ಸೆಪ್ಟೆಂಬರ್ 20, 2024

ಮಹಾಕವಿ ರಾಘವಾಂಕ ವಿರಚಿತ
ಹರಿಶ್ಚಂದ್ರ ಕಾವ್ಯ ರಸಯಾನ
ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್. ಕೃಷ್ಣ ಶಾಸ್ತ್ರೀ ಸಂಪಾದಿತ ಹರಿಶ್ಚಂದ್ರ ಕಾವ್ಯ ಸಂಗ್ರಹ

ಎಲ್ಲರಿಗೂ ನಮಸ್ಕಾರ.
ಕನ್ನಡ ಕಾವ್ಯ ರಸಯಾನಕ್ಕೆ ಆಗಮಿಸಿದ ಆದರಣೀಯ ಸಾಹಿತ್ಯಾಭಿಮಾನಿಗಳಿಗೆಲ್ಲ ಆತ್ಮೀಯವಾದ ಸ್ವಾಗತವನ್ನು ಕೋರುತ್ತೇನೆ.
ಶಂಪಾ ಪ್ರತಿಷ್ಠಾನದ ವತಿಯಂದ ನಡೆಸುವ ಆನ್‌ ಲೈನ್‌ ಕಾರ್ಯಕ್ರಮಗಳಲ್ಲಿ ಇದು ಎರಡನೆಯ ಪ್ರಯತ್ನ. ೨೦೧೭ರಲ್ಲಿ ಸ್ಥಾಪಿತವಾದ ಶಂಪಾ ಪ್ರತಿಷ್ಠಾನದಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದು ಕೊರೋನಾದ ಕಾಲದಲ್ಲಿ ಎರಡು ವರ್ಷ ಚಟುವಟಿಕೆಗಳು ನಿಂತುಹೋಗಿದ್ದುವು. ೨೦೨೨ ರಿಂದ ಕಾರ್ಯಕ್ರಮಗಳು ಪುನರಾರಂಭಗೊಂಡಾಗಲೇ ಆನ್‌ ಲೈನ್‌ ತರಗತಿಯ ಯೋಚನೆ ಹುಟ್ಟಿದ್ದು. ಇದಕ್ಕೆ ಮುಖ್ಯಪ್ರೇರಣೆ ಸಾಧನಕೇರಿ ಸಾಹಿತ್ಯವೇದಿಕೆಯ ಅಧ್ಯಕ್ಷೆ ವಸು ವತ್ಸಲೆಯವರು. ಅವರ ಆಸಕ್ತಿ, ಉತ್ಸಾಹ, ಕೇಳಿಕೆಯ ಫಲವಾಗಿ ೨೦೨೨ ಜೂನ್‌ ತಿಂಗಳಿನಿಂದ ೨೦೨೩ ಜನವರಿ ವರೆಗೆ ರನ್ನನ ಗದಾಯುದ್ಧ ಸಮಗ್ರಕಾವ್ಯದ ಅವಲೋಕನ ಮಾಡಿದೆವು. ಇದನ್ನು ಭಾಷಾ ಕನ್ನಡ ವಿದ್ಯಾಕುಟೀರದ ಸಂಯೋಜಕಿ ವೀಣಾ ರಾವ್ ಅವರು ಧ್ವನಿಮುದ್ರಣ ಮಾಡಿದ್ದರು. ಅವರಿಬ್ಬರಿಗೂ ನನ್ನ ಹಾರ್ದಿಕ ಧನ್ಯವಾದಗಳು. ಹಾಗೆಯೇ ಶಂಪಾ ಪ್ರತಿಷ್ಠಾನದ ಎಲ್ಲ ಸದಸ್ಯರಿಗೂ ಗದಾಯುದ್ಧ ಕಾವ್ಯದ ಎಲ್ಲ ಶ್ರೋತೃಬಾಂಧವರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಈಗ ಮತ್ತೆ ಕನ್ನಡ ಕಾವ್ಯಾಸಕ್ತರು ಕೆಲವರು ಇದನ್ನು ಮುಂದುವರಿಸುವ ಸಲಹೆ ನೀಡಿದರು. ಮುಖ್ಯವಾಗಿ ಪೂನಾದ ರಘುರಾಮ ಭಟ್ಟರು ಮತ್ತು ಬೆಂಗಳೂರಿನ ಡಿ.ಎಸ್. ಮಂಜುನಾಥ್‌ ಅವರು. ಹಾಗಾಗಿ ನಡುಗನ್ನಡ ಮಹಾಕವಿ ರಾಘವಾಂಕ ವಾರ್ಧಕಷಟ್ಪದಿಯಲ್ಲಿ ರಚಿಸಿದ ಹರಿಶ್ಚಂದ್ರ ಕಾವ್ಯಕೃತಿಯ ಒಂದು ರಸಾವಲೋಕನ ಮಾಡುವ ಹುಮ್ಮಸ್ಸು ಹುಟ್ಟಿದೆ. ಅದರ ಫಲವೇ ಇಂದಿನ ನಮ್ಮ ಸೇರುವಿಕೆ. ಇದು ನಿಜಕ್ಕೂ ಸಂತೋಷದ ವಿಚಾರ. ಈ ಕಾರ್ಯಕ್ರಮವನ್ನು ಆನ್‌ ಲೈನ್‌ ಮೂಲಕ ನಡೆಸಲು ಬೇಕಾದ ಪೂರ್ವ ತಯಾರಿಯನ್ನು ಮಾಡಿದವರು ಶ್ರೀ ಡಿ.ಎಸ್. ಮಂಜುನಾಥ್‌ ಅವರು. ಕನ್ನಡದ ಒಳ್ಳೆಯ ಬರಹಗಾರರೂ ಕನ್ನಡ ಸಾಹಿತ್ಯಾಸಕ್ತರೂ ಶಂಪಾ ಪ್ರತಿಷ್ಠಾನದ ಸಕ್ರಿಯ ಸದಸ್ಯರೂ ಆದ ಅವರ ಜೊತೆಗೆ ಸಹಕಾರ ನೀಡುತ್ತಿರುವವರು ಶಂಪಾ ಪ್ರತಿಷ್ಠಾನದ ಜೊತೆ ಕಾರ್ಯದರ್ಶಿ ಡಾ. ಎಸ್. ಎಲ್. ಮಂಜುನಾಥ್. ಇವರಿಬ್ಬರಿಗೂ ನಾನು ಆಭಾರಿಯಾಗಿದ್ದೇನೆ.

೧೩ನೆಯ ಶತಮಾನದ ಶ್ರೇಷ್ಠಕವಿಗಳಲ್ಲಿ ರಗಳೆಯಕವಿಯೆಂದು ಪ್ರಸಿದ್ಧನಾದ ಹರಿಹರ ಕವಿಯ ವರಸುತನಾದ ಮಹಾಕವಿ ರಾಘವಾಂಕನು ಷಟ್ಪದಿ ಬ್ರಹ್ಮನೆಂದು ಗುರುತಿಸಲ್ಪಟ್ಟವನು. ಈತ ವಾರ್ಧಕ ಷಟ್ಪದಿಯಲ್ಲಿ ರಚಿಸಿದ ಕಾವ್ಯಗಳಲ್ಲಿ ಅತ್ಯಂತ ಜನಪ್ರಿಯವೂ ಪ್ರಸಿದ್ಧವೂ ಆದ ಕಾವ್ಯ ಹರಿಶ್ಚಂದ್ರ ಕಾವ್ಯ. ರಸದೃಷ್ಟಿಯಿಂದ, ಪಾತ್ರಪರಿಕಲ್ಪನೆಯಿಂದ, ನಾಟಕೀಯ ಕೌಶಲದಿಂದ, ಜೀವನ ಮೌಲ್ಯಗಳಿಂದ ಕನ್ನಡ ಸಾಹಿತ್ಯದ ಶ್ರೇಷ್ಠಕೃತಿಗಳಲ್ಲಿ ಒಂದೆಂದು ವಿದ್ವಜ್ಜನರು ಕೊಂಡಾಡಿದ ಈ ಕೃತಿ ಕವಿಗೆ ಬಹುದೊಡ್ಡ ಮನ್ನಣೆಯನ್ನು ತಂದುಕೊಟ್ಟಿತ್ತು. ಈಶ್ವರನಿಗಾಗಿ ನಾಲಗೆಯನ್ನು ಮಾರಿಕೊಂಡ ಪರಮ ಶಿವಭಕ್ತನಾದ ಕವಿ ಕಥಾನಾಯಕನಾದ ಹರಿಶ್ಚಂದ್ರ ಮಹಾರಾಜನ ಮೂಲಕ ಸಾರಿದ ಅತಿಹುಸಿವ ಯತಿ ಹೊಲೆಯ ಹುಸಿಯದಿಹ ಹೊಲೆಯನುನ್ನತ ಯತಿವರನು ಎಂಬ ಸಿದ್ಧಾಂತ, ಹಾಗೂ ʻಹರನೆಂಬುದೇ ಸತ್ಯ ಸತ್ಯವೆಂಬುದೇ ಹರನುʼ ಎಂಬ ಜೀವನಮಂತ್ರ ಸುವಿಖ್ಯಾತವಾಗಿದೆ.
ಹರಿಶ್ಚಂದ್ರ ಕಾವ್ಯವನ್ನು ಮೂಲದಲ್ಲಿದ್ದಂತೆಯೇ ಓದುವುದು ಈ ಬಗೆಯ ಸಾಹಿತ್ಯಾಧ್ಯಯನಕ್ಕೆ ಅಗತ್ಯವಿಲ್ಲವೆಂದು ಭಾವಿಸಿ ಅದರ ಸಂಗ್ರಹವನ್ನು ಆಯ್ಕೆ ಮಾಡಿದ್ದೇವೆ. ಈ ಕಾವ್ಯರಸಯಾತ್ರೆಯಲ್ಲಿ ನಾವೆಲ್ಲರೂ ಸಹಪ್ರಯಾಣಿಕರು. ಇಲ್ಲಿ ಗುರುಶಿಷ್ಯರೆಂದಿಲ್ಲ. ನಾವೆಲ್ಲರೂ ನಮ್ಮ ಆಲೋಚನೆ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು.


ಈ ಕಾವ್ಯ ಗಮಕದ ಧಾಟಿಗೆ, ರೀತಿಗೆ, ಭಾವಕ್ಕೆ ಸೊಗಸಾಗಿ ಒಗ್ಗುವುದರಿಂದ ಕೆಲವರು ಗಮಕವಾಚನದ ಅಳವಡಿಕೆಯನ್ನು ಪ್ರಸ್ತಾಪಿಸಿದರು. ಶಂಪಾಪ್ರತಿಷ್ಠಾನದ ಪ್ರಧಾನ ಸಂಚಾಲಕರಾದ ನನ್ನ ಗುರುಗಳಾದ ಪ್ರೊ. ಪಿ. ಎನ್. ಮೂಡಿತ್ತಾಯರು ನನ್ನ ಕೋರಿಕೆಯನ್ನು ಮಾನ್ಯಮಾಡಿ ವಾಚಿಸುವ ಔದಾರ್ಯವನ್ನು ತೋರಿದ್ದಾರೆ. ಅವರಿಗೆ ನನ್ನ ಮನದಾಳದ ವಂದನೆಗಳು.

ಈಗ ನಾವು ಕಾವ್ಯಲೋಕಕ್ಕೆ ಪ್ರವೇಶಮಾಡೋಣ.
ಕಾವ್ಯದ ಪ್ರತಿ ಸ್ಥಲದ ಆರಂಭದಲ್ಲೂ ಮೂರು ಸಾಲುಗಳ ಸೂಚನೆಯ ಮುಖಾಂತರ ಆಯಾ ಸ್ಥಲದ ಕಥಾವಸ್ತುವನ್ನು ಕವಿ ಸಂಕ್ಷಿಪ್ತವಾಗಿ ನಿರೂಪಿಸುತ್ತಾನೆ.

ನೀವು ಪುಸ್ತಕದ PDF ಅನ್ನು ಇಲ್ಲಿ ಡೌನ್‌ಲೋಡ್ ಮಾಡಬಹುದು

ಪ್ರಥಮ ಸ್ಥಲಂ

ಮೊದಲನೆಯ ಸ್ಥಲದಲ್ಲಿ ಅಯೋಧ್ಯೆಯ ದೇಶಾಧಿಪತಿ ಹರಿಶ್ಚಂದ್ರರಾಜನ ಸತ್ಯವಂತಿಕೆಯ ವಿಚಾರ ದೇವೇಂದ್ರನ ಸಭೆಯಲ್ಲಿ ಪ್ರಸ್ತಾಪಿತವಾಗುತ್ತದೆ. ಇದು ಕೌಶಿಕ ಮತ್ತು ವಸಿಷ್ಠರ ಮಧ್ಯೆ ಘೋರವಾದ ವಾಗ್ವಾದಕ್ಕೆ ಕಾರಣವಾಗುತ್ತದೆ.ಎನ್ನುತ್ತ ರಾಘವಾಂಕ ವಿಷಯವನ್ನು ಮಂಡಿಸುತ್ತಾನೆ. ಆ ಘಟನೆಯನ್ನು ಆರಂಭಿಸುವ ಮುನ್ನ ಕೃತಿಯ  ತನ್ನ ಆರಾಧ್ಯ ದೈವವಾದ ಪಂಪಾ ವಿರೂಪಾಕ್ಷ ಮತ್ತು ಪಾರ್ವತೀದೇವಿಯನ್ನು ಸ್ತುತಿಸುತ್ತಾನೆ.

ಶಿವಸ್ತುತಿಯ ಪದ್ಯ

ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು ವಾ

ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ

ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ

ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ

ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ

ಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ                       ೧

ಶ್ರೀಪತಿಗೆ ಸೊಬಗನ್ನೂ ಚಂದ್ರನಿಗೆ ಶಾಂತಿಯನ್ನೂ ಬ್ರಹ್ಮನಿಗೆ ಚಾತುರ್ಯವನ್ನೂ ಸೂರ್ಯನಿಗೆ ತೇಜಸ್ಸನ್ನೂ ದೇವೇಂದ್ರನಿಗೆ ಭೋಗವನ್ನೂ ಮನ್ಮಥನಿಗೆ ಮೂರು ಲೋಕದ ಸೌಂದರ್ಯವನ್ನೂ ಸಮುದ್ರಕ್ಕೆ ಗಾಂಭೀರ್ಯವನ್ನೂ ಅಗ್ನಿಗೆ ತೇಜಸ್ಸನ್ನೂ ಕೊಟ್ಟಂಥ ಗುರುದೇವನಾದ ಪಂಪಾಪತಿಯಾದ ವಿರೂಪಾಕ್ಷ ದೇವರು ನಮ್ಮ ಇಷ್ಟಾರ್ಥವನ್ನು ನೆರವೇರಿಸಲಿ.

ವಿಶೇಷ ವಿಚಾರ

ಅಪ್ಪಟ ಶಿವಭಕ್ತನಾದ ರಾಘವಾಂಕನಿಗೆ ಇಷ್ಟದೇವತೆಯೆಂದರೆ ಹಂಪೆಯ ವಿರೂಪಾಕ್ಷ ಮತ್ತು ಕಾಶಿಯ ವಿಶ್ವನಾಥ. ಹರಿಶ್ಚಂದ್ರ ಕಾವ್ಯದ ಉದ್ದಕ್ಕೂ ಈ ಅಂಶ ಅತ್ಯಂತ ಪ್ರಧಾನವಾಗಿದೆಯೆಂಬುದನ್ನು ಗಮನಿಸಬೇಕು. ತನ್ನ ಕಾವ್ಯಾರಂಭದಲ್ಲಿ ಇಷ್ಟದೇವತಾ ಪ್ರಾರ್ಥನೆಯನ್ನು ಮಾಡುತ್ತ ಹಂಪೆಯ ವಿರೂಪಾಕ್ಷ ತನ್ನ ಅಭಿಲಾಷೆಯನ್ನು ಈಡೇರಿಸಲಿ ಎಂದು ಬೇಡಿಕೊಳ್ಳುತ್ತಾನೆ.

ಈ ಪದ್ಯದಲ್ಲಿ ಪರಮಾತ್ಮನಾದ ಈಶ್ವರನ ಕಲ್ಪನೆ ಭವ್ಯವಾಗಿದೆ.  ತನ್ನ ಆರಾಧ್ಯದೇವನಾದ ಪರಮೇಶ್ವರನ  ಶಕ್ತಿ, ಸ್ವರೂಪವನ್ನು ಮತ್ತು ಜಗತ್ತಿನ ಸಮಸ್ತ ಚರಾಚರಗಳಿಗೂ ಆತನೇ ಮೂಲಕಾರಣನೆಂದೂ ಕವಿ ವರ್ಣಿಸುತ್ತಾನೆ. ಇಲ್ಲಿ ಅಷ್ಟ ಮೂರ್ತಿಗಳ ವರ್ಣನೆಯಿದೆ. ಇದೇ ಸ್ಥಲದ ೪೦ನೆಯ ಪದ್ಯದಲ್ಲಿ ಕವಿ ಹರಿಶ್ಚಂದ್ರನನ್ನೂ ಇದೇ ರೀತಿ ವರ್ಣಿಸುತ್ತಾನೆ. ಕಥಾನಾಯಕನನ್ನು ಹಿಂದಿನ ಕವಿಗಳು ತಮ್ಮ ಆಶ್ರಯದಾತ ದೊರೆಗಳಿಗೆ ಹೋಲಿಸಿದರೆ ಇಲ್ಲಿ ರಾಘವಾಂಕ ತನ್ನ ಇಷ್ಟದೇವತೆಗೆ ಹೋಲಿಸುತ್ತಾನೆ. ರಾಘವಾಂಕನಿಗೆ ಪರಶಿವನೇ ಆಶ್ರಯದಾತ. ಪರಶಿವನನ್ನು ಸ್ತುತಿಸಿದ ಬಳಿಕ ಪಾರ್ವತಿಯ ಸ್ತುತಿ.

ಪದ್ಯ

ವಾಣಿಯರಿ(ಶಕಟ)ವಿನ ಬೆಳಗು ಮುಕುತಿವನಿತೆಯ ಮುಡಿಯ

ಮಾಣಿಕಂ ಸರ್ವಮಂತ್ರಾದಿ ಪಂಚಾಕ್ಷರಿಯ

ಪ್ರಾಣ ಮಂಗಳದ ಮನೆ ದೇವಲೋಕದ ಜನ್ಮಭೂಮಿ ತಾವರೆಗಣ್ಣನ

ರಾಣಿಯೆಸೆವೋಲೆವಾಗ್ಯಂ ಸರ್ವಸಿದ್ಧಿಗಳ

ತಾಣಂ ವಿರೂಪಾಕ್ಷನುನ್ನತೈಶ್ವರ್ಯದ  

ಕ್ಷೋಣಿ ಪಂಪಾಂಬಿಕೆ ಮದೀಯ ಮತಿಗೀಗೆ ಪ್ರಸನ್ನತೆಯನುತ್ಸವದೊಳು                   ಪ.೭

ಅರ್ಥ

ವಾಗ್ದೇವಿಯ ಜ್ಞಾನದ ಬೆಳಕಾಗಿಯೂ ಮೋಕ್ಷದೇವತೆಯ ಮುಡಿಯ ಮಾಣಿಕ್ಯವಾಗಿಯೂ ಸರ್ವಮಂತ್ರಗಳ ಮೂಲವಾದ ಪಂಚಾಕ್ಷರೀ ಮಂತ್ರಕ್ಕೆ ಪ್ರಾಣವಾಗಿಯೂ ಶುಭಗಳಿಗೆ ಆಗರವಾಗಿಯೂ ದೇವಲೋಕದ ತವರುಮನೆಯಾಗಿಯೂ ಲಕ್ಷ್ಮಿದೇವಿಯ ಕಿವಿಯ ಆಭರಣವಾಗಿಯೂ ಸರ್ವಸಿದ್ಧಿಗಳಿಗೆ ಸ್ಥಾನವಾಗಿಯೂ ವಿರೂಪಾಕ್ಷನ ಸರ್ವಸಂಪತ್ತಿಗೆ ನೆಲೆಮನೆಯಾಗಿಯೂ ಇರುವ ಪಂಪಾಂಬಿಕೆ ನನ್ನ ಬುದ್ಧಿಗೆ ಪ್ರಸನ್ನತೆಯನ್ನು ಉಂಟುಮಾಡಲಿ.

ವಿಶೇಷ ವಿಚಾರ

ಈ ಪ್ರಾರ್ಥನಾ ಪದ್ಯದಲ್ಲಿ ಪಂಪಾಂಬಿಕೆ ಅಂದರೆ ಪಾರ್ವತೀದೇವಿಯ ವರ್ಣನೆಯಿದೆ. ಈಶ್ವರ ಹೇಗೆ ಸರ್ವಚರಾಚರಗಳಿಗೆ ಮೂಲ ಶಕ್ತಿಯೋ ಅದಕ್ಕೆ ಕಡಿಮೆಯಿಲ್ಲದೆ ಪಂಪಾಬಿಕೆಯ ವರ್ಣನೆ. ಇಲ್ಲಿನ ವರ್ಣನೆ ಮತ್ತು ಕವಿಯ ಭಾವನೆಯ ಬಗ್ಗೆ ಕುವೆಂಪು ʻಪ್ರಾರಂಭದಲ್ಲಿ ದೇವತಾಸ್ತುತಿಯಾಗುವಾಗಲೇ ಹೊಸಗಾಳಿ ಬೀಸಿದಂತಾಗುತ್ತದೆ. ತೆಂಕಣಗಾಳಿ ಮುಂದೆ ಬರುವ  ಸುಗ್ಗಿಯನ್ನು ಸೂಚಿಸುವಂತೆ ಅದರ ಭಾವ ಮಹೋನ್ನತವಾಗಿದೆʼ ಎಂದಿದ್ದಾರೆ. ಹಾಗೆಯೇ ಮಹಾರಾಣಿ ಚಂದ್ರಮತಿಗೂ ಈ ವರ್ಣನೆ ಅನ್ವಯಿಸುವಂತಿದೆ.

ಕಾವ್ಯರಸಯಾನ ಮುಂದುವರಿದುದು: ೧೭-೦೬-೨೦೨೩

ಪಾರ್ವತೀ ಪರಮೇಶ್ವರರನ್ನು ಸ್ತುತಿಸಿದ ಬಳಿಕ ತನ್ನ ಕಾವ್ಯವಸ್ತುಯಾವುದು, ಅದನ್ನು ಬರೆದವರು ಯಾರು, ಯಾರಿಗಾಗಿ ಬರೆದುದು ಎಂಬ ವಿವರಗಳನ್ನು ಮುಂದಿನ ಪದ್ಯದಲ್ಲಿ ಕವಿ ನೀಡುತ್ತಾನೆ.

ಪದ್ಯ

ಕೃತಿಗೆ ನಾಮಂ ಹರಿಶ್ಚಂದ್ರ ಚಾರಿತ್ರವೀ

ಕೃತಿಗೊಡೆಯನಮಳಪಂಪಾವಿರೂಪಾಕ್ಷನೀ

ಕೃತಿಗೆ ಪಾಲಕರು ಲೋಕದ ಭಕ್ತಜನರಿದಂ ಪೇಳ್ದಾತನಾರೆಂದೊಡೆ

ಚತುರಕವಿರಾಯ ಹಂಪೆಯ ಹರೀಶ್ವರನ ವರ

ಸುತನುಭಯಕವಿ ಕಮಲರವಿ ರಾಘವಾಂಕ ಪಂ

ಡಿತನೆಂದೊಡೀ ಕಥಾರಸದ ಲಹರಿಯನು ಬಣ್ಣಿಸದರಾರೀ ಜಗದೊಳು                 ೧೫

ಅರ್ಥ

ಈ ಕೃತಿಯ ಹೆಸರು ಹರಿಶ್ಚಂದ್ರಚಾರಿತ್ರ, ಅದರ ಸಂಪೂರ್ಣ ಮಾಲೀಕ ಪರಿಶುದ್ಧನಾದ ಪಂಪಾ ವಿರೂಪಾಕ್ಷದೇವರು, ಈ ಕೃತಿಯ ಸಂರಕ್ಷಕರು ಲೋಕದ ಭಕ್ತ ಜನರು, ಇದನ್ನು ಹೇಳಿದವನು ಹಂಪೆಯ, ಚತುರಕವಿರಾಯನೆಂಬ ಬಿರುದುಳ್ಳ ಹರಿಹರನ ಶಿಷ್ಯೋತ್ತಮನಾದ ರಾಘವಾಂಕ ಪಂಡಿತ. ಆದ್ದರಿಂದ ಈ ರಸಕೃತಿಯ ಸೊಗಸನ್ನು ಸ್ವೀಕರಿಸಿ ವರ್ಣಿಸದವರು ಈ ಜಗತ್ತಿನಲ್ಲಿ ಯಾರಿದ್ದಾರೆ?

ವಿಶೇಷ ವಿಚಾರ

ಪಂಪಾ ವಿರೂಪಾಕ್ಷನ ಅನನ್ಯ ಭಕ್ತನಾದ ರಾಘವಾಂಕನಿಗೆ ತಾನು ಬರೆಯುವುದಕ್ಕೆ ಕಾರಣಕತ್ನಾದ ಶಿವನೇ ಈ ಕೃತಿಯ ಒಡೆಯನೆಂದು ಹೇಳುವುದರಲ್ಲಿ ವಿಶಿಷ್ಟವಾದ ಧ್ವನಿಯಿದೆ. ಹರಿಹರನಾಗಲೀ ರಾಘವಾಂಕನಾಗಲೀ ಆ ಕಾಲದ ಕವಿಗಳೂ ರಾಜರೂ ಎಲ್ಲರೂ ಪಂಪಾ ವಿರೂಪಾಕ್ಷನ ಭಕ್ತರು. ರಾಜನಾದವನೂ ತನ್ನ ರಾಜ್ಯದ ಅಧಿಕಾರಿ ವಿರೂಪಾಕ್ಷನೆಂದೇ ಒಪ್ಪಿಕೊಂಡು ಆ ದೇವನ ಹೆಸರಿನಲ್ಲೆ ರುಜು ಹಾಕುವ ಪದ್ಧತಿಯನ್ನೂ ಬೆಳೆಸಿಕೊಂಡಿದ್ದರು.. ೧೨-೧೩ನೆಯ ಶತಮಾನ ಕರ್ನಾಟಕದಲ್ಲಿ ಶಿವ ಪ್ರಾಬಲ್ಯವಿದ್ದುದೂ ಶಿವಭಕ್ತರಲ್ಲದವರು ಸಮಾಜದಲ್ಲಿ ಅವಹೇಳನಕ್ಕೆ ನಿಂದೆಗೆ ಗುರಿಯಾಗುತ್ತಿದ್ದರೆಂಬುದೂ ಗಮನಾರ್ಹ.

ಮುಂದಿನ ಪದ್ಯದಲ್ಲಿ ಕವಿ ಕಾವ್ಯದ ಮುಖ್ಯ ವಿಚಾರವನ್ನು ಸಹೃದಯಲೋಕಕ್ಕೆ ಮನವರಿಕೆ ಮಾಡುತ್ತಾನೆ.

ಪದ್ಯ

ವಸುಧಾಧಿಪತಿ ಹರಿಶ್ಚಂದ್ರ ಘನಸತ್ಯನೆಂ

ದೊಸೆದು ವಾಸಿಷ್ಠನಿಂದ್ರಂಗೆನಲು ಕೌಶಿಕಂ

ಹುಸಿಮಾಳ್ಪೆನೆಂದು ಭಾಷೆಯನಿತ್ತು ಧರೆಗೆ ಬಂದವನಿಪನ ಸತಿಪುತ್ರರ

ಅಸುವಂತ್ಯವೆನೆ ನಿಗ್ರಹಂ ಮಾಡಿಯೊಪ್ಪದಿರೆ (ತಪ್ಪದಿರೆ)

ಶಶಿಮೌಳಿ ಶ್ರೀ ವಿಶ್ವನಾಥ ಭೂಪಂಗೆ ಕರು

ಣಿಸಿ ಸಕಲ ಸಾಮ್ರಾಜ್ಯವಿತ್ತಾತನಂ ಮೆರೆದ ಕೃತಿ ಪುಣ್ಯದಾಕೃತಿಯಿದು                           ೧೭

ಅರ್ಥ

ಮಹಾರಾಜನಾದ ಹರಿಶ್ಚಂದ್ರ ಬಹುದೊಡ್ಡ ಸತ್ಯವಂತನೆಂದು ವಸಿಷ್ಠನು ದೇವೇಂದ್ರನಿಗೆ ಹೇಳಿದಾಗ ವಿಶ್ವಾಮಿತ್ರ ಆ ಮಾತನ್ನು ಸುಳ್ಳು ಮಾಡುವೆನೆಂದು ಪ್ರತಿಜ್ಞೆ ಮಾಡಿ ಭೂಮಿಗೆ ಬಂದು ರಾಜನ ಪತ್ನೀಸುತರನ್ನು ಪ್ರಾಣಹಾನಿಯಾಗುವವರೆಗೆ ಪೀಡಿಸಿದರೂ ಅವರು ತಪ್ಪದಿರಲು ಚಂದ್ರಶೇಖರನಾದ ಶ್ರೀ ವಿಶ್ವನಾಥನು ರಾಜನನ್ನು ಅನುಗ್ರಹಿಸಿ ಸರ್ವ ಸಾಮ್ರಾಜ್ಯವನ್ನೂ ಹಿಂತಿರುಗಿಸಿ ಅವನನ್ನು ಮೆರೆಸಿದ ಈ ಕೃತಿ ಪುಣ್ಯಪ್ರದವಾದುದು.

ಮುಂದಿನ ಪದ್ಯದಲ್ಲಿ ಕವಿ ಕಾವ್ಯ ವಿಚಾರವಿದೆ.

ಪದ್ಯ

ನಡೆವರೆಡಹದೆ ಕುಳಿತರೆಡಹುವರೆ ಕಾವ್ಯಮಂ

ನಡೆಸುವಾತಂ ರಸಾವೇಶಮರಹಾಲಸ್ಯ

ವೆಡೆಗೊಳಲು ತಪ್ಪುಗಲ್ಲದೆ ಕಾವ್ಯಕರ್ತೃ ತಪ್ಪುವನೆವೊಂದೆರಡೆಡೆಯೊಳು

ಎಡೆವಾಯ್ದು ಬಂದ ತಪ್ಪಂ ಹಿಡಿದು ಸಾಧಿಸದೆ

ಕಡೆತನಕ ಬಂದ ಲೇಸಿಂಗೆ ತಲೆದೂಗೆ ತಲೆ

ಯೊಡೆವುದೆ ಬೇನೆಯರಿಯದ ನೀರಸರನೇಕೆ ಪುಟ್ಟಿಸಿದನಬುಜಭವನು

ಅರ್ಥ

ನಡೆಯುವವರು ಎಡಹುತ್ತಾರಲ್ಲದೆ ಕುಳಿತವರು ಎಡಹುತ್ತಾರೆಯೇ? ಕಾವ್ಯವನ್ನು ಬರೆಯುವವನಿಗೆ ರಸಾವೇಶ, ಮರೆವು, ಆಲಸ್ಯಗಳೇನಾದರೂ ಬಂದರೆ ತಪ್ಪಾಗಿ ಬಿಡುತ್ತದೆ. ಅಲ್ಲದೆ ಕಾವ್ಯಕರ್ತೃ ತಪ್ಪುತ್ತಾನೆಯೇ? ಒಂದೆರಡು ಎಡೆಗಳಲ್ಲಿ ನುಸುಳಿದ ತಪ್ಪುಗಳನ್ನು ಹಿಡಿದು ಸಾಧಿಸದೆ ಕೊನೆಯವರೆಗೂ ಬಂದ ಉತ್ತಮ ವಿಚಾರಕ್ಕೆ ತಲೆದೂಗಿದರೆ ತಲೆಯೇನು ಒಡೆದು ಹೋಗುತ್ತದೆಯೇ? (ಕಾವ್ಯರಚನೆಯ) ನೋವನ್ನು ಅರ್ಥಮಾಡದ ನೀರಸರನ್ನು ಈ ಬ್ರಹ್ಮ ಏಕೆ ಹುಟ್ಟಿಸಿದನೋ.

ವಿಶೇಷ ವಿಚಾರ

ರಾಘವಾಂಕ ಹಂಪೆಯ ವಿರೂಪಾಕ್ಷನ ಅನನ್ಯ ಭಕ್ತ. ತಾನು ಬರೆಯುವ ಕೃತಿಗಳಿಗೆ ಮೂಲಪ್ರೇರಕ ಶಕ್ತಿ ಶಿವನೇ. ಆತನೇ ಕಾವ್ಯಕರ್ತೃ. ತಾನು ಕೇವಲ ಬರೆಯುವವನು ಎಂಬುದು ಅವನ ಭಾವ. ಆದ್ದರಿಂದ ಕಾವ್ಯದಲ್ಲಿ ತಪ್ಪು ಬಂದರೆ ಅದು ತನ್ನ ರಸಾವೇಶ, ಮರೆವು, ಆಲಸ್ಯಗಳಿಂದ ಸಂಭವಿಸುವುದಲ್ಲದೆ ಅದರ ದೋಷ ಶಿವನದಲ್ಲ. ಕುಮಾರವ್ಯಾಸಕವಿಯ ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ ಎನ್ನುವ ಪದ್ಯಸಾಲನ್ನು ನೆನಪಿಸಬಹುದು. ಕವಿ ಕಾವ್ಯ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಪ್ರಸಿದ್ಧ ಪದ್ಯ ಇದು. 

ಈ ಪದ್ಯದಲ್ಲಿ ಆ ಕಾಲದ ಕೆಲವು ಕುಹಕ ಕವಿಗಳ ದುರುದ್ದೇಶ ಪ್ರೇರಿತ ಸ್ವಾರ್ಥವನ್ನೂ ನೋಡಬಹುದು. ಒಬ್ಬ ಉತ್ತಮ ಕವಿಗೆ ಸಿಗುವ ಅವಕಾಶವನ್ನು ತಪ್ಪಿಸಿ ತಮಗೆ ಬೇಕಾದ ಕಳಪೆ ಕವಿಗಳಿಗೆ ಸಿಗುವಂತೆ ಮಾಡಲು ಕಾಲೆಳೆಯುವ ಅದೆಷ್ಟೋ ಕುಕವಿಗಳು ಆ ಕಾಲದಲ್ಲೂ ಇದ್ದರು. ಅವರು ಕಾವ್ಯದ ಯಾವುದೋ ಭಾಗದಲ್ಲಿ ಒಂದಷ್ಟು ದೋಷ ಕಂಡುಬಂದರೂ ಇಡೀ ಕಾವ್ಯವನ್ನು ಅಲ್ಲಗಳೆದು ಆ ಕವಿಗೆ ರಾಜಮನ್ನಣೆ ಸಿಗದಂತೆ ಮಾಡುತ್ತಿದ್ದರು. ರಾಘವಾಂಕನ ಕಾಲದಲ್ಲಿ ಓರಂಗಲ್ಲಿನ ಪ್ರತಾಪರುದ್ರದೇವರಾಯನ ಆಸ್ಥಾನದಲ್ಲಿ ಮೂವರು ಕುಕವಿಗಳಿದ್ದರೆಂದೂ ಅವರು ಇಂಥ ಅನ್ಯಾಯಗಳಿಗೆ ನಿಸ್ಸೀಮರಾಗಿದ್ದರೆಂದೂ ರಾಘವಾಂಕ ವೀರೇಶ ಚರಿತೆಯನ್ನು ಬರೆದು ಅವರನ್ನು ಸೋಲಿಸಿದನೆಂದೂ ತಿಳಿದುಬರುತ್ತದೆ.

ಮುಂದಿನ ಪದ್ಯದಲ್ಲಿ ರಾಘವಾಂಕ ಕವಿ ತನ್ನ ಈಶ್ವರ ಭಕ್ತಿಯನ್ನು ಮತ್ತು ತನ್ನ ಕೃತಿಯನ್ನು ಕುರಿತು ಆತ್ಮವಿಶ್ವಾಸದಿಂದ ಆಡುವ ಮಾತುಗಳನ್ನು ಕೇಳೋಣ.

ಪದ್ಯ

ಎನಿತು ಸಿರಿ ಸಾರ್ವಡಂ ಮಾಣ್ಬಡಂ ನಿತ್ಯತ್ವ

ವನುವಪ್ಪಡಂ ಸಾವಡಂ ಮೆಚ್ಚಿ ಹಂಪೆಯರ

ಸನ ಪೊಗಳ್ವ ನಾಲಗೆಯೊಳನ್ಯದೈವವ ಭವಿಗಳಂ ಕೀರ್ತಿಸಿದೆನಾದೊಡೆ

ಮನಸಿಜಾರಿಯ ಭಕ್ತನಲ್ಲ ತಾನೆನಿಪ ಬಿರು

ದಿನ ಕವಿಯೆನಿಪ್ಪ ಹಂಪೆಯ ರಾಘವಾಂಕನೊ

ಯ್ಯನೆ ಪೇಳ್ದೆನೆಂಬಾಗಳೀ ಕೃತಿಯನಾವ ಸಜ್ಜನರು ಕೊಂಡಾಡದಿಹರು                    ೩೨

ಅರ್ಥ

ಎಷ್ಟೇ ಸಂಪತ್ತು ಬರಲಿ ಬರದಿರಲಿ, ನಿತ್ಯತ್ವವನ್ನು ಪಡೆಯಲಿ ಪಡೆಯದಿರಲಿ, ಮೆಚ್ಚಿದ ಹಂಪೆಯ ಒಡೆಯನನ್ನು ಹೊಗಳುವ ನಾಲಗೆಯಲ್ಲಿ, ಅನ್ಯದೇವರನ್ನೂ ಭಕ್ತರಲ್ಲದವರನ್ನೂ, ಕೀರ್ತಿಸಿದೆನಾದರೆ, ನಾನು ಮನಸಿಜಾರಿಯ ಭಕ್ತನಲ್ಲ, ಎನ್ನುವ, ಬಿರುದಿನ ಕವಿಯಾದ ಹಂಪೆಯ ರಾಘವಾಂಕನು ಪ್ರೀತಿಯಿಂದ ಹೇಳಿದ್ದಾನೆಂದರೆ, ಈ ಕೃತಿಯನ್ನು ಯಾವ ಸಜ್ಜನರಿಗೆ ಕೊಂಡಾಡದಿರಲು ಸಾಧ್ಯ?

ತಾನು ರಚಿಸಿದ ಕೃತಿ ತನ್ನ ಮಗಳು ಎಂಬ ಭಾವನೆ ಕವಿಗೆ. ಕಾವ್ಯರಚನೆಯೆನ್ನುವುದು ಅತ್ಯಂತ ಕಷ್ಟಕರವಾದ ಒಂದು ಸೃಷ್ಟಿಕ್ರಿಯೆ. ಹಾಗೆ ಕಷ್ಟಪಟ್ಟು ಪಡೆದ ತನ್ನ ಮಗಳನ್ನು ವಿರೂಪಾಕ್ಷನಿಗೆ ಧಾರೆಯೆರೆದು ಕೊಡುವುದು ರಾಘವಾಂಕನ ಪುಣ್ಯ. ಅದರಿಂದ ಅವನು ಧನ್ಯನಾದ. ಸರ್ವಲಕ್ಷಣದಿಂದ ಕೂಡಿದ ಅಪೂರ್ವ ಲಾವಣ್ಯವತಿಯಾದ ಒಬ್ಬ ಕನ್ಯೆಯ  ಅಂಗಾಂಗಗಳನ್ನು ಕಾವ್ಯಮೀಮಾಂಸೆಗೆ ಅನುಗುಣವಾಗಿ ವಿವಿಧ ಪರಿಕರಗಳಿಗೆ ಅಭೇದವಾಗಿ ಹೋಲಿಸುತ್ತಾನೆ ಕವಿ. ಮುಂದಿನ ಪದ್ಯ ಈ ವಿಚಾರವನ್ನು ತಿಳಿಸುತ್ತದೆ.        

ಪದ್ಯ

ರಸಜೀವ ಭಾವವೊಡಲರ್ಥವವಯವ ಶಬ್ದ

ವಿಸರವೇ ನುಡಿಯಲಂಕಾರವೇ ತೊಡಿಗೆಯು ತ

ವೆ ಸುಲಕ್ಷಣವೆ ಲಕ್ಷಣ ವಿಮಳಪದನ್ಯಾಸ ನಡೆ ರೀತಿ ಸುಕುಮಾರತೆ

ರಸಿಕತನ ಸುಳಿ ಸುಖಂ ನಿಳಯವಂತಪ್ಪಯೀ

ಕಾವ್ಯ ಕನ್ನಿಕೆಯ ಪಡೆದು ಪಂಪಾಂಬಿಕೆಯ

ರಸ ವಿರೂಪಾಕ್ಷಂಗೆ ಕೊಟ್ಟ ಹಂಪೆಯ ರಾಘವಾಂಕನೇಂ ಕೃತ ಕೃತ್ಯನೋ

ಅರ್ಥ

ರಸವೇ ಜೀವ, ಭಾವವೇ ಶರೀರ, ಕಾವ್ಯಾರ್ಥವೇ ಅಂಗಾಂಗಗಳು, ಪದಗಳ ಜೋಡಣೆಯೇ ಮಾತು, ಕಾವ್ಯಾಲಂಕಾರಗಳೇ ಧರಿಸಿದ ಆಭರಣಗಳು, ಕಾವ್ಯ ಲಕ್ಷಣವೇ ರೂಪಲಕ್ಷಣ,  ಸೊಗಸಾದ ಪದಗಳ ರಚನೆಯೇ  ಹೆಜ್ಜೆಗಳು, ಕಾವ್ಯದ ರೀತಿಯೇ ಸುಕುಮಾರಗುಣ,(ವರ್ಣನೆ, ಪಾತ್ರಪೋಷಣೆ, ಔಚಿತ್ಯದೃಷ್ಟಿ, ಭಾಷೆಯ ಬಳಕೆ ಇವೆಲ್ಲ ಕಾವ್ಯದ ರೀತಿ)  ಕಾವ್ಯದ ರಸದೃಷ್ಟಿ(ರಸಿಕತನ) ಹೊಕ್ಕುಳ ಸುಳಿ, ಸುಖವೇ ನಿವಾಸ. ಇಂಥ ಕಾವ್ಯಕನ್ಯೆಯನ್ನು ಪಡೆದು,  ಪಂಪಾಂಬಿಕೆಯ ಪತಿ ವಿರೂಪಾಕ್ಷನಿಗೆ ನೀಡಿದ ಹಂಪೆಯ ರಾಘವಾಂಕ ಎಷ್ಟು ಧನ್ಯನೋ

ವಿಶೇಷ ವಿಚಾರ

ಕಾವ್ಯದ ಬಗ್ಗೆ ಪಂಪನ ಮಾತುಗಳು: ಮೃದುಪದಗತಿಯಿಂ ರಸಭಾವದ ಪೆರ್ಚಿಂ ಪುಣ್ಯವನಿತೆಯವೋಲ್‌ ಕೃತಿ ಸೌಂದರ್ಯದ ಚಾತುರ್ಯದ ಕಣಿಯೆನೆ ವಿದಗ್ಧ ಬುಧಜನದ ಮನಮನಲೆಯಲೆ ವೇಡಾ(ಆ.ಪು.೧-೧೭)

ಇನ್ನು ರಾಘವಾಂಕ ಕಥಾವಿಷಯಕ್ಕೆ ಪಾದಾರ್ಪಣೆ ಮಾಡುತ್ತಾನೆ. ಮುಂದಿನ ಪದ್ಯದಲ್ಲಿ ಲಾಳದೇಶದ ವರ್ಣನೆಯಿದೆ.ಮುಂದಿನ ವಾರ ಮುಂದುವರಿಸೋಣ.

ಕಾವ್ಯರಸಯಾನ ಮುಂದುವರಿದುದು: ೨೪-೦೬-೨೦೨೩

ಎಲ್ಲ ಸಾಹಿತ್ಯ ಸಹಯಾತ್ರಿಗಳಿಗೂ ಆದರದ ಸ್ವಾಗತ. ರಾಘವಾಂಕ ಕವಿ ಇಲ್ಲಿಯವರೆಗೆ ಕಥಾ ಪ್ರವೇಶ ಮಾಡಿರುವುದಿಲ್ಲ. ಈಗ ಹರಿಶ್ಚಂದ್ರನು ಆಳುವ ದೇಶದ ಪರಿಚಯವನ್ನು ಮಾಡುತ್ತಾನೆ.

ಪದ್ಯ

ಆ ರುಚಿರವನಧಿಪರ್ಯಂತ ವಸುಧಾಮಧ್ಯ

ಮೇರುವಿನ ದಕ್ಷಿಣಾಶೆಯೊಳು ಕಬ್ಬಿನ ಬಿಲ್ಲ

ವೀರನರಲಂಬಿನಾಡುಂಬೊಲಂ ಸಕಲಸುಖಸಂಪದದ ಜನ್ಮಭೂಮಿ

ಭಾರತಿಯ ನೆಲೆವೀಡು ಮಂಗಳಂಗಳ ನಿಜಾ

ಗಾರ ಲಕ್ಷ್ಮಿಯ ರಾಜಧಾನಿಯೆನಲೊಪ್ಪುವುದು

ಚಾರುತರ ಲಾಳದೇಶ ಪರಮಭಕ್ತಿಕೋಶ ಶ್ರುತಿಚಯಾದೇಶವು                 ೩೪

ಅರ್ಥ

ಮನೋಹರವಾದ ಸಾಗರವೇ ಮೇರೆಯಾಗುಳ್ಳ ಭೂಮಂಡಲದ ಮಧ್ಯದಲ್ಲಿ, ಮೇರು ಪರ್ವತದ ದಕ್ಷಿಣ ದಿಕ್ಕಿನಲ್ಲಿ, ಮನ್ಮಥನ ಆಟದ ಸ್ಥಳ, ಸರ್ವಸುಖಸಂಪತ್ತಿನ ಜನ್ಮಭೂಮಿ, ಸರಸ್ವತಿಯ ತವರುಮನೆ, ಸನ್ಮಂಗಳಗಳಿಗೆ ಆವಾಸಸ್ಥಾನ, ಲಕ್ಷ್ಮಿಯ ರಾಜಧಾನಿಯೆಂಬಂತೆ ಪರಮ ಭಕ್ತಿಕೋಶವಾಗಿರುವ, ಶ್ರುತಿಗಳಿಗೆ ಆಗರವಾದ ಲಾಳದೇಶ ಶೋಭಿಸುತ್ತದೆ.  

ಪದ್ಯ

ಆ ಲಾಳದೇಶ ಮಧ್ಯಸ್ಥಳದೊಳಧಟ ಭೂ

ಪಾಲವೆಸರಂತಳೆದ ಪಂಕೇಜಸಖಕುಲದ

ಪೀಳಿಗೆಯ ರಾಯರ್ಗೆ ವೀರಸಿರಿ ಸಲೆ ನಲಿದು ಕೈಗೈಯ್ದು ಜಯತವಗದ

ಮೇಲಿಟ್ಟ ರತ್ನ ಸಿಂಹಾಸನದ ಚೆಲುವಿನಿಂ

ತ್ರೈಲೋಕ್ಯದೊಳು ಪ್ರತಿವಿಹೀನವೆನಿಸಿರ್ಪ ಕೀ

ರ್ತ್ಯಾಳಾಪದಿಂದಯೋಧ್ಯಾಪುರದ ದುರ್ಗಮಿಂತೆಸೆದುದೇವಣ್ಣಿಸುವೆನು            ೩೫

ಅರ್ಥ

ಆ ಲಾಳದೇಶದ ಮಧ್ಯಭಾಗದಲ್ಲಿ ಅತ್ಯಂತ ಪರಾಕ್ರಮಿಗಳೆಂದು ಹೆಸರನ್ನು ಪಡೆದ ಸೂರ್ಯವಂಶದ ಪೀಳಿಗೆಯ ರಾಜರಿಗೆ ವೀರಶ್ರೀಯನ್ನು ಪ್ರೀತಿಯಿಂದ ಸಂಪಾದಿಸಿ ಗೆಲುವಿನ ಶಿಖರಕ್ಕೆ ತಂದಿಟ್ಟ ರತ್ನಸಿಂಹಾಸನದ ಸೌಂದರ್ಯದಿಂದಲೂ ಮೂರು ಲೋಕಕ್ಕೂ ಅನನ್ಯವಾದ, ಕೀರ್ತಿವೈಭವಗಳಿಂದಲೂ ಶೋಭಾಯಮಾನವಾಗಿರುವ ಅಯೋಧ್ಯಾಪಟ್ಟಣದ ಕೋಟೆಯನ್ನು ಏನೆಂದು ವರ್ಣಿಸಲಿ?                    

ಪದ್ಯ

ಕಾಲಭೈರವನ ಕದನದ ಕಳನೋ ಭೂಸತಿಯ

ಭಾಳಾಕ್ಷವೋ ಪ್ರಳಯಕಾಲದಗ್ಗದ ಸಿಡಿಲ

ಹೋಳೊ ರವಿಕುಲದ ವೈರಿಗಳ ಶುಭಕೀರ್ತಿಶಶಿಯಂ ಪಿಡಿವ ರಾಹುವಿಪ್ಪ

ಹೇಳಿಗೆಯೊ ರಿಪುವಿಪಿನದವ ಹರಿಶ್ಚಂದ್ರ ಭೂ

ಪಾಲನ ಪ್ರಬಳಪ್ರತಾಪಶರಧಿಯ ಸುಳಿಯೊ

ಹೇಳೆನಲಯೋಧ್ಯಾಪುರ ಮೆರೆವುತಿರ್ದುದು ಭಯಂಕರಾಕಾರದಿಂದ              ೩೬

ಅರ್ಥ

ಯಮರಾಯನ ಯುದ್ಧಭೂಮಿಯೋ  ಭೂದೇವಿಯ ಹಣೆಗಣ್ಣೋ ಪ್ರಳಯಕಾಲದ ಭಯಂಕರವಾದ ಸಿಡಿಲಿನ ತುಣುಕೋ ಸೂರ್ಯವಂಶದ ಶತ್ರುಗಳ ಶುಭಕೀರ್ತಿಯೆಂಬ ಚಂದ್ರನನ್ನು ಹಿಡಿಯುವ ರಾಹುವಿರುವ ಪೆಟ್ಟಿಗೆಯೋ ಶತ್ರುಗಳೆಂಬ ಕಾಡಿಗೆ ಕಾಡ್ಗಿಚ್ಚಿನಂತಿರುವ ಹರಿಶ್ಚಂದ್ರ ಮಹಾರಾಜನ ಪ್ರಬಲವಾದ ಪ್ರತಾಪವೆಂಬ ಸಾಗರದ ಸುಳಿಯೋ ಎಂಬಂತೆ ಅಯೋಧ್ಯಾದೇಶ ಭಯಂಕರವಾಗಿ ಮೆರೆಯುತ್ತಿತ್ತು.  

ಪದ್ಯ

ಸುರಪತಿಯ ಭೋಗವಹ್ನಿಯ ತೇಜವಂಧಕಾ

ಸುರನದಟು ನೈರುತಿಯ ಕಾಯ್ಪು ರತ್ನಾಕರೇ

ಶ್ವರನ ಗಂಭೀರವನಿಲನ ಬಲಂ ವಿತ್ತಪನ ಸಿರಿ ರುದ್ರನುಗ್ರತ್ವವು

ತರಣಿಯ ಪ್ರಭೆ ಧರೆಯ ಧೈರ್ಯ ಚಂದ್ರನ ಶಾಂತಿ

ವೆರಸಿ ರೂಪಾದುದೆನಿಸುವ ಹರಿಶ್ಚಂದ್ರ ಭೂ

ವರನಾ ಪುರಕ್ಕೊಡೆಯನರಿಶರಧಿವಡಬನಾರಾತಿಗಜಪಂಚಾಸ್ಯನು                   ೪೦

ಅರ್ಥ

ದೇವೇಂದ್ರನ ಭೋಗ, ಅಗ್ನಿಯ ತೇಜಸ್ಸು, ಅಂಧಕಾಸುರನ ಸಾಮರ್ಥ್ಯ, ನೈರುತ್ಯನ ಬಿಸಿ,  ಸಾಗರದ ಗಾಂಭೀರ್ಯ, ಗಾಳಿಯ ಬಲ,  ಕುಬೇರನ ಸಂಪತ್ತು, ರುದ್ರನ ಉಗ್ರತ್ವ, ಸೂರ್ಯನ ಪ್ರಭೆ, ಭೂಮಿಯ ಧೈರ್ಯ, ಚಂದ್ರನ ಶಾಂತಿ ಇವೆಲ್ಲವೂ ಸೇರಿ ಸಾಕಾರಗೊಂಡಂತೆ ಶತ್ರುಗಳೆಂಬ ಸಮುದ್ರಕ್ಕೆ ಬಡಬಾಗ್ನಿಯಂತಿರುವ ಶತ್ರುಗಳೆಂಬ ಆನೆಗಳಿಗೆ ಸಿಂಹಸದೃಶನಾದ ಹರಿಶ್ಚಂದ್ರ ಭೂನಾಥನು ಅಯೋಧ್ಯಾಪುರಕ್ಕೆ ರಾಜನಾಗಿದ್ದನು.                  

ಪದ್ಯ

ತನುರುಚಿಯ ಮುಂದೆ ದಿನಪನ ಕಾಂತಿ ಕಪ್ಪಕ

ಪ್ಪನೆ ಕೋಪದಿದಿರೊಳೂರ್ವಾನಳಂ ತಣ್ಣ ತ

ಣ್ಣನೆ ಕೊಡುವ ಕೈಯಿದಿರೊಳಮರತರು ಮೆಲ್ಲ ಮೆಲ್ಲನೆ ಮೋಹನವನಪ್ಪಿದ

ಘನರೂಪಿನಿದಿರೊಳಂಗಜರೂಪು ನೊಪ್ಪನೊ

ಪ್ಪನೆ ಗಭೀರತೆಯಿದಿರಲಂಬುನಿಧಿ ತೆಳ್ಳತೆ

ಳ್ಳನೆ ಶಾಂತಿಯಿದಿರು ಶಶಿ ಬೆಚ್ಚಬೆಚ್ಚನೆಯೆನೆ ಹರಿಶ್ಚಂದ್ರನೆಸೆದಿರ್ದನು                       ೪೧

ಅರ್ಥ

ಹರಿಶ್ಚಂದ್ರ ಮಹಾರಾಜನ ದೇಹಕಾಂತಿಯ ಮುಂದೆ ಸೂರ್ಯನ ಕಾಂತಿ ಕಪ್ಪ ಕಪ್ಪನೆ, ಕೋಪದ ಮುಂದೆ ಬೆಂಕಿಯೇ ತಂಪು ತಂಪು, ದಾನಗುಣದ ಮುಂದೆ ಕಲ್ಪವೃಕ್ಷವೇ ನಿಧಾನ, ಆಕರ್ಷಕವಾದ ಅಂಗ ಸೌಷ್ಟವದ ಮುಂದೆ ಮನ್ಮಥನ ರೂಪು ನೊಪ್ಪ ನೊಪ್ಪನೆ, ಗಾಂಭೀರ್ಯದ ಮುಂದೆ ಸಾಗರವೇ ತೆಳ್ಳತೆಳ್ಳನೆ ತಾಳ್ಮೆ(ಶಾಂತಿ)ಯ ಮುಂದೆ ಚಂದ್ರನೇ ಬೆಚ್ಚಬೆಚ್ಚನೆ ಎನ್ನುವಂತೆ ಹರಿಶ್ಚಂದ್ರನು ಶೋಭಿಸುತ್ತಿದ್ದನು.                  

ಪ್ರಕೃತಿಯ ಶ್ರೇಷ್ಠತೆಗೆ ಸಂಕೇತವಾಗಿರುವ ಎಲ್ಲ ಉತ್ತಮಿಕೆಯೂ ಅದರ ಇಮ್ಮಡಿಯಾಗಿ ಹರಿಶ್ಚಂದ್ರನಲ್ಲಿ ನೆಲಸಿವೆ ಎಂಬ ಭಾವ. ಅವನ ಗುಣಗಳು ಸೂರ್ಯ, ಚಂದ್ರ, ಕಾಮಧೇನು, ಕಲ್ಪವೃಕ್ಷ, ಸಾಗರ, ಮನ್ಮಥ ಎಲ್ಲ ಶ್ರೇಷ್ಠತೆಯನ್ನು ಹಿಂದಿಕ್ಕಿವೆ ಎನ್ನುವುದರ ಮೂಲಕ ಹರಿಶ್ಚಂದ್ರನ ಹೆಗ್ಗಳಿಕೆಯನ್ನು ಸಮರ್ಥಿಸುತ್ತಿದ್ದಾನೆ.  

ಪದ್ಯ

ವರರೂಪಿನೊಳು ರತಿಗೆ ಹೊಣಕೆ ಸೌಭಾಗ್ಯದೊಳು

ಸಿರಿಗೆ ಹೊಯಿಕೈ ಜಾಣಿನೊಳು ವಾಣಿಗಿಮ್ಮಿಗಿಲು

ಚರಿತದೊಳು ಗಂಗೆಗಲಗಣಸು ಪತಿಭಕ್ತಿಯೊಳರುಂಧತಿಗೆ ಸರಿ ಜಸದೊಳು

ಪರಮರೋಹಿಣಿಗೆ ಹೆಗಲೆಣೆ ಪುಣ್ಯದೊಳು ಸ್ವಧಾ

ತರುಣಿಗೋರಗೆ ವಂದ್ಯತೆಯೊಳು ಗಾಯಿತ್ರಿಗೊರೆ

ದೊರೆಯೆನಿಸಿ ಮೆರೆವಳು ಹರಿಶ್ಚಂದ್ರನೃಪನರಸಿ ಚಂದ್ರಮತಿ ಭೂತಳದೊಳು ೪೪

ಅರ್ಥ

ಸೌಂದರ್ಯದಲ್ಲಿ  ರತಿಯನ್ನು ಹೋಲುವ, ಶ್ರೀಮಂತಿಕೆಯಲ್ಲಿ ಲಕ್ಷ್ಮಿಗೆ ಸಮಾನಳಾದ, ಜಾಣತನದಲ್ಲಿ ಸರಸ್ವತಿಗೆ ಇಮ್ಮಡಿಯೆನಿಸುವ, ಚ್ಚಾರಿತ್ರ್ಯದಲ್ಲಿ ಗಂಗೆಗೆ ಸರಿಸಮಾನಳಾದ, ಪತಿಭಕ್ತಿಯಲ್ಲಿ ಅರುಂಧತಿಯನ್ನು ಹೋಲುವ, ಯಶಸ್ಸಿನಲ್ಲಿ ಶ್ರೇಷ್ಠಳಾದ ರೋಹಿಣಿಗೆ ಒರೆದೊರೆಯಾದ, ಪುಣ್ಯದಲ್ಲಿ ಸ್ವಧಾತರುಣಿಗೆ ( ದಕ್ಷ ಹಾಗೂ ಪ್ರಸೂತಿಯರ ಮಗಳು ದಾಕ್ಷಾಯಣಿ) ಸರಿಯಾದ,  ಪೂಜ್ಯತೆಯಲ್ಲಿ ಗಾಯತ್ರಿಗೆ ಸರಿಯಾದ ಹರಿಶ್ಚಂದ್ರನ ಮಹಾರಾಣಿ ಚಂದ್ರಮತಿ ಭೂಲೋಕದಲ್ಲಿ ಮೆರೆಯುತ್ತಿದ್ದಳು.

ವಿಶೇಷ ವಿಚಾರ

ವಿಶ್ವದ ಎಲ್ಲ ಅತಿಶಯವಾದ ಗುಣಗಳು ಚಂದ್ರಮತಿಯಲ್ಲಿ ನೆಲಸಿವೆ ಎನ್ನುವುದರ ಮೂಲಕ ಕವಿ ಚಂದ್ರಮತಿಗಿತ್ತ ಪ್ರಾಶಸ್ತ್ಯವನ್ನು ಮನಗಾಣಬಹುದು.

ಪದ್ಯ

ತೊಡರ್ವ ರಾಯರನೊರಸಿದಪೆನೆಂದು ನುಡಿನುಡಿದು

ನುಡಿಗಲಿತು ರಣದೊಳಾಂತವರ ಸರ್ವಸ್ವಮಂ

ಪಿಡಿಪಿಡಿದು ಪಿಡಿದು ನಿಂದಿರಕಲಿತು ಹಗೆಯ ಬೈತಲೆಯ ಬಟ್ಟೆಯೊಳೊಮ್ಮೆಯು

ನಡೆನಡೆದು ನಡೆಗಲಿತು ರಿಪುಗಳಲಿ ಕಪ್ಪಮಂ

ಬಿಡಬಿಡದೆ ಕೊಂಡು ಕೊಂಡುಣಕಲಿತು ಕೀರ್ತಿಯೊಡ

ನೊಡನೆ ಪರಿಪರಿದು ಪರಿದಾಡಕಲಿತಂ ಲೋಹಿತಾಶ್ವನೆಂಬ ಕುಮಾರನು                ೪೫

ಅರ್ಥ

ಪ್ರತಿಭಟಿಸುವ ರಾಜರನ್ನು ನಾಶಮಾಡುತ್ತೇನೆ, ಎಂದು ನುಡಿನುಡಿದು ನುಡಿ ಕಲಿತು, ಯುದ್ಧದಲ್ಲಿ ಎದುರಾದವರ, ಸರ್ವಸ್ವವನ್ನೂ ಸೂರೆಗೊಳ್ಳುವುದರ ಮೂಲಕ ಎದ್ದುನಿಲ್ಲಲು ಕಲಿತು, ಶತ್ರುಗಳ ಬೈತಲೆಯ ದಾರಿಯಲ್ಲಿ ಏಕಪ್ರಕಾರವಾಗಿ ನಡೆಯುತ್ತ ನಡೆಯುತ್ತ ನಡೆಯುವುದನ್ನು ಕಲಿತು, ಶತ್ರುಗಳಿಂದ ಕಪ್ಪಗಳನ್ನು, ಎಡೆಬಿಡದೆ ತೆಗೆದುಕೊಂಡು ಅನುಭವಿಸುವುದನ್ನು ಕಲಿತು, ಕೀರ್ತಿಯೊಂದಿಗೆ ಜೊತೆಯಾಗಿ ನಡೆದು ಓಡಾಡುವುದನ್ನು ಕಲಿತನು, ಲೋಹಿತಾಶ್ವನೆಂಬ ಕುಮಾರನು.

ವಿಶೇಷ ವಿಚಾರ

ಹರಿಶ್ಚಂದ್ರನ ಮಗ ಲೋಹಿತಾಶ್ವನ ಬಳವಿಯ ವರ್ಣನೆ. ವೀರಯುಗದ ರಾಜವಂಶಜರ ಪರಾಕ್ರಮ, ಶೌರ್ಯಗಳನ್ನು ವರ್ಣಿಸುವ ಈ ಪದ್ಯ ಆ ಕಾಲದ ಯುದ್ಧನೀತಿಯನ್ನು ಪ್ರತಿಬಿಂಬಿಸುತ್ತದೆ. 

ಪದ್ಯ

ತ್ಯಾಗಕ್ಕೆ ಬುಧರು ತಣಿವವಧಿ ರಾಜ್ಯಕ್ಕೇಳು

ಸಾಗರದ ತಡಿಯವಧಿ ಭಕ್ತಿಗೀಶ್ವರನ ತಲೆ

ದೂಗಿಸುವುದವಧಿ ಕೀರ್ತ್ಯಂಗನೆಯ ಸುಳಿವಿಂಗೆ ಮೂಲೋಕವವಧಿ ವಿಪುಳ

ಭೋಗಕ್ಕೆ ಸರ್ವಸುಖವವಧಿ ವೀರಕ್ಕೆ ಭೂ

ಭಾಗದೊಳು ನಿಷ್ಕಂಟಕತ್ವವೇ ಅವಧಿ ತಾ

ನಾಗಿ ಪಿರಿಯರಸುತನಮಂ ಮಾಡುತಿರ್ದನು ಹರಿಶ್ಚಂದ್ರ ಭೂನಾಥನು               ೪೮

ಅರ್ಥ

ಅಯೋಧ್ಯಾಧಿಪತಿ ಹರಿಶ್ಚಂದ್ರನ ತ್ಯಾಗಕ್ಕೆ ವಿದ್ವಾಂಸರು ತೃಪ್ತಿಯಾಗುವುದು ಕೊನೆ, ರಾಜ್ಯಕ್ಕೆ ಸಪ್ತಸಾಗರಗಳೇ ಕೊನೆ, ಭಕ್ತಿಗೆ ಪರಮೇಶ್ವರನು ಮೆಚ್ಚಿ ತಲೆದೂಗುವುದು ಕೊನೆ, ಕೀರ್ತಿಯ ಪ್ರಸಾರಕ್ಕೆ ಮೂರು ಲೋಕವೇ ಕೊನೆ, ಭೋಗಭಾಗ್ಯಗಳಿಗೆ ಸಮಸ್ತ ಸುಖವೇ ಕೊನೆ, ಶೌರ್ಯಕ್ಕೆ ಇಡೀ ಭೂಮಂಡಲದಲ್ಲಿ ಸಮಸ್ಯೆಯಿಲ್ಲದಿರುವುದೇ ಕೊನೆ, ಎಂಬಂತೆ ಅತ್ಯಂತ ಸಮರ್ಥನಾಗಿ ಹರಿಶ್ಚಂದ್ರನು ರಾಜ್ಯಭಾರವನ್ನು ಮಾಡುತ್ತಿದ್ದನು.

ಜುಲೈ ಲೇಖನಕ್ಕೆ ಮುಂದುವರಿಯಿರಿ

ಹಂಚಿಕೊಳ್ಳಿ: https://shampa.org/7qgs

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ