ಸೆಪ್ಟೆಂಬರ್ 20, 2024

ಮೀಟಿಂಗ್ ರೆಕಾರ್ಡಿಂಗ್ ಅನ್ನು ಆಲಿಸಿ:

ದಿನಾಂಕ ೨೩-೦೭-೨೩ರಂದು ಭಾನುವಾರದಂದು ಶಂಪಾ ಪ್ರತಿಷ್ಠಾನ(ರಿ), ಬೆಂಗಳೂರು, ಆಯೋಜಿಸಿದ ಸಾಹಿತ್ಯ ಸಂಗೀತ ಸಂಜೆ ಆನ್‌ಲೈನ್ ಸರಣಿ ಕಾರ್ಯಕ್ರಮದ ಉದ್ಘಾಟನೆನಡೆಯಿತು. ಶ್ರೀಮತಿ ಕೃಪಾಶ್ರೀ ಹರೀಶ್‌ ಅವರ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಶುಭಾರಂಭಗೊಂಡಿತು. ಪ್ರತಿಷ್ಠಾನದ ಅಧ್ಯಕ್ಷೆ ಡಾ. ಪ್ರಮೀಳಾ ಮಾಧವರು ಕಾರ್ಯಕ್ರಮದ ಉದ್ದೇಶಗಳನ್ನು ಮುಂದಿಡುತ್ತ, ʻಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಜನಮಾನಸಕ್ಕೆ ತಲಪಿಸುವ, ಯುವಪೀಳಿಗೆಯಲ್ಲಿ ಅಧ್ಯಯನ ಮತ್ತು ಅರಿವಿನ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನ ಇದಾಗಿದೆ. ಸಾಹಿತ್ಯದಲ್ಲಿ ಅಭಿರುಚಿಯಿರುವ ಪ್ರತಿಯೊಬ್ಬರೂ ಭಾಗವಹಿಸುವ ಕಾರ್ಯಕ್ರಮ ಇದಾಗಿದೆ. ಇಲ್ಲಿ ಕವಿತಾವಾಚನ, ವಾದ್ಯ ಪರಿಕರಗಳ ವಾದನ, ಗಮಕವಾಚನ, ಕತೆಗಳು, ಕವನಗಳು, ಪ್ರಬಂಧಗಳು, ಕಥನಗಳು, ಅನುಭವಗಳು, ಚಿಂತನೆಗಳು, ಕೃತಿಗಳ ವಿಮರ್ಶೆ, ಉತ್ತಮ ಕೃತಿಗಳ ಪರಿಚಯ, ಸಾಧಕರ ಪರಿಚಯ, ಸಮಾಜಸುಧಾರಕರ ಪರಿಚಯ-ಹೀಗೆ  ವಿಭಿನ್ನ ವಿಷಯ, ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪ್ರಸ್ತುತ ಪಡಿಸಬಹುದು. ನಾವೆಲ್ಲರೂ ಒಂದಾಗಿ ಈ ಕಾರ್ಯಕ್ರಮವನ್ನು ಮುನ್ನಡೆಸೋಣವೆಂದರು. ಪ್ರಸ್ತುತ ಪಡಿಸಿದ ವಿಷಯಗಳನ್ನು Shampa.org ಎಂಬ ಶಂಪಾ ಪ್ರತಿಷ್ಠಾನದ ವೆಬ್‌ಸೈಟ್‌ನಲ್ಲಿ  ಪ್ರಕಟಿಸುವ ವ್ಯವಸ್ಥೆಯನ್ನು ಮಾಡಿದುದರ ಬಗ್ಗೆಯೂ ಮಾಹಿತಿ ನೀಡಿದರು.

ಕವಿ, ಸಾಹಿತಿ, ಯಕ್ಷಗಾನ ಕಲಾವಿದ  ಡಾ. ರಮಾನಂದ ಬನಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ʻಸಮಾಜಮುಖಿಯಾಗಿ ಹರಿಯುವ ಸದುದ್ದೇಶ ಈ ಕಾರ್ಯಕ್ರಮಕ್ಕಿದೆ. ಇವು ವಿವಿಧ ಆಯಾಮಗಳಿಗೆ ಸಲ್ಲುವಂತಾಗಲಿ. ಸಾಹಿತ್ಯ, ಸಂಗೀತಗಳೆಂಬ ಸರಸ್ವತಿಯ ಉಭಯಸ್ತನಗಳಿಂದಲೂ ಹಾಲೂಡಲ್ಪಡುವ ಭಾಗ್ಯ ನಮ್ಮದು. ಎಲ್ಲಕ್ಕೂ ಮೂಲಶಬ್ದವೇ. ಮೊದಲು ನಾದಬ್ರಹ್ಮ, ನಂತರ ವೇದಬ್ರಹ್ಮ. ಕೃಷ್ಣ ಕೊಳಲಿನ ದನಿಯಿಂದ ಇಡೀ ಪ್ರಪಂಚವನ್ನೇ ಕುಣಿಸಿದ್ದಾನೆ. ಸಂಗೀತದ ವಿಭಿನ್ನ ರೀತಿಗಳು, ಸಾಹಿತ್ಯದ ವಿವಿಧ ಪ್ರಕಾರಗಳು ಸಂವಹನದ ಮಾಧ್ಯಮಗಳು. ಈ ಕ್ಷೇತ್ರಗಳಲ್ಲಿ ದುಡಿದ ಮಹನೀಯರ ಪರಿಚಯ ಮಾಡಿಕೊಳ್ಳುವುದು ಉತ್ತಮವೇ ಎನ್ನುತ್ತ ಕಾಸರಗೋಡಿನ ಮಹಾಕವಿ ವೆಂಕಟರಾಜ ಪುಣ್ಚಿತ್ತಾಯರ ಸಹಸ್ರಪುಟ ವಿಸ್ತಾರದ ಮಹಾಜನಪದ ಎಂಬ ಗ್ರಂಥದ ಒಂದು ವಾಕ್ಯಮಾಲೆಯ ಸೌಂದರ್ಯವನ್ನು ಆಗಾಗ ನೆನೆಯುತ್ತೇನೆ, ಎಂದು ಸೋದಾಹರಣವಾಗಿ ಉಲ್ಲೇಖಿಸಿ, ಮುದ್ದಣನ ಕುರಿತ ಆ ವಿವರಣೆ ಬಹುರೋಚಕವೆಂದೂ ನಮ್ಮ ಸುತ್ತುಮುತ್ತಲಿನ ಅಂಥ ಸಾಧಕರ ಸಾಧನೆಗಳನ್ನು ಗೌರವದಿಂದ ಕಾಣಬೇಕಾಗಿದೆಯೆಂದೂ ಸೂಚಿಸಿದರು.

ಶ್ರೋತೃಗಳ ಪರವಾಗಿ ಡಿ.ಎಸ್.‌ ಮಂಜುನಾಥ್‌ ಮಾತನಾಡುತ್ತ ಸಾಹಿತ್ಯ ಮತ್ತು ಸಂಸ್ಕೃತಿ ಹಾಸುಹೊಕ್ಕಾಗಿರುವ ಈ ಕಾರ್ಯಕ್ರಮದ ಮೂಲಕ ಆರೋಗ್ಯಪೂರ್ಣವಾದ ವಿಚಾರಗಳು ವಿನಿಮಯವಾಗಲಿ ಎಂದು ಹಾರೈಸಿದರು. ಒಂದು ಮುಕ್ತ ವಿ.ವಿ. ಯಂತೆ ಭಾನುವಾರದ ಈ ಸರಣಿ ಕಾರ್ಯಕ್ರಮಗಳು ಪರಿಣಾಮವನ್ನು ಬೀರಲಿ ಎಂದು ಡಾ. ಯು. ಮಹೇಶ್ವರಿಯವರು ಹಾರೈಸಿದರೆ ಸೂಕ್ತ ಸಲಹೆಗಳ ಮೂಲಕ ಪತ್ತಂಗಿ ಮುರಳಿಯವರು ಕಾರ್ಯಕ್ರಮವನ್ನು ಸ್ವಾಗತಿಸಿದರು. ಡಾ. ಎಸ್.‌ ಎಲ್.‌ ಮಂಜುನಾಥ್‌ ಅವರು ಆಧುನಿಕ ತಂತ್ರಜ್ಞಾನದ ನಡುವೆ ಸಾಹಿತ್ಯ ಹಿನ್ನಡೆಯಲ್ಲಿದೆ. ವಿದ್ಯಾರ್ಥಿಗಳಲ್ಲಂತೂ ಓದಿನ ಕೊರತೆ ಹೆಚ್ಚಾಗಿದೆ. ಇದರಿಂದ ಜ್ಞಾನದ ಕೊರತೆ ಬಾಧಿಸುತ್ತದೆ. ಚಲನಚಿತ್ರಗಳು ಸೆಳೆಯುವಂತೆ ಸಾಹಿತ್ಯ ಸೆಳೆಯುವುದಿಲ್ಲ. ಆಸಕ್ತಿ ಹುಟ್ಟಿಸುವ ಅಧ್ಯಾಪನದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ತಿದ್ದಬೇಕಾಗಿದೆ. ಈ ಕಾರ್ಯಕ್ರಮದ ಮೂಲಕ ಅದೂ ಸಾಧಿಸಲಿ ಎಂದರೆ ಡಾ. ಶಾರದ ಅವರು, ಇಂದಿನ ಸಿಲೆಬಸ್‌ ಸಾಹಿತ್ಯದ ವಿದ್ಯಾರ್ಥಿಗಳನ್ನು ಎತ್ತೆತ್ತಲೋ ಒಯ್ಯುತ್ತಿದೆ. ಅವರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ. ಅಧ್ಯಾಪಕರು ಅಂಥ ಕವಲುದಾರಿಗಳಿಂದ ಅವರನ್ನು ಸರಿದಾರಿಗೆ ತರಬೇಕಾಗಿದೆ. ಇಂಥ ಕಾರ್ಯಕ್ರಮಗಳು ಆ ದಿಕ್ಕಿನಲ್ಲಿ ಪ್ರವರ್ತಿಸಲಿ ಎಂದರು. ಡಾ. ವೇದಾವತಿ ಮತ್ತು ರಘುರಾಮ ಭಟ್ಟರು ಸೂಕ್ತ ಸಲಹೆಗಳ ಮೂಲಕ ಈ ಬಗೆಯ ಕಾರ್ಯಕ್ರಮಗಳು ತುಂಬ ಅಗತ್ಯವಾಗಿದೆ ಇದಕ್ಕಾಗಿ ಆಯೋಜಕರನ್ನು ಅಭಿನಂದಿಸುತ್ತೇವೆನ್ನುತ್ತ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ವಹಿಸಿದ ಪ್ರೊ. ಪಿ.ಎನ್.‌ ಮೂಡಿತ್ತಾಯರು ʻಮೊಗನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ…ʼ ಎಂಬ ಡಿ.ವಿ.ಜಿ. ಯವರ ಕಗ್ಗವನ್ನು ಪ್ರಸ್ತುತಪಡಿಸುತ್ತ ʻಇಂದು ಬದುಕಿನ ರೀತಿಯೇ, ಗೊಂದಲಗಳಿಂದ ಕೂಡಿದೆ. ಮನುಷ್ಯನ ಸಹಜಗುಣವೆಂದರೆ ಮನೆಯ ಸದಸ್ಯರೊಂದಿಗೆ, ಹೊರಜಗತ್ತಿನೊಂದಿಗೆ, ತನ್ನನ್ನೇ ಸಿಂಗರಿಸಿಕೊಳ್ಳುವ ರೀತಿ ಮತ್ತು ನಾಲ್ಕನೆಯದಾದ ಆತ್ಮಚಿಂತನೆಯಲ್ಲಿ ಬೇಕಾದಂತೆ ಸಲ್ಲುವುದು. ಸಾಹಿತ್ಯ ಈ ನಾಲ್ಕು ಮುಖಗಳನ್ನು ಸರಿಯಾಗಿ ಪರಿಚಯಿಸಿ ಅವುಗಳೊಳಗೆ ಹೊಂದಾಣಿಕೆ ಹೇಗೆಂದು ಹೇಳಿ ತಿದ್ದಬಲ್ಲುದೆಂದು ಡಿ,ವಿ.ಜಿ. ಯವರು ಸಾರಿದ್ದಾರೆಂದು ತಿಳಿಸಿದರು. ಮಹಾಕವಿಗಳನ್ನು ತಿಳಿದರೇನೇ ನಮ್ಮ ಕಲಿಕೆ ಭೂತ, ವರ್ತಮಾನಗಳ ಕುರಿತು ಗೌರವ ತಾಳುವಂತೆ ಪ್ರೇರೇಪಿಸೀತು. ಅದರಿಂದ ಭವಿಷ್ಯವನ್ನು ಬಯಸುವ ಮನಸ್ಸೂ ಸಿದ್ಧವಾದೀತು. ಇವತ್ತು ಕನ್ನಡವನ್ನು ಐಚ್ಛಿಕವಿಷಯವಾಗಿ  ಆಯುವವರಿಗೆ ಕೂಡ ಸಾಹಿತ್ಯದ ಆಳ ಅಗಲ ಬೇಕಿಲ್ಲ. ಈ ಕೊರತೆಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೀಗಬೇಕುʼ ಎಂದು ಸೂಚಿಸಿದರು. ಮುಂದಿನ ಭಾನುವಾರ, ೩೦-೦೭-೨೩ ರಿಂದ ಕಾರ್ಯಕ್ರಮವನ್ನು ಆರಂಭಿಸುವುದೆಂದೂ ಆ ದಿನ ಶ್ರೀಯುತ ಡಿ.ಎಸ್.‌ ಮಂಜುನಾಥ್‌ ಅವರು ಪ್ರವಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸ್ತುತಪಡಿಸುವುದಾಗಿಯೂ ನಿರ್ಧರಿಸಲಾಯಿತು.

ಹಂಚಿಕೊಳ್ಳಿ: https://shampa.org/2xb8

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ