ಸೆಪ್ಟೆಂಬರ್ 20, 2024

ನವೋದಯ ಕಾಲಘಟ್ಟದಲ್ಲಿ ಬೇಂದ್ರೆಯವರ ಬಳಿಕ ಉತ್ತರ ಕರ್ನಾಟಕದ ಧೀಮಂತ ಸಾಹಿತಿಯೆಂದು ಖ್ಯಾತರಾದವರು ಕವಿಭೂಷಣ ಬಿರುದಾಂಕಿತ ಬೆಟಗೇರಿ ಕೃಷ್ಣಶರ್ಮರು. ಬದುಕಿನ ಅಸಂಖ್ಯ ಇಕ್ಕಟ್ಟು ಬಿಕ್ಕಟ್ಟುಗಳನ್ನು ತಮ್ಮ ಅದಮ್ಯವಾದ ಜೀವನಪ್ರೀತಿ, ದಿಟ್ಟತನ, ಸಂಕಲ್ಪಶಕ್ತಿಗಳಿಂದ ನಿವಾರಿಸಿ ನಿರಂತರವಾದ ಅಧ್ಯಯನ, ಅಧ್ಯಾಪನ, ಸಂಶೋಧನೆ, ಬರಹ, ಪತ್ರಿಕೋದ್ಯಮಗಳ ಮೂಲಕ ಬಹಳ ಎತ್ತರಕ್ಕೆ ಏರಿ ಅನೇಕ ಉದಯೋನ್ಮುಖ ಯುವ ಕವಿಗಳಿಗೆ, ಸಾಧಕರಿಗೆ ಮಾರ್ಗದರ್ಶನ, ಸ್ಫೂರ್ತಿಗಳನ್ನು ತುಂಬಿದ ಮಹಾನ್ ಚೇತಸರು. ಇವರ ಕಾವ್ಯನಾಮ ಆನಂದಕಂದ.
ಕೃಷ್ಣಶರ್ಮರು ಬೆಳಗಾವಿ ಜಿಲ್ಲೆಯ ಗೋಕಾಕ್‌ತಾಲೂಕಿನ ಬೆಟಗೇರಿಯಲ್ಲಿ ಎಪ್ರಿಲ್‌ ೧೬, ೧೯೦೦ರಲ್ಲಿ ಸಾತ್ವಿಕ ಸಂಪನ್ನರಾದ ಶ್ರೀನಿವಾಸರಾಯರು ಮತ್ತು ಅವರ ದ್ವಿತೀಯ ಪತ್ನಿ ರಾಧಾಬಾಯಿಯವರ ಸುಪುತ್ರರಾಗಿ ಜನಿಸಿದರು. ಶ್ರೀನಿವಾಸರಾಯರು ಸಾಹಿತ್ಯ ಸಂಗೀತಗಳಲ್ಲಿ ಆಸಕ್ತಿಯುಳ್ಳವರಾಗಿದ್ದು ಜ್ಯೋತಿಷ್ಯ, ಶಿಲ್ಪ, ತಂಬೂರಿ, ತಬಲಾಗಳಲ್ಲಿ ಪರಿಣತಿಯನ್ನು ಸಾಧಿಸಿದ್ದರು. ರಾಧಾಬಾಯಿ ಸಾಮಾಜಿಕ ಸೇವಾ ಮನೋಭಾವದ ಕಷ್ಟಸಹಿಷ್ಣು ಮಹಿಳೆಯಾಗಿದ್ದರು. ಕೃಷ್ಣಶರ್ಮರ ಮೇಲೆ ತಾಯಿಯ ಪ್ರಭಾವ ಬಹಳ. ʻನನ್ನ ಜೀವನವನ್ನು ಒಂದು ಬಗೆಯ ಮಾನವತೆಯ ಪ್ರಜ್ಞೆಯ ಬೆಳಕಿನಲ್ಲಿ ಮೊದಲಿನಿಂದಲೂ ನಡೆಸಿಕೊಂಡು ಬಂದವಳು ನನ್ನ ತಾಯಿ ರಾಧಾಬಾಯಿ. ಅಂತಹ ತಾಯಿ ನನಗೆ ದೊರೆಯದೇ ಹೋಗಿದ್ದರೆ ನಾನು ನನ್ನ ಇಂದಿನ ಜೀವನದ ರೀತಿಯನ್ನು ಕಾಣದೇ ಇರಬಹುದಾಗಿತ್ತುʼ ಎಂದು ತಮ್ಮ ತಾಯಿಯನ್ನು ಮನದುಂಬಿ ನೆನಪಿಸುವ ಅವರೊಳಗೆ ತಾಯಿಯ ಬಗೆಗಿನ ನೆನಪುಗಳು ಸದಾ ಜೀವಂತವಾಗಿದ್ದುವು. (ಪು೧೫. ಆನಂದ ಕಂದ: ರಾಘವೇಂದ್ರ ಪಾಟೀಲ) ತಾಯಿಯ ದಿನಚರಿ, ಸಾಮಾಜಿಕ ಸೇವಾಮನೋಭಾವ, ಬದುಕಿನ ರೀತಿನೀತಿ ಎಂಟನೆಯ ವಯಸ್ಸಿನಲ್ಲಿಯೇ ಕೃಷ್ಣಶರ್ಮರನ್ನು ಸಮಾಜಮುಖಿಯನ್ನಾಗಿಸಿತು. ಮಾತ್ರವಲ್ಲ ಅವರ ಸೃಜನಶೀಲ ಶಕ್ತಿ ಬೆಳಕಿಗೆ ಬರುವುದಕ್ಕೂ ತಾಯಿಯೇ ಕಾರಣರಾದರು. ಆದರೆ ಹೆತ್ತವರ ಪ್ರೀತಿ, ವಾತ್ಸಲ್ಯಗಳನ್ನು ಅನುಭವಿಸುವ ಅದೃಷ್ಟ ಕೃಷ್ಣಶರ್ಮರಿಗಿರಲಿಲ್ಲ. ೧೨ನೆಯ ವಯಸ್ಸಿಗೆ ತಂದೆಯ ಸಾವು, ೧೮ರಲ್ಲಿ ಮಾತೃವಿಯೋಗ, ಹಾಗೆಯೇ ವಿಷಮಶೀತ ಜ್ವರ, ಪ್ಲೇಗ್ ಮುಂತಾದ ಅನಾರೋಗ್ಯ ಮಾನಸಿಕವಾಗಿಯೂ ದೈಹಿಕವಾಗಿಯೂ ಅವರನ್ನು ಕಂಗೆಡಿಸುತ್ತಿದ್ದುವು. ತಮ್ಮ ಕೊರತೆಗಾಗಿ ಕೊರಗದೆ ಸತತ ಅಧ್ಯಯನ, ಬರವಣಿಗೆ, ಸಮಾಜಸೇವೆಯನ್ನು ಮಾಡುತ್ತ ಬಲಶಾಲಿಯಾಗಿ ಬೆಳೆದರು. ಸುತ್ತುಮುತ್ತಲಿನ ಹಳ್ಳಿಯ ಜನರ ಕಷ್ಟ, ಕಾರ್ಪಣ್ಯಗಳೊಂದಿಗೆ ಬೆರೆಯುತ್ತಿದ್ದ ಕೃಷ್ಣಶರ್ಮರು ಜನಪದರ ನಂಬಿಕೆ, ಸಂಪ್ರದಾಯ, ರೀತಿ, ನೀತಿ, ಮಾತು, ವರಸೆ, ಜನಪದೀಯ ಆಟ, ವೇಷ, ಹಾಡು, ಕತೆಗಳಿಂದ ಪ್ರಭಾವಿತರಾಗುತ್ತಿದ್ದರು. ವಾಸ್ತವ ಜೀವನದ ಅನೇಕ ಕಠೋರ ಸತ್ಯಗಳು ಅವರಿಗೆ ಮನವರಿಕೆಯಾಗುತ್ತಿದ್ದುವು. ಹಲವು ಊರುಗಳ ಸಂಚಾರ, ವಾಸ್ತವ್ಯದಿಂದಾಗಿ ಲೋಕಾನುಭವ ವಿಸ್ತಾರವಾಗುತ್ತಿತ್ತು. ಬದುಕಿನ ಆಘಾತ, ಅಡೆತಡೆಗಳ ಮಧ್ಯೆಯೇ ಕೃಷ್ಣಶರ್ಮರು ಸ್ವಯಂಭುವಾಗಿ ದೃಢವಾದ ವ್ಯಕ್ತಿತ್ವವನ್ನು ರೂಪಿಸಿದರು.
ಕೌಟುಂಬಿಕ ಕಾರಣದಿಂದ ಮುಲ್ಕಿ ಪರೀಕ್ಷೆ(ಏಳನೆಯ ತರಗತಿ) ಪಾಸಾಗಿ ವಿದ್ಯೆ ಮುಂದುವರಿಸಲಾಗದ ಕೃಷ್ಣಶರ್ಮರನ್ನು ಕಾವ್ಯಾನಂದರು(ನರಸಿಂಹಾಚಾರ್ಯ ಪುಣೇಕರ) ತಮ್ಮ ಊರಾದ ಕಿತ್ತೂರಿಗೆ ಕರೆಸಿ ಸಂಸ್ಕೃತ ಸಾಹಿತ್ಯದ ಭದ್ರಬುನಾದಿಯನ್ನು ಹಾಕಿಕೊಟ್ಟರಲ್ಲದೆ ಅವರೊಳಗಿನ ರಾಜಕೀಯ ಪ್ರಜ್ಞೆಯನ್ನೂ ಬಡಿದೆಬ್ಬಿಸಿದರು. ಗಾಂಧೀಜಿಯ ಅನುಯಾಯಿಯಾಗಿ ಬೆಳಗಾವಿಯ ಕಾಂಗ್ರಸ್‌ ಅಧಿವೇಶನದಲ್ಲಿ ಸ್ವಯಂ ಸೇವಕರಾಗಿ ದುಡಿಯಲು, ಸ್ವಯಂ ಸೇವಕರನ್ನು ಒಟ್ಟುಗೂಡಿಸಲು, ಪಿಕೆಟಿಂಗ್‌ ನಡೆಸಲು ಕಾವ್ಯಾನಂದರಿಂದ ಪ್ರೇರಿತರಾದ ಕೃಷ್ಣಶರ್ಮರು ಅನತಿಕಾಲದಲ್ಲಿಯೇ ಅವರಿಂದ ʻಕವಿಭೂಷಣʼ ಎಂಬ ಪ್ರಶಸ್ತಿಯನ್ನು ಗಳಿಸಿ ಬೆಟಗೇರಿಗೆ ಮರಳಿದರು.
ಮೂಡಲಗಿ ಎಂಬ ಊರಿನಲ್ಲಿ ಮಾಸ್ತರಿಕೆಯ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ ಕೃಷ್ಣಶರ್ಮರು ನೌಕರಿಯನ್ನು ಮುಂದುವರಿಸಲಾಗದೆ ಶ್ರೀನಿವಾಸ ಪುಸ್ತಕಾಲಯ ಎಂಬ ಗ್ರಂಥಾಲಯ ಆರಂಭಿಸಿದರು. ೧೯೨೮ರಲ್ಲಿ ವಿವಾಹಿತರಾದರೂ ದಾಂಪತ್ಯಜೀವನದಲ್ಲೂ ಅವರು ಸುಖಿಯಾಗಿರಲಿಲ್ಲ. ಅಷ್ಟು ಆರೋಗ್ಯವಂತರಲ್ಲದ ಅವರ ಮಡದಿ ತುಳಸಾಬಾಯಿಯವರು ನಾಲ್ಕು ಮಕ್ಕಳನ್ನು ಹೆತ್ತು ೧೯೫೭ ರಲ್ಲೇ ಕ್ಷಯರೋಗ ಪೀಡಿತರಾಗಿ ಮರಣಿಸಿದ ಬಳಿಕ ಕೌಟುಂಬಿಕ ಜವಾಬ್ದಾರಿಯೂ ಅವರ ಹೆಗಲಮೇಲೆ ಬಿತ್ತು. ಬೆಟಗೇರಿ ಕೃಷ್ಣಶರ್ಮರ ಬಗ್ಗೆ ʻಆನಂದಕಂದʼ ಎಂಬ ಕೃತಿ ಬರೆದ ರಾಘವೇಂದ್ರ ಪಾಟೀಲರು ಜೀವನದುದ್ದಕ್ಕೂ ಕಡು ಕಷ್ಟಗಳ ಹಳ್ಳ ಕೊಳ್ಳಗಳನ್ನು ದಾಟಿ ಬಂದ ಅವರ ಬದುಕನ್ನು ಕಡಲಕುದಿತದ ಎಣ್ಣೆ ಕೊಪ್ಪರಿಗೆಗೆ ಹೋಲಿಸಿದ್ದು ಯಥಾರ್ಥವಾಗಿದೆ. ಅಂಥ ಕುದಿಯುವ ಕೊಪ್ಪರಿಗೆಯಿಂದ ಎದ್ದು, ಗೆದ್ದು ಕೃಷ್ಣಶರ್ಮರು ೨೦ನೆಯ ಶತಮಾನದ ಯುಗಕವಿಯಾಗಿ ಮೆರೆದರು.
ಕೃಷ್ಣಶರ್ಮರಿಗೆ ಹಿಂದಿ, ಇಂಗ್ಲಿಷ್‌ ಪರಿಚಿತ ಭಾಷೆಯಾಗಿದ್ದರೂ ಕನ್ನಡ, ಸಂಸ್ಕೃತ, ಮರಾಠಿ, ಬಂಗಾಲಿಗಳಲ್ಲಿ ಪ್ರಭುತ್ವವಿತ್ತು. ಮನೆಯಲ್ಲಿಯೇ ನಿರಂತರ ಅಧ್ಯಯನ ಮಾಡುತ್ತಿದ್ದ ಅವರು ಬಾಲ್ಯದಿಂದಲೇ ಸಾಹಿತ್ಯಾಸಕ್ತಿ, ಕಾದಂಬರಿಗಳ ಓದಿನಲ್ಲಿ ಅಭಿರುಚಿ ಮೈಗೂಡಿಸಿಕೊಂಡಿದ್ದರು. ತಮ್ಮ ಕೊನೆಯ ದಿನಗಳ ವರೆಗೂ ಅಧ್ಯಾಪನ ಅಧ್ಯಯನಗಳನ್ನೇ ಮಾಡುತ್ತಿದ್ದ ಅವರ ಮನೆ ಸದಾ ವಿದ್ವಜ್ಜನರ ಸಹವಾಸದಿಂದ, ಗೋಷ್ಠಿಗಳಿಂದ ತುಂಬಿರುತ್ತಿತ್ತು ಎನ್ನುವುದು ರಾಘವೇಂದ್ರ ಪಾಟೀಲ ಮುಂತಾದ ನಿಕಟವರ್ತಿಗಳ ಅನುಭವದ ಮಾತು. ಶಾಸ್ತ್ರೀಯ ವಿದ್ಯಾಭ್ಯಾಸವನ್ನು ಮುಲ್ಕಿ ಪರೀಕ್ಷೆಯ ಆಚೆಗೆ ಮುಂದುವರಿಸಲಾಗದಿದ್ದರೂ ಕನ್ನಡ ಸಾಹಿತ್ಯದ ಉದ್ಧಾಮ ಕೃತಿಗಳಿಗೆ ವ್ಯಾಖ್ಯಾನ ಮಾಡುವುದು, ಸಾಹಿತ್ಯಸಂಬಂಧವಾದ ಸಮಸ್ಯೆಗಳನ್ನು ಬಗೆಹರಿಸುವುದು, ಚರ್ಚೆ, ಸಮಾಲೋಚನೆಗಳಲ್ಲಿ ಭಾಗವಹಿಸುವುದು, ಶ್ರೋತೃಗಳ ಪ್ರಶ್ನೆಗಳಿಗೆ ಉತ್ಸಾಹಭರಿತರಾಗಿ ಪ್ರತಿಕ್ರಿಯಿಸುವುದು ಅವರಿಗೆ ಪ್ರಿಯವಾದ ಹವ್ಯಾಸವಾಗಿತ್ತು.
ಅಜಾತಶತ್ರುಗಳಾಗಿ ಬಾಳಿದ ಆನಂದಕಂದರು ಕನ್ನಡ ನಾಡಿನ ಅಪರೂಪದ ಸಾಂಸ್ಕೃತಿಕ ರಾಯಭಾರಿಯಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿಗೈದು ಬದುಕನ್ನೂ ಬರಹವನ್ನೂ ಸಮಾನವಾಗಿ ಪ್ರೀತಿಸಿ ಸಾರ್ಥಕ್ಯವನ್ನು ಪಡೆದರು. ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಅಪಾರವಾಗಿ ಕೃಷಿಗೈದಿರುವುದಲ್ಲದೆ ಸ್ವಾತಂತ್ರ್ಯ ಚಳುವಳಿ, ರಾಷ್ಟ್ರೀಯ ಭಾವೈಕ್ಯತೆ, ಕರ್ನಾಟಕ ಏಕೀಕರಣ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರವರ್ಧನೆಗೂ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ. ೧೯೭೭ರಲ್ಲಿ ಪಾರ್ಶ್ವವಾಯು ಪೀಡಿತರಾಗಿ ಮಾತು ಮತ್ತು ಚಲನ ಶಕ್ತಿಯನ್ನು ಕಳೆದುಕೊಂಡರೂ ತಮ್ಮ ಆತ್ಮಬಲ, ಛಲ, ಸಾಧನೆಗಳಿಂದ ಮತ್ತೆ ಅದನ್ನು ಪಡೆದುಕೊಂಡಿದ್ದರು. ಆದರೆ ೧೯೭೯ರಲ್ಲಿ ಪುನಃ ತೀವ್ರ ಅನಾರೋಗ್ಯಪೀಡಿತರಾಗಿ ೧೯೮೨ ಅಕ್ಟೋಬರ್ ೩೦ರಂದು ಧಾರವಾಡದ ಮನೆಯಲ್ಲಿ ನಿಧನ ಹೊಂದಿದರು.
ಕನ್ನಡ ಸಾಹಿತ್ಯಕ್ಕೆ ಆನಂದಕಂದರ ಕೊಡುಗೆ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಆನಂದಕಂದರ ಕೊಡುಗೆ ಬಹುಮುಖವಾದುದು. ಇವರು ಕತೆ, ಕಾದಂಬರಿ, ಕಾವ್ಯ, ಜೀವನಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ, ಚರಿತ್ರೆ, ಅನುವಾದ, ಪತ್ರಿಕೋದ್ಯಮ-ಮುಂತಾದ ಕ್ಷೇತ್ರಗಳಲ್ಲಿ ಆರು ದಶಕಗಳ ಕಾಲ ಕನ್ನಡ ಸೇವೆಯನ್ನು ಮಾಡಿದ ಆನಂದಕಂದರು
ರಾಷ್ಟ್ರೀಯ ಪದ್ಯಾವಲಿ, ಗಾಂಧೀ ಗೀತ ಸಪ್ತಕ, ರಾಷ್ಟ್ರೀಯ ಪದ್ಯಮಾಲೆ, (೧೯೨೧), ರಮೆಯುಮೆಯರ ವಿನೋದಸಂವಾದ(೧೯೨೪) ಮುದ್ದನ ಮಾತು(೧೯೨೬), ಅರುಣೋದಯ(೧೯೨೬), ವಿರಹಿಣಿ(೧೯೩೫), ಒಡನಾಡಿ(೧೯೪೫), ಕಾರಹುಣ್ಣಿಮೆ(೧೯೫೧), ನಲ್‌ ವಾಡುಗಳು(೧೯೫೮), ಉತ್ಸಾಹ ಗಾಥಾ(೧೯೭೨), ಸಾಮಾಜಿಕ ಸಂವಚನಗಳು(೧೯೮೧) -ಹೀಗೆ ಸುಮಾರು ೧೨ ಕವನಸಂಕಲನಗಳನ್ನೂ
ಸಂಸಾರ ಚಿತ್ರ(೧೯೩೨) ಬಡತನದ ಬಾಳು(೧೯೩೨) ನಮ್ಮ ಬದುಕು(೧೯೩೯), ಜನಪದ ಜೀವನ(೧೯೫೫), ಮಾತನಾಡುವ ಕಲ್ಲು(೧೯೪೯), ಕಳ್ಳರ ಗುರು ಮತ್ತು ಇತರ ಕತೆಗಳು(೧೯೬೯)-೬ ಕಥಾ ಸಂಕಲನಗಳನ್ನೂ
ರಾಜಯೋಗಿ(೧೯೩೪), ಅಶಾಂತಿ ಪರ್ವ(೧೯೩೫), ಮಲ್ಲಿಕಾರ್ಜುನ(೧೯೬೧), ಮಗಳ ಮದುವೆ(೧೯೫೧), ಸುದರ್ಶನ(೧೯೩೩) -೫ ಕಾದಂಬರಿಗಳನ್ನೂ
ಬೆಳವಡಿ ಮಲ್ಲಮ್ಮ(೧೯೫೧), ಬೆಂದ ಹೃದಯ(೧೯೫೪), ಮುಂಡರಗಿಯ ಗಂಡುಗಲಿ(೧೯೬೨), ಪಂಚಗಂಗಾ(೧೯೬೨)-೪ ನಾಟಕಗಳನ್ನೂ
ಕರ್ನಾಟಕ ಜನಜೀವನ, ಸಾಹಿತ್ಯವು ಸಾಗಿರುವ ದಾರಿ, ನಮ್ಮ ಸಂಸ್ಕೃತಿ ಪರಂಪರೆ, ಸಾಹಿತ್ಯ ವಿಹಾರ ಮುಂತಾದ ೪ ಸಂಶೋಧನೆ ಮತ್ತು ವಿಮರ್ಶಾ ಕೃತಿಗಳನ್ನೂ
ಮೃಚ್ಛಕಟಿಕ, ಪೂಜಾತತ್ವ, ಆರ್ತಭಾವ, ಮಾಹಾತ್ಮ್ಯ ಜ್ಞಾನ, ಕೃಷ್ಣಲೀಲಾ, ಲೋಕನೀತಿ, ಕನಕದಾಸರ ಭಕ್ತಿಗೀತೆಗಳು, ಆಕ್ರೂರ ಚರಿತ್ರೆ, ಪ್ರಸನ್ನ ವೆಂಕಟದಾಸರ ಭಾಗವತ, ಹರಿಭಕ್ತಿ ಸಾಧನೆ-ಹೀಗೆ ೧೦ ಸಂಪಾದಿತ ಕೃತಿಗಳನ್ನೂ
ಬಸವಣ್ಣನವರು, ಚಂದ್ರಹಾಸ, ಭೀಷ್ಮ, ಲವಕುಶಗಳೆಂಬ ೪ ಮಕ್ಕಳ ಸಾಹಿತ್ಯವನ್ನೂ
ಬೀಸುಕಲ್ಲಿನ ಹಾಡು, ಕನ್ನಡ ಜಾನಪದ ಸಾಹಿತ್ಯವೆಂಬ ೨ ಜನಪದ ಕೃತಿಗಳನ್ನೂ
ಮಧ್ಯಮ ವ್ಯಾಯೋಗ(ಅನುವಾದ), ಕನ್ನಡ ರಾಜ್ಯ ರಮಾರಮಣ(ಇತಿಹಾಸ), ನನ್ನ ನೆನಪುಗಳು (ಆತ್ಮಕತೆ)-ಒಟ್ಟು ೫೨ಕ್ಕಿಂತಲೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆನ್ನುವುದು ಸದ್ಯಕ್ಕೆ ತಿಳಿದು ಬರುವ ವಿಚಾರ.
ಮಾತೃಭೂಮಿ, ಸ್ವಧರ್ಮ, ಮನೋಹರ ಗ್ರಂಥಮಾಲಾ, ಜಯಕರ್ನಾಟಕ, ಜಯಂತಿ ಪತ್ರಿಕೆಗಳ ಸಂಪಾದಕರಾಗಿಯೂ ಆನಂದಕಂದರು ಸೇವೆ ಸಲ್ಲಿಸಿದ್ದಾರೆ. ಜಯಂತಿ ಪತ್ರಿಕೆಗೆ ಇವರು ನೀಡಿದ ಸೇವೆ ಅಮೋಘವಾದುದು. ಆ ಪತ್ರಿಕೆಯಲ್ಲಿ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿದರೂ ಸುಮಾರು ೨೩ ವರ್ಷಗಳ ಕಾಲ ಅದನ್ನು ಕೈಬಿಡದೆ ನಡೆಸಿದರು.
ಆನಂದಕಂದರ ಕೆಲವು ಪ್ರಾತಿನಿಧಿಕ ಕವನ, ಕತೆ ಮತ್ತು ಕಾದಂಬರಿಗಳ ಮೂಲಕ ಅವರ ಸಾಹಿತ್ಯದ ಮಹತ್ವವನ್ನು ಪರಿಚಯಿಸುವುದು ಈ ಲೇಖನದ ಉದ್ದೇಶ.
ಕವನಗಳು
೧೯೧೮ರಲ್ಲಿ ಭಾಮಿನೀ ಷಟ್ಪದಿಯಲ್ಲಿ ರಚಿಸಿದ ಭಕ್ತಿಕುಸುಮಾವಳಿ ಎಂಬ ಪದ್ಯ ಆನಂದಕಂದರ ಮೊದಲ ರಚನೆ. ಚಿಕ್ಕಂದಿನಲ್ಲಿಯೇ ಮನೆಯಲ್ಲಿ ತಾಯಿ ಮತ್ತು ಹಿರಿಯರು ಹಾಡುವ ಭಜನೆ, ಭಕ್ತಿಗೀತೆಗಳನ್ನು ಕೇಳಿ ಕೇಳಿ ಸಂಗೀತದ ಲಯ, ಧಾಟಿಗಳು ಅವರ ಮನದಾಳದಲ್ಲಿ ಬೇರೂರಿದ್ದುವು. ಮುಂದೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಂಗಾಧರರಾವ್ ದೇಶಪಾಂಡೆಯವರ ಸಂಪರ್ಕದಿಂದ ರಾಷ್ಟ್ರೀಯತೆ ಜಾಗೃತಿಗೊಂಡು ದೇಶಭಕ್ತಿ ಹಾಡುಗಳ ರಚನೆ ಆರಂಭವಾಯಿತು. ಆಗ ಬೆಳಗಾವಿಯ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅವರು ಮರಾಠಿ ಪ್ರಾಬಲ್ಯದಿಂದ ಬೆಳಗಾವಿಯ ಕನ್ನಡಿಗರ ಪರಿಸ್ಥಿತಿಯನ್ನು ನೋಡಿ ನೊಂದು ಕನ್ನಡ ನಾಡು ನುಡಿಗಳ ಉಳಿವಿಗಾಗಿ ಕನ್ನಡ ಪ್ರೇಮವನ್ನು ಬಿಂಬಿಸುವ, ಪಥಸಂಚಲನದಲ್ಲಿ ಹಾಡುವುದಕ್ಕೆ ಅನುಕೂಲವಾಗುವ ಕವನಗಳನ್ನು ಕಟ್ಟಿ ವಿದ್ಯಾರ್ಥಿ ತರುಣರನ್ನು ಒಗ್ಗೂಡಿಸಿ ಬೆಳಗಾವಿಯ ಕನ್ನಡಿಗರ ಕಣ್ಣು ತೆರೆಸಿದರು. ಇವರ ʻಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯುʼ, ʻನನ್ನದು ಈ ಕನ್ನಡ ನಾಡುʼ ಮುಂತಾದ ಕವನಗಳು ಈ ನಿಟ್ಟಿನಲ್ಲಿ ತುಂಬ ಜನಪ್ರಿಯತೆಯನ್ನು ಗಳಿಸಿದುವು. ತಮ್ಮ ಕವನಗಳನ್ನು ತಾವೇ ಸುಮಧುರವಾಗಿ ವಾಚಿಸುತ್ತಿದ್ದ ಆನಂದಕಂದರ ಕವನಗಳು ಚಳುವಳಿಯ ವೀರರಿಗೆ ಮಂತ್ರಗಳಂತೆ ಉತ್ತೇಜನ ನೀಡುತ್ತಿದ್ದುವು.
ರಾಷ್ಟ್ರೀಯ ಭಾವೈಕ್ಯತೆ ಮತ್ತು ದೇಶಪ್ರೇಮಕ್ಕೆ ಸಂಬಂಧಿಸಿದ ಆನಂದಕಂದರ ಕವನಗಳು ೧೯೨೧ರಲ್ಲಿ ರಾಷ್ಟ್ರೀಯ ಪದ್ಯಾವಲಿ, ಗಾಂಧೀ ಗೀತ ಸಪ್ತಕ, ರಾಷ್ಟ್ರೀಯ ಪದ್ಯಮಾಲೆಗಳೆಂಬ ಮೂರು ಸಂಕಲನಗಳಾಗಿ ಮುದ್ರಣಗೊಂಡಿವೆ.
ಇಂಗ್ಲಿಷ್‌ ವಿದ್ಯಾಭ್ಯಾಸದ ಸೋಂಕಿಲ್ಲದೆ ಅಪ್ಪಟ ದೇಶೀಯ ನೆಲೆಯಲ್ಲಿ ಕಾವ್ಯವನ್ನು ಕಟ್ಟಿದವರು ಆನಂದಕಂದರು. ದಾಸರ ಪದಗಳು, ಬಯಲಾಟದ ಹಾಡುಗಳು, ರಂಗಗೀತೆಗಳ ಹಿನ್ನೆಲೆಯಿಂದ ಸಾಂಪ್ರದಾಯಿಕ ಮಾರ್ಗದಲ್ಲಿಯೇ ಅವರು ಕವನಗಳನ್ನು ರಚಿಸುತ್ತಿದ್ದರು. ʻಧಾರವಾಡದ ಗೆಳೆಯರ ಗುಂಪಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆನಂದಕಂದರು ಹೊಸಸಾಹಿತ್ಯದ ಅರಿವು, ಅಗತ್ಯಗಳನ್ನು ಮನಗಂಡು ಕಾವ್ಯದಲ್ಲಿ ಹೊಸಪ್ರಯೋಗಗಳನ್ನು ಮಾಡಿದರುʼ ಎನ್ನುತ್ತಾರೆ ರಾಘವೇಂದ್ರ ಪಾಟೀಲರು. ೧೯೨೬ರಲ್ಲಿ ಆರ್ಯವಿದ್ಯಾಶಾಲೆಯ ಶಿಕ್ಷಕರಾಗಿ ಬೆಂಗಳೂರಿಗೆ ಬಂದ ಆನಂದಕಂದರಿಗೆ ದೇವುಡು, ಮಾಸ್ತಿ ಮುಂತಾದವರು ಸುಪರಿಚಿತರಾದರು. ಅವರ ಸುಪ್ರಸಿದ್ಧವಾದ ʻಮುದ್ದನ ಮಾತುʼ ಮತ್ತು ʻಅರುಣೋದಯʼ ಕವನ ಸಂಕಲನಗಳು ಈ ಕಾಲಘಟ್ಟದಲ್ಲಿ ಪ್ರಕಟಣೆಗೊಂಡುವು.
ಆನಂದಕಂದರ ಕವನಗಳ ಬಹುಮುಖ್ಯ ಆಕರ್ಷಣೆ ಅವುಗಳ ಗೇಯತೆ ಮತ್ತು ಭಾಷಾ ಶುದ್ಧತೆ. ಅವರ ಸಂಗೀತಜ್ಞಾನ ಮತ್ತು ತಾಳಜ್ಞಾನಗಳೂ ಇದಕ್ಕೆ ಪೂರಕವಾಗುವುದರಿಂದ ಛಂದಸ್ಸಿನ ಹದ, ಸಹಜಪ್ರಾಸದಲ್ಲಿ ಕಾವ್ಯಗಂಗೆ ಹರಿಯುತ್ತದೆ. ದಟ್ಟವಾದ ರಾಷ್ಟ್ರೀಯ ಪ್ರಜ್ಞೆ, ಕನ್ನಡ ಭಾಷಾಪ್ರೀತಿ, ಗಂಡುಹೆಣ್ಣಿನ ಒಲವು-ವಿರಹ, ಸೌಂದರ್ಯಾರಾಧನೆ, ಕನಸುಗಾರಿಕೆ, ಆಶಾವಾದ, ಆದರ್ಶವಾದ- ಹೀಗೆ ಆನಂದಕಂದರ ಕವಿತೆಗಳಲ್ಲಿ ಬಹಳಷ್ಟು ವಸ್ತು ವೈವಿಧ್ಯವೂ ಇದೆ.
ರಾಷ್ಟ್ರೀಯ ಪ್ರಜ್ಞೆಯಿಂದ ಗಮನಸೆಳೆಯುವ ಕವನಗಳಲ್ಲಿ ಒಂದು ಅತ್ಯುತ್ತಮ ಕವನ ʻಪ್ರಜಾರಾಜ್ಯʼ. ಈ ಕವನದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಕರಾಳ ಚಿತ್ರವನ್ನು ಅವರು ಹೇಗೆ ಅನಾವರಣ ಮಾಡಿದ್ದಾರೆ ನೋಡಿ:
ಪ್ರಜಾರಾಜ್ಯ ಬಂತು ಬಂತು ಸಕಲ ಪ್ರಜಾರಾಜ್ಯ!
ಪ್ರಜೆಗಳಿಗೇ ಇಲ್ಲ ಗೊತ್ತು: ʻ ಯಾರದು ಈ ರಾಜ್ಯ!ʼ
ಲಂಚ ಮುಕ್ಕುವವರ ಉಕ್ಕು ಪ್ರಜಾರಾಜ್ಯವೇ?
ಕಳ್ಳಪೇಟೆಯವರ ಬೇಟೆ ಪ್ರಜಾರಾಜ್ಯವೇ?
ಮಾತೆ ಮಾತು, ಕೃತಿಗೆ ತೂತು! ಸುಖವು ಸಾಧ್ಯವೇ?
ಕವನದ ʻಪ್ರಜೆಗಳಿಗೇ ಇಲ್ಲ ಗೊತ್ತು: ಯಾರದು ಈ ರಾಜ್ಯʼ ಈ ಪ್ರಶ್ನೆಯೊಳಗಿನ ಧ್ವನಿಯನ್ನು ಗಮನಿಸಬೇಕು. ಬೆಟಗೇರಿಯವರ ಈ ಪ್ರಶ್ನೆ ಸುಪ್ರಸಿದ್ಧ ದಲಿತ ಕವಿ ಡಾ. ಸಿದ್ಧಲಿಂಗಯ್ಯನವರ ʻಎಲ್ಲಿಗೇ ಬಂತು ಯಾರಿಗೇ ಬಂತು ೪೭ ರ ಸ್ವಾತಂತ್ರ್ಯʼ ಎಂಬ ಕವನವನ್ನು ನೆನಪಿಸುತ್ತದೆ.
ದಾಂಪತ್ಯ ಗೀತೆಗಳು
ಆನಂದಕಂದರು ಪ್ರೀತಿ-ಪ್ರಣಯಗಳಿಗೆ ಸಂಬಂಧಿಸಿದಂತೆ ಅನೇಕ ಕವನಗಳನ್ನು ಬರೆದಿದ್ದಾರೆ. ವಿರಹಿಣಿ, ನಲ್ವಾಡು ಸಂಕಲನಗಳು ಇದಕ್ಕೆ ಉತ್ತಮ ಉದಾಹರಣೆ. ವಿರಹಿಣಿ ಕವನ ಸಂಕಲನದಲ್ಲಿ ವಿರಹವೇ ಪ್ರಧಾನವಾಗುಳ್ಳ ಕವನಗಳಿದ್ದು ಇಲ್ಲಿನ ವಿರಹದ ಕಾವು ಬೇಂದ್ರೆ, ಮಧುರಚೆನ್ನ, ಅಡಿಗ ಮುಂತಾದವರ ಕವಿತೆಗಳಂತೆ ಆಧ್ಯಾತ್ಮದ ನೆಲೆಗೆ ಏರದೆ ಲೌಕಿಕ ನೆಲೆಯಲ್ಲಿಯೇ ಸಾರ್ಥಕವಾಗುತ್ತದೆ. ನಲ್ವಾಡುಗಳು ಸಂಕಲನದ ಪದ್ಯಗಳ ವಸ್ತುವೂ ಪ್ರೀತಿ. ವಿರಹಿಣಿಯ ಕೇಂದ್ರಪ್ರಜ್ಞೆ ಹೆಣ್ಣಾದರೆ ನಲ್ವಾಡುಗಳ ಕೇಂದ್ರಪ್ರಜ್ಞೆ ಗಂಡುಹೆಣ್ಣುಗಳೆರಡನ್ನೂ ಒಳಗೊಳ್ಳುತ್ತದೆ.
ಒಂದು ಪದ್ಯದ ಸ್ವಾರಸ್ಯ:
ʻಎದಿಯ ತ್ವಾಟದಾಗ ಪ್ರೀತಿ ಬೀಜ, ಸಸಿ ಬಿಟ್ಟು ಬೆಳಿಯಲಾಕ, ಕಾಮನನ್ನ ಕಳಿಸ್ಯಾನ ದೇವ ತಾ ನೀರು ಹನಿಸಲಾಕ ( ನಲ್ವಾಡುಗಳು: ಮೊದಲು ನಮ್ಮ ನಮನಾ)
ಪ್ರೀತಿ, ಪ್ರೇಮಗಳೇ ದಾಂಪತ್ಯದ ಜೀವಾಳವೆನ್ನುವುದು ಆನಂದಕಂದರ ಸಿದ್ಧಾಂತ. ಅಲ್ಲಿ ಹೆಣ್ಣು ಗಂಡು ಪರಸ್ಪರ ಯಾವ ಕೊರತೆಯನ್ನೂ ಕಾಣಲಾರರು. ಅವರ ಅನೇಕ ಕತೆಗಳೂ ಇದೇ ಆಶಯವನ್ನು ಸಾರುತ್ತವೆ.
ʻಎದುರು ನೀನೆ ಬಂದು ನಿಂದು
ನಗೆಯ ಮೊಲ್ಲೆ ಮುಗುಳಿನೊಡನೆ
ಸೊಗಸ ಸುತ್ತ ಹರಹುವೆ
ಹೊಗರನೊಗೆಯುತಿರುವ ನಿನ್ನ ಬೊಗಸೆಗಣ್ಣ ತಿರುಹುವೆ!
ಕೆಳೆಯು ಬೆರೆತ ನಲುಮೆನೋಟ ನನ್ನೆದೆಯಲಿ ನಿಲಿಸಿ
ಬಳಿಯಲಿ ನೀನಿರಲು ಚೆಲುವೆ ಸಲುಗೆ ನುಡಿಯನುಲಿಸಿ-
ಎಲ್ಲೆಲ್ಲಿಯೂ ಕುಂದ ಕಾಣೆ
ಸುಳ್ಳಲ್ಲವೆ ದೇವರಾಣೆ!(ನನ್ನಾಕೆಗೆ)
ಇಲ್ಲಿನ ಭಾವಕ್ಕೆ ತಕ್ಕ ಲಯ, ಗತಿ, ನಾದರಮ್ಯತೆ, ಅಭಿನಯಕ್ರಿಯೆಯನ್ನು ಮನಗಾಣಬಹುದು. ʻಸುಳ್ಳಲ್ಲವೆ ದೇವರಾಣೆʼ ಎನ್ನುವ ಪದಗಳ ಅರ್ಥಸ್ವಾರಸ್ಯ ಅದ್ಭುತ.
ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ
ನನ್ನಿ ಹಿಗ್ಗಿನ ಹೊಸತೋಟ!
ನಾನೊಂದು ಮಾಮರ ನೀ ಮಲ್ಲಿಗೆಯ ಬಳ್ಳಿ: ಚನ್ನೇ ಚನ್ನೆನಿತು ಈ ಕೂಟ..ಎಂಬ ಸಾಲುಗಳಲ್ಲಿ ಹುದುಗಿದ ಜೀವನಪ್ರೀತಿ, ನಂಬಿಕೆ ಎಷ್ಟು ಅಗಾಧವಾದುದು ಎಂಬುದು ಪರಿಭಾವನಾಯೋಗ್ಯ.
ಆನಂದಕಂದರ ʻಶಬರಿಯ ಬಾಳುʼ ಒಂದು ಅಪರೂಪದ, ವಿಶಿಷ್ಟ ಕವನ. ಚಿರವಿರಹಿಣಿಯಾದ ಶಬರಿಗೆ ರಾಮನ ಬಗ್ಗೆ ಇರುವ ಅಖಂಡವಾದ ಪ್ರೀತಿಯನ್ನು ತಿಳಿಸುವ ಇದರಲ್ಲಿ ತಾಯಿಯ ವಾತ್ಸಲ್ಯ, ಮಗುವಿನ ಮುಗ್ಧತೆ, ಯೌವನದ ಒಂಟಿತನ, ವಿರಹಿಣಿಯ ನಿರೀಕ್ಷೆ, ಭಕ್ತಿಯ ಅರ್ಪಣೆ, ಸ್ನೇಹದ ಒರತೆ- ಎಲ್ಲ ಭಾವಗಳೂ ಸಮರಸವಾಗಿದೆ:
ʻಅಡವಿಮಿಗ.. ಮಂಗ ಹಕ್ಕಿಗಳು ತಮ್ಮಂತಿರುವ ಒಡನಾಡಿಗಳ ಬೆರೆತು ಆಟಗಳನಾಡುವುವು: ಊಟವನು ಮಾಡುವವು, ಕುಣಿದು ಕಲೆದಾಡುವವು: ನನಗೆ…! ನನ್ನಂತಿರುವ ಒಡನಾಡಿಯೇ ಇಲ್ಲʼ ಎಂಬಲ್ಲಿನ ಒಂಟಿತನ,
ʻನನ್ನನರಸುತ ಒಡನಾಡಿ ಯಾವನೋ ಬರಲಿರುವ ಎಂತೆಂಬ ಬಗೆಯೊಂದು ಹೊಳೆಯುವುದು: ಹಾರಿ ಬಿದ್ದೇಳುವೆನು, ಹೊರಹೊರಟು ಹುಬ್ಬುಗೈಯಲಿ ದೂರ ನೋಡುವೆನು..ʼ ಎಂಬ ನಿರೀಕ್ಷೆ,
ʻ ಎನಿತವನ ಮೈ ನುಣ್ಪು! ಎನಿತು ಕುರುಳಿನ ಕರ್ಪು! ಎನಿತು ತೋಳಿನ ಬಿಣ್ಪು! ಕೈವಿಡಿದು ಬೀಡಿನೊಳಗುಯ್ದಾಗಿನಾ ಸೋಂಕು ಎನಿತು ಸೊಗಸಿದ್ದಿತಹ! ಇನ್ನೂ ಬೇಕೆನಿಸಿತುʼ ಇಲ್ಲಿನ ಪ್ರಣಯಿನಿಯ ಶೃಂಗಾರ,
ʻಮೇಯಲೆಂದೈದಿದಾ ತಾಯಿಗಳು ಬಳಿಗೆ ಬರೆ ಮರಿಗಳವು ಹಿಗ್ಗಿ ನೆಗೆದಾಡುವದ ನೋಡಿಹೆನು; ಹಾಗೆಯೇ ನನ್ನ ಬಗೆಯಿಹುದಿಂದು; ಏತಕಿದು…? ಸರಿ! ಅಹುದು! ಅವನೆನ್ನ ತಾಯಿಯೇ ಇರಬಹುದು!ʼ ಎಂಬ ಮಗುವಿನ ಮುಗ್ಧತೆ,
ʻದಿನದಿನವು ಹೋಗಿ ನಾ ತನಿವಣ್ಣ ತರುತಿದ್ದೆ; ತಾಯಿ ತನ್ನಯ ಮರಿಗೆ ತಿನಿಸಿ ತಣಿಯುವ ತೆರದಿ ನಾನೆಯವನಿಗೆ ಹಣ್ಣು ತಿನಿಸಿ ಹಿಗ್ಗುತಲಿದ್ದೆ-ʼ ತಾಯ್ತನದ ಪ್ರೀತಿ. ಹೀಗೆ ಬಹುಬಗೆಯ ಭಾವನೆಗಳ ಮೊತ್ತವಾದ ಅಖಂಡ ಪ್ರೀತಿಯನ್ನು ತುಂಬಿಕೊಂಡ ಕವನ ಇದು.
ಪ್ರಕೃತಿಗೀತೆಗಳು
ಆನಂದಕಂದರ ಪ್ರಕೃತಿ ಹಾಗೂ ಸಮಾಜಮುಖೀ ಕವನಗಳಲ್ಲಿ ಕಾರಹುಣ್ಣಿಮೆ, ಮೋಜಿನ ಮಾಟ, ಸೀಗಿಹುಣಿವೆ ಮುಂತಾದುವು ಸುಂದರ ಕವನ ಸಂಕಲನಗಳು.
ಕಾರಹುಣ್ಣಿಮೆಯನ್ನು ಕುರಿತು:
ಬಾರ ಕಾರ ಹುಣ್ಣಿವೆ, ದೈವದ ಕಾರುಣ್ಯವೆ
ಸೋಗೆ ನವಿಲು ವೈಶಾಖದ ಬೇಗೆಗಳುಕಿ ಮಿಡುಕುತಿವೆ..
ಕೇಗು ಕುಣಿತ ಮರೆದು ನಿನ್ನ ಆಗಮನಕೆ ದುಡುಕುತಿವೆ:
ಬಾರ ಕಾರ ಹುಣ್ಣಿವೆ, ರಸಜನ ಸನ್ಮಾನ್ಯವೆ!
ಎನ್ನುವಲ್ಲಿ ಎದ್ದುಕಾಣುವ ಕವಿಯ ಸಾಮಾಜಿಕ ಚಿಂತನೆಯನ್ನು ಪರಿಭಾವಿಸಬಹುದು.
ಮಳೆಬೆಳೆಯಿಂದ ಕಂಗೊಳಿಸುವ ಭೂಮಿಯನ್ನು ಕವಿ ಕಣ್ಣು ನೋಡಿ ಆನಂದಿಸುವುದು ಹೀಗೆ:
ನಂದನ ವನ ಪಾರಿಜಾತ- ಬಂದು ಭೂಮಿಗಿಳದೈತೆವ್ವಾ!
ಮುಂದ ಹಿಂದ$ ಮ್ಯಾಲಕ ಕೆಳಗ$ ಚೆಂದ$ ಗಂಧ$ ಹರಡೈತವ್ವಾ( ಮೋಜಿನ ಮಾಟ)
ಇನ್ನೊಂದು ಪದ್ಯನೋಡಿ: ಅನ್ನ ಕುಮಾರನ ಬಸುರಿಯಾದಳೌ ನಮ್ಮ ಭೂಮಿದೇವಿ ಬಯಕಿಯ ಊಟ ಉಣಿಸಬೇಕ$ ಬಂದೈತಿ ಸೀಗಿಹುಣಿವಿ(ಸೀಗಿ ಹುಣಿವಿ)
ಪ್ರಕೃತಿಯ ಲೀಲಾವ್ಯಾಪಾರಗಳನ್ನು ಬದುಕಿನ ವ್ಯವಹಾರಗಳೊಂದಿಗೆ ಸಾವಯವಗೊಳಿಸುವ ಆನಂದಕಂದರ ಕಾವ್ಯಪ್ರತಿಭೆ ವಿಶಿಷ್ಟವಾದುದು. ಇಂಥ ಹಲವಾರು ಕವನಗಳನ್ನು ಉಲ್ಲೇಖಿಸಬಹುದು.
ಆನಂದಕಂದರ ಸಣ್ಣಕತೆಗಳು
೨೦ನೆಯ ಶತಕದ ಪೂರ್ವಾರ್ಧ ನವೋದಯ ಸಾಹಿತ್ಯದ ಪರ್ವಕಾಲ. ಈ ಕಾಲದಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮೃದ್ಧವಾದ ಸಾಹಿತ್ಯರಚನೆ ನಡೆಯಿತು. ಕನ್ನಡದಲ್ಲಿ ಸಣ್ಣಕತೆ, ಕಾದಂಬರಿಗಳು ಕೂಡ ಅದೇ ಕಾಲಘಟ್ಟದಲ್ಲಿ ಪ್ರಾದುರ್ಭಾವಗೊಂಡುವು. ಮೊದಲ ಹಂತದ ಕತೆಗಾರರಲ್ಲಿ ಆನಂದಕಂದರು ಪ್ರಮುಖರಾಗಿದ್ದು ೧೯೨೫ರಿಂದಲೇ ಧಾರವಾಡದ ಸ್ವಧರ್ಮ ಮಾಸಪತ್ರಿಕೆಯಲ್ಲಿ ಬಿಡಿಬಿಡಿಯಾಗಿ ಪ್ರಕಟವಾಗುತ್ತಿದ್ದ ಸಣ್ಣಕತೆಗಳು ೧೯೩೨ರಿಂದ ಸಂಕಲನ ರೂಪವನ್ನು ತಾಳತೊಡಗಿದುವು. ಬಡತನದ ಬಾಳು(೧೯೩೨), ಸಂಸಾರ ಚಿತ್ರ(೧೯೩೨), ನಮ್ಮ ಬದುಕು(೧೯೩೯), ಮಾತನಾಡುವ ಕಲ್ಲು(೧೯೪೯), ಜನಪದ ಜೀವನ(೧೯೫೫), ಕಳ್ಳರ ಗುರು ಮತ್ತು ಇತರ ಕಥೆಗಳು(೧೯೬೯)ಎಂಬ ಆರು ಸಂಕಲನ ಮತ್ತು ಒಂದು ಬಿಡಿ ಕತೆ- ಹೀಗೆ ಒಟ್ಟು ೪೪ ಕತೆಗಳು ಉಪಲಬ್ಧವಾಗಿವೆ.
ಜಾನಪದ ಸತ್ವಗಳಿಂದ ತುಂಬಿದ ನೆಲದ ಸಂಸ್ಕೃತಿಯಿಂದ ಅರಳಿದ ಆನಂದಕಂದರ ಕಥಾಕುಸುಮಗಳಲ್ಲಿ ಆದರ್ಶ ಮತ್ತು ವಾಸ್ತವತೆಗಳ ಮಧುರಮೈತ್ರಿಯಿದೆ. ಅವರು ದೇಶೀ ಹಾಗೂ ಮೌಖಿಕ ಕಥಾಸಂಪ್ರದಾಯವನ್ನು ಹೆಚ್ಚು ನಿಖರವಾಗಿ ರೂಢಿಸಿಕೊಂಡವರು. ʻನಮ್ಮ ಕತೆ, ಕಾದಂಬರಿ, ನಾಟಕಗಳು ನಮ್ಮ ಜನಪದದ ಜೀವನ ಚಿತ್ರಗಳಾಗಿರಬೇಕೇ ಹೊರತು ಪರಭಾಷಾ ಸಾಹಿತ್ಯಕೃತಿಗಳ ಪ್ರತಿಬಿಂಬವಾಗಿ ಬರಬಾರದೆಂಬುದು ಮೊದಲಿನಿಂದಲೂ ನನ್ನ ಹಾರಯಿಕೆʼ ಎನ್ನುವ ಸಿದ್ಧಾಂತಕ್ಕೆ ಅನುಗುಣವಾಗಿ ವಿದೇಶೀ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ತೋರದೆ ಉತ್ತರ ಕರ್ನಾಟಕದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಬದುಕನ್ನೇ ಕಥಾವಸ್ತುಗಳಾಗಿ ಆಯ್ಕೆಮಾಡಿದರು. ಇದರಿಂದ ಅವರಿಗೆ ತಮ್ಮ ಕತೆಗಳಲ್ಲಿ ಗ್ರಾಮೀಣ ಪರಿಸರದ ಭಾಷೆ, ಭಾವ, ಸಂಸ್ಕೃತಿಯ ಸೊಬಗನ್ನು ತುಂಬಿಕೊಡುವುದು ಸುಲಭ ಸಾಧ್ಯವಾಗಿದೆ. ಜನಪದ ಬದುಕಿನ ಆಚಾರ-ವಿಚಾರ, ಸಂಪ್ರದಾಯ-ನಂಬಿಕೆ, ರೀತಿ- ನೀತಿ, ಮಾತು- ವರಸೆ, ಆಟ- ವೇಷ, ಹಾಡು- ಕತೆಗಳು, ಸ್ಥಳ ಪುರಾಣ, ಇತಿಹಾಸ, ಐತಿಹ್ಯ, ವೀರಗಲ್ಲು, ಮಾಸ್ತಿಗಲ್ಲು, ಹಬ್ಬ ಹರಿದಿನಗಳು, ಹಾಗೆಯೇ ಹಳ್ಳಿಯ ಜನಗಳ ನೋವು- ನಲಿವು, ರಾಗ-ದ್ವೇಷ, ಆಸೆ ಆಮಿಷ, ಅನ್ಯಾಯ, ಮೋಸ, ಕೊಲೆ, ಸುಲಿಗೆ — ಇವೆಲ್ಲವೂ ಅವರ ಕತೆಯ ಮಗ್ಗದಲ್ಲಿ ಲಾಳಿಯಾಡಿವೆ. ಎಲ್ಲ ಕತೆಗಳನ್ನೂ ಅವರು ಉತ್ತಮ ಪುರುಷ ವಾಚಕದ ಆಪ್ತದೃಷ್ಟಿಯಿಂದಲೇ ವೀಕ್ಷಿಸುತ್ತಾರೆ. ಕೆಲವು ಕತೆಗಳ ಪ್ರಗತಿಪರ ಧೋರಣೆ ಇಂದಿಗೂ ಪ್ರಸ್ತುತ. ಪ್ರಗತಿಶೀಲ, ದಲಿತ, ಬಂಡಾಯಗಳ ಸೂಕ್ಷ್ಮ ವಿಚಾರಗಳೂ ಇವುಗಳಲ್ಲಿವೆ. ಕಥಾತಂತ್ರ, ಪಾತ್ರಗಳ ಗುಣಸ್ವಭಾವಗಳಲ್ಲಿ ಸಂಕೀರ್ಣತೆ ಇಲ್ಲದ ನೇರ ನಿರೂಪಣೆಯಿದೆ. ʻಬೆಳಗಾವಿ ನಾಡಿನ ಹೋದ ಮುನ್ನೂರು ನಾನ್ನೂರು ವರುಷಗಳ ಸಾಮಾಜಿಕ ಜೀವನದ ದರ್ಶನವೊಂದನ್ನು ಶ್ರೀ ಆನಂದಕಂದರು ತಮ್ಮ ಸಹೃದಯದೃಷ್ಟಿಯಿಂದ ಮಾಡಿಕೊಟ್ಟಿದ್ದಾರೆʼ ಎನ್ನುವ ಬೇಂದ್ರೆಯವರ ಮಾತುಗಳು ಗಮನಾರ್ಹ. ಅಪ್ಪಟವಾದ ದೇಶೀಯತೆಯ ಸೊಬಗಿನಿಂದಲೂ ಸರಳ ನೇರ ಭಾಷೆಯಿಂದಲೂ ಅವರ ಕತೆಗಳು ಎಲ್ಲ ಬಗೆಯ ಓದುಗರನ್ನೂ ಸೆರೆಹಿಡಿಯುತ್ತವೆ. ಕೆಲವು ಪ್ರಾತಿನಿಧಿಕ ಕತೆಗಳ ಮೂಲಕ ಆನಂದಕಂದರ ಕಥಾಸಾಹಿತ್ಯದ ಸ್ವಾರಸ್ಯ ಮತ್ತು ಸಂದೇಶವನ್ನು ಗಮನಿಸಬಹುದು.
೧೯೩೨ರಲ್ಲಿ ರಚಿಸಿದ ʻಬಡತನದ ಬಾಳುʼ ಎಂಬ ಮೊದಲ ಕಥಾಸಂಕಲನದಲ್ಲಿ ನಾಲ್ಕು ಕತೆಗಳಿವೆ. ಮೊದಲನೆಯ ಕತೆ ʻಈ ಚಿತ್ರ- ಆ ಚಿತ್ರʼ. ಬಡತನ ಮತ್ತು ಶ್ರೀಮಂತಿಕೆ ಮುಖಾಮುಖಿಯಾಗುವುದು ಇದರ ವಸ್ತು. ಈ ಚಿತ್ರದಲ್ಲಿ ಕಾಣುವವರು ಮಾದಪ್ಪ, ಅವನ ಪತ್ನಿ ಹೊನ್ನಮ್ಮ ಮತ್ತು ಅವರ ನಾಲ್ವರು ಮಕ್ಕಳಾದ ಲಕ್ಕ, ಚಿಕ್ಕ, ಮತ್ತಿಬ್ಬರು. ಇವರಿಗೆ ಉಡಲು ಬಟ್ಟೆಯಿಲ್ಲ, ಉಣ್ಣಲು ಅನ್ನವಿಲ್ಲ. ಇನ್ನೊಂದು ಚಿತ್ರದಲ್ಲಿ ಕಾಣುವವರು ಪುರುಷೋತ್ತಮ ನಾಯಕ ಮತ್ತು ಆತನ ಪತ್ನಿ ಮಾತ್ರ. ಅವರ ಶ್ರೀಮಂತಿಕೆ, ರಾಶಿರಾಶಿ ಬೆಳೆ, ಹಣದ ಹೊಳೆ. ಆದರೆ ಎರಡೂ ಚಿತ್ರಗಳಿಗೆ ಸಮಾನವಾಗಿರುವುದು ಹುಟ್ಟು, ಸಾವು, ಪ್ರೀತಿ.
ಒಂಬತ್ತು ರೂ. ಸಂಬಳದ, ನಿಯತ್ತಿನ ದುಡಿಮೆಗಾರ ಮಾದಪ್ಪ ಒಂದು ರೂಪಾಯಿ ಸಂಬಳ ಹೆಚ್ಚಿಸಲೂ ಮನಸ್ಸು ಮಾಡದ ಯಜಮಾನನ ಬಗ್ಗೆ ʻತಿನ್ನಲಿಕ್ಕೆ ಏನು ಮಾಡೋಣ ಎಂದು ನಮಗೆ ಚಿಂತೆ: ತಿಂದುದನ್ನು ಹೇಗೆ ಅರಗಿಸೋಣ ಎಂದು ಹಣವಂತರಿಗೆ ಚಿಂತೆ. ತಿನ್ನುವ ಅನ್ನಕ್ಕೆ ಇಮ್ಮಡಿ ಬೆಲೆಯನ್ನು, ಅರಗಿಸುವ ಔಷಧಿಗಾಗಿ ವೆಚ್ಚಮಾಡುವವರು ನಮ್ಮ ರಾಯರು. ಅವರು ಒಂದು ದಿನದ ಫಲಾಹಾರಕ್ಕೆ ವೆಚ್ಚಮಾಡುವ ಹಣವನ್ನು ನನಗೆ ತಿಂಗಳ ಸಂಬಳವಾಗಿ ಕೊಟ್ಟರೆ ನಾವೆಲ್ಲರೂ ಸುಖವಾಗಿ ಬದುಕಬಹುದು.ʼ೧೭ ಎನ್ನುತ್ತಾನೆ.
ಕತೆಯ ವಸ್ತು ಮತ್ತು ಉದ್ದೇಶ ಚೆನ್ನಾಗಿದ್ದರೂ ಯಜಮಾನನ ಹಾಸುಗೆಯನ್ನು ಅಣಿಗೊಳಿಸುವ ಮಾದಪ್ಪ ಮೈಮರೆತು ಅದರಲ್ಲಿ ಮಲಗಿ ನಿದ್ರಿಸುವುದೂ ಯಜಮಾನಿ ಮಲಗಿದವನು ತನ್ನ ಪತಿಯೆಂದೇ ಭಾವಿಸಿ ಅವನ ಒತ್ತಿನಲ್ಲಿ ಮಲಗುವುದೂ ಸಿನೀಮಿಯವಾಗಿದೆ. ಮಾದಪ್ಪನ ತಪ್ಪೊಪ್ಪಿಗೆ, ದೈನ್ಯತೆ, ಅಪರಾಧೀ ಬೋಧಗಳು ನಾಟಕೀಯವೆನಿಸುತ್ತವೆ. ಕತೆಯ ಕೊನೆಯಲ್ಲಿ ಪುರುಷೋತ್ತಮನಾಯಕ ಮಾದಪ್ಪನ ಮನಸ್ಥಿತಿ ಮತ್ತು ಬಡತನವನ್ನು ಅರ್ಥಮಾಡಿಕೊಂಡು ಉದಾರನಾಗುವುದು ಉತ್ತಮ ಸಂದೇಶವಾಗಿದೆ.
ಇದೇ ಸಂಕಲನದ ʻರಾಜನ ಧರ್ಮ ಸಂಶೋಧನೆʼ ಕೋಮು ವಿದ್ವೇಷಕ್ಕೆ ಸಂಬಂಧಿಸಿದ ಕತೆ. ʻಮತ-ಧರ್ಮಗಳು ಮನುಷ್ಯಧರ್ಮವನ್ನೇ ಮೆಟ್ಟಿತುಳಿದು ಸಮಾಜದಲ್ಲಿಯ ಮನುಷ್ಯತ್ವವನ್ನೇ ಮರೆಮಾಡುವುವೆಂಬ ಅನುಭವಜ್ಞಾನ ನನಗಾಗಿದೆ. ಮತ-ಧರ್ಮಗಳಲ್ಲಿಯ ನನ್ನ ವಿಶ್ವಾಸವೇ ಹಾರಿಹೋಗಿದೆ(೬೬)ʼ ನಿರೂಪಕ ರಾಜೇಂದ್ರನ ಮಾತುಗಳಿಂದ ಆರಂಭವಾಗುವ ಈ ಕತೆ ನಿಧಾನವಾಗಿ ಎರಡೂ ಧರ್ಮಗಳ ಹುಳುಕನ್ನು ತೆರೆಯುವುದು ಗಮನಾರ್ಹ.
ಹಿಂದೂಧರ್ಮದ ಕಟ್ಟಾ ಅಭಿಮಾನಿಯಾದ ಯುವಕ ರಾಜೇಂದ್ರ ʻವೈದಿಕ ಸನಾತನ ಧರ್ಮವು ಪರಿಪೂರ್ಣವಾದುದುʼ ಎಂಬ ಚರ್ಚಾಸ್ಪರ್ಧೆಯಲ್ಲಿ ವಿಷಯದ ಪರವಾಗಿ ವಾದಿಸಿ ಗೆದ್ದು ತೀರ್ಪುಗಾರ ಮೌಲವಿಯವರ ಪ್ರಶಂಸೆಗೆ ಪಾತ್ರನಾಗುತ್ತಾನೆ. ಅವರ ಆಹ್ವಾನವನ್ನು ಮನ್ನಿಸಿ ಅವರ ಮನೆಗೆ ಹೋದಾಗ ಅವರು ಮಮತಾಜ್‌ ಎಂಬ ಚೆಲುವೆಯನ್ನು ತನ್ನ ಸಂಬಂಧಿಯೆಂದು ಪರಿಚಯಿಸಿ ರಾಜೇಂದ್ರನ ಉಪಚಾರಕ್ಕೆ ನೇಮಿಸುತ್ತಾರೆ. ನಿಧಾನವಾಗಿ ಆತ ಮಮತಾಜಳ ಮೋಹದ ಬಲೆಗೆ ಸಿಲುಕುತ್ತಾನೆ.
ಮಮತಾಜಳ ವಿಚಿತ್ರ ನಡವಳಿಕೆ ಅರ್ಥವಾಗದ ರಾಜೇಂದ್ರನೊಂದಿಗೆ ಒಮ್ಮೆ ಏಕಾಂತದಲ್ಲಿ ಮಾತನಾಡುವ ಅವಕಾಶ ಲಭಿಸಿದಾಗ ಆಕೆ ಮೌಲವಿಯವರು ಹಸುವಿನ ಚರ್ಮ ಹೊತ್ತ ಹುಲಿಯೆನ್ನುತ್ತಾಳೆ. ತಾನು ಬಟ್ಟೆಗಿರಣಿಯ ಕಾರ್ಮಿಕನೊಬ್ಬನ ಮಗಳೆಂದೂ ತನ್ನ ಹೆಸರು ಮಾಲಿನಿಯೆಂದೂ ಬಾಲವಿಧವೆಯಾಗಿದ್ದ ತನ್ನನ್ನು ಗಿರಣಿಯ ಕಾರ್ಮಿಕರು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದರೆಂದೂ ಶೀಲಭ್ರಷ್ಟಳಾದ ತನ್ನಿಂದಾಗಿ ತಂದೆ ಸಾವಿಗೀಡಾದರೆಂದೂ ತನ್ನನ್ನು ಮನೆಯ ಸಂಬಂಧಿಕರು, ಊರವರು ಬಹಿಷ್ಕರಿಸಿದರೆಂದೂ ಮುಸಲ್ಮಾನರು ಕೆಲಸದ ಆಮಿಷವೊಡ್ಡಿ ಮುಸಲ್ಮಾನ ಶಾಲೆಯಲ್ಲಿ ಕೆಲಸ ಕೊಡಿಸಿ ಮತಾಂತರ ಮಾಡಿಸಿದರೆಂದೂ ತಿಳಿಸುತ್ತಾಳೆ. ಹುಟ್ಟಿದ ಸಮಾಜದಲ್ಲಿ ಗೌರವ ಸಿಗದೆ ಸ್ವಯಿಚ್ಛೆಯಿಂದ ಮಮತಾಜಳಾಗಿ ಮತಾಂತರಗೊಂಡ ತನಗೆ ಹಿಂದೂ ತರುಣರನ್ನು ಸೌಂದರ್ಯದಿಂದ ಸೆಳೆದು ಮತಾಂತರ ಮಾಡಿಸುವ ಶಿಕ್ಷಣವನ್ನು ಕೊಡಿಸಿದರೆಂದೂ ಆದರೆ ರಾಜೇಂದ್ರನ ಪ್ರಾಮಾಣಿಕತನ, ಜ್ಞಾನಾರ್ಜನೆಯ ಅಪೇಕ್ಷೆ, ಸರಳತನಗಳಿಗೆ ಮನಸೋತಿರುವುದರಿಂದ ತಾನು ಕೆಟ್ಟದ್ದಲ್ಲದೆ ಇನ್ನೊಬ್ಬ ಹಿಂದುವನ್ನು ಕೆಡಿಸುವ ಪಾಪವನ್ನು ಹೊತ್ತುಕೊಳ್ಳಲಾರೆನೆಂದೂ ಹೇಳಿ ನಾಳೆಯಿಂದ ಇಲ್ಲಿಗೆ ಬರಬೇಡವೆಂದು ಎಚ್ಚರಿಸುತ್ತಾಳೆ. ಅವಳ ಮಾತುಗಳು ಎಲ್ಲ ಧರ್ಮಗಳಲ್ಲೂ ಇರುವ ವಿಕೃತ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿ ರಾಜೇಂದ್ರ ಭ್ರಮನಿರಸನನಾಗುತ್ತಾನೆ.
ಮಾಲಿನಿಯ ಬದುಕು ಅದೆಷ್ಟೋ ಹಿಂದೂಗಳ ಮತಾಂತರದ ಹಿಂದಿನ ನಿಗೂಢ ಸತ್ಯವೇ ಆಗಿದ್ದು ಅಶಕ್ತ ಮಾನವನ ಅಪರಾಧವನ್ನು ಸಹಾನುಭೂತಿಯಿಂದ ಕ್ಷಮಿಸದ ಧರ್ಮವೂ ಧರ್ಮವಲ್ಲ; ಅಪರಾಧ ಅನ್ಯಾಯಗಳ ಮೂಲಕವೇ ಮತಪ್ರಚಾರ ಮಾಡುವ ಧರ್ಮವೂ ಧರ್ಮವಲ್ಲ (೮೫) ಶುದ್ಧ ಮಾನವಧರ್ಮವೇ ಧರ್ಮ. ಯಾವ ಮತ ಧರ್ಮಗಳ ಕಟ್ಟುಪಾಡಿಗೂ ಒಳಗಾಗದೆ ಮನುಷ್ಯರಾಗಿ ಬದುಕುವುದೇ ನಿಜವಾದ ಧರ್ಮ ಎಂಬ ನಿರ್ಣಯಕ್ಕೆ ರಾಜೇಂದ್ರ ಬರುತ್ತಾನೆ. ೧೯೩೨ರಲ್ಲಿ ಬರೆದ ಈ ಕತೆ ಇವತ್ತಿಗೂ ಎಷ್ಟು ಪ್ರಸ್ತುತ ಎಂಬುದನ್ನು ಪರಿಭಾವಿಸಬಹುದು.
ಸಂಸಾರ ಚಿತ್ರ ಎಂಬ ಕಥಾಸಂಕಲನದ ʻನೀನು ಪುಟ್ಟನ ತಾಯಿʼ ಮಕ್ಕಳ ಮನೋಲೋಕವನ್ನು ಅನಾವರಣ ಮಾಡುವ ಕರುಳು ಮಿಡಿಯುವ ಕತೆ. ಚಿಕ್ಕ ಕತೆಯಾದರೂ ಹಿರಿದಾದ ಭಾವವಿದೆ. ಅಕ್ಕನ ಆರೈಕೆಯಲ್ಲಿ ಬಳೆದು ದೊಡ್ಡವಳಾದ ತಂಗಿ ಅಕ್ಕ ತೀರಿಹೋದಾಗ ನಾಲ್ಕು ವರ್ಷದ ತಬ್ಬಲಿ ಮಗುವಿಗೆ ತಾನೇ ತಾಯಿಯಾಗುತ್ತಾಳೆ. ಆದರೆ ತನಗೇ ಮಗು ಹುಟ್ಟಿದಾಗ ಅವಳ ಪ್ರೀತಿ ವಾತ್ಸಲ್ಯ ಸ್ವಂತ ಮಗನಿಗೆ ಸೀಮಿತವಾಗುತ್ತದೆ. ಚಿಕ್ಕಮ್ಮನನ್ನೇ ತಾಯಿಯೆಂದು ಭಾವಿಸಿದ ಬಾಲಕನಿಗೆ ಚಿಕ್ಕಮ್ಮ ತನ್ನ ತಾಯಿ ಅಲ್ಲ ಪುಟ್ಟನ ತಾಯಿ ಎಂದೂ ತನ್ನ ತಾಯಿ ಸತ್ತುಹೋಗಿದ್ದಾಳೆಂದೂ ತಿಳಿದು ಆಘಾತವಾಗುತ್ತದೆ. ತಾಯಿಯ ಪ್ರೀತಿ ವಾತ್ಸಲ್ಯಗಳೂ ಇಲ್ಲದೆ, ಮನೆ ಕೆಲಸದವಳ ಅಪವಾದಕ್ಕೂ ಗುರಿಯಾಗಿ ಹುಡುಗ ಸ್ವರ್ಗದಲ್ಲಿರುವ ತಾಯಿಯನ್ನು ಹುಡುಕುತ್ತ ಹೋಗುತ್ತಾನೆ. ಎಳೆಯ ಮನಸ್ಸಿನ ಗೊಂದಲಗಳು ಹೃದಯವನ್ನು ಕಲಕುವಂತಿವೆ. ಮನೋವೈಜ್ಞಾನಿಕ ನೆಲೆಯಲ್ಲಿ ಆತ್ಮಶೋಧನೆಗೆ ಒಳಪಡಿಸುವ ಕತೆ.
ʻನಮ್ಮ ಬದುಕುʼ ಸಂಕಲನದ ಕತೆಗಳಲ್ಲಿ ಮಲ್ಲಮ್ಮನ ಮಹಾಭಾರತ -ಕತೆಯ ಶೀರ್ಷಿಕೆಯೇ ತುಂಬ ಅರ್ಥಪೂರ್ಣವಾಗಿದೆ. ಬೇಂದ್ರೆಯವರ ಕುರುಡು ಕಾಂಚಾಣ ಕುಣಿಯುತಲಿತ್ತೋ ಕಾಲಿಗೆ ಬಿದ್ದವರ ತುಳಿಯುತಲಿತ್ತೋ ಎಂಬ ಕವನವನ್ನು ನೆನಪಿಸುವ, ಶ್ರೀಮಂತರ ಅಟ್ಟಹಾಸಕ್ಕೆ ಬಡವರು ಬಲಿಯಾಗುವ ಕತೆಯೊಳಗಿನ ಕತೆ ಇದು. ಮನೆಯ ಮಗುವನ್ನು ಲಾಲಿಸಲು ಬಂದ ಮಲ್ಲಮ್ಮನೆಂಬಾಕೆಯ ವರ್ತನೆ, ವ್ಯವಹಾರಗಳು ನಿರೂಪಕರಿಗೆ ಅವಳ ಬಗ್ಗೆ ಕುತೂಹಲ ಮತ್ತು ಆತ್ಮೀಯಭಾವವನ್ನು ಉಂಟುಮಾಡಿದ ಪರಿಣಾಮ ಅವರು ಆಕೆಯ ಬದುಕಿನ ಹಿನ್ನೆಲೆಯನ್ನು ತಿಳಿಯಲು ಉತ್ಸುಕರಾಗುತ್ತಾರೆ. ಮಗಸೊಸೆಯರೊಂದಿಗೆ ಬಡತನದಲ್ಲೂ ಸಂತೋಷವಾಗಿದ್ದ ಸಂಸಾರಸ್ಥೆ ಮಲ್ಲಮ್ಮನ ಸೊಸೆ ಕಾಶಿ ಊರ ಗೌಡರ ಅಳಿಯ ರುದ್ರಪ್ಪನ ಕಾಮದ ಕಣ್ಣಿನಿಂದ ತಪ್ಪಿಸಲು ಆತ್ಮಹತ್ಯೆಮಾಡುತ್ತಾಳೆ. ಆತ್ಮಹತ್ಯೆಗೆ ಕಾರಣ ಗೊತ್ತಿದ್ದೂ ಗೌಡರು ಅದಕ್ಕೆ ಅತ್ತೆ ಸೊಸೆಯ ವಿರಸದ ಬಣ್ಣವನ್ನು ಹಚ್ಚುತ್ತಾರೆ. ʻಈ ಅತ್ತೀ ಮನೀ ಸೊಸೆಂದರ ಹಣೀಬಾರನ$ ಇದು! ಸುಮ್ಮಸುಮ್ಮನ$ ಜೀವ ಕಳಕೋತಾವು. ಮತ್ತು ಮನ್ಯಾಗಿನವರದಾರೇ ಮೋಜ ಏನ ಹೇಳ್ಲಿ! ಕಾಡೂ ಮುಂದ ಕಾಡತಾರ, ಸತ್ತ ಮ್ಯಾಲ ಸುಮ್ಮ ಸುಮ್ಮನ$ ಬಡಕೋಳಾಕ ಹತ್ತಾರ”(೨೫೪)ಅತ್ತೆಯೇ ಸೊಸೆಯನ್ನು ಸಾಯಿಸಿದ್ದು ಎಂದು ಆರೋಪಿಸುವುದಲ್ಲದೆ ಅಪವಾದದಿಂದ ಮುಕ್ತರಾಗಲು ಪೋಲೀಸರಿಗೂ, ಗೌಡ, ಶಾನುಭೋಗರಿಗೂ ಲಂಚಕೊಡಬೇಕೆಂದು ಒತ್ತಾಯಿಸುತ್ತಾರೆ. ವಿಧಿಯಿಲ್ಲದೆ ಮಲ್ಲಮ್ಮ ಮತ್ತು ಆಕೆಯ ಮಗ ಸುಳ್ಳು ಅಪವಾದದಿಂದ ಮುಕ್ತರಾಗಲು ತಮ್ಮ ಹೊಲಮನೆಗಳನ್ನು ಮಾರಿ ಅನಾಥರಾಗುತ್ತಾರೆ.
ಈ ಸಂಕಲನದ ಮಾಲ್ಕೀ ಹಕ್ಕು ಎನ್ನುವ ಕತೆಯೂ ಇನ್ನೊಂದು ಬಗೆಯಲ್ಲಿ ಕಣ್ದೆರೆಸುವ ಕತೆ. ನಿರೂಪಕನ ಮನದಲ್ಲಿ ಗತನೆನಪುಗಳು ಧಾಳಿಮಾಡುವ ರೀತಿಯಲ್ಲಿ ಇದರ ಕಥಾತಂತ್ರವಿದೆ
ಒಂದು ಶ್ರೀಮಂತ ಕುಟುಂಬಕ್ಕೆ ವಂಶಪಾರಂಪರ್ಯವಾಗಿ ಲಭಿಸಿದ ಜಮೀನಿನಲ್ಲಿ ಲಿಂಗಣ್ಣನೆಂಬ ಒಕ್ಕಲಿಗ ಹೆಂಡತಿ ಮಕ್ಕಳೊಂದಿಗೆ ಹಗಲು ರಾತ್ರಿ ಚಳಿ, ಮಳೆ, ಬಿಸಿಲುಗಳಲ್ಲಿ ದುಡಿಯುತ್ತಾನೆ. ಬಂದ ಬೆಳೆಯನ್ನು ಯಜಮಾನನಿಗೆ ಕೊಡುವ ಅವರಿಗೆ ಸದಾ ಬಡತನ. ಒಮ್ಮೆ ಬಾಳೆತೋಟಕ್ಕೆ ಗೊಬ್ಬರ ತರಲು ಹಣಸಾಲದೆ ಸಾಲಮಾಡಿದ ಲಿಂಗಣ್ಣನಿಗೆ ಜಾತ್ರೆಯಲ್ಲಿ ಮಕ್ಕಳಿಗೆ ಬಟ್ಟೆ ಕೊಡಿಸಲು ಸಾಧ್ಯವಾಗುವುದಿಲ್ಲ. ಮಕ್ಕಳ ಗೋಳನ್ನು ನೋಡಲಾರದೆ ಅವನ ಹೆಂಡತಿ ಸಾತಮ್ಮ ಗಂಡನಿಗೆ ತಿಳಿಸದೆ ನಾಲ್ಕು ಬಾಳೆಗೊನೆಗಳನ್ನು ಮಾರುತ್ತಾಳೆ. ಈ ವಿಚಾರ ತಿಳಿದ ಮಾಲೀಕ ಅವರನ್ನು ಬೀದಿಗಟ್ಟುತ್ತಾನೆ.
ವರ್ಷಗಳು ಕಳೆಯುತ್ತವೆ. ಒಂದುದಿನ ಯಜಮಾನನ ಮಗನ ಮನೋಲೋಕದಲ್ಲಿ ತಮ್ಮ ಕುಟುಂಬ ಒಕ್ಕಲಿಗನಿಗೆ ತೋರಿಸಿದ ಕ್ರೌರ್ಯ ಚಿಂತನೆಗೆ ಗ್ರಾಸವಾಗುತ್ತದೆ. ತಂದೆ ಮಾಡಿದ ಅನ್ಯಾಯವನ್ನು ಮೆಲುಕು ಹಾಕುವಾಗ ತಮಗೆ ಆ ಜಮೀನು ಬಂದ ಸತ್ಯ ಅವನ ಮನಸ್ಸಿಗೆ ರಾಚುತ್ತದೆ. ʻಹಿಂದೆ ಎಂದೋ ಒಂದು ಕಾಲದಲ್ಲಿ ನಮ್ಮ ಪೂರ್ವಜರು ಸ್ವಾತಂತ್ರ್ಯಪ್ರೀತಿಯ ದಾಯಾದಿಯೊಬ್ಬನನ್ನು ಸೆರೆಹಿಡಿದುಕೊಟ್ಟರು; ಅದಕ್ಕಾಗಿ ಜಗತ್ತು ಹುಟ್ಟಿದಾಗಲೇ ಹುಟ್ಟಿದ ಈ ತೋಟದ ನೆಲವನ್ನು- ಇನ್ನಾವ ದೇಶದಿಂದಲೋ ಬಂದ ಬಾದಶಹನು ಅವರಿಗೆ ಇನಾಮಾಗಿ ಕೊಟ್ಟ. ಆ ಪೂರ್ವಜರ ರಕ್ತಸಂಬಂಧಿಕರೆಂದು ಆ ನೆಲದ ಪೂರ್ಣ ಮಾಲ್ಕೀ ಹಕ್ಕು ನಮಗೆ ಬಂದಿತು. ಆದರೆ ಅದೇ ನೆಲವನ್ನು ಬಿಸಿಲೆನ್ನದೆ, ಬಿರುಗಾಳಿಯೆನ್ನದೆ, ಮಳೆಯೆನ್ನದೆ, ಚಳಿಯೆನ್ನದೆ ಹಗಲಿರುಳೂ ಕಷ್ಟಪಟ್ಟು ದುಡಿದು ಬೆಳೆಯಿಸಿದ ಲಿಂಗಣ್ಣನ ಕುಟುಂಬದವರು ಒಂದೆರಡು ಬಾಳೆಯ ಗೊನೆಗಳಿಗೂ ಹಕ್ಕುದಾರರಾಗುವಂತಿಲ್ಲವೇ? ತನ್ನ ಹೊಟ್ಟೆಯ ಕರುಳುಗಳ ಮೈಯನ್ನು ಮುಚ್ಚುವುದಕ್ಕೆ, ಸಾತಮ್ಮ ತನ್ನ ದುಡಿತದ ಫಲವನ್ನು ಉಪಯೋಗಿಸಿದ ಮಾತ್ರಕ್ಕೆ ಅದನ್ನು ಕಳವು ಎಂದು ಕರೆಯಬಹುದೇ?ʼ(೩೧೫) ನಿರೂಪಕರ ಈ ಸ್ವಗತ ಊಳಿಗಮಾನ್ಯ ಪದ್ಧತಿಯ ಅಮಾನವೀಯ ವಿಚಾರಗಳಿಗೆ ಬೆಳಕು ಚೆಲ್ಲಿ ಕತೆಗಾರರ ಪ್ರಗತಿಶೀಲ ಮನೋಭಾವಕ್ಕೆ ಕನ್ನಡಿ ಹಿಡಿಯುತ್ತದೆ. ಒಕ್ಕಲಿಗರಿಂದ ದುಡಿಸಿ ಕುಳಿತುಣ್ಣುವ ಮಾಲೀಕರೆಲ್ಲರೂ ಎದೆಮುಟ್ಟಿ ನೋಡಿಕೊಳ್ಳುವಂತಿದೆ.
ವಸಾಹತುಶಾಹಿಯ ಕೈಗಾರಿಕೀಕರಣ ಬಡಮಧ್ಯಮ ಜನವರ್ಗದ ಗುಡಿ ಕೈಗಾರಿಕೆಗಳನ್ನು ನುಂಗಿಹಾಕಿದ ಹಿನ್ನೆಲೆಯನ್ನು ನಾಜೂಕಾಗಿ ಬಿಡಿಸುವ ಕತೆ ಜಾಡರ ಜಾನಪ್ಪ. ನೇಯ್ಗೆ ಉದ್ಯಮದಿಂದ ಶ್ರೀಮಂತನಾಗಿದ್ದ ಜಾನಪ್ಪ ಊರಿನ ಓರ್ವ ಗಟ್ಟಿಕುಳವಾಗಿದ್ದ. ರೈತ ಜನಗಳಿಗೆ ಒಂದು ಹೊತ್ತು ಅನ್ನ ತರಕಾರಿಯಿಲ್ಲದಿದ್ದರೂ ಜಾನಪ್ಪನಿಗೆ ಎರಡು ಹೊತ್ತೂ ಸುಗ್ರಾಸ ಭೋಜನವೇ ಬೇಕು. ʻನೀವು ಬರೇ ಜ್ವಾಳದ ಕೂಳು ತಿಂದು ಹ್ಯಾಂಗಿರತೀರೋ ಏನೋ$ಪಾ! ನಮ್ಮ ಕಡಿಂದಂತೂ ಜೀಂವ ಹ್ವಾದ್ರೂ ಆಗಾಕಿಲ್ಲʼ (೩೨೧) ಎನ್ನುವ ಮಾತುಗಳು ಆತನ ಶ್ರೀಮಂತಿಕೆಗೆ ದ್ಯೋತಕ. ಆದರೆ ಅಂಥವನು ಮುಂದೆ ಜ್ವಾಳದ ರೊಟ್ಟಿಗೂ ಗತಿಯಿಲ್ಲದೆ ಪರದಾಡುವುದು ಬದುಕಿನ ವ್ಯಂಗ್ಯ. ʻರಾಯರಾ$ ಯಾರಲ್ಯಾದರೂ ನಮಗ ಕೆಲಸ ಕೊಡಸರಿ..! ಒಬ್ಬರ ಮನ್ಯಾಗ ಸೆಗಣೀ ಬಳದಾದರೂ ಬದಕಿಕೊಂಡು ಇರತೇವು…! ಎಷ್ಟು ದಿನಾ ಅಂತ ಉಪಾಸಾ ವನವಾಸಾ ಸೋಸೂಣು.. ರಾಯರ$ʼ(೩೨೪) ಎಂಬ ಜಾನಪ್ಪನ ಆರ್ತನಾದ ಇಡೀ ಸಮುದಾಯದ ಆರ್ತನಾದವಾಗಿ ಕರುಳು ಕತ್ತರಿಸುವಂತಿದೆ. ಕತೆಗಾರರೇ ಹೇಳಿದಂತೆ ಇದು ಕತೆಯಲ್ಲ, ವಾಸ್ತವ ಸತ್ಯ.
ಜಾನಪದ ಕಥಾಸಾಹಿತ್ಯದಲ್ಲಿ ಆನಂದಕಂದರಿಗೆ ಮನ್ನಣೆಯ ಸ್ಥಾನವಿದೆ. ೧೯೪೯ರಲ್ಲಿ ಪ್ರಕಟವಾದ ʻಮಾತನಾಡುವ ಕಲ್ಲುʼ ಎಂಬ ಸಂಗ್ರಹದ ʻಜೋಗತೀ ಕಲ್ಲುʼ (೩೫೨) ಒಂದು ಕುಟುಂಬವನ್ನು ಉಳಿಸುವ ಸಲುವಾಗಿ ಪ್ರಾಣತೆತ್ತ ಹೆಣ್ಣುಮಗಳ ಕತೆಯನ್ನು ತಿಳಿಸುತ್ತದೆ. ಜೋಗತಿಯಾಗಿದ್ದ ಚಂದಾ ಎಂಬ ಹೆಣ್ಣುಮಗಳು ಗೃಹಿಣಿಯಾಗಲು ಆಸೆಪಟ್ಟು ಊರ ನಾಯಕನ ತಮ್ಮನಾದ ಹೆಬ್ಬಿಬ್ಬುಲಿ ನಾಯಕನ ಬಗ್ಗೆ ಕನಸು ಕಾಣುತ್ತಾಳೆ. ಆತನೂ ಅವಳನ್ನು ಇಷ್ಟಪಡುತ್ತಾನೆ. ಆದರೆ ನಾಯಕ ಮದುವೆಯಾಗಿದ್ದು ಆತನ ಪತ್ನಿ ಚೆಂಗಲವ್ವ ತನ್ನ ಸೌಭಾಗ್ಯವನ್ನು ಉಳಿಸಿಕೊಡು ಎಂದು ಪ್ರಾರ್ಥಿಸಿದಾಗ ಪ್ರೀತಿಯನ್ನು ತ್ಯಾಗಮಾಡಲಾಗದ ಚಂದಾ ತನ್ನ ಪ್ರಾಣವನ್ನು ತ್ಯಾಗಮಾಡುತ್ತಾಳೆ. ತನಗಾಗಿ ಪ್ರಾಣತೆತ್ತ ಚಂದಾಳ ನೆನಪಿಗಾಗಿ ಚೆಂಗಲವ್ವ ಕಲ್ಲಿನ ಕಟ್ಟೆ ಕಟ್ಟಿಸಿ ಪೂಜೆಮಾಡುತ್ತಾಳೆ. ಮುಂದೆ ಆ ಹಳ್ಳಿಗೆ ಮದುವೆಯಾಗಿ ಬಂದ ಎಲ್ಲ ಹೆಣ್ಣುಮಕ್ಕಳೂ ತಮ್ಮ ಸೌಭಾಗ್ಯಕ್ಕಾಗಿ ಜೋಗತಿಕಲ್ಲನ್ನು ಪೂಜಿಸುವುದು ಸಂಪ್ರದಾಯವಾಗುತ್ತದೆ. ʻಒಬ್ಬರ ಸುಕದ ಸಲುವಾಗಿ ಇನ್ನೊಬ್ಬರು ಜೀವಾ ಕೊಡೂದಂದರ, ಅವರು ಬರೇ ಮನಸ್ಯಾರಲ್ರೀ; ದೇವರ$ ಸರಿ! ಚೆಂದಾ ಅಂದರ ಒಂದು ದೇವತಿ!ʼ (೩೬೩) ಎಂದು ಜನ ಚಂದಾಳನ್ನು ಹಾಡಿ ಹೊಗಳುತ್ತಾರೆ. ಜೋಗತಿಯ ಪೂಜೆಯನ್ನು ಹಿಂದೂಗಳು ಮಾತ್ರವಲ್ಲ ಮುಸ್ಲಿಂ ಹೆಣ್ಣುಮಕ್ಕಳೂ ಮಾಡುತ್ತಾರೆನ್ನುವುದು ಜಾತಿ, ಮತ ಭೇದವಿಲ್ಲದ ಹಳ್ಳಿಯ ಮುಗ್ಧ ಜನರ ಒಗ್ಗಟ್ಟು, ಕೃತಜ್ಞತಾ ಭಾವವನ್ನು ಸೂಚಿಸುತ್ತದೆ. ಆದರೆ ಒಬ್ಬ ಹೆಣ್ಣುಮಗಳನ್ನು ಸುಖವಾಗಿ ಬದುಕುವುದಕ್ಕೆ ಬಿಡದ ಸಮಾಜ ಆಕೆ ಸತ್ತು ಹೋದಾಗ ದೇವತೆ ಎಂದು ಪೂಜಿಸುವುದು ಎಷ್ಟು ಸರಿ? ಎಂಬ ಪ್ರಶ್ನೆ ವಿಚಾರವಂತರನ್ನು ಕಾಡುತ್ತದೆ. ಸಮಾಜದ ಕೆಲವು ಕಂದಾಚಾರಗಳು ಕೆಲವು ವರ್ಗಗಳನ್ನು ಎಲ್ಲರಂತೆ ಬದುಕುವುದಕ್ಕೆ ಬಿಡದೆ ಅವರ ದುರಂತವನ್ನು ವೈಭವೀಕರಿಸಿ ಪೂಜಾಮಂದಿರವನ್ನು ಕಟ್ಟಿಸುತ್ತದೆ. ಈ ಕತೆ ವ್ಯವಸ್ಥೆಯ ಎರಡೂ ಮುಖಗಳಿಗೆ ಕನ್ನಡಿ ಹಿಡಿಯುತ್ತದೆ.
ಇದೇ ಸಂಕಲನದ ʻಬಡವಿಯ ಬಾವಿʼ(೩೭೫) ಜಾತ್ಯತೀತ ಸಮಾಜವ್ಯವಸ್ಥೆಯ ಅಗತ್ಯವನ್ನು ಮನವರಿಕೆ ಮಾಡುವ ಕುತೂಹಲಕಾರಿಯಾದ ಕತೆ. ಲೇಖಕರೇ ವಿಮರ್ಶಕರೂ ಆಗುವುದು ಈ ಕತೆಯ ವೈಶಿಷ್ಟ್ಯ. ವಿಚಾರಗಳ ಶೋಧನೆಯ ಜೊತೆಗೇ ಅಂತರಂಗದ ಶೋಧನೆಯನ್ನೂ ಮಾಡುವ ತಂತ್ರಗಾರಿಕೆ ಮಹತ್ವಪೂರ್ಣ.
ಬಡವಿಯ ಬಾವಿಯಲ್ಲಿ ಎಲ್ಲ ಕಾಲದಲ್ಲೂ ಸಮೃದ್ಧವಾಗಿ ನೀರು. ಬೇಸಿಗೆಯಲ್ಲಿ ನೀರಿಲ್ಲದಾಗ ಹರಿಜನರೂ ಸೇರಿದಂತೆ ಊರವರೆಲ್ಲರೂ ಆ ಬಾವಿಯ ನೀರನ್ನು ಬಳಸುತ್ತಾರೆ. ಈ ಶಾಸನ ಊರವರನ್ನೆಲ್ಲ ಹರಿಜನರನ್ನು ಸಹಿಸಿಕೊಳ್ಳುವಂತೆ ಮಾಡಿದೆ. ಹರಿಜನರು ಬಳಸಿದ ಬಾವಿನೀರು ದೇವಸ್ಥಾನದ ಪೂಜೆಗೆ, ಮಡಿವಂತರ ನಿತ್ಯಕರ್ಮಗಳಿಗೆ, ಜಂಗಮ, ಪುರೋಹಿತರ ಪೂಜಾದಿಗಳಿಗೆ ಬಳಕೆಯಾದರೂ ಯಾರೂ ಮಠಮಾನ್ಯಗಳಿಂದ ಬಹಿಷ್ಕಾರಕ್ಕೆ ಒಳಗಾಗುವುದಿಲ್ಲವೆನ್ನುವುದು ಕತೆಗಾರರ ವೈಚಾರಿಕ ನಿಲುವನ್ನು ಸಾಬೀತುಪಡಿಸುತ್ತದೆ.
ಯಾವಳೋ ಬಡವಿಯು ಕಟ್ಟಿಸಿದ ಕಾರಣ ಅದಕ್ಕೆ ಬಡವಿಯ ಬಾವಿ ಎಂಬ ಹೆಸರು ಬಂತೆಂಬ ಪ್ರಚಲಿತ ನಂಬಿಕೆ ಕತೆಗಾರರ ಕುತೂಹಲಕ್ಕೆ ಗ್ರಾಸವಾಗಿ ಬಾವಿಯ ಉಗಮದ ಶೋಧನೆ ನಡೆಯುತ್ತದೆ.
ಬೇಸಿಗೆಯ ಒಂದುದಿನ ದೇಶಸಂಚಾರ ಮಾಡಿ ಹಿಂದಿರುಗುವಾಗ ತುಂಬ ಬಾಯಾರಿಕೆಯಾಗಿ ನೀರಿಗಾಗಿ ಹುಡುಕುತ್ತಿದ್ದ ಊರದೊರೆ ಮುದುಕಿಯೊಬ್ಬಳು ತಂಬಿಗೆಯಲ್ಲಿ ನೀರಿಟ್ಟು ದಾರಿಹೋಕರ ಬಾಯಾರಿಕೆಯನ್ನು ನೀಗಿಸುತ್ತಿರುವುದು ಕಂಡು ಅಚ್ಚರಿಯಿಂದ ಪ್ರಶ್ನಿಸುತ್ತಾನೆ. ಆಕೆ ರಾಜನಿಗೆ ನೀರುಣಿಸಿ ತಮ್ಮೂರ ಬರಗಾಲದ ಬವಣೆಯನ್ನು ಬಣ್ಣಿಸಿ ಊರಿನವರಿಗಾಗಿ ಒಂದು ಬಾವಿ ತೋಡಿಸಬೇಕೆಂದು ಪ್ರಾರ್ಥಿಸುತ್ತಾಳೆ. ತನ್ನ ನೀರಡಿಕೆಯನ್ನು ಇಂಗಿಸಿ ಪ್ರಾಣ ಉಳಿಸಿದ ಆ ವೃದ್ಧೆಯ ಕೇಳಿಕೆಯನ್ನು ಪೂರೈಸಿದ ರಾಜ ಬಾವಿ ತೋಡಿಸುವುದಲ್ಲದೆ ಆಕೆಯ ಅಪೇಕ್ಷೆಯಂತೆ ಒಂದು ಶಾಸನವನ್ನೂ ಬರೆಯಿಸುತ್ತಾನೆ. ʻ.. ಹೊಲೆಯ ಮಾದಿಗ ಚಮ್ಮರ ಕಡೆಯಾಗಿ ಆವುದೇ ಜಾತಿಯವರುಂ, ಆವುದೇ ನೀತಿಯವರುಂ, ಭೇದವಿಲ್ಲದಂತೆ ಈ ವಾಪಿಯೊಳಿಳಿದು ತೀರ್ಥಮಂ ಕೊಳಲಕ್ಕುಂ. ಇದಂ ತಡೆಯಲಾಟಿಪ ಮೇಲು ಕುಲಜರು, ಪಂಚಮಹಾಪಾತಕಕ್ಕೆ ಪಕ್ಕಾದಪರ್; ಮುಂದಿನ ಭವದೊಳು ಪಲ್ಲಿಯಾಗಿ ಕೇತನಾಗಿ ಪುಟ್ಟಿದಪರ್..ʼ (೩೭೭) ಈ ಶಾಸನದ ಬರಹ ಸಮಾಜಸ್ವಾಸ್ಥ್ಯದ ಹಿನ್ನೆಲೆಯಲ್ಲಿ ಇರಬೇಕಾದ ಸಹಕಾರ, ಮಾನವೀಯತೆ ಹಾಗೂ ಸಹಬಾಳ್ವೆಯ ಮಹತ್ವವನ್ನು ದಿಗ್ದರ್ಶಿಸುತ್ತದೆ.
ಈ ಸಂಕಲನದ ಇನ್ನೊಂದು ಕಣ್ದರೆಸುವ ಕತೆ ದನಗಾಹಿ. ಸತ್ಯಕ್ಕೆ ಸಾವಿಲ್ಲ ಎಂಬುದು ಕತೆಯ ಒಳನೋಟ. ಈ ಕತೆಯ ಮುಖ್ಯಪಾತ್ರ ಗಂಗಣ್ಣ ಅಜ್ಜಿ ಸಾಕಿದ ಮೊಮ್ಮಗ. ಅಜ್ಜಿಯ ಹಿತೋಪದೇಶವನ್ನು ಕೇಳಿ ಬೆಳೆದವ. ಸತ್ಯಕ್ಕೋಸ್ಕರ ಸರ್ವಸ್ವವನ್ನೂ ತ್ಯಾಗಮಾಡಿದವ. ತಾನು ದನಗಾಹಿಯಾದರೂ ಆಸ್ತಿ, ಬದುಕು, ಮನೆ, ಪ್ರೀತಿ ಎಲ್ಲವನ್ನೂ ಸತ್ಯಸಂಧತೆಗಾಗಿ ಕಳೆದುಕೊಂಡು ಇನ್ನೊಬ್ಬರ ಮನೆಯಲ್ಲಿ ಜೀತಮಾಡಿದರೂ ಆತನಿಗೆ ಆ ಬಗ್ಗೆ ನೋವಿಲ್ಲ, ಪಶ್ಚಾತ್ತಾಪವಿಲ್ಲ. ಆದರೆ ಸುಳ್ಳು ಹೇಳಿ ಮಹಲು ಕಟ್ಟಿಸುವ ಅಂಗಡಿ ವಕೀಲರಂಥ ಶ್ರೀಮಂತರ ಬಗ್ಗೆ ಅಸಹನೆ ಇದೆ.
ಗೊಲ್ಲ ಹಳ್ಳಿಯ ಗೌರಜ್ಜಿಯ ಹೊಲವನ್ನು ನೋಡಿಕೊಳ್ಳುತ್ತಿದ್ದ ಶಿವರಾಯನೆಂಬವನ ಮಗ ತಮ್ಮ ಹೊಲದ ವಿಚಾರದಲ್ಲಿ ಮನಸ್ತಾಪವುಂಟಾಗಿ ಪಕ್ಕದ ಹೊಲದ ಭೀಮಣ್ಣನನ್ನು ಹೊಡೆದು ಗಾಯಗೊಳಿಸುವುದನ್ನು ಕಣ್ಣಾರೆ ಕಂಡ ಗಂಗಣ್ಣ ಸತ್ಯವನ್ನು ಎಲ್ಲರ ಮುಂದೆ ಹೇಳುತ್ತಾನೆ. ಊರ ಗೌಡರು ಅವನಿಂದ ಸುಳ್ಳು ಹೇಳಿಸಲು ಪ್ರಯತ್ನಿಸುತ್ತಾರೆ. ಸುಳ್ಳು ಹೇಳದಿದ್ದರೆ ಆಸ್ತಿ, ಮನೆ ಯಾವುದೂ ಸಿಗುವುದಿಲ್ಲವೆಂದು ಬೆದರಿಸುತ್ತಾರೆ. ಅದಕ್ಕೆ ಗಂಗಣ್ಣ ಕೊಡುವ ಉತ್ತರ ʻಸುಳ್ಳು ಹೇಳಲಿಕ್ಕೆ ತಯಾರಾಗಿದ್ದರ, ಆ ಮಾರಾಯ ಹರಿಚಂದರಾಜಗ ವನವಾಸ ಅನಭೊಗಸೂ ಪರಸಂಗನ$ ಬರತಿದ್ದಿಲ್ಲಾ ಅಂತ! ಖರೇಕಾಗಿ ಆ ಮಾರಾಯ ದೊಡ್ಡದೊಂದು ರಾಜ್ಯಾನ$ ಬಿಟ್ಟನಂತ! ನಂದೊಂದು ಚೋಟು ಮನೀ, ಗೇಣು ಹೊಲಾ ಹೋದರ, ನಾಯಾಕ ಚಿಂತೀ ಮಾಡಬೇಕು? ದುಡಕೊಂಡು ತಿನ್ನಂವಗ ಎಲ್ಲಿಗೆ ಹೋದರೂ ಹೊಟ್ಟಿ ತುಂಬೇ ತುಂಬತೈತಿʻ(೪೧೫)
ಎಲ್ಲವನ್ನೂ ಕಳೆಕೊಂಡಾಗಲೂ ಧೃತಿಗೆಡದ ಆತ ʻನಾನು ಸತ್ಯಮಾರ್ಗ ಹಿಡಿದದ್ದು, ಕೆಡಿಸಿದ್ದರ ನನ್ನೊಬ್ಬನ ಬಾಳೇ ಮಾತ್ರ ಕೆಡಿಸಿದ್ದೀತು. ಈ ಜನರ ಸುಳ್ಳಿನ ಮಾರ್ಗ ಲೋಕಾನೆಲ್ಲ ಕೆಡಸತಾ ಹೊಂಟೈತಿ ಅಲ್ಲಾ!(೪೧೭) ಎನ್ನುವ ಮಾತು ಸುಳ್ಳನ್ನು ಬಂಡವಾಳ ಮಾಡಿ ಬದುಕುವವರ ಬೆನ್ನಿಗೆ ಚಾಟಿ ಏಟಿನಂತಿದೆ.
೧೯೫೫ರಲ್ಲಿ ಪ್ರಕಟವಾದ ʻಜನಪದ ಜೀವನʼವೆಂಬ ಕಥಾಸಂಕಲನದ ʻʼಅರಳಿದ ಜೀವʼ ಕತೆಯ ಮೂಲದ್ರವ್ಯದಲ್ಲಿ ಹಳ್ಳಿಯ ಜನರ ಸ್ವಾರ್ಥ, ದುರಾಸೆ, ಕೋಪ, ಆವೇಶ, ಮತ್ಸರ, ಸೇಡು ಇತ್ಯಾದಿ ದುರ್ಗುಣಗಳು ಮತ್ತು ಅದಕ್ಕಾಗಿ ಮಿಡಿಯುವ ಮಾನವೀಯ ಚೇತನದ ನಿಟ್ಟುಸಿರಿದೆ. ತಮ್ಮ ದಾಯಾದಿಯ ಮಗ ನಾಲ್ಕು ವರ್ಷದ ಮಲಕಪ್ಪನನ್ನು ಸಾಕಿ ಅವನಿಗೆ ತನ್ನ ಸಮಸ್ತ ಆಸ್ತಿಯನ್ನೂ ದಾನಮಾಡಿದ ಮೇಲಗಿರಿ ಶೆಟ್ಟರು ಮಲಕಪ್ಪ ದುಡಿಮೆಗಾರರಿಗೆ ಸರಿಯಾದ ಪ್ರತಿಫಲವನ್ನು ಕೊಡದಿರುವುದನ್ನು ನೋಡಿ ತಳಮಳಗೊಂಡು ʻತನ್ನ ಹೊಟ್ಟಿಗಾಗೇ ತಾನು ಗಳಿಸೂದಂದರ, ಪಾಪದ ಮೊಟ್ಟೀ ಗಳಿಸಿದ್ಹಾಂಗ$ ಕಿಟ್ಟಣ್ಣ. ಇದ್ದಾಗ ದಾನ ಮಾಡದೆ ಇರುವವ ಹೊಲೆಯ ಇದ್ದಾಂಗ. ಈ ಲಕ್ಷ್ಮೀದೇವಿಯದೊಂದು ಮೋಜ ಅದ. ಬ್ಯಾಡಾ ಅಂತ ಮೊರಿಹೊಕ್ಕವನ ಬೆನ್ನುಹತ್ತಿ ಬರತಾಳ; ಬೇಕು ಅಂತ ಬಯಸಿಗೋತ$ ಹೋದರ, ಬಾಗಿಲ ದಾಟಿ ಹೊರಡತಾಳ.(೪೩೮) ಉಳ್ಳವರ ಮನೆಯನ್ನು ತುಂಬುವುದಕ್ಕಿಂತ ಇಲ್ಲದವರನ್ನು ಉಳ್ಳವರನ್ನಾಗಿ ಮಾಡುವುದು ಶಿವನು ಮೆಚ್ಚುವ ಕೆಲಸ(೪೩೭)ವೆಂದು ಉಪದೇಶಿಸುವುದು ಕತೆಗಾರರ ಜೀವನ ಸಿದ್ಧಾಂತವಾಗಿ ಮನಸ್ಸನ್ನು ತಟ್ಟುತ್ತದೆ.
ಮೇಲಗಿರಿ ಶೆಟ್ಟರು ಮತ್ತು ಮಲಕಪ್ಪನ ಸಂಬಂಧಕ್ಕೆ ಬಹುದೊಡ್ಡ ಹಿನ್ನೆಲೆ ಇದೆ. ಊರಿನಲ್ಲಿ ಬರಗಾಲ ಬಂದಾಗ ಮಠದ ಅಡವಯ್ಯ ಸ್ವಾಮಿಗಳು ನುಚ್ಚು ಅಂಬಲಿ ಮಾಡಿಸಿ ಬಡಜನರಿಗೆ ಹಂಚುತ್ತಾರೆ. ದಿನಕಳೆದಂತೆ ಸಾವಿರ ಸಾವಿರ ಲೆಕ್ಕದಲ್ಲಿ ಜನರು ಜಮಾಯಿಸಿದಾಗ ದವಸ ಧಾನ್ಯಗಳು ಸಾಲದೆ ಸ್ವಾಮಿಗಳು ಶ್ರೀಮಂತ ಜಮೀನ್ದಾರರನ್ನು ಸಂಪರ್ಕಿಸುತ್ತಾರೆ. ಮಲಕಪ್ಪನ ತಂದೆ ಬೋರಣ್ಣ ಬಹುದೊಡ್ಡ ಶ್ರೀಮಂತನಾದರೂ ಜಿಪುಣ. ಅಡಿವಯ್ಯನವರು ಆತನನ್ನು ಭೇಟಿಮಾಡಿ ಸಹಾಯಮಾಡಲು ಮನಸ್ಸಿಲ್ಲದಿದ್ದರೆ ಸಾಲವಾಗಿಯಾದರೂ ಕೊಡು ಅನ್ನುತ್ತಾರೆ. ಆತ ಜಗ್ಗದಾಗ ಬೇರೆ ದಾರಿ ಕಾಣದೆ ಬಲವಂತವಾಗಿ ಆತನ ಹಗೇವುಗಳನ್ನು ತೆರೆಸಿ ಜೋಳವನ್ನು ಹಂಚುವ ಏರ್ಪಾಡು ಮಾಡುತ್ತಾರೆ. ಜೋಳದ ಲೆಕ್ಕವನ್ನು ಸಾಲವೆಂದು ಕಾಗದಪತ್ರ ಮಾಡಿದರೆ ಬೋರಣ್ಣ ಕಾಗದವನ್ನು ಚೂರುಚೂರು ಮಾಡಿ ಎಸೆದು ಎಲ್ಲರನ್ನು ಜೈಲಿಗೆ ಹಾಕಿಸುತ್ತೇನೆಂದು ಬೆದರಿಸುತ್ತಾನೆ.
ಆ ದಿನ ರಾತ್ರಿ ಮನೆಗೆ ಬೆಂಕಿಬಿದ್ದು ಬೋರಣ್ಣ ಸತ್ತುಹೋಗುತ್ತಾನೆ. ಬೋರಣ್ಣನ ದುರಂತದಿಂದ ಅಡಿವಯ್ಯಸ್ವಾಮಿಗಳು ತೀವ್ರ ಆಘಾತಕ್ಕೆ ಒಳಗಾಗುತ್ತಾರೆ. ಊರವರ ಸಹಾಯದಿಂದ ಕೆರೆ ಕಟ್ಟಿಸಿದ ಅವರು ಮಳೆಗಾಲ ಬಂದಾಗ ಇನ್ನು ಜನರಿಗಾಗಿ ತಾವು ಮಾಡಬೇಕಾದುದಿಲ್ಲವೆಂದು ಯೋಚಿಸಿ ಶ್ರೀಶೈಲ ಯಾತ್ರೆಗೆ ಹೊರಡುತ್ತಾರೆ. ಬೆಳೆ ಬಂದಾಗ ಬೋರಣ್ಣನಿಂದ ಕಿತ್ತುಕೊಂಡ ಸಾಲದ ಜೋಳವನ್ನು ಆತನ ಹೆಂಡತಿಗೆ ಕೊಡಿಸುವ ಏರ್ಪಾಡು ಮಾಡಬೇಕೆಂದು ಮೇಲಗಿರಿ ಶೆಟ್ಟರಿಗೆ ತಿಳಿಸಿ ಹೋದ ಅಡಿವಯ್ಯನವರು ತಾವು ಮತ್ತೆ ಊರಿಗೆ ಹಿಂತಿರುಗುವುದಿಲ್ಲವೆಂದೂ ಬೋರಣ್ಣನಿಗೆ ತಮ್ಮಿಂದಾದ ಅಕೃತ್ಯಕ್ಕೆ ಪ್ರಾಯಶ್ಚಿತ್ತ ಮಾಡುತ್ತೇನೆಂದೂ ಪತ್ರ ಬರೆಯುತ್ತಾರೆ. ಮಕ್ಕಳಿಲ್ಲದ ಮೇಲಗಿರಿಶೆಟ್ಟರು ಬೋರಣ್ಣನ ಮಗ ಮಲಕಪ್ಪನನ್ನು ದತ್ತುತೆಗೆದು ತಮ್ಮ ಸರ್ವಸ್ವವನ್ನೂ ಅವನ ಹೆಸರಿಗೆ ದಾನಮಾಡುತ್ತಾರೆ. ಆದರೆ ಮಲಕಪ್ಪ ತಂದೆಯಂತೆಯೇ ಜಿಪುಣತನ ತೋರಿಸುವುದನ್ನು ಕಂಡು ಮರುಗುತ್ತಾರೆ. ಎರಡು ವಿಭಿನ್ನ ಮನೋಭಾವಗಳನ್ನು ಚಿತ್ರಿಸುವುದರ ಮೂಲಕ ಸಮಾಜದ ಕಟುವಾಸ್ತವತೆಯನ್ನು ಅತ್ಯಂತ ಸಹಜವಾಗಿಯೂ ಕಲಾತ್ಮಕವಾಗಿಯೂ ಕತೆಗಾರರು ದಾಖಲಿಸುತ್ತಾರೆ.
ಸಂಕಲನದ ʻಮೂರನೆಯ ವರ್ಗದ ಪ್ರಯಾಣʼ ಕತೆಯಲ್ಲಿ ಅನುಭವಗಳು ವ್ಯಕ್ತಿತ್ವದ ಮಾಗುವಿಕೆಗೆ ಕಾರಣವಾಗುತ್ತದೆನ್ನುವ ವಿಚಾರವಿದೆ ಮೊದಲ ಸಲ ಮೂರನೆಯ ದರ್ಜೆಯ ರೈಲ್ವೇ ಬೋಗಿಯಲ್ಲಿ ಪ್ರಯಾಣ ಮಾಡಿದ ನಿರೂಪಕರಿಗೆ ಆರಂಭದಲ್ಲಿ ಅಲ್ಲಿನ ಹೊಲಸು ವಾತಾವರಣವನ್ನು ನೋಡಿ ಅಸಹ್ಯವಾದರೂ ನಿಧಾನವಾಗಿ ಪ್ರಯಾಣಿಕರಲ್ಲಿ ಅಂತರ್ಗತವಾಗಿರುವ ಮಾನವೀಯತೆ, ದಯೆ, ಕರುಣೆ, ಬಡತನ, ರಾಜಕೀಯ, ಸೋಗಲಾಡಿತನ, ನೋವು, ಸಂಕಟ ಇತ್ಯಾದಿ ಸ್ವಭಾವ ವೈಲಕ್ಷಣ್ಯಗಳು ಪರಿಚಯವಾಗುತ್ತವೆ. ಪ್ರಯಾಣ ಮುಕ್ತಾಯವಾದಾಗ ಅವರಿಗೆ ʻಮೂರನೆಯ ವರ್ಗದ ಪ್ರವಾಸವೇ ನಿಜವಾದ ಪ್ರವಾಸ; ೨ನೆಯ, ೧ನೆಯ ತರಗತಿ ಇವು ಮನುಷ್ಯನಲ್ಲಿ ಮುನುಷ್ಯತ್ವವನ್ನು ತುಂಬಲಾರವು. ದೇಹ-ಮನಸ್ಸುಗಳನ್ನು ದಣಿಸಿದರೆಯೇ ನಮಗೆ ನಿಜವಾದ ಮನುಷ್ಯತ್ವದ ಅನುಭವವಾಗುವುದು..ʼ (೫೧೭) ಎಂಬ ಜೀವನಮರ್ಮ ಅರಿವಾಗುತ್ತದೆ.
೧೯೬೯ರಲ್ಲಿ ಪ್ರಕಟವಾದ ʻಕಳ್ಳರ ಗುರು ಮತ್ತು ಇತರ ಕತೆಗಳುʼ ಸಂಕಲನದ ಮೊದಲ ಕತೆ ʻಕಳ್ಳರ ಗುರುʼ ಕಳ್ಳರಲ್ಲೂ ಇರುವ ಸತ್ಯಸಂಧತೆ ಮತ್ತು ಮಾನವೀಯತೆಯನ್ನು ಪರಿಚಯಿಸುತ್ತದೆ. ವೈದ್ಯರೊಬ್ಬನ ಮನೆಯಲ್ಲಿ ಕಳ್ಳತನಮಾಡಿದ ಕಳ್ಳರ ಗುರುವಿನ ಮಗುವಿಗೆ ಅನಾರೋಗ್ಯವಾಗಿ ಮನೆಯವರು ವೈದ್ಯರನ್ನು ಹುಡುಕಿಕೊಂಡು ಬರುತ್ತಾರೆ. ಅವರೇ ಕಳ್ಳರೆಂದು ಗೊತ್ತಾದರೂ ಮಾನವೀಯ ದೃಷ್ಟಿಯಿಂದ ಆ ಕಳ್ಳನ ಮನೆಗೆ ಹೋದ ವೈದ್ಯರು ಭಾವನೆಗಳನ್ನು ಅದುಮಿ ಕಗ್ಗತ್ತಲೆಯಲ್ಲೇ ಕಾಡಿಗೆ ಹೋಗಿ ಔಷಧೀಯ ಸೊಪ್ಪುಗಳನ್ನು ತಂದು ತಮ್ಮ ಕರ್ತವ್ಯವನ್ನು ನಿರ್ವಹಿಸಿ ಮಗುವನ್ನು ಬದುಕಿಸುತ್ತಾರೆ. ಶುಶ್ರೂಷೆ ಮಾಡುವ ಸಮಯದಲ್ಲಿ ʻಕಾಯುವುದು ದೇವರ ಕೆಲಸ ಭೀಮಣ್ಣಾ, ಕೊಲ್ಲುವುದು ರಾಕ್ಷಸರ ಕೆಲಸ! ಕಾಯುವ ಕೆಲಸಕ್ಕಾಗಿ ಮನಮುಟ್ಟಿ ದುಡಿಯುವವರಿಗೆ, ದೇವರ ಸಹಾಯ ಇದ್ದೇ ಇರುತ್ತದೆʼ(೫೫೭) ಎಂಬ ನೀತಿ ಮಾತಿನ ಪರಿಣಾಮವಾಗಿ ಆ ಕಳ್ಳ ಮರುದಿನವೇ ತಾನು ಕಳವು ಮಾಡಿದ ಎಲ್ಲ ವಸ್ತ್ರಾಭರಣಗಳನ್ನೂ ಹಿಂದಿರುಗಿಸುತ್ತಾನೆ.
ಈ ಸಂಕಲನದ ʻಬೆಳಗಿನ ಕೋಳಿʼ ವಿಫಲ ದಾಂಪತ್ಯದ ಕತೆ. ಪ್ರೀತಿಸಿ ಮದುವೆಯಾದ ವನಮಲ್ಲಿಕೆ ವಿವಾಹೋತ್ತರ ಬದುಕಿನಲ್ಲಿ ಯಾವ ಅರ್ಥವನ್ನೂ ಕಾಣದೆ ಆದರ್ಶದ ಬೆನ್ನುಹತ್ತಿ ಹೊರಟುಹೋಗುತ್ತಾಳೆ. ಪ್ರೀತಿಯ ಬಗ್ಗೆ ಅವಳು ಕೇಳುವ ಪ್ರಶ್ನೆ ಪ್ರೇಮವಿವಾಹ ಮತ್ತು ಸಾಂಪ್ರದಾಯಿಕ ವಿವಾಹದ ಕೆಲವು ಭ್ರಮೆಗಳನ್ನು ಹೋಗಲಾಡಿಸುತ್ತದೆ. ʻತರುಣ ತರುಣಿಯರ ಸ್ವಭಾವ ಸಹಜ ಆಕರ್ಷಣೆ, ʻಪ್ರೀತಿʼ ಎಂಬ ಪವಿತ್ರ ಹೆಸರಿಗೆ ಪಾತ್ರವಾದೀತೇ? ಬುದ್ಧಿ-ಹೃದಯಗಳ ಚೆಲುವಿಕೆಯಿಲ್ಲದ ಬರಿ ಬಹಿರಂಗ ಸೌಂದರ್ಯ, ಹೆಣ್ಣು-ಗಂಡುಗಳ ಪ್ರೀತಿಗೆ ಪೋಷಕ ಸಾಮಗ್ರಿಯಾದೀತೇ? ಅಂತಹ ಆಭಾಸ ಸೌಂದರ್ಯ, ಪ್ರೀತಿ ಜೀವನವನ್ನು ಶಾಶ್ವತಗೊಳಿಸೀತೇ?ʼ (೬೧೦) ಬೆಕ್ಕುಗಳ ಕಾದಾಟ, ಅಡುಗೆ ಮನೆಯ ಅಸ್ತವ್ಯಸ್ತತೆ, ಮಾಡಿದ ಸುವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗುವುದು ವನಮಲ್ಲಿಕೆಯ ಬದುಕಿನ ವಿಫಲತೆಗೆ ಸಾಕ್ಷಿಯಾಗುತ್ತದೆ. ಇಲ್ಲಿ ಕತೆಗಿಂತಲೂ ದಾಂಪತ್ಯಜೀವನದ ಸಾರ್ಥಕತೆಯನ್ನು ಕುರಿತ ಜಿಜ್ಞಾಸೆಯೇ ಪ್ರಧಾನವಾಗುತ್ತದೆ.
ಸಂಕಲನದ ʻಬೀರಣ್ಣನ ದರ್ಶನʼ ಸತ್ಯ, ನ್ಯಾಯಕ್ಕೋಸ್ಕರ ಹೆತ್ತ ಮಗನನ್ನೇ ಬಲಿಕೊಟ್ಟ ತ್ಯಾಗಿಯೊಬ್ಬನನ್ನು ಪರಿಚಯಿಸುತ್ತದೆ. ನಲವತ್ತು ವರ್ಷ ವಾಸಣ್ಣನೆಂಬ ಜಮೀನ್ದಾರನ ಒಕ್ಕಲಾಗಿ ದುಡಿದು ವರ್ಷ ವರ್ಷ ಕಂದಾಯ ಕಟ್ಟುತ್ತಿದ್ದ ಬೀರಣ್ಣ ಮಗ ದೊಡ್ಡಯ್ಯನಿಗೆ ಜವಾಬ್ದಾರಿ ವಹಿಸಿಕೊಟ್ಟ ಬಳಿಕ ಉಳುವವನೇ ಹೊಲದೊಡೆಯ ಎನ್ನುವ ಸರಕಾರದ ಕಾನೂನನ್ನು ನಂಬಿ ಅವನು ಕಂದಾಯವನ್ನೂ ಕಟ್ಟುವುದಿಲ್ಲ; ಜಮೀನನ್ನೂ ಬಿಟ್ಟುಕೊಡುವುದಿಲ್ಲ. ವಾಸಣ್ಣನಿಗೆ ತಂಗಿಗೆ ಮದುವೆ ಮಾಡಿಸುವ ಸಲುವಾಗಿ ಆ ಹೊಲವನ್ನು ಮಾರಲೇಬೇಕಾಗುತ್ತದೆ. ಬೀರಣ್ಣ ಎಷ್ಟೇ ಹಿತೋಪದೇಶ ಮಾಡಿದರೂ ದೊಡ್ಡಯ್ಯ ಕೇಳುವುದಿಲ್ಲ. ಕೊನೆಗೆ ಬೀರಣ್ಣ ತಾನು ಉಳಿಸಿದ ಹಣದಿಂದ ಬಾಕಿಯಾಗಿದ್ದ ಮೂರು ವರ್ಷದ ಕಂದಾಯವನ್ನು ತೀರಿಸುತ್ತಾನೆ. ಆ ರಾತ್ರಿ ತನ್ನ ಮಗ ಯಜಮಾನನನ್ನೇ ಮುಗಿಸುವ ಸಂಚು ಮಾಡಿರುವುದು ತಿಳಿದು ತಂಗಿ ಕೆಂಚಮ್ಮನಿಗೆ ಹೇಳಿ ನಿದ್ರೆಮಾತ್ರೆಯನ್ನು ಕುಡಿಸುತ್ತಾನೆ. ದೊಡ್ಡಯ್ಯ ಸತ್ತುಹೋಗುತ್ತಾನೆ. ವಾಸಣ್ಣನ ದೃಷ್ಟಿಯಲ್ಲಿ ಮಗನನ್ನೇ ಮಸಣಕ್ಕಟ್ಟಿ ಸತ್ಯದ ಪರ ನಿಂತ ಬೀರಣ್ಣನ ದರ್ಶನ ಕಾಶೀ ವಿಶ್ವೇಶ್ವರನ ದರ್ಶನಕ್ಕಿಂತ ಮಹತ್ವದ್ದೆನಿಸುತ್ತದೆ.(೬೨೮) ʻಧರ್ಮ ಅಧರ್ಮಗಳ ನಡುವೆ, ನೀತಿ ಅನೀತಿಗಳ ನಡುವೆ ಎಲ್ಲೆಲ್ಲಿಯೂ ಯಾವಾಗಲೂ ಘರ್ಷಣೆ ನಡೆದೇ ಇರುತ್ತದೆ, ಈ ಘರ್ಷಣೆ ನಾಗರಿಕರು, ಗಾವಿಲರು ಎಂದು ಭೇದ ಮಾಡುವುದಿಲ್ಲ, ಸುಸಂಸ್ಕೃತರು ಅಸಂಸ್ಕೃತರು ಎಂದು ಲೆಕ್ಕ ಹಾಕುವುದಿಲ್ಲ. ಲೌಕಿಕ ಬುದ್ಧಿಯವರಾದ ನಮಗೆ ಘರ್ಷಣೆಯ ಪರಿಣಾಮದ ಅರಿವು ಇರುವುದಿಲ್ಲ.ʼ (೬೧೫)ಎಂಬುದು ಈ ಕತೆಯ ತಿರುಳು.
ಸ್ವಾತಂತ್ರ್ಯದ ನಿಜವಾದ ಅರ್ಥವೇನೆಂದು ಮನವರಿಕೆ ಮಾಡಿಕೊಡುವ ʻಸ್ವಾತಂತ್ರ್ಯ ಮಹೋತ್ಸವʼ ರಾಜಕೀಯದ ಒಳಸುಳಿಗಳನ್ನು ಅನಾವರಣಮಾಡುವ ಒಂದು ಮಾರ್ಮಿಕ ಕತೆ.
ದೇಶಕ್ಕೆ ಸ್ವಾತ್ರಂತ್ರ್ಯ ಸಿಕ್ಕಿದ ಮರುವರ್ಷದ ಸಮಾರಂಭಕ್ಕೆ ಆಗಮಿಸಿದ ಮಂತ್ರಿಗಳು ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಭೀಮಸೇನರಾಯರು ತಮ್ಮ ರಾಜಕೀಯ ಗುರುಗಳೆಂದು ಪರಿಚಯಿಸುತ್ತ ಅವರು ೧೯೨೧ರಲ್ಲೇ ತಮ್ಮ ವಕೀಲಿ ವೃತ್ತಿಯನ್ನು ತೊರೆದು ದೇಶಕ್ಕಾಗಿ ಮಾಡಿದ ಸೇವೆ, ಸ್ವಾತಂತ್ರ್ಯ ಹೋರಾಟದಲ್ಲಿ ಅನುಭವಿಸಿದ ಕಷ್ಟ, ಸಂಕಟಗಳನ್ನು ಸ್ಮರಿಸುತ್ತಾರೆ. ಆದರೆ ಸಾಹುಕಾರ ಚೆಂಬಣ್ಣ ಮತ್ತು ಮೂಲೆವರ್ತಿಯ ಅಪ್ಪಣ್ಣನೆಂಬ ಪುಡಾರಿಗಳು ಭೀಮಸೇನರಾಯರನ್ನು ನಿಂದಿಸಿ ಅವರು ಇತ್ತೀಚೆಗಿನ ದಿನಗಳಲ್ಲಿ ದೇಶಭಕ್ತಿಯನ್ನು ತೋರಿಸುತ್ತಿಲ್ಲವೆಂದೂ ಸ್ವಾತಂತ್ರ್ಯ ಹೋರಾಟಗಾರರಾದ ಯುವಕರನ್ನು ಹತಾಶೆಗೊಳಿಸುತ್ತಾರೆಂದೂ ತಿಳಿಸುತ್ತ ಆದಿನದ ಕಾರ್ಯಕ್ರಮಕ್ಕೂ ಅವರು ಬರಲಿಲ್ಲವೆಂದು ಆರೋಪಿಸುತ್ತಾರೆ. ಭೀಮಸೇನರಾಯರು ದೇಶದ ಬಗ್ಗೆ ತೋರಿಸುವ ಅನಾದರದ ವಿಚಾರದಲ್ಲಿ ಗೊಂದಲಕ್ಕೊಳಗಾದ ಮಂತ್ರಿಗಳು ಅದರ ಬಗ್ಗೆ ಯೋಚಿಸುತ್ತ ಒಂದೂವರೆ ಮೈಲಿ ಹೋದಾಗ ದಾರಿಯ ಬದಿಯ ಬಾವಿದಂಡೆಯ ಮೇಲೆ ಆತ್ಮಹತ್ಯೆ ಮಾಡಲೆಂದು ಕುಳಿತು ಕಣ್ಣೀರು ಸುರಿಸುವ ಮಹಿಳೆಯೊಬ್ಬಳು ಗೋಚರಿಸುತ್ತಾಳೆ. ಮಂತ್ರಿಗಳು ಕುತೂಹಲದಿಂದ ಹತ್ತಿರ ಹೋಗಿ ವಿಚಾರಿಸಿದಾಗ ಆಕೆ ಭೀಮಸೇನರಾಯರ ಹಿರಿಮಗಳಾದ ಯಶೋದಾಬಾಯಿಯೆಂಬುದು ಗೊತ್ತಾಗುತ್ತದೆ. ಆತ್ಮಹತ್ಯೆ ಮಾಡುವಂಥ ಪರಿಸ್ಥಿತಿ ಏನೆಂದು ಕೇಳಿದಾಗ ಆಕೆ ಭೀಮಸೇನರಾಯರ ಬದುಕಿನಲ್ಲಿ ನಡೆದ ದುರಂತ ಕಥಾನಕವನ್ನು ಬಿಚ್ಚಿಡುತ್ತಾಳೆ. ದೇಶಸೇವೆಗೋಸ್ಕರ ತಮ್ಮ ಸಂಪತ್ತನ್ನು ದಾನಮಾಡಿದ ಭೀಮಸೇನರಾಯರು ಅದೇ ಕಾರಣಕ್ಕೆ ಚೆಂಬಣ್ಣನ ತಂದೆಯವರಲ್ಲಿ ಸಾಲ ಮಾಡಿದ್ದರೆಂದೂ ಸಾಲದ ವಸೂಲಿಗಾಗಿ ಅವರು ಭೀಮಸೇನರಾಯರ ಸಮಸ್ತ ಆಸ್ತಿಯನ್ನು ಹರಾಜು ಮಾಡಿಸಿ ವಶಪಡಿಸಿದುದಾಗಿಯೂ ೧೯೩೧ರ ಚಳುವಳಿಯಲ್ಲಿ ಯಶೋದಾಬಾಯಿಯ ಗಂಡನೂ ಪೋಲೀಸರ ಲಾಠೀಚಾರ್ಜಿಗೆ ಬಲಿಯಾದನೆಂದೂ ತಿಳಿಸುತ್ತಾಳೆ. ಅನಾರೋಗ್ಯಪೀಡಿತರಾದ ಭೀಮಸೇನರಾಯರನ್ನು ನೋಡಲು ಹೋದ ಮಂತ್ರಿಗಳಿಗೆ ಚೆಂಬಣ್ಣ ಮತ್ತು ಅಪ್ಪಣ್ಣ ಗೌಡರ ಕೀಳು ರಾಜಕಾರಣದ, ಕೀಚಕ ಬುದ್ಧಿಯ ಅರಿವಾಗುತ್ತದೆ. ೭೫ ವರ್ಷಗಳ ಹಿಂದೆಯೇ ಆನಂದಕಂದರು ರಾಜಕೀಯದ ಕುತಂತ್ರ, ಕುಟಿಲತನಗಳನ್ನು ಹೇಗೆ ಕಲ್ಪಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ʻಮದುವೆಯಲ್ಲ -ಮಾರಿಗೆ ಬಲಿʼ ಎಂಬ ಕತೆ ಯಾವ ಸಂಕಲನದಲ್ಲೂ ಸೇರದ ಬಾಲ್ಯ ವಿವಾಹ ಮತ್ತು ವಿಧವಾ ಸಮಸ್ಯೆಯನ್ನು ಕುರಿತ ಕತೆ. ಈ ಕತೆಯಲ್ಲಿ ಬರುವ ಯುವಕ ರಂಗನಾಥ ಕ್ಷಯರೋಗಪೀಡಿತನಾಗಿ ಮದುವೆ ಬೇಡವೆಂದು ನಿರ್ಧರಿಸಿರುತ್ತಾನೆ. ಆದರೆ ಮನೆಯವರ ಬಲವಂತದಿಂದ ಕಾವೇರಿ ಎಂಬ ಚಿಕ್ಕವಯಸ್ಸಿನ ಚೆಲುವೆಯನ್ನು ಮದುವೆಯಾಗುತ್ತಾನೆ. ರಂಗನಾಥನ ಕಾಯಿಲೆ ಉಲ್ಬಣಿಸುವ ಹೊತ್ತಿಗೇ ಕಾವೇರಿ ಮೈನೆರೆದ ವರ್ತಮಾನ ತಲಪುತ್ತದೆ. ಮೈನೆರೆದ ಐದನೆಯ ದಿನ ತಂದೆತಾಯಿಯರೊಂದಿಗೆ ಗಂಡನ ಮನೆಗೆ ಬಂದ ಕಾವೇರಿ ಮರುದಿನವೇ ವಿಧವೆಯಾಗುತ್ತಾಳೆ. ಈಗ ಹುಡುಗನ ಹೆತ್ತವರಿಗೆ ತಾವು ಮಾಡಿದ್ದು ʻಮದುವೆಯಲ್ಲ, ಮಾರಿಗೆ ಬಲಿʼ ಎಂಬ ಕಠೋರ ಸತ್ಯ ಅರಿವಾಗುತ್ತದೆ. ಹಿರಿಯರ ಸಂತೋಷ ಮತ್ತು ಸ್ವಾರ್ಥಕ್ಕಾಗಿ ಅಮಾಯಕ ಹೆಣ್ಣುಮಕ್ಕಳ ಬದುಕು ಹೇಗೆ ಬಲಿಯಾಗುತ್ತದೆಂಬುದನ್ನು ಈ ಕತೆ ಸಾರುತ್ತದೆ.
ಕಾದಂಬರಿಗಳು
ಆನಂದಕಂದರು ರಾಜಯೋಗಿ, ಅಶಾಂತಿ ಪರ್ವ ಮತ್ತು ಮಲ್ಲಿಕಾರ್ಜುನ ಎಂಬ ಮೂರು ಐತಿಹಾಸಿಕ ಕಾದಂಬರಿಗಳನ್ನೂ ಸುದರ್ಶನ ಮತ್ತು ಮಗಳ ಮದುವೆ ಎಂಬ ಎರಡು ಸಾಮಾಜಿಕ ಕಾದಂಬರಿಗಳನ್ನೂ ಬರೆದಿದ್ದಾರೆ.
ಐತಿಹಾಸಿಕ ಕಾದಂಬರಿಗಳು ಮೂರೂ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ವಸ್ತುವಾಗುಳ್ಳ ದುರಂತ ಕಾದಂಬರಿಗಳು. ರಾಜಯೋಗಿ(೧೯೩೪) ಮೊದಲ ಕಾದಂಬರಿ. ಇದರಲ್ಲಿ ವಿಜಯನಗರದ ದೊರೆ ಪ್ರೌಢದೇವರಾಯನ ತಮ್ಮ ಪ್ರತಾಪದೇವರಾಯನ ಮಗನಾದ ವಿರೂಪಾಕ್ಷನ ಹಿಂಸಾಚಾರ ಮತ್ತು ದುರಾಡಳಿತ ಮತ್ತು ಅದರಿಂದ ರಾಜ್ಯಕ್ಕಾಗುವ ಅಧೋಗತಿಯನ್ನು ನೋಡಲಾರದೆ ಪ್ರೌಢದೇವರಾಯನ ಮಗ ರಾಜಶೇಖರ ಅವನನ್ನು ವಧಿಸುವ ಚಿತ್ರಣವಿದೆ. (ವಿರೂಪಾಕ್ಷ ತನ್ನ ದೊಡ್ಡಪ್ಪನ ಮಗ ಸಾತ್ವಿಕ ದೊರೆಯಾದ ಮಲ್ಲಿಕಾರ್ಜುನನನ್ನು ಕೊಂದು ಪಟ್ಟಕ್ಕೆ ಬಂದವನು) ಆನಂದಕಂದರ ಎರಡನೆಯ ಕಾದಂಬರಿ ಅಶಾಂತಿಪರ್ವ(೧೯೩೫)ವಿರೂಪಾಕ್ಷನ ಮರಣಾನಂತರದ ಪರಿಸ್ಥಿತಿಯನ್ನು ಚಿತ್ರಿಸುತ್ತದೆ. (ರಾಜಶೇಖರ ಅಧಿಕಾರವನ್ನು ವಹಿಸಲು ಇಚ್ಛಿಸದೆ ತಮ್ಮನಾದ ಪೆದ್ದರಾಯರಿಗೆ ಪಟ್ಟಾಭಿಷೇಕ ಮಾಡಿಸುವುದೂ ಪೆದ್ದರಾಯ ಅಣ್ಣನಂತಲ್ಲದೆ ದುಷ್ಟನೂ ಅಹಂಕಾರಿಯೂ ಉದ್ಧಟನೂ ಆಗಿ ಸಾಳುವ ನರಸಿಂಹನಾಯಕನನ್ನು ದಂಡನಾಯಕ ಪದವಿಯಿಂದ ಕಿತ್ತು ಈಶ್ವರನಾಯಕನೆಂಬವನಿಗೆ ಅಧಿಕಾರವನ್ನು ಹಸ್ತಾಂತರ ಮಾಡುವುದು, ಧಾರ್ಮಿಕ ಅಸಹಿಷ್ಣುತನ ತೋರಿಸಿ ಮುಸಲ್ಮಾನರನ್ನು ಮೂರು ದಿನಗಳೊಳಗೆ ರಾಜ್ಯಬಿಟ್ಟು ಹೋಗುವಂತೆ ಆದೇಶಿಸುವುದು ಇತ್ಯಾದಿ ನಿರಂಕುಶ ಪ್ರಭುತ್ವ ಮಿತಿಮೀರಿದಾಗ ಪ್ರತಿಭಟಿಸಿದ ಅಣ್ಣ ರಾಜಶೇಖರನನ್ನೇ ಕೊಲೆಮಾಡಿಸುತ್ತಾನೆ. ರಾಜ್ಯದಲ್ಲಿ ಅಶಾಂತಿ ಹೆಚ್ಚಲು ತಲೆಮರೆಸುತ್ತಾನೆ. ಕೊನೆಗೆ ಸಾಳುವ ನರಸಿಂಹ ನಾಯಕ ಪಟ್ಟವೇರುತ್ತಾನೆ. ಆನಂದ ಕಂದರ ಮೂರನೆಯ ಕಾದಂಬರಿ ಮಲ್ಲಿಕಾರ್ಜುನ(೧೯೬೫) ಇದು ಘಟನೆ ಮತ್ತು ಕಾಲದ ದೃಷ್ಟಿಯಿಂದ ರಾಜಯೋಗಿಗಿಂತ ಮೊದಲು ಬರಬೇಕಾದುದು. ಮಲ್ಲಿಕಾರ್ಜುನ ಕಾದಂಬರಿಯ ವಸ್ತು ಪ್ರೌಢದೇವರಾಯನ ಮಗನಾದ, ರಾಜಶೇಖರನ ತಂದೆ ಮಲ್ಲಿಕಾರ್ಜುನನಿಗೆ ಸಂಬಂಧಿಸಿದ್ದು. ವಿರೂಪಾಕ್ಷ ಪಟ್ಟವೇರುವ ಮೊದಲು ಅವನ ತಂದೆ ಪ್ರತಾಪದೇವರಾಯ ಅಣ್ಣ ಪ್ರೌಢದೇವರಾಯನನ್ನು ಕೊಲ್ಲಲು ಮಾಡುವ ಹಂಚಿಕೆಯಲ್ಲಿ ಪ್ರೌಢದೇವರಾಯನೂ, ಆತನ ಹಿರಿಯ ಮಗನಾದ ವೀರವಿಜಯನೂ ಸ್ವತಃ ಪ್ರತಾಪದೇವರಾಯನೂ ಕೊಲೆಯಾಗುವುದು, ಆಗ ಶ್ರೀಶೈಲದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಲ್ಲಿಕಾರ್ಜುನನನ್ನು ಕರೆಸಿ ಪಟ್ಟಕಟ್ಟುವುದು, ಮುಂದೆ ವಿರೂಪಾಕ್ಷರಾಯ ಮಲ್ಲಿಕಾರ್ಜುನನ ವಿರುದ್ಧ ಕತ್ತಿ ಮಸೆದಾಗ ಸಾಳುವ ನರಸಿಂಹನಾಯಕ, ಲಕ್ಕಣ ದಂಡನಾಯಕ ಹಾಗೂ ವೀರವಿಜಯನನ್ನು ಮದುವೆಯಾಗಬೇಕಾಗಿದ್ದ ಚಂದಲಾದೇವಿ ಮುಂತಾದವರ ಸಾಮ್ರಾಜ್ಯ ನಿಷ್ಠೆ ಮತ್ತು ರಾಜನ ಸಮಯೋಚಿತ ಸಾತ್ವಿಕ ದೃಷ್ಟಿಗಳ ಮೂಲಕ ಆಪತ್ತು ನಿವಾರಣೆಯಾಗುವುದು ಕಾದಂಬರಿಯ ಕಥಾವಸ್ತು.
ಒಟ್ಟಿನಲ್ಲಿ ಸಾಮ್ರಾಜ್ಯಶಾಹಿಯ ಮೋಹ, ಅದರಿಂದ ಉಂಟಾಗುವ ದ್ರೋಹ, ಅಧಿಕಾರ, ಆಮಿಷಗಳು ಉಂಟುಮಾಡುವ ಅನ್ಯಾಯ, ಅತ್ಯಾಚಾರ, ಮೋಸ, ವಂಚನೆಗಳ, ಹೇಗೆ ಮನುಷ್ಯ ಸಂಬಂಧಗಳನ್ನು ನಾಶಮಾಡುತ್ತದೆ, ಮನುಷ್ಯನ ಸ್ವಾರ್ಥ, ತಮಸ್ಸು, ರಾಕ್ಷಸ ಪ್ರವೃತ್ತಿಗಳು ಉತ್ತಮರನ್ನೂ ಬಲಿ ಹೇಗೆ ತೆಗೆದುಕೊಳ್ಳುತ್ತದೆ ಎನ್ನುವ ವಿವರಗಳೊಂದಿಗೆ ಅರಸೊತ್ತಿಗೆಯಲ್ಲಿ ನಡೆಯುವ ಭೀಭತ್ಸ, ಭಯಾನಕ, ದುರಂತ ಚಿತ್ರಗಳನ್ನು ಕಾದಂಬರಿಗಳು ಕನ್ನಡಿಸುತ್ತವೆ. ಕನ್ನಡ ಸಾಮ್ರಾಜ್ಯದ ಅಳಿವಿಗೆ ಕೇವಲ ಮುಸಲ್ಮಾನರು ಮಾತ್ರವೇ ಕಾರಣರಲ್ಲ ಹಿಂದೂ ಸಾಮ್ರಾಜ್ಯಶಾಹಿಗಳ ಒಳಜಗಳ, ಭಿನ್ನ ಮತ, ಸ್ವಾರ್ಥ, ದುರಾಡಳಿತಗಳೂ ಕಾರಣಗಳಾಗುತ್ತದೆಂಬುದನ್ನು ಕಾದಂಬರಿಕಾರರು ಶ್ರುತಪಡಿಸುತ್ತಾರೆ.
ಆನಂದಕಂದರ ಐತಿಹಾಸಿಕ ಕಾದಂಬರಿಗಳ ಬಗ್ಗೆ ಸುದೀರ್ಘವಾಗಿ ವ್ಯಾಖ್ಯಾನಿಸಿದ ರಾಘವೇಂದ್ರ ಪಾಟೀಲರು ಕಾದಂಬರಿಯ ವಸ್ತು, ರಚನೆ, ತಂತ್ರಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತ ಆನಂದಕಂದರು ವಿಜಯನಗರ ಸಾಮ್ರಾಜ್ಯವನ್ನು ಹಿಂದೂ ಸಾಮ್ರಾಜ್ಯವೆಂದು ಗುರುತಿಸಿದರೂ ಅವರದ್ದು ಧರ್ಮನಿರಪೇಕ್ಷ ಮನೋಭಾವವಾಗಿದೆ ಎಂದು ಕಾದಂಬರಿಗಳ ಒಳನೋಟಗಳಿಂದ ಸಾಬೀತು ಪಡಿಸುತ್ತಾರೆ. (೧೦೮) ಪೆದ್ದರಾಯ ರಾಜ್ಯದಲ್ಲಿರುವ ಮುಸಲ್ಮಾನರೆಲ್ಲರೂ ತೊಲಗಬೇಕೆಂದು ಆದೇಶ ಹೊರಡಿಸಿದರೂ ರಾಜಶೇಖರ ಅದನ್ನು ತಡೆದು ಅದೇ ಕಾರಣಕ್ಕೆ ತಾನು ಕೊಲೆಗೀಡಾಗುತ್ತಾನೆ. ಕೊನೆಯಲ್ಲಿ ಆನಂದಕಂದರ ಐತಿಹಾಸಿಕ ಕಾದಂಬರಿಗಳು ಘನವಾದ ತಾತ್ವಿಕತೆಯನ್ನು ತಮ್ಮ ಮೈಯಲ್ಲಿ ಧರಿಸುತ್ತ ಶೋಭಾಯಮಾನವಾಗಿವೆ. ಈ ತಾತ್ವಿಕತೆ ಲೌಕಿಕತೆಯಿಂದ ಅಲೌಕಿಕತೆಯವರೆಗೆ ವಿಶಾಲವ್ಯಾಪ್ತಿಯಲ್ಲಿ ವ್ಯಕ್ತವಾಗುವಂತದ್ದು. ಈ ವ್ಯಾಪ್ತಿಗೆ ತಕ್ಕಂತಹ ಸಂಕೀರ್ಣತೆಯನ್ನು ಮತ್ತು ಇಂಥ ಸಂಕೀರ್ಣತೆಗೆ ತಕ್ಕಂತಹ ಶಿಲ್ಪವನ್ನು ಹೊಂದುತ್ತ ಈ ಕಾದಂಬರಿಗಳು ಉತ್ಕೃಷ್ಟ ಕಲಾಕೃತಿಗಳಾಗಿವೆʼ ಎನ್ನುತ್ತಾರೆ.(೧೧೦)

ಸಾಮಾಜಿಕ ಕಾದಂಬರಿಗಳು
ಮಗಳ ಮದುವೆ
೧೯೫೧ರಲ್ಲಿ ರಚನೆಗೊಂಡ ಮಗಳ ಮದುವೆ ಕಾದಂಬರಿಯಲ್ಲಿ ಸಂಪ್ರದಾಯ ಮತ್ತು ಆಧುನಿಕತೆಗಳು ಮುಖಾಮುಖಿಯಾಗುವ ಸಂದರ್ಭದ ಗೊಂದಲ, ಮಾನಸಿಕ ಸಂಘರ್ಷಗಳನ್ನು ಕಾಣಬಹುದು. ವಸಾಹತುಶಾಹಿ ಸಂಸ್ಕೃತಿ ಕೊಡಮಾಡುವ ಐಷಾರಾಮೀ ಬದುಕಿನ ವ್ಯಾಮೋಹಗಳು, ಭಾರತೀಯ ಸನಾತನ ಬದುಕಿನೊಂದಿಗೆ ಬೇರೂರಿದ ಸಂಪ್ರದಾಯ, ನಂಬಿಕೆಗಳು ಕಾದಂಬರಿಯ ವಸ್ತು ಮತ್ತು ಪಾತ್ರಗಳಲ್ಲಿ ಒಡಮೂಡುತ್ತ ೫೦ ರ ದಶಕದ ಬದುಕಿನ ಸ್ಥಿತ್ಯಂತರಗಳನ್ನು ದಾಖಲಿಸುತ್ತವೆ. ಇದರ ಮುಖ್ಯಕಥಾವಸ್ತು ಕಾವೇರಿಯ ಯುವತಿಯ ವಿವಾಹ. ಆಧುನಿಕತೆಯನ್ನು ಒಪ್ಪಿದ ವೆಂಕಣ್ಣ ವಿವಾಹವನ್ನು ವೈಯಕ್ತಿಕ ಸ್ವಾತಂತ್ರ್ಯದ ಕ್ರಿಯೆಯೆಂದರೆ ಸನಾತನತೆಯನ್ನು ನಂಬಿದ ರತ್ನಾಕರನಿಗೆ ಅದು ಸಾಮಾಜಿಕ ಸಂಬಂಧಗಳನ್ನು ಮುಂದುವರಿಸುವ ಪವಿತ್ರ ಅನುಬಂಧ. ʻಗಂಡು ಹೆಣ್ಣಿನ ಮದಿವಿ ಅಂದರ ಅದು ಕೇವಲ ವ್ಯಕ್ತಿ ವ್ಯಕ್ತಿಗಳಿಗೆ ಸಂಬಂಧಿಸಿದ ಮಾತಷ್ಟೇ ಅಲ್ಲ, ಇಡೀ ಸಮಾಜಕ್ಕೆ ಸಂಬಂಧಿಸಿದ ವ್ಯಾಪಕ ತತ್ವ ಅದರೊಳಗ ಹುದುಗಿಕೊಂಡ$ದʼ ಎಂದು ವೆಂಕಣ್ಣನಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾನೆ. ಈ ಮಾತುಗಳು ಭಾರತೀಯ ಸಮಾಜದ ವೈವಾಹಿಕ ಸಿದ್ಧಾಂತವನ್ನು ತಿಳಿಸುತ್ತದೆ.
ಕಾದಂಬರಿ ಇಷ್ಟಕ್ಕೇ ನಿಲ್ಲದೆ ಆಧುನಿಕತೆ ಮತ್ತು ವಸಾಹತುಶಾಹಿಯ ಪರಿಣಾಮದಿಂದ ಉಂಟಾಗುವ ದಾಂಪತ್ಯ ವಿರಸ, ವಿಚ್ಛೇದನಗಳ ಮೂಲವನ್ನು ಶೋಧಿಸುತ್ತದೆ. ಆಧುನಿಕತೆಯ ಬದುಕು ಜೀವನ ಸಿದ್ಧಾಂತ, ಮೌಲ್ಯಗಳಿಂದ ದೂರವಾಗಿ ಆರ್ಥಿಕ ಬಲದಲ್ಲಿ ಸ್ಥಾಪಿತವಾಗುವುದರ ಕಡೆಗೆ ಕಾದಂಬರಿ ಬೆಳಕು ಚೆಲ್ಲುತ್ತದೆ. ಕಾವೇರಿಯ ತಂದೆ ಗೋಪಾಲರಾಯರು ಹೊಸ ಹಳೆ ತಲೆಮಾರುಗಳ ನಂಬಿಕೆ, ಬದುಕಿನ ವಿಧಾನವನ್ನು ಕುರಿತು ಚಿಂತಿಸುವುದು ಹೀಗೆ: ʻಎಲ್ಲಾ ವಿಚಿತ್ರ ಕಾಲವೇ ಬಂದ$ದ. ಹಳೇರೀತೀ ಹಿಡದು ಜೀವನಾ ನಡೆಸಬೇಕಂದರ ನಮ್ಮ ಆರ್ಥಿಕ ಪರಿಸ್ಥಿತಿ ಏಟು ಹಾಕತದ! ಹಳೇ ಆಚಾರಾ ವಿಚಾರಾ ಹೊಗಳೋ ಮಂದಿ ನಮ್ಮಲ್ಲಿ ಬೇಕಾದಷ್ಟು ಅದ! ಆದರೂ ಪ್ರತ್ಯಕ್ಷ ಕೃತಿಯೊಳಗ, ಹೊಸ ಆಚಾರ ವಿಚಾರಗಳಿಗೇ ಬೆಲೀ ಕೊಡೂದು ನಡದ$ದ. ಇಂಥ ಕಾಲದೊಳಗ ಪ್ರಾಮಾಣಿಕ ಅಭಿಪ್ರಾಯಕ್ಕ ಅವಕಾಶ ಹ್ಯಾಂಗ ಸಿಗಬೇಕು? ಈಗಿನ ಸಿನಿಮಾ ನಾಟಕದ ಜಗತ್ತಿನೊಳಗ ನಾವೆಲ್ಲರೂ ಸಿನೀಮಾ ನಾಟಕದಲ್ಲಿಯ ಜೀವನದ್ಹಾಂಗ ನಡಕೋಬೇಕಾಗೇದ! ಒಳಗ ಇರೂದು ಒಂದು ಹೊರಗ ತೋರಸೋದ$ ಒಂದು! ಇಂಥ ಕಲಸುಮೇಲೋಗರ ಸಮಾಜದಲ್ಲಿ ಕಾದಂಬರಿಕಾರರು ಹೇಳುವಂತೆ ʻತ್ಯಾಪೆಹಾಕಿದʼ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಸ್ವಾತಂತ್ರ್ಯೋತ್ತರ ಭಾರತದ ಪ್ರಜಾಪ್ರಭುತ್ವದ ನೆಲೆಗಳನ್ನೂ ಕಾದಂಬರಿ ಪ್ರಶ್ನಿಸುತ್ತವೆ.
ಆನಂದಕಂದರ ಪತ್ರಿಕಾ ವ್ಯವಸಾಯ
೧೯೨೧ರಿಂದಲೇ ಕೃಷ್ಣಶರ್ಮರು ಪತ್ರಿಕಾ ವ್ಯವಸಾಯವನ್ನು ಪ್ರಾರಂಭಿಸಿದ್ದರು. ಬೆಳಗಾವಿಯಲ್ಲಿ ಕರಗುಪ್ಪೀಕರ್‌ ಕೃಷ್ಣರಾಯ ಎನ್ನುವವರು ಸ್ಥಾಪಿಸಿದ್ದ ಮಾತೃಭೂಮಿ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಪತ್ರಿಕೆಗೆ ಧನಸಹಾಯ ನೀಡುತ್ತಿದ್ದ ಗೋವಿಂದರಾವ ಯಾಳಗಿಯವರ ನಿಧನ ಮತ್ತು ಬೆಟಗೇರಿಯವರು ಬೆಳಗಾವಿಯಿಂದ ಬೇರೊಂದು ಶಾಲೆಗೆ ಹೋಗಬೇಕಾದ ಅನಿವಾರ್ಯತೆಯಿಂದ ಪತ್ರಿಕೆ ನಿಂತುಹೋಯಿತು. ೧೯೨೫ರಿಂದ ೧೯೨೭ ರವರೆಗೆ ಧಾರವಾಡದ ಸ್ವಧರ್ಮ ಪತ್ರಿಕೆಯ ಸಂಪಾದಕತ್ವ, ಬೆಂಗಳೂರಿನ ʻಜನಜೀವನʼ ಎಂಬ ಪತ್ರಿಕೆಯ ಸಂಪಾದಕತ್ವ, ಮುಂದೆ ಮನೋಹರ ಗ್ರಂಥಮಾಲೆ, ಅದೇ ಸಮಯದಲ್ಲಿ ಧಾರವಾಡದ ಗೆಳೆಯರ ಗುಂಪಿನವರು ನಡೆಸುತ್ತಿದ್ದ ಜಯಕರ್ನಾಟಕ ಪತ್ರಿಕೆಯ ಜವಾಬ್ದಾರಿಯನ್ನೂ ವಹಿಸಿದರು. ಪತ್ರಿಕೆ ಒಳಗಿನ ಭಿನ್ನಾಭಿಪ್ರಾಯದಿಂದ ಗೆಳೆಯರ ಗುಂಪು ಪತ್ರಿಕೆಯನ್ನು ಕೈಬಿಟ್ಟಾಗ ಮನೋಹರ ಗ್ರಂಥಮಾಲೆಯ ಆರಂಭ. ಒಂದೇ ವರ್ಷದ ಬಳಿಕ ಗ್ರಂಥಮಾಲೆಯ ಜವಾಬ್ದಾರಿಯನ್ನು ಬಿಟ್ಟು ಒಂದು ವರ್ಷ ಮತ್ತೆ ಜಯಕರ್ನಾಟಕದಲ್ಲಿ ಕೆಲಸ ಮಾಡಿ ಆಮೇಲೆ ೧೯೩೬ರಲ್ಲಿ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಜವಾಬ್ದಾರಿಯನ್ನು ಒಪ್ಪಿಕೊಂಡರು. ಮುಂದೆ ಶಂ.ಬಾ. ಜೋಶಿಯವರ ಆಹ್ವಾನದ ಮೇರೆಗೆ ಧಾರವಾಡಕ್ಕೆ ಹೋಗಿ ೧೯೩೮ರಿಂದ ಜಯಂತಿ ಪತ್ರಿಕೆಯ ಕೆಲಸಕ್ಕೆ ತಮ್ಮನ್ನು ಸಮರ್ಪಿಸಿಕೊಂಡರು. ಸುಮಾರು ೨೩ ವರ್ಷಗಳ ಕಾಲ ಸತತವಾಗಿ ಆ ಪತ್ರಿಕೆಗಾಗಿ ದುಡಿದರು. ಬಹಳಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದರೂ ೧೯೬೧ ರ ವರೆಗೂ ಅತ್ಯಂತ ಶಿಸ್ತು, ಪ್ರಾಮಾಣಿಕತೆ ಬದ್ಧತೆಗಳಿಂದ ಅದನ್ನು ಮುನ್ನಡೆಸಿದರು. ಪತ್ರಿಕೋದ್ಯಮದ ಮೂಲಕ ಕನ್ನಡದ ಕಂಪು ಸೊಂಪುಗಳನ್ನು ನಾಡಿನಾದ್ಯಂತ ಹರಡಿದರು. ಜಾನಪದ ಲೋಕವನ್ನು ತೆರೆದರು.
ಬೇಂದ್ರ, ಮಧುರಚೆನ್ನ ಮುಂತಾದವರ ಸಮಕಾಲೀನರಾಗಿ ಬಾಳಿ ಬದುಕು ಮತ್ತು ಬರಹಗಳನ್ನು ಅವಿನಾಭಾವಿಯಾಗಿ ಕಂಡ ಬೆಟಗೇರಿಯವರು ಸಾಹಿತ್ಯ ನಿರ್ಮಿತಿ, ಪತ್ರಿಕಾ ವ್ಯವಸಾಯಗಳನ್ನು ಜೊತೆಜೊತೆಯಾಗಿಯೇ ಸಾಗಿಸಿದರು. ಪತ್ರಿಕೆಗಳ ಮೂಲಕ ಅನೇಕ ಬರಹಗಾರರನ್ನು ಸಾಹಿತ್ಯಲೋಕಕ್ಕೆ ಪರಿಚಯಿಸಿದರು. ಚೆನ್ನವೀರ ಕಣವಿ, ಗೌರೀಶ ಕಾಯ್ಕಿಣಿ, ಚಂದ್ರಶೇಖರ ಪಾಟೀಲ, ಚಂದ್ರಶೇಖರ ಕಂಬಾರ, ವಿ.ಎಂ. ಇನಾಂದಾರ್‌, ಜಿ.ಎಸ್. ಆಮೂರ, ಗಿರೀಶ್‌ ಕಾರ್ನಾಡ ಮುಂತಾದ ಸಾಹಿತ್ಯಲೋಕದ ದಿಗ್ಗಜರನ್ನು ಮಾತ್ರವಲ್ಲದೆ ಅನೇಕ ತೆರೆಯ ಮರೆಯ ಉದಯೋನ್ಮುಖ ಬರಹಗಾರರನ್ನೂ ಸಾಹಿತ್ಯಲೋಕದಲ್ಲಿ ಬೆಳೆಸಿದರು.
ಆನಂದಕಂದರಿಗೆ ಸಂದ ಗೌರವ
೧೯೭೪ರಲ್ಲಿ ಕರ್ನಾಟಕ ವಿ.ವಿ. ದಿಂದ ಗೌರವ ಡಾಕ್ಟರೇಟ್‌, ೧೯೭೧ರಲ್ಲಿ ನಾಗಮಂಗಲದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕವಿಭೂಷಣ ಬಿರುದು, ಕನ್ನಡ ಪರಿಷತ್ತಿನ ಸನ್ಮಾನ, ಧರ್ಮಸ್ಥಳದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ‌, ಕವಿಗೋಷ್ಠಿ, ಕಥಾಗೋಷ್ಠಿ ಅಧ್ಯಕ್ಷತೆ- ಇವೇ ಮುಂತಾದ ಗೌರವ, ಪುರಸ್ಕಾರಗಳಿಗೆ ಆನಂದಕಂದರು ಭಾಜನರಾಗಿದ್ದಾರೆ.
ಶ್ರೀಯುತರಾದ ರಾಘವೇಂದ್ರ ಪಾಟೀಲ, ಬಿಂದುಮಾಧವ ಬುರ್ಲಿ ಮತ್ತು ಅನಂತ ತಡಸ, ಡಾ. ಎ.ಕೆ. ಕುಲಕರ್ಣಿ ಮುಂತಾದವರು ಆನಂದಕಂದರ ಬಗ್ಗೆ ಕೃತಿ ರಚನೆ ಮಾಡಿದ್ದಾರೆ. ಅವರಿಗೆ ೮೨ ತುಂಬಿದ ವರ್ಷ ೨೧-೦೨-೮೨ರಲ್ಲಿ ಪ್ರೊ. ಜ್ಯೋತಿ ಹೊಸೂರ, ಡಾ. ಬಸವರಾಜ ಮಲಶೆಟ್ಟಿ, ಡಾ. ನಿಂಗಣ್ಣ ಸಣ್ಣಕ್ಕಿ ಅವರು ಬೆಳುವಲ ಎಂಬ ಅಭಿನಂದನ ಗ್ರಂಥವನ್ನು ಸಂಪಾದಿಸಿ, ಸಮರ್ಪಿಸಿ ಗೌರವಿಸಿದ್ದಾರೆ.
ಹೀಗೆ ೬ ದಶಕಗಳ ಕಾಲ ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳ ಮೂಲಕ ಸಂಸ್ಕೃತಿ ಸೇವೆಯ ಸರದಾರರಾಗಿ ಮೆರೆದ ಆನಂದಕಂದರು ೫೪ಕ್ಕೂ ಹೆಚ್ಚು ಸೃಜನಶೀಲ ಮತ್ತು ಸೃಜನೇತರ ಕೃತಿಗಳನ್ನು ಬರೆದು ಕನ್ನಡನಾಡು ಮತ್ತು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಸದ್ದುಗದ್ದಲವಿಲ್ಲದೆ ತಮ್ಮ ಬದುಕು ಬರಹಗಳ ಮೂಲಕ ಸಾಹಿತ್ಯಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿ ಕನ್ನಡ ಜನಮನದಲ್ಲಿ ಅಜರಾಮರರಾಗಿದ್ದಾರೆ.

ಹಂಚಿಕೊಳ್ಳಿ: https://shampa.org/1gci

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ