ಸೆಪ್ಟೆಂಬರ್ 20, 2024

ಕಾವ್ಯರಸಯಾನ ಮುಂದುವರಿದುದು: ೦೧.೦೭.೨೦೨೩

ದ್ವಿತೀಯ ಸ್ಥಲಂ

ಸೂಚನೆ ಪದ್ಯ
ಭೂವರ ಹರಿಶ್ಚಂದ್ರನೃಪನ ಘನಸತ್ಯವಾ
ದೇವಸಭೆ ನಡುಗೆ ವಾಸಿಷ್ಠ ಮುನಿ ಕೌಶಿಕಂ
ಗಾವಗಂ ಕದನಮಂ ಬೆಳಸಿ ಪ್ರತಿಜ್ಞೆಯಂ ನುಡಿಸಿತೇವಣ್ಣಿಸುವೆನು

ಅರ್ಥ
ರಾಜನಾದ ಹರಿಶ್ಚಂದ್ರನ ಸತ್ಯ, ಅಮರಾವತಿಯ ದೇವಸಭೆಯನ್ನು ನಡುಗಿಸಿ ವಸಿಷ್ಠ ಮಹರ್ಷಿ ಮತ್ತು ವಿಶ್ವಾಮಿತ್ರರೊಳಗೆ, ಸವಾಲನ್ನು ಬೆಳೆಸಿ, ಪ್ರತಿಜ್ಞೆಯನ್ನು ಮಾಡಿಸಿದುದನ್ನು ಏನೆಂದು ವರ್ಣಿಸಲಿ?

ಪದ್ಯ

ಪರುಷವಂಗಣದ ಕಲು ಸುರಭಿ ಕರಹಂ ಕಲ್ಪ
ತರು ವನಂ ಸ್ವರ್ಗ ನಿಜದೇಶವಮರಾವತಿಯೆ
ಪುರದುರ್ಗವಮರರಾಳ್ ಮೇರು ಕೇಳೀಶೈಲವಮೃತವೇ ಮನೆಯ ಬೀಯ
ವರರಂಭೆ ಸೂಳೆ ಶಚಿರಾಣಿಯೈರಾವತಂ
ಕರಿ ವಜ್ರವಾಯುಧಂ ನವನಿಧಿಯ ಭಂಡಾರ
ಹೊರೆವಾಳ್ದನಭವನೆಂದೆನಿಪ ದೇವೇಂದ್ರನೊಂದಿರುಳೋಲಗವನಿತ್ತನು

ಅರ್ಥ
ಸ್ಪರ್ಶ ಮಣಿಯೇ ಅಂಗಳಕ್ಕೆ ಹಾಸಿದ ಕಲ್ಲು, ಕಾಮಧೇನುವೇ ಕರೆಯುವ ಹಸು, ಕಲ್ಪವೃಕ್ಷವೇ ಉದ್ಯಾನವನ, ಸ್ವರ್ಗವೇ ತನ್ನ ದೇಶ, ಅಮರಾವತಿಯೆ ರಾಜಧಾನಿ, ದೇವತೆಗಳೇ ಪ್ರಜೆಗಳು, ಮೇರುಪರ್ವತವೇ ವಿಹಾರಸ್ಥಳ, ಅಮೃತವೇ ಮನೆಯ ಆಹಾರ, ಶ್ರೇಷ್ಠಳಾದ ರಂಭೆಯೇ ಪ್ರಿಯತಮೆ, ಶಚಿಯೇ ಮಹಾರಾಣಿ, ಐರಾವತವೇ ಆನೆ, ವಜ್ರಾಯುಧವೇ ಆಯುಧ, ನವನಿಧಿಗಳೇ ಭಂಡಾರ, ಕಾಪಾಡುವ ಒಡೆಯನಾರೆಂದರೆ ಸಾಕ್ಷಾತ್ ಶಿವ- ಹೀಗಿರುವ ದೇವೇಂದ್ರನು, ಒಂದು ರಾತ್ರಿ, ಓಲಗವನ್ನು ಕರೆದನು.  

ವಿಶೇಷ ವಿಚಾರ

ದೇವೇಂದ್ರನ ಭೋಗಭೂಮಿಯ ವರ್ಣನೆ. ಭೂಲೋಕದ ಜನರ ನಂಬಿಕೆಯಲ್ಲಿ ಯಾವುದೆಲ್ಲ ಅತ್ಯುತ್ತಮವೆಂದು ಪರಿಗಣಿಸಲಾಗಿದೆಯೋ ಅವೆಲ್ಲವನ್ನೂ ಪಡೆದು ವೈಭವದ ಶಿಖರದಲ್ಲಿ ಮೆರೆಯುವವನು ದೇವರಾಜ ದೇವೇಂದ್ರ.

ಪದ್ಯ

ಒಡಲನಾವರಿಸಿದಂಗೋಪಾಂಗಸಂಕುಳದ
ನಡುವೆ ನಯನದ್ವಯಂಗಳು ಸಲೆ ನವಗ್ರಹದ
ನಡುವೆ ಚಂದ್ರಾದಿತ್ಯರುರ್ವಿಯಂ ಪರ್ವಿ ಪಸರಿಸಿದ ನಾನಾನದಿಗಳ
ನಡುವೆ ಸುರುಚಿರ ಗಂಗೆ ತುಂಗಭದ್ರೆಗಳೊಪ್ಪ
ವಡೆದು ಮಹಿಮೆಯೊಳೆಸೆವ ತೆರದಿ ಸುರಪನ ಸಭೆಯ
ನೆಡೆಗೊಂಡ ಮುನಿಕುಲದ ನಡುವಿರ್ದರಧಿಕ ವಿಶ್ವಾಮಿತ್ರ ವಾಸಿಷ್ಠರು ೫

ಅರ್ಥ
ದೇಹವನ್ನು ಆವರಿಸಿದ ಅಂಗೋಪಾಂಗಗಳಲ್ಲಿ ಕಣ್ಣುಗಳು ಹೇಗೋ, ನವಗ್ರಹಗಳಲ್ಲಿ ಸೂರ್ಯ ಚಂದ್ರರು ಹೇಗೋ ಭೂಮಿಯಲ್ಲಿರುವ ಅಸಂಖ್ಯಾತ ನದಿಗಳಲ್ಲಿ ಗಂಗೆ ಮತ್ತು ತುಂಗಭದ್ರೆಗಳು ಹೇಗೋ ಹಾಗೆ, ದೇವೇಂದ್ರನ ಸಭೆಯಲ್ಲಿ ಬಂದು ಸೇರಿದ ಅನೇಕ ಮುನಿಶ್ರೇಷ್ಠರ ಮಧ್ಯದಲ್ಲಿ ವಿಶ್ವಾಮಿತ್ರ ವಸಿಷ್ಠ ಮಹರ್ಷಿಗಳು ಶೋಭಿಸುತ್ತಿದ್ದರು.

ವಿಶೇಷ ವಿಚಾರ

ಕವಿ ರಾಘವಾಂಕ ಇಬ್ಬರು ಕವಿಗಳಿಗೂ ಸಮಾನವಾದ ಸ್ಥಾನಗೌರವವನ್ನು ಕೊಟ್ಟಿದ್ದಾನೆಂಬುದನ್ನು ಗಮನಿಸಬೇಕು.

ಪದ್ಯ

ಅಲಸದೆ ಸಮಸ್ತ ಭೂಮಂಡಲವನಾಳ್ವ ರವಿ
ಕುಲಜರಪ್ಪಿಕ್ಷ್ವಾಕುವಂಶದರಸುಗಳೊಳತಿ
ಬಲರೆನಿಸಿ ಮನವಚನಕಾಯದೊಳಗೊಮ್ಮೆಯುಂ ಹುಸಿಹೊದ್ದದಂತೆ ನಡೆವ
ಕಲಿಗಳಾರಯ್ಯ ಹೇಳವರ ಪಾರಂಪರೆಗೆ
ಸಲೆಸಂದ ರಾಜಗುರು ನೀನರಿಯದವರಿಲ್ಲ
ವೆಲೆ ಮುನಿಪ ಹೇಳೆಂದು ಹಲವು ಕಣ್ಣಾದವಂ ನುಡಿದನು ವಸಿಷ್ಠಮುನಿಗೆ ೬

ಅರ್ಥ
ಯಾವುದೇ ಆಲಸ್ಯವಿಲ್ಲದೆ ಸಮಸ್ತ ಭೂಮಿಯನ್ನು ಆಳಿದ ಸೂರ್ಯವಂಶಜರಾದ ಇಕ್ಷ್ವಾಕು ಮನೆತನದ ರಾಜರಲ್ಲಿ ಅತ್ಯಂತ ಬಲಶಾಲಿಗಳಾಗಿ ಮನವಚನಕಾಯದಲ್ಲಿ ಒಮ್ಮೆಯೂ ಸುಳ್ಳು ಹೇಳದ, ಸತ್ಯಶುದ್ಧ ಹಾದಿಯಲ್ಲಿ ನಡೆದ ಮಹಾಶೂರರು ಯಾರಾದರೂ ಇದ್ದಾರೆಯೇ ವಸಿಷ್ಠ? ನೀನು ಅವರ ರಾಜಗುರುವಾಗಿರುವುದರಿಂದ ನಿನಗೆ ತಿಳಿಯದವರು ಯಾರೂ ಇರಲಾರರು. ಅಂಥವರು ಯಾರಾದರೂ ಇದ್ದರೆ ಹೇಳು. ಎಂದು ದೇವೇಂದ್ರನು ವಸಿಷ್ಠನನ್ನು ಉದ್ದೇಶಿಸಿ ಒಂದು ಪ್ರಶ್ನೆಯನ್ನು ಕೇಳಿದನು.

ಪದ್ಯ

ಬೆಸಗೊಂಡೊಡಿಕ್ಷ್ವಾಕುವಂಶದೊಳಗಣ ಚತು
ರ್ದಶ ಭುವನಪತಿಗಳೊಳಗಿಂದುತನಕಾನರಿಯೆ
ಹುಸಿಹೊದ್ದದವರಿಲ್ಲ ಹಿಂದಣರಸುಗಳನುದ್ಧರಿಸಲೆಂದವತರಿಸಿದ
ವಸುಧಾಧಿಪತಿ ಹರಿಶ್ಚಂದ್ರನಾತನ ಸತ್ಯ
ದೆಸಕಮಂ ಪೊಗಳಲೆನ್ನಳವೆ ಫಣಿಪತಿಗರಿದು
ಶಶಿಮೌಳಿಯಾಣೆಯೆನಲಾ ವಸಿಷ್ಠಂಗೆ ಕೋಪಿಸಿದ ವಿಶ್ವಾಮಿತ್ರನು ೭

ಅರ್ಥ
ಇಕ್ಷ್ವಾಕು ವಂಶದಲ್ಲಿ ಆಗಿಹೋದ ಹದಿನಾಲ್ಕು ಪೀಳಿಗೆಯಲ್ಲಿ ಇದುವರೆಗೆ ಸುಳ್ಳನ್ನೇ ಹೇಳದ ಮಹಾರಾಜರು ಯಾರಾದರೂ ಇದ್ದಾರೆಯೇ ಎಂದು ನನ್ನನ್ನು ಕೇಳಿದರೆ ನನಗೆ ತಿಳಿದಂತೆ ಯಾರೂ ಇಲ್ಲ. ಆದರೆ ಹಿಂದಿನ ರಾಜರನ್ನು ಉದ್ಧರಿಸುವ ಸಲುವಾಗಿಯೇ ಹುಟ್ಟಿ ಬಂದಿರುವ ಒಬ್ಬ ಮಹಾರಾಜನಿದ್ದಾನೆ. ಆತನೇ ಹರಿಶ್ಚಂದ್ರ ಮಹಾರಾಜ. ಅವನು ನಿಜವಾಗಿಯೂ ಸತ್ಯವಂತನಾಗಿದ್ದಾನೆ. ಅವನ ಸತ್ಯದ ಆಧಿಕ್ಯವನ್ನು ಹೊಗಳಲು ನನ್ನಿಂದ ಸಾಧ್ಯವೇ? ಅದು ಆದಿಶೇಷನಿಗೆ ಕೂಡ ಸಾಧ್ಯವಿಲ್ಲ. ಶಿವನಾಣೆಗೂ ಇದು ಸತ್ಯ. ಎಂದು ವಸಿಷ್ಠ ಉತ್ತರಿಸಿದಾಗ ಅವನ ಆ ಮಾತಿಗೆ ವಿಶ್ವಾಮಿತ್ರನು ಕೋಪಗೊಂಡನು.

ವಿಶೇಷ ವಿಚಾರ

ವಸಿಷ್ಠನಿಗೆ ಶಿಷ್ಯನ ಮೇಲಿರುವ ಪ್ರೀತಿ ಎಷ್ಟು ಉನ್ನತವಾದುದು ಎಂಬುದಕ್ಕೆ ಈ ಪದ್ಯವೇ ಸಾಕ್ಷಿ.

ಪದ್ಯ

ತೀವಿದೊಡ್ಡೋಲಗದ ನಡುವೆ ತನ್ನಂ ಮೊದಲೊ
ಳೋವಿ ನುಡಿಸದ ಕೋಪವೊಂದಾ ವಸಿಷ್ಠಮುನಿ
ಯಾವುದಂ ಪೇಳ್ದಡದನಲ್ಲೆಂಬ ಭಾಷೆಯೆರಡಖಿಲಜೀವಾವಳಿಯಲಿ
ಭಾವಿಪಡೆ ಕುಂದನಲ್ಲದೆ ಲೇಸ ಕಾಣದಿಹ
ಭಾವ ಮುಪ್ಪುರಿಗೊಂಡು ಕುಡಿವರಿದು ಕಡುಗೋಪ
ವಾವರಿಸಿ ಕೌಶಿಕಂ ನಿಂದು ನಿಲ್ ನುಡಿಯಬೇಡೆಂದು ಜರೆದಿಂತೆಂದನು

ಅರ್ಥ

ತುಂಬಿದ ಒಡ್ಡೋಲಗದ ಮಧ್ಯದಲ್ಲಿ ದೇವೇಂದ್ರ ಸ್ನೇಹದಿಂದ ತನ್ನನ್ನು ಮೊದಲು ಮಾತನಾಡಿಸದ ಕೋಪ ಒಂದು, ಆ ವಸಿಷ್ಠಮುನಿ ಏನು ಹೇಳಿದರೂ ಅದನ್ನು ಅಲ್ಲಗಳೆಯಲೇಬೇಕೆಂಬ ಹಟ ಎರಡು, ಸಮಸ್ತ ಜೀವ ಸಂಕುಲಗಳಲ್ಲಿ ಕೊರತೆಯನ್ನಲ್ಲದೆ ಒಳ್ಳೆಯದನ್ನು ಕಾಣದಿರುವ ಭಾವನೆ ಮೂರು. ಈ ಮೂರುಕಾರಣಗಳು ಮುಪ್ಪುರಿಗೊಂಡು ಕುಡಿಯಿಟ್ಟು ಸರ್ವಾಂಗದಲ್ಲೂ ಅತಿಭಯಂಕರವಾದ ಕೋಪ ಆವರಿಸಿ ವಿಶ್ವಾಮಿತ್ರ ಎದ್ದುನಿಂತು ʻತಡೆ, ಮಾತು ಮುಂದುವರಿಸುವುದು ಬೇಡʼ ಎಂದು ವಸಿಷ್ಠನನ್ನು ಜರೆದು ಹೀಗೆಂದನು

ವಿಶೇಷ ವಿಚಾರ

ರಾಘವಾಂಕನ ನಾಟಕೀಯಕೌಶಲ ಇಲ್ಲಿಂದ ಆರಂಭವಾಗುತ್ತದೆ. ಕೋಪದಲ್ಲಿ ವಿಶ್ವಾಮಿತ್ರ ಪ್ರತಿಕ್ರಿಯಿಸುವುದು ಅದ್ಭುತವಾಗಿದೆ. ಕವಿ ತುಸು ವಸಿಷ್ಠ ಪಕ್ಷಪಾತಿಯೋ ಎನಿಸುವಂತೆ ಕೂಡ ಕಾಣಿಸುತ್ತದೆ

ಪದ್ಯ

ಬೇಸರದೆ ಕೇಳ್ವ ದೇವೇಂದ್ರನುಂಟೆಂದಿಂತು
ಹೇಸದಕಟಕಟ ಸೊರಹುವರೆ ವಾಸಿಷ್ಠಯೆನ
ಲಾನ್ ಸೊರಹುವನೆಯಾತನಧಿಕನಹನಲ್ಲವೆ ಹೇಳು ಮುನಿದ ಮೋರೆಯೊಳೆಂದೆನೆ
ರಾಸಿ ಹೊನ್ನುಂಟಧಿಕನಹನೆನಲು ಹೊನ್ನಮಾ
ತೀ ಸಭೆಯೊಳೇಕೆ ಸತ್ಯನೆ ಹೇಳೆನಲು ಸತ್ಯ
ಲೇಶವಂತವನಾಳ್ವ ದೇಶದೊಳು ಕೇಳ್ದರಿಯೆನೆಂದ ವಿಶ್ವಾಮಿತ್ರನು ೯

ಅರ್ಥ
ಯಾವುದೇ ಬೇಸರವಿಲ್ಲದೆ ನೀನು ಹೇಳಿದ್ದನ್ನು ಕೇಳುವ ದೇವೇಂದ್ರನಿದ್ದಾನೆಂದು ಹೀಗೆ ಸಂಕೋಚವಿಲ್ಲದೆ ಅಕಟಕಟ, ಬಾಯಿಗೆ ಬಂದಂತೆ ಹೇಳುವುದೇ ವಸಿಷ್ಠ? ಎಂದು ವಿಶ್ವಾಮಿತ್ರ ಕೇಳಿದಾಗ ʼನಾನು ಬಾಯಿಗೆ ಬಂದಂತೆ ಹೇಳುವವನೇ? ಅವನು ನಿಜವಾಗಿಯೂ ಶ್ರೇಷ್ಠನಲ್ಲವೇ ಹೇಳಿʼ ಎಂದು ವಸಿಷ್ಠನು ಪ್ರತಿಕ್ರಿಯಿಸಿದಾಗ ಅವನ ಬಳಿಯಲ್ಲಿ ಬೇಕಾದಷ್ಟು ಐಶ್ವರ್ಯವಿದೆ, ಆದ್ದರಿಂದ ಶ್ರೇಷ್ಠನೇ ಹೌದು ಎಂದು ವಿಶ್ವಾಮಿತ್ರ ವ್ಯಂಗ್ಯವಾಡುತ್ತಾನೆ. ಆಗ ವಸಿಷ್ಠ ಸಂಪತ್ತಿನ ಮಾತನ್ನು ಈ ಸಭೆಯಲ್ಲಿ ಪ್ರಸ್ತಾಪಿಸುವುದೇಕೆ, ಹರಿಶ್ಚಂದ್ರ ಸತ್ಯವಂತನೇ ಎಂಬುದನ್ನು ಹೇಳಿ ಎಂದು ವಸಿಷ್ಠ ಮತ್ತೆ ಕೇಳಿದಾಗ ʻಸತ್ಯಬಿಡು, ಅದರ ಅಂಶ ಕೂಡ ಅವನು ಆಳುವಂಥ ದೇಶದಲ್ಲಿದೆಯೆಂದು ಕೇಳಿ ಗೊತ್ತಿಲ್ಲ, ಎಂದು ವಿಶ್ವಾಮಿತ್ರನು ಉತ್ತರಿಸುತ್ತಾನೆ.

ಪದ್ಯ

ಎಸೆವ ಮಗನಿಲ್ಲದಡೆ ನರಕವಹುದೆಂದು ಚಿಂ
ತಿಸಿ ವರುಣನಲಿ ವರಂಬಡೆಯಲಾತನ ಯಾಗ
ಪಶುವ ಮಾಡುವೆನೆಂದು ಮರಳೀವೆಯಾದಡೀವೆನು ಮಗನ ನಿನಗೆಂದೆನೆ
ಶಿಶುವಾದನೆಂಬುದಾದಡೆ ಸಾಕೆನಲ್ ಕೊಡಲು
ಹುಸಿದಡವಿಗಟ್ಟಿ ಬೈಚ್ಚಿಟ್ಟನೆಂಬುದನಿಂತು
ಎಸೆವ ವೇದಂಗಳೊಳು ಕೇಳಿ ಪೊಗಳುವಡರಿದು ನಿನ್ನ ಧೀವಶವೆಂದನು ೧೮

ಅರ್ಥ
ಕೀರ್ತಿವಂತನಾದ ಮಗನಿಲ್ಲದಿದ್ದರೆ ನರಕಪ್ರಾಪ್ತವಾಗುತ್ತದೆಂದು ಚಿಂತಿಸಿ, ವರುಣನಿಂದ ವರವನ್ನು ಪಡೆದಾಗ ಆತನನ್ನು ಯಾಗಪಶುವಿನ ರೂಪದಲ್ಲಿ ಹಿಂತಿರುಗಿಸುವುದಾದರೆ, ಮಗನನ್ನು ಕರುಣಿಸುತ್ತೇನೆಂದು ವರುಣ ಹೇಳಿದಾಗ, ಮಗ ಹುಟ್ಟಿದ್ದಾನೆ ಎಂದಾದರೆ ಸಾಕು ಎಂದು ಒಪ್ಪಿದಾಗ ವರುಣ ಮಗನನ್ನು ಕರುಣಿಸಿದ . ಆದರೆ ಹರಿಶ್ಚಂದ್ರ ಸುಳ್ಳು ಹೇಳಿ, ಮಗನನ್ನು ಕಾಡಿಗೆ ಕಳುಹಿಸಿ, ಅಡಗಿಸಿಟ್ಟ. ಇದನ್ನೆಲ್ಲ ಹೆಸರಾಂತ ವೇದಗಳಿಂದಲೇ ತಿಳಿದುಕೊಂಡಿದ್ದೇನೆ, ಅಂಥವನನ್ನು ಹೊಗಳುತ್ತೀಯಲ್ಲ, ನಿನ್ನ ಧೈರ್ಯ ಅಸಾಧ್ಯ ಎಂದನು(ವಿಶ್ವಾಮಿತ್ರ)

ಪದ್ಯ

ಹಿರಿದು ಹುಸಿಗಬುಧಿಪತಿ ಮುನಿದು ಮಾಡಿದ ಜಳೋ
ದರವ ಭಾವಿಸದೆ ಕಂಗೆಟ್ಟ ಜಾಡ್ಯಂ ಮಹಾ
ಧ್ವರಕೆ ಪಶುವಂ ಮಗನ ಮಾಡಲಾರದೆ ಮೋಹದಿಂದಜೀಗರ್ತಮುನಿಯ
ವರಸುತ ಶುನಶ್ಯೇಪನಂ ತಂದು ಯಾಗವಿಧಿ
ಗರಿದು ಬೇಳಲ್ಕೆ ಮನದಂದ ಪಾತಕನು ಭೂ
ವರನನೇತಕ್ಕೆ ಹೇಸದೆ ಹೊಗಳ್ವೆಯೆಂದು ವಾಸಿಷ್ಠನಂ ಕಡೆನುಡಿದನು ೧೯

ಅರ್ಥ
ಇಂಥ ಮಹಾಸುಳ್ಳಿಗೆ ವರುಣದೇವ ಕೋಪಿಸಿ ಉಂಟುಮಾಡಿದ ಜಲೋದರವನ್ನು ಸಹಿಸಲಾಗದೆ ಕಂಗೆಟ್ಟು ಆ ಕಾಯಿಲೆಯ ನಿವಾರಣೆಗೆ, ಯಾಗಪಶುವನ್ನಾಗಿ ಮಗನನ್ನು ಕೊಡಲಾಗದೆ, ಪುತ್ರವ್ಯಾಮೋಹಕ್ಕೆ ಕಟ್ಟುಬಿದ್ದು, ಅಜೀಗರ್ತಮುನಿಯ ಮಗನಾದ ಶುನಶ್ಯೇಪನನ್ನು ತಂದು, ಯಾಗಪಶುವನ್ನಾಗಿ ಸಮರ್ಪಿಸಲು ಮನಸ್ಸುಮಾಡಿದ. ಅಂಥ ಪಾತಕ ಹರಿಶ್ಚಂದ್ರ. ಅಂಥ ರಾಜನನ್ನು, ಅದೇಕೆ ಒಂದಿಷ್ಟೂ ಅಳುಕಿಲ್ಲದೆ ಹೊಗಳುತ್ತಿರುವೆ, ಎಂದು ವಸಿಷ್ಠನನ್ನು ನಿಂದಿಸಿದನು.(ವಿಶ್ವಾಮಿತ್ರ)


ವಿಶೇಷ ವಿಚಾರ

ವಿಶ್ವಾಮಿತ್ರನ ತರ್ಕಬದ್ಧವಾದ ಈ ಆಕ್ಷೇಪದ ನುಡಿಗಳು ಹರಿಶ್ಚಂದ್ರನ ಸತ್ಯಸಂಧತೆಯ ಹಾದಿಯಲ್ಲಿ ಮುಳ್ಳಾದ ಪ್ರಸಂಗವನ್ನು ವೇದಿಕೆಗೆ ತರುತ್ತದೆ. ಇದು ಹರಿಶ್ಚಂದ್ರನ ಚಾರಿತ್ರ್ಯಕ್ಕೆ ಧಕ್ಕೆಯೆನಿಸಿದರೂ ಅಜೀಗರ್ತ ಮುನಿಯ ಮಗನನ್ನು ದತ್ತು ಮಗನೆಂದು ಸ್ವೀಕರಿಸಿ ಬಲಿಕೊಡುವುದನ್ನು ಶಾಸ್ತ್ರಗಳು ಸಮ್ಮತಿಸಿವೆ. ಹಾಗಾಗಿ ವಸಿಷ್ಠ ಇದನ್ನು ಅಲ್ಲಿಗೇ ತಡೆದು ಒಂದುರೀತಿಯಲ್ಲಿ ತೇಲಿಸಿ ಉತ್ತರಿಸುತ್ತಾನೆ. ಇದು ಮುಂದಿನ ಪದ್ಯದಲ್ಲಿ ಸುವ್ಯಕ್ತವಾಗುತ್ತದೆ.

ಕಾವ್ಯರಸಯಾನ ಮುಂದುವರಿದುದು: ೦೮.೦೭.೨೦೨೩

ಈ ದಿನದ ರೆಕಾರ್ಡಿಂಗ್

ಪದ್ಯ

ಹಲವು ಮಾತೇಕಾ ಹರಿಶ್ಚಂದ್ರ ಭೂನಾಥ

ನೊಳಗಸತ್ಯವನು ಕಾಣಿಸಲು ಬಲ್ಲರು ಧಾತ್ರಿ

ಯೊಳು ಮುನ್ನ ಹುಟ್ಟಿದವರಿಲ್ಲಿನ್ನು ಹುಟ್ಟುವರ ಕಾಣೆ ನಾನಿದ ಬಲ್ಲೆನು

ಉಳಿದವರ ಹವಣಾವುದೆಂದು ವಾಸಿಷ್ಠಮುನಿ

ಕುಲತಿಲಕನೆನಲು ವಿಶ್ವಾಮಿತ್ರ ಮನದೊಳತಿ

ಮುನಿದು ನಿಲ್ಲಾಡದಿರು ಬಾಯಿ ಹಿರಿದುಂಟೆಂದೆನುತ್ತ ಮತ್ತಿಂತೆಂದನು                     ೨೦

ಅರ್ಥ

ಈ ವಿಚಾರದಲ್ಲಿ ಇನ್ನು ಮಾತು ಹೆಚ್ಚಿಸುವ ಅಗತ್ಯವಿಲ್ಲ. ಆ ಹರಿಶ್ಚಂದ್ರ ಮಹಾರಾಜನಲ್ಲಿ ಅಸತ್ಯವನ್ನು ಸಾಬೀತುಪಡಿಸುವವರು, ಈ ಭೂಮಿಯಲ್ಲಿ ಇದುವರೆಗೆ ಹುಟ್ಟಿಲ್ಲ,  ಇನ್ನು ಹುಟ್ಟುವವರೂ ಇಲ್ಲ, ಇದು ನನಗೆ ಚೆನ್ನಾಗಿ ಗೊತ್ತಿದೆ, ಉಳಿದವರ ಪ್ರಮಾಣವೇಕೆ ಎಂದು ವಸಿಷ್ಠಮುನಿ ಶ್ರೇಷ್ಠನು ಹೇಳಿದಾಗ, ವಿಶ್ವಾಮಿತ್ರನಿಗೆ ಅಸಾಧ್ಯ ಕೋಪವೇರಿ, ಸಾಕು ನಿಲ್ಲಿಸು. ಬಾಯಿ ದೊಡ್ಡದಿದೆಯೆಂದು ಮಾತು ಮುಂದುವರಿಸುವ ಅಗತ್ಯವಿಲ್ಲ ಎನ್ನುತ್ತ ಪುನಃ ಹೀಗೆಂದನು:

ಪದ್ಯ

ವನಧಿಪರಿಯಂತ ಧರೆಗರಸುತನವದರ ಮೇ

ಲನುವುಳ್ಳ ಶಿಷ್ಯನಾಗಿಹನು ನಿನಗತಿವಿಪುಳ

ಧನವನಾರಾಧಿಸುವನಂತಲ್ಲ ದಾತನಾರೈಕೆಯೊಳಗಿಪ್ಪೆ ನೀನು

ಎನಿತನಗ್ಗಳಿಸಿ ಬಣ್ಣಿಸಲೊಪ್ಪದಯ್ಯ ಹೇ

ಳೆನಲು ರಾಜಪ್ರತಿಗ್ರಹದ ಬಲದವನೆ ನಾ

ನೆನೆ ಮುನಿಯಬೇಡಾತ ಹುಸಿದನಾದಡೆ ನಿನ್ನನೇಗೆಯ್ಯಬಹುದೆಂದನು         

ಅರ್ಥ

ಸಾಗರದ ಕೊನೆಯವರೆಗೂ ಇರುವ ಭೂಮಂಡಲದ ಅಧಿಪತಿ, ಅದಲ್ಲದೆ ನಿನ್ನ ಪ್ರಿಯ ಶಿಷ್ಯ,  ನಿನಗೆ ಬೇಕಾದಷ್ಟು ಸಂಪತ್ತನ್ನು ಕೊಡಬಲ್ಲವನು ಮಾತ್ರವಲ್ಲ, ಆತನ ಆಶ್ರಯದಲ್ಲಿರುವವನು ನೀನು,  ಅವನನ್ನು ಅತಿಶಯಿಸಿ ಹೊಗಳಬೇಕಾದವನೆ, ಎನಲು ರಾಜಧನದ ಬಲದಿಂದ ಬದುಕುವವನೆ ನಾನು? ಎಂದು (ವಸಿಷ್ಠ) ಕೇಳಿದಾಗ ,  ಕೋಪಿಸಿಕೊಳ್ಳುವ ಅಗತ್ಯವಿಲ್ಲ, ಹರಿಶ್ಚಂದ್ರ ಅಸತ್ಯವಂತನಾದರೆ ನಿನ್ನನ್ನು ಏನು ಮಾಡಬೇಕು ಎಂದು ಕೇಳಿದನು(ವಿಶ್ವಾಮಿತ್ರ). ಅದಕ್ಕೆ ವಸಿಷ್ಠನ ಉತ್ತರ:         

ಪದ್ಯ

ಶ್ರುತಿ ಮತ ಕುಲಾಚಾರ ಧರ್ಮಮಾರ್ಗಂ ಮಹಾ

ವ್ರತವನುಷ್ಠಾನ ಗುರುವಾಜ್ಞೆ ಲಿಂಗಾರ್ಚನೋ

ನ್ನತತಪಂ ಬ್ರಹ್ಮಕರ್ಮಂ ಬೆಳೆದ ಪುಣ್ಯವೊಳಗಾದವಂ ತೊರೆದು ಕಳೆದು

ಸತಿಯನುಳಿದತಿದಿಗಂಬರನಾಗಿ ಮುಕ್ತಕೇ

ಶಿತನಾಗಿ ನರಕಪಾಲದೊಳು ಸುರೆಯೆರೆದು ಕುಡಿ

ಯುತ ತೆಂಕಮುಖನಾಗಿ ಹೋಹೆಂ ಹರಿಶ್ಚಂದ್ರ ಮರೆದು ಹುಸಿಯಂ ನುಡಿದಡೆ      ೨೨

ಅರ್ಥ

ಹರಿಶ್ಚಂದ್ರ ಮರೆತಾದರೂ ಸುಳ್ಳು ಹೇಳಿದರೆ ಶ್ರುತಿ ಮತ, ಕುಲಾಚಾರ, ಧರ್ಮಮಾರ್ಗಂ, ಮಹಾವ್ರತ, ಅನುಷ್ಠಾನ, ಗುರುವಾಜ್ಞೆ, ಲಿಂಗಾರ್ಚನೆ, ಉನ್ನತತಪಸ್ಸು, ಬ್ರಹ್ಮಕರ್ಮದಿಂದ ಪಡೆದ ಪುಣ್ಯವೇನಿದೆಯೋ ಅವೆಲ್ಲವನ್ನೂ ಕಳೆದು, ಪತ್ನಿಯನ್ನು ತೊರೆದು, ಸಂಪೂರ್ಣ ದಿಗಂಬರನಾಗಿ, ಕೂದಲುಗಳನ್ನು ಬಿಚ್ಚಿ, ಮನುಷ್ಯನ ತಲೆಯೋಡಿನಲ್ಲಿ ಮದ್ಯವನ್ನು ಹಾಕಿ ಕುಡಿಯುತ್ತ, ದಕ್ಷಿಣದಿಕ್ಕಿನತ್ತ ಹೋಗುತ್ತೇನೆ.   ವಸಿಷ್ಠನ ಈ ಘೋರಪ್ರತಿಜ್ಞೆಯನ್ನು ಕೇಳಿದಾಗ ದೇವೇಂದ್ರನ ಒಡ್ಡೋಲಗದವರ ಪರಿಸ್ಥಿತಿ:

ಪದ್ಯ

ಧರೆ ಗಗನವಡಸಿ ಕಾದುವಡೆಡೆಯಲಿಹ ಚರಾ

ಚರವೆಲ್ಲಿ ಹೊಗಲಿ ಮುನಿದಖಿಳಮಂ ಸುಟ್ಟೊಸೆದು

ಮರಳಿ ಹುಟ್ಟಿಸಬಲ್ಲ ಮುನಿಗಳಿಬ್ಬರ ಶಾಂತಿ ಸವೆದ ಕದನದ ಮುಖದಲಿ

ಇರಬಾರದೇಳಬಾರದು ನುಡಿಯಬಾರದಂ

ತಿರಬಾರದಹುದೆನಲುಬಾರದಲ್ಲೆನಬಾರ

ದೆರಡರ ನಿರೋಧದಿಂದೊಡ್ಡೋಲಗಂ ಚಿಂತೆ ಮುಸುಕಿ  ಸೈವೆರಗಾದುದು      

ಅರ್ಥ

ಭೂಮಿ ಆಕಾಶಗಳು ಒಂದಕ್ಕೊಂದು ಘಟ್ಟಿಸಿ, ಹೋರಾಡಿದರೆ, ಮಧ್ಯದಲ್ಲಿರುವ ಚರಾಚರಗಳು ಎಲ್ಲಿಗೆ ಹೋಗಲು ಸಾಧ್ಯ, ಕೋಪದಿಂದ ಸಮಸ್ತವನ್ನೂ ಸುಟ್ಟು, ಮತ್ತೆ ಹುಟ್ಟಿಸಬಲ್ಲ, ಶಾಂತಿ ನಷ್ಟವಾದ ಈ ಮುನಿಗಳಿಬ್ಬರ ಕಾಳಗದ ಮುಂದೆ, ಇರುವುದಕ್ಕೆ, ಎದ್ದು  ಹೋಗುವುದಕ್ಕೆ, ಪ್ರತಿಭಟಿಸುವುದಕ್ಕೆ, ಸುಮ್ಮನಿರುವುದಕ್ಕೆ, ಹೌದೆನ್ನುವುದಕ್ಕೆ, ಅಲ್ಲವೆನ್ನುವುದಕ್ಕೆ ಸಾಧ್ಯವಿಲ್ಲದೆ, ಉಭಯಸಂಕಟದಿಂದ, ಇಡೀ ಒಡ್ಡೋಲಗ ಚಿಂತೆಯಿಂದಲೂ ಬೆರಗಿನಿಂದಲೂ ದಿಗ್ಭ್ರಾಂತಗೊಂಡು ಮೌನವಾಗಿತ್ತು.       

ಪದ್ಯ

ಒಂದಕ್ಕೆ ಹಿತನುಡಿಯೆ ಪಕ್ಷವೆಂದೆರಡುವಂ

ಹಿಂದುಗಳೆದಿರಲುಪೇಕ್ಷಿತನೆಂದು ಜರೆದೊಡೆ

ಮ್ಮಿಂದಧಿಕನೇ ಎಂದುಹೊಗಳ್ದೊಡುಪಚಾರವೆಂದೆತ್ತಿದಡೆ ಧೂರ್ತನೆಂದು

ನೊಂದು ಶಾಪವನೀಯದಿರರೆಂದು ಸುರಪನಾ

ನಂದರಸವರಿತು ಬೆರಗಿನ ಮೊಗದೊಳಿರಲು ನಾ

ರಂದ ಧಟ್ಟಿಸುತೆದ್ದು ಕೊಡು ವಸಿಷ್ಠಂಗೆ ಭಾಷೆಯನು ಕೌಶಿಕ ಎಂದನು     

ಅರ್ಥ
ಒಬ್ಬರಿಗೆ ಸಮಾಧಾನದ ಮಾತು ಹೇಳಿದರೆ ಪಕ್ಷಪಾತ, ಇಬ್ಬರನ್ನೂ ನಿರ್ಲಕ್ಷಿಸಿದರೆ ಉಪೇಕ್ಷೆ, ನಿಂದಿಸಿದರೆ ನಮಗಿಂತ ಇವನೇನು ಹೆಚ್ಚು, ಹೊಗಳಿದರೆ ಉಪಚಾರದ ಮಾತು, ಖಂಡಿಸಿದರೆ ಧೂರ್ತ- ಹೀಗೆ ಭಾವಿಸಿ ಈ ಮುನಿಗಳು ಶಾಪಕೊಡದಿರಲಾರರೆಂದು ದೇವೇಂದ್ರ ಉಭಯಸಂಕಟದಿಂದ, ಸಂತೋಷ ಕೆಟ್ಟು ,ಗಾಬರಿಯಿಂದ ಕುಳಿತಿರಲು ನಾರದ ಒಮ್ಮೆಗೇ ಎದ್ದು ನಿಂತು ವಸಿಷ್ಠನಿಗೆ ನಿನ್ನ ಪ್ರಮಾಣವೇನು ಹೇಳು ವಿಶ್ವಾಮಿತ್ರ ಎಂದನು.

ವಿಶೇಷ ವಿಚಾರ

ಈ ವಾತಾವರಣ ಎಷ್ಟು ಲೌಕಿಕಸಹಜವಾಗಿಯೂ ಇದೆ ಎಂಬುದನ್ನು ಯೋಚಿಸಬಹುದು. ಕೆಲವೊಮ್ಮೆ ನಮ್ಮ ಸುತ್ತು ಮುತ್ತಲೂ ನಡೆಯುವ ಕೆಲವು ಅಹಿತಕರ ಪ್ರಸಂಗಗಳನ್ನು ನಿವಾರಿಸಲೂ ಖಂಡಿಸಲೂ ಆಗದೆ ಇಕ್ಕಟಿಗೆ ಸಿಲುಕುವ ಪರಿಸ್ಥಿತಿಯನ್ನು ಇಲ್ಲಿ ಕವಿ ಎಷ್ಟು ಯಥಾವತ್ತಾಗಿ ನಿರೂಪಿಸಿದ್ದಾನೆ ಎಂಬುದನ್ನು ಗಮನಿಸಬಹುದು. ದೇವೇಂದ್ರನಿಗೂ ಈ ಕಷ್ಟ ತಪ್ಪಲಿಲ್ಲ. ದೊಡ್ಡವರ ಚಿಕ್ಕಬುದ್ಧಿ ಹೇಗೆ ಪರಿಸರ ನಾಶಕ್ಕೆ ಕಾರಣವಾಗುತ್ತದೆ! ಲೋಕವಿಚಾರವನ್ನು ಬಹಳ ಹತ್ತಿರದಿಂದ ಗಮನಿಸಿದ್ದಾನೆ ಕವಿ!

ಈಗ ವಿಶ್ವಾಮಿತ್ರನ ಪ್ರತಿಜ್ಞೆ:

ಪದ್ಯ:

ಧರೆಯೊಳು ಚತುರ್ಯುಗಂಗಳು ಮರಳಿ ಮರಳಿ ಸಾ

ವಿರ ಬಾರಿ ಬಂದಡಜಗೊಂದು ದಿನವಾ ದಿನದ

ಪರಿ ದಿನಂ ಮೂವತ್ತು ಬರಲೇಕಮಾಸವಾ ಮಾಸ ಹನ್ನೆರಡಾಗಲು

ವರುಷವಾ ವರುಷ ಶತವೆಂಬುದೀ ಸುರಪತಿಗೆ

ಪರಮಾಯುವೀತನೀರೇಳ್ಭವಂ ಬಪ್ಪನ್ನೆ

ವರ ದೇವಲೋಕಕ್ಕೆ ಬಾರೆಂ ಪ್ರತಿಜ್ಞೆಯೆನಗೆಂದ ವಿಶ್ವಾಮಿತ್ರನು            

ಅರ್ಥ

ಈ ಭೂಮಿಯಲ್ಲಿ ನಾಲ್ಕು ಯುಗಗಳು( ಕೃತ, ತ್ರೇತಾ, ದ್ವಾಪರ, ಕಲಿ) ಮತ್ತೆ ಮತ್ತೆ ಸಾವಿರ ಸಲ ಬಂದಾಗ ಬ್ರಹ್ಮನಿಗೆ ಒಂದು ದಿನವಾಗುತ್ತದೆ. ಅಂಥ ದಿನಗಳು ಮೂವತ್ತು ಬಂದಾಗ ಒಂದು ತಿಂಗಳು. ಅಂಥ ತಿಂಗಳು ಹನ್ನೆರಡು ಬಂದಾಗ ಒಂದು ವರ್ಷ,  ಅಂಥ ವರ್ಷ ನೂರು ಬಂದಾಗ ಈ ದೇವೇಂದ್ರನಿಗೆ ಪರಮಾಯುಸ್ಸು. ಇವನು ಹದಿನಾಲ್ಕು ಸಾರಿ ಬರುವವರೆಗೆ ನಾನು ದೇವಲೋಕಕ್ಕೆ ಬರುವುದಿಲ್ಲ. ಇದು ನನ್ನ ಪ್ರತಿಜ್ಞೆ ಎಂದನು ವಿಶ್ವಾಮಿತ್ರನು.

ವಿಶ್ವಾಮಿತ್ರನ ಈ ಪ್ರತಿಜ್ಞೆಯನ್ನು ನಾರದ ಮತ್ತೆ ಖಂಡಿಸುತ್ತಾನೆ:

ಪದ್ಯ

ಹೊಟ್ಟೆ ನೊಂದಡೆ ತುರಬ ಕೊಯ್ವವನ ಪಶು ಕರುವ

ಮೆಟ್ಟಿದಡೆ ಗೂಳಿಯಂ ಸದೆವವನ ಸೂಳೆ ಮೊರೆ

ಯಿಟ್ಟಡೂರಗುಸೆಯಂ ಮುರಿವವನ ನಗೆಯ ಕತೆಯಂ ಕಾಣಲಾದುದಿಂದು

ನೆಟ್ಟನೆ ಹರಿಶ್ಚಂದ್ರ ಹುಸಿಕನಾದಡೆ ಸಾವು

ಗೆಟ್ಟರಧಿನಾಥನೀರೇಳ್ಭವಂ ನೆರೆ ಸತ್ತು

ಹುಟ್ಟುವನ್ನಬರ ಸ್ವರ್ಗಂಬುಗೆನೆನಿಪ್ಪ ಬಿರುದರಿದರಿದು ನಿನಗೆಂದನು       ೨೬

ಅರ್ಥ

ಹೊಟ್ಟೆ ನೋವು ಬಂದರೆ ಕೂದಲು ಕತ್ತರಿಸುವವನ, ಹಸು ಕರುವನ್ನು ತುಳಿದರೆ ಎತ್ತನ್ನು ಹೊಡೆಯುವವನ,  ವೇಶ್ಯೆ ಮೊರೆಯಿಟ್ಟರೆ ಊರ ಅಗಸೆಯನ್ನು ಮುರಿಯುವವನ ನಗೆಪಾಟಲಿನ ಕತೆಯನ್ನು ಕೇಳಿದ್ದೆ. ಇವತ್ತು ಅದನ್ನು ಕಂಡೆ. ಹರಿಶ್ಚಂದ್ರ ಸುಳ್ಳುಗಾರನಾದರೆ ದೇವೇಂದ್ರನು ಹದಿನಾಲ್ಕು ಸಲ ಸತ್ತು ಹುಟ್ಟಿ ಬರುವವರೆಗೆ ಸ್ವರ್ಗಲೋಕವನ್ನು ಪ್ರವೇಶಿಸುವುದಿಲ್ಲ ಎನ್ನುವ ಪ್ರತಿಜ್ಞೆ ಅದೆಂಥ ಪ್ರತಿಜ್ಞೆ? ಇದು ನಿಜವಾಗಿಯೂ ಅಸಾಧ್ಯವಾದುದೇ, ಇಂಥ ಪ್ರತಿಜ್ಞೆಯನ್ನು ನಿನ್ನಂತವರಿಗಷ್ಟೇ ಮಾಡಲು ಸಾಧ್ಯ ಎನ್ನುತ್ತಾನೆ ನಾರದ.

ವಿಶೇಷ ವಿಚಾರ

ಅಜ್ಞಾನ, ಮೌಢ್ಯತೆ, ಮೂರ್ಖತನಗಳ ಪರಿಣಾಮವಾಗಿ ಅರ್ಥಹೀನವಾಗಿ ವ್ಯವಹರಿಸುವ ಜನರ ಅಸಂಬದ್ಧ ವ್ಯವಹಾರಗಳನ್ನು ಉಲ್ಲೇಖಿಸುವುದರ ಮೂಲಕ ಕವಿ ತನ್ನ ಕಾಲದ ಗ್ರಾಮೀಣ ನಡವಳಿಕೆಗಳನ್ನು ಶ್ರುತಪಡಿಸಿ ವಿಶ್ವಾಮಿತ್ರನ ಕುಹಕವನ್ನು ಬಯಲಿಗೆಳೆಯುತ್ತಾನೆ. ಈಗ ವಿಶ್ವಾಮಿತ್ರನಿಗೆ ಘೋರವಾದ ಪ್ರತಿಜ್ಞೆಯನ್ನೇ ಮಾಡಬೇಕಾದ ಅನಿವಾರ್ಯತೆ. ಆತನ ಪ್ರತಿಜ್ಞೆ ಹೀಗಿದೆ:

ಪದ್ಯ

ಭಕ್ತಿ ಶಮೆ ದಮೆ ಯೋಗ ಯಾಗ ಶ್ರುತಿಮತಮಯ ವಿ

ರಕ್ತಿ ಘೋರವ್ರತ ತಪೋನಿಷ್ಠೆ ಜಪ ಗುಣಾ

ಸಕ್ತತೆ ಸ್ನಾನ ಮೌನ ಧ್ಯಾನವಾಚಾರ ಸತ್ಯತಪ ನಿತ್ಯ ನೇಮ

ಯುಕ್ತಿ ಶೈವಾಗಮಾವೇಶ ಲಿಂಗಾರ್ಚನಾ

ಸಕ್ತಿಯಿಂ ಬೆಳೆದ ಪುಣ್ಯದೊಳಗರ್ಧಮಂ ಸುಧಾ

ಭುಕ್ತರರಿಯಲು ಕೊಡುವೆನಾ ಹರಿಶ್ಚಂದ್ರ ಹುಸಿಯಂ ನುಡಿಯದಿರಲೆಂದನು           ೨೭

ಅರ್ಥ

ದೇವತೆಗಳ ಸಾಕ್ಷಿಯಾಗಿ ಹೇಳುತ್ತೇನೆ. ಹರಿಶ್ಚಂದ್ರ ಸುಳ್ಳು ಹೇಳದಿದ್ದರೆ ಅವನಿಗೆ ಭಕ್ತಿ ಶಮೆ ದಮೆ ಯೋಗ ಯಾಗ ಶ್ರುತಿಮತಮಯ ವಿರಕ್ತಿ ಘೋರವ್ರತ ತಪೋನಿಷ್ಠೆ ಜಪ ಗುಣಾಸಕ್ತತೆ ಸ್ನಾನ ಮೌನ ಧ್ಯಾನ ಆಚಾರ ಸತ್ಯತಪ ನಿತ್ಯನೇಮ ಯುಕ್ತಿ ಶೈವಾಗಮ ಆವೇಶ ಲಿಂಗಾರ್ಚನಾಸಕ್ತಿಯಿಂದ ನಾನು ಪಡೆದ ಪುಣ್ಯದಲ್ಲಿ ಅರ್ಧಭಾಗವನ್ನು ಕೊಡುತ್ತೇನೆ ಎಂದನು.

ವಾಗ್ವಾದ ಮುಗಿದು ಈಗ ವಸಿಷ್ಠ ವಿಶ್ವಾಮಿತ್ರರೊಳಗೆ ಪ್ರಶ್ನೋತ್ತರಗಳ ಚಕಮಕಿ ನಡೆಯುತ್ತದೆ.       

ಪದ್ಯ

ಎಂದು ಭೂವರನಂ ಪರೀಕ್ಷಿಸುವೆಯೆನ್ನ ಮನ

ಬಂದ ದಿನಮೆನಿತು ಸೂಳಾತನೀ ಧರೆಯೊಳಿ

ಪ್ಪಂದುತನಕಾವಾವ ಪರಿಯೊಳು ಸಹಸ್ರವಿಧದೊಳು ದಿಟವೆ ದಿಟವೆಂದೆನೆ

ಹಿಂದುಗಳೆಯಲದೇಕೆ ನಡೆಯೆನಲು ನೀನಾಡು

ವಂದವನುವಾಗಿರದೆನುತ್ತ ಕೌಶಿಕನಣಕ

ದಿಂದಾಡಲೆಮ್ಮ ಕೂಡಿನಿತಣಕವೇಕೆಂದು ವಾಸಿಷ್ಠಮುನಿ ನುಡಿದನು             ೨೮

ಅರ್ಥ

ವಸಿಷ್ಠನ ಪ್ರಶ್ನೆ, ವಿಶ್ವಾಮಿತ್ರನ ಉತ್ತರ: ಯಾವಾಗ ಮಹಾರಾಜನನ್ನು ಪರೀಕ್ಷೆ ಮಾಡುವೆ? ನನಗೆ ಮನಸ್ಸು ಬಂದ ದಿನ. ಎಷ್ಟು ಸಲ? ಅವನು ಈ ಭೂಮಿಯಲ್ಲಿ ಇರುವವರೆಗೂ. ಯಾವ್ಯಾವ ರೀತಿಯಲ್ಲಿ? ಸಾವಿರರೀತಿಯಲ್ಲಿ. ನಿಜವೇ? ನಿಜ. ಹಾಗಿದ್ದರೆ ಇನ್ನೇಕೆ ತಡಮಾಡುತ್ತೀರಿ , ನಡೆಯಿರಿ ಎನ್ನಲು, ಈ ರೀತಿ ನೀನು ಹೇಳುವುದು ಸಮುಚಿತವಲ್ಲ ಎನ್ನುತ್ತ ವಿಶ್ವಾಮಿತ್ರನು ವ್ಯಂಗ್ಯವಾಗಿ ಪ್ರತಿಕ್ರಿಯಿಸಲು, ನನ್ನೊಂದಿಗೆ ಯಾಕೆ ಹೀಗೆ ವ್ಯಂಗ್ಯದ ಮಾತುಗಳೆಂದು ವಸಿಷ್ಠಮುನಿ ಕೇಳಿದನು.

ವಿಶೇಷ ವಿಚಾರ

ಒಂದು ಪದ್ಯದಲ್ಲಿ ಈ ರೀತಿಯಲ್ಲಿ ಹಲವು ಮಾತುಗಳ ಚಕಮಕಿಯನ್ನು ಹೊಮ್ಮಿಸುವುದು ರಾಘವಾಂಕನ ವಿಶಿಷ್ಟ ಪ್ರತಿಭೆ. ಕನ್ನಡ ಸಾಹಿತ್ಯದಲ್ಲಿ ವಿರಳವಾಗಿರುವ ಸಂಭಾಷಣಾ ಚತುರತೆ ಹರಿಶ್ಚಂದ್ರ ಕಾವ್ಯದ ವೈಶಿಷ್ಟ್ಯವೂ ಹೌದು. ಇಂಥ ಅನೇಕ ಸನ್ನಿವೇಶಗಳು ಈ ಕಾವ್ಯದ ಸೊಬಗನ್ನು ಹೆಚ್ಚಿಸಿವೆ.        

ಈಗ ವಿಶ್ವಾಮಿತ್ರನ ಮಾತು:

ಪದ್ಯ

ಇನಿತು ಮುಳಿಸಾವುದು ಹರಿಶ್ಚಂದ್ರ ಭೂಭೂಜನ

ಮನೆಗೀಗಳಿಂತು ನೀ ಹೋಗಿ ಕೌಶಿಕನು ನೆ

ಟ್ಟನೆ ನಿನ್ನನಂತಿಂತು ಕೆಡಿಸಿದಪ ನೀನಾವ ಪರಿಯಲೆಚ್ಚತ್ತಿರೆಂದು

ನೆನಸಿಕೊಡು ಹೋಗೆಂದಡಾನಾಡವವನೆ ಹೇ

ಳೆನಲೆನ್ನ ಗಾಸಿಗಾರದೆ ನೃಪಂ ಹುಸಿನುಡಿಯೆ

ಮುನಿತನವನೀಡಾಡಿ ಹೋಹಂತಿರಾದಪುದು ಹೋಗಿ ನೀಂ ಹೇಳೆಂದನು     ೨೯

ಅರ್ಥ

ಇಷ್ಟು ಕೋಪವೇಕೆ? ಹರಿಶ್ಚಂದ್ರನ ಮಹಾರಾಜನ ಮನೆಗೆ ಈಗಲೇ ನೀನು ಹೋಗಿ ಕೌಶಿಕನು ನಿನ್ನನ್ನು ಹೇಗಾದರೂ ಮಾಡಿ ಸೋಲಿಸಿಯೇ ಸೋಲಿಸುತ್ತಾನೆ, ನೀನು ಯಾವ ಬಗೆಯಲ್ಲಾದರೂ ಎಚ್ಚರವಾಗಿರಬೇಕು ಎಂದು ನೆನಪಿಸಿ ಕೊಡು ಹೋಗು, ಎಂದು ವಿಶ್ವಾಮಿತ್ರ ಹೇಳಿದಾಗ, ನಾನು ಹಾಗೆ ಹೇಳುವವನೇ ?ಎಂದು ವಸಿಷ್ಠನು ಕೇಳಲು, ನನ್ನ ಹಿಂಸೆಯನ್ನು ತಾಳಲಾರದೆ ರಾಜನು ಸುಳ್ಳು ಹೇಳಿದರೆ ಮುನಿತ್ವವನ್ನು ಬಿಟ್ಟು ಹೋಗಬೇಕಾದೀತು,  ಹೋಗಿ ನೀನು ಹೇಳು ಎಂದು ವಿಶ್ವಾಮಿತ್ರನು ಉತ್ತರಿಸಿದನು.    

ಪದ್ಯ

ತರಣಿ ತೇಜಂಗೆಡದಿರಗ್ನಿ ಬಿಸುಪಾರದಿರು

ಸರಸಿರುಹವೈರಿ ತಂಪಂ ಬಿಡದಿರೆಲೆಲೆ ಮಂ

ದರವೆ ಚಲಿಸದಿರೆಂದು ಬೋಧಿಸಲದೇಕೆ ನಿಜವಳಿವವೇ ಸುಮ್ಮನಿರಲು

ವರಹರಿಶ್ಚಂದ್ರ ಸತ್ಯಂಗೆಡದಿರೆಂದು ಬೋ

ಸರಿಸುವಂತಾಗಿ ಹುಸಿಯುಂಟೆ ಕೊಂಡೆಯವೆಮಗೆ

ಹಿರಿಯತನ ಕೆಟ್ಟಿಂತು ನುಡಿಯಲಹುದೇಯೆಂದು ವಾಸಿಷ್ಠ ಮುನಿ ನುಡಿದನು    

ಅರ್ಥ

ಸೂರ್ಯನೇ ತೇಜಸ್ಸನ್ನು ಕಳಕೊಳ್ಳಬೇಡ, ಅಗ್ನಿಯೇ ನಿನ್ನ ಬಿಸಿ ಆರದಿರಲಿ, ಚಂದ್ರನೇ ತಂಪನ್ನು ಬಿಡಬೇಡ,  ಎಲೆ ಮಂದರಪರ್ವತವೇ ಚಲಿಸಬೇಡ, ಎಂದು ಉಪದೇಶ ಮಾಡುವ ಅಗತ್ಯವಿದೆಯೇ? ಸುಮ್ಮನಿದ್ದರೆ ಅವುಗಳು ತಮ್ಮ ಸಹಜ ಗುಣಗಳನ್ನು ಬಿಟ್ಟುಬಿಡುತ್ತವೆಯೇ? ಹಾಗೆಯೇ ಶ್ರೇಷ್ಠನಾದ ಹರಿಶ್ಚಂದ್ರನನ್ನು ಸತ್ಯವನ್ನು ಬಿಡಬೇಡ ಎಂದು ತಿಳಿಸುವುದಕ್ಕೆ ಅವನೇನು ಸುಳ್ಳುಗಾರನೇ, ನಾನೇನು ಚಾಡಿಕೋರನೇ? ನಿಮ್ಮ ಸ್ಥಾನಗೌರವವನ್ನು ಬಿಟ್ಟು ಹೀಗೆ ಹೇಳಬಹುದೇ ವಿಶ್ವಾಮಿತ್ರರೇ ಎಂದು ವಾಸಿಷ್ಠ ಮುನಿ ನುಡಿದನು.

ವಿಶೇಷ ವಿಚಾರ

ಸೂರ್ಯ, ಚಂದ್ರ, ಮಂದರ ಪರ್ವತಗಳು ಹೇಗೆ ತಮ್ಮ ಸಹಜಗುಣಗಳಲ್ಲಿ ಪ್ರವರ್ತಿಸುತ್ತವೆಯೇ ಹರಿಶ್ಚಂದ್ರನ ಸತ್ಯವೂ ಅಷ್ಟೇ ಅಚಲವಾದುದು ಎಂಬುದು ವಸಿಷ್ಠನ ನಂಬಿಕೆ. ವಸಿಷ್ಠನ ನಂಬಿಕೆಯನ್ನು ಕ್ಷಣಮಾತ್ರದಲ್ಲಿ ಅಲ್ಲಗಳೆಯುತ್ತಾನೆ ವಿಶ್ವಾಮಿತ್ರ.

ಕಾವ್ಯರಸಯಾನ ಮುಂದುವರಿದುದು: ೧೫.೦೭.೨೦೨೩

ಈ ದಿನದ ರೆಕಾರ್ಡಿಂಗ್

ಪದ್ಯ

ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೇ ಮುನಿದು

ಪೊಡವಿ ನುಂಗುವಡೆ ಮನೆ ತಾಂಗುವುದೆ ಕವಿದು ಹೆ

ಗ್ಗಡಲುಕ್ಕಿ ಜಗವ ಮೊಗೆವಡೆ ಮೆಳೆಗಳಡ್ಡಬಹವೇ ಹೇಳು ಮುನಿಪ ನಿನ್ನ

ಬಡಬೋಧೆಗೀಧೆಗಳು ರಕ್ಷಿಸುವುವಲ್ಲ ನಾಂ

ಕಡುಮುಳಿದ ಬಳಿಕಲೇಗುವವು ನೀ ಹೇಳದಿ

ರ್ದಡೆ ಮದನಹರನಾಣೆ ಹೋಗೆಂದು ಕೌಶಿಕಂ ನುಡಿದನು ವಸಿಷ್ಠಮುನಿಗೆ      ೩೧

ಅರ್ಥ

ಸಿಡಿಲು ಅಪ್ಪಳಿಸುವಾಗ ಹಿಡಿದ ಕೊಡೆ ತಡೆಯುವುದೇ, ಕೋಪದಿಂದ ಭೂಮಿಯೇ ನುಂಗಲು ಬಂದರೆ ಮನೆ ರಕ್ಷಿಸುವುದೇ, ಸಮುದ್ರವೇ ಭೋರ್ಗರೆದು ಉಕ್ಕಿ ಜಗತ್ತನ್ನು ಕಬಳಿಸಲು ಬಂದರೆ ಬಿದಿರ ಮೆಳೆಗಳು ಅಡ್ಡಬರುವುದೇ, ಹೇಳು ಮಹರ್ಷಿ,  ನಾನು ಕೋಪಿಸಿದ ಬಳಿಕ ಯಾವುದೂ ರಕ್ಷಣೆಗೆ ಬರುವುದಿಲ್ಲ. ಇನ್ನು ನಿನ್ನ ಅರ್ಥಹೀನ ಉಪದೇಶಗಳು ಏನು ಮಾಡಲು ಸಾಧ್ಯ?  ನೀನು ಹೋಗಿ ಅವನಿಗೆ ನೇರವಾಗಿ ಹೇಳು. ಶಿವನಾಣೆಗೂ ನೀನು ಹೇಳುತ್ತೀಯೆಂದು ನನಗೆ ಗೊತ್ತಿದೆ, ಹೋಗು ಎಂದು ಕೌಶಿಕನು ವಸಿಷ್ಠಮುನಿಗೆ ಹೇಳಿದನು.     

ಪದ್ಯ

ಕುಲವ ನಾಲಗೆಯರುಹಿತೆಂಬ ನಾಣ್ಣುಡಿಗಿಂದು

ನೆಲೆಯಾಯ್ತಲಾ ಬ್ರಹ್ಮ ಋಷಿಯಾದಡೊಳಗು ನಿ

ರ್ಮಳವಪ್ಪುದಯ್ಯ ನೀಂ ರಾಜರ್ಷಿ ಕೋಪಿಸದೆ ಧಟ್ಟಿಸದೆ ಕೆಡೆನುಡಿಯದೆ

ನಿಲಲೆಂತು ಬಲ್ಲೆಯೆನಲೆನ್ನ ನೀನೀಗ ಹೆ

ಪ್ಪಳಿಸದಾಡಿದೆಯೆಂದಡಹುದಹುದು ನಿನ್ನಲಿಹ

ನೆಲೆಯಾಡಿತೆನೆ ಕೌಶಿಕಂ ಕುಪಿತನಾದನದನಾವ ಕವಿ ಬಣ್ಣಿಸುವನು            ೩೨

ಅರ್ಥ

ಕುಲವನ್ನು ನಾಲಗೆ ತಿಳಿಸುತ್ತದೆ ಎಂಬ ನಾಡಮಾತಿಗೆ ಇವತ್ತು ಸರಿಯಾದ ನೆಲೆಯನ್ನು ತೋರಿಸಿದೆ. ನೀನು ಬ್ರಹ್ಮ ಋಷಿಯಾಗಿರುತ್ತಿದ್ದರೆ ಅಂತರಂಗ ಶುದ್ಧವಾಗಿರುತ್ತಿತ್ತು. ನೀನು ರಾಜರ್ಷಿ. ನಿನಗೆ ಕೋಪಿಸದೆ ಧಟ್ಟಿಸದೆ ಕೆಡೆನುಡಿಯದೆ ಇರುವುದಕ್ಕೆ ಹೇಗೆ ಸಾಧ್ಯ? ಎಂದು ವಸಿಷ್ಠ ಹೇಳಿದಾಗ ನನ್ನನ್ನು ನೀನೀಗ ಲೆಕ್ಕಿಸದೆ ಮಾತನಾಡಿದೆ ಎಂದು ಕೌಶಿಕ ಪ್ರತಿಕ್ರಿಯಿಸುತ್ತಾನೆ. ಅದಕ್ಕೆ ವಸಿಷ್ಠ, ನಿಜ ನಿಜ, ನಿನ್ನ ಸ್ವಭಾವವೇ ಅದನ್ನು ಹೇಳಿಸಿತು ಎಂದಾಗ ಕೌಶಿಕನು ಕೋಪಿಷ್ಠನಾದ ರೀತಿಯನ್ನು ಯಾವ ಕವಿಯಿಂದ ತಾನೇ ವರ್ಣಿಸಲು ಸಾಧ್ಯ?

ವಿಶೇಷ ವಿಚಾರ

ವಿಶ್ವಾಮಿತ್ರ ಬ್ರಹ್ಮರ್ಷಿಯಾದ ಹಿನ್ನೆಲೆ: ಕ್ಷತ್ರಿಯ ರಾಜ ಗಾದಿಯ ಮಗ ವಿಶ್ವರಥನೆಂಬ ಹೆಸರಿನಿಂದ ಪ್ರಖ್ಯಾತನಾಗಿದ್ದ ವಿಶ್ವಾಮಿತ್ರ ಒಂದು ಸಲ ತನ್ನ ಪರಿವಾರದೊಂದಿಗೆ ವಸಿಷ್ಠನ ಆಶ್ರಮಕ್ಕೆ ಬರುತ್ತಾನೆ. ವಸಿಷ್ಠ ಮಹರ್ಷಿ ಆಶ್ರಮದಲ್ಲಿದ್ದ ನಂದಿನಿ ಎಂಬ ಗೋವಿನ ಸಹಾಯದಿಂದ ಬಂದ ಅತಿಥಿಗಳಿಗೆ ಭೂರಿ ಭೋಜನದ ವ್ಯವಸ್ಥೆ ಮಾಡುತ್ತಾನೆ. ಇಷ್ಟು ಅಲ್ಪಕಾಲದಲ್ಲಿ ಇದು ಹೇಗೆ ಸಾಧ್ಯವಾಯಿತೆಂದು ಅಚ್ಚರಿ ಪಟ್ಟ ವಿಶ್ವರಥನಿಗೆ ನಂದಿನಿಯೇ ಅದಕ್ಕೆ ಕಾರಣವೆನ್ನುವುದು ಗೊತ್ತಾಗುತ್ತದೆ. ವಿಶ್ವರಥ ನಂದಿನಿಯನ್ನು ತನಗೆ ಕೊಡುವಂತೆ ವಸಿಷ್ಠನನ್ನು ಕೇಳುತ್ತಾನೆ. ಬದಲಿಗೆ ಸಾವಿರ ಹಸುಗಳನ್ನು ನೀಡುತ್ತೇನೆಂದು ಹೇಳುತ್ತಾನೆ. ಆದರೆ ವಸಿಷ್ಠರು ರಾಜನ ಯಾವ ಪ್ರಲೋಭನೆಗೂ ಸೊಪ್ಪು ಹಾಕದಾಗ ವಿಶ್ವರಥ ಯುದ್ಧ ಮಾಡಲು ತಯಾರಾಗುತ್ತಾನೆ. ನಂದಿನಿಯ ಮೈಮೇಲಿನಿಂದ ಉದ್ಭವಿಸಿದ ಸಾವಿರಾರು ಸಂಖ್ಯೆಯ ಯೋಧರು ವಿಶ್ವರಥನ ಸೈನ್ಯವನ್ನು ಸೋಲಿಸುತ್ತಾರೆ. ಅವಮಾನಿತನಾದ  ವಿಶ್ವರಥ ಅಧಿಕಾರ, ದೇಹಬಲಗಳು ದುರ್ಬಲ, ಆತ್ಮಬಲವೇ ಬಲ ಎಂಬುದನ್ನು ಮನಗಂಡು ಘೋರ ತಪಸ್ಸಿನಿಂದ ಬ್ರಹ್ಮ ಜ್ಞಾನವನ್ನು ಪಡೆಯಲು ನಿರ್ಧರಿಸಿ ಘೋರತಪಸ್ಸನ್ನು ಮಾಡಿ ಬ್ರಹ್ಮಜ್ಞಾನವನ್ನು ಪಡೆಯುತ್ತಾನೆ.  ಆದರೆ ಹುಟ್ಟುಗುಣ ಘಟ್ಟ ಹತ್ತಿದರೂ ಹೋಗುವುದಿಲ್ಲವೆಂಬಂತೆ ವಸಿಷ್ಠನ ಮೇಲಿನ ಪೂರ್ವಕೋಪ ಹಾಗೇಯೇ ಉಳಿದಿರುತ್ತದೆ. ಅದೇ ಕೋಪ ಕೆರಳಿ ಅತ್ಯಂತ ಭಯಂಕರವಾಗಿ ಗರ್ಜಿಸುತ್ತಾನೆ. ಗಾದೆಮಾತುಗಳನ್ನು ಬಳಸಿ ಸಂದರ್ಭವನ್ನು ಸ್ಪಷ್ಟಗೊಳಿಸುವುದರಲ್ಲಿ ರಾಘವಾಂಕ ಕವಿ ನಿಸ್ಸೀಮ. ಪಂಪಕವಿಯ ʻಕುಲಮಂ ನಾಲಗೆ ತುಬ್ಬುವವೊಲ್‌ ʼ ಎಂದ ಪ್ರಯೋಗವನ್ನು ಗಮನಿಸಬಹುದು.

ಪದ್ಯ

ನುಡಿಯುರಿಯನುಗುಳೆ ಕಣ್ ಕಿಡಿಗೆದರಿ ವದನ ಕೆಂ

ಪಡರೆ ನಿಟಿಲಂ ಬಿಸಿಯ ಬಿಂದುವಂ ತಳೆಯೆ ಕೈ

ನಡುಗೆ ಪುರ್ಬಲುಗೆ ಮಿಸುಪಧರ ಜಡಿಯೆ ಲಾಕುಳ ಹೊಗೆಯೆ ಕಾಲ್ ಕುಂಬಿಡೆ

ತೊಡೆದ ಭಸಿತಂ ಧೂಮವಿಡೆ ಮೆಯ್ಯ ರೋಮ ಕೌ

ರಿಡೆ ಕಮಂಡುಲ ಜಲಂ ತೆಕ್ಕ ತೆಕ್ಕನೆ ಕುದಿಯೆ

ಮೃಡನ ಹಣೆಗಿಚ್ಚು ಮುನಿಯಾದಂತೆ ಕೌಶಿಕಂ ಮುನಿದನು ವಸಿಷ್ಠಮುನಿಗೆ        ೩೩

ಅರ್ಥ   

ಮಾತುಗಳು ಬೆಂಕಿಯನ್ನು ಉಗುಳಲು, ಕಣ್ಣಿನಲ್ಲಿ ಕಿಡಿ ಕೆದರಲು, ಮುಖ ಕೆಂಪಾಗಲು, ಹಣೆಯಲ್ಲಿ ಬಿಸಿಹನಿಗಳು ಒಟ್ಟುಗೂಡಲು,  ಕೈ ನಡುಗಲು, ಹುಬ್ಬು ಅಲ್ಲಾಡಲು, ಹೊಳೆಯುವ ತುಟಿಗಳು ಕಂಪಿಸಲು, ಯೋಗದಂಡ ಹೊಗೆಯುತ್ತಿರಲು, ಕಾಲು ಕುಸಿಯುತ್ತಿರಲು,  ಹಚ್ಚಿದ ಭಸ್ಮ ಹೊಗೆಯಲು,  ಮೈಯ ರೋಮಗಳು ನಿಮಿರಲು,  ಕಮಂಡಲುವಿನ ನೀರು ಕೊತಕೊತನೆ ಕುದಿಯಲು,  ಶಿವನ ಹಣೆಯ ಬೆಂಕಿಯೇ ಮುನಿಯಾದಂತೆ ವಿಶ್ವಾಮಿತ್ರನು ವಸಿಷ್ಠಮುನಿಯ ಬಗ್ಗೆ ತೀವ್ರವಾಗಿ ಕೋಪಿಸಿದನು.

ವಿಶೇಷ ವಿಚಾರ

ಚಿತ್ರಪಟವನ್ನು ಕಣ್ಣಮುಂದೆ ನಿಲಲ್ಲಿಸಿದಂತೆ ವಿಶ್ವಾಮಿತ್ರ ಮಹರ್ಷಿಯ ಕೋಪದ ವರ್ಣನೆ ಅದ್ಭುತವಾಗಿದೆ. ಮುನಿಯಾದವನಿಗೆ ಇರಬೇಕಾದ ಶಮೆ, ದಮೆಗಳನ್ನು ಕಳೆದುಕೊಂಡು ಆತನು ವರ್ತಿಸುವ ರೀತಿ, ನೀತಿಗಳು ವಿಡಂಬನಾತ್ಮಕ. ರೌದ್ರರಸವನ್ನು ಅಭಿವ್ಯಕ್ತಿಸಿದ ಕವಿಯ ಪ್ರತಿಭೆ ವಿಶಿಷ್ಟ.       

ವಿಶ್ವಾಮಿತ್ರನ ಕೋಪದ ಆಟಾಟೋಪ:

ಪದ್ಯ

ನೋಡು ನೋಡಿಂದೆನ್ನ ರಾಜಋಷಿಯೆಂದು ಕೆ

ಟ್ಟಾಡಿತಕ್ಕಾ ಹರಿಶ್ಚಂದ್ರನನಸತ್ಯನಂ

ಮಾಡಿಸುವೆನಧಿಕಪ್ರತಿಜ್ಞೆಗಳನಾಂತ ನಿನ್ನಂ ವ್ರತಭ್ರಷ್ಟನೆನಿಸಿ

ರೋಡಾಡಿ ಕಾಡುವೆನೆನುತ್ತೆದ್ದು ಸಾವನೀ

ಡಾಡಿದವರೊಡೆಯನೋಲಗದಿಂದ ಹೊರವಂಟ

ನಾಡಂಬರದ ಸಿಡಿಲು ಗಜರಿ ಮೇಘದಿಂದ ಪೊರಮಡುವಂದದಿ            ೩೪

ಅರ್ಥ

ತೀವ್ರವಾದ ರೋಷವೇಶಕ್ಕೊಳಗಾದ ವಿಶ್ವಾಮಿತ್ರನು ವಸಿಷ್ಠನನ್ನು ಉದ್ದೇಶಿಸಿ `ನೋಡು ನೋಡು ಈ ದಿನ ನನ್ನನ್ನು ರಾಜರ್ಷಿಯೆಂದು ಕರೆದು ಅಪಮಾನ ಮಾಡಿದುದಕ್ಕೆ ಆ ಹರಿಶ್ಚಂದ್ರನನ್ನು ಅಸತ್ಯನನ್ನಾಗಿ ಮಾಡುವೆನು, ಹಲವು ಬಗೆಯ ಪ್ರತಿಜ್ಞೆಗಳನ್ನು ಮಾಡಿದ ನಿನ್ನನ್ನು ಯಾವರೀತಿಯಿಂದಲಾದರೂ ವ್ರತಭ್ರಷ್ಟನನ್ನಾಗಿ ಮಾಡಿ ತೀವ್ರವಾಗಿ ಕಾಡಿಯೇ ಕಾಡುತ್ತೇನೆ’ ಎನ್ನುತ್ತ ದೇವೇಂದ್ರನ ಓಲಗದಿಂದ ಆಡಂಬರದ ಸಿಡಿಲು ಗಜರಿ ಗರ್ಜಿಸಿ ಮೇಘಮಂಡಲದಿಂದ ಸಿಡಿಯುವಂತೆ ಸಭಾತ್ಯಾಗಮಾಡಿ ಹೊರಟೇಹೋಗುತ್ತಾನೆ.

ಪದ್ಯ

ನಡೆದು ತನ್ನಾಶ್ರಮಂಬೊಕ್ಕು ಹಲುಮೊರೆವುತ್ತ

ಪೊಡವೀಶನಂ ಭಂಗಿಸುವುದಕ್ಕುಪಾಯಮಂ

ಬಿಡದೆ ಕೌಶಿಕ ನೆನೆಯುತಿರಲತ್ತಲೆದ್ದವನಿಪಂಗೆ ಸೂಚಿಸದೆ ಪೋಗಿ

ಮೃಡಮೂರ್ತಿ ವಾಸಿಷ್ಠಮುನಿ ನಿಜತಪೋವನದ

ನಡುವೆ ಸುಖದಿಂದಿರೆ ಹರಿಶ್ಚಂದ್ರಭೂಭುಜಂ

ಜಡಧಿ ಮುದ್ರಿತ ವಸುಧೆಯೆಲ್ಲವಂ ಪಾಲಿಸುತ್ತಿರ್ದನೇವಣ್ಣಿಸುವೆನು           

ಅರ್ಥ

ದೇವೇಂದ್ರನ ಆಸ್ಥಾನದಿಂದ ಎದ್ದು ತನ್ನ ಆಶ್ರಮಕ್ಕೆ ಪ್ರವೇಶಿಸಿದ ವಿಶ್ವಾಮಿತ್ರನು ಮಹಾರಾಜನನ್ನು ಸೋಲಿಸುವ ಉಪಾಯವನ್ನು ಕುರಿತು ಗಾಢವಾದ ಚಿಂತೆಯಲ್ಲಿ ಮುಳುಗಿರಲು ಅತ್ತ ವಸಿಷ್ಠ ಮಹರ್ಷಿ ಓಲಗದಿಂದ ಹೊರಟು ತಮ್ಮ ಪ್ರತಿಜ್ಞೆಯ ವಿಚಾರವನ್ನು ರಾಜನಿಗೆ ತಿಳಿಸದೆಯೇ ಆಶ್ರಮಕ್ಕೆ ಹಿಂತಿರುಗಿ ನಿರ್ಯೋಚನೆಯಿಂದ ಸುಖವಾಗಿದ್ದ ಸಮಯದಲ್ಲಿ ಹರಿಶ್ಚಂದ್ರನು ಸಮುದ್ರವೇ ಮೇರೆಯಾಗಿರುವ ತನ್ನ ಸಮಸ್ತ ಸಾಮ್ರಾಜ್ಯವನ್ನು ಯಾವುದೇ ಕೊರತೆಯಿಲ್ಲದಂತೆ ಪಾಲಿಸುತ್ತಿದ್ದನು.

ವಿಶೇಷ ವಿಚಾರ

ಇಲ್ಲಿ ಕವಿ ವಸಿಷ್ಠನಿಗೆ ರಾಜನ ಸತ್ಯಪಾಲನೆಯ ವಿಚಾರದಲ್ಲಿ ಇದ್ದ ನಂಬಿಕೆಯನ್ನೂ ಅವನನ್ನು ಸತ್ಯಭ್ರಷ್ಟನನ್ನಾಗಿಸುವಲ್ಲಿ ವಿಶ್ವಾಮಿತ್ರನ ಪ್ರಯತ್ನವನ್ನೂ ನಿರೂಪಿಸುತ್ತಾನೆ. ವಿಶ್ವಾಮಿತ್ರ ಮತ್ತು ವಸಿಷ್ಠರನ್ನು ಸಂಬೋಧಿಸುವಾಗ ಕವಿ ಬಳಸುವ ವಿಶೇಷಣಗಳನ್ನು ಗಮನಿಸಿ.

 ತೃತೀಯ ಸ್ಥಲಂ

ದೇವೇಂದ್ರನ ಸಭೆ ಹೀಗೆ ಅನಿರೀಕ್ಷಿತ ತಿರುವನ್ನು ಪಡೆದು ಅರ್ಧದಲ್ಲಿಯೇ ಪೂರ್ಣವಿರಾಮವನ್ನು ಪಡೆಯುತ್ತದೆ. ವಸಿಷ್ಠ, ವಿಶ್ವಾಮಿತ್ರರ ವಾದ, ವಿವಾದ, ಶಪಥ, ಸಂಭಾಷಣೆ ಎಲ್ಲ ಮುಕ್ತಾಯವಾಗಿ ಮುಂದಿನ ಸ್ಥಲದಿಂದ ಹರಿಶ್ಚಂದ್ರನ ಮೇಲೆ ವಿಶ್ವಾಮಿತ್ರನ ಪರೀಕ್ಷೆಯ ಸರಣಿ ಆರಂಭವಾಗುವುದನ್ನು ನೋಡಬಹುದು.

ಮೊದಲ ಪ್ರಯೋಗ ಸಿದ್ಧವಾಗುವುದು ಹೀಗೆ:

ಪದ್ಯ

ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತೆಂಬ

ಕ್ಷೋಣಿಯಾಡುವ ಗಾದೆಯಂ ದಿಟಂ ಮಾಳ್ಪಂತೆ

ಹೂಣಿಸಿ ವಸಿಷ್ಠಂಗೆ ಕೌಶಿಕಂ ನುಡಿದ ಪ್ರತಿಜ್ಞೆಯಂ ಗೆಲುವೊಡಿನ್ನು

ಜಾಣಿಂ ಹರಿಶ್ಚಂದ್ರರಾಯನುನ್ನತಿಯಳಿವ

ಕಾಣಬೇಕೆಂದಖಿಳ ಸಾಮಾರ್ಥದ ಕಲಾಪ್ರ

ವೀಣನಂತಸ್ಥದೇಕಾಂತದೊಳು ಚಿಂತೆಯಿಂ ಭ್ರಾಂತಿಯೋಗದೊಳಿರ್ದನು      ೧

ಅರ್ಥ

ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು ಎಂದು ಭೂಮಿಯ ಜನರು ಆಡುವ ಮಾತನ್ನು ಸತ್ಯ ಮಾಡುವಂತೆ ಎಲ್ಲ ಸಮರ್ಥ ಕಲೆಗಳಲ್ಲೂ ಪ್ರವೀಣನಾದ ಕೌಶಿಕನು ವಸಿಷ್ಠನೊಂದಿಗೆ ಸ್ಪರ್ಧೆಗಿಳಿಯುತ್ತಾನೆ. ದೇವೇಂದ್ರನ ಆಸ್ಥಾನದಲ್ಲಿ ವಸಿಷ್ಠನಿಗೆ ಸವಾಲು ಹಾಕಿ, ತಾನು ಮಾಡಿದ ಪ್ರತಿಜ್ಞೆಯನ್ನು ಗೆಲ್ಲಬೇಕಿದ್ದರೆ ಇನ್ನು ಜಾಣತನದಿಂದ ಹರಿಶ್ಚಂದ್ರ ರಾಜನ ಶ್ರೇಷ್ಠತೆಯ ನಾಶವನ್ನು ಕಾಣಲೇಬೇಕೆಂದು ತೀರ್ಮಾನಿಸಿ ಹರಿಶ್ಚಂದ್ರನನ್ನು ಸೋಲಿಸುವ ಮಾರ್ಗೋಪಾಯವನ್ನು  ಕುರಿತು ಗಾಢ ಚಿಂತನೆಯಿಂದ ಭ್ರಾಂತಿಯೋಗದಲ್ಲಿ ಮಗ್ನನಾಗಿದ್ದನು. 

ವಿಶೇಷ ವಿಚಾರ

ಎರಡು ಕೋಣಗಳು ಪರಸ್ಪರ ಹೋರಾಡುವಾಗ ಮಧ್ಯದಲ್ಲಿರುವ ಹುಲ್ಲುಗಿಡಗಳು ನಾಶವಾಗುವಂತೆ ವಸಿಷ್ಠ ವಿಶ್ವಾಮಿತ್ರರಂಥ ಬಹುದೊಡ್ಡ ಮಹರ್ಷಿಗಳ ವಾಗ್ಯುದ್ಧದಲ್ಲಿ ಸಜ್ಜನ ಸಂಪನ್ನನಾದ ಹರಿಶ್ಚಂದ್ರ ಮಹಾರಾಜನಿಗೆ ಆಪತ್ತುಂಟಾಗುತ್ತದಲ್ಲ ಎನ್ನುವುದು ದೇವೇಂದ್ರನ ಚಿಂತೆ. ಈ ನಾಡನುಡಿಯ ಸಹಜ ಉದಾಹರಣೆಯಲ್ಲಿ ಕವಿ ತುಂಬಿಸಿದ ಧ್ವನಿ ಅಪಾರ.  ಬಲಾಢ್ಯರು ತಮ್ಮ ತಮ್ಮ ಸ್ವಾರ್ಥಕ್ಕೋಸ್ಕರ ಅಮಾಯಕ ಜನರನ್ನು ಬಲಿಪಶುಗಳಾಗಿಸುತ್ತಾರೆ. ಇದು ಲೋಕದ ಎಲ್ಲೆಲ್ಲೂ ನಡೆಯುತ್ತದೆ. ರಾಜರ ಹೋರಾಟದ ಕತೆಯಾಗಲಿ, ಅಧಿಕಾರಿಗಳ ಭ್ರಷ್ಟಾಚಾರಗಳಾಗಲೀ ಜಮೀನ್ದಾರರುಗಳ ಆಸ್ತಿ ಕಬಳಿಸುವಿಕೆಯಾಗಲೀ ಜನಸಾಮಾನ್ಯರು ಬಲಿಷ್ಠರ ಆಟದ ಗೊಂಬೆಗಳಾಗುತ್ತಾರೆ.

ಪದ್ಯ

ಧರೆಯೊಳು ಹರಿಶ್ಚಂದ್ರನಂ ಹುಸಿಕನೆಂದೆನಿಪ

ಪರಿಯಾವುದೆಂದು ಚಿಂತಿಸಲೊಂದುಪಾಯಮಂ

 ಕುರಿಸೆ ಕಂಡುಬ್ಬಿ ಭುಜವೊಯ್ದು ನಿಜವೈರದಂತಸ್ಥವರಿಯದ ಮುನಿಗಳ

 ಕರೆದು ನೀವಿಂತೀಗ ಹೋಗಿ ಭೂವರನನುಪ

ಚರಿಸಿ, ಬೋಧಿಸಿ, ಬಹು ಸುವರ್ಣಯಾಗವನಾವ

ಪರಿಯೊಳಂ ಮಾಳ್ಪಮನಮಂಕಾಣ್ಬುದೆಂದು ಕಳುಹಿದನು ವಿಶ್ವಾಮಿತ್ರನು    ೨

ಅರ್ಥ

ಹರಿಶ್ಚಂದ್ರನನ್ನು ಸುಳ್ಳುಗಾರನೆಂದು ಮಾಡುವುದು ಹೇಗೆಂದು ಯೋಚಿಸುತ್ತಿರಲು ಒಂದು ಉಪಾಯ ಹೊಳೆದು ವಿಶ್ವಾಮಿತ್ರ ಖುಷಿಯಿಂದ ಭುಜತಟ್ಟಿ ತನ್ನ ಮನಸ್ಸಿನ ಭಾವನೆಯನ್ನು ಅರಿಯದ ಮುನಿಗಳನ್ನು ಕರೆದು ನೀವು ಈಗಲೇ ಅಯೋಧ್ಯೆಗೆ ಹೋಗಿ ಹರಿಶ್ಚಂದ್ರ ಮಹಾರಾಜನನ್ನು ಸತ್ಕರಿಸಿ, ಉಪದೇಶಿಸಿ ಹೇಗಾದರೂ ಮಾಡಿ ಆತನನ್ನು ಬಹುಸುವರ್ಣಯಾಗವನ್ನು ಮಾಡುವ ಮನಸ್ಸಾಗುವಂತೆ ಒಲಿಸಬೇಕೆಂದು ಹೇಳಿ ಕಳುಹಿಸಿದನು.

ಪದ್ಯ

ಕೌಶಿಕನ ಕುಟಿಲವರಿಯದೆ ಹೋಗಿ ಮುನಿಗಳವ

ನೀಶಂಗೆ ಮಂಗಳಾಶೀರ್ವಾದಸೇಸೆಯಂ

ಸೂಸಲೇಂ ಕಾರ್ಯ ಬಿಜಯಂಗೆಯ್ದಿರೆನೆ ಸಕಲವೇದಪೌರಾಣಾಗಮ

 ರಾಶಿಗಳೊಳೊಂದಧಿಕಧರ್ಮಮಂ ಕಂಡರುಪ

ಲೋಸುಗಂ ಬಂದೆವೆನೆಲಾವುದೆನೆ ಮಾಳ್ಪ ವಿ

 ಶ್ವಾಸಮಂ ನುಡಿಯೆ ಪೇಳ್ದಪೆವದಂ ಮಾಡದೊಡೆ ನುಡಿದು ಫಲವೇನೆಂದರು  ೩

ಅರ್ಥ

ವಿಶ್ವಾಮಿತ್ರನ ಕುಟಿಲತನವನ್ನು ತಿಳಿಯದೆ ಋಷಿಮುನಿಗಳು ರಾಜನ ಬಳಿಗೆ ಹೋಗಿ ಅವನನ್ನು ಮಂಗಳಾಕ್ಷತೆಗಳಿಂದ ಆಶೀರ್ವದಿಸುತ್ತಾರೆ. ಯಾವ ಉದ್ದೇಶಕ್ಕಾಗಿ ಇಲ್ಲಿಯವರೆಗೆ ದಯಮಾಡಿಸಿದಿರಿ ಎಂದು ರಾಜ ಕೇಳಿದಾಗ ಸಕಲವೇದಪುರಾಣ ಆಗಮಗಳಲ್ಲಿ ಒಂದು ವಿಶೇಷವಾದ ಧರ್ಮಸೂಕ್ಷ್ಮವನ್ನು ಕಂಡು ಅದನ್ನು ನಿನಗೆ ತಿಳಿಸಬೇಕೆಂದು ಬಂದೆವು ಎಂದು ಮುನಿಗಳು ಉತ್ತರಿಸಿದಾಗ ಅದೇನೆಂದು ರಾಜ ವಿಚಾರಿಸಲಾಗಿ ನಡೆಸುತ್ತೇನೆಂದು ಭರವಸೆ ನೀಡಿದರೆ ಹೇಳುತ್ತೇವೆ, ಇಲ್ಲವಾದರೆ ಹೇಳಿ ಪ್ರಯೋಜನವೇನು ಎಂದು ಹೇಳಿದರು.

ಪದ್ಯ

ಮನವೊಸೆದು ಮಾಡುವಂತಾಗಿ ಗುರುವಾಸಿಷ್ಠ

ಮುನಿಯ ಪದಪಂಕೇಜದಾಣೆ ನಾಚದೆ ಪೇಳ್ವು

ದೆನೆ ಬಹುಸುವರ್ಣಯಾಗಂ ಯಾಗಕೋಟಾನುಕೋಟಿಕೋಟಿಗಳೊಳಧಿಕ

ನಿನಗಲ್ಲದಿನ್ನುಳಿದವರ್ಗಾಗದೆಂದಡದ

ರನುವಾವುದೆನೆ ನೆರೆದ ಮುನಿಗಳ ದೋಷ ನೆ

ಟ್ಟನೆ ನಿನಗೆ ಬಾರದಂದದಿ ಬೇಡಿದನಿತು ವಸ್ತುವನೀಯಬೇಕೆಂದರು ೪

ಅರ್ಥ

ಮುನಿಗಳ ಮಾತನ್ನು ಕೇಳಿದ ರಾಜ ತಕ್ಷಣವೇ , ಗುರು ವಸಿಷ್ಠರ ಪಾದದಾಣೆ ಮನಪೂರ್ವಕವಾಗಿ ನೀವು ಹೇಳಿದ ಕಾರ್ಯವನ್ನು ಮಾಡುತ್ತೇನೆ.  ಸಂಕೋಚವಿಲ್ಲದೆ ಹೇಳಿ ಅಂದಾಗ ಅದೊಂದು ಯಾಗ, ಬಹುಸುವರ್ಣಯಾಗವೆಂದು ಅದರ ಹೆಸರು. ಅದು ಇತರ ಎಲ್ಲ ಬಗೆಯ ಯಾಗಕ್ಕಿಂತಲೂ ಅತಿ ಶ್ರೇಷ್ಠವಾದುದು. ನಿನಗಲ್ಲದೆ ಬೇರೆಯವರಿಂದ ಆ ಯಾಗವನ್ನು ಮಾಡಲು ಸಾಧ್ಯವಿಲ್ಲ. ಎನ್ನುತ್ತಾರೆ. ಅದನ್ನು ಹೇಗೆ ಮಾಡಬೇಕೆಂದು ರಾಜ ಕೇಳಿದಾಗ ಮುನಿಗಳು ಆ ಯಾಗದಲ್ಲಿ ಬಂದು ಸೇರಿದ ಋಷಿಮುನಿಗಳು ಏನು ಕೇಳುತ್ತಾರೋ ಅದನ್ನೆಲ್ಲ ಕೇಳಿದಷ್ಟು ಕೊಡಬೇಕಾಗುತ್ತದೆ. ಇಲ್ಲವಾದರೆ ಅವರ ಶಾಪಕ್ಕೆ ಗುರಿಯಾಗಬೇಕಾದೀತು. ಎನ್ನುತ್ತಾರೆ.

ವಿಶೇಷ ವಿಚಾರ

ಋಷಿಗಳಿಗೆ ರಾಜನ ಮೇಲಿದ್ದ ನಂಬಿಕೆ, ಅವನನ್ನು ಒಲಿಸುವ ವಿಧಾನ, ಹರಿಶ್ಚಂದ್ರಮಹಾರಾಜನ ಸಜ್ಜನಿಕೆ, ಸದ್ಗುಣ, ವಿನಯವಂತಿಕೆಯನ್ನು ಗಮನಿಸಬಹುದು. ನಾಟಕೀಯ ಕೌಶಲ್ಯವೂ ಗಮನಾರ್ಹ

ಪದ್ಯ

ಆ ವಿಮಳಮುನಿಗಳ ಹಿತೋಪದೇಶವನಾಂತು

ಭೂವರಂ ಸರ್ವಮುನಿವರ್ಗಮಂ ಬರಿಸಿ ನಾ

ನಾ ವೇದ ವಿಧಿವಿಹಿತ ಧರ್ಮಾಗಮಾರ್ಥದಿಂ ಯಾಗಮಂ ಮಾಡಿ ಬಳಿಕ

 ಆವಾವ ಮುನಿಗಳಾವಾವ ಧನವಂ ಬೇಡ

ಲೋವಿ ಕೊಟ್ಟುಪಚರಿಸುತಿರೆ ಬಂದ ಸುಜನಮೃಗ

ಧೀವರಂ ಕಪಟಪಟು ಕೌಶಿಕಂ ವಾಸಿಷ್ಠಮುನಿ ಹೋದ ಹೊತ್ತನರಿದು      ೫

ಅರ್ಥ

ಮಹಾರಾಜ ಹರಿಶ್ಚಂದ್ರ ಆ ಮುನಿವರ್ಯರ ಹಿತೋಪದೇಶವನ್ನು ಶಿರಸಾವಹಿಸಿ ಎಲ್ಲ ಮುನಿಗಳನ್ನೂ ಕರೆಸಿ ಯಾಘಕ್ಕೆ ಸಂಬಂಧಿಸಿದ ಎಲ್ಲ ವಿಧಿವಿಧಾನಗಳನ್ನೂ ಶಾಸ್ತ್ರಪ್ರಕಾರ ನಡೆಸಿ ಯಾರು ಯಾವುದನ್ನೂ ಬೇಡಿದರೂ ಅದನ್ನು ಪ್ರೀತಿಯಿಂದ ಕೊಟ್ಟು ಉಪಚರಿಸುತ್ತಿದ್ದಾಗ ವಸಿಷ್ಠ ಮಹರ್ಷಿ ಹೊರಟು ಹೋದ ಹೊತ್ತನ್ನು ನೋಡಿಕೊಂಡು, ಸುಜನಮೃಗ ಧೀವರನೂ ಕಪಟಪಟುವೂ ಆದ ವಿಶ್ವಾಮಿತ್ರ ರಾಜನ ಸ್ಥಾನಕ್ಕೆ ಬಂದನು.

ವಿಶೇಷ ವಿಚಾರ

ಇಲ್ಲಿ ವಿಶ್ವಾಮಿತ್ರನನ್ನು ಕವಿ ಸುಜನ ಮೃಗ ಧೀವರ ಮತ್ತು ಕಪಟಪಟು ಕೌಶಿಕ ಎಂದಿರುವುದು ಅರ್ಥಪೂರ್ಣ. ಜಿಂಕೆಗಳಿಗೆ ಬೇಟೆಗಾರರು ಹೇಗೋ ಹಾಗೆ ಹರಿಶ್ಚಂದ್ರನಂಥ ಉತ್ತಮರನ್ನು ಬೇಟೆಯಾಡಲು ಬಂದವನು ವಿಶ್ವಾಮಿತ್ರ. ಮಾತ್ರವಲ್ಲ ಅವನ ಈ ಕುಟಿಲೋಪಾಯ ರಹಸ್ಯವಾದುದು. ಆದ್ದರಿಂದ ಅವನು ಕಪಟವಟು. ವಿಶ್ವಾಮಿತ್ರ ತನ್ನ ಸ್ಥಾನಮಾನಗಳನ್ನು ಮರೆತು ತೀರ ಕೆಳಗಿಳಿಯುವ ಚಿತ್ರ ಇದು. ಇನ್ನೊಬ್ಬರನ್ನು ಹಾಳುಮಾಡುವುದಕ್ಕೆ ಮನುಷ್ಯ ಏನನ್ನು ಬೇಕಾದರೂ ಮಾಡಬಲ್ಲ ಎಂಬುದಕ್ಕೆ ಈ ಚಿತ್ರ ಸಾಕ್ಷಿ. ಈ ಮಾತನ್ನು ಕವಿಯೇ ಆಡಬೇಕಿದ್ದರೆ ಬಹುಶಃ ಕವಿಯ ರಸಾವೇಶ, ಮರಹು ಕೂಡ ಕಾರಣವಾಗಿರಬಹುದು.

ಪದ್ಯ

ಇತ್ತಲಾ ಭೂಭುಜಂ ಸಕಲಮುನಿಗಳಿಗೆ ಮನ

ವೆತ್ತಿಕ್ಕಿ ನೆನೆದರ್ಥಮಂ ಕೊಡುತ್ತಿರಲಾ ಸು

 ಚಿತ್ತಮನನಾಗಿ ಸಂತೋಷದಿಂ ಹರ್ಷ ಸಂಜನಿತಸಂಭ್ರಮದೊಳಿರಲು

ಅತ್ತ  ವಿಶ್ವಾಮಿತ್ರಮುನಿಯರಿಕೆಯಾಯ್ತೆಂದು

 ಸುತ್ತಿದ ಪ್ರಪಂಚವೆಲ್ಲವ ಕೂಡಿಕೊಂಡು ನಲಿ

ಯುತ್ತ ನಟಿಸುತ್ತ ಹೊಡೆದಾಡಿ ಬಂದನು ಹರಿಶ್ಚಂದ್ರ ಭೂಪಾಲನೆಡೆಗೆ ೬

ಅರ್ಥ

ಹರಿಶ್ಚಂದ್ರ ಮಹಾರಾಜ ಮುನಿಗಳು ಹೇಳಿದಂತೆಯೇ ಬಹುಸುವರ್ಣಯಾಗವನ್ನು ಮಾಡಿ ಋಷಿಮುನಿಗಳು ಕೇಳಿದ ಸಂಪತ್ತೆಲ್ಲವನ್ನೂ ಮನಪೂರ್ವಕವಾಗಿ ದಾನಮಾಡಿ ಸಂತೋಷಚಿತ್ತನಾಗಿದ್ದ ಸಮಯದಲ್ಲಿ ಇದೇ ತಕ್ಕದಾದ ಸಮಯವೆಂದು ಮನದಲ್ಲೇ ಖುಷಿಪಟ್ಟು ಬೊಬ್ಬಿಟ್ಟು ತನ್ನ ಶಿಷ್ಯಕೋಟಿಗಳನ್ನು ಕರೆದುಕೊಂಡು ಹೊಡೆದಾಡುವ ಉದ್ದೇಶವನ್ನು ಬಚ್ಚಿಟ್ಟುಕೊಂಡೇ ವಿಶ್ವಾಮಿತ್ರ ಮಹರ್ಷಿ ರಾಜನ ಬಳಿಗೆ ಬಂದನು.

ಪದ್ಯ

ಹರಿದು ವಿಶ್ವಾಮಿತ್ರ ಮುನಿಗೆರಗಿ ಚರಣಸರ

ಸಿರುಹಮಂ ತೊಳೆದು ನೆನೆದರ್ಥಮಂ ಬೆಸಸೆನಲು

ಪಿರಿಯ ಕರಿಯಂ ಮೆಟ್ಟಿ ಕವಡೆಯಂ ಮಿಡಿದೊಡೆನಿತುದ್ದಮಂ ಪೋಪುದದರ

ಸರಿಯೆನಿಸಿ ಸುರಿದ ಹೊಸಹೊನ್ನರಾಸಿಯನೀವು

 ದರಸಯೆಂದೆನೆ ಹಸಾದಂ ಕೊಟ್ಟೆನದನೀಗ

ಲಿರದೊಯ್ವುದೆನೆ ಬೇಡ ನಿನ್ನ ಮೇಲಿರಲಿ ಬೇಹಾಗ ತರಿಸುವೆನೆಂದನು                      ೭

ವಿಶ್ವಾಮಿತ್ರ ಮುನಿ ಬಂದ ವಿಚಾರ ತಿಳಿದು ಹರಿಶ್ಚಂದ್ರರಾಜ ಧಾವಿಸಿ ಬಂದು ಮುನಿಯ ಪಾದಗಳಿಗೆ ವಂದಿಸಿ, ಪಾದಕಮಲಗಳನ್ನು ತೊಳೆದು, ನಿಮಗೆ ಬೇಕಾದ ಸಂಪತ್ತನ್ನು ಆಜ್ಞಾಪಿಸಿ ಅಂದಾಗ, ಎತ್ತರವಾದ ಒಂದು ಆನೆಯನ್ನು ಏರಿ, ಕವಡೆಯನ್ನು ಮಿಡಿದರೆ ಅದು ಎಷ್ಟು ಮೇಲೆ ಹೋಗುವುದೋ ಅಷ್ಟು ಎತ್ತರಕ್ಕೆ ಸರಿಯಾಗಿ ಸುರಿದ, ಹೊಚ್ಚಹೊಸ ಚಿನ್ನದ ರಾಶಿಯನ್ನು ಕೊಡಬೇಕು ರಾಜಾ ಎನ್ನಲು, ನಿಮ್ಮ ಆಶೀರ್ವಾದ, ಕೊಟ್ಟಿದ್ದೇನೆ ಅದನ್ನು ಈಗಲೇ ತೆಗೆದುಕೊಂಡು ಹೋಗಿ ಎನ್ನಲು, ಬೇಡ, ನಿನ್ನ ಹತ್ತಿರವೇ ಇರಲಿ, ಬೇಕಾದಾಗ ತರಿಸಿಕೊಳ್ತೇನೆ ಎಂದನು(ವಿಶ್ವಾಮಿತ್ರ)

ವಿಶೇಷ ವಿಚಾರ

ವ್ಯಾಪಾರಿಗಳು ಮಾಡುವ ವ್ಯವಹಾರ ಕೌಶಲ, ಕುತಂತ್ರಗಳ ಸುಂದರ ನಿರೂಪಣೆ.

ಕಾವ್ಯರಸಯಾನ ಮುಂದುವರಿದುದು: ೨.೦೭.೨೦೨೩

ಈ ದಿನದ ರೆಕಾರ್ಡಿಂಗ್

(ವಿಶ್ವಾಮಿತ್ರ ಹರಿಶ್ಚಂದ್ರ ಮಹಾರಾಜನನ್ನು ಸುಳ್ಳುಗಾರನನ್ನಾಗಿ ಮಾಡಲು ಅವನಿಂದ ಬಹುಸುವರ್ಣಯಾಗವನ್ನು ಮಾಡಿಸಿ ಕೊನೆಗೆ ತಾನೇ ಸೋತು ಆಶ್ರಮಕ್ಕೆ ಹಿಂತಿರುಗಿ ಬಂದು ಮುಂದೇನು ಮಾಡಲಿ ಎಂದು ಚಿಂತಿಸುತ್ತಾನೆ. ಇಲ್ಲಿಂದ ಇಂದಿನ ನಮ್ಮ ಕಾವ್ಯ ರಸಯಾನ ಆರಂಭವಾಗುತ್ತದೆ.)

ಪದ್ಯ

ಕೊಂಡ ಹೊಸ ಹೊನ್ನರಾಸಿಯನವನಿಪಾಲಕನ
ಭಂಡಾರದೊಳಗಿರಿಸಿ ತನ್ನಾಶ್ರಮವನೆಯ್ದಿ
ಚಂಡಕರನರುಣಕಿರಣಂ ಹೊಗುವ ಠಾವೆಲ್ಲವಂ ತೀವಿತವನ ಸತ್ಯ
ಪಂಡಿತರ ಮುಂದೆ ದೇವೇಂದ್ರನಿದಿರಲಿ ಮುನಿಯ
ಭಂಡನಂ ಮಾಳ್ಪೆ ಭೂಪತಿಯಲನೃತವನಿಲ್ಲಿ
ಕಂಡೆನಾದಡೆ ಕಾಣ್ಬ ತೆರನಾವುದೆಂದು ಚಿಂತಿಸಿದ ವಿಶ್ವಾಮಿತ್ರನು ೪೮

ಹರಿಶ್ಚಂದ್ರ ರಾಜ ನೀಡಿದ ದ್ರವ್ಯವನ್ನೆಲ್ಲ ಸದ್ಯ ರಾಜಬೊಕ್ಕಸದಲ್ಲೇ ಇರಿಸಬೇಕೆಂದೂ ತನಗೆ ಬೇಕಾದಾಗ ತರಿಸಿಕೊಳ್ಳುತ್ತೇನೆಂದೂ ಹೇಳಿ ತನ್ನ ಆಶ್ರಮಕ್ಕೆ ಮರಳಿದ ವಿಶ್ವಾಮಿತ್ರ, ರಾಜನಾದ ಹರಿಶ್ಚಂದ್ರನ ಸತ್ಯವಂತಿಕೆ ಸೂರ್ಯಕಿರಣಗಳು ಹೋಗುವ ಜಾಗವನ್ನೆಲ್ಲ ತುಂಬಿದೆ. ಪಂಡಿತರ ಮುಂದೆ, ದೇವೇಂದ್ರನ ಎದುರಿನಲ್ಲಿ ರಾಜನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇನೆಂದೂ ಅವನಲ್ಲಿ ಸುಳ್ಳಿರುವುದನ್ನು ಸಾಬೀತುಪಡಿಸಿ ವಸಿಷ್ಠನನ್ನು ಸೋಲಿಸುತ್ತೇನೆಂದೂ ಪ್ರಮಾಣ ಮಾಡಿದ್ದೇನೆ. ರಾಜನನ್ನು ಸುಳ್ಳುಗಾರನನ್ನಾಗಿ ಮಾಡಿದರೆ ಮಾತ್ರ ವಸಿಷ್ಠನನ್ನು ಸೋಲಿಸಲು ಸಾಧ್ಯ. ಆದರೆ ತಾನೀಗ ರಾಜನನ್ನು ಯಾವ ರೀತಿಯಲ್ಲಿ ಸೋಲಿಸಲಿ ಎಂದು ಚಿಂತಿಸತೊಡಗಿದ.

ವಿಶೇಷ ವಿಚಾರ

ಪ್ರಥಮ ಚುಂಬನಂ ದಂತ ಭಗ್ನಂ ಎಂಬಂತೆ ಮೊದಲ ಪ್ರಯತ್ನದಲ್ಲೇ ಸೋತುಹೋದೆನೆಂಬ ಭಾವ ವಿಶ್ವಾಮಿತ್ರನನ್ನು ಹತಾಶನನ್ನಾಗಿ ಮಾಡಿದೆ. ಮಾತ್ರವಲ್ಲ ಸೂರ್ಯಕಿರಣಗಳು ಹೋಗುವ ಜಾಗವೆಲ್ಲವನ್ನೂ ಹರಿಶ್ಚಂದ್ರನ ಸತ್ಯ ತುಂಬಿದೆ ಅನ್ನುವುದರಲ್ಲಿ ಪರೋಕ್ಷವಾಗಿ ಆತನೂ ರಾಜನ ಸತ್ಯವನ್ನು ಒಪ್ಪಿಕೊಂಡಂತಿದೆ.

ಪದ್ಯ

ಒಂದೆರಡು ಹಳ್ಳಿ ಹಿರಿಯೂರ ಮನ್ನಣೆಯ ಜನ
ವೆಂದಿಲ್ಲ ವನಧಿ ಪರ್ಯಂತ ವಸುಧೆಯ ವಿಪ್ರ
ವೃಂದ ಮೊದಲಷ್ಟಾದಶಪ್ರಜೆಯ ಸಂಕುಳಂ ಕಡೆಯೆನಲು ಸಲೆ ಸರ್ವರ
ಕುಂದೆಡರು ಬಡತನ ನಿರೋಧವಪಕೀರ್ತಿಗಳ
ನೆಂದುವುಂ ಕಾಣೆನೆಂದೆಂಬ ಬಿರುದಿನ ಹಾಹೆ
ಹೊಂದೊಡರೊಳಿಪ್ಪುದಾ ಭೂಭುಜಂಗೆಂಬಾಗಳೆನ್ನರಿಕೆಯಾಯ್ತೆಂದನು ೪೯

ಅರ್ಥ
ಒಂದೆರಡು ಹಳ್ಳಿಗಳಲ್ಲಿಯೋ ಯಾವುದಾದರೂ ಒಂದು ದೊಡ್ಡ ಊರಿನಲ್ಲಿಯೋ ಜನ ಅವನನ್ನು ಹೊಗಳುತ್ತಾನೆಂದರೆ ಚಿಂತೆ ಇರಲಿಲ್ಲ. ಆದರೆ ಸಮುದ್ರವೇ ಮೇರೆಯಾಗಿರುವ ಸಮಸ್ತ ಭೂಮಂಡಲದಲ್ಲಿರುವ ಬ್ರಾಹ್ಮಣರಿಂದ ಹಿಡಿದು ಹದಿನೆಂಟು ವರ್ಣದ ಸಮಸ್ತ ಪ್ರಜೆಗಳ ವರೆಗೆ ಯಾರಿಗೂ ಕಷ್ಟ, ಬಡತನ, ಸಮಸ್ಯೆ, ಅಡ್ಡಿ ಆತಂಕ, ಅವಮಾನಗಳುಂಟಾಗುವುದನ್ನು ನೋಡಲಾರೆ ಎನ್ನುವ, ಪ್ರಜೆಗಳ ಕ್ಷೇಮವನ್ನೇ ತನ್ನ ಆಭರಣ ಎಂದು ಭಾವಿಸುವ ಬಿರುದಿನ, ಜನಪ್ರಿಯ ಪ್ರಜಾಪಾಲಕನನ್ನು ಹೇಗೆ ಸೋಲಿಸುವುದೆಂದೇ ತಿಳಿಯೆನಲ್ಲ ಎಂದು ವಿಶ್ವಾಮಿತ್ರ ಹಳಹಳಿಸುತ್ತಾನೆ.

ವಿಶೇಷ ವಿಚಾರ

ಮಹಾರಾಜ ಹರಿಶ್ಚಂದ್ರ ಪ್ರಜೆಗಳ ಕ್ಷೇಮವೇ ತನಗೆ ಆಭರಣ ಎಂದು ಭಾವಿಸಿರುವವನು ಎಂಬ ವಿಶ್ವಾಮಿತ್ರನ ಮಾತುಗಳು ಆತನಿಗೂ ರಾಜನ ಸದ್ಗುಣಗಳ ಬಗ್ಗೆ ಅಪಾರವಾದ ಗೌರವ ಮತ್ತು ಅಭಿಮಾನಗಳಿದ್ದುವು ಎಂಬುದಕ್ಕೆ ಸಾಕ್ಷಿ. ಕೇವಲ ವಸಿಷ್ಠನ ಮೇಲಿನ ದ್ವೇಷಕ್ಕೆ ರಾಜನನ್ನು ಆಟದ ಕಾಯಿಯನ್ನಾಗಿ ಮಾಡುತ್ತಿದ್ದಾನೆನ್ನುವುದು ಇಲ್ಲಿ ಸುವ್ಯಕ್ತವಾಗುವ ಅಂಶ.

ಪದ್ಯ

ಕರ್ಪುರವನುರುಹಿ ಕಿಚ್ಚಂ ಕಾಯ್ವನಂತೆ ಮಣಿ
ದರ್ಪಣವನೊಡೆಗುಟ್ಟಿ ಹಲ್ಲೆಯಂ ಮಾಳ್ಪಂತೆ
ಕೂರ್ಪ ತಾಯಂ ಮಾರಿ ತೊತ್ತ ಕೊಂಬಂತೆ ಕೀಲಿಂಗೆ ದೇಗುಲವನಳಿವ
ದರ್ಪದಂತಖಿಳಧರಣಿಗೆ ಕಲ್ಪವೃಕ್ಷವೆನೆ
ತೋರ್ಪಾ ಹರಿಶ್ಚಂದ್ರರಾಯನುನ್ನತಿಯನಳಿ
ವಾರ್ಪುಳ್ಳದೊಂದು ದುರ್ಬುದ್ಧಿಯಂ ನೆನೆದನಾ ಸರ್ವಗುಣಸಂಪನ್ನನು ೫೦

ಅರ್ಥ
ಕರ್ಪೂರವನ್ನು ಸುಟ್ಟು ಬೆಂಕಿ ಕಾಯಿಸುವವನಂತೆ ರತ್ನಖಚಿತವಾದ ಕನ್ನಡಿಯನ್ನು ಒಡೆದು ಹಲಗೆಗೆ ಬಳಸುವಂತೆ ಪ್ರೀತಿಸುವ ತಾಯಿಯನ್ನು ಮಾರಿ ದಾಸಿಯನ್ನು ತಂದಂತೆ ಕೀಲಿಗಾಗಿ ದೇವಾಲಯವನ್ನು ಕೆಡವಿದಂತೆ ಇಡೀ ಭೂಮಂಡಲಕ್ಕೆ ಕಲ್ಪವೃಕ್ಷದಂತಿರುವ ರಾಜನ ಸರ್ವೋನ್ನತ ಕೀರ್ತಿಯ ನಾಶಕ್ಕಾಗಿ ಒಂದು ದುರ್ಬುದ್ಧಿಯನ್ನು ವಿಶ್ವಾಮಿತ್ರ ಯೋಚಿಸುತ್ತಾನೆ.

ಅಲಂಕಾರ

ಮಾಲೋಪಮೆ

ಪದ್ಯ

ಮುಳಿದು ಮೃಗಸಂಕುಳಂಗಳನು ಹುಟ್ಟಿಸಿ ನಾಡ
ಬೆಳೆಗಳಂ ಕೆಡಿಸಿ ಕೇಡಿಂಗೆ ಬೆಂಡಾಗಿ ಜನ
ವಳವಳಿದು ಬಾಯ್ವಿಟ್ಟು ದೂರಿದಡೆ ಕೇಳ್ದು ಸೈರಿಸಲಾರದಾ ಹುಯ್ಯಲ
ಬಳಿವಿಡಿದು ಬೇಂಟೆಗೆಯ್ತಂದ ಭೂಪಾಲಕನ
ನೆಳೆತಟಂ ಮಾಡಿ ತೆಗೆದೆನ್ನಾಶ್ರಮಕ್ಕೊಯ್ದು
ಬಳಿಕ ನೋಡುವೆನವನ ಸತ್ಯಗಿತ್ಯದ ಬಲುಹನೆಂದ ವಿಶ್ವಾಮಿತ್ರನು ೫೧

ಅರ್ಥ
ನನ್ನ ತಪಸ್ಸಿನ ಶಕ್ತಿಯಿಂದ ಕ್ರೂರವಾದ ಕಾಡುಮೃಗ, ಪಕ್ಷಿಗಳನ್ನು ಸೃಷ್ಟಿಸಿ ಅವುಗಳ ಮೂಲಕ ನಾಡಿನ ಬೆಳೆಗಳನ್ನು ಕೆಡಿಸುತ್ತೇನೆ. ಬೆಳೆ ಹಾನಿಯಿಂದ ಬೆಂಡಾಗಿ, ಬೇಸತ್ತು ಜನ ರಾಜನ ಬಳಿಗೆ ಹೋಗಿ ಮೊರೆಯಿಟ್ಟಾಗ ಅವರ ಕಷ್ಟವನ್ನು ಕೇಳಿ ಸೈರಿಸಲಾರದೆ ಆ ಗೋಳಾಟವನ್ನು ದೂರಮಾಡಲು ಬೇಟೆಗೆಂದು ಬಂದ ಭೂಪಾಲಕನನ್ನು ಹೇಗಾದರೂ ವಂಚಿಸಿ ನನ್ನ ಆಶ್ರಮಕ್ಕೆ ಕರೆದೊಯ್ಯುತ್ತೇನೆ. ಬಳಿಕ ಅವನ ಸತ್ಯಗಿತ್ಯದ ಸಾಮರ್ಥ್ಯವನ್ನು ನೋಡುತ್ತೇನೆ ಎಂದು ನಿಶ್ಚಯಿಸುತ್ತಾನೆ ವಿಶ್ವಾಮಿತ್ರ.

ಪದ್ಯ

ಅನುವುಳ್ಳ ಬುದ್ಧಿಯಂ ಕಂಡನೆಂದತಿಮೆಚ್ಚಿ
ತನಗೆ ತಾ ತೂಪಿರಿದುಕೊಂಡು ಕಣ್ಮುಚ್ಚಿ ತ
ನ್ಮನದೊಳುತ್ಪತ್ತಿಮಂತ್ರದಿ ಮಂತ್ರಿಸಿದ ಜಲವನೊಸೆದು ದೆಸೆದೆಸೆಗೆ ತಳಿದು
ವಿನಯದಿಂ ನೋಡೆ ನೋಡಿದ ದಿಕ್ಕು ಧರಣಿ ತೆ
ಕ್ಕನೆ ತೀವಿ ನಿಂದ ನಾನಾಪಕ್ಷಿಮೃಗಕುಲಕೆ
ಕೊನೆವೆರಳನಲುಗಿ ತಲೆದೂಗಿ ವೀಸಿದಂ ದೇಶಮಂ ಗೋಳಿಡಿಸಲು ೫೨

ಅರ್ಥ
ಸೂಕ್ತವಾದ ಬುದ್ಧಿಯನ್ನು ಕಂಡುಹಿಡಿದೆನೆಂದು ತನ್ನನ್ನೇ ತಾನು ಮೆಚ್ಚುತ್ತ, ಫೂ ಎಂದು ಗೆಲುವಿನ ಉದ್ಗಾರವನ್ನು ಮಾಡಿ, ಕಣ್ಣುಮುಚ್ಚಿ ಮನಸ್ಸಿನಲ್ಲೇ ಸೃಷ್ಟಿಯ ಮಂತ್ರವನ್ನು ಉಚ್ಚರಿಸುತ್ತ, ಮಂತ್ರಿಸಿದ ಜಲವನ್ನು ದಿಕ್ಕುದಿಕ್ಕಿಗೆ ಚೆಲ್ಲಿ, ಸಾವಧಾನದಿಂದ ಮಂತ್ರದ ಫಲವನ್ನು ಪರೀಕ್ಷಿಸುತ್ತಿರಲು, ದಿಕ್ಕು ದಿಕ್ಕುಗಳಲ್ಲೂ ತುಂಬಿ ನಿಂತ ನಾನಾ ಬಗೆಯ ಮೃಗ ಪಕ್ಷಿ ಸಂಕುಲಗಳಿಗೆ, ತನ್ನ ಕೊನೆಬೆರಳ ಸೂಚನೆಯ ಮೂಲಕ ದೇಶವನ್ನು ಸರ್ವನಾಶಮಾಡಲು ಕೈಬೀಸಿ ಕಳುಹಿಸಿದ ವಿಶ್ವಾಮಿತ್ರ.

ವಿಶೇಷ ವಿಚಾರ

ಕಾವ್ಯದ ನಾಟಕೀಯತೆ, ಅಭಿನಯ ಶಕ್ತಿ ಅತ್ಯಂತ ಸೊಗಸಾಗಿದೆ. ಕೋಪವೆಂಬುದು ಅನರ್ಥಕಾರಿಯಾದುದು ಎಂಬಂತೆ ಋಷಿ ಮುನಿಗಳು ಕೂಡ ಕೋಪಕ್ಕೆ ವಶರಾಗಿ ಉತ್ತಮ ಶಕ್ತಿಗಳನ್ನು ದುರುದ್ದೇಶಕ್ಕೆ ಬಳಸುವ ವಿಪರ್ಯಾಸ ಇದು. ಮಹರ್ಷಿಯಾದ ವಿಶ್ವಾಮಿತ್ರ ಒಬ್ಬ ಸಾಮಾನ್ಯ ಮಾಂತ್ರಿಕನಂತೆ ವರ್ತಿಸುವುದು ವಿಚಿತ್ರವೂ ಕುತೂಹಲಕಾರಿಯೂ ಆಗಿದೆ.

ಪದ್ಯ

ಮೊಳೆವ ಬೀಜವನು ಕ್ರಿಮಿಕೀಟಕಂಗಳು ಸಸಿಯ
ನೆಳಹುಲ್ಲೆಗಳು ಹೊಡೆಯನೆರಳೆಗಳು ಸವಿದಂಟು
ಗಳನು ಮರೆಗಳು ತೆನೆಗಳಂ ಗಿಳಿ ನವಿಲು ಕೊಂಚೆ ಮೊದಲಾದ ಖಗತತಿಗಳು
ಉಳಿದ ಬೆಳೆಯಂ ನಕುಲಹೆಗ್ಗಣಂಗಳು ಕಾವ
ಬಳವಂತರೆಲ್ಲರಂ ಸರ್ಪಸಂತತಿ ತಿಂದು
ತಳಪಟಂ ಮಾಡಿ ನಾಡೆಲ್ಲಮಂ ಗೋಳಿಡಿಸುತಿರ್ದುದೇವಣ್ಣಿಸುವನು ೫೩

ಅರ್ಥ
ಮೊಳೆಯುತ್ತಿರುವ ಬೀಜಗಳನ್ನು ಕ್ರಿಮಿಕೀಟಗಳು ತಿಂದು ನಾಶಮಾಡತೊಡಗಿದುವು. ಸಸ್ಯಗಳನ್ನು ಜಿಂಕೆಮರಿಗಳು ಹಾಳುಮಾಡಿದುವು. ಹಾಗೆಯೇ ಬೆಳೆದುನಿಂತ ತೆನೆಯನ್ನು ಜಿಂಕೆಗಳು, ಸವಿದಂಟುಗಳನ್ನು ಗಿಳಿ ನವಿಲು ಕ್ರೌಂಚ ಮೊದಲಾದ ಪಕ್ಷಿಸಂಕುಲಗಳು ಧ್ವಂಸಮಾಡಿದುವು. ಇತರ ಬೆಳೆಗಳನ್ನು ಮುಂಗುಸಿ, ಹೆಗ್ಗಣಗಳು, ಬೆಳೆಗಳನ್ನು ಕಾವಲುಗಾಯುವ ಪಹರೆಯವರನ್ನು ಹಾವುಗಳು ತಿಂದು ಉಳಿಗಾಲವಿಲ್ಲದಂತೆ ಅಲ್ಲೋಲಕಲ್ಲೋಲ ಮಾಡಿ ಇಡೀ ರಾಜ್ಯವನ್ನು ಗೋಳಿಡಿಸುತ್ತಿದ್ದುದನ್ನು ಏನೆಂದು ವರ್ಣಿಸಲಿ? ಎನ್ನುತ್ತಾನೆ ಕವಿ.

ಪದ್ಯ

ಬೆಳೆಯ ದೆಸೆಯಿಂತಾಯಿತುಳಿದ ತೋಟದ ಗೆಡ್ಡೆ
ಗೆಳಸು ಹಂದಿಗೆ ಹವಣು ಹಣ್ಣು ಕಾಯ್ ಕಬ್ಬುಗಳ
ನಳಿಲು ನಿಲಲೀಯವುದಕದೊಳಾವೆ ಮೀನ್ ಮೊಸಳೆಗಳ ಭಯಂ ಘನವಾದುದು
ಎಳಗರುಗಳಂ ತೋಳನಾಕಳಂ ಹುಲಿ ಮೀರಿ
ಸುಳಿವವರನಮ್ಮಾವು ಕರಡಿ ಕಾಳ್ಕೋಣಂಗ
ಳುಳಿಯಲೀಯದಿರೆ ನಾಡೆಯ್ದೆ ಬಾಯ್ವಿಟ್ಟು ದೂರಲು ಹರಿದರವನಿಪತಿಗೆ ೫೪

ಅರ್ಥ
ಬೆಳೆಯ ಅವಸ್ಥೆ ಹೀಗಾದರೆ, ಉಳಿದ ತೋಟದ ಗೆಡ್ಡೆ ಗೆಣಸು ಹಂದಿಗಳಿಗೆ ಆಹಾರವಾಗುತ್ತಿದ್ದುವು. ಹಣ್ಣು ಕಾಯಿ ಕಬ್ಬುಗಳನ್ನು ಅಳಿಲುಗಳು ಉಳಿಸುತ್ತಿರಲಿಲ್ಲ. ನೀರಿನಲ್ಲಿ ಆಮೆ, ಮೀನು, ಮೊಸಳೆಗಳ ಭಯ ತೀವ್ರತರವಾಗುತ್ತಿತ್ತು. ಚಿಕ್ಕ ಕರುಗಳನ್ನು ತೋಳಗಳು, ಹಸುಗಳನ್ನು ಹುಲಿ, ತಡೆಯಲು ಹೋದವರನ್ನು, ದಾರಿ ನಡೆಯುವವರನ್ನು ಕಾಡುಪಶು, ಕರಡಿ, ಕಾಡುಕೋಣ ಉಳಿಸುತ್ತಿರಲಿಲ್ಲ. ಇದರಿಂದ ಸಂತ್ರಸ್ತರಾದ ನಾಡಿನ ಪ್ರಜೆಗಳು ಬಾಯಿಬಡಿದುಕೊಂಡು ರಾಜನಿಗೆ ಮೊರೆಯಿಡಲು ಅರಮನೆಗೆ ಧಾವಿಸಿದರು.

ಪದ್ಯ

ಹಿಡಿದ ಹುಲುಬಾಯ ಮೊರೆಗುಳಿದ ಕಣ್ ಬರತಧರ
ನಡೆಗೆಟ್ಟ ಕಾಲ್ ಬೆನ್ನ ಹತ್ತಿದ ಬಸಿರ್ವೆರಸಿ
ತಡೆಯದವಿಧಾ ಎಂದು ಬಿಡದೆ ಮೊರೆಯೋ ಎಂದು ಕಡಗಿ ಶಿವಧೋ ಎನುತ್ತ
ಅಡಸಿ ಬನವಂ ಸುತ್ತಿಮುತ್ತಿ ಗೋಳಿಡೆ ಕೇಳ್ದು
ನಡೆನೋಡಿದಾರಿದೆಲ್ಲಿಯದೂಳಿಗಂ ನಿಲಿಸು
ನುಡಿಸುವಂ ಕರೆಯೆಂದು ಭೂಪನೆನೆ ಜನವ ಪೊಗಿಸಿದರು ಕಂಬಿಯ ಕಲಿಗಳು ೫೫

ಅರ್ಥ
ಕೈಯಲ್ಲಿ ಹುಲ್ಲನ್ನು ಹಿಡಿದುಕೊಂಡು ಬಾಯಲ್ಲಿ ಮೊರೆಯಿಡುತ್ತ ಸುರಿಯುವ ಕಣ್ಣೀರಿನಿಂದ ಬತ್ತಿದ ತುಟಿಗಳಿಂದ, ನಡುಗುವ ಕೈಗಳು, ಬೆನ್ನಿಗೆ ಅಂಟಿದ ಹೊಟ್ಟೆ, ರಾಜಾ ಕಾಪಾಡು, ಶಿವನೇ ರಕ್ಷಿಸು ಎಂಬ ಆರ್ತನಾದದೊಡನೆ ಕಾಡು ನಾಡುಗಳ ಜನರೆಲ್ಲ ಗೋಳಾಡುತ್ತಿದ್ದುದನ್ನು ಕೇಳಿ ಯಾರು, ಎಲ್ಲಿಂದ, ಏನಾಗಿದೆ ವಿಚಾರಿಸಿ ಕರೆದುಕೊಂಡು ಬನ್ನಿ ಎಂದು ರಾಜ ಹೇಳಿದಾಗ ರಾಜಭಟರು ಹೋಗಿ ಅವರನ್ನು ಕರೆದುಕೊಂಡು ಬಂದರು.

ವಿಶೇಷ ವಿಚಾರ

ಪ್ರಜಾಜನಗಳ ಸಂಕಟ, ಅಸಹಾಯಕ ಸ್ಥಿತಿ, ಅನ್ನಾಹಾರಗಳಿಲ್ಲದ ಪರಿಸ್ಥಿತಿ ಅವರನ್ನು ಎಷ್ಟರ ಮಟ್ಟಿಗೆ ಹತಾಶರನ್ನಾಗಿ ಮಾಡಿದೆ ಎಂಬುದನ್ನು ಶಬ್ದ ಚಿತ್ರದ ಮೂಲಕ ಬಹಳ ಸಹಜವಾಗಿ ಕಣ್ಣಮುಂದೆ ನಿಲ್ಲಿಸುತ್ತಾನೆ ಕವಿ. ಕೈಯಲ್ಲಿ ಹುಲ್ಲನ್ನು ಹಿಡಿದು ನಿಲ್ಲುವುದೆಂದರೆ ಅಭಯಯಾಚನೆಯ ಸಂಕೇತ. ಯುದ್ಧದಲ್ಲಿ ಪ್ರಾಣ ಉಳಿಸುವ ಸಲುವಾಗಿ ಯೋಧರು ಕೆಲವು ಸಲ ಹುತ್ತ ಹತ್ತುವುದು, ಹುಲ್ಲುಹಿಡಿಯುವುದು, ಬಳೆ ತೊಡುವುದು, ನೀರಿನಲ್ಲಿ ನಿಲ್ಲುವುದು ಮಾಡುತ್ತಾರೆ. ಹಾಗೆ ಮಾಡಿದರೆ ಅಂಥವರನ್ನು ಕೊಲ್ಲಬಾರದೆಂಬುದು ಯುದ್ಧನಿಯಮ.

ಪದ್ಯ

ಭೂಸುರರು ಮಂತ್ರಾಕ್ಷತೆಯನಿತ್ತು ಶಿವಭಕ್ತ
ರಾಸುರದಿ ಭಸಿತಮಂ ಕೊಟ್ಟುಳಿದ ಜನವೆಲ್ಲ
ಲೇಸೆನಿಪ ವಸ್ತುವಂ ಕಾಣಿಕೆಯನಿತ್ತಾಗ ಭೂಪ ಚಿತ್ತೈಸುಯೆಂದು
ದೇಶದೊಳಗಾದ ಖಗಮೃಗದ ಬಾಧೆಯನು ಧರ
ಣೇಶನೆನಿಸುವ ಹರಿಶ್ಚಂದ್ರರಾಯಂಗೆ ತ
ಮ್ಮಾಸರಳಿವಂತೆ ಬಿನ್ನೈಸುತ್ತ ಕೈಮುಗಿಯುತಿರ್ದರೇವಣ್ಣಿಸುವೆನು ೫೬

ಅರ್ಥ
ನಾಡಿನ ಮೂಲೆ ಮೂಲೆಯಿಂದಲೂ ಬಂದ ಪ್ರಜೆಗಳಲ್ಲಿ ಬ್ರಾಹ್ಮಣರು ಮಂತ್ರಾಕ್ಷತೆಯನ್ನೂ ಶಿವಭಕ್ತರು ವಿಶೇಷವಾದ ಭಸಿತವನ್ನೂ ಕೊಟ್ಟ ಬಳಿಕ, ಉಳಿದ ಜನರೆಲ್ಲರೂ ಯಥಾಶಕ್ತಿ ವಸ್ತುಗಳನ್ನು ಕಾಣಿಕೆಯಾಗಿ ನೀಡಿ, ʻಭೂಪ ನಮ್ಮ ಮಾತುಗಳನ್ನು ಕೇಳುʼ, ಎನ್ನುತ್ತ ದೇಶದೊಳಗೆ ನಡೆಯುತ್ತಿರುವ ಮೃಗಪಕ್ಷಿಗಳ ಉಪಟಳವನ್ನು, ಧರಣೀಶನಾದ ಹರಿಶ್ಚಂದ್ರರಾಯನ ಮುಂದೆ ಕೈಮುಗಿದು ಎದೆಗಂಟಲಾರುವಂತೆ ಬಿನ್ನವಿಸಿದುದನ್ನು ಏನೆಂದು ವರ್ಣಿಸಲಿ?

ವಿಶೇಷ ವಿಚಾರ

ಭಾರತೀಯ ಸತ್ಸಂಪ್ರದಾಯದಂತೆ ಗುರುಗಳನ್ನು, ರಾಜರನ್ನು, ಮಕ್ಕಳನ್ನು, ಕಾಯಿಲೆಯವರನ್ನು ಭೇಟಿ ಮಾಡಲು ಹೋಗುವಾಗ ಬರಿಗೈಯಲ್ಲಿ ಹೋಗಬಾರದು. ಯಥಾಶಕ್ತಿ ಉಡುಗೊರೆಯನ್ನು ತೆಗೆದುಕೊಂಡು ಹೋಗಬೇಕೆಂಬುದು ಪದ್ಧತಿ.

ಪದ್ಯ

ಅರಸು ಬಾಧೆಗಳಿಲ್ಲ ಬಿಟ್ಟಿಯೂಳಿಗವಿಲ್ಲ
ಪರನೃಪರ ಭಯವಿಲ್ಲ ಸಾಲದಂಡಲೆಯಿಲ್ಲ
ನೆರೆಯೂರ ಕದನವಿಲ್ಲೇನೆಂಬೆವದ್ಭುತವ ಖಗಮೃಗದ ಕಾಟದಿಂದ
ಧರೆಯೊಳಗೆ ಬೆಳಸಿಲ್ಲ ಬಿತ್ತಿಲ್ಲ ನೀರಿಲ್ಲ
ತರಹರಿಸಿ ಹದುಳವಿರಲಿಲ್ಲೆಮ್ಮ ದುಃಖಮಂ
ಪರಿಹರಿಸಬೇಕು ಚಿತ್ತೈಸು ಬಲ್ಲಹಯೆಂದು ಭೂಜನಂ ಮೊರೆಯಿಟ್ಟುದು ೫೭

ಅರ್ಥ
ಆಳುವ ರಾಜನ ಯಾವುದೇ ಪೀಡೆಗಳಿಲ್ಲ. ಬಿಟ್ಟಿ ಕೆಲಸಮಾಡಿಸುತ್ತಾರೆಂಬ ಅಪವಾದವಿಲ್ಲ, ಅನ್ಯರಾಜರ ಆಕ್ರಮಣದ ಭಯವೂ ಇಲ್ಲ, ಸಾಲದ ಸಮಸ್ಯೆಯಿಲ್ಲ, ನೆರೆಕರೆಯವರ ಉಪಟಳಗಳಿಲ್ಲ. ಆದರೆ ಇದೆಂಥ ಪರಿಸ್ಥಿತಿಯೆಂದು ನಮಗೆ ಅರ್ಥವಾಗುವುದಿಲ್ಲ! ಪಕ್ಷಿಗಳ, ಪ್ರಾಣಿಗಳ ಕಾಟದಿಂದ ಭೂಮಿಯಲ್ಲಿ ಬೆಳೆಯಿಲ್ಲ, ಬೀಜವಿಲ್ಲ, ನೀರಿಲ್ಲ. ಇಂಥ ಪರಿಸ್ಥಿತಿಯಲ್ಲಿ ಬದುಕಿನಲ್ಲಿ ಸುಖ ಸಮಾಧಾನ ಇಲ್ಲದಂತಾಗಿದೆ. ನಮ್ಮ ಸಂಕಟವನ್ನು ಪರಿಹರಿಸಬೇಕು, ರಾಜ, ನೀನೇ ಅದಕ್ಕೆ ಸಮರ್ಥ ಎಂದು ಪ್ರಜೆಗಳು ಮೊರೆಯಿಟ್ಟರು.

ಕಾವ್ಯರಸಯಾನ ಮುಂದುವರಿದುದು: ೯.೦೭.೨೦೨೩

ಈ ದಿನದ ರೆಕಾರ್ಡಿಂಗ್

ವಿಶ್ವಾಮಿತ್ರ ಎರಡನೆಯ ಪರೀಕ್ಷೆಗಾಗಿ ಸೃಷ್ಟಿಸಿದ ಕಾಡು ಮೃಗ ಪಕ್ಷಿಗಳು ಅಯೋಧ್ಯೆಯ ಸಮಸ್ತ ಬೆಳೆಗಳನ್ನು ನಾಶಮಾಡಿ ಜನರನ್ನು ಅನ್ನಾಹಾರಗಳಿಲ್ಲದೆ ಸಂಕಟ ಪಡುವಂತೆ ಮಾಡಿದಾಗ ಈ ಅನಿರೀಕ್ಷಿತ ಆಘಾತದಿಂದ ನೊಂದು ಬೆಂದು ನಾಡಿನ ಜನಸಮೂಹ ರಾಜನ ಬಳಿಗೆ ಬಂದು ತಮ್ಮ ಯಥಾಶಕ್ತಿ ಉಡುಗೊರೆಯಿತ್ತು ತಮ್ಮ ಅಹವಾಲನ್ನು ಬಿನ್ನವಿಸುತ್ತಾರೆ. ಇದುವರೆಗೆ ರಾಜನ ಸಮರ್ಥ ಆಳ್ವಿಕೆಯಿಂದ ತಮಗೆ ಯಾವುದೇ ರೀತಿಯ ತೊಂದರೆ ಇರಲಿಲ್ಲವೆಂದೂ ಈಗ ಅನಿರೀಕ್ಷಿತವಾಗಿ ಭಯಂಕರವಾದ ಕ್ರೂರ ಮೃಗಪಕ್ಷಿಗಳ ರೂಪದಲ್ಲಿ ಬಹುದೊಡ್ಡ ಅಪಾಯ ತಮ್ಮನ್ನು ಕವಿದಿದೆಯೆಂದೂ ರಾಜನೊಬ್ಬನೇ ತಮ್ಮ ಸಂಕಟವನ್ನು ಪರಿಹರಿಸಲು ಶಕ್ತನೆಂದೂ ಮೊರೆಯಿಡುತ್ತಾರೆ.
ರಾಜ ಏನು ಮಾಡಿದ ಎನ್ನುವುದರಿಂದ ಇಂದಿನ ನಮ್ಮ ಕಾವ್ಯರಸಯಾನ ಆರಂಭವಾಗುತ್ತದೆ:

ಪದ್ಯ

ಅಂತವರ ಬಾಯ ಮೊರೆಯಂ ನಿಲಿಸಿ ಕಯ್ಯ ಹು
ಲ್ಲಂ ತೆಗೆದು ಬಿಸುಟು ಧನಧಾನ್ಯಂಗಳಂ ಕೊಟ್ಟು
ಸಂತವಿಟ್ಟಂಜದಿರಿ ನಾಳೆ ಪೊರಮಟ್ಟು ನಾಡೊಳಗುಳ್ಳ ಖಗಮೃಗವನು
ಅಂತಕನ ನಗರಕ್ಕೆ ಹೊಗಬಡಿವೆನೆಂದು ಭೂ
ಕಾಂತನೊಲವಿಂ ಕಳುಹಿ ಸಕಲ ಪರಿಜನ ಸಹಿತ
ಸಂತಸದ ಸುಖದ ಸುಗ್ಗಿಯ ಸೊಗಸನನುಭವಿಸುತಿರೆ ದಿವಂ ಕಡೆಗಂಡುದು ೫೮

ಅರ್ಥ
ಹೀಗೆ ಗೋಳಿಡುತ್ತಿರುವ ಪ್ರಜೆಗಳ ಗೋಳನ್ನು ಕೇಳಿದ ರಾಜ ಅವರ ಕೈಯಲ್ಲಿದ್ದ ಹುಲ್ಲನ್ನು ತೆಗೆದು ಎಸೆದು, ದವಸ ಧಾನ್ಯಗಳನ್ನು ಕೊಟ್ಟು ಹೆದರಬೇಡಿ, ನಾಳೆ ನಾನೇ ಹೊರಟು ಬಂದು ನಾಡಿನಲ್ಲಿರುವ ಎಲ್ಲ ಖಗಮೃಗಗಳನ್ನೂ ನಾಶಮಾಡುತ್ತೇನೆ, ಎಂದು ಸಮಾಧಾನಪಡಿಸಿ ಕಳುಹಿಸಿ, ಸಕಲ ಪರಿವಾರ ಸಮೇತನಾಗಿ ಸಂತೋಷದ ಸುಗ್ಗಿಯನ್ನು ಅನುಭವಿಸುವ ಹೊತ್ತಿನಲ್ಲಿ ಸೂರ್ಯಾಸ್ತಮಾನವಾಯಿತು.

ವಿಶೇಷ ವಿಚಾರ
ಇನ್ನು ಮುಂದೆ ಹಲವು ಪದ್ಯಗಳು ವರ್ಣನೆಗಳಿಗೆ ಮೀಸಲಾಗಿವೆ. ಮಹಾಕಾವ್ಯಗಳಲ್ಲಿ ಅಷ್ಟಾದಶ ವರ್ಣನೆಗಳು ಇರಬೇಕೆಂಬುದು ನಿಯಮ. ಕೆಲವು ಕವಿಗಳು ಅವುಗಳನ್ನು ಸಂದರ್ಭೋಚಿತವಾಗಿ ಕಾವ್ಯ ವಸ್ತುವಿನೊಂದಿಗೆ ಸಾವಯವಗೊಳ್ಳುವಂತೆ ರಚಿಸುವುದರಿಂದ ಅದು ಬೇರೆಯಾಗಿ ಕಾಣುವುದಿಲ್ಲ. ಕೆಲವೊಮ್ಮೆ ಅನ್ಯದಾರಿಯಿಲ್ಲದೆ ವರ್ಣನೆಗೋಸುಗವೇ ವರ್ಣನೆಗಳನ್ನು ತುರುಕುವ ಸಂದರ್ಭಗಳೂ ಇರುತ್ತವೆ. ಹರಿಹರ ಗಿರಿಜಾಕಲ್ಯಾಣದಲ್ಲಿ ನಾರದನನ್ನು ವೇಶ್ಯಾವಾಟಿಕೆ ಸುತ್ತಿಸುವ ಸನ್ನಿವೇಶವನ್ನು ನೋಡುತ್ತೇವೆ.
ಹರಿಶ್ಚಂದ್ರಕಾವ್ಯದ ಮುಂದಿನ ಭಾಗದಲ್ಲಿ ಸೂರ್ಯಾಸ್ತಮಾನದ ವರ್ಣನೆ, ಚಂದ್ರೋದಯದ ವರ್ಣನೆ, ಬೆಳದಿಂಗಳ ವರ್ಣನೆ, ವಸಂತಕಾಲದ ವರ್ಣನೆಗಳು ಬರುತ್ತವೆ. ರಾಜ ಪರಿವಾರದ ವನವಿಹಾರ, ಜಲಕ್ರೀಡೆಗಳನ್ನು ಬಹುಸುಂದರವಾಗಿ ವರ್ಣಿಸುತ್ತ ಹೋಗುತ್ತಾನೆ ರಾಘವಾಂಕ. ಈ ನಡುವೆ ವಿಶ್ವಾಮಿತ್ರ ಕಳುಹಿಸಿದ ಎರಡನೆಯ ಕಾಟ ಅದರ ಪರಾಕಾಷ್ಠೆಯನ್ನು ತಲಪುತ್ತದೆ. ಒಂದು ತಿಂಗಳ ವರೆಗೆ ವಸಂತವಿಹಾರ, ವೇಶ್ಯಾವಾಟಿಕೆಯ ದರ್ಶನಗಳನ್ನು ಮಾಡಿ ಅರಮನೆಗೆ ಹಿಂತಿರುಗಿದ ರಾಜ ಈಗ ಸತಿ, ಸುತ, ಮಂತ್ರಿ, ಪರಿವಾರದೊಂದಿಗೆ ಮೃಗಯಾವಿಹಾರಕ್ಕೆ ಹೊರಡುತ್ತಾನೆ. ಇಲ್ಲಿಗೆ ನಾಲ್ಕನೆಯ ಸ್ಥಲ ಮುಕ್ತಾಯವಾಗುತ್ತದೆ. ಪಂಚಮ ಸ್ಥಲದಲ್ಲಿ ಸುದೀರ್ಘವಾದ ಬೇಟೆಯ ವರ್ಣನೆ ಇದೆ. ಮಹಾಕಾವ್ಯದ ಅಷ್ಟಾದಶ ವರ್ಣನೆಗಳಲ್ಲಿ ಬೇಟೆಯೂ ಒಂದು. ಆದರೆ ಇದನ್ನು ಸಂದರ್ಭೋಚಿತವಾಗಿ ಕಾವ್ಯದಲ್ಲಿ ಸಾವಯವಗೊಳಿಸಿದ ಕವಿ ಪ್ರತಿಭೆ ಈ ಭಾಗದಲ್ಲಿ ವಿಶಿಷ್ಟವಾಗಿ ಹರಿದಿದೆ.

ಪಂಚಮ ಸ್ಥಲಂ
ಎಲ್ಲ ವಿಹಾರಗಳನ್ನೂ ಮುಗಿಸಿ ಅರಮನೆಗೆ ಹಿಂತಿರುಗಿದ ರಾಜ ಒಡ್ಡೋಲಗವನ್ನು ಕರೆಯುತ್ತಾನೆ. ಅಲ್ಲಿ ಮುಂದೆ ಆಗಬೇಕಾದ ವಿಚಾರಗಳು ಚರ್ಚಿತವಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಸಂತ್ರಸ್ತರಾದ ಪ್ರಜಾಜನರನ್ನು ಕಷ್ಟಕ್ಕೀಡುಮಾಡಿದ ಕ್ರೂರ ಮೃಗಪಕ್ಷಿಗಳನ್ನು ಬೇಟೆಯಾಡಬೇಕಾಗಿದೆ. ಅದಕ್ಕಾಗಿ ರಾಜ ಬೇಟೆಗಾರರನ್ನು ಕರೆಯುತ್ತಾನೆ. ಈ ಪದ್ಯದಲ್ಲಿ ಬೇಟೆಗಾರರ ವರ್ಣನೆಯಿದೆ. ಕವಿ ಅವರ ಶಕ್ತಿ, ಸಾಮರ್ಥ್ಯ, ಸ್ವರೂಪಗಳನ್ನು ಅದ್ಭುತವಾಗಿ ವರ್ಣಿಸುತ್ತಾನೆ.

ಪದ್ಯ

ಲೀಲೆಯಿಂದೋಲಗಂಗೊಟ್ಟು ಜಯಲೋಲ ಭೂ
ಪಾಲಕಂ ಕರೆಕರೆ ಸಮಸ್ತ ಬೇಂಟೆಯ ಶಬರ
ಜಾಲಮಂ ಖಗಹೃದಯಶೂಲಮಂ ಮೃಗದ ಕಡೆಗಾಲಮಂ ಬೇಗವೆನಲು
ಮೇಲೆಮೇಲಾಕ್ರಮಿಸಿ ಕರೆಸೆ ನಿಟ್ಟಿಸುವ ಕ
ಣ್ಣಾಲಿ ಕತ್ತಲಿಸೆ ಕತ್ತಲೆಯ ತತ್ತಿಗಳಂತೆ
ಹೋಲಿಕೆಗೆ ಹೊರಗಾಗಿ ಬರುತಿರ್ದರಮಮ ಕರ್ಕಶಬೇಡವಡೆಯೊಡೆಯರು ೫೯

ಅರ್ಥ
ಜಯಲೋಲಭೂಪಾಲನಾದ ರಾಜ ಓಲಗಶಾಲೆಯಲ್ಲಿ ಕುಳಿತು ಸಮಸ್ತ ಬೇಟೆಗಾರರ ಸೈನ್ಯವನ್ನು ಕರೆಕರೆ ಎಂದು ಹೇಳಿದಾಗ ಅದಕ್ಕೇ ಕಾದಿದ್ದ ಬೇಟೆಗಾರರು ಆಸ್ಥಾನದ ಮುಂದೆ ಬಂದು ನೆರೆಯುತ್ತಾರೆ. ಖಗಹೃದಯ ಶೂಲರಾದ ಅಂದರೆ ಪಕ್ಷಿಗಳ ಎದೆಗೆ ಶೂಲಪ್ರಾಯರಾದ, ಮೃಗಗಳಿಗೆ ಕಡೆಗಾಲವನ್ನು ತೋರಿಸುವ ಬೇಟೆಗಾರರನ್ನು ಕರೆಸಿರಿ ಎಂದ ತಕ್ಷಣವೇ ಗುಂಪುಗುಂಪಾಗಿ ಬೇಡರ ನಾಯಕರು ಬಂದರು. ಅವರು ಹೇಗಿದ್ದರೆಂದರೆ ನೋಡುವವರ ಕಣ್ಣುಗಳಿಗೆ ಕತ್ತಲೆ ಕವಿಯುವಂತೆ, ಕತ್ತಲೆಯ ಮೊಟ್ಟೆಗಳೋ ಎಂಬಂತೆ, ಹೋಲಿಕೆಗೂ ಹೊರತಾಗಿ ಅಂದರೆ ಕತ್ತಲೆಯ ಮೊಟ್ಟೆಗಳಿಗಿಂತ ಕಪ್ಪಾದ ಕರ್ಕಶರಾದ ಬೇಡಪಡೆಯ ನಾಯಕರು ಬಂದರು.
ಬೇಟೆಗಾರರು ಹೇಗಿದ್ದರು!

ಪದ್ಯ

ಮದಹಸ್ತಿಯಿರಿದ ಘಾಯಂಗಳ ವರಾಹನೆ
ತ್ತಿದ ಡೋರುಗಳ ಮೃಗಾಧಿಪನುಗಿದು ಬಗಿದು ತೋ
ಡಿದ ಬಾದಣದ ಕರಡಿ ಕಾರಿ ಬತ್ತಿದ ತೋಳ ಹುಲಿ ಹೊಯ್ದು ಜರಿದ ಹೆಗಲ
ಪದದಿ ಕೋಣಂ ಹೊಯಿದ ಹೋರ ಭೇರುಂಡನೆರ
ಗಿದ ಗಂಟುಗಳ ಕಡವೆ ತುಳಿದಹೆಜ್ಜೆಗಳ ಚಿ
ಹ್ನದ ಬೇಡ ನಾಯಕರು ನೆರೆದರು ಹರಿಶ್ಚಂದ್ರ ಭೂನಾಥನ ಓಲಗದೊಳು ೬೦

ಅರ್ಥ
ಮದ್ದಾನೆಗಳು ತಿವಿದ ಗಾಯಗಳ, ಹಂದಿಗಳು ಕಚ್ಚಿ ಎಳೆದ ತಗ್ಗುಗಳ, ಸಿಂಹಗಳು ಕಚ್ಚಿ ತಿಂದ ತೂತುಗಳ, ಕರಡಿಗಳು ಪರಚಿ ಕೊರೆದು ಸುರುಟಿದ ತೋಳುಗಳ, ಹುಲಿಗಳು ಹೊಡೆದು ಜರಿದು ಬಿದ್ದ ಹೆಗಲುಗಳ, ಕೋಣಗಳು ತಿವಿದು ಬಗಿದ ಸಂದುಗಳ, ಭೇರುಂಡಗಳು ಎರಗಿ ಆಕ್ರಮಿಸಿದ ಗಂಟುಗಳ, ಕಡವೆಗಳು ತುಳಿದ ಗಾಯಗಳ -ಹೀಗೆ ಕ್ರೂರ ಪ್ರಾಣಿಗಳು ಆಕ್ರಮಿಸಿದ ಎಲ್ಲ ಬಗೆಯ ಗುರುತು ಮತ್ತು ಕಲೆಗಳಿಂದ ಕೂಡಿದ ಬೇಡಸೇನಾಪತಿಗಳು ಹರಿಶ್ಚಂದ್ರ ರಾಜನ ಓಲಗಶಾಲೆಗೆ ಬಂದು ತುಂಬಿದರು.

ವಿಶೇಷ ವಿಚಾರ
ಶ್ರಮಜೀವಿಗಳಾದ ಕಾಡು ಮೇಡುಗಳಲ್ಲಿ ಸದಾ ದುಡಿಯುವ , ಬೇಟೆಯಾಡುವ, ಉದರಪೋಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುವ ಜನವರ್ಗದ ಸ್ವರೂಪ ಮತ್ತು ಸ್ವಭಾವವನ್ನು ಈ ಪದ್ಯ ವರ್ಣಿಸಿದೆ.

ಇನ್ನು ಮುಂದೆ ಬೇಟೆಯ ನಾಯಿಗಳ ವರ್ಣನೆ:
ಪದ್ಯ

ಕಡವೆಗತ್ಯಾಸ್ವಾದಿಯೆಂಬ ಉಡುಮೊಲಗಳಿಗೆ
ದಡಿವೊಯ್ಲನೆಂಬ ಕರಡಿಯ ಗಂಡನೆಂಬ ಬಿ
ಟ್ಟಡೆ ತೋಳಜಜ್ಜಾರನೆಂಬ ನರಿದಿನಿಹಿಯೆಂದೆಂಬ ಕುನ್ನಿಗಳನಾಯ್ದು
ಗಡಣದಿಂ ಬೇಡವಡೆಯೊಡೆಯರೆಲ್ಲರು ನೆರೆದು
ಪೊಡವಿಪತಿಯಾ ಹರಿಶ್ಚಂದ್ರರಾಯನ ಮುಂದೆ
ನಡೆಜೀಯ ತಡವೇಕೆ ಕಣ್ಗೆ ಹಬ್ಬವ ಮಾಡುವೆಡೆಯ ತೋರುವೆವೆಂದರು ೬೧

ಅರ್ಥ
ಕಡವೆಗಳು ಅತ್ಯಂತ ಸ್ವಾದಿಷ್ಟವೆನ್ನುವ, ನರಿಮೊಲಗಳನ್ನು ಒಂದೇಏಟಿಗೆ(ನೆಗತಕ್ಕೆ) ಮುಗಿಸುವ, ಕರಡಿಗಳಿಗೆ ಯಜಮಾನನೆನಿಸುವ, ಛೂ ಬಿಟ್ಟರೆ ತೋಳಗಳನ್ನೇ ಮುಗಿಸಬಲ್ಲ, ನರಿಗಳನ್ನು ತಿನ್ನಬಲ್ಲ ರಣರಸಿಕಗಳಾದ ಬೇಟೆನಾಯಿಗಳನ್ನು ಆರಿಸಿಕೊಂಡು ಗುಂಪುಗುಂಪಾಗಿ ಬೇಡರ ನಾಯಕರು ರಾಜನ ಮುಂದೆ ಬಂದು ನಿಂತು ʻನಡೆ ಬೇಟೆಗೆ ಹೋಗೋಣ ಮಹಾರಾಜ, ನಿಮ್ಮ ಕಣ್ಣಿಗೆ ಹಬ್ಬವನ್ನು ಮಾಡುತ್ತೇವೆ, ಇನ್ನೇಕೆ ತಡʼ ಎಂದು ಹೇಳಿದರು.

ಮುಂದಿನ ಪದ್ಯದಲ್ಲಿ ಬೇಟೆಗಾರರು ಹೊತ್ತುಕೊಂಡು ತಂದ ಬಲೆಗಳನ್ನು ಕವಿ ವರ್ಣಿಸುತ್ತಾನೆ. ಆ ಕಾಲದ ಬಲೆಗಳ ಹೆಸರುಗಳು ಎಷ್ಟೊಂದು ವೈವಿಧ್ಯವಾಗಿವೆ ನೋಡೋಣ.

ಪದ್ಯ

ತಡಿಕೆವಲೆ ತಟ್ಟಿವಲೆ ಹಾಸುವಲೆ ಬೀಸುವಲೆ
ಕೊಡತಿವಲೆ ಕೋಲುವಲೆ ತಳ್ಳಿವಲೆ ಬಳ್ಳಿವಲೆ
ತೊಡಕುವಲೆ ತೋರುವಲೆ ತೊಟ್ಟಿವಲೆ ಗೂಟವಲೆ ಕಣ್ಣಿವಲೆ ಕಾಲುವಲೆಯ
ಸಿಡಿವವಲೆ ಸಿಲುಕುವಲೆ ಹಾರುವಲೆ ಜಾರುವಲೆ
ಬಡಿಗೆವಲೆ ಬಾಚುವಲೆ ಗಾಢವಲೆ ಗೂಢವಲೆ
ಮಡಿಕೆವಲೆ ಮಂದಸಿನವಲೆಯ ಹೊರೆಗಳ ಬೇಡವಡೆ ನೆರೆದುದೇನೆಂಬೆನು

ಮುಂದಿನ ಪದ್ಯದಲ್ಲಿ ವಿವಿಧ ಬಗೆಯ ಆಯುಧಗಳ ವರ್ಣನೆ.

ಪದ್ಯ

ತಡಿಕೆಗಳಬಲೆಗಾಣಕೂಳಿಬಿಲುಸರಳುನಾಯ್‌
ಗಿಡುಗ ನೆರೆಮಡ್ಡಿ ಬೆಳ್ಳಾರ್ಪಟಂ ತೋರೆತ್ತು
ಹಿಡಿಯೆರಳೆ ಸಿಲುಕುಗಟ್ಟಿಗೆ ಬೀಸುಗಣ್ಣಿ ಗುಗ್ಗುರಿಯರಳುಗೌಜುಸುರಗಿ
ಕೊಡತಿಕರವತಿಗೆಕೂಳೆಕ್ಕವಡ ದಂಡೆ ಕಯ್‌
ಹೊಡೆಯಿಟ್ಟ ಗೂಡುಗಳು ಕತ್ತಿ ಬಡಿಕೋಲ್‌ ಕಲ್ಲಿ
ಹಿಡಿದ ಹುಲಿ ಶರಭ ಭೇರುಂಡ ಸಿಂಹಪ್ರಕರವೆರಸಿ ಬೇಡರು ನೆರೆದರು

ಅರ್ಥ
ತಡಿಕೆ, ಗಳ, ಬಲೆ, ಗಾಳ, ಕೂಳಿ(ಬುಟ್ಟಿ), ಬಿಲ್ಲು, ಬಾಣ, ನಾಯಿ, ಗಿಡುಗ, ನೆರೆಮಡ್ಡಿ(?), ಬೆಳ್ಳಾರ್ಪಟಂ(ಒಂದು ಬಗೆಯ ಬಲೆ, ಬೆಳ್ಳಾರ), ತೋರೆತ್ತು, ಪ್ರಾಣಿಗಳನ್ನು ಹಿಡಿಯುವ ಜಿಂಕೆ, ಸಿಲುಕುಗಟ್ಟಿಗೆ(ಅಡ್ಡ ಹಾಕುವ ಕಟ್ಟಿಗೆ), ಬೀಸುಗಣ್ಣಿ(ಬೀಸಿ ಹರಡುವ ಹಗ್ಗ), ಗುಗ್ಗುರಿ,ಯರಳು(?), ಗೌಜು (ಒಂದು ಬಗೆಯ ಪಕ್ಷಿ), ಕತ್ತಿ, ಸುತ್ತಿಗೆ, ಗರಗಸ, ಕೂಳಿ (ಮೀನುಗಳನ್ನು ಹಿಡಿಯುವ ಬುಟ್ಟಿ), ಎಕ್ಕವಡ(ಹಕ್ಕಿಗಳನ್ನು ಹಿಡಿಯುವ ಬಟ್ಟೆ), ದಂಡೆ(ಗುರಾಣಿ), ಕಯ್‌(?),ಹೊಡೆ(ಚರ್ಮವಾದ್ಯ) ಗಳನ್ನು ತುಂಬಿಸಿಟ್ಟ ಗೂಡುಗಳು, ಕತ್ತಿ, ಬಡಿಕೋಲ್‌, ಕಲ್ಲಿ(ಬಲೆಯ ಚೀಲ), ಸಾಕಿದ ಹುಲಿ, ಶರಭ, ಭೇರುಂಡ, ಸಿಂಹಗಳೇ ಮೊದಲಾದ ಪ್ರಾಣಿಗಳಿಂದ ಬೇಡರು ನೆರೆದರು.

ಸಕಲ ಸಿದ್ಧತೆಗಳಿಂದ ಬೇಡರ ಸೇನಾಪತಿಗಳು ಓಲಗಶಾಲೆಗೆ ಬಂದು ರಾಜನನ್ನು ಬೇಟೆಗೆ ಹೊರಡಿಸುತ್ತಾರೆ.

ಪದ್ಯ

ಸೇನೆ ನೆರೆಯಿತ್ತು ರಿಪುಕುಮುದ ಮಾರ್ತಾಂಡ ಪು
ಣ್ಯಾನೂನ ತುಂಡ ಬಲಭರಿತ ದೋರ್ದಂಡ ಭೂ
ಮಾನಿನಿಯ ಗಂಡ ವಿಜಯಾಂಗನೆಯ ಮಿಂಡ ರಣರಂಗಮುಖ ಕಾಲದಂಡ
ದಾನಿ ಚಿತ್ತೈಸೆಂಬ ಮಾತಿನೊಳಗೆದ್ದು ಸು
ಮ್ಮಾನದಿಂ ಸತಿಪುತ್ರಮಂತ್ರಿ ಸಹಿತಡಿಯಿಟ್ಟು
ಭಾನುಕುಲತಿಲಕಂ ಹರಿಶ್ಚಂದ್ರರಾಯನೇರಿದನು ಮಣಿಮಯ ರಥವನು ೬೨

ಅರ್ಥ
ಬೇಡರ ಸೈನ್ಯ ಓಲಗಶಾಲೆಯ ಮುಂಭಾಗದಲ್ಲಿ ಬಂದು ಸೇರಿದೆ. ಶತ್ರುಗಳೆಂಬ ನೈದಿಲೆಗಳಿಗೆ ಸೂರ್ಯನಾಗಿರುವ, ಪುಣ್ಯಸ್ವರೂಪಿಯಾಗಿರುವ, ಬಲಭರಿತ ಭುಜದಂಡಗಳಿರುವ, ಭೂದೇವಿಯ ಪತಿಯೂ, ವಿಜಯದೇವತೆಯ ಪ್ರಿಯಕರನೂ ರಣರಂಗದಲ್ಲಿ ಕಾಲದಂಡನೂ ಆಗಿರುವ ಎಲೈ ಮಹಾದಾನಿಯೇ, ಇನ್ನು ತಡಮಾಡದೆ ಬೇಟೆಗೆ ಹೊರಡೋಣ.ʼ ಬೇಡನಾಯಕರ ಈ ಮಾತುಗಳನ್ನು ಕೇಳಿ ಸೂರ್ಯವಂಶಕ್ಕೆ ತಿಲಕಪ್ರಾಯನಾದ ಹರಿಶ್ಚಂದ್ರ ಮಹಾರಾಜನು ಸಿಂಹಾಸನದಿಂದ ಎದ್ದು ಬಹಳ ಉತ್ಸಾಹದಿಂದ ಮಡದಿ, ಮಗ, ಮಂತ್ರಿ, ಪರಿವಾರದೊಂದಿಗೆ ಮಣಿಖಚಿತವಾದ ರಥವನ್ನು ಏರಿದನು.

ಹಂಚಿಕೊಳ್ಳಿ: https://shampa.org/nk2t

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ