ. ಈಗ ನಿಮಗೆ ರಾಜನಾಗಿ ಬಂದವನು ಸಾಮಾನ್ಯನಲ್ಲ. ಸಾಕ್ಷಾತ್‌ ಪರಶಿವನೆನಿಸಿಕೊಂಡ ವಿಶ್ವಾಮಿತ್ರ. ಆತನೇ ಇನ್ನು ಮುಂದೆ ನಿಮ್ಮ ಒಡೆಯ. ನನಗೆ ಇದುವರೆಗೆ ಯಾವ ಬಗೆಯ ಸೇವೆಯನ್ನು ಸಲ್ಲಿಸುತ್ತಿದ್ದಿರೋ ಅದೇರೀತಿಯಲ್ಲಿ ವಿಶ್ವಾಮಿತ್ರನ ಸೇವೆಯನ್ನು ನೀವು ಮಾಡಬೇಕು. ರಾಜಾಜ್ಞೆಯನ್ನು ಪಾಲಿಸಬೇಕು. ರಾಜನ ಬಗ್ಗೆ ಭಯ, ಭಕ್ತಿಯನ್ನು ಇಟ್ಟುಕೊಳ್ಳಬೇಕು. ವಿಧೇಯರಾಗಿ ನಡೆದುಕೊಳ್ಳಬೇಕುʼ ಎನ್ನುತ್ತ ತನ್ನ ಪ್ರಜೆಗಳಿಗೆ ಕೈಮುಗಿದು ರಾಜ ಬೇಡಿಕೊಂಡನು.

ಪದ್ಯ

ಧರೆಗಧಿಕವೆನಿಪ ರವಿವಂಶದಿಕ್ಷ್ವಾಕು ಭೂ
ವರನು ಮೊದಲನ್ವಯಾಗತವಾಗಿ ಬಂದುದೀ
ಪರಿವಾರವೀ ದೇಶವೀ ನಗರವಿಂದುತನಕಾವೆಡರು ಬಡತನವನು
ನೆರೆದರಿಯದಯ್ಯ ನೀವಿನ್ನಿದಂ ರಕ್ಷಿಪುದು
ಹೊರೆವುದಿನಿತಂ ಬೇಡಿ ಪಡೆದೆ ನಾ ನಿಮ್ಮಲ್ಲಿ
ಕರುಣಿಸೆನಗೆಂದು ಕೈಮುಗಿದು ಮುನಿಗಪ್ಪಯಿಸಿ ಕೊಟ್ಟನು ಹರಿಶ್ಚಂದ್ರ ನೃಪನು ೨೨೩

ಅರ್ಥ
ಈ ಭೂಮಂಡಲದಲ್ಲೇ ಅತ್ಯಂತ ಶ್ರೇಷ್ಠವಾದ ಸೂರ್ಯವಂಶದಲ್ಲಿ ಇಕ್ಷ್ವಾಕು ಮಹಾರಾಜನಿಂದ ಆರಂಭವಾಗಿ ಇದುವರೆಗೂ ವಂಶಪಾರಂಪರ್ಯವಾಗಿ ಬಂದ ಈ ಅರಸೊತ್ತಿಗೆ, ಪರಿವಾರ, ದೇಶ, ನಗರ ಇದುವರೆಗೂ ಯಾವುದೇ ಕಷ್ಟ, ಸಮಸ್ಯೆ, ಬಡತನವನ್ನು ಅನುಭವಿಸಿ ತಿಳಿಯದು. ನೀವು ಇನ್ನುಮುಂದೆ ಇವುಗಳನ್ನು ಅದೇರೀತಿ ನೀವು ಕಾಪಾಡಬೇಕು. ಇಷ್ಟನ್ನು ನಾನು ನಿಮ್ಮಲ್ಲಿ ಬೇಡಿ ಪಡೆದಿದ್ದೇನೆ. ಇನ್ನು ನನ್ನನ್ನು ಕರುಣಿಸಿ ಕಳುಹಿಸಿ ಎಂದು ಕೈಮುಗಿದು ರಾಜ ಮುನಿಗೆ ಒಪ್ಪಿಸಿಕೊಟ್ಟನು.

ವಿಶೇಷ ವಿಚಾರ
ʻಬೇಡಿ ಪಡೆದೆಂʼ ಎಂಬ ಪ್ರಯೋಗದ ವಿಶಿಷ್ಟ ಅರ್ಥವನ್ನು ಪರಾಂಬರಿಸಬೇಕು.

ಪದ್ಯ

ಒಸೆದೀವ ತೆರಕಾರನಾರಾತನಂ ನಿಯಾ
ಮಿಸು ತಂದೆ ಎನೆ ತನ್ನ ಶಿಷ್ಯಾಳಿಯೊಳು ನೋಡಿ
ಹುಸಿಯಸೂಯಾ ನೀಚವೃತ್ತಿ ನಿರ್ದಾಕ್ಷಿಣ್ಯ ನಿಷ್ಕರುಣ ನೀತಿಗಳಲಿ
ಹೆಸರುಳ್ಳ ಹಿರಿಯ ನಕ್ಷತ್ರಕನೆನಿಪ್ಪ ಮಾ
ನಸನನೆಕ್ಕಟಿಗರೆದು ಕೈವಿಡಿದು ಕಿವಿಯೊಡ್ಡಿ
ವಸುಧಾಧಿಪತಿಯ ಬಳಿವಿಡಿದು ಕಳುಹಲು ಬುದ್ಧಿಗಲಿಸಿದನದೇವೊಗಳ್ವೆನು ೨೨೪

ಅರ್ಥ
ನಾನು ಧನವನ್ನು ಕೊಡಬೇಕಾದ ವಸೂಲಿದಾರನು ಯಾರು? ಅವನನ್ನು ನನ್ನ ಜೊತೆ ಕಳುಹಿಸಿ ತಂದೆ ಎಂದು ರಾಜ ಹೇಳಿದಾಗ ವಿಶ್ವಾಮಿತ್ರ ತನ್ನ ಶಿಷ್ಯರಲ್ಲಿ ಸುಳ್ಳು, ಅಸೂಯೆ, ನೀಚಬುದ್ಧಿ, ನಿರ್ದಾಕ್ಷಿಣ್ಯ, ನಿಷ್ಕರುಣ ನೀತಿಗಳಲ್ಲಿ ಹೆಸರಾಂತ ನಕ್ಷತ್ರಿಕನೆಂಬ ಮನುಷ್ಯನನ್ನು ಏಕಾಂತಕ್ಕೆ ಕರೆದು ಕೈಹಿಡಿದು ಕಿವಿಯಲ್ಲಿ ಮಹಾರಾಜನನ್ನು ಹಿಂಬಾಲಿಸುವಾಗ ಅನುಸರಿಸಬೇಕಾದ ದುಷ್ಟಕ್ರಮಗಳನ್ನು ಬಹುಚೆನ್ನಾಗಿ ಬೋಧಿಸುತ್ತಾನೆ ವಿಶ್ವಾಮಿತ್ರ.

ಪದ್ಯ

ಕೊಡುವೊಡವೆ ಬರಲಿ ಬಾರದೆ ಕೆಡಲಿ ಕಾನನದ
ನಡುವೆ ತಗಹಿನಲಿರಿಸಿ ಕೆಲವುದಿನವುಪವಾಸ
ಬಡಸಿರ್ದು ಕೆಲವು ದಿನ ದೇಹವನುವಲ್ಲೆಂದು ನೆವವೊಡ್ಡಿ ಕೆಲವುದಿವಸ
ನಡೆವಾಗ ದಾರಿ ತಪ್ಪಿಸಿ ತರುಹಿ(ಅಡ್ಡಗಟ್ಟಿ) ಕೆಲವುದಿನ
ಪಡಿಯ ಬೀಯಕ್ಕಾಣೆಯಿಟ್ಟಿಂತು ಕೆಲವುದಿನ
ಕೆಡಿಸಿ ನುಡಿದವಧಿಯಾಯ್ತೆಂದು ಧರೆಯರಿಯೆ ನೃಪನಂ ಹುಸಿಕನೆನಿಸೆಂದನು ೨೨೫

ಅರ್ಥ
ʻರಾಜ ಕೊಡಬೇಕಾದ ಧನ ಬರಲೀ ಬರದಿರಲಿ, ನೀನು ಮಾತ್ರ ಕಾಡಿನ ನಡುವೆ ಅವರನ್ನು ತಡೆದು ಕೆಲವು ದಿನ ಉಪವಾಸವಿರುವಂತೆ ಮಾಡಿ, ಕೆಲವು ದಿನ ನಿನ್ನ ಆರೋಗ್ಯ ಸರಿಯಿಲ್ಲವೆಂಬ ನೆಪಹೂಡಿ, ಕೆಲವು ದಿನ ನಡೆಯುವಾಗ ದಾರಿ ತಪ್ಪುವಂತೆ ಮಾಡಿ, ಕೆಲವು ದಿನ ಅಡ್ಡಗಟ್ಟಿ ನಿನ್ನ ಖರ್ಚಿನ ಹಣಕ್ಕಾಗಿ ಪೀಡಿಸಿ ಕೊನೆಗೆ ಅವಧಿ ಮುಗಿಯಿತು ಎಂದು ಹೇಳಿ ಲೋಕವೇ ತಿಳಿಯುವಂತೆ ಅವನನ್ನು ಸುಳ್ಳುಗಾರನನ್ನಾಗಿ ಮಾಡುʼ ಎಂದನು.

ಪದ್ಯ

ಕರುಣಿಸದಿರನುಗೊಡದಿರಗಲದಿರು ಅನುಸರಿಸ
ದಿರು ಬಟ್ಟೆಯೂರಲೆಡೆಗೆಯ್ಯದಿರು ಕಡೆಗಾವ
ಪರಿಯೊಳಾವಾವ ನಿಗ್ರಹನಿರೋಧಾಯಾಸವಡಸುವಂದದಿ ಮಾಳ್ಪುದು
ಗುರುಭಕ್ತನಾದಡತಿಬುದ್ಧಿಯುಳ್ಳವನಾದ
ಡರಸನಂ ಕೆಡಿಸಿ ಹುಸಿತೋರೆಂದಡೆನಗವಂ
ತೆರಳುವವನೇ ದೇವ ಎನೆ ನೆವಕೆ ನೀನಿರಾಂ ಬಂದು ಕಾಡುವೆನೆಂದನು ೨೨೬

ಅರ್ಥ
ಅವರಿಗೆ ಲವಲೇಶವೂ ಕರುಣೆಯನ್ನು ತೋರಬೇಡ. ಅವರು ಹೇಳಿದಂತೆ ಕೇಳಬೇಡ. ಅವರನ್ನು ಬಿಟ್ಟಿರಬೇಡ, ಅವರ ಮಾತನ್ನು ಕೇಳಬೇಡ, ವಿಶ್ರಾಂತಿ ಪಡೆಲು ಅವಕಾಶ ಕೊಡಬೇಡ, ಯಾವ್ಯಾವ ರೀತಿಯಲ್ಲಿ ಸಾಧ್ಯವೋ ಆ ಎಲ್ಲ ತಂತ್ರಗಳನ್ನೂ ಬಳಸಿ ಅವರನ್ನು ಸುಳ್ಳುಗಾರನನ್ನಾಗಿ ಮಾಡಬೇಕು, ನೀನು ನನ್ನ ಪ್ರಿಯ ಶಿಷ್ಯನಾಗಿದ್ದರೆ, ನನ್ನ ಮೇಲೆ ನಿನಗೆ ಭಕ್ತಿಯಿದ್ದರೆ, ಬುದ್ಧಿವಂತನಾಗಿದ್ದರೆ ಈ ಕೆಲಸವನ್ನು ಸಾಧಿಸು ಎಂದಾಗ ನನ್ನ ಮಾತಿಗೆಲ್ಲ ಅವನು ಒಡಂಬಡುವನೇ ದೇವ ಎಂದು ನಕ್ಷತ್ರಿಕ ಕೇಳಿದಾಗ ನೆಪಕ್ಕೆ ಮಾತ್ರ ನೀನಿದ್ದರೆ ಸಾಕು, ನಾನೇ ಬಂದು ಕಾಟಕೊಡುತ್ತೇನೆ ಎನ್ನುತ್ತಾನೆ ವಿಶ್ವಾಮಿತ್ರ.

ಪದ್ಯ

ಬಿಸಿಲಾಗಿ ಬಿರುಗಾಳಿಯಾಗಿ ಕಲುನೆಲನಾಗಿ
ವಿಷಮಾಗ್ನಿಯಾಗಿ ನಾನಾಕ್ರೂರಮೃಗವಾಗಿ
ಮಸಗಿ ಘೋರಾರಣ್ಯವಾಗಿ ಗರ್ಜಿಸಿ ಕವಿವ ಭೂತಭೇತಾಳರಾಗಿ
ಹಸಿವು ನೀರಡಿಕೆ ನಿದ್ರಾಲಸ್ಯವಾಗಿ ಸಂ
ದಿಸಿ ಹೋಗಿ ಹೊಕ್ಕಲ್ಲಿ ಹೊಕ್ಕು ಧಾವತಿಗೊಳಿಸಿ
ಹುಸಿಗೆ ಹೂಂಕೊಳಿಸುವೆಂ ಭೂಭುಜನನೆನ್ನಿಂದ ಬಲ್ಲಿದರದಾರೆಂದನು ೨೨೭

ಅರ್ಥ
ಬಿಸಿಲಾಗಿ, ಬಿರುಗಾಳಿಯಾಗಿ, ಕಲ್ಲುನೆಲವಾಗಿ, ಭಯಂಕರವಾದ ಬೆಂಕಿಯಾಗಿ ನಾನಾಬಗೆಯ ಕ್ರೂರಮೃಗಗಳಾಗಿ ಘೋರವಾದ ಅರಣ್ಯವಾಗಿ ಗರ್ಜಿಸುವ ಭೂತ ಭೇತಾಳಗಳಾಗಿ ಹಸಿವು, ಬಾಯಾರಿಕೆ, ನಿದ್ರೆ, ಆಲಸ್ಯವಾಗಿ ಅವನು ಹೋದಲ್ಲಿ ಹೋಗಿ ಅತ್ಯಂತ ಹಿಂಸೆಯನ್ನು ಕೊಟ್ಟು ಆ ರಾಜನನ್ನು ಸುಳ್ಳಿಗೆ ಒಪ್ಪುವಂತೆ ಮಾಡಿಯೇ ಮಾಡುತ್ತೇನೆ, ಈ ಕೆಲಸಕ್ಕೆ ನನಗಿಂತ ಸಮರ್ಥರು ಯಾರಿದ್ದಾರೆ ಎನ್ನುತ್ತಾನೆ ಮುನಿ.

ಪದ್ಯ

ಬೇರೊಬ್ಬನಲ್ಲೀತನೀ ಬಂದನಾಯಾಸ
ಕಾರನತಿಗರುವನತಿಸುಖಿಯೇನನೆಂದುದಂ
ಮೀರದೀವುದು ಧನವನರಸ ಹೋಗೆಂದ ಮುನಿವರನ ಚರಣಕ್ಕೆ ನಮಿಸಿ
ನೀರೆ ಸತಿಸುತಮಂತ್ರಿವೆರಸಿ ರಿಪುಬಲಸೂರೆ
ಕಾರನೊಲವಿಂ ತಿರುಗಿ ನಡೆವಾಗ ಮಂದಿ ಬಾ
ಯಾರುತ್ತ ಚೀರುತ್ತ ಗೋಳಿಡುತ್ತಳುತೆದ್ದು ನಡೆದುದೇವಣ್ಣಿಸುವೆನು ೨೨೮

ಅರ್ಥ
ವಿಶ್ವಾಮಿತ್ರ ನಕ್ಷತ್ರಕನನ್ನು ರಾಜನ ಬಳಿಗೆ ಕರೆದುಕೊಂಡು ಹೋಗಿ, ನೋಡು ರಾಜ, ಇನ್ಯಾರೂ ಅಲ್ಲ, ಇವನೇ ನಿನ್ನ ಜೊತೆಗೆ ಬರುವವನು, ಈತ ಕೋಮಲ, ಅತಿ ಸುಖಿ, ಅತಿ ಸ್ವಾಭಿಮಾನಿ. ಅವನು ಏನು ಹೇಳಿದರೂ ಅನುಸರಿಸಿಕೊಂಡು ಅವನ ಕೈಯಲ್ಲಿ ಧನವನ್ನು ಕೊಡು. ಎಂದಾಗ ಮುನಿಯ ಕಾಲುಗಳಿಗೆ ನಮಿಸಿ ಪತ್ನಿ ಮಗ ಮತ್ತು ಮಂತ್ರಿಗಳೊಂದಿಗೆ ರಾಜ ಹಿಂತಿರುಗಿ ನಡೆಯುವಾಗ ಜನರೆಲ್ಲರೂ ಬೊಬ್ಬಿಟ್ಟು ಚೀರಾಡುತ್ತ ಗೋಳಾಡುತ್ತ ಅವನ ಹಿಂದೆಯೇ ತಾವೂ ಎದ್ದು ನಡೆದರು.

ಪದ್ಯ

ತಡೆಬಿಟ್ಟ ಕಂಬನಿಯ ಕೈಯಿಂದ ಮುಂಗಾಣ
ದೆಡಹುತ್ತ ತಾಗುತ್ತ ಬೀಳುತೇಳುತ್ತೊರಲು
ತೊಡವರ್ಪ ಪರಿವಾರಮಂ ಕಂಡು ಕೈಯೆತ್ತಿ ಹೋ ಎಂದು ನಿಲಿಸಿ ನೃಪನು
ಕಡೆಗೆನ್ನ ಸತ್ಯಕ್ಕೆ ಹಿತವರಾದವರ್ಗಳಿ
ದ್ದೆಡೆಯೊಳಿದ್ದೆನ್ನ ಲೇಸಂ ಬಯಸುತಿಹುದು ಬಂ
ದಡೆ ತ್ರಿಶಂಕುನರೇಂದ್ರನಾಣೆಯೆನೆ ಮೀರಿದೆವು ಬಂದಲ್ಲದಿರೆವೆಂದರು ೨೨೯

ಅರ್ಥ
ನಿರಂತರವಾಗಿ ಸುರಿಯುವ ಕಣ್ಣೀರಿನಿಂದ ಕಣ್ಣು ಕಾಣದೆ ಎಡುಹುತ್ತ, ಬೀಳುತ್ತ ಏಳುತ್ತ ಬೊಬ್ಬಿಡುತ್ತ ಜೊತೆಗೆ ಬರುವ ಪರಿವಾರವನ್ನು ನೋಡಿ ರಾಜ ಕೈಯೆತ್ತಿ ಅವರನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ನನ್ನ ಸತ್ಯವನ್ನು ನನ್ನ ಒಳಿತನ್ನು ಬಯಸುವಿರಾದರೆ ಒಂದು ಹೆಜ್ಜೆಯನ್ನೂ ಮುಂದಿಡದೆ ಇದ್ದಲ್ಲೇ ಇದ್ದು ನನ್ನ ಹಿತವನ್ನೇ ಬಯಸುತ್ತಿರಬೇಕು. ನನ್ನನ್ನು ಹಿಂಬಾಲಿಸಿದರೆ ನಿಮಗೆ ತಂದೆ ತ್ರಿಶಂಕುವಿನ ಮೇಲೆ ಆಣೆ ಅಂದಾಗ ಇಲ್ಲ, ನಿಮ್ಮ ಆಣೆಯನ್ನೂ ನಾವು ಮೀರಿದ್ದೇವೆ, ನಿಮ್ಮ ಜೊತೆಗೇ ಬಂದಲ್ಲದೆ ಇಲ್ಲಿರಲಾರೆವು ಎನ್ನುತ್ತಾರೆ ಪ್ರಜೆಗಳು.

ಪದ್ಯ

ಇಂದುತನಕನೃತವಂಟದ ಸೂರ್ಯವಂಶಕ್ಕೆ
ಕುಂದ ಬಯಸುವರೆ ನಾನಳುಪುತಿರೆ( ಅಳುಕಿದರೆ, ಹಿಂಜರಿದರೆ) ಕಂಡು ಬೇ
ಡೆಂದೆಂಬರಲ್ಲದಿಂತಳಲ್ವರೇ ಬಳಲ್ವರೇ ಬಳಿಸಂದು ಬಹೆನೆಂಬರೆ
ಒಂದೆಡೆಯೊಳಿರ್ದು ಸಾಲವನು ನಿರ್ಣೈಸಿ ಮುದ
ದಿಂದ ಕರೆಸುವೆನೆನ್ನ ಕೂಡಿದಂ ಬಂದವರು
ಹಿಂದಿರ್ದು ಮುನಿಗೆ ಬೆಸಕೆಯ್ಯುತಿರಿಯೆಂದರಸನೆಲ್ಲರ್ಗೆ ಕೈಮುಗಿದನು ೨೩೦

ಅರ್ಥ
ಇದುವರೆಗೂ ಸುಳ್ಳೆಂದರೇನೆಂದರಿಯದ ಸೂರ್ಯವಂಶಕ್ಕೆ ಕಳಂಕವನ್ನು ಬಯಸುತ್ತೀರಾ? ನಾನೇನಾದರೂ ಹಿಂಜರಿದರೆ ಹಾಗೆ ಮಾಡಬೇಡವೆಂದು ತಿಳಿ ಹೇಳಬೇಕಾದವರು ಈ ರೀತಿಯಲ್ಲಿ ಶೋಕಿಸುತ್ತ ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತೇವೆನ್ನುವುದು ಸರಿಯಲ್ಲ. ನಾನು ಹೋಗಿ ಯಾವುದಾದರೊಂದು ನೆಲೆಯಲ್ಲಿ ಇದ್ದು ಸಾಲದ ಮೊತ್ತವನ್ನು ಸಂಪಾದಿಸಿ ನಿಮ್ಮನ್ನು ಕರೆಸಿಕೊಳ್ಳುತ್ತೇನೆ, ದಯವಿಟ್ಟು ನನ್ನ ಜೊತೆಗೆ ಬಂದವರೆಲ್ಲರೂ ಹಿಂದಿರುಗಿ ವಿಶ್ವಾಮಿತ್ರ ಮುನಿಯ ಸೇವೆಯನ್ನು ಮಾಡುತ್ತಿರಿ ಎಂದು ರಾಜ ಪ್ರಜೆಗಳಿಗೆ ಕೈಮುಗಿದು ಕೇಳಿಕೊಂಡನು.

ಪದ್ಯ

ಕಾಡಬೇಡಿನ್ನು ಚಲಬೇಡ ಕೋರಡಿಗತನ(ದುಷ್ಟತನ)
ಬೇಡ ಮೂರ್ಖತ್ವ ಬೇಡೆಂದೆರಡು ಕೈಮುಗಿದು
ಬೇಡಿಕೊಂಡೆಂ ನಿಮ್ಮನೆನಲೊಡಂಬಟ್ಟು ಬೀಳ್ಕೊಂಡೆವಿಂದೆಮ್ಮ ಚಿಂತೆ
ಬೇಡ ನೀನೊಲಿದತ್ತ ಹೋಗೆನಲು ಸಂತಸಂ
ಮಾಡಿ ನಡೆಗೊಂಡ ಭೂಪನಗುಣಂಗಳನು ಕೊಂ
ಡಾಡುತ್ತ ಹಲುಬುತ್ತ ನೋಡುತಿರ್ದುದು ಜನಂ ದೃಷ್ಟಿ ಸೈವೆರಗಾಗಲು ೨೩೧

ಅರ್ಥ
ಪ್ರಜೆಗಳು ರಾಜನ ಬಿನ್ನಹವನ್ನೂ ಲೆಕ್ಕಿಸದೆ ಮುಂದುವರಿಯುವುದನ್ನು ನೋಡಿ ಇನ್ನಷ್ಟು ದೈನ್ಯದಿಂದ ರಾಜ ಬೇಡಿಕೊಳ್ಳುತ್ತಾನೆ. ದಯವಿಟ್ಟು ನನ್ನನ್ನು ಕಾಡಬೇಡಿ, ಹಟಮಾಡಬೇಡಿ, ಕೆಟ್ಟವರಾಗಬೇಡಿ, ಬುದ್ಧಿಗೆಟ್ಟವರಂತೆ ವರ್ತಿಸಬೇಡಿ ನಿಮಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ ಎಂದಾಗ ಪ್ರಜೆಗಳು ರಾಜನ ಮಾತಿಗೆ ಒಪ್ಪಿ ಆಗಲಿ ರಾಜ, ನಮ್ಮ ಯೋಚನೆ ನಿಮಗೆ ಬೇಡ, ನಿಮಗೆ ಬೇಕಾದಲ್ಲಿಗೆ ಹೋಗಿ, ನಾವು ಬರುವುದಿಲ್ಲ ಎನ್ನುತ್ತ ರಾಜನ ಗುಣಗಳನ್ನು ಕೊಂಡಾಡುತ್ತ ಕಣ್ಣೀರು ಸುರಿಸುತ್ತ ರಾಜ ಹೋಗುವ ದಿಕ್ಕನೇ ನೋಡುತ್ತ ಅಚ್ಚರಿಗೊಂಡರು.
ರಾಜನ ನಿರ್ಗಮನದಿಂದ ಪ್ರಜೆಗಳಿಗಾದ ಪರಿಸ್ಥಿತಿಯನ್ನು ಮುಂದಿನ ಪದ್ಯ ವರ್ಣಿಸುತ್ತದೆ.

ಕಾವ್ಯರಸಯಾನ ಮುಂದುವರಿದುದು: ..೨೦೨೩

ಈ ದಿನದ ರೆಕಾರ್ಡಿಂಗ್

ಕಾವ್ಯರಸಯಾನ ಮುಂದುವರಿದುದು: ..೨೦೨೩

ಈ ದಿನದ ರೆಕಾರ್ಡಿಂಗ್

ಕಾವ್ಯರಸಯಾನ ಮುಂದುವರಿದುದು: ..೨೦೨೩

ಈ ದಿನದ ರೆಕಾರ್ಡಿಂಗ್

ಹಂಚಿಕೊಳ್ಳಿ: https://shampa.org/8abi

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ