ಸೆಪ್ಟೆಂಬರ್ 20, 2024

ಪಾಕ್ಷಿಕ ಕಾರ್ಯಕ್ರಮಗಳು

ದಿನಾಂಕ ೧೬-೦೭-೨೦೨೩ ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಕನ್ನಡ ಸಾಹಿತ್ಯ ಕೃತಿಗಳ ಅಧ್ಯಯನವನ್ನು ಕುರಿತು ಕನ್ನಡ ಸಾಹಿತ್ಯಾಭಿಮಾನಿಗಳ ಒಗ್ಗಟ್ಟಿನ ಸಲಹೆಯನ್ವಯ ಒಂದು ಸಮಾಲೋಚನ ಸಭೆಯನ್ನು ಆನ್‌ ಲೈನ್‌ ಮೂಲಕ ಕರೆಯಲಾಯಿತು. ಸಭೆಯಲ್ಲಿ ಪ್ರೊ. ಪಿ. ಎನ್.‌ ಮೂಡಿತ್ತಾಯರು, ಡಾ. ಎಸ್.‌ ಎಲ್. ಮಂಜುನಾಥ್‌, ಡಾ. ಶಾರದ, ಡಾ. ಮಹೇಶ್ವರಿ, ಡಾ. ವೇದಾವತಿ, ಶ್ರೀಯುತ ರಘುರಾಮ ಭಟ್‌, ಶ್ರೀಯುತ ರಾಘವೇಂದ್ರ,ಶ್ರೀಮತಿ ನಳಿನಾ ಮೂರ್ತಿ, ಶ್ರೀಮತಿ ನಳಿನಾ ನಾಗರಾಜ್‌, ಡಾ. ಪ್ರಮೀಳಾ ಮಾಧವ್‌ -ಹೀಗೆ ಹತ್ತು ಜನ ಭಾಗವಹಿಸಿದ್ದರು. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತಮ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮವನ್ನು ಹದಿನೈದು ದಿನಕ್ಕೊಮ್ಮೆ ಅಧ್ಯಾಪಕ, ಲೇಖಕ, ವಿದ್ಯಾರ್ಥಿ ಮತ್ತು ಇತರ ಸಾಹಿತ್ಯಾಸಕ್ತರ ಅಭಿರುಚಿಗನುಗುಣವಾಗಿ ಭಾಷಣ, ವಿಮರ್ಶೆ, ಕವನವಾಚನ, ಗಮಕ, ಪುಸ್ತಕ ಪರಿಚಯ, ಪ್ರವಾಸಾನುಭವ ಇತ್ಯಾದಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕಲಾಪಗಳನ್ನು ನಡೆಸುವುದೆಂದು ಅಭಿಪ್ರಾಯಿಸಲಾಯಿತು.

ಕಾರ್ಯಕ್ರಮವನ್ನು ಪ್ರಸ್ತುತಪಡಿಸುವವರ ಹೆಸರು ವಿಷಯಕ್ಕೆ ಸಂಬಂಧಿಸಿದಂತೆ ಪಟ್ಟಿಕೆಯನ್ನು ಮುಂದಾಗಿಯೇ ಸಿದ್ಧಮಾಡುವುದು. ಯಾವ ದಿನ, ಯಾವ ವಿಷಯದಲ್ಲಿ ಎಂಬುದನ್ನೂ ಮೊದಲೇ ತಿಳಿಸುವುದರಿಂದ ಶ್ರೋತೃಗಳಿಗೆ ಸಕ್ರಿಯರಾಗಿ ಭಾಗವಹಿಸುವುದಕ್ಕೆ, ಸ್ಪಂದಿಸುವುದಕ್ಕೆ ಸುಲಭ.

ಸಾರ್ವಕಾಲಿಕವಾದ ಉತ್ತಮ ಕೃತಿಗಳ ಅವಲೋಕನ ಮಾಡುವುದು, ಸಂವಾದಗಳಿಗೆ ಅವಕಾಶ ನೀಡುವುದು,ಸಮಕಾಲೀನ ಬರಹಗಾರರ ಕೃತಿಗಳ ಸಹೃದಯ ವಿಮರ್ಶೆ, ಸಂವಾದಗಳನ್ನು ಮಾಡುವುದು.

ಪುಸ್ತಕಪರಿಚಯ ಮಾಡುವವರು ಇಬ್ಬರು ಇರುವುದು ಉತ್ತಮ. ಒಬ್ಬರು ನುರಿತ ವಿದ್ವಾಂಸರಾದರೆ ಇನ್ನೊಬ್ಬರು ಆಗತಾನೆ ಸಾಹಿತ್ಯ ಕ್ಷೇತ್ರಕ್ಕೆ ಆಗಮಿಸಿದ ಹೊಸ ಬರಹಗಾರರು.

ನಡೆಸಿದ ಕಾರ್ಯಕ್ರಮವನ್ನು ಧ್ವನಿಮುದ್ರಣ ಮಾಡುವ ವ್ಯವಸ್ಥೆಯನ್ನು ಮಾಡುವುದು.

ಒಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಮತ್ತು ಎಲ್ಲರಿಗೂ ಪ್ರಯೋಜನಕಾರಿಯಾಗುತ್ತದೆಂಬುದು ಒಮ್ಮತದ ಅಭಿಪ್ರಾಯವಾಗಿತ್ತು. ಇವತ್ತಿನ ವೇಗದ ಯುಗದಲ್ಲಿ ಸಾಹಿತ್ಯದ ಅಧ್ಯಯನ ತೀರಾ ಕಡಿಮೆಯಾಗುತ್ತಿದ್ದು ಹಳಗನ್ನಡ, ನಡುಗನ್ನಡ ಸಾಹಿತ್ಯವನ್ನು ಓದುವುದೇ ಅನಗತ್ಯ ಎಂಬ ತಪ್ಪು ಅಭಿಪ್ರಾಯ ಜನಮನದಲ್ಲಿದೆ. ಸಾಹಿತ್ಯ ಸಂತೋಷವನ್ನು ಮಾತ್ರವಲ್ಲ ಸಂಸ್ಕಾರವನ್ನೂ ನೀಡುತ್ತದೆ. ಕಲಾರಾಧನೆಯಿಂದ ಬೆಲೆಕಟ್ಟಲಾರದ ಪ್ರಯೋಜನ ಸಿಗುತ್ತದೆ. ಆದ್ದರಿಂದ ಓದುವ, ಅರಿಯುವ, ಅಭಿವ್ಯಕ್ತಿಸುವ ಅಭ್ಯಾಸವನ್ನು ರೂಢಿಸಿಕೊಳ್ಳುವ ದಿಸೆಯಲ್ಲಿ ಇದು ತುಂಬ ಅಗತ್ಯ ಮತ್ತು ಸೂಕ್ತ ಎಂದು ಎಲ್ಲ ಸದಸ್ಯರೂ ಅಭಿಪ್ರಾಯ ಪಟ್ಟರು. ಮುಂದಿನ ವಾರ ಮತ್ತೆ ಸೇರಿ ಕಾರ್ಯಕ್ರಮವನ್ನು ನಿಗದಿಪಡಿಸುವುದೆಂದು ತೀರ್ಮಾನಿಸಿ ಸಭೆ ಮುಕ್ತಾಯವಾಯಿತು.

ಹಂಚಿಕೊಳ್ಳಿ: https://shampa.org/uq6d

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ