ಸೆಪ್ಟೆಂಬರ್ 20, 2024

ಶಂಪಾ ಪ್ರತಿಷ್ಠಾನ(ರಿ) ಬೆಂಗಳೂರು

ಧ್ಯೇಯೋದ್ದೇಶಗಳು


ಬೆಂಗಳೂರಿನ ಇಸ್ರೋಲೇಔಟ್ ಸಮೀಪದ ವಿಠ್ಠಲ್ ನಗರದ ಒಂದನೆಯ ಮುಖ್ಯರಸ್ತೆಯ ಶ್ರೀಸದನ’ ೮೮/ಎ, ಇಲ್ಲಿ ಸ್ಥಾಪಿತವಾದ ಒಂದು ಖಾಸಗೀ ವಿಶ್ವಸ್ಥ ಸಂಸ್ಥೆಶಂಪಾ ಪ್ರತಿಷ್ಠಾನ.’ ದಿನಾಂಕ ೧೭-೦೭-೨೦೧೭ರಂದು ಡಾ. ಪ್ರಮೀಳಾ ಮಾಧವ್‌, ಶ್ರೀಮತಿ ಕೃಪಾಶ್ರೀ ಹರೀಶ್‌, ಡಾ. ಬಿ.ಎನ್.‌ ಶರತ್‌, ಶ್ರೀರಾಮ್‌ ಕೀರ್ತಿ ಮತ್ತು ಡಾ. ಶಾರದ ಸದಸ್ಯರಾಗಿ ನೋಂದಾಯಿತವಾದ ಈ ಸಂಸ್ಥೆಯನ್ನು ಬೆಂಗಳೂರಿನ ಎ.ಪಿ.ಎಸ್. ಕಾಲೇಜಿನ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಪ್ರಮೀಳಾ ಮಾಧವ್‌ರವರು ತಮ್ಮ ಹೆತ್ತವರ (ಶಂಕರ ಮತ್ತು ಪಾರ್ವತಿ) ನೆನಪಿಗಾಗಿ ಸ್ಥಾಪಿಸಿದ್ದಾರೆ. ನಾಡಿನ ಖ್ಯಾತ ಕವಿಗಳಾಗಿದ್ದ ನಾಡೋಜ ಡಾ. ಸಿದ್ಧಲಿಂಗಯ್ಯನವರ ಮಾರ್ಗದರ್ಶನ ಮತ್ತು ಅನೇಕ ಸಂಸ್ಕೃತಿ ಚಿಂತಕರ ಪ್ರೋತ್ಸಾಹದಿಂದ ಶಂಪಾ ಪ್ರತಿಷ್ಠಾನ ಕಾರ್ಯಚಟುವಟಿಕೆಗಳನ್ನು ಆರಂಭಿಸಿತು. ಪ್ರಾರಂಭದ ಹಂತದಲ್ಲಿ ಹದಿನೈದು ಜನರ ಒಂದು ತಾತ್ಕಾಲಿಕ ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು. ಇದರಲ್ಲಿ ಡಾ. ಸಿದ್ಧಲಿಂಗಯ್ಯನವರು ಗೌರವ ಅಧ್ಯಕ್ಷರಾಗಿಯೂ, ಡಾ. ಪ್ರಮೀಳಾ ಮಾಧವ್ ಅಧ್ಯಕ್ಷರಾಗಿಯೂ, ಡಾ. ಭುವನೇಶ್ವರ್(ನಿವೃತ್ತ ಕನ್ನಡ ಪ್ರಾಧ್ಯಾಪಕರು) ಉಪಾಧ್ಯಕ್ಷರಾಗಿಯೂ, ಡಾ. ಶಾರದ( ಕನ್ನಡ ಪ್ರಾಧ್ಯಾಪಿಕೆ) ಕಾರ್ಯದರ್ಶಿಯಾಗಿಯೂ ಡಾ. ಎಸ್. ಎಲ್. ಮಂಜುನಾಥ್(ಕನ್ನಡ ಪ್ರಾಧ್ಯಾಪಕರು) ಸಹಕಾರ್ಯದರ್ಶಿಯಾಗಿಯೂ ಶ್ರೀರಾಮ್ ಕೀರ್ತಿಎಂ.ಕೆ. (ಇಂಜಿನಿಯರ್) ಕೋಶಾಧಿಕಾರಿಯಾಗಿಯೂ ಡಾ. ಆರ್. ವಾದಿರಾಜ್(ಕನ್ನಡ ಅಧ್ಯಾಪಕರು), ಡಾ. ಎಸ್. ರಾಮಮೂರ್ತಿ (ಕನ್ನಡ ಅಧ್ಯಾಪಕರು), ಡಾ. ಕೆ.ಪಿ.ಪುಟ್ಟಮಾರಯ್ಯ(ಕನ್ನಡ ಅಧ್ಯಾಪಕರು) ಸಂಚಾಲಕರಾಗಿಯೂ ಶ್ರೀಮತಿ ಕೃಪಾಶ್ರೀ ಎಂ.ಕೆ.(ಗೃಹಿಣಿ), ಡಾ. ಬಿ.ಎನ್. ಶರತ್(ವೈದ್ಯಕೀಯಕಾಲೇಜು ಅಧ್ಯಾಪಕರು) ಡಾ. ಶಿಲ್ಪಶ್ರೀ ಎಂ.ಕೆ.( ವೈದ್ಯಕೀಯಕಾಲೇಜು ಅಧ್ಯಾಪಕರು) ಶ್ರೀಮತಿ ಇಂದಿರಾ(ಗೃಹಿಣಿ), ಪತ್ತಂಗಿ. ಎಸ್, ಮುರಳಿ(ಚುಟುಕು ಕವಿ), ಶ್ರೀ ಡಿ.ಎನ್. ಲಕ್ಷ್ಮೀನಾಥ್(ಅಧ್ಯಾಪಕರು) ಸದಸ್ಯರಾಗಿಯೂ ಆಯ್ಕೆಗೊಂಡರು. ಈ ಎಲ್ಲ ಸದಸ್ಯರ ಒಗ್ಗಟ್ಟಿನ ಸಹಕಾರದಿಂದ ಪ್ರತಿಷ್ಠಾನವು ಅನೇಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.


೨೦೧೯-೨೧ ರ ಕಾರ್ಯಕಾರೀ ಸಮಿತಿಯಲ್ಲಿ ಪ್ರೊ. ಪಿ.ಎನ್. ಮೂಡಿತ್ತಾಯರು(ನಿವೃತ್ತ ಕನ್ನಡ ಪ್ರಾಧ್ಯಾಪಕರು), ಶ್ರೀ ಟಿ.ಎನ್. ಶ್ರೀನಿವಾಸ ಮೂರ್ತಿಯವರು (ಶ್ರೇಷ್ಠ ಕಲಾವಿದರು), ಶ್ರೀ ಕೆ. ಶಿವಕುಮಾರ್(ಅಧ್ಯಾಪಕರು), ಕು. ಕೆ.ಆರ್. ಕುಸುಮ(ಗುಮಾಸ್ತೆ )ಹೀಗೆ ಇನ್ನು ಕೆಲವು ಸದಸ್ಯರನ್ನು ಸೇರ್ಪಡೆಗೊಳಿಸಿ ಅವರ ಬೆಂಬಲ ಮತ್ತು ಸಹಕಾರವನ್ನೂ ಕೋರಲಾಯಿತು. ಇವರು ಪ್ರತಿಷ್ಠಾನದ ಚಟುವಟಿಕೆಗಳ ಬಗೆಗೆ ಮೆಚ್ಚುಗೆ ಮತ್ತು ಅಭಿಮಾನವನ್ನು ತೋರಿಸಿರುವುದು ನಮಗೆ ಸಂತೋಷವನ್ನುಂಟುಮಾಡಿದೆ.
ಕವಿಗೋಷ್ಠಿ, ಸಾಹಿತ್ಯಕೃತಿಗಳ ವಿಚಾರ ವಿಮರ್ಶೆ ಮತ್ತು ಸಮಾಲೋಚನೆ, ಸಾಧಕರಿಗೆ ಸನ್ಮಾನ ಮತ್ತು ಸಂವಾದ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುರಸ್ಕಾರ, ಅನಾಥ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ, ಹಿರಿಯರಿಗೆ ಗೌರವಾರ್ಪಣೆ, ಕನ್ನಡೇತರರಿಗೆ ಕನ್ನಡ ಕಲಿಕೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಸ್ಪರ್ಧೆಗಳು, ಪ್ರತಿಭಾನ್ವೇಷಣೆ, ಸಂಪನ್ಮೂಲ ವ್ಯಕ್ತಿಗಳಿಂದ ಆರೋಗ್ಯ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುವ ಭಾಷಣಗಳು, ಕನ್ನಡದ ಪ್ರಾಚೀನ ಸಾಹಿತ್ಯಕೃತಿಗಳ ಉಪನ್ಯಾಸ ಮಾಲಿಕೆ, ಆನ್‌ ಲೈನ್‌ ತರಗತಿ, ವ್ಯಾಖ್ಯಾನ ಗ್ರಂಥ ರಚನೆ, ಪುಸ್ತಕ ಪ್ರಕಟಣೆ, ಶೈಕ್ಷಣಿಕ ಕಾರ್ಯಾಗಾರ, ವಿಚಾರ ಸಂಕಿರಣ, ಸಾಹಿತ್ಯ ಸಮಾಲೋಕನ, ಸಾಹಿತ್ಯ ಗೋಷ್ಠಿ ಮುಂತಾದ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಸದುದ್ದೇಶದಿಂದ ಸ್ಥಾಪಿತವಾದ ಈ ಸಂಸ್ಥೆ ಉತ್ಸಾಹೀ ಸದಸ್ಯರಿಂದ ಊರ್ಜಿತಗೊಂಡು ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಿ ನಡೆಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಮತ್ತು ಕನ್ನಡಾಭಿಮಾನಿಗಳ ನಿರಂತರ ಪ್ರೋತ್ಸಾಹ ಮತ್ತು ಸಹಕಾರವನ್ನು ನಿರೀಕ್ಷಿಸುತ್ತಿದೆ.